ಲ್ಯಾಮ್-ರಿಮ್ ಕ್ರಮವಾದ ಮಾರ್ಗದ ಸಂಕ್ಷಿಪ್ತ ವಿವರಣೆ

ಅಮೂಲ್ಯವಾದ ಮಾನವ ಜೀವನದ ಅತ್ಯುತ್ತಮ ಬಳಕೆ 

ನಾವೆಲ್ಲರೂ ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆದಿದ್ದೇವೆ, ಅಮೂಲ್ಯವಾದ ಮಾನವ ದೇಹವನ್ನು ಪಡೆದಿದ್ದೇವೆ, ಇದು ಹೆಚ್ಚಿನ ಆಧ್ಯಾತ್ಮಿಕ ಪ್ರಗತಿಗೆ ಸಾಧ್ಯವಾದಷ್ಟು ಅನುವು ಮಾಡಿಕೊಡುತ್ತದೆ. ಜ್ಞಾನೋದಯವನ್ನು ಸಾಧಿಸಲು, ಮನುಷ್ಯರಾಗಿರುವುದಕ್ಕಿಂತ ಉತ್ತಮ ಅವಕಾಶ ಇಲ್ಲ- ನಾವು ದೇವತೆಗಳ ರಾಜನಾದ ಇಂದ್ರನಾಗಿ ಮರುಜನ್ಮ ಪಡೆದರೂ ಸಹ! 

ಸದ್ಯದಲ್ಲಿ ನಮ್ಮ ಬಳಿಯಿರುವುದಕ್ಕಿಂತ ಉತ್ತಮವಾದ ಆಧಾರವಿಲ್ಲವಾದ್ದರಿಂದ, ಅದನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಎಲ್ಲಾ ಕಾರ್ಯವಿಧಾನಗಳನ್ನು ನಾವು ತಿಳಿದಿರುವುದು ಮುಖ್ಯವಾಗಿರುತ್ತದೆ. ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಅತ್ಯುತ್ತಮವಾದ ಮಾರ್ಗವೆಂದರೆ, ನಮ್ಮೊಳಗೆ ಹೆಚ್ಚು ಹೆಚ್ಚು ದಯೆ ಮತ್ತು ಸಹೃದಯತೆಯನ್ನು ಬೆಳೆಸಿಕೊಳ್ಳುವುದು. ಸಹೃದಯತೆಯನ್ನು ಆಧಾರವಾಗಿರಿಸಿ, ನಾವು ಬೋಧಿಚಿತ್ತದ ಗುರಿಗಾಗಿ ಸಮರ್ಪಿತವಾದ ಹೃದಯವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತೇವೆ. ಇದು ಜ್ಞಾನೋದಯವನ್ನು ಸಾಧಿಸುವ ಬಯಕೆಯಾಗಿರುತ್ತದೆ, ಅಂದರೆ ನಮ್ಮ ಎಲ್ಲಾ ನ್ಯೂನತೆಗಳನ್ನು ನಿವಾರಿಸಲು ಮತ್ತು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು, ಎಲ್ಲರಿಗೂ ಸಾಧ್ಯವಾದಷ್ಟು ಉಪಯುಕ್ತವಾಗಿರಬೇಕೆಂಬ ಬಯಕೆಯಾಗಿರುತ್ತದೆ. ನಾವು ನಮ್ಮ ಹೃದಯವನ್ನು ಇತರರಿಗಾಗಿ ಮತ್ತು ಜ್ಞಾನೋದಯವನ್ನು ಸಾಧಿಸುವುದಕ್ಕಾಗಿ ಅರ್ಪಿಸಿದಾಗ, ಅದೇ ನಮ್ಮ ಅಮೂಲ್ಯವಾದ ಮಾನವ ಪುನರ್ಜನ್ಮದ ಅತ್ಯುತ್ತಮ ಬಳಕೆಯಾಗಿರುತ್ತದೆ. 

ಜೀವಿತಾವಧಿಯಲ್ಲಿನ ಯಶಸ್ಸಿಗೆ, ಹಿಂದಿನ ಜೀವನದ ಸಕಾರಾತ್ಮಕ ನಡವಳಿಕೆಯು ಕಾರಣವಾಗುವ ಸಂಭಾವ್ಯತೆ 

ಹಲವಾರು ರೀತಿಯ ಜನರಿದ್ದು, ಅವರಲ್ಲಿ ಜ್ಞಾನೋದಯವನ್ನು ಸಾಧಿಸುವುದನ್ನು ಬಿಡಿ, ತಮ್ಮ ಮುಂದಿನ ಜೀವನಕ್ಕೆ ಲಾಭದಾಯಕವಾಗಿರುವ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವವರೇ ಬಹಳ ಕಡಿಮೆ. ಹೆಚ್ಚಿನವರು, ಈ ಜೀವಿತಾವಧಿಯಲ್ಲಿ ಮಾತ್ರ ಸಂತೋಷವನ್ನು ಕಂಡುಕೊಳ್ಳುವ ಬಗ್ಗೆ ಕಾಳಜಿ ತೋರಿಸುತ್ತಾರೆ. ಅದೇನೇ ಇದ್ದರೂ, ನಾವೆಲ್ಲರೂ ಒಂದೇ ಆಗಿರುತ್ತೇವೆ, ಅಂದರೆ ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆ ಮತ್ತು ಯಾರೂ ತೊಂದರೆಗಳನ್ನು ಅನುಭವಿಸಲು ಬಯಸುವುದಿಲ್ಲ. 

ಈ ಜೀವಿತಾವಧಿಯಲ್ಲಿ ಸಂತೋಷವಾಗಿರುವುದರ ಮೇಲೆ ಕೇಂದ್ರೀಕರಿಸುವವರಿಗೆ, ಎರಡು ರೀತಿಯ ಸಂತೋಷಗಳಿವೆ: ದೈಹಿಕ ಸಂತೋಷ ಮತ್ತು ಮಾನಸಿಕ ಸಂತೋಷ. ಹೆಚ್ಚಿನವರು, ತಮ್ಮ ಗಮನವನ್ನು ಒಂದು ಬಗೆಯ ದೈಹಿಕ ಸಂತೋಷಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ಆದರೆ ದೈಹಿಕ ಸಂತೋಷದ ವಿಷಯದಲ್ಲಿ, ನಾವೆಲ್ಲರೂ ಅದನ್ನು ನಮ್ಮ ಜೀವನಕ್ಕೆ ಆಹ್ವಾನಿಸಲು ಪ್ರಯತ್ನಿಸುತ್ತಿದ್ದರೂ ಸಹ, ನಮ್ಮಲ್ಲಿ ಹೆಚ್ಚಿನವರಿಗೆ ಅದನ್ನು ಕರೆತರುವ ರೀತಿ ತಿಳಿದಿರುವುದಿಲ್ಲ. ಉದಾಹರಣೆಗೆ, ಆಹಾರ, ಬಟ್ಟೆ, ವಸತಿ ಮತ್ತು ಸ್ಥಾನಮಾನಕ್ಕಾಗಿ, ಮುಗ್ಧ ಜೀವಿಗಳ ಹತ್ಯೆ, ಕೊಲೆ ಅಥವಾ ಸಾಮೂಹಿಕ ಹತ್ಯೆಯಾಗುತ್ತದೆ. ಇತರರು, ಸಂತೋಷವನ್ನು ಬೆಂಬತ್ತಿ, ಒಂದು ರೀತಿಯ ದೈಹಿಕ ಯೋಗಕ್ಷೇಮವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ, ಕಳ್ಳತನ, ಅಥವಾ ವಂಚನೆ, ಅಥವಾ ದರೋಡೆಯಲ್ಲಿ ತೊಡಗುತ್ತಾರೆ. ಆದರೆ, ಅವರು ಎಷ್ಟೇ ಪ್ರಯತ್ನಿಸಿದರೂ, ಆ ಯೋಗಕ್ಷೇಮವನ್ನು ಕರೆತರುವ ಸರಿಯಾದ ಮಾರ್ಗ ಅವರಿಗೆ ತಿಳಿದಿರುವುದಿಲ್ಲ. ಸಂತೋಷದ ಬದಲಿಗೆ, ತಮಗಾಗಿ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.  

ಮತ್ತೊಂದೆಡೆ, ವ್ಯಾಪಾರ, ವಾಣಿಜ್ಯ, ಕೃಷಿ, ಶಿಕ್ಷಣ, ಕಲೆ, ಹೀಗೆ ಪ್ರಾಮಾಣಿಕ ಜೀವನ ನಡೆಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುವ ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಯಶಸ್ವಿಯಾಗುವವರು, ಸಂಪತ್ತು ಮತ್ತು ಅನೇಕ ಆಸ್ತಿಗಳನ್ನು ಗಳಿಸಿರುವವರು, ಮತ್ತು ಯಶಸ್ವಿಯಾಗದವರು ಅಥವಾ ಸಂಪೂರ್ಣವಾಗಿ ವಿಫಲರಾಗಿರುವರೂ ಇರುತ್ತಾರೆ. ಇದಕ್ಕೆ ಕಾರಣವೇನು ಎಂದು ನಾವು ಕೇಳಿದರೆ – ಅಂದರೆ ಕೆಲವರು ಏಕೆ ಯಶಸ್ವಿಯಾಗುತ್ತಾರೆ, ಇತರರು ಏಕೆ ವಿಫಲರಾಗುತ್ತಾರೆ – ಇದು, ಅವರು ಹಿಂದಿನ ಜೀವಿತಾವಧಿಯಲ್ಲಿ ನಿರ್ಮಿಸಿದ ಬೀಜಗಳು ಮತ್ತು ಸಾಮರ್ಥ್ಯಗಳಾಗಿರುತ್ತವೆ. ಹಿಂದಿನ ಜೀವನದಲ್ಲಿ ವಿನಾಶಕಾರಿಯಾಗಿರುವವರು ದೊಡ್ಡ ನಕಾರಾತ್ಮಕ ಸಾಮರ್ಥ್ಯವನ್ನು ನಿರ್ಮಿಸಿಕೊಂಡಿದ್ದು, ಅದರ ಪರಿಣಾಮವಾಗಿ, ಅವರು ಈ ಜೀವನದಲ್ಲಿ ವಿಫಲರಾಗಿರುತ್ತಾರೆ. ಹಿಂದಿನ ಜೀವನದಲ್ಲಿ ರಚನಾತ್ಮಕವಾಗಿ ಕಾರ್ಯನಿರ್ವಹಿಸಿದವರು ಸಕಾರಾತ್ಮಕ ಸಾಮರ್ಥ್ಯವನ್ನು ನಿರ್ಮಿಸಿರುತ್ತಾರೆ ಮತ್ತು ಅದು ಈ ಜೀವನದಲ್ಲಿ ಅವರ ಯಶಸ್ಸು ಮತ್ತು ಸಂತೋಷಕ್ಕೆ ಕಾರಣವಾಗಿರುತ್ತದೆ. 

ಕೆಲವರು ಏಕೆ ಯಶಸ್ವಿಯಾಗುತ್ತಾರೆ ಮತ್ತು ಇತರರು ಏಕೆ ವಿಫಲರಾಗುತ್ತಾರೆ ಎಂಬುದರ ಈ ವಿವರಣೆಯನ್ನು ನೀವು ಒಪ್ಪಿಕೊಳ್ಳದಿದ್ದರೆ, ಅಂತಹ ವ್ಯತ್ಯಾಸವು ಅಸ್ತಿತ್ವದಲ್ಲಿರಲು ಬೇರೆ ಯಾವುದೇ ಕಾರಣವಿಲ್ಲ ಎಂಬುದನ್ನು ಪರಿಗಣಿಸಿ. ಎಲ್ಲಾ ಜನರು ಒಂದೇ ಪ್ರಮಾಣದ ಪ್ರಯತ್ನ ಮತ್ತು ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದರೆ, ಅವರೆಲ್ಲರೂ ಅದೇ ಪ್ರಮಾಣದ ಯಶಸ್ಸನ್ನು ಹೊಂದಿರಬೇಕು. ಈ ಜೀವಿತಾವಧಿಯಲ್ಲಿನ ಜೀವನೋಪಾಯಕ್ಕಾಗಿ ಇರುವ ಕೆಲಸದ ಪ್ರಕಾರದ - ವ್ಯಾಪಾರ ಅಥವಾ ವಾಣಿಜ್ಯ - ಪರಿಣಾಮವಾಗಿ ಯಶಸ್ಸು ಬರುತ್ತದೆ ಎಂದು ಕೆಲವರು ಭಾವಿಸುತ್ತಾರೆ ಆದರೆ ಅವು ಅದರ ಸಂಪೂರ್ಣವಾದ ಕಾರಣವಾಗಿರುವುದಿಲ್ಲ. ಯಶಸ್ಸಿಗೆ ನಿಜವಾದ ಕಾರಣಗಳು, ಹಿಂದಿನ ಜೀವಿತಾವಧಿಯಲ್ಲಿ ರಚನಾತ್ಮಕ ಕ್ರಿಯೆಗಳಿಂದ ನಿರ್ಮಿಸಲಾದ ಸಾಮರ್ಥ್ಯಗಳಾಗಿರುತ್ತವೆ, ಆದರೆ ಈ ಜೀವಿತಾವಧಿಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡಿರುವ ಕೆಲಸ ಮತ್ತು ಚಟುವಟಿಕೆಯು, ಆ ಕಾರಣಗಳನ್ನು ಹಣ್ಣಾಗಲು ಅನುಮತಿಸುವ ಸಂದರ್ಭಗಳು ಅಥವಾ ಷರತ್ತುಗಳಾಗಿ ಕಾರ್ಯನಿರ್ವಹಿಸುತ್ತದೆ. 

ಅಂತೆಯೇ, ಯಶಸ್ಸು, ಒಟ್ಟಾಗಿ ಉದ್ಭವಿಸುವ ಕಾರಣಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಿಂದಿನ ಜೀವತಾವಧಿಯಿಂದ ಕಾರಣಗಳು ಸಿಗುತ್ತವೆ – ಅವು ಆ ಜೀವಿತಾವಧಿಯಲ್ಲಿ ನಿರ್ಮಿಸಲಾದ ಸಾಮರ್ಥ್ಯಗಳಾಗಿರುತ್ತವೆ. ಈ ಜೀವಿತಾವಧಿಯಲ್ಲಿನ ಸಮಯ ಮತ್ತು ಶ್ರಮವನ್ನು ಆಧರಿಸಿ, ಆ ಸಂದರ್ಭಗಳು ಸಂಭವಿಸುತ್ತವೆ. ಇವೆರಡೂ ಒಟ್ಟಾಗಬೇಕು.  

ಭವಿಷ್ಯದ ಜೀವತಾವಧಿಗಳಿಗಾಗಿ ಕಾಳಜಿ 

ಈ ಜೀವಿತಾವಧಿಯಲ್ಲಿ ಜನರು ಎಷ್ಟೇ ಸುಸ್ಥಿತಿಯಲ್ಲಿರಲಿ, ಅವರು ಎಷ್ಟೇ ವೈಭವವನ್ನು ಅನುಭವಿಸಲಿ; ಅದೇನೇ ಆದರೂ, ಯಾರೂ, ತಾವು ಸಂಗ್ರಹಿಸಿದ ವಿಷಯಗಳಿಂದ ತೃಪ್ತರಾಗಿರುವಂತೆ ತೋರುವುದಿಲ್ಲ. ಯಾರೂ ಹೀಗೆ ಹೇಳುವುದಿಲ್ಲ, “ಈಗ ನನ್ನ ಬಳಿ ಸಾಕಷ್ಟು ಇದೆ; ನಾನು ಇನ್ನೂ ಹೆಚ್ಚಿನದನ್ನು ಪಡೆಯಬೇಕಾಗಿಲ್ಲ." ಅವರು ತಮ್ಮಲ್ಲಿರುವ ವಸ್ತುಗಳಿಂದ ಎಂದಿಗೂ ತೃಪ್ತರಾಗುವುದಿಲ್ಲ. ಅವರು ಯಾವಾಗಲೂ ಹೆಚ್ಚಿನದನ್ನು ಬಯಸುತ್ತಾರೆ. ಅವರು ತಮ್ಮ ಇಡೀ ಜೀವನವನ್ನು ಕೆಲಸದಲ್ಲಿ ಕಳೆಯುತ್ತಾರೆ. ಆದರೆ ಅವರ ಕೆಲಸ ಎಂದಿಗೂ ಮುಗಿಯುವುದಿಲ್ಲ. 

ಇದು ರೈತನ ಕಾಯಕದಂತೆ, ವರ್ಷದ ಎಲ್ಲಾ ಋತುಗಳಲ್ಲಿ ದುಡಿಯುವಂತೆ ಇರುತ್ತದೆ, ನೆಡುವುದು, ಹೊಲ-ಗದ್ದೆಗಳನ್ನು ನೋಡಿಕೊಳ್ಳುವುದು ಮತ್ತು ಕೊಯ್ಲು ಮಾಡುವ ಚಕ್ರದಂತೆ ಇದು ನಿರಂತರವಾಗಿ ಪುನರಾವರ್ತನೆಯಾಗುತ್ತಿರುತ್ತದೆ. ವಸಂತಕಾಲದಲ್ಲಿ, ಅವನು ಮತ್ತೊಮ್ಮೆ ನೆಡುತ್ತಾನೆ, ಮತ್ತೊಮ್ಮೆ ಚಕ್ರವನ್ನು ಪುನರಾವರ್ತಿಸುತ್ತಾನೆ. ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂಬುದರ ಇದು ಒಂದು ಉದಾಹರಣೆಯಾಗಿದೆ. 

ಈ ಜೀವಿತಾವಧಿಯ ಕೆಲಸವು ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ನಾವು ಎಂದಿಗೂ ಯೋಚಿಸುವುದಿಲ್ಲವಾದರೂ, ವಾಸ್ತವದಲ್ಲಿ ಅದು ಕೊನೆಗೊಳ್ಳುವ ಸಮಯವಿದೆ - ನಮ್ಮ ಸಾವಿನ ಸಮಯ. ಆ ಒಂದು ಸಮಯದಲ್ಲಿ, ಇದು ಸಂತೋಷದ ಸ್ಥಿತಿಗಿಂತ ಹೆಚ್ಚಾಗಿ ದುಃಖ ಮತ್ತು ವ್ಯಥೆಯ ಸ್ಥಿತಿಯಲ್ಲಿ ಕೊನೆಗೊಳ್ಳುತ್ತದೆ. 

ಹೀಗಾಗಿ, ಈ ಜೀವಿತಾವಧಿಯಲ್ಲಿ ಕೇವಲ ಆಹಾರ, ಬಟ್ಟೆ ಮತ್ತು ಮನ್ನಣೆಗಾಗಿ ಕೆಲಸ ಮಾಡುವವರು ನಿಜವಾಗಿಯೂ ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುತ್ತಿದ್ದಾರೆ. ಏಕೆಂದರೆ, ಅವರು ಶಾರೀರಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದಾದರೂ, ಮಾನಸಿಕ ಸಂತೋಷವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಮಾನಸಿಕ ಸಂತೋಷವಿಲ್ಲದೆ, ಅವರ ಜೀವನವು ಅಪೂರ್ಣವಾಗಿರುತ್ತದೆ ಮತ್ತು ಅವರು ಅತೃಪ್ತ ಸ್ಥಿತಿಯಲ್ಲಿ ಸಾಯುತ್ತಾರೆ. 

ಆದ್ದರಿಂದ, ದೀರ್ಘಕಾಲೀನವಾದ, ಮಾನಸಿಕವಾಗಿ ಆಧಾರಿತವಾದ ಸಂತೋಷಕ್ಕಾಗಿ ಕೆಲಸ ಮಾಡಲು ಪ್ರಯತ್ನಿಸುವುದು ಮುಖ್ಯ. ಈ ಜೀವಿತಾವಧಿಯಲ್ಲಿ ನಾವು ಸಾಧಿಸಬಹುದಾದ ಭೌತಿಕ ಸಂತೋಷವು ದೀರ್ಘಕಾಲ ಉಳಿಯುವುದಿಲ್ಲ. ನಾವು ನಿಜವಾಗಿಯೂ ಶಾಶ್ವತವಾದ ಸಂತೋಷವನ್ನು ಬಯಸಿದರೆ, ನಾವು ನಮ್ಮ ಭವಿಷ್ಯದ ಜೀವತಾವಧಿಗಳನ್ನು ಪರಿಗಣಿಸಬೇಕು. ಏಕೆಂದರೆ, ಅದನ್ನು ಗಣನೆಗೆ ತೆಗೆದುಕೊಂಡಾಗಲೇ ನಾವು ನಿಜವಾಗಿಯೂ ದೀರ್ಘಕಾಲೀನ ಸಂತೋಷಕ್ಕಾಗಿ ಕೆಲಸ ಮಾಡಲಾಗುತ್ತದೆ. 

ಭವಿಷ್ಯದ ಜೀವಿತಾವಧಿಯಲ್ಲಿ ಸಂತೋಷವನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದರೆ, ಅದು ಧರ್ಮದ ಆಧ್ಯಾತ್ಮಿಕ ಅಭ್ಯಾಸದಲ್ಲಿ ತೊಡಗಿರುವ ಆಧ್ಯಾತ್ಮಿಕ ವ್ಯಕ್ತಿಯ ಅರ್ಥವನ್ನು ಪೂರೈಸುತ್ತದೆ. ನಾವು ಈ ಜೀವಿತಾವಧಿಯ ಕಾಳಜಿಗಳಿಗೆ ಸೀಮಿತವಾಗಿದ್ದರೆ – ಅಂದರೆ ನಾಶವಾಗುವ ವಸ್ತುಗಳು - ಆಗ ನಾವು ಕೇವಲ ಲೌಕಿಕ, ಭೌತಿಕ ವ್ಯಕ್ತಿಯಾಗಿ ಉಳಿಯುತ್ತೇವೆ. ನಾವು ಭವಿಷ್ಯದ ಜೀವತಾವಧಿಗಳ ವಿಷಯಗಳನ್ನು ಪರಿಹರಿಸಲು ಪ್ರಾರಂಭಿಸಿದರೆ, ನಾವು ಆಧ್ಯಾತ್ಮಿಕ ವ್ಯಕ್ತಿಯಾಗಿರುತ್ತೇವೆ. 

ಭವಿಷ್ಯದ ಜೀವತಾವಧಿಯಲ್ಲಿ ಸಂತೋಷವನ್ನು ಕರೆತರಲು, ವಿನಾಶಕಾರಿ ನಡವಳಿಕೆಗಳನ್ನು ನಿಗ್ರಹಿಸುವುದು 

ಭವಿಷ್ಯದ ಜೀವಿತಾವಧಿಯಲ್ಲಿ ಸಂತೋಷವನ್ನು ಖಚಿತಪಡಿಸಿಕೊಳ್ಳುವ ಮಾರ್ಗವು, ಧರ್ಮದ ಕೆಲವು "ತಡೆಗಟ್ಟುವ ಕ್ರಮಗಳನ್ನು" ಕೈ ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಿನಾಶಕಾರಿ ಕೃತ್ಯಗಳನ್ನು ಎಸಗುವುದರಿಂದ ನಮ್ಮನ್ನು ನಾವು ತಡೆದುಕೊಳ್ಳುವುದು. ನಿರ್ದಿಷ್ಟವಾಗಿ ಹತ್ತು ವಿನಾಶಕಾರಿ ಕ್ರಿಯೆಗಳಿವೆ, ಇದರಲ್ಲಿ ಮೂರು ದೇಹ, ನಾಲ್ಕು ಮಾತು ಮತ್ತು ಮೂರು ಮನಸ್ಸನ್ನು ಕುರಿತ ವಿಷಯಗಳಾಗಿರುತ್ತವೆ. ಈ ಯಾವುದೇ ವಿಧಾನಗಳಲ್ಲಿ ವಿನಾಶಕಾರಿಯಾಗಿ ವರ್ತಿಸದಂತೆ ನಮ್ಮನ್ನು ತಡೆದುಕೊಳ್ಳುವ ಮತ್ತು ರಕ್ಷಿಸಿಕೊಳ್ಳುವ ಮೂಲಕ, ನಾವು ಭವಿಷ್ಯದ ಜೀವತಾವಧಿಯಲ್ಲಿ ಸಂತೋಷವನ್ನು ಕರೆತರಬಹುದು.  

ನಾವು ರಚನಾತ್ಮಕ ರೀತಿಯಲ್ಲಿ ವರ್ತಿಸಿದರೆ, ಅದು ವರ್ತಮಾನದ ಮತ್ತು ಭವಿಷ್ಯದ ಜೀವತಾವಧಿಯಲ್ಲಿ ಉತ್ತಮ ವಿಷಯಗಳನ್ನು ಕರೆತರುವ ಆಧ್ಯಾತ್ಮಿಕ ಅಭ್ಯಾಸದ ಆರಂಭವನ್ನು ಹೊಂದಿರುತ್ತೇವೆ ಎಂಬ ವಿಷಯವನ್ನು ನಾವು ಈಗಾಗಲೇ ಸ್ಥಾಪಿಸಿದ್ದೇವೆ. ಈ ರೀತಿಯ ರಚನಾತ್ಮಕ ನಡವಳಿಕೆಯು, ಪ್ರಾಣಿ ಅಥವಾ ಕೀಟವನ್ನು ಉದ್ದೇಶಪೂರ್ವಕವಾಗಿ ಕೊಲ್ಲುವುದು ಅಥವಾ ಕಳ್ಳತನವನ್ನು ಉದ್ದೇಶಪೂರ್ವಕ ಕ್ರಿಯೆಯಾಗಿ ಪರಿಗಣಿಸುವುದು ಮತ್ತು ಅದನ್ನು ಅನುಸರಿಸುವ ಎಲ್ಲಾ ನ್ಯೂನತೆಗಳು ಮತ್ತು ನಕಾರಾತ್ಮಕ ಫಲಿತಾಂಶಗಳನ್ನು ಪರಿಗಣಿಸುವುದನ್ನು ಒಳಗೊಂಡಿರುತ್ತದೆ. ಇದನ್ನು ಗುರುತಿಸಿದ ನಂತರ, ಕೊಲ್ಲಬಾರದು ಅಥವಾ ಕದಿಯಬಾರದು ಎಂಬ ದೃಢ ನಿರ್ಧಾರವನ್ನು ಮಾಡುವುದಾಗಿರುತ್ತದೆ. ಜನರು ಅಂತಹ ನಿರ್ಧಾರವನ್ನು ತೆಗೆದುಕೊಂಡಾಗ, ಅವರು ಸರಿಯಾಗಿ ಮತ್ತು ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಧೃಡೀಕರಿಸಲು ಅವರ ಸುತ್ತ ಸೈನ್ಯ ಅಥವಾ ಪೋಲೀಸ್ ಪಡೆ ಇರುವ ಅಗತ್ಯವಿರುವುದಿಲ್ಲ. ಅವರ ಸ್ವಂತ ನೈತಿಕತೆ ಮತ್ತು ಸನ್ನಡತೆಯು, ವಿನಾಶಕಾರಿ ಕೃತ್ಯಗಳನ್ನು ಎಸಗುವುದರಿಂದ ಅವರನ್ನು ತಡೆಯುತ್ತದೆ. 

ಕಟ್ಟುನಿಟ್ಟಾದ ನೈತಿಕತೆಯನ್ನು ಪಾಲಿಸುವುದು, ನಾವು ತೆಗೆದುಕೊಳ್ಳಬೇಕಾದ ತಡೆಗಟ್ಟುವ ಕ್ರಮವಾಗಿದ್ದು, ಇದು, ನಾವು ಸಂತೋಷದ ಮನಸ್ಥಿತಿಯೊಂದಿಗೆ ನಿಧನರಾಗಲು ಅನುವು ಮಾಡಿಕೊಡುತ್ತದೆ. ಇಲ್ಲದಿದ್ದರೆ, ನಾವು ಬಹಳ ದುಃಖಕರವಾದ ಮತ್ತು ಆತಂಕಕಾರಿ ಸ್ಥಿತಿಯಲ್ಲಿ ಸಾಯಬಹುದು. ಆದರೆ ನಾವು ನೈತಿಕ ವ್ಯಕ್ತಿಯಾಗುವಂತಹ ತಡೆಗಟ್ಟುವ ಕ್ರಮಗಳನ್ನು ಕೈತೆಗೆದುಕೊಂಡಿದ್ದರೆ, ಸಾವಿನ ಸಮಯದಲ್ಲಿ ನಾವು ಚಿಂತಿಸಬೇಕಾಗಿಲ್ಲ. ನಾವು ಮಾನವರಾಗಿ ಮರುಜನ್ಮ ಪಡೆಯುತ್ತೇವೆ ಅಥವಾ ದೇವಲೋಕದಲ್ಲಿ ಇಂದ್ರನಾಗಿಯೋ ಅಥವಾ ಬೇರೇ ಯಾವುದೋ ದೇವತೆಯಾಗಿ ಮರುಜನ್ಮ ಪಡೆಯಬಹುದು ಎಂಬ ಭರವಸೆಯಿಂದಿರಬಹುದು. 

ಎಲ್ಲಾ ಜೀವತಾವಧಿಗಳಲ್ಲಿ ಅನಿಯಂತ್ರಿತವಾಗಿ ಮರುಕಳಿಸುವ ಸಮಸ್ಯೆಗಳು 

ನಾವು ಮಾನವರಾಗಿಯೇ ಮರುಜನ್ಮ ಪಡೆದರೂ - ಅಥವಾ ದೇವತೆಗಳ ರಾಜನಾಗಿ ಮರುಜನ್ಮ ಪಡೆದರೂ - ನಾವು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲೇ ಬೇಕಾಗುತ್ತದೆ. ನಾವು ಎಲ್ಲಿ ಬೇಕಾದರೂ, ಯಾವುದೇ ಜೀವಿಯಾಗಿ ಮರುಜನ್ಮ ಪಡೆದರೂ, ಅನಿಯಂತ್ರಿತವಾಗಿ ಪುನರಾವರ್ತಿತವಾಗುವ ಸಮಸ್ಯೆಗಳು ಸಂಭವಿಸುತ್ತವೆ. ಆದ್ದರಿಂದ, ಮರುಜನ್ಮದ ಕೆಟ್ಟ ಸ್ಥಿತಿಯಲ್ಲಿ ಪುನರ್ಜನ್ಮವಾಗುವುದನ್ನು ತಡೆಯುವ ಬಯಕೆಯಿಂದಾಗಿ ಮಾತ್ರ ವಿನಾಶಕಾರಿ ಕ್ರಿಯೆಗಳಿಂದ ದೂರವಿರುವ ನೀತಿಯನ್ನು ಅನುಸರಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಏಕೆಂದರೆ, ನಾವು ಎಲ್ಲಿ ಅಥವಾ ಹೇಗೆ ಮರುಹುಟ್ಟು ಪಡೆದರೂ ಸಮಸ್ಯೆಗಳು ಇದ್ದೇ ಇರುತ್ತವೆ. 

ಒಂದು ವಿಶಾಲವಾದ ವ್ಯಾಪ್ತಿಯ ದೃಷ್ಟಕೋನದ ಅಗತ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ. ಉದಾಹರಣೆಗೆ, ನಾವು ಶಾಂತ ಮತ್ತು ಸ್ಥಿರವಾದ ಮನಸ್ಥಿತಿಯನ್ನು ಬೆಳೆಸಿಕೊಂಡರೆ – ಸಂಸ್ಕೃತದಲ್ಲಿ ಇದನ್ನು "ಶಮತಾ" ಮತ್ತು ಟಿಬೆಟಿಯನ್‌ನಲ್ಲಿ "ಶಿನಾಯ್" ಎಂದು ಕರೆಯಲಾಗುತ್ತದೆ - ಅದರ ಪರಿಣಾಮವಾಗಿ ನಾವು ಅಸ್ತಿತ್ವದ ಉನ್ನತ ಮಟ್ಟದಲ್ಲಿರುವ ಒಬ್ಬ ದೇವತೆಯಾಗಿ ಮರುಜನ್ಮ ಪಡೆಯಬಹುದು: ಇದು ಅಲೌಕಿಕ ರೂಪಗಳು ಅಥವಾ ನಿರಾಕಾರ ಜೀವಿಗಳ ಮಟ್ಟವಾಗಿರುತ್ತದೆ. ಆಗ ನಾವು ಆ ರೀತಿಯ ಪುನರ್ಜನ್ಮದ ಎಲ್ಲಾ ವೈಭವಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದರೆ ಅಸ್ತಿತ್ವದ ಈ ಉನ್ನತ ಮಟ್ಟದಲ್ಲಿರುವ ಒಂದು ಜೀವಿಯಾಗಿ ಮರುಜನ್ಮ ಪಡೆಯುವುದರಲ್ಲಿ ವಿಶೇಷವೇನೂ ಇಲ್ಲ. ಇದು ಗಗನಚುಂಬಿ ಕಟ್ಟಡದ ಅತ್ಯಂತ ಎತ್ತರದಲ್ಲಿರುವ ಮಹಡಿಗೆ ಹೋದಂತೆ ಇರುತ್ತದೆ - ಒಮ್ಮೆ ಅಲ್ಲಿ ತಲುಪಿದ ನಂತರ, ಹಿಂತಿರುಗುವುದನ್ನು ಬಿಟ್ಟು ಬೇರೆ ಯಾವ ದಾರಿಯೂ ಇರುವುದಿಲ್ಲ. 

ಬುದ್ಧನ ಮಾತುಗಳಲ್ಲಿ ವಿಶ್ವಾಸ ಗಳಿಸುವುದು 

ಆದ್ದರಿಂದ, ನಾವು ಎಲ್ಲಿ ಮರುಹುಟ್ಟುತ್ತೇವೆಯೋ, ಅಲ್ಲಿನ ನಮ್ಮ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುವುದು ಅವಶ್ಯಕ ಮತ್ತು ಅದನ್ನು ಮೀರಿ ಮುಂದೆ ಹೋಗುವುದೂ ಅವಶ್ಯಕ. ಹಾಗೆ ಮಾಡಲು, ನಮ್ಮ ವಾಸ್ತವತೆ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲು, ವಿವೇಚನಾತ್ಮಕ ಅರಿವಿನೊಂದಿಗೆ ನಮ್ಮ ಸಮಸ್ಯೆಗಳು ಮತ್ತು ದುಃಖಗಳ ಮೂಲವನ್ನು ಕಂಡುಹಿಡಿಯಬೇಕು ಮತ್ತು ಅದನ್ನು ಕತ್ತರಿಸಬೇಕು. ಈ ರೀತಿಯಾಗಿ, ನಾವು ಅಂತಿಮವಾಗಿ ಶೂನ್ಯತೆಯನ್ನು, ಅಂದರೆ, ಅಸ್ತಿತ್ವದಲ್ಲಿರುವ ಅಸಾಧ್ಯವಾದ ಮಾರ್ಗಗಳ ಸಂಪೂರ್ಣ ಅನುಪಸ್ಥಿತಿಯನ್ನು ಅರಿತುಕೊಳ್ಳುತ್ತೇವೆ. ವಾಸ್ತವದ ಈ ಸ್ಪಷ್ಟ ತಿಳುವಳಿಕೆಯು, ನಮ್ಮ ತಪ್ಪು ಪ್ರಕ್ಷೇಪಗಳನ್ನು ನಿವಾರಿಸುತ್ತದೆ ಮತ್ತು ಹಾಗೆ ಮಾಡುವುದರಿಂದ, ನಾವು ಯಾವುದೇ ಜೀವಿತಾವಧಿಯಲ್ಲಿ ಅನುಭವಿಸಬಹುದಾದ ಎಲ್ಲಾ ಸಮಸ್ಯೆಗಳು ಮತ್ತು ದುಃಖಗಳನ್ನು ಶಾಶ್ವತವಾಗಿ ನಿವಾರಿಸುತ್ತದೆ. ಇದು ಶಾಶ್ವತವಾಗಿ ಉಳಿಯುವ ಸಂತೋಷವನ್ನು ಕರೆತರುತ್ತದೆ ಮತ್ತು ಇದು ನಾವು ಸಾಧಿಸಬಹುದಾದ ಸಂಗತಿಯಾಗಿರುತ್ತದೆ. 

ಬುದ್ಧನ ಮಾತುಗಳನ್ನು ಸಂರಕ್ಷಿಸುವ ಶಾಸ್ತ್ರೀಯ ಪಠ್ಯಗಳಿಂದ ನಾವು ಶೂನ್ಯತೆಯ ಬೋಧನೆಗಳನ್ನು ಕಲಿಯಬಹುದು. ಆದರೆ ಈ ಗ್ರಂಥದಲ್ಲಿರುವ ಶೂನ್ಯತೆಯ ವ್ಯಾಖ್ಯಾನದ ಬಗ್ಗೆ ಮತ್ತು ಬುದ್ದ ಅದರ ಬಗ್ಗೆ ನುಡಿದ ಎಲ್ಲದರ ಮಾನ್ಯತೆಯ ಮೇಲೆ, ನಾವು ಹೇಗೆ ತಾನೆ ವಿಶ್ವಾಸವನ್ನು ಬೆಳೆಸಿಕೊಳ್ಳಬಹುದು? ಅವುಗಳ ಮಾನ್ಯತೆಯಲ್ಲಿಡುವ ವಿಶ್ವಾಸವು, ತರ್ಕ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ ಬೆಳೆಯಬೇಕು. ಉದಾಹರಣೆಗೆ, ಶೂನ್ಯತೆಯನ್ನು ತೆಗೆದುಕೊಳ್ಳಿ. ತರ್ಕಬದ್ದವಾದ ತಾರ್ಕಿಕತೆಯನ್ನು ಬಳಸಿ, ಶೂನ್ಯತೆಯ ಮಾನ್ಯತೆಯನ್ನು ನಾವು ಸ್ಥಾಪಿಸಬಹುದು. ಇದಲ್ಲದೆ, ತಲ್ಲೀನರಾಗುವ ಏಕಾಗ್ರತೆ ಮತ್ತು ಅಚಲವಾದ ಮತ್ತು ಸ್ಥಿರವಾದ ಮನಸ್ಥಿತಿಯನ್ನು ಸಾಧಿಸಲು ಇರುವ ಸೂಚನೆಗಳನ್ನು ಅಭ್ಯಾಸ ಮಾಡುವ ಮೂಲಕ ಮತ್ತು ವಾಸ್ತವದಲ್ಲಿ ಈ ಸ್ಥಿತಿಗಳನ್ನು ನಾವೇ ಪಡೆದುಕೊಳ್ಳುವ ಮೂಲಕ ಅವುಗಳ ಬಗೆಗಿರುವ ಬೋಧನೆಗಳನ್ನು ನಾವು ಮೌಲ್ಯೀಕರಿಸಬಹುದು. ಇದಲ್ಲದೆ, ಈ ಅಭ್ಯಾಸಗಳ ಮೂಲಕ, ಇಂತಹ ಏಕಾಗ್ರತೆಯನ್ನು ಸಾಧಿಸುವ, ಉಪಉತ್ಪನ್ನಗಳೆಂದು ಕರೆಯಲಾಗುವ, ವಿವಿಧ ರೀತಿಯ ಉನ್ನತಮಟ್ಟದ, ಬಾಹ್ಯ ಸಂವೇದನಾ ಗ್ರಹಿಕೆಯನ್ನು ನಾವು ನಿಜವಾಗಿಯೂ ಸಾಧಿಸಬಲ್ಲೆವು ಎಂಬುದನ್ನು ನಾವೇ ಅನುಭವಿಸಬಹುದು. ಬುದ್ಧನಿಂದ ಬೋಧಿಸಲ್ಪಟ್ಟ ಈ ವಿವಿಧ ಅಂಶಗಳನ್ನು ನಾವು ನಮ್ಮ ಸ್ವಂತ ಅನುಭವದಿಂದ ಮೌಲ್ಯೀಕರಿಸಬಹುದು. 

ಈ ರೀತಿಯಾಗಿ, ತರ್ಕ ಮತ್ತು ವೈಯಕ್ತಿಕ ಅನುಭವದ ಮೂಲಕ, ಮೌಲ್ಯೀಕರಿಸಬಹುದಾದ ವಿಷಯಗಳ ಬಗ್ಗೆ ಬುದ್ಧನು ಕಲಿಸಿದ ವಿಷಯವನ್ನು ವಾಸ್ತವೀಕರಿಸುವ ನಮ್ಮ ಸ್ವಂತ ಶ್ರಮ ಮತ್ತು ಪ್ರಯತ್ನದ ಆಧಾರದ ಮೇಲೆ, ನಾವು ಬುದ್ಧನ ಮಾತುಗಳ ಮಾನ್ಯತೆಯಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತೇವೆ. ಆ ಆತ್ಮವಿಶ್ವಾಸದ ನಂಬಿಕೆಯಿಂದ ಸಿಗುವ ಭದ್ರತೆಯೊಂದಿಗೆ, ಬುದ್ಧನು ಹೇಳಿದ ಇತರ ಅಸ್ಪಷ್ಟ ವಿಷಯಗಳ ಮಾನ್ಯತೆಯಲ್ಲಿ ನಾವು ಆಳವಾದ ನಂಬಿಕೆಯನ್ನು ಬೆಳೆಸಿಕೊಳ್ಳುತ್ತೇವೆ. 

ಉದಾಹರಣೆಗೆ, ನಾವು ರಚನಾತ್ಮಕ ರೀತಿಯಲ್ಲಿ ವರ್ತಿಸಿದರೆ, ಅದರ ಪರಿಣಾಮವಾಗಿ ನಾವು ಪುನರ್ಜನ್ಮದ ಉತ್ತಮ ಸ್ಥಿತಿಗಳಲ್ಲಿ ಒಂದಾದ ಮಾನವ ಅಥವಾ ದೇವತೆಯಾಗಿ ಮರುಜನ್ಮ ಪಡೆಯುತ್ತೇವೆ ಎಂದು ಬುದ್ಧ ಹೇಳಿದರು. ಮತ್ತೊಂದೆಡೆ, ನಾವು ವಿನಾಶಕಾರಿಯಾಗಿ ಮತ್ತು ನಕಾರಾತ್ಮಕವಾಗಿ ವರ್ತಿಸಿದರೆ, ನಮ್ಮ ಮುಂದಿನ ಜೀವಿತಾವಧಿಯಲ್ಲಿ, ನಾವು ಒಂದು ನರಕ ಜೀವಿ, "ಹಸಿದ" ಪ್ರೇತ ಅಥವಾ ಪ್ರಾಣಿಯಾಗಿ ಪುನರ್ಜನ್ಮ ಪಡೆಯುತ್ತೇವೆ. ಇವುಗಳು ವರ್ತನೆಯ ಕಾರಣ ಮತ್ತು ಪರಿಣಾಮದ ಬಗೆಗಿರುವ ಹೇಳಿಕೆಗಳಾಗಿರುತ್ತವೆ, ಇವುಗಳನ್ನು ನಮ್ಮ ಸ್ವಂತ ಅನುಭವದ ಮೂಲಕ ಅಥವಾ ಸಂಪೂರ್ಣ ತರ್ಕದ ಮೂಲಕ ಸಮರ್ಥಿಸುವುದು ಅಥವಾ ಮೌಲ್ಯೀಕರಿಸುವುದು ಕಷ್ಟಕರವಾಗಿರುತ್ತದೆ. ಆದರೆ ಧರ್ಮಗ್ರಂಥದ ಅಧಿಕಾರದಲ್ಲಿ ಕುರುಡು ನಂಬಿಕೆಯಿಡುವುದನ್ನು ಆಧರಿಸಿ, ನಾವು ಅವುಗಳನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಏಕೆಂದರೆ ತರ್ಕ ಮತ್ತು ಅನುಭವವು, ತಲ್ಲೀನರಾಗುವ ಏಕಾಗ್ರತೆ ಮತ್ತು ಶೂನ್ಯತೆಯ ಸರಿಯಾದ ತಿಳುವಳಿಕೆಯನ್ನು ಪಡೆಯಲು ಇರುವ ಬುದ್ಧನು ಬೋಧನೆಗಳ ಮಾನ್ಯತೆಯನ್ನು ಪ್ರದರ್ಶಿಸಿದರೆ, ಬುದ್ಧನು, ನಡವಳಿಕೆ ಮತ್ತು ಅದರ ಫಲಿತಾಂಶಗಳ ಬಗ್ಗೆ ಹೇಳಿದ್ದನ್ನು ಒಪ್ಪಿಕೊಳ್ಳುವುದು ಸಂಪೂರ್ಣವಾಗಿ ಸಮಂಜಸವಾಗಿರುತ್ತದೆ. 

ಇದರ ಪರಿಣಾಮವಾಗಿ, ಬುದ್ಧನು ಶೂನ್ಯತೆಯ ಬಗ್ಗೆ, ವಾಸ್ತವದ ಬಗ್ಗೆ, ಅಸ್ತಿತ್ವದಲ್ಲಿರುವ ಅಸಾಧ್ಯ ಮಾರ್ಗಗಳ ಸಂಪೂರ್ಣ ಅನುಪಸ್ಥಿತಿಯ ಬಗ್ಗೆ ಮಾಡಿದ ಹೇಳಿಕೆಗಳ ಬಗ್ಗೆ ನಾವು ಬಹಳ ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ. ಇವುಗಳು ಸರಿಯಾಗಿವೆ ಎಂದು ಗುರುತಿಸಿದ ಮೇಲೆ, ನಾವು ಬುದ್ಧನ ಮತ್ತಷ್ಟು ಹೇಳಿಕೆಗಳನ್ನು ಪರಿಗಣಿಸಬೇಕಾಗಿದೆ: ರಚನಾತ್ಮಕವಾಗಿ ಕಾರ್ಯನಿರ್ವಹಿಸುವುದರ ಫಲಿತಾಂಶವು ಸಂತೋಷವಾಗಿರುತ್ತದೆ; ವಿನಾಶಕಾರಿ ಮತ್ತು ನಕಾರಾತ್ಮಕವಾಗಿ ವರ್ತಿಸುವುದರ ಫಲಿತಾಂಶವು ದುಃಖವಾಗಿರುತ್ತದೆ. ನಂತರ, ಈ ಹೇಳಿಕೆಗಳು ಸಹ ಸರಿಯಾಗಿವೆ ಎಂಬ ವಿಶ್ವಾಸವನ್ನು ನಾವು ಪಡೆಯುತ್ತೇವೆ ಮತ್ತು ಅದರ ಆಧಾರದ ಮೇಲೆ, ನಮ್ಮ ನಡವಳಿಕೆಯನ್ನು ಅದಕ್ಕೆ ಅನುಗುಣವಾಗಿ ಮಾರ್ಪಡಿಸುವ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ನಾವು ಸಂತೋಷವನ್ನು ಬಯಸಿದರೆ, ಅದನ್ನು ಕರೆತರುವ ರೀತಿಯಲ್ಲಿ ನಾವು ವರ್ತಿಸಬೇಕು. ಅವುಗಳೆಂದರೆ, ನಾವು ರಚನಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕು.  

ತ್ಯಾಗ: ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುವ ನಿರ್ಣಯ 

ನಮ್ಮ ಬಳಿ ಪ್ರಸ್ತುತವಾಗಿ ಇರುವ ಅತ್ಯುತ್ತಮವಾದ ಮಾನವ ಪುನರ್ಜನ್ಮವು - ಆಧ್ಯಾತ್ಮಿಕ ಪ್ರಗತಿಗಾಗಿ ಬೇಕಾಗಿರುವ ಎಲ್ಲಾ ಅವಕಾಶಗಳೊಂದಿಗೆ ಕೂಡಿದ್ದು - ಹಟಾತ್ತಾಗಿ ಎಲ್ಲಿಂದಲೋ ಬಂದಿಲ್ಲ ಎಂಬ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇದು ಹಿಂದಿನ ಜೀವಿತಾವಧಿಯಲ್ಲಿ ಅಗಾಧವಾದ ಸಕಾರಾತ್ಮಕ ಸಾಮರ್ಥ್ಯವನ್ನು ನಿರ್ಮಿಸಿದರ ಪರಿಣಾಮವಾಗಿದೆ. ನಾವು ಬಹಳ ರಚನಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ವರ್ತಿಸಿದ ಕಾರಣದಿಂದಾಗಿ, ಅದು ಈ ಪುನರ್ಜನ್ಮ ಮತ್ತು ನಮಗಿರುವ ಅವಕಾಶಗಳನ್ನು ಕರೆತಂದಿದೆ. ಆದ್ದರಿಂದ ಈ ಅವಕಾಶವನ್ನು ನಾವು ವ್ಯರ್ಥ ಮಾಡಬಾರದು. ಆಹಾರ ಮತ್ತು ಬಟ್ಟೆ, ಖ್ಯಾತಿ ಮತ್ತು ಪ್ರಸಿದ್ಧಿಯಂತಹ ವಿಷಯಗಳಿಗಾಗಿ ಈ ಜೀವಿತಾವಧಿಯನ್ನು ಬಳಸಿಕೊಂಡರೆ, ಈ ಜೀವನವು ವ್ಯರ್ಥವಾಗುತ್ತದೆ. ಇವುಗಳು ನಮ್ಮ ಏಕೈಕ ಕಾಳಜಿಯಾಗಿದ್ದರೆ, ಈ ಸ್ಥಿರೀಕರಣದಿಂದಾಗಿ, ಈ ಜೀವಿತಾವಧಿಯೊಂದಿಗಿನ ಸಂಪೂರ್ಣವಾದ ಗೀಳಿನಿಂದ ದೂರವಿರಲು ನಮಗೆ ಸಾಧ್ಯವಾಗುವುದಿಲ್ಲ. 

ಮತ್ತೊಂದೆಡೆ, ಇಂದ್ರನಂತಹ ದೇವರಂತೆ ಪುನರ್ಜನ್ಮವಾಗಬೇಕೆಂದು, ಭವಿಷ್ಯದ ಜೀವತಾವಧಿಯಲ್ಲಿ ಸಂತೋಷವನ್ನು ಪಡೆಯಲು, ನಾವು ಸಂಪೂರ್ಣವಾಗಿ ಶ್ರಮಿಸುವುದರಲ್ಲೂ ಸಮಸ್ಯೆಗಳಿವೆ. ಅಂತಹ ದೇವರ ಬಳಿ ಯಾವ ರೀತಿಯ ಜೀವನವಿದೆ ಎಂಬುದನ್ನು ನೋಡಿ. ಆ ದೇವರ ಬಳಿ ಅಪಾರವಾದ ಸಂತೋಷವಿದ್ದು, ತಾತ್ಕಾಲಿಕವಾದ ಬಾಹ್ಯ ಸಮಸ್ಯೆಗಳಿಲ್ಲ. ಆದರೆ ಮರಣದ ಸಮಯದಲ್ಲಿ, ಅಂತಹ ದೇವರು ಅಪಾರವಾದ ವಿಷಾದ ಮತ್ತು ಪಶ್ಚಾತ್ತಾಪವನ್ನು ಪಡುತ್ತಾನೆ, ಏಕೆಂದರೆ ಸಂಪೂರ್ಣವಾಗಿ ಸಂತೋಷದಿಂದ ಕೂಡಿದ ಜೀವನವು ಕೇವಲ ಕನಸಾಗಿ ತೋರುತ್ತದೆ ಮತ್ತು ಸಾವನ್ನು ಎದುರಿಸುವಾಗ ಇದು ಅಪಾರವಾದ ದುಃಖ ಮತ್ತು ನೋವನ್ನು ತರುತ್ತದೆ. ಆದ್ದರಿಂದ, ಅಂತಹ ಪುನರ್ಜನ್ಮವನ್ನು ಹೊಂದುವುದನ್ನು ನಮ್ಮ ಗುರಿಯಾಗಿರಿಸಿಕೊಳ್ಳುವುದು, ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿರುವುದಿಲ್ಲ. 

ಇದಲ್ಲದೆ, ನಾವು ಅಮೂಲ್ಯವಾದ ಮಾನವ ದೇಹವನ್ನು ಹೊಂದಿರುವುದರಿಂದ, ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂಬ ಆಧಾರದ ಮೇಲೆ ನಾವು ಕೆಲಸ ಮಾಡಬೇಕು, ಏಕೆಂದರೆ ಅದು ಕಳೆದುಹೋಗಹುದಾದ ಸಂಗತಿಯಾಗಿರುತ್ತದೆ. ಹುಟ್ಟಿದ ನಂತರ ಸಾವಿನಿಂದ ಪಾರಾದವರು ಯಾರೂ ಇಲ್ಲ. ಸಾವು ನಮ್ಮೆಲ್ಲರಿಗಾಗಿ ಬರುವುದು ಖಚಿತ, ಇದು ಕೇವಲ ಯಾವಾಗ ಎಂಬುದರ ಮಾತಾಗಿರುತ್ತದೆ. ಅವನ ಅಥವಾ ಅವಳ ಸಮಯ ಯಾವಾಗ ಬರುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ವಾಸ್ತವಗಳ ಬಗ್ಗೆ ಯೋಚಿಸುವುದರಿಂದ ನಾವು ಜೀವಂತವಾಗಿರುವಾಗ ಮತ್ತು ಆರೋಗ್ಯಕರವಾಗಿರುವಾಗ, ಈಗಿರುವ ಅವಕಾಶಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಬಯಸುವಂತೆ ಪ್ರೇರೇಪಿಸುತ್ತದೆ.   

ಆದ್ದರಿಂದ, ಈ ಜೀವಿತಾವಧಿಯಲ್ಲಿ ಮಾತ್ರ ವಸ್ತುಗಳನ್ನು ಗಳಿಸುವ ನಮ್ಮ ಸಂಪೂರ್ಣವಾದ ಗೀಳಿನಿಂದ ನಾವು ದೂರವಿರಬೇಕು. ಈ ಜೀವಿತಾವಧಿಯಲ್ಲಿರುವ ವಿವಿಧ ರೀತಿಯ ನಶ್ವರವಾದ ವಸ್ತುಗಳು, ಶಾಶ್ವತವಾದ ಸಾರವನ್ನು ಹೊಂದಿಲ್ಲ ಎಂಬುದರ ಬಗ್ಗೆ ಆಲೋಚಿಸುವ ಮೂಲಕ ನಾವು ಹೀಗೆ ಮಾಡುತ್ತೇವೆ. ಈ ರೀತಿಯಾಗಿ, ಈ ಜೀವಿತಾವಧಿಯಲ್ಲಿ ವಿಷಯಗಳೊಂದಿಗಿನ ನಮ್ಮ ಗೀಳಿನಿಂದ ನಾವು ದೂರವಿರುತ್ತೇವೆ ಮತ್ತು ಈ ರೀತಿಯ ಗೀಳನ್ನು ಆಧರಿಸಿರುವ ಸಮಸ್ಯೆಗಳಿಂದ ಮುಕ್ತರಾಗುವ ನಿರ್ಣಯವನ್ನು ಬೆಳೆಸಿಕೊಳ್ಳುತ್ತೇವೆ. ಸ್ವತಂತ್ರವಾಗಿರಲು ಇರುವ ಈ ನಿರ್ಣಯವನ್ನು "ತ್ಯಾಗ" ಎಂದು ಕರೆಯಲಾಗುತ್ತದೆ. 

ಅಂತೆಯೇ, ಭವಿಷ್ಯದ ಜೀವಿತಾವಧಿಗಳನ್ನು ಮತ್ತು ಎಲ್ಲಾ ವಿವಿಧ ರೀತಿಯ ಸನ್ನಿವೇಶಗಳಲ್ಲಿ ಮರುಹುಟ್ಟು ಪಡೆಯಬಹುದಾದ ವಿಷಯವನ್ನು ನಾವು ಪರಿಗಣಿಸಬೇಕು. ಮಾನವನಾಗಿ ಅಥವಾ ದೇವರಾಗಿ ಭವಿಷ್ಯದ ಪುನರ್ಜನ್ಮಗಳಲ್ಲಿ ನಾವು ಪಡೆಯಬಹುದಾದ ವೈಭವ ಮತ್ತು ಸಂತೋಷದ ಬಗ್ಗೆ ಯೋಚಿಸಿದಾಗ, ಇವುಗಳು ಸಮಸ್ಯೆಗಳನ್ನು ಸಹ ಉಂಟುಮಾಡುತ್ತವೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ನಾವು ಎಷ್ಟೇ ಉತ್ತಮ ಸ್ಥಿತಿಯಲ್ಲಿದ್ದರೂ ಸಮಸ್ಯೆಗಳು ಅನಿಯಂತ್ರಿತವಾಗಿ ಮರುಕಳಿಸುತ್ತಿರುತ್ತವೆ. ಆದ್ದರಿಂದ, ಭವಿಷ್ಯದ ಜೀವಿತಾವಧಿಯಲ್ಲಿ ಈ ವಿಷಯಗಳೊಂದಿಗೆ ಅಂಟಿಕೊಳ್ಳುವುದು ಮತ್ತು ಗೀಳನ್ನು ಬೆಳೆಸಿಕೊಳ್ಳುವುದರಿಂದ ನಾವು ದೂರವಿರಬೇಕಾಗಿದೆ. ಎರಡನೇ ವಿಧದ ನಿರ್ಣಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುವ ಮೂಲಕ ನಾವು ಹೀಗೆ ಮಾಡುತ್ತೇವೆ. ಅದುವೇ, ಮುಂದಿನ ಜೀವಿತಾವಧಿಯಲ್ಲಿ ಈ ಗೀಳುಗಳಿಂದ ಬರುವ ಸಮಸ್ಯೆಗಳಿಂದ ಮುಕ್ತರಾಗುವ ನಿರ್ಣಯವಾಗಿರುತ್ತದೆ. 

ಹೀಗೆ, ಮುಕ್ತವಾಗಿರಲು ಎರಡು ವಿಧದ ನಿರ್ಣಯಗಳಿವೆ. ಈ ಜೀವನದಲ್ಲಿನ ಸಮಸ್ಯೆಗಳಿಂದ ಮುಕ್ತರಾಗುವ ನಿರ್ಣಯ ಮತ್ತು ಮುಂದಿನ ಎಲ್ಲಾ ಜೀವತಾವಧಿಗಳಲ್ಲಿನ ಸಮಸ್ಯೆಗಳಿಂದ ಮುಕ್ತರಾಗುವ ನಿರ್ಣಯ. 

ಅಶಾಶ್ವತತೆ 

ಆಧ್ಯಾತ್ಮಿಕ ಸಾಧಕರು, ಜೀವನದಲ್ಲಿ ಯಾವುದೇ ಪರಿಸ್ಥಿತಿಯು ಸ್ಥಿರವಾಗಿ ಉಳಿಯುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳುವವರು; ಅಶಾಶ್ವತತೆ ಮತ್ತು ಸಾವಿನ ಬಗ್ಗೆ ಗಮನಹರಿಸುವವರು; ಅವನ ಅಥವಾ ಅವಳ ಸಮಸ್ಯೆಗಳು ಮತ್ತು ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿದಿರುವವರು ಮತ್ತು ಎಚ್ಚರದಿಂದಿರುವವರು. ಇದು, ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ವಿವಿಧ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾಧಕರನ್ನು ಪ್ರೇರೇಪಿಸುವ ಸಂಗತಿಯಾಗಿರುತ್ತದೆ. ಅಶಾಶ್ವತತೆ ಮತ್ತು ಸಮಸ್ಯೆಗಳನ್ನು ಮರೆತುಬಿಡುವುದರಿಂದ, ಸಾವಿನ ಬಗ್ಗೆ ಮರೆತುಬಿಡುವುದರಿಂದ ನಾವು ಅವುಗಳನ್ನು ದೂರವಿಡಲು ಸಾಧ್ಯವಾದರೆ, ಅದು ಬಹಳಾ ಒಳ್ಳೆಯದಾಗಿರುತ್ತಿತ್ತು - ಅದು ಅತ್ಯುತ್ತಮವಾಗಿರುತ್ತಿತ್ತು. ಆದರೆ ವಾಸ್ತವವೆಂದರೆ, ನಾವು ಹಾಗೆ ಮಾಡಲು ಸಾಧ್ಯವಿಲ್ಲ. ನಾವು ಸಾಯಲಿದ್ದೇವೆ ಮತ್ತು ನಮ್ಮ ಜೀವನದಲ್ಲಿ ಸಮಸ್ಯೆಗಳಿವೆ ಎಂಬ ಅಂಶವನ್ನು ನಿರ್ಲಕ್ಷಿಸುವುದರಿಂದ ಆ ಸತ್ಯಗಳು ಕಣ್ಮರೆಯಾಗುವುದಿಲ್ಲ. ಆದ್ದರಿಂದ ನಮ್ಮ ಸಮಸ್ಯೆಗಳನ್ನು ಅರಿತುಕೊಳ್ಳುವುದು, ಅವುಗಳನ್ನು ವಾಸ್ತವಿಕವಾಗಿ ಎದುರಿಸುವುದು ಮತ್ತು ಅವುಗಳನ್ನು ನಿವಾರಿಸಲು ಹಲವಾರು ಕ್ರಮಗಳನ್ನು ಕೈತೆಗೆದುಕೊಳ್ಳುವುದು ಉತ್ತಮ. ಇದು, ಆಧ್ಯಾತ್ಮಿಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರ ಭಾಗವಾಗಿರುತ್ತದೆ. 

ಸ್ವತಃ ಬುದ್ಧನೇ, ಈ ಕ್ರಮಗಳ ಪ್ರಸರಣದ ವಿವಿಧ ಹರಿವಿನ ಸುತ್ತುಗಳನ್ನು ಹೊಂದಿಸಲು ಶುರುಮಾಡಿದಾಗ, ಅಶಾಶ್ವತತೆಯ ಬಗ್ಗೆ, ಯಾವುದೂ ಸ್ಥಿರವಾಗಿ ಉಳಿಯುವುದಿಲ್ಲ ಎಂಬುದರ ಬಗ್ಗೆ ಬೋಧಿಸುವ ಮೂಲಕ ಆರಂಭಿಸಿದರು. ಅವರ ಸಂಪೂರ್ಣ ಆಧ್ಯಾತ್ಮಿಕ ಅನ್ವೇಷಣೆಯು, ಅವರ ಅಶಾಶ್ವತತೆಯ ಅರಿವಿನೊಂದಿಗೆ ಪ್ರಾರಂಭವಾಯಿತು. ಅಂತೆಯೇ, ಅವರ ಜೀವನವು ಕೊನೆಗೊಂಡಾಗ ಮತ್ತು ಅವರು ಮರಣಹೊಂದಿದಾಗ, ಅದು ಅಶಾಶ್ವತತೆಯ ಸತ್ಯವನ್ನು ಎಲ್ಲರಿಗೂ ಪ್ರದರ್ಶಿಸುವ ಸಂದರ್ಭದಲ್ಲಿ ಮಾಡಲಾಯಿತು. 

ಚತುರಾರ್ಯ ಸತ್ಯಗಳು 

ಇದಲ್ಲದೆ, ಸಮಸ್ಯೆಗಳು ಎಲ್ಲಿಂದಲೋ ಬರುವುದಿಲ್ಲ. ಯಾವುದೇ ಕಾರಣವಿಲ್ಲದೆ ಅವು ಸಂಭವಿಸುವುದಿಲ್ಲ. ಬದಲಿಗೆ, ನಮ್ಮ ಎಲ್ಲಾ ನಿಜವಾದ ಸಮಸ್ಯೆಗಳು ಮತ್ತು ಅಸಂತೋಷಗಳು ನಿಜವಾದ ಕಾರಣಗಳಿಂದ ಉದ್ಭವಿಸುತ್ತವೆ - ಅವುಗಳೆಂದರೆ, ನಮ್ಮ ಪ್ರಚೋದಿತ ವರ್ತನೆ ಮತ್ತು ನಮ್ಮ ಗೊಂದಲದ ಭಾವನೆಗಳು ಮತ್ತು ವರ್ತನೆಗಳು - ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಕರ್ಮ ಮತ್ತು ನಮ್ಮ ಭ್ರಮೆಗಳು. ನಮ್ಮ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳಿಂದ ಪ್ರಚೋದಿತವಾಗಿ ನಡೆದುಕೊಳ್ಳುವ ಪ್ರವೃತ್ತಿಯೇ, ನಮ್ಮ ಎಲ್ಲಾ ಸಮಸ್ಯೆಗಳ ಮೂಲವಾಗಿರುತ್ತದೆ.  

ನಮ್ಮ ಎಲ್ಲಾ ಸಮಸ್ಯೆಗಳಿಗಾಗಿ ಇರುವ ಈ ಎರಡು ಕಾರಣಗಳಲ್ಲಿ, ಪ್ರಚೋದಿತ ವರ್ತನೆಯು ಗೊಂದಲದ ಭಾವನೆಗಳು ಮತ್ತು ವರ್ತನೆಗಳಲ್ಲಿ ಬೇರೂರಿದೆ ಎಂದು ನಾವು ನೋಡಬಹುದು. ಬೌದ್ಧ ಗ್ರಂಥಗಳಲ್ಲಿ ವಿವರಿಸಲಾದ 84,000 ವಿವಿಧ ರೀತಿಯ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳನ್ನು ನಾವು ಪರಿಶೀಲಿಸಿದರೆ, ಅವೆಲ್ಲವೂ ಒಂದೇ ಮೂಲದಿಂದ ಬಂದಿವೆ ಎಂದು ನಾವು ಕಂಡುಕೊಳ್ಳುತ್ತೇವೆ: ಅಜ್ಞಾನ ಅಥವಾ ಅರಿವಿಲ್ಲದಿರುವಿಕೆ, ಇದು ನಿಜವಾದ ಸ್ಥಾಪಿತವಾದ ಅಸ್ತಿತ್ವವನ್ನು ಮತ್ತು ನಿಜವಾದ ಸ್ಥಾಪಿತವಾದ ಗುರುತುಗಳನ್ನು ಗ್ರಹಿಸಲು ಕಾರಣವಾಗುತ್ತವೆ.  

ಆದರೆ, ನಿಜವಾಗಿ ಸ್ಥಾಪಿತವಾದ ಗುರುತು ಎಂಬ ಯಾವುದೇ ವಿಷಯವಿಲ್ಲ - ನಮಗಾಗಿ ಅಥವಾ ಯಾವುದೇ ವಿಷಯಕ್ಕಾಗಿ ಇರುವುದಿಲ್ಲ - ಆದರೂ ನಾವು ವಿಷಯಗಳನ್ನು, ಅವುಗಳ ನಿಜವಾಗಿ ಸ್ಥಾಪಿತವಾದ ಗುರುತು ಅಥವಾ ಅಸ್ತಿತ್ವವಿರುವಂತೆ ಗ್ರಹಿಸುತ್ತೇವೆ. ಆದ್ದರಿಂದ, ನಿಜವಾಗಿಯೂ ಸ್ಥಾಪಿತವಾದ ಗುರುತಿನಂತಹ ವಿಷಯವು ಇರುವುದು ಅಸಾಧ್ಯವೆಂದು ನಾವು ಅರಿತುಕೊಳ್ಳಲು ಮತ್ತು ವಿವೇಚಿಸಲು ಸಾಧ್ಯವಾದರೆ, ಅಂತಹ ಗುರುತನ್ನು ವಸ್ತುಗಳು ಹೊಂದಿರಬೇಕೆಂಬ ಗ್ರಹಿಕೆಯನ್ನು ನಿವಾರಿಸಲು ಇದು ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತದೆ. 

ನಿಜವಾಗಿ ಸ್ಥಾಪಿತವಾದ ಅಸ್ತಿತ್ವದಂತಹ ವಿಷಯವಿಲ್ಲ ಎಂದು ನಾವು ಅರ್ಥಮಾಡಿಕೊಂಡಾಗ – ಅಂದರೆ ಯಾವ ವಿಷಯಕ್ಕೂ ನಿಜವಾಗಿ ಸ್ಥಾಪಿತವಾದ ಗುರುತಿಲ್ಲ - ಈ ತಿಳುವಳಿಕೆಯನ್ನು "ಮನಸ್ಸಿನ ನಿಜವಾದ ಮಾರ್ಗ", "ನಿಜವಾದ ಮಾರ್ಗ" ಎಂದು ಕರೆಯಲಾಗುತ್ತದೆ – ಇದು ಚತುರಾರ್ಯ ಸತ್ಯಗಳಲ್ಲಿ ಒಂದಾಗಿದೆ. ಇದನ್ನು, ಹೆಚ್ಚು ಅರಿತುಕೊಂಡ ಜೀವಿಗಳಾದ "ಆರ್ಯರು", ಸತ್ಯ ಅಥವಾ ಸರಿಯಾಗಿರುವುದು ಮತ್ತು ವಿಮೋಚನೆ ಮತ್ತು ಜ್ಞಾನೋದಯದ ಸಾಧನೆಗೆ ಕಾರಣವಾಗುವ ಮನಸ್ಸಿನ ಮಾರ್ಗವೆಂದು ಪರಿಗಣಿಸುತ್ತಾರೆ. 

ನಮ್ಮ ಬಳಿ ಮನಸ್ಸಿನ ನಿಜವಾದ ಮಾರ್ಗವಿದ್ದಾಗ - ಅಂದರೆ ಯಾವುದೇ ವಿಷಯದ ನಿಜವಾದ ಸ್ಥಾಪಿತ ಗುರುತಿನಂತಹ ವಿಷಯವಿರುವುದಿಲ್ಲ ಎಂಬುದರ ವಿವೇಚನಾತ್ಮಕ ಅರಿವು - ನಾವು ಯಾವುದೇ ರೀತಿಯ ಗೊಂದಲಮಯ ಭಾವನೆಗಳು ಅಥವಾ ವರ್ತನೆಗಳಲ್ಲಿ ತೊಡಗುವುದಿಲ್ಲ, ಏಕೆಂದರೆ ಅಂತಹ ಭ್ರಮೆಗಳು, ಅಸ್ತಿತ್ವದಲ್ಲಿರುವ ಅಸಾಧ್ಯವಾದ ರೀತಿಗಳನ್ನು ಪ್ರಕ್ಷೇಪಿಸುವುದನ್ನು ಮತ್ತು ನಂಬುವುದನ್ನು ಆಧರಿಸಿರುತ್ತವೆ. ನಾವು ಯಾವುದೇ ಗೊಂದಲದ ಭಾವನೆಗಳು ಅಥವಾ ವರ್ತನೆಗಳನ್ನು ಹೊಂದಿಲ್ಲದಿದ್ದರೆ, ನಾವು ಪ್ರಚೋದಿತವಾಗಿ ವರ್ತಿಸುವುದಿಲ್ಲ. ನಾವು ಉದ್ವೇಗದಿಂದ ವರ್ತಿಸುವುದನ್ನು ನಿಲ್ಲಿಸಿದಾಗ, ನಾವು ನಮಗಾಗಿ ಸಮಸ್ಯೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸುತ್ತೇವೆ. ಇದರ ನಂತರ, ನಮ್ಮ ಅನುಭವದಲ್ಲಿ ಸಮಸ್ಯೆಗಳು ಉದ್ಭವಿಸದೇ ಇರುವ ಸ್ಥಿತಿಯನ್ನು "ನಿಜವಾದ ನಿಲುಗಡೆ," "ನಿಜವಾದ ಸಮಾಪ್ತಿ" ಎಂದು ಕರೆಯಲಾಗುತ್ತದೆ. 

ಆರ್ಯರು, ಅಂದರೆ ಹೆಚ್ಚು ಅರಿತುಕೊಂಡ ಜೀವಿಗಳು ಸತ್ಯವೆಂದು ಕಾಣುವ ನಾಲ್ಕು ಸಂಗತಿಗಳ ಪ್ರಸ್ತುತಿ ಇದಾಗಿದೆ. ಇವೇ ಚತುರಾರ್ಯ ಸತ್ಯಗಳು. ಮೊದಲ ಎರಡು ಸತ್ಯಗಳು ಗೊಂದಲಮಯ ಸಂಗತಿಗಳೊಂದಿಗೆ ವ್ಯವಹರಿಸುತ್ತವೆ, ಅವುಗಳೆಂದರೆ ನಿಜವಾದ ಸಮಸ್ಯೆಗಳು ಮತ್ತು ಅವುಗಳ ನಿಜವಾದ ಕಾರಣಗಳು: ಪ್ರಚೋದಿತ ವರ್ತನೆ ಮತ್ತು ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳು. ವಿಮೋಚನೆಯ ವಿಷಯವನ್ನು ವ್ಯವಹರಿಸುವ ಕೊನೆಯ ಎರಡು ಸತ್ಯಗಳತ್ತ ನಾವು ನಮ್ಮ ಗಮನಹರಿಸಿದಾಗ, ಇಲ್ಲಿ, ಎಲ್ಲಾ ಸಮಸ್ಯೆಗಳ ಕಾರಣಗಳನ್ನು ಶಾಶ್ವತವಾಗಿ ನಿವಾರಿಸುವ ಮೂಲಕ ನಿಜವಾದ ನಿಲುಗಡೆಯನ್ನು ಸಾಧಿಸಲು ನಾವು ಬಯಸುತ್ತೇವೆ. ಅದನ್ನು ಸಾಧಿಸುವ ಮಾರ್ಗವು ಮನಸ್ಸಿನ ನಿಜವಾದ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದಾಗಿರುತ್ತದೆ. ಹೀಗೆ, ಹೆಚ್ಚು ಅರಿತುಕೊಂಡ ಜೀವಿಗಳು ನಿಜವೆಂದು ಕಾಣುವ ಈ ನಾಲ್ಕು ಸಂಗತಿಗಳನ್ನು ನಾವು ಗುರುತಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. 

ನಮ್ಮ ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ನಮ್ಮ ಅತ್ಯುತ್ತಮವಾದ ಆಧಾರವಾಗಿರಿಸಿ, ಚತುರಾರ್ಯ ಸತ್ಯಗಳನ್ನು ಅರಿತುಕೊಳ್ಳುವತ್ತ ನಮ್ಮ ಎಲ್ಲಾ ಪರಿಶ್ರಮಗಳನ್ನು ಹಾಕಬೇಕಾಗಿದೆ. ನಾವು ಹೀಗೆ ಮಾಡಿದಾಗ, ಈ ಪುನರ್ಜನ್ಮದೊಂದಿಗೆ ಸಿಕ್ಕ ಅವಕಾಶಗಳನ್ನು ನಾವು ಸರಿಯಾಗಿ ಬಳಸಿಕೊಂಡಿರುತ್ತೇವೆ. ಮಾನಸಿಕವಾಗಿ ಪ್ರಯೋಜನಕಾರಿಯಾಗುವ ಅಭ್ಯಾಸವಾಗಿ, ‘ನಿಜವಾಗಿ ಸ್ಥಾಪಿತವಾದ ಅಸ್ತಿತ್ವದಂತಹ ವಿಷಯವಿಲ್ಲ’ ಎಂಬ ಸ್ಥಿರವಾದ, ಧೃಡವಾದ ಅರಿವನ್ನು ನಿರ್ಮಿಸಿದಾಗ, ನಾವು ನಮ್ಮ ಎಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸುತ್ತೇವೆ.

ಸಹಾನುಭೂತಿಯನ್ನು ಅಭಿವೃದ್ಧಿಪಡಿಸುವುದು

ಕೇವಲ ನಮಗಿರುವ ಸಮಸ್ಯೆಗಳನ್ನು ನಿವಾರಿಸುವುದು ಚೆನ್ನಾಗಿರುತ್ತದೆ ಹೌದು - ಆದರೆ ಇದು ಸಾಕಾಗುವುದಿಲ್ಲ. ಏಕೆಂದರೆ ನಾವು ಕೇವಲ ಒಬ್ಬ ವ್ಯಕ್ತಿ, ಇತರರು ಅಸಂಖ್ಯಾತರಾಗಿರುತ್ತಾರೆ. ಇತರ ಎಷ್ಟು ಜೀವಿಗಳಿವೆ ಎಂದು ನಮಗೆ ಎಂದಿಗೂ ಲೆಕ್ಕ ಹಾಕಲಾಗುವುದಿಲ್ಲ, ಮತ್ತು ಅವುಗಳಲ್ಲಿ ಪ್ರತಿಯೊಬ್ಬ ಜೀವಿಗೂ ಸಮಸ್ಯೆಗಳಿರುತ್ತವೆ - ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಳಲುತ್ತಿರುತ್ತಾರೆ. ಆದ್ದರಿಂದ, ನಮಗಾಗಿ ಮಾತ್ರ ಶ್ರಮ ಪಡುವುದು ಸರಿಯಲ್ಲ: ನಾವು ಎಲ್ಲರಿಗಾಗಿ ಪರಿಹಾರ ಹುಡುಕಬೇಕಾಗಿದೆ. 

ನಾವು ಇದರ ಬಗ್ಗೆ ಆಲೋಚಿಸಿದಾಗ, ಸೀಮಿತ ಬುದ್ಧಿಶಕ್ತಿಯಿರುವ ಇತರ ಎಲ್ಲಾ ಜೀವಿಗಳು ನಮಗೆ ಅತ್ಯಂತ ಕರುಣಾಮಯಿಯಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ - ವಾಸ್ತವದಲ್ಲಿ, ಇತರ ಜೀವಿಗಳಿಗಿಂತ ಹೆಚ್ಚು ಕರುಣಾಮಯಿ ಬೇರೆಯವರಿಲ್ಲ. ನಾವು ಬುದ್ಧರ ದಯೆ ಮತ್ತು ಸೀಮಿತ ಜೀವಿಗಳ ದಯೆಯನ್ನು ಪರಿಗಣಿಸಿದಾಗ, ಅವರು ಸಮಾನರು ಎಂದು ನಾವು ಅರಿತುಕೊಳ್ಳುತ್ತೇವೆ. ಉದಾಹರಣೆಗೆ, ನಾವು ಜೇನುತುಪ್ಪವನ್ನು ಇಷ್ಟಪಟ್ಟರೆ, ಅದು ಎಲ್ಲಿಂದ ಬರುತ್ತದೆ ಎಂದು ನಾವು ಯೋಚಿಸಬೇಕು. ಇದು ಬಹಳಷ್ಟು ಜೇನುನೊಣಗಳಿಂದ ಬರುತ್ತದೆ, ಮತ್ತು ಈ ಜೇನುನೊಣಗಳು, ಇದರ ರಚನೆಗೆ ಸಾಕಷ್ಟು ಕೆಲಸವನ್ನು ಮಾಡಬೇಕಾಗುತ್ತದೆ: ಹಲವಾರು ಹೂವುಗಳಿಗೆ ಹಾರಿ, ಪರಾಗವನ್ನು ಸಂಗ್ರಹಿಸಿ, ಜೇನುಗೂಡಿನಲ್ಲಿ ಜೇನುತುಪ್ಪವನ್ನು ಸ್ರವಿಸುತ್ತವೆ ಮತ್ತು ಶೇಖರಿಸುತ್ತವೆ. ನಮ್ಮಲ್ಲಿ ಜೇನುತುಪ್ಪವನ್ನು ಆನಂದಿಸಬೇಕೆಂಬ ಇಚ್ಛೆಯಿದ್ದರೆ, ನಾವು ಈ ಸಣ್ಣ ಕೀಟಗಳ ಕೆಲಸ ಮತ್ತು ದಯೆಯನ್ನು ಅವಲಂಬಿಸಬೇಕಾಗಿರುತ್ತದೆ. ಅಂತೆಯೇ, ನಮ್ಮಲ್ಲಿ ಕೆಲವರು ಸೇವಿಸಬಹುದಾದ ಮಾಂಸವನ್ನು ನಾವು ಪರಿಗಣಿಸಿದಾಗ, ಉದಾಹರಣೆಗೆ ನಾವು ಅನಾರೋಗ್ಯ ಮತ್ತು ದುರ್ಬಲರಾಗಿದ್ದಾಗ, ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುವ ಆಹಾರದ ಅಗತ್ಯವಿರುವಾಗ, ಅದು ಎಲ್ಲಿಂದ ಬರುತ್ತದೆ? ನಮ್ಮ ಶಕ್ತಿ ಮತ್ತು ಪೋಷಣೆಗಾಗಿ ಆ ಮಾಂಸವನ್ನು ಒದಗಿಸಲು ತಮ್ಮ ಪ್ರಾಣವನ್ನು ತ್ಯಜಿಸಬೇಕಾದ ಪ್ರಾಣಿಗಳಿಂದ ಬಂದಿರುತ್ತದೆ. 

ಆದ್ದರಿಂದ, ನಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಬಲವಾದ ನಿರ್ಣಯವನ್ನು ಬೆಳೆಸಿಕೊಂಡ ನಂತರ, ನಾವು ಆ ಮನೋಭಾವವನ್ನು ಇತರರಿಗೆ ವರ್ಗಾಯಿಸಬೇಕಾಗಿದೆ. ನಮ್ಮ ಸ್ವಂತ ಸಮಸ್ಯೆಗಳಿಂದ ಮುಕ್ತರಾಗುವ ನಿರ್ಣಯವು ನಮ್ಮಲ್ಲಿ ಇರುವಂತೆ, ಉಳಿದವರೆಲ್ಲರೂ ತಮ್ಮ ಸಮಸ್ಯೆಗಳಿಂದ ಮುಕ್ತರಾಗಬೇಕೆಂಬ ಆಶಯವನ್ನು ನಾವು ಹೊಂದಿರಬೇಕು. ಅಂತಹ ಮನೋಭಾವವನ್ನು "ಸಹಾನುಭೂತಿ" ಎಂದು ಕರೆಯಲಾಗುತ್ತದೆ. 

ನಾವು ನಮ್ಮ ಸ್ವಂತ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಯೋಚಿಸದಿದ್ದರೆ ಮತ್ತು ನಾವು ಅವುಗಳನ್ನು ಹೊಂದಲು ಬಯಸುವುದಿಲ್ಲ ಎಂಬುದರ ಬಗ್ಗೆ ಯೋಚಿಸದಿದ್ದರೆ - ಮತ್ತು ಅವುಗಳಿಂದ ಮುಕ್ತರಾಗುವ ನಿರ್ಣಯವನ್ನು ನಾವು ಬೆಳೆಸಿಕೊಳ್ಳದಿದ್ದರೆ - ಇತರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದು ಬಹಳಾ ಕಷ್ಟಕರವಾಗಿರುತ್ತದೆ. ಇತರರು ತಮ್ಮ ತೊಂದರೆಗಳಿಂದ ಮುಕ್ತರಾಗಬೇಕೆಂದು ಪ್ರಾಮಾಣಿಕವಾಗಿ ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಒಬ್ಬ ಅಧಿಕಾರಿಯು ತನ್ನ ವೃತ್ತಿಜೀವನದಲ್ಲಿ ಬಹಳ ಕಷ್ಟಪಟ್ಟ ನಂತರ ಉನ್ನತ ಸ್ಥಾನವನ್ನು ತಲುಪಿದರೆ, ಆ ವ್ಯಕ್ತಿಗೆ ಇತರರ ಸಮಸ್ಯೆಗಳ ಬಗ್ಗೆ ಸಹಾನುಭೂತಿ ಮತ್ತು ಕರುಣೆ ಇರುತ್ತದೆ. ತನ್ನ ಇಡೀ ಜೀವನವನ್ನು ಸುಲಭವಾಗಿ ಕಳೆದ ಅಧಿಕಾರಿಗಿಂತ, ದುಃಖವನ್ನು ಅನುಭವಿಸುವುದು ಎಂದರೆ ಏನೆಂದು ತಿಳಿದಿಲ್ಲದಿರುವವನಿಗಿಂತ, ಇಂತಹ ವ್ಯಕ್ತಿಯು, ಇತರರಿಗೆ ಉತ್ತಮವಾಗಿ ಸಹಾಯ ಮಾಡಲು ಅರ್ಹನಾಗಿರುತ್ತಾನೆ. 

ಬೋಧಿಚಿತ್ತಾ  

ಇತರರು ದುಃಖದಿಂದ ಮುಕ್ತರಾಗಬೇಕೆಂದು ನಾವು ಬಯಸುವ ಮನೋಭಾವವನ್ನು "ಸಹಾನುಭೂತಿ" ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರೂ ಸಂತೋಷವಾಗಿರಬೇಕೆಂದು ನಾವು ಬಯಸುವ ಮನೋಭಾವವನ್ನು "ಪ್ರೀತಿ"ಯೆಂದು ಕರೆಯಲಾಗುತ್ತದೆ. ಪ್ರತಿಯೊಬ್ಬರೂ ಸಂತೋಷದಿಂದ ಇರಬೇಕು ಮತ್ತು ಸಮಸ್ಯೆಗಳಿಂದ ಮುಕ್ತರಾಗಿರಬೇಕೆಂಬ ಬಯಕೆಯನ್ನು ನಾವು ಪರಿಗಣಿಸಿದರೆ, ಮತ್ತು ಪ್ರತಿಯೊಬ್ಬರೂ ನಮಗಾಗಿ ಬಹಳಾ ದಯೆ ತೋರಿರುವುದರಿಂದ ನಾವು ಅವರಿಗಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರೆ, ಮತ್ತು ಅದು ಕೇವಲ ಬಾಹ್ಯ ಮಟ್ಟದಲ್ಲದೆ, ಅವರ ಎಲ್ಲಾ ಸಮಸ್ಯೆಗಳಿಂದ ಮುಕ್ತಗೊಳಿಸಲು ಅವರಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸಿದರೆ - ಈ ಜವಾಬ್ದಾರಿಯನ್ನು "ಅಸಾಧಾರಣ ಸಂಕಲ್ಪ" ಎಂದು ಕರೆಯಲಾಗುತ್ತದೆ. 

ನಾವು ಕೇವಲ ನಮ್ಮ ಸ್ವಂತದ ಸ್ವಾರ್ಥದ ಕಾಳಜಿಯಲ್ಲಿ ಸಿಕ್ಕಿಹಾಕಿಕೊಂಡರೆ, ನಮಗೆ ಯಾವುದೇ ಸಾಕ್ಷಾತ್ಕಾರಗಳನ್ನು ಪಡೆಯಲು ಅಥವಾ ಬುದ್ಧನ ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸಲು ಯಾವುದೇ ಮಾರ್ಗವಿರುವುದಿಲ್ಲ. ಆದರೆ ನಾವು ಸ್ವಾರ್ಥದಿಂದ ದೂರವಿದ್ದರೆ ಮತ್ತು ಇತರರ ಕಷ್ಟದ ಬಗ್ಗೆ ಕಾಳಜಿ ವಹಿಸಿದರೆ, ನಾವೇ ಪ್ರಬುದ್ಧ ಬುದ್ಧರಾಗಲು ಇದು ಆಧಾರವಾಗಿರುತ್ತದೆ. ನಮಗಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಕೊಲೆ, ಕಳ್ಳತನ, ಮುಂತಾದವುಗಳಲ್ಲಿ ತೊಡಗಿಕೊಳ್ಳುವುದು ಸ್ವಾರ್ಥದ ಕಾಳಜಿಯಿಂದಾಗಿರುತ್ತದೆ. ಇಂತಹ ಕೌಶಲ್ಯವಿಲ್ಲದ ವಿಧಾನಗಳು ಹೆಚ್ಚಿನ ಸಮಸ್ಯೆಗಳನ್ನು ಮಾತ್ರ ತರುತ್ತವೆ ಮತ್ತು ಇವೆಲ್ಲದರ ಮೂಲವು ನಮ್ಮ ಸ್ವಾರ್ಥವಾಗಿರುತ್ತದೆ. 

ಕೇವಲ ಇತರರ ಕಲ್ಯಾಣದ ಬಗ್ಗೆ ಕಾಳಜಿ ವಹಿಸುವ ಪರಿಣಾಮವಾಗಿ, ಬುದ್ಧ ಶಾಕ್ಯಮುನಿಗೆ ತಮ್ಮ ಜ್ಞಾನೋದಯದ ಸ್ಥಿತಿಯನ್ನು ಸಾಧಿಸಲು, ಸಂಪೂರ್ಣವಾಗಿ ಸ್ಪಷ್ಟ ಮನಸ್ಸಿನವರಾಗಲು ಮತ್ತು ಸಂಪೂರ್ಣವಾಗಿ ವಿಕಸನಗೊಳ್ಳಲು ಸಾಧ್ಯವಾಯಿತು. ವಾಸ್ತವದಲ್ಲಿ, ಎಲ್ಲಾ ಕಾಲಗಳಲ್ಲಿಯೂ, ಎಲ್ಲಾ ಬುದ್ಧರು ಇತರರ ಬಗೆಗಿರುವ ತಮ್ಮ ಕಾಳಜಿಯ ಆಧಾರದ ಮೇಲೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಈ ಸ್ಥಿತಿಯನ್ನು ಸಾಧಿಸಿರುವರು. ಆದ್ದರಿಂದ, ನಾವು ವಾಸ್ತವಿಕವಾಗಿದ್ದರೆ, “ಎಲ್ಲರಿಗೂ ಸಂತೋಷವನ್ನು ತರಲು ಮತ್ತು ಅವರ ಎಲ್ಲಾ ಸಮಸ್ಯೆಗಳಿಂದ ಅವರನ್ನು ಮುಕ್ತಗೊಳಿಸುವ” ಅಸಾಧಾರಣ ಸಂಕಲ್ಪವನ್ನು ಹೊಂದಿದ್ದರೂ ಸಹ, ನಾವು ಅದನ್ನು ಎಷ್ಟೇ ಬಯಸಿದರೂ, ಅದನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಗಮನಿಸುತ್ತೇವೆ. ಪ್ರತಿಯೊಬ್ಬರಿಗೂ ತಮ್ಮ ಸಮಸ್ಯೆಗಳನ್ನು ನಿವಾರಿಸಿ ಮತ್ತು ಸಂತೋಷವಾಗಿರುವಂತೆ ಸಹಾಯ ಮಾಡುವ ಸಾಮರ್ಥ್ಯವು ಕೇವಲ ಬುದ್ಧರ ಬಳಿ ಇರುತ್ತದೆ.  

ಆದ್ದರಿಂದ, ಇತರರಿಗೆ ಪ್ರಯೋಜನಕಾರಿಯಾಗಿರಲು ಮತ್ತು ಬುದ್ಧನ ಜ್ಞಾನೋದಯದ ಸ್ಥಿತಿಯನ್ನು ಸಾಧಿಸಲು ಸಾಧ್ಯವಾದಷ್ಟು ಪರಿಶ್ರಮ ಪಡಲು, ನಮ್ಮ ಹೃದಯವನ್ನು ಸಂಪೂರ್ಣವಾಗಿ ಅರ್ಪಿಸುವುದು ಅವಶ್ಯಕವಾಗಿರುತ್ತದೆ. ಇದನ್ನು "ಬೋಧಿಚಿತ್ತ ಗುರಿ" ಎಂದು ಕರೆಯಲಾಗುತ್ತದೆ. 

ಅಂತಹ ಸಮರ್ಪಿತ ಹೃದಯವಾದ ಬೋಧಿಚಿತ್ತದ ಗುರಿಯೊಂದಿಗೆ, ನಾವು ಹೂವಿನಂತಹ ಸರಳವಾದ ಅರ್ಪಣೆಯನ್ನು ಮುಂದಿಡುತ್ತೇವೆ ಎಂದು ಭಾವಿಸೋಣ. ಅಂತಹ ಕೊಡುಗೆಯ ಉದ್ದೇಶವು, ಎಲ್ಲರಿಗೂ ಪ್ರಯೋಜನವಾಗಲಿ ಮತ್ತು ನಾವು ಸಾದ್ಯವಾದಷ್ಟು ಒಳ್ಳೆಯದನ್ನು ಮಾಡಲು ಜ್ಞಾನೋದಯವನ್ನು ಸಾಧಿಸುವಂತಿದ್ದರೆ, ಆಗ ಆ ಸರಳ ಕ್ರಿಯೆಯಿಂದ ನಿರ್ಮಿಸಲಾಗುವ ಸಕಾರಾತ್ಮಕ ಸಾಮರ್ಥ್ಯವು ಅಗಾಧವಾಗಿರುತ್ತದೆ. ವಾಸ್ತವದಲ್ಲಿ, ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗುವುದು ನಮ್ಮ ಗುರಿಯಾಗಿದ್ದರೆ, ಅದರ ಪ್ರಯೋಜನವು ಆ ಗುರಿಗೆ ಅನುಗುಣವಾಗಿರುತ್ತದೆ. ಇದು ಜೀವಿಗಳ ವಿಧದ ಸಂಖ್ಯೆಯಷ್ಟೇ ಅಗಾಧವಾಗಿರುತ್ತದೆ. ಈ ರೀತಿಯಲ್ಲಿ, ನಮ್ಮ ಹೃದಯವನ್ನು ಶುದ್ಧವಾಗಿ ಮತ್ತು ಪ್ರಾಮಾಣಿಕವಾಗಿ ಅರ್ಪಿಸುವುದರಿಂದ ಆಗುವ ಪ್ರಯೋಜನಗಳು, ಬುದ್ಧನಿಗೆ ಚಿನ್ನ-ರತ್ನಗಳಿಂದ ತುಂಬಿದ ಇಡೀ ಜಗತ್ತನ್ನು ಅರ್ಪಿಸುವ ಪ್ರಯೋಜನಗಳಿಗಿಂತ ಹೆಚ್ಚಾಗಿರುತ್ತದೆ. ನಾವು ಬ್ರಹ್ಮಾಂಡದ ಎಲ್ಲಾ ಜೀವಿಗಳಿಗೆ ಆಹಾರವನ್ನು ನೀಡಿದರೂ ಸಹ, ಅಂತಹ ಹೃದಯದಿಂದ, ಬೋಧಿಚಿತ್ತದ ಗುರಿಯೊಂದಿಗೆ ಕೇವಲ ಒಂದು ಕ್ಷಣವನ್ನು ಸಮರ್ಪಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಇರುತ್ತವೆ. 

ವಿಶ್ವದಲ್ಲಿರುವ ಪ್ರತಿಯೊಬ್ಬರಿಗೆ ಒಂದು ಊಟವನ್ನು ನೀಡಿದರೆ ಅದು ಕೇವಲ ಒಂದು ಅವಧಿಯ ಹಸಿವನ್ನು ನೀಗಿಸುತ್ತದೆ ಎಂಬುದನ್ನು ನಾವು ಪರಿಗಣಿಸಿದರೆ, ನಾವು ಇದರ ತರ್ಕವನ್ನು ಸ್ಥಾಪಿಸಬಹುದು. ಅವರು ಶೀಘ್ರದಲ್ಲೇ ಮತ್ತೆ ಹಸಿವನ್ನು ಅನುಭವಿಸುವರು ಮತ್ತು ಅವರ ಹಸಿವಿನ ಸಮಸ್ಯೆಯು ಮುಂದುವರಿಯುತ್ತದೆ. ಆದರೆ ನಾವು ಬೋಧಿಚಿತ್ತದ ಗುರಿಯೊಂದಿಗೆ, ಎಲ್ಲರನ್ನೂ ಎಲ್ಲಾ ರೀತಿಯ ಸಮಸ್ಯೆಗಳಿಂದ ಶಾಶ್ವತವಾಗಿ ನಿವಾರಿಸಲು ಬಯಸಿದರೆ ಮತ್ತು ಸಾಧ್ಯವಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವ ಸಲುವಾಗಿ ನಾವು ಜ್ಞಾನೋದಯವನ್ನು ಸಾಧಿಸಲು ನಮ್ಮನ್ನು ಅರ್ಪಿಸಿಕೊಂಡರೆ, ಇದು ಪ್ರತಿಯೊಬ್ಬರ ಹಸಿವನ್ನು ನಿವಾರಿಸುವುದಲ್ಲದೆ, ಅವರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಸಾಮರ್ಥ್ಯವನ್ನು ಕರೆತರುತ್ತದೆ. 

ಮುಕ್ತಾಯದ ಅಭಿಪ್ರಾಯಗಳು

ಆದ್ದರಿಂದ, ಬೋಧಿಚಿತ್ತ ಗುರಿಯನ್ನು ಅಭಿವೃದ್ಧಿಪಡಿಸುವ ಒಂದು ಹೆಜ್ಜೆಯಾಗಿ, ನಾವು ಯಾವುದೇ ಜೀವಿಗಳಿಗೆ ಹಾನಿಯುಂಟುಮಾಡುವುದಿಲ್ಲ ಎಂಬ ಬಲವಾದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ಯಾರೇ ಆಗಿರಲಿ, ಅವರನ್ನು ನೋಯಿಸುವುದರಲ್ಲಿ ಇರುವ ಎಲ್ಲಾ ಅನಾನುಕೂಲಗಳು ಮತ್ತು ನ್ಯೂನತೆಗಳನ್ನು ನಾವು ನೋಡಿದಾಗ ಮತ್ತು ಹಾಗೆ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದಾಗ, ಇದು ಹೆಚ್ಚಿನ ಪ್ರಯೋಜನಗಳನ್ನು ತರುತ್ತದೆ. ತತ್ಪರಿಣಾಮವಾಗಿ, ಇದು ಅತ್ಯಂತ ಪ್ರಶಂಸಾರ್ಹವಾದ ನಡವಳಿಕೆಯ ಪ್ರಕಾರವಾಗಿರುತ್ತದೆ. ನಾವು ಯಾರಿಗೂ ನೋವುಂಟುಮಾಡುವುದಿಲ್ಲ ಅಥವಾ ಹಾನಿಯನ್ನುಂಟುಮಾಡುವುದಿಲ್ಲ ಎಂಬ ಬಲವಾದ ಪ್ರತಿಜ್ಞೆಯು ನಾವೆಲ್ಲರೂ ಪ್ರಸ್ತುತವಾಗಿ ತೆಗೆದುಕೊಳ್ಳಬಹುದಾದ ಆಧ್ಯಾತ್ಮಿಕ ಕ್ರಮವಾಗಿದೆ. ನಾವು ಆಧ್ಯಾತ್ಮಿಕ ಅಭ್ಯಾಸವನ್ನು ಬಹಳ ಉನ್ನತವಾದ ಮತ್ತು ದೂರದ ವಿಷಯವೆಂದು ಪರಿಗಣಿಸುವ ಅಗತ್ಯವಿಲ್ಲ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ಆಧ್ಯಾತ್ಮಿಕ ಸಾಧಕನಾಗಲು ಒಂದು ರೀತಿಯ ವಿಲಕ್ಷಣವಾದ ಜೀವನವನ್ನು ನಡೆಸಬೇಕಾಗಿಲ್ಲ. ಇತಿಹಾಸದಲ್ಲಿ, ಮಹಾನ್ ಆಧ್ಯಾತ್ಮಿಕ ಸಾಧಕರು, ಗೃಹಸ್ಥರಾದ ಬಗ್ಗೆ ಅನೇಕ ಖಾತೆಗಳಿವೆ. ಪ್ರಾಚೀನ ಭಾರತದ ಎಂಭತ್ನಾಲ್ಕು ಮಹಾಸಿದ್ಧರ ಜೀವನಚರಿತ್ರೆಗಳನ್ನು ನಾವು ನೋಡಿದಾಗ, ಅವರಲ್ಲಿ ಅನೇಕರು ಗೃಹಸ್ಥರಾಗಿರುವುದನ್ನು ನಾವು ಕಾಣಬಹುದು.  

ನಾವು ವಯಸ್ಸಾದವರಾಗಿದ್ದರೆ, ಹತಾಶರಾಗುವ ಅಗತ್ಯವಿಲ್ಲ ಅಥವಾ ವಯಸ್ಸಾದ ಜನರು ಆಧ್ಯಾತ್ಮಿಕ ಸಾಧಕರಾಗಲು ಸಾಧ್ಯವಿಲ್ಲ ಎಂದು ಭಾವಿಸುವ ಅಗತ್ಯವಿಲ್ಲ. ಹಿಂದಿನ ಕಾಲದ ಉದಾಹರಣೆಗಳನ್ನು ನೋಡುವುದಾದರೆ, ಗೃಹಸ್ಥರಾದ ಶ್ರೀಜತಿಯವರು, 80ರ ವಯಸ್ಸಿನಲ್ಲಿ ಆಧ್ಯಾತ್ಮಿಕ ಸಾಧಕರಾದ ಉದಾಹರಣೆ ಇದೆ. ಅವರು ತಮ್ಮ ಜೀವಿತಾವಧಿಯಲ್ಲಿ ವಿಮೋಚನೆಗೊಂಡ ಜೀವಿ ಅಥವಾ ಅರ್ಹತ್ ಸ್ಥಿತಿಯನ್ನು ಸಾಧಿಸಲು ಸಾಧ್ಯವಾಯಿತು. ಆದ್ದರಿಂದ, ನಮಗೆ ತೀರಾ ವಯಸ್ಸಾಗಿದೆ ಎಂದು ಯಾವತ್ತೂ ಭಾವಿಸಬಾರದು. 

ಮತ್ತೊಂದೆಡೆ, ನಾವು ಹದಿಹರೆಯದವರಾಗಿದ್ದರೆ, ನಾವು ನಿಷ್ಪ್ರಯೋಜಕರಾಗಿರಬಾರದು, ಬದಲಿಗೆ ನಮ್ಮ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ನಿರ್ಣಾಯಕವಾಗಲು ಸಹಾಯಮಾಡುವ, ನಮ್ಮ ಬಳಿಯಿರುವ ಎಲ್ಲಾ ಶಕ್ತಿಗಳ ಲಾಭವನ್ನು ಪಡೆದುಕೊಳ್ಳಬೇಕು. ಮತ್ತು ನಮಗೆ ವಯಸ್ಸಾಗುವ ತನಕ ಈ ತಡೆಗಟ್ಟುವ ಆಧ್ಯಾತ್ಮಿಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದೂಡಬಹುದು ಎಂದು ನಾವು ಯೋಚಿಸಬಾರದು, ಏಕೆಂದರೆ ಸಾವು ಯಾವಾಗ ಸಂಭವಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಯಾವುದೇ ಮಾರ್ಗವಿಲ್ಲ. ಇದಲ್ಲದೆ, ವೃದ್ಧಾಪ್ಯವು ಒಮ್ಮೆಲೆ ಬರುವಂತೆ ತೋರುತ್ತದೆ. ಅದು ಬಂದಾಗ, ಇದ್ದಕ್ಕಿದ್ದಂತೆ, ನಮ್ಮ ಜೀವನವು ನಮ್ಮ ಕೈಜಾರಿದಂತೆ ಭಾಸವಾಗುತ್ತದೆ. 

ನಾವು ಮಾಡಬಹುದಾದ ಅನೇಕ ಸರಳವಾದ ಸಕಾರಾತ್ಮಕ ಕಾರ್ಯಗಳಿವೆ. ಇತರ ದೇಶಗಳಲ್ಲಿ, ಪಕ್ಷಿಗಳ ಆಹಾರಕ್ಕಾಗಿ ಹೆಚ್ಚಿನ ಶ್ರಮ ಮತ್ತು ಹಣವನ್ನು ಖರ್ಚು ಮಾಡುವ ಕೆಲವು ಜನರ ಬಗ್ಗೆ ನನಗೆ ತಿಳಿದಿದೆ. ಅವರು ತಮ್ಮ ಮನೆಯ ಹೊರಗೆ ಫೀಡರ್‌ಗಳನ್ನು ಹೊಂದಿರುತ್ತಾರೆ ಮತ್ತು ಪ್ರತಿದಿನ ಆಹಾರವನ್ನು ಹಾಕಲು ಸಾವಿರಾರು ಖರ್ಚು ಮಾಡುತ್ತಾರೆ. ಇಷ್ಟೇ ಅಲ್ಲ, ಅವರು ಪಕ್ಷಿಗಳಿಗೆ ಆಹಾರವನ್ನು ನೀಡುವುದನ್ನು ನಿಲ್ಲಿಸದೇ ಇರಲು, ತಮ್ಮ ರಜಾದಿನಗಳನ್ನು ಬಿಟ್ಟುಕೊಡುತ್ತಾರೆ. ಇದೊಂದು ಅತ್ಯುತ್ತಮವಾದ ಅಭ್ಯಾಸವಾಗಿದೆ; ಇದನ್ನು ನೋಡಲು ನನಗೆ ಸಂತೋಷವಾಗುತ್ತದೆ, ಏಕೆಂದರೆ ಇದು ನಿಜವಾಗಿಯೂ ಬೋಧಿಸತ್ವದ ಅಭ್ಯಾಸದ ಪ್ರಕಾರವಾಗಿದೆ. ಟಿಬೆಟಿಯನ್ನರು ಮತ್ತು ಯಾತ್ರಿಕರಾಗಿ ಭಾರತಕ್ಕೆ ಬಂದವರು, ಪಾರಿವಾಳಗಳಿಗೆ ಮತ್ತು ವಿವಿಧ ರೀತಿಯ ಪಕ್ಷಿಗಳಿಗೆ ಬ್ರೆಡ್ ಮತ್ತು ಅಕ್ಕಿ ಹಾಕಿದ ಅನೇಕ ಉದಾಹರಣೆಗಳಿವೆ. ದೀರ್ಘಾಯುಷ್ಯವನ್ನು ಕರೆತರಲು ಇದೊಂದು ಅತ್ಯುತ್ತಮವಾದ ಅಭ್ಯಾಸವಾಗಿದೆ.

ಸಾರಾಂಶ 

ನಾವು ನಮ್ಮ ಚರ್ಚೆಯನ್ನು ಸಂಕ್ಷಿಪ್ತಗೊಳಿಸಲು ಬಯಸಿದರೆ, ಇವು ಮುಖ್ಯ ಅಂಶಗಳಾಗಿವೆ: 

  • ಪ್ರತಿಯೊಬ್ಬರ ಪ್ರಯೋಜನಕ್ಕಾಗಿ, ನಿರಂತರವಾಗಿ ಕೆಲಸ ಮಾಡಲು, ಒಂದು ರೀತಿಯ ಸಹೃದಯತೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ. 
  • ಯಾರನ್ನೂ ಅಥವಾ ಯಾವುದನ್ನೂ ನೋಯಿಸಬೇಡಿ; ಎಂದಿಗೂ ಹಾನಿ ಅಥವಾ ಸಮಸ್ಯೆಗಳನ್ನು ಉಂಟುಮಾಡಬೇಡಿ.  

ಇವು, ಅತ್ಯುತ್ತಮ ಆಧ್ಯಾತ್ಮಿಕ ಅಭ್ಯಾಸಕ್ಕಾಗಿ ಇರುವ ಮುಖ್ಯ ಅಂಶಗಳಾಗಿವೆ. ನಮ್ಮ ಅತ್ಯುತ್ತಮವಾದ ಮಾನವ ಪುನರ್ಜನ್ಮದಲ್ಲಿ, ನಾವು ಹೊಂದಿರುವ ಈ ಆಧಾರದ ಸಂಪೂರ್ಣ ಪ್ರಯೋಜನವನ್ನು ನಾವು ಪಡೆಯಬೇಕಾಗಿದೆ, ನಮ್ಮ ಹೃದಯವನ್ನು ಸಂಪೂರ್ಣವಾಗಿ, ಬೋಧಿಚಿತ್ತದ ಗುರಿಯೊಂದಿಗೆ, ಇತರರಿಗೆ ಮತ್ತು ಜ್ಞಾನೋದಯವನ್ನು ಸಾಧಿಸಲು ಅರ್ಪಿಸಬೇಕಾಗಿದೆ. ಈ ರೀತಿಯಾಗಿ, ನಾವು ಸಂಪೂರ್ಣವಾಗಿ ಸ್ಪಷ್ಟವಾದ ಮತ್ತು ಸಂಪೂರ್ಣವಾಗಿ ವಿಕಸನಗೊಂಡಿರುವ ಮನಸ್ಥಿತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ - ಇದೇ ಸಂಪೂರ್ಣವಾಗಿ ಪ್ರಬುದ್ಧರಾದ ಬುದ್ಧ ಸ್ಥಿತಿಯಾಗಿರುತ್ತದೆ. 

Top