ನಮ್ಮ ಜೀವನವು ಹೇಗೆ ಎಲ್ಲರೊಂದಿಗೆ ಸಂಪೂರ್ಣವಾಗಿ ಹೆಣೆದುಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ, ಸಾರ್ವತ್ರಿಕ ಪ್ರೀತಿಯು - ಅಂದರೆ ಪ್ರತಿಯೊಬ್ಬರೂ ಸಂತೋಷವಾಗಿರುವಂತೆ ಮತ್ತು ಸಂತೋಷವಾಗಿರಲು ಕಾರಣಗಳನ್ನು ಪಡೆಯಬೇಕೆಂಬ ಬಯಕೆ - ಉದ್ಭವಿಸುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಮಾನವೀಯತೆಯ ಭಾಗವಾಗಿದ್ದೇವೆ ಮತ್ತು ನಮ್ಮ ಯೋಗಕ್ಷೇಮವು ಇಡೀ ಜಾಗತಿಕ ಸಮುದಾಯದೊಂದಿಗೆ ಹೆಣೆದುಕೊಂಡಿದೆ - ನಮ್ಮಲ್ಲಿ ಯಾರೂ ಆರ್ಥಿಕ ಕುಸಿತ ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಮಾನವಕುಲದೊಂದಿಗೆ ಪರಸ್ಪರ ಸಂಬಂಧ ಹೊಂದಿರುವುದರಿಂದ, ನಮ್ಮ ಪ್ರೀತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಸಂಪೂರ್ಣವಾಗಿ ಸೂಕ್ತವಾಗಿರುತ್ತದೆ.
ಇತರರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು ತಾನಾಗಿಯೇ ನೆಮ್ಮದಿಯಲ್ಲಿರುತ್ತದೆ. ಇದು ಜೀವನದ ಯಶಸ್ಸಿನ ಅಂತಿಮ ಮೂಲವಾಗಿದೆ. - 14 ನೇ ದಲೈ ಲಾಮಾ
ಪ್ರೀತಿಯನ್ನು ಬೆಳೆಸಿಕೊಳ್ಳಲು, ನಮ್ಮ ಪರಸ್ಪರ ಸಂಬಂಧವನ್ನು ನಾವು ಪ್ರಶಂಸಿಸಬೇಕಾಗಿದೆ. ನಾವು ಸೇವಿಸುವ, ಬಳಸುವ ಮತ್ತು ಆನಂದಿಸುವುದೆಲ್ಲವೂ ಇತರರ ಶ್ರಮದಿಂದ ಬರುತ್ತದೆ. ಇದೀಗ ನೀವು ಓದುತ್ತಿರುವ ಎಲೆಕ್ಟ್ರಾನಿಕ್ ಸಾಧನದ ರಚನೆಯಲ್ಲಿ ತೊಡಗಿದ ಪ್ರಪಂಚದ ವಿವಿಧ ಮೂಲೆಗಳಲ್ಲಿನ ಸಾವಿರಾರು ಜನರ ಬಗ್ಗೆ ಯೋಚಿಸಿ. ಇದರ ಬಗ್ಗೆ ಆಳವಾಗಿ ಆಲೋಚಿಸುವುದರಿಂದ, ಎಲ್ಲರೊಂದಿಗೆ ಹೆಚ್ಚು ಸಂಬಂಧಿತರಾಗಿರುತ್ತೇವೆ ಮತ್ತು ಕೃತಜ್ಞರಾಗಿರುತ್ತೇವೆ, ಮತ್ತು ಇದು ನಮ್ಮೊಳಗೆ ಹೃತ್ಪೂರ್ವಕವಾದ ಸಂತೋಷದ ಭಾವನೆಯ ಉದ್ಭವಕ್ಕೆ ಕಾರಣವಾಗುತ್ತದೆ. ಆಗ ನಾವು ಇತರರ ಸಂತೋಷದ ಬಗ್ಗೆ ಸ್ವಾಭಾವಿಕವಾಗಿ ಕಾಳಜಿಯನ್ನು ಹೊಂದಿರುತ್ತೇವೆ; ಈ ಭಾವನೆಗಳು ಸಾರ್ವತ್ರಿಕ ಪ್ರೀತಿಗೆ ಆಧಾರವಾಗಿವೆ.
ಪ್ರೀತಿಯಿಂದ ತುಂಬಿದ ದಯೆಯನ್ನು ಅಭಿವೃದ್ಧಿಪಡಿಸಲು ಒಂದು ಸಣ್ಣದಾದ ಧ್ಯಾನ
ಮೊದಲು ನಾವು ನಮಗಾಗಿ ಪ್ರೀತಿಯಿಂದ ತುಂಬಿದ ದಯೆಯನ್ನು ಬೆಳೆಸಿಕೊಳ್ಳಬೇಕು. ನಾವೇ ಸಂತೋಷವಾಗಿರಲು ಬಯಸದಿದ್ದರೆ, ಬೇರೆಯವರು ಸಂತೋಷವಾಗಿರುವಂತೆ ನಾವು ಏಕೆ ಬಯಸುತ್ತೇವೆ?
ನಾವು ಹೀಗೆ ಆಳವಾಗಿ ಭಾವಿಸುವುದರಿಂದ ಪ್ರಾರಂಭಿಸುತ್ತೇವೆ:
- ನಾನು ಸಂತೋಷವಾಗಿದ್ದರೆ ಮತ್ತು ಸಂತೋಷಕ್ಕಾಗಿ ಕಾರಣಗಳನ್ನು ಹೊಂದಿದ್ದರೆ ಎಷ್ಟು ಚೆನ್ನಾಗಿರುತ್ತದೆ.
- ನಾನು ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ.
- ನಾನು ನನಗಾಗಿ ಸಂತೋಷವನ್ನು ತರುವಂತೆ ಸಾಧ್ಯವಾಗಲಿ.
ಒಮ್ಮೆ ನಾವು ಸಂತೋಷವಾಗಿರಬೇಕೆಂಬ ಬಲವಾದ ಬಯಕೆಯನ್ನು ಅನುಭವಿಸಿದ ನಂತರ, ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸಬಹುದು ಮತ್ತು ಇತರರ ವ್ಯಾಪಕ ವಲಯಕ್ಕೆ ಅದೇ ಆಲೋಚನೆಗಳನ್ನು ಅನ್ವಯಿಸಬಹುದು:
- ಮೊದಲನೆಯದಾಗಿ, ನಾವು ನಮ್ಮ ಪ್ರೀತಿಯನ್ನು ನಮ್ಮ ಪ್ರೀತಿಪಾತ್ರರು ಮತ್ತು ಸ್ನೇಹಿತರ ಕಡೆಗೆ ತಿರುಗಿಸುತ್ತೇವೆ.
- ನಂತರ ನಾವು ಪ್ರತಿದಿನ ಭೇಟಿಯಾಗುವ ನಿರಾಸಕ್ತ ವ್ಯಕ್ತಿಗಳಿಗೆ ಇದನ್ನು ವಿಸ್ತರಿಸುತ್ತೇವೆ.
- ನಂತರ, ನಾವು ಖಂಡಿತವಾಗಿಯೂ ಇಷ್ಟಪಡದ ಜನರಿಗಾಗಿ ಪ್ರೀತಿಯನ್ನು ಬೆಳೆಸಲು ಪ್ರಯತ್ನಿಸುತ್ತೇವೆ.
- ಅಂತಿಮವಾಗಿ, ನಾವು ಇಡೀ ಪ್ರಪಂಚಕ್ಕೆ ಮತ್ತು ಅದರಲ್ಲಿರುವ ಎಲ್ಲಾ ಜೀವಿಗಳಿಗಾಗಿ ನಮ್ಮ ಪ್ರೀತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತೇವೆ.
ಈ ರೀತಿಯಾಗಿ, ನಾವು ನಮ್ಮನ್ನು ಮತ್ತು ನಮ್ಮ ಸುತ್ತಲಿರುವ ಜನರನ್ನು ಮಾತ್ರವಲ್ಲದೆ, ಎಲ್ಲಾ ಜೀವಿಗಳನ್ನು ಒಳಗೊಳ್ಳುವಂತೆ ನಮ್ಮ ಪ್ರೀತಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬಹುದು.
ಇತರರನ್ನು ಸಂತೋಷಪಡಿಸಲು ನಾವು ಏನನ್ನಾದರೂ ಮಾಡಬಹುದಾದರೆ, ನಾವು ಹಾಗೆ ಮಾಡಬೇಕು. ಅದು ಸಾಧ್ಯವಾಗದಿದ್ದಲ್ಲಿ, ಅವರ ಅಲ್ಪಾವಧಿಯ ಸಂತೋಷಕ್ಕೆ ಮಾತ್ರವಲ್ಲ, ದೀರ್ಘಾವಧಿಯ ಯೋಗಕ್ಷೇಮಕ್ಕೂ ಕಾರಣವಾಗಬಹುದನ್ನು ನೀಡುವುದರ ಬಗ್ಗೆ ನಾವು ಯೋಚಿಸಬಹುದು. ಇದು ಕೇವಲ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುವುದರ ಬಗ್ಗೆ ಆಗಿರುವುದಿಲ್ಲ, ಅನೇಕ ಶ್ರೀಮಂತರೂ ಮತ್ತು ಯಶಸ್ವಿಯಾಗಿರುವ ಜನರೂ ಸಹ ಶೋಚನೀಯ ಸ್ಥಿತಿಯಲ್ಲಿರುತ್ತಾರೆ, ಮತ್ತು ಅವರನ್ನೂ ಸಹ ನಮ್ಮ ಇಚ್ಛೆಗಳಲ್ಲಿ ಸೇರಿಸಿಕೊಳ್ಳಬೇಕಾಗಿದೆ. ಕಾಲಕ್ರಮೇಣವಾಗಿ, ನಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆಗಿರುವ ಮತ್ತು ನಾವು ಭೇಟಿಮಾಡುವ ಪ್ರತಿಯೊಂದು ಜೀವಿಗಾಗಿರುವ ನಿಜವಾದ ಪ್ರೀತಿಯು ಸ್ವಾಭಾವಿಕವಾಗಿ ಉದ್ಭವಿಸುತ್ತದೆ, ಮತ್ತು ನಮಗೆ ಮತ್ತು ಇತರರಿಗೆ ಸಂತೋಷವನ್ನು ತರುತ್ತದೆ.