ಗೊಂದಲಮಯ ಭಾವನೆ ಎಂದರೇನು?

10:16
ನಮ್ಮ ಮನಸ್ಸುಗಳು ಕೋಪ, ಮೋಹ, ಸ್ವಾರ್ಥ ಅಥವಾ ದುರಾಸೆಯಿಂದ ಗೊಂದಲಗೊಳಗಾದಾಗ, ನಮ್ಮ ಶಕ್ತಿಗಳು ಸಹ ಗೊಂದಲಗೊಳಗಾಗುತ್ತವೆ. ನಾವು ಅಶಾಂತಿಯನ್ನು ಅನುಭವಿಸುತ್ತೇವೆ; ನಮ್ಮ ಮನಸ್ಸುಗಳು ಶಾಂತವಾಗಿರುವುದಿಲ್ಲ; ನಮ್ಮ ಆಲೋಚನೆಗಳು ಹುಚ್ಚುಚ್ಚಾಗಿ ಓಡುತ್ತವೆ. ನಾವು ನಂತರ ವಿಷಾದಿಸುವ ವಿಷಯಗಳನ್ನು ಹೇಳುತ್ತೇವೆ ಮತ್ತು ಮಾಡುತ್ತೇವೆ. ನಮ್ಮ ಮನಸ್ಸು ಮತ್ತು ಶಕ್ತಿಗಳಲ್ಲಿ ಹಠಾತ್ ಗೊಂದಲವನ್ನು ನಾವು ಗಮನಿಸಿದರೆ, ಅದು ಯಾವುದಾದರೂ ಗೊಂದಲಮಯ ಭಾವನೆಯ ಕೆಲಸ ಎಂದು ನಾವು ಖಚಿತವಾಗಿ ಹೇಳಬಹುದು. ಅದು ಕಾಣಿಸಿಕೊಂಡ ತಕ್ಷಣವೇ ಅದನ್ನು ಹಿಡಿದು, ಪ್ರೀತಿ ಮತ್ತು ಸಹಾನುಭೂತಿಯಂತಹ ವಿರೋಧಿ ಮಾನಸಿಕ ಸ್ಥಿತಿಯನ್ನು ಅನ್ವಯಿಸುವುದರಿಂದ, ನಾವು ಗೊಂದಲಮಯ ಭಾವನೆಗೆ ಬಲಿಯಾಗಿ ಅದನ್ನು ಕಾರ್ಯಗತಗೊಳಿಸುವ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುವುದನ್ನು ತಪ್ಪಿಸಬಹುದು.

ಗೊಂದಲಮಯ ಭಾವನೆಎಂದರೇನು

ಗೊಂದಲಮಯ ಭಾವನೆಯನ್ನು ನಾವು ಬೆಳೆಸಿಕೊಂಡಾಗ, ನಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವಂತೆ ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುವ ಮನಸ್ಸಿನ ಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ. 

ನಾವು ನಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವುದರಿಂದ, ಅದು ತೊಂದರೆದಾಯಕವಾಗಿದೆ; ಅದು ನಮ್ಮ ಮನಸ್ಸಿನ ಶಾಂತಿಯನ್ನು ಭಂಗಗೊಳಿಸುತ್ತದೆ. ನಾವು ನಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಂಡಾಗ ತೊಂದರೆಗೊಳಗಾಗುವುದರಿಂದ, ನಮ್ಮ ಆಲೋಚನೆಯಲ್ಲಿ ಅಥವಾ ನಮ್ಮ ಭಾವನೆಗಳಲ್ಲಿ ನಾವು ನಿಜವಾಗಿಯೂ ಸ್ಪಷ್ಟವಾಗಿರುವುದಿಲ್ಲ. ಆ ಸ್ಪಷ್ಟತೆಯ ಕೊರತೆಯಿಂದಾಗಿ, ಸ್ವಯಂ ನಿಯಂತ್ರಣವನ್ನು ಹೊಂದಲು ಅಗತ್ಯವಾದ ವಿವೇಚನಾತ್ಮಕ ಪ್ರಜ್ಞೆಯನ್ನು ನಾವು ಕಳೆದುಕೊಳ್ಳುತ್ತೇವೆ. ಯಾವುದು ಸಹಾಯಕವಾಗಿದೆ ಮತ್ತು ಯಾವುದು ಸಹಾಯಕವಾಗಿಲ್ಲ ಎಂಬುದರ ನಡುವಿನ ವ್ಯತ್ಯಾಸವನ್ನು ವಿವೇಚಿಸಲು ನಮಗೆ ಸಾದ್ಯವಾಗಬೇಕು; ನಿರ್ದಿಷ್ಟ ಸಂದರ್ಭಗಳಲ್ಲಿ ಯಾವುದು ಸೂಕ್ತ ಮತ್ತು ಯಾವುದು ಸೂಕ್ತವಲ್ಲ ಎಂಬುದನ್ನು ವಿವೇಚಿಸಲು ಸಾಧ್ಯವಾಗಬೇಕು. 

ಗೊಂದಲಮಯ ಭಾವನೆಗಳು ರಚನಾತ್ಮಕ ಮನಸ್ಥಿತಿಗಳೊಂದಿಗೆ ಸಹ ಬರಬಹುದು 

ಗೊಂದಲಮಯ ಭಾವನೆಗಳ ಉದಾಹರಣೆಗಳೆಂದರೆ, ಬಾಂಧವ್ಯ ಅಥವಾ ಹಂಬಲದ ಬಯಕೆ, ಕೋಪ, ಅಸೂಯೆ, ಹೆಮ್ಮೆ, ದುರಹಂಕಾರ, ಇತ್ಯಾದಿ. ಈ ತೊಂದರೆಗೊಳಿಸುವ ಭಾವನೆಗಳಲ್ಲಿ ಕೆಲವು ನಮ್ಮನ್ನು ವಿನಾಶಕಾರಿಯಾಗಿ ವರ್ತಿಸುವಂತೆ ಮಾಡಬಹುದು, ಆದರೆ ಅವು ಯಾವಾಗಲೂ ಅಗತ್ಯವಾಗಿ ಹಾಗಿರುವುದಿಲ್ಲ. ಉದಾಹರಣೆಗೆ, ಬಾಂಧವ್ಯ ಮತ್ತು ಹಂಬಲದ ಬಯಕೆಯು ನಮ್ಮನ್ನು ವಿನಾಶಕಾರಿಯಾಗಿ ವರ್ತಿಸುವಂತೆ ಮಾಡಬಹುದು - ಉದಾಹರಣೆಗೆ ಹೊರಗೆ ಹೋಗಿ ಏನನ್ನಾದರೂ ಕದಿಯುವಂತೆ. ಆದರೆ ನಾವು ಪ್ರೀತಿಸಲ್ಪಡಬೇಕೆಂಬ ಹಂಬಲವನ್ನು ಹೊಂದಿರಬಹುದು ಮತ್ತು ನಾವು ಅದಕ್ಕೆ ಅಂಟಿಕೊಂಡಿದ್ದೇವೆ ಆದ್ದರಿಂದ ನಾವು ಇತರರಿಂದ ಪ್ರೀತಿಸಲ್ಪಡಲು ಅವರಿಗೆ ಸಹಾಯ ಮಾಡುತ್ತೇವೆ. ಇತರರಿಗೆ ಸಹಾಯ ಮಾಡುವುದು ವಿನಾಶಕಾರಿಯಲ್ಲ; ಅದು ರಚನಾತ್ಮಕವಾದ ವಿಷಯ, ಆದರೆ ಅದರ ಹಿಂದೆ ಒಂದು ಗೊಂದಲದ ಭಾವನೆ ಇದೆ: "ನಾನು ಪ್ರೀತಿಸಲ್ಪಡಲು ಬಯಸುತ್ತೇನೆ, ಆದ್ದರಿಂದ ಪ್ರತಿಯಾಗಿ ನನ್ನನ್ನು ಪ್ರೀತಿಸುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ." 

ಅಥವಾ ಕೋಪದ ಪ್ರಕರಣವನ್ನು ಪರಿಗಣಿಸಿ. ಕೋಪವು ನಮ್ಮನ್ನು ವಿನಾಶಕಾರಿಯಾಗಿ ವರ್ತಿಸಲು, ಹೊರಗೆ ಹೋಗಿ ಯಾರನ್ನಾದರೂ ನೋಯಿಸಲು ಅಥವಾ ಅವರನ್ನು ಕೊಲ್ಲಲು ಕಾರಣವಾಗಬಹುದು, ಏಕೆಂದರೆ ನಾವು ತುಂಬಾ ಕೋಪಗೊಂಡಿರುತ್ತೇವೆ. ಆದ್ದರಿಂದ, ಅದು ವಿನಾಶಕಾರಿ ನಡವಳಿಕೆ. ಆದರೆ, ನಾವು ಒಂದು ನಿರ್ದಿಷ್ಟ ವ್ಯವಸ್ಥೆಯ ಅನ್ಯಾಯ ಅಥವಾ ಒಂದು ನಿರ್ದಿಷ್ಟ ಸನ್ನಿವೇಶದ ಬಗ್ಗೆ ಕೋಪಗೊಂಡಿದ್ದೇವೆ ಎಂದು ಹೇಳೋಣ - ಮತ್ತು ನಾವು ಅದರ ಮೇಲೆ ತುಂಬಾ ಕೋಪಗೊಂಡಿದ್ದರಿಂದ, ಅದನ್ನು ಬದಲಾಯಿಸಲು ನಾವು ನಿಜವಾಗಿಯೂ ಏನನ್ನಾದರೂ ಮಾಡುತ್ತೇವೆ. ಅದು ನಾವು ಮಾಡುವ ಹಿಂಸಾತ್ಮಕ ವಿಷಯವಾಗಿರಬೇಕಾಗಿಲ್ಲ. ಆದರೆ ಇಲ್ಲಿ ರಚನಾತ್ಮಕ ಅಥವಾ ಸಕಾರಾತ್ಮಕವಾದದ್ದನ್ನು ಮಾಡುವುದು ಸಹ ಗೊಂದಲಮಯ ಭಾವನೆಯಿಂದ ಪ್ರೇರೇಪಿಸಲ್ಪಟ್ಟಿದೆ. ನಮಗೆ ಮನಸ್ಸಿನ ಶಾಂತಿ ಇರುವುದಿಲ್ಲ ಮತ್ತು ನಮಗೆ ಮನಸ್ಸಿನ ಶಾಂತಿ ಇಲ್ಲದ ಕಾರಣ, ನಾವು ಆ ಸಕಾರಾತ್ಮಕ ಕ್ರಿಯೆಯನ್ನು ಮಾಡುವಾಗ, ನಮ್ಮ ಮನಸ್ಸು ಮತ್ತು ಭಾವನೆಗಳು ಸ್ಪಷ್ಟವಾಗಿರುವುದಿಲ್ಲ ಮತ್ತು ನಮ್ಮ ಭಾವನಾತ್ಮಕ ಸ್ಥಿತಿ ತುಂಬಾ ಸ್ಥಿರವಾಗಿರುವುದಿಲ್ಲ. 

ಈ ಸಂದರ್ಭಗಳಲ್ಲಿ, ಹಂಬಲದ ಬಯಕೆ ಅಥವಾ ಕೋಪದೊಂದಿಗೆ, ನಾವು ಇತರ ವ್ಯಕ್ತಿಯು ನಮ್ಮನ್ನು ಪ್ರೀತಿಸಬೇಕೆಂದು ಬಯಸುತ್ತೇವೆ ಅಥವಾ ಅನ್ಯಾಯವು ಕೊನೆಗೊಳ್ಳಬೇಕೆಂದು ಬಯಸುತ್ತೇವೆ. ಅವು ಸ್ಥಿರವಾದ ಮನಸ್ಸಿನ ಸ್ಥಿತಿಗಳು ಅಥವಾ ಸ್ಥಿರವಾದ ಭಾವನಾತ್ಮಕ ಸ್ಥಿತಿಗಳಲ್ಲ. ಅವು ಸ್ಪಷ್ಟವಾದ ಮನಸ್ಸಿನ ಸ್ಥಿತಿಗಳು ಅಥವಾ ಸ್ಪಷ್ಟವಾದ ಭಾವನಾತ್ಮಕ ಸ್ಥಿತಿಗಳಲ್ಲದ ಕಾರಣ, ನಾವು ಏನು ಮಾಡಬೇಕು ಮತ್ತು ನಮ್ಮ ಉದ್ದೇಶವನ್ನು ಹೇಗೆ ಪೂರೈಸಬೇಕು ಎಂಬುದರ ಕುರಿತು ನಾವು ಸ್ಪಷ್ಟವಾಗಿ ಯೋಚಿಸುತ್ತಿಲ್ಲ. ಪರಿಣಾಮವಾಗಿ, ನಮಗೆ ಸ್ವಯಂ ನಿಯಂತ್ರಣವಿಲ್ಲ. ಉದಾಹರಣೆಗೆ, ನಾವು ಯಾರಿಗಾದರೂ ಏನನ್ನಾದರೂ ಮಾಡಲು ಸಹಾಯ ಮಾಡಲು ಪ್ರಯತ್ನಿಸಬಹುದು, ಆದರೆ ಸಹಾಯ ಮಾಡುವ ಉತ್ತಮ ಮಾರ್ಗವೆಂದರೆ ಅದನ್ನು ಮಾಡಲು ಅವರಿಗೇ ಬಿಡುವುದಾಗಿರುತ್ತದೆ. ನಮಗೆ ವಯಸ್ಕ ಮಗಳಿದ್ದರೆ ಮತ್ತು ನಾವು ಅವಳಿಗೆ ಅಡುಗೆ ಮಾಡಲು ಅಥವಾ ಮನೆಯನ್ನು ನೋಡಿಕೊಳ್ಳಲು ಅಥವಾ ಮಕ್ಕಳನ್ನು ನೋಡಿಕೊಳ್ಳಲು ಸಹಾಯ ಮಾಡಲು ಬಯಸಿದರೆ, ಅದು ಹಲವು ವಿಧಗಳಲ್ಲಿ ಅಡ್ಡಿಪಡಿಸುತ್ತದೆ ಎಂದು ಹೇಳೋಣ. ನಮ್ಮ ಮಗಳು ಅಡುಗೆ ಮಾಡುವುದು ಅಥವಾ ತನ್ನ ಮಕ್ಕಳನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆಯ ಪಾಠಗಳನ್ನು ನಿಜವಾಗಿಯೂ ಪ್ರಶಂಸಿಸದಿರಬಹುದು. ಆದರೆ ನಾವು ಪ್ರೀತಿಸಲ್ಪಡಲು ಬಯಸುತ್ತೇವೆ ಮತ್ತು ನಾವು ಉಪಯುಕ್ತರಾಗಿರಲು ಬಯಸುತ್ತೇವೆ, ಆದ್ದರಿಂದ ನಾವು ಅವಳ ಮೇಲೆ ಮುಗಿಬೀಳುತ್ತೇವೆ. ನಾವು ರಚನಾತ್ಮಕವಾದದ್ದನ್ನು ಮಾಡುತ್ತಿದ್ದೇವೆ, ಆದರೆ ಹಾಗೆ ಮಾಡುವಾಗ, "ನನ್ನ ಬಾಯಿ ಮುಚ್ಚಿಟ್ಟುಕೊಳ್ಳುವುದು ಮತ್ತು ನನ್ನ ಅಭಿಪ್ರಾಯವನ್ನು ನೀಡದಿರುವುದು ಮತ್ತು ನನ್ನ ಸಹಾಯವನ್ನು ನೀಡದಿರುವುದು ಉತ್ತಮ" ಎಂದು ಯೋಚಿಸಲು ಕಾರಣವಾಗುತ್ತಿದ್ದ ಸ್ವಯಂ ನಿಯಂತ್ರಣವನ್ನು ನಾವು ಕಳೆದುಕೊಂಡಿದ್ದೇವೆ. 

ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡಲು ಸೂಕ್ತವಾದ ಪರಿಸ್ಥಿತಿಯಲ್ಲಿ ನಾವು ಸಹಾಯ ಮಾಡಿದರೂ ಸಹ, ನಾವು ಅದರ ಬಗ್ಗೆ ನಿರಾಳವಾಗಿರುವುದಿಲ್ಲ, ಏಕೆಂದರೆ ನಾವು ಪ್ರತಿಯಾಗಿ ಏನನ್ನಾದರೂ ನಿರೀಕ್ಷಿಸುತ್ತಿರಬಹುದು. ನಾವು ಪ್ರೀತಿಸಲ್ಪಡಬೇಕೆಂದು ಬಯಸುತ್ತೇವೆ; ನಮಗೆ ಅಗತ್ಯವಿರುವುದನ್ನು ಬಯಸುತ್ತೇವೆ; ನಮಗೆ ಮೆಚ್ಚುಗೆಯನ್ನು ಬಯಸುತ್ತೇವೆ. ನಮ್ಮ ಮನಸ್ಸಿನಲ್ಲಿ ಈ ರೀತಿಯ ಹಂಬಲದ ಬಯಕೆಯ ಸ್ಥಿತಿಯಿದ್ದರೆ, ನಮ್ಮ ಮಗಳು ನಾವು ಬಯಸಿದ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದರೆ, ನಾವು ತುಂಬಾ ಅಸಮಾಧಾನಗೊಳ್ಳುತ್ತೇವೆ. 

ಅನ್ಯಾಯದ ವಿರುದ್ಧ ಹೋರಾಡಲು ಹೋದಾಗ ನಾವು ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವಂತೆ ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುವ ಈ ಗೊಂದಲಮಯ ಭಾವನೆಗಳ ಕಾರ್ಯವಿಧಾನವು ಇನ್ನಷ್ಟು ಸ್ಪಷ್ಟವಾಗುತ್ತದೆ. ಅದರ ಬಗ್ಗೆ ನಿಜವಾಗಿಯೂ ಸಿಟ್ಟಾಗಿದ್ದೇವೆ, ನಾವು ನಿಜವಾಗಿಯೂ ಅಸಮಾಧಾನಗೊಂಡಿದ್ದೇವೆ. ನಾವು ಅಸಮಾಧಾನಗೊಂಡಿದ್ದೇವೆ ಎಂಬ ಆಧಾರದ ಮೇಲೆ ವರ್ತಿಸಿದರೆ, ಸಾಮಾನ್ಯವಾಗಿ ನಾವು ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟವಾಗಿ ಯೋಚಿಸುವುದಿಲ್ಲ. ನಾವು ಬಯಸುವ ಬದಲಾವಣೆಯನ್ನು ತರಲು ನಾವು ಉತ್ತಮ ಕ್ರಮವನ್ನು ಅನುಸರಿಸುವುದಿಲ್ಲ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ವಿನಾಶಕಾರಿ ರೀತಿಯಲ್ಲಿ ವರ್ತಿಸಲಿ ಅಥವಾ ರಚನಾತ್ಮಕವಾಗಿ ಏನನ್ನಾದರೂ ಮಾಡಲಿ, ನಾವು ಮಾಡುವ ಕೆಲಸವು ಗೊಂದಲಮಯ ಭಾವನೆಗಳಿಂದ ಪ್ರೇರೇಪಿಸಲ್ಪಟ್ಟಿದ್ದರೆ ಮತ್ತು ಅದರೊಂದಿಗೆ ಇದ್ದರೆ, ನಮ್ಮ ನಡವಳಿಕೆಯು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಇತರ ಜನರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ನಿಖರವಾಗಿ ಊಹಿಸಲು ಸಾಧ್ಯವಾಗದಿದ್ದರೂ, ಅದು ಪ್ರಾಥಮಿಕವಾಗಿ ನಮಗೇ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಗಳು ತಕ್ಷಣವೇ ಸಂಭವಿಸುವ ವಿಷಯಗಳಲ್ಲ; ಅವುಗಳು ದೀರ್ಘಕಾಲೀನ ಸಮಸ್ಯೆಗಳು ಅಂದರೆ ತೊಂದರೆಗೊಳಗಾದ ಭಾವನೆಗಳ ಪ್ರಭಾವದಡಿಯಲ್ಲಿ ವರ್ತಿಸುವುದು ಪದೇ ಪದೇ ಪುನರಾವರ್ತಿಸುವ ಅಭ್ಯಾಸಗಳನ್ನು ಬೆಳೆಸುತ್ತದೆ, ಗೊಂದಲಮಯ ರೀತಿಯಲ್ಲಿ ವರ್ತಿಸುತ್ತದೆ. ಈ ರೀತಿಯಾಗಿ, ಗೊಂದಲಮಯ ಭಾವನೆಗಳನ್ನು ಆಧರಿಸಿದ ನಮ್ಮ ಪ್ರಚೋದಿತ ನಡವಳಿಕೆಯು ದೀರ್ಘಾವಧಿಯ ಸಮಸ್ಯಾತ್ಮಕ ನಡವಳಿಕೆಯ ವಿಧಾನಗಳನ್ನು ನಿರ್ಮಿಸುತ್ತದೆ. ನಮಗೆ ಎಂದಿಗೂ ಮನಸ್ಸಿನ ಶಾಂತಿ ಇರುವುದಿಲ್ಲ. 

ಇದರ ಸ್ಪಷ್ಟ ಉದಾಹರಣೆಯೆಂದರೆ, ನಾವು ಪ್ರೀತಿಸಲ್ಪಟ್ಟಿದ್ದೇವೆ ಮತ್ತು ಮೆಚ್ಚುಗೆ ಪಡೆದಿದ್ದೇವೆ ಎಂದು ಭಾವಿಸಲು ಬಯಸುವುದರಿಂದ ಇತರರಿಗೆ ಸಹಾಯಕವಾಗಲು ಮತ್ತು ಒಳ್ಳೆಯದನ್ನು ಮಾಡಲು ಪ್ರೇರೇಪಿಸಲ್ಪಡುವುದು. ಇದರ ಹಿಂದೆ, ನಾವು ಮೂಲಭೂತವಾಗಿ ಅಸುರಕ್ಷಿತರಾಗಿದ್ದೇವೆ. ಆದರೆ ನಾವು ಈ ರೀತಿಯ ಪ್ರೇರಣೆಯೊಂದಿಗೆ ವರ್ತಿಸುವುದನ್ನು ಮುಂದುವರಿಸಿದಷ್ಟೂ, ಅದು ಎಂದಿಗೂ ತೃಪ್ತಿಪಡಿಸುವುದಿಲ್ಲ, "ಸರಿ, ಈಗ ನಾನು ಪ್ರೀತಿಸಲ್ಪಟ್ಟಿದ್ದೇನೆ. ಅದು ಸಾಕು, ನನಗೆ ಇನ್ಯಾವುದೂ ಅಗತ್ಯವಿಲ್ಲ" ಎಂದು ನಾವು ಎಂದಿಗೂ ಭಾವಿಸುವುದಿಲ್ಲ. ನಾವು ಅದನ್ನು ಎಂದಿಗೂ ಅನುಭವಿಸುವುದಿಲ್ಲ. ಆದ್ದರಿಂದ ನಮ್ಮ ನಡವಳಿಕೆಯು "ನಾನು ಪ್ರೀತಿಸಲ್ಪಟ್ಟಿದ್ದೇನೆ ಎಂದು ಭಾವಿಸಬೇಕು, ನಾನು ಮುಖ್ಯನೆಂದು ಭಾವಿಸಬೇಕು, ನಾನು ಮೆಚ್ಚುಗೆ ಪಡೆದಿದ್ದೇನೆ ಎಂದು ಭಾವಿಸಬೇಕು" ಎಂದು ಪ್ರಚೋದಿತವಾಗಿ ಭಾವಿಸುವ ಈ ಅಭ್ಯಾಸವನ್ನು ಬಲಪಡಿಸುತ್ತದೆ, ಮತ್ತಷ್ಟು ಬಲಪಡಿಸುತ್ತದೆ. ಪ್ರೀತಿಸಲ್ಪಡುವ ಭರವಸೆಯಲ್ಲಿ ನೀವು ಹೆಚ್ಚು ಹೆಚ್ಚು ನೀಡುತ್ತೀರಿ, ಆದರೆ ನೀವು ಯಾವಾಗಲೂ ನಿರಾಶೆಗೊಳ್ಳುತ್ತೀರಿ. ಯಾರಾದರೂ ನಿಮಗೆ ಧನ್ಯವಾದ ಹೇಳಿದರೂ, "ಅವರು ನಿಜವಾಗಿಯೂ ಹಾಗೆ ಭಾವಿಸುವುದಿಲ್ಲ" ಎಂದು ನೀವು ಭಾವಿಸುತ್ತೀರಿ. ಅದರಿಂದಾಗಿ, ನಮಗೆ ಎಂದಿಗೂ ಮನಸ್ಸಿನ ಶಾಂತಿ ಇರುವುದಿಲ್ಲ. ಮತ್ತು ಅದು ಕೆಟ್ಟದಾಗುತ್ತಲೇ ಹೋಗುತ್ತದೆ, ಏಕೆಂದರೆ ಸಿಂಡ್ರೋಮ್ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಅದನ್ನು "ಸಂಸಾರ" ಎಂದು ಕರೆಯಲಾಗುತ್ತದೆ, ಅಂದರೆ - ಅನಿಯಂತ್ರಿತವಾಗಿ ಪುನರಾವರ್ತನೆಯಾಗುವ ಸಮಸ್ಯಾತ್ಮಕ ಪರಿಸ್ಥಿತಿ. 

ಗೊಂದಲಮಯ ಭಾವನೆಯು ನಮ್ಮನ್ನು ನಕಾರಾತ್ಮಕವಾಗಿ ಅಥವಾ ವಿನಾಶಕಾರಿಯಾಗಿ ವರ್ತಿಸುವಂತೆ ಮಾಡುತ್ತಿರುವಾಗ ಈ ರೀತಿಯ ಸಿಂಡ್ರೋಮ್ ಅನ್ನು ಗುರುತಿಸುವುದು ಅಷ್ಟು ಕಷ್ಟವಲ್ಲ. ಉದಾಹರಣೆಗೆ, ನಾವು ಯಾವಾಗಲೂ ಕಿರಿಕಿರಿಗೊಳ್ಳಬಹುದು, ಮತ್ತು ನಾವು ಕಿರಿಕಿರಿಗೊಂಡಿರುವುದರಿಂದ, ಸಣ್ಣ ವಿಷಯಕ್ಕೂ ಕೋಪಗೊಳ್ಳುವುದರಿಂದ, ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿ ನಾವು ಯಾವಾಗಲೂ ಕಟುವಾಗಿ ಮಾತನಾಡುತ್ತೇವೆ ಅಥವಾ ನಾವು ಕ್ರೂರ ವಿಷಯಗಳನ್ನು ಹೇಳುತ್ತೇವೆ. ಯಾರೂ ನಮ್ಮನ್ನು ಇಷ್ಟಪಡುವುದಿಲ್ಲ ಮತ್ತು ಜನರು ನಿಜವಾಗಿಯೂ ನಮ್ಮೊಂದಿಗೆ ಇರಲು ಬಯಸುವುದಿಲ್ಲ ಮತ್ತು ಅದು ನಮ್ಮ ಸಂಬಂಧಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ. ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗುರುತಿಸುವುದು ತುಂಬಾ ಸುಲಭ. ಆದರೆ ನಮ್ಮ ಸಕಾರಾತ್ಮಕ ವರ್ತನೆಯ ಹಿಂದೆ ಗೊಂದಲಮಯ ಭಾವನೆ ಇದ್ದಾಗ ಅದನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಆದರೆ ಎರಡೂ ಸಂದರ್ಭಗಳಲ್ಲಿ ನಾವು ಅದನ್ನು ಗುರುತಿಸಬೇಕು. 

ಗೊಂದಲಗೊಳಿಸದ ಭಾವನೆಗಳು 

ಸಂಸ್ಕೃತ ಮತ್ತು ಟಿಬೆಟಿಯನ್ ಭಾಷೆಗಳಲ್ಲಿ "ಭಾವನೆಗಳು" ಎಂಬುದಕ್ಕೆ ಯಾವುದೇ ಪದವಿಲ್ಲ. ಈ ಭಾಷೆಗಳು ಮಾನಸಿಕ ಅಂಶಗಳ ಬಗ್ಗೆ ಮಾತನಾಡುತ್ತವೆ, ಇವು ನಮ್ಮ ಮಾನಸಿಕ ಸ್ಥಿತಿಯ ಪ್ರತಿ ಕ್ಷಣವನ್ನು ರೂಪಿಸುವ ವಿವಿಧ ಅಂಶಗಳಾಗಿರುತ್ತವೆ. ಅವರು ಈ ಮಾನಸಿಕ ಅಂಶಗಳನ್ನು ಗೊಂದಲಗೊಳಿಸುವಂತಹವು ಮತ್ತು ಗೊಂದಲಗೊಳಿಸದವುಗಳು ಮತ್ತು ರಚನಾತ್ಮಕ ಮತ್ತು ವಿನಾಶಕಾರಿ ಎಂದು ವಿಂಗಡಿಸುತ್ತಾರೆ. ಆ ಎರಡು ಜೋಡಿಗಳು ಸಂಪೂರ್ಣವಾಗಿ ಅತಿಕ್ರಮಿಸುವುದಿಲ್ಲ. ಇದಲ್ಲದೆ, ಈ ಯಾವುದೇ ವರ್ಗಗಳಿಗೆ ಸೇರದ ಮಾನಸಿಕ ಅಂಶಗಳಿವೆ. ಆದ್ದರಿಂದ, ಪಶ್ಚಿಮದಲ್ಲಿ ನಾವು "ಭಾವನೆಗಳು" ಎಂದು ಕರೆಯುವ ವಿಷಯದಲ್ಲಿ, ಕೆಲವು ಗೊಂದಲಗೊಳಿಸುವವುಗಳು ಮತ್ತು ಕೆಲವು ಗೊಂದಲಗೊಳಿಸದವುಗಳು ಇವೆ. ಬೌದ್ಧಧರ್ಮದಲ್ಲಿ ನಾವು ಎಲ್ಲಾ ಭಾವನೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿರುತ್ತೇವೆ ಎಂದಲ್ಲ. ನಾವು ತೊಂದರೆಗೊಳಿಸುವವುಗಳನ್ನು ನಿವಾರಿಸಲು ಬಯಸುತ್ತೇವೆ. ಇದನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ: ಮೊದಲ ಹೆಜ್ಜೆ ಅವುಗಳ ನಿಯಂತ್ರಣಕ್ಕೆ ಬರದಿರುವುದು ಮತ್ತು ಎರಡನೆಯದು ಅವು ಉದ್ಭವಿಸದಂತೆ ಅವುಗಳನ್ನು ನಿವಾರಿಸುವುದು. 

ಗೊಂದಲಗೊಳಿಸದ ಭಾವನೆ ಎಂದರೇನು? ಸರಿ, "ಪ್ರೀತಿ" ಎಂಬುದು ಗೊಂದಲಗೊಳಿಸದ ಭಾವನೆ ಅಥವಾ "ಕರುಣೆ" ಅಥವಾ "ತಾಳ್ಮೆ" ಎಂದು ನಾವು ಭಾವಿಸಬಹುದು. ಆದರೆ ನಮ್ಮ ಯುರೋಪಿಯನ್ ಭಾಷೆಗಳಲ್ಲಿ ನಾವು ಹೊಂದಿರುವ ಈ ಪದಗಳನ್ನು ವಿಶ್ಲೇಷಿಸಿದಾಗ, ಈ ಭಾವನೆಗಳಲ್ಲಿ ಪ್ರತಿಯೊಂದೂ ಗೊಂದಲಮಯ ಮತ್ತು ಗೊಂದಲಗೊಳಿಸದ ವೈವಿಧ್ಯತೆಯನ್ನು ಹೊಂದಿರಬಹುದು ಎಂದು ನಾವು ಕಂಡುಕೊಳ್ಳುತ್ತೇವೆ. ಆದ್ದರಿಂದ, ನಾವು ಸ್ವಲ್ಪ ಜಾಗರೂಕರಾಗಿರಬೇಕು. ಪ್ರೀತಿಯು "ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನನಗೆ ನಿನ್ನ ಅವಶ್ಯಕತೆ ಇದೆ, ನನ್ನನ್ನು ಎಂದಿಗೂ ಬಿಡಬೇಡ!" ಎಂದು ನಾವು ಭಾವಿಸುವ ಭಾವನೆಯಾಗಿದ್ದರೆ, ಈ ರೀತಿಯ ಪ್ರೀತಿಯು ವಾಸ್ತವದಲ್ಲಿ ಬಹಳಾ ಗೊಂದಲಮಯ ಮನಸ್ಸಿನ ಸ್ಥಿತಿಯಾಗಿದೆ. ಇದು ಏಕೆ ಗೊಂದಲಮಯವೆಂದರೆ, ಆ ವ್ಯಕ್ತಿಯು ನಮ್ಮನ್ನು ಪ್ರೀತಿಸದಿದ್ದರೆ ಅಥವಾ ಅವರಿಗೆ ನಮ್ಮ ಅಗತ್ಯವಿಲ್ಲದಿದ್ದರೆ, ನಾವು ತುಂಬಾ ಅಸಮಾಧಾನಗೊಳ್ಳುತ್ತೇವೆ. ನಾವು ತುಂಬಾ ಕೋಪಗೊಳ್ಳುತ್ತೇವೆ ಮತ್ತು ಇದ್ದಕ್ಕಿದ್ದಂತೆ ನಮ್ಮ ಭಾವನೆಗಳು "ನಾನು ಇನ್ನು ಮುಂದೆ ನಿನ್ನನ್ನು ಪ್ರೀತಿಸುವುದಿಲ್ಲ" ಎಂದು ಬದಲಾಗುತ್ತವೆ. 

ಆದ್ದರಿಂದ, ನಾವು ಮನಸ್ಸಿನ ಸ್ಥಿತಿಯನ್ನು ವಿಶ್ಲೇಷಿಸಿದಾಗ, ಅದನ್ನು ಭಾವನಾತ್ಮಕ ಎಂದು ನಾವು ಭಾವಿಸಬಹುದಾದರೂ, ಮತ್ತು ನಾವು ಅದನ್ನು "ಪ್ರೀತಿ" ಎಂದು ಕರೆಯಬಹುದಾದರೂ, ವಾಸ್ತವದಲ್ಲಿ ಈ ಮಾನಸಿಕ ಸ್ಥಿತಿಯು ಅನೇಕ ಮಾನಸಿಕ ಅಂಶಗಳ ಮಿಶ್ರಣವಾಗಿದೆ. ನಾವು ಕೇವಲ ಒಂದು ಭಾವನೆಯನ್ನು ಅನುಭವಿಸುವುದಿಲ್ಲ. ನಮ್ಮ ಭಾವನಾತ್ಮಕ ಸ್ಥಿತಿಗಳು ಯಾವಾಗಲೂ ಮಿಶ್ರಣವಾಗಿರುತ್ತವೆ; ಇಲ್ಲಿ ಹಲವು ವಿಭಿನ್ನ ಘಟಕಗಳಿವೆ. "ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ" ಎಂದು ನಾವು ಭಾವಿಸುವ ಆ ರೀತಿಯ ಪ್ರೀತಿಯು ನಿಸ್ಸಂದೇಹವಾಗಿ ಒಂದು ರೀತಿಯ ಅವಲಂಬನೆಯಾಗಿದೆ ಮತ್ತು ಅದು ತುಂಬಾ ಗೊಂದಲಮಯವಾಗಿದೆ. ಆದರೆ ಗೊಂದಲಗೊಳಿಸದ ಪ್ರೀತಿ ಎಂಬ ಒಂದು ವಿಧವಿದೆ, ಅದು ಕೇವಲ ಇನ್ನೊಬ್ಬ ವ್ಯಕ್ತಿ ಏನು ಮಾಡಿದರೂ ಸಹ ಸಂತೋಷವಾಗಿರಬೇಕು ಮತ್ತು ಸಂತೋಷದ ಕಾರಣಗಳನ್ನು ಹೊಂದಿರಬೇಕು ಎಂಬ ಬಯಕೆಯಾಗಿರುತ್ತದೆ. ನಾವು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. 

ಉದಾಹರಣೆಗೆ, ನಾವು ನಮ್ಮ ಮಕ್ಕಳಿಗಾಗಿ ಈ ರೀತಿಯ ಗೊಂದಲಗೊಳಿಸದ ಪ್ರೀತಿಯನ್ನು ಹೊಂದಿರಬಹುದು. ನಾವು ನಿಜವಾಗಿಯೂ ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಹೌದು, ಕೆಲವು ಪೋಷಕರು ಹಾಗೆ ನಿಸ್ಸಂದೇಹವಾಗಿ ಮಾಡುತ್ತಾರೆ. ಆದರೆ ಸಾಮಾನ್ಯವಾಗಿ, ಮಗು ಏನೇ ಮಾಡಿದರೂ, ನಾವು ಮಗುವನ್ನು ಇನ್ನೂ ಪ್ರೀತಿಸುತ್ತೇವೆ. ಮಗು ಸಂತೋಷವಾಗಿರಬೇಕೆಂದು ನಾವು ಬಯಸುತ್ತೇವೆ. ಆದರೆ ಆಗಾಗ್ಗೆ, ಇದು ಮತ್ತೊಂದು ಗೊಂದಲದ ಸ್ಥಿತಿಯೊಂದಿಗೆ ಬೆರೆತುಹೋಗುತ್ತದೆ, ಅಂದರೆ ನಾವು ಅವರನ್ನು ಸಂತೋಷಪಡಿಸಲು ಸಾಧ್ಯವಾಗಲಿ ಎಂದು ನಾವು ಬಯಸುತ್ತೇವೆ. ನಮ್ಮ ಮಗುವನ್ನು ಸಂತೋಷಪಡಿಸುವ ಉದ್ದೇಶದಿಂದ ನಾವು ಏನನ್ನಾದರೂ ಮಾಡಿದರೆ, ಉದಾಹರಣೆಗೆ, ಅವರನ್ನು ಬೊಂಬೆ ಪ್ರದರ್ಶನಕ್ಕೆ ಕರೆದೊಯ್ಯುವುದು ಮತ್ತು ಅದು ಕೆಲಸ ಮಾಡದಿದ್ದರೆ, ಅದು ಅವರನ್ನು ಸಂತೋಷಪಡಿಸುವುದಿಲ್ಲ, ಅವರು ತಮ್ಮ ಕಂಪ್ಯೂಟರ್ ಆಟವನ್ನು ಆಡಲು ಬಯಸುತ್ತಾರೆ, ಆಗ ನಮಗೆ ಬಹಳಾ ಬೇಸರವಾಗುತ್ತದೆ. ನಾವು ನಮ್ಮ ಮಗುವಿನ ಸಂತೋಷಕ್ಕೆ ಕಾರಣವಾಗು ಕಂಪ್ಯೂಟರ್ ಆಟವಲ್ಲ ಎಂದು ನಾವು ಬಯಸಿದ್ದರಿಂದ ನಮಗೆ ಬೇಸರವಾಗುತ್ತದೆ. ಆದರೆ ನಾವು ಇನ್ನೂ ನಮ್ಮ ಮಗುವಿನ ಬಗೆಗಿನ ಆ ಭಾವನೆಯನ್ನು "ಪ್ರೀತಿ" ಎಂದು ಕರೆಯುತ್ತೇವೆ. "ನೀನು ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ, ನಾನು ನಿನ್ನನ್ನು ಸಂತೋಷಪಡಿಸಲು ಪ್ರಯತ್ನಿಸುತ್ತೇನೆ, ಆದರೆ ನಿನ್ನ ಜೀವನದಲ್ಲಿ ಅದನ್ನು ಮಾಡುತ್ತಿರುವ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ನಾನು ಬಯಸುತ್ತೇನೆ." 

ಈ ಎಲ್ಲಾ ವಿಸ್ತೃತ ಚರ್ಚೆಯ ಉದ್ದೇಶವೆಂದರೆ ನಾವು ನಿಜವಾಗಿಯೂ ನಮ್ಮ ಭಾವನಾತ್ಮಕ ಸ್ಥಿತಿಗಳನ್ನು ಬಹಳ ಎಚ್ಚರಿಕೆಯಿಂದ ನೋಡಬೇಕು ಮತ್ತು ವಿಭಿನ್ನ ಭಾವನೆಗಳನ್ನು ಲೇಬಲ್ ಮಾಡಲು ನಾವು ಬಳಸುವ ಪದಗಳಲ್ಲಿ ಸಿಲುಕಿಕೊಳ್ಳಬಾರದು. ನಮ್ಮ ಮಾನಸಿಕ ಸ್ಥಿತಿಗಳ ಯಾವ ಅಂಶಗಳು ತೊಂದರೆಗೊಳಗಾಗುತ್ತವೆ ಮತ್ತು ನಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ, ನಮ್ಮ ಸ್ಪಷ್ಟತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ, ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ಕಂಡುಹಿಡಿಯಲು ನಾವು ನಿಜವಾಗಿಯೂ ತನಿಖೆ ಮಾಡಬೇಕಾಗಿದೆ. ಅವುಗಳ ಮೇಲೆ ನಾವು ಕೆಲಸ ಮಾಡಬೇಕಾಗಿದೆ. 

ಗೊಂದಲಮಯ ಭಾವನೆಗಳ ಮೂಲ ಕಾರಣವು ಅರಿವಿಲ್ಲದಿರುವುದು 

ಈ ಗೊಂದಲಮಯ ಮನಸ್ಸಿನ ಸ್ಥಿತಿಗಳು ಅಥವಾ ಭಾವನೆಗಳು ಅಥವಾ ವರ್ತನೆಗಳಿಂದ ನಾವು ನಮ್ಮನ್ನು ಮುಕ್ತಗೊಳಿಸಲು ಬಯಸಿದರೆ, ನಾವು ಅವುಗಳ ಕಾರಣವನ್ನು ಕಂಡುಹಿಡಿಯಬೇಕು. ಅವುಗಳ ಆಧಾರವಾಗಿರುವ ಕಾರಣವನ್ನು ನಾವು ತೆಗೆದುಹಾಕಲು ಸಾಧ್ಯವಾದರೆ, ನಾವು ಅವುಗಳನ್ನು ನಿವಾರಿಸಬಹುದು. ಕೇವಲ ನಮ್ಮ ಸಮಸ್ಯೆಗಳನ್ನು ಉಂಟುಮಾಡುವ, ಗೊಂದಲಮಯ ಭಾವನೆಗಳನ್ನು ನಿವಾರಿಸುವುದಷ್ಟೇ ಅಲ್ಲ, ನಾವು ವಾಸ್ತವವಾಗಿ ಗೊಂದಲಮಯ ಭಾವನೆಯ ಮೂಲಕ್ಕೆ ಹೋಗಿ ಅದನ್ನು ನಿವಾರಿಸಬೇಕು. 

ಹಾಗಾದರೆ, ಈ ಗೊಂದಲಮಯ ಮನಸ್ಸಿನ ಸ್ಥಿತಿಗಳಿಗೆ ಆಳವಾದ ಕಾರಣವೇನು? ಸಾಮಾನ್ಯವಾಗಿ ಇದು "ಅಜ್ಞಾನ" ಅಥವಾ, ನಾನು "ಅರಿವು ಇಲ್ಲದಿರುವುದು" ಎಂದು ಅನುವಾದಿಸಲು ಇಷ್ಟಪಡುವುದಾಗಿರುತ್ತದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ನಮಗೆ ಯಾವುದೋ ವಿಷಯದ ಬಗ್ಗೆ ಅರಿವಿಲ್ಲವೆಂದರೆ, ನಮಗೆ ಅದರ ಬಗ್ಗೆ ಗೊತ್ತಿಲ್ಲ ಅಷ್ಟೆ. ಅಜ್ಞಾನವು ನಾವು ಮೂರ್ಖರು ಎಂಬಂತೆ ತೋರುತ್ತದೆ. ನಾವು ಮೂರ್ಖರಲ್ಲ. ನಮಗೆ ತಿಳಿದಿಲ್ಲದಿರುವುದು ಅಥವಾ ನಾವು ಗೊಂದಲಕ್ಕೊಳಗಾಗಿರಬಹುದು: ನಾವು ಏನನ್ನಾದರೂ ತಪ್ಪಾಗಿ ಅರ್ಥಮಾಡಿಕೊಂಡಿರಬಹುದು. 

ನಾವು ಯಾವುದರ ಬಗ್ಗೆ ಗೊಂದಲಕ್ಕೊಳಗಾಗಿದ್ದೇವೆ, ಅಥವಾ ನಮಗೆ ಯಾವುದರ ಬಗ್ಗೆ ಅರಿವಿಲ್ಲ? ಮೂಲತಃ, ಇದು ನಮ್ಮ ನಡವಳಿಕೆ ಮತ್ತು ಅದರ ಸನ್ನಿವೇಶಗಳ ಪರಿಣಾಮವಾಗಿರುತ್ತದೆ. ನಾವು ಯಾವುದೋ ರೀತಿಯಲ್ಲಿ ತುಂಬಾ ಕೋಪಗೊಂಡಿದ್ದೇವೆ ಅಥವಾ ಅಂಟಿಕೊಂಡಿದ್ದೇವೆ ಅಥವಾ ಅಸಮಾಧಾನಗೊಂಡಿದ್ದೇವೆ ಮತ್ತು ಅದು ಹಿಂದಿನ ಅಭ್ಯಾಸಗಳು ಮತ್ತು ಪ್ರವೃತ್ತಿಗಳ ಆಧಾರದ ಮೇಲೆ, ನಮ್ಮನ್ನು ಪ್ರಚೋದಿತ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತದೆ. ಮೂಲತಃವಾಗಿ ಕರ್ಮವು ಇದೇ ಆಗಿರುತ್ತದೆ, ಗೊಂದಲಮಯ ಭಾವನೆ ಅಥವಾ ಗೊಂದಲಗೊಳಿಸುವ ಮನೋಭಾವವನ್ನು ಆಧರಿಸಿದ ರೀತಿಯಲ್ಲಿ ವರ್ತಿಸುವ ಪ್ರಚೋದನೆಯಾಗಿರುತ್ತದೆ, ಹೀಗಾಗಿ ನಾವು ಸ್ವಯಂ ನಿಯಂತ್ರಣದಲ್ಲಿರುವುದಿಲ್ಲ. 

ಆ ಪ್ರಚೋದಿತ ನಡವಳಿಕೆಯ ಆಧಾರವು ಅರಿವಿಲ್ಲದಿರುವುದಾಗಿರುತ್ತದೆ: ನಾವು ಏನು ಮಾಡಿದ್ದೇವೆ ಅಥವಾ ಹೇಳಿದ್ದೇವೆ ಎಂಬುದರ ಪರಿಣಾಮದ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಅಥವಾ ನಾವು ಗೊಂದಲಕ್ಕೊಳಗಾಗಿರುತ್ತೇವೆ: ಏನನ್ನಾದರೂ ಕದಿಯುವುದರಿಂದ ನಮಗೆ ಸಂತೋಷವಾಗುತ್ತದೆ ಎಂದು ನಾವು ಭಾವಿಸುತ್ತೇವೆ, ಆದರೆ ಹಾಗೆ ಆಗಿರುವುದಿಲ್ಲ. ಅಥವಾ ನಾನು ನಿಮಗೆ ಸಹಾಯ ಮಾಡುವುದರಿಂದ, ನಾನು ಮುಖ್ಯನಾಗಿರವೆ ಮತ್ತು ಪ್ರೀತಿಪಾತ್ರನಾಗಿರುವೆ ಎಂಬ ಭಾವನೆ ಬರುತ್ತದೆ; ಅದು ಹಾಗೆ ಆಗುವುದಿಲ್ಲ. ಆದ್ದರಿಂದ ಅದರ ಪರಿಣಾಮ ಏನೆಂದು ನಮಗೆ ತಿಳಿಯುವುದಿಲ್ಲ. "ನಾನು ಹಾಗೆ ಹೇಳುವುದರಿಂದ ನಿನಗೆ ನೋವುಂಟಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ." ಅಥವಾ ನಾವು ಅದರ ಬಗ್ಗೆ ಗೊಂದಲಕ್ಕೊಳಗಾಗಿದ್ದೇವೆ. "ಅದು ಸಹಾಯ ಮಾಡುತ್ತದೆ ಎಂದು ನಾನು ಭಾವಿಸಿದ್ದೆ ಆದರೆ ಅದು ಹಾಗಾಗಲಿಲ್ಲ." "ಅದು ನನಗೆ ಸಂತೋಷವನ್ನು ನೀಡುತ್ತದೆ ಎಂದು ನಾನು ಭಾವಿಸಿದ್ದೆ, ಅದು ಹಾಗಾಗಲಿಲ್ಲ." ಅಥವಾ ಅದು ನಿಮ್ಮನ್ನು ಸಂತೋಷಪಡಿಸುತ್ತದೆ ಅಂದುಕೊಂಡಿದ್ದೆ, ಅದು ಆಗಲಿಲ್ಲ. ಅಥವಾ ಸಂದರ್ಭಗಳ ಬಗ್ಗೆ, "ನೀವು ಕಾರ್ಯನಿರತರಾಗಿದ್ದೀರಿ ಎಂದು ನನಗೆ ತಿಳಿದಿರಲಿಲ್ಲ." ಅಥವಾ "ನೀವು ಮದುವೆಯಾಗಿದ್ದೀರಿ ಎಂದು ನನಗೆ ತಿಳಿದಿರಲಿಲ್ಲ." ಅಥವಾ ನಾವು ಗೊಂದಲಕ್ಕೊಳಗಾಗಿರಬಹುದು, "ನಿಮಗೆ ಸಾಕಷ್ಟು ಸಮಯವಿದೆ ಎಂದು ನಾನು ಭಾವಿಸಿದ್ದೆ. ಆದರೆ ನಿಮ್ಮ ಬಳಿಯಿರಲಿಲ್ಲ. "ನೀವು ಒಂಟಿಯಾಗಿದ್ದೀರಿ, ಯಾರೊಂದಿಗೂ ಸಂಬಂಧವಿಲ್ಲ ಎಂದು ನಾನು ಭಾವಿಸಿದ್ದೆ, ಆದ್ದರಿಂದ ನಾನು ಪ್ರೇಮ ಸಂಬಂಧವನ್ನು ಮುಂದುವರಿಸಲು ಪ್ರಯತ್ನಿಸಿದೆ", ಇದು ಅನುಚಿತ. ಆದ್ದರಿಂದ ಮತ್ತೊಮ್ಮೆ, ನಮಗೆ ಸನ್ನಿವೇಶಗಳ ಬಗ್ಗೆ ತಿಳಿದಿರುವುದಿಲ್ಲ: ನಮಗೆ ಅವುಗಳ ಬಗ್ಗೆ ತಿಳಿದಿಲ್ಲ ಅಥವಾ ಅವುಗಳ ಬಗ್ಗೆ ನಮಗೆ ಗೊಂದಲವಿರುತ್ತದೆ: ನಾವು ಅವುಗಳನ್ನು ತಪ್ಪು ರೀತಿಯಲ್ಲಿ ತಿಳಿದಿರುತ್ತೇವೆ. 

ಅರಿವಿನ ಕೊರತೆಯೇ ನಮ್ಮ ಪ್ರಚೋದಿತ ವರ್ತನೆಯ ಮೂಲ ಎಂಬುದು ನಿಜ. ಆದರೆ ಅದು ಗೊಂದಲಮಯ ಭಾವನೆಗಳ ಮೂಲವೂ ಹೌದು ಮತ್ತು ಗೊಂದಲಗೊಳಿಸುವ ಭಾವನೆಗಳು ಪ್ರಚೋದಿತ ನಡವಳಿಕೆಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿವೆ ಎಂಬುದು ಅಷ್ಟು ಸ್ಪಷ್ಟವಾಗಿಲ್ಲ. ಆದ್ದರಿಂದ, ನಾವು ಈ ಅಂಶಗಳನ್ನು ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.  

Top