ಧ್ಯಾನವು ನಮ್ಮ ಮನಸ್ಸನ್ನು ಶಾಂತಗೊಳಿಸಲು, ಒತ್ತಡವನ್ನು ನಿವಾರಿಸಲು ಮತ್ತು ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಸಾಧನವಾಗಿದೆ. ಹೆಚ್ಚಿನ ಆರಂಭಿಕರು, ಬೌದ್ಧ ಬೋಧನೆಗಳ ಬಗ್ಗೆ ಹೆಚ್ಚು ಕಲಿಯದೇ ಧ್ಯಾನವನ್ನು ಪ್ರಾರಂಭಿಸಲು ಉತ್ಸುಕರಾಗಿರುತ್ತಾರೆ. ಆದರೆ ಅದರ ಬದಲಿಗೆ ಹಂತ ಹಂತವಾಗಿ ಪ್ರಗತಿ ಸಾಧಿಸುವುದು ಒಳ್ಳೆಯದು. ಬುದ್ಧನ ಬೋಧನೆಗಳ ಬಗ್ಗೆ ನಾವು ಹೆಚ್ಚು ತಿಳಿದುಕೊಂಡಂತೆ, ನಮ್ಮ ಧ್ಯಾನವನ್ನು ಕ್ರಮೇಣವಾಗಿ ವೃದ್ಧಿಪಡಿಸಲಾಗುತ್ತದೆ.
ಧ್ಯಾನವನ್ನು ಅಭ್ಯಾಸ ಮಾಡಲು ಬೇಕಾದ ಕೆಲವು ಸಾಮಾನ್ಯ ಅಂಶಗಳನ್ನು ಇಲ್ಲಿ ನೋಡೋಣ. ಪರಿಣಿತರಾದ ಅಭ್ಯಾಸಕಾರರಿಗೆ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಧ್ಯಾನ ಮಾಡಲು ಸಾಧ್ಯವಾಗುತ್ತದೆ. ಆರಂಭಿಕರಿಗಾಗಿ, ಶಾಂತವಾಗಲು ಅನುಕೂಲಕರವಾಗುವಂತಹ ಜಾಗವೊಂದನ್ನು ಹುಡುಕಿಕೊಂಡರೆ ಸಹಾಯಕವಾಗಿರುತ್ತದೆ, ಏಕೆಂದರೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳು ನಮ್ಮ ಮೇಲೆ ಬಲವಾದ ಪರಿಣಾಮ ಬೀರುತ್ತವೆ.
ಧ್ಯಾನಕ್ಕಾಗಿ ಸ್ಥಳ
ಮೇಣದಬತ್ತಿಗಳು, ಪ್ರತಿಮೆಗಳು ಮತ್ತು ಧೂಪದ್ರವ್ಯವನ್ನು ಹೊಂದಿರುವ ಕೋಣೆಯೊಂದು ಧ್ಯಾನಕ್ಕಾಗಿ ಉತ್ತಮವಾದುದು ಎಂದು ನಾವು ಊಹಿಸಬಹುದು – ಮತ್ತು ನಮಗೆ ಬೇಕಾದಲ್ಲಿ ಹಾಗೆ ಮಾಡಬಹುದು. ಅದೃಷ್ಟವಶಾತ್, ಅಷ್ಟು ವಿಸ್ತಾರವಾದ ಸಿದ್ಧತೆಯ ಅಗತ್ಯವಿಲ್ಲ; ಆದರೆ ಒಂದು ಪ್ರಮುಖ ಅಂಶವೆಂದರೆ ಕೊಠಡಿಯು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರಬೇಕು.
ನಮ್ಮ ಸುತ್ತಮುತ್ತಲಿನ ಪರಿಸರವು ಕ್ರಮಬದ್ಧವಾಗಿದ್ದಾಗ, ನಮ್ಮ ಚಿತ್ತವನ್ನು ಕ್ರಮಬದ್ಧವಾಗಿಸಲು ಸಹಾಯ ಮಾಡುತ್ತದೆ. ಅಸ್ತವ್ಯಸ್ತವಾಗಿರುವ ವಾತಾವರಣವು ಚಿತ್ತದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಆರಂಭದಲ್ಲಿ, ಪರಿಸರವು ಶಾಂತವಾಗಿದ್ದರೆ ಸಹಾಯಕವಾಗಿರುತ್ತದೆ. ಸದ್ದುಗದ್ದಲವಿರುವ ನಗರದಲ್ಲಿ ವಾಸಿಸುತ್ತಿದ್ದರೆ ಇದು ಕಷ್ಟಕರವಾಗಿರುತ್ತದೆ, ಆದ್ದರಿಂದ ಅನೇಕರು ಬೆಳಿಗ್ಗೆ ಅಥವಾ ತಡರಾತ್ರಿಯಲ್ಲಿ ಧ್ಯಾನ ಮಾಡಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ, ಶಬ್ದದಿಂದ ನಮಗೆ ತೊಂದರೆಯಾಗುವುದಿಲ್ಲವಾದರೂ ಆರಂಭದಲ್ಲಿ ಅದರಿಂದ ಬಹಳಾ ಅಸ್ಥಿರತೆಯುಂಟಾಗಬಹುದು.
ಸಂಗೀತ ಮತ್ತು ಧ್ಯಾನ
ಬೌದ್ಧಧರ್ಮದಲ್ಲಿ, ಸಂಗೀತದೊಂದಿಗೆ ಧ್ಯಾನ ಮಾಡುವಂತೆ ಸಲಹೆ ನೀಡಲಾಗುವುದಿಲ್ಲ, ಏಕೆಂದರೆ ಅದು ಶಾಂತಿಗಾಗಿ ಬಾಹ್ಯ ಮೂಲವೊಂದನ್ನು ಅವಲಂಬಿಸುವುದಾಗಿರುತ್ತದೆ. ಬದಲಿಗೆ, ನಾವು ಆಂತರಿಕವಾಗಿ ಶಾಂತಿಯನ್ನು ಸೃಷ್ಟಿಸಲು ಬಯಸುತ್ತೇವೆ.
ಧ್ಯಾನಕ್ಕಾಗಿ ಭಂಗಿ
ಅತ್ಯಂತ ಮುಖ್ಯವಾದ ವಿಷಯವೆಂದರೆ ನಮ್ಮ ಬೆನ್ನನ್ನು ನೇರವಾಗಿರಿಸಿ, ನಮ್ಮ ಭುಜಗಳು, ಕುತ್ತಿಗೆ ಮತ್ತು ಮುಖದ ಸ್ನಾಯುಗಳನ್ನು ಸಡಿಲಿಸಿ, ಆರಾಮವಾಗಿ ಕುಳಿತುಕೊಳ್ಳುವುದು. ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೆಚ್ಚು ಆರಾಮದಾಯಕವಾಗಿದ್ದರೆ, ಅದನ್ನು ಸಹ ಪಾಲಿಸಬಹುದು. ಹಿಂಸೆ ಅನ್ನಿಸಬಾರದು! ಕೆಲವು ವಿಧದ ಝೆನ್ ಧ್ಯಾನದಲ್ಲಿ, ನಮಗೆ ಚಲಿಸಲು ಅವಕಾಶವಿರುವುದಿಲ್ಲ. ಇತರ ರೀತಿಯ ಧ್ಯಾನಗಳಲ್ಲಿ, ನೀವು ನಿಮ್ಮ ಕಾಲುಗಳನ್ನು ಚಲಿಸಬೇಕೆಂದಲ್ಲಿ ಹಾಗೆ ಮಾಡಬಹುದು – ಅದರ ಮೇಲೆ ಯಾವುದೇ ಅಭ್ಯಂತರವಿರುವುದಿಲ್ಲ.
ಧ್ಯಾನದ ಅವಧಿ
ಆರಂಭದಲ್ಲಿ, ಬಹಳ ಕಡಿಮೆ ಸಮಯದವರೆಗೆ ಧ್ಯಾನ ಮಾಡುವಂತೆ ಸಲಹೆ ನೀಡಲಾಗುತ್ತದೆ - ಕೇವಲ ಮೂರರಿಂದ ಐದು ನಿಮಿಷಗಳು ಸಾಕು. ಅದಕ್ಕಿಂತ ಹೆಚ್ಚು ಸಮಯದವರೆಗೆ ಕೇಂದ್ರೀಕರಿಸುವುದು ಕಷ್ಟ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ. ದೀರ್ಘಾವಧಿಯಲ್ಲಿ ನಮ್ಮ ಮನಸ್ಸು ಅಲೆದಾಡುತ್ತಾ, ಹಗಲುಗನಸು ಕಾಣುತ್ತಾ ಅಥವಾ ನಿದ್ರಿಸುವ ಬದಲು ಅಲ್ಪಾವಧಿಯಲ್ಲಿ ಹೆಚ್ಚು ಗಮನಹರಿಸಿರುವುದು ಉತ್ತಮವಾಗಿರುತ್ತದೆ!
ನೆನಪಿಡಬೇಕಾದ ಪ್ರಮುಖ ತತ್ವವೆಂದರೆ ಎಲ್ಲದರಲ್ಲೂ ಏರಿಳಿತವಿರುತ್ತದೆ. ಕೆಲವು ದಿನಗಳಲ್ಲಿ ನಿಮ್ಮ ಧ್ಯಾನವು ಯಶಸ್ವಿಯಾಗಿರುತ್ತದೆ ಮತ್ತು ಕೆಲವು ದಿನಗಳಲ್ಲಿ ಹಾಗಾಗಿರುವುದಿಲ್ಲ.
ನಮ್ಮ ದೇಹ ಮತ್ತು ಮನಸ್ಸು ವಿಶ್ರಾಂತಿಯ ಸ್ಥಿತಿಯಲ್ಲಿರಬೇಕು ಮತ್ತು ನಾವು ನಮ್ಮ ಮೇಲೆ ಒತ್ತಡ ಹೇರದೇ ಇರುವುದು ಮಹತ್ವವಾದ ವಿಷಯ. ಕೆಲವು ದಿನಗಳಲ್ಲಿ ನಾವು ಧ್ಯಾನ ಮಾಡಲು ಬಯಸುತ್ತೇವೆ ಮತ್ತು ಕೆಲವು ದಿನಗಳಲ್ಲಿ ನಮಗೆ ಹಾಗೆನಿಸುವುದಿಲ್ಲ. ಪ್ರಗತಿಯು ಎಂದಿಗೂ ರೇಖಾತ್ಮಕವಾಗಿರುವುದಿಲ್ಲ, ಆದ್ದರಿಂದ ಒಂದು ದಿನ ನಮಗೆ ಅದ್ಭುತವೆನಿಸದರೆ, ಮರುದಿನ ಹಾಗೆನಿಸುವುದಿಲ್ಲ. ಹಲವು ವರ್ಷಗಳ ಪರಿಶ್ರಮದ ನಂತರ, ನಮ್ಮ ಧ್ಯಾನದ ಅಭ್ಯಾಸವು ಸುಧಾರಿಸುತ್ತಿರುವ ಪ್ರವೃತ್ತಿಯನ್ನು ನಾವು ಕಾಣಬಹುದು.
ಎಷ್ಟು ಬಾರಿ ಧ್ಯಾನ ಮಾಡಬೇಕು
ಧ್ಯಾನವನ್ನು ನಿರಂತರವಾಗಿ ಮುಂದುವರಿಸುವುದು ಮುಖ್ಯ. ಕೆಲವು ನಿಮಿಷಗಳ ಕಾಲ ಪ್ರತಿದಿನ ಧ್ಯಾನ ಮಾಡುವುದರಿಂದ ಪ್ರಾರಂಭಿಸಿದರೆ ಅದು ಒಳ್ಳೆಯದು. ಮೊದಲ ಕೆಲವು ನಿಮಿಷಗಳ ನಂತರ, ನಾವು ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳಬಹುದು, ತದನಂತರ ಮುಂದುವರಿಸಬಹುದು. ಒಂದು ಗಂಟೆಯ ಕಾಲ ಕುಳಿತುಕೊಳ್ಳಬೇಕಾದ ಚಿತ್ರಹಿಂಸೆಗಿಂತ, ಈ ರೀತಿ ಅಭ್ಯಾಸ ಮಾಡುವುದು ಉತ್ತಮ.
ಉಸಿರಾಟದ ಮೇಲಿನ ಧ್ಯಾನ
ಜನರು ಹೆಚ್ಚಾಗಿ ಪ್ರಾರಂಭಿಸುವ ಮೊದಲ ಧ್ಯಾನವೆಂದರೆ, ಶಾಂತವಾಗಿ ಕುಳಿತುಕೊಳ್ಳುವುದು ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸುವುದು. ನಾವು ಒತ್ತಡದಲ್ಲಿರುವಾಗ, ಶಾಂತಗೊಳ್ಳಲು ಇದು ತುಂಬಾ ಸಹಾಯಕವಾಗಿದೆ.
- ಮೂಗಿನ ಮೂಲಕ ಸಾಮಾನ್ಯವಾಗಿ ಉಸಿರಾಡಿ - ತೀರಾ ವೇಗವಾಗಿ ಅಲ್ಲ, ತೀರಾ ನಿಧಾನವಾಗಿ ಅಲ್ಲ, ತೀರಾ ಆಳವಾಗಿ ಅಲ್ಲ, ತೀರಾ ಹಗುರವಾಗಿಯೂ ಅಲ್ಲ
- ಈ ಎರಡರಲ್ಲಿ ಒಂದರ ಉಸಿರಾಟದ ಮೇಲೆ ಕೇಂದ್ರೀಕರಿಸಿ – ನಮಗೆ ನಿದ್ದೆ ಬರುವ ಹಾಗೆ ಆದಲ್ಲಿ, ನಮ್ಮ ಶಕ್ತಿಯನ್ನು ಹೆಚ್ಚಿಸುವಂತೆ ಸಹಾಯ ಮಾಡಲು ನಮ್ಮ ಮೂಗಿನೊಳಗೆ ಮತ್ತು ಹೊರಗೆ ಆಗುವ ಉಸಿರಾಟದ ಮೇಲೆ ಕೇಂದ್ರೀಕರಿಸಿ, ಅಥವಾ ನಮ್ಮ ಮನಸ್ಸು ಅಲೆದಾಡುತ್ತಿದ್ದರೆ, ಹೊಟ್ಟೆಯ ಸಂವೇದನೆಯ ಮೇಲೆ ಕೇಂದ್ರೀಕರಿಸಿ.
- ನಿಮ್ಮ ಉಸಿರಾಟದ ಬಗ್ಗೆ ಅರಿವಿರಲಿ, ಹತ್ತು ಉಸಿರಾಟದ ಒಳಗೆ ಮತ್ತು ಹೊರಗಿನ ಚಕ್ರಗಳನ್ನು ಎಣಿಸಿ - ಮನಸ್ಸು ಅಲೆದಾಡಿದಾಗ, ಅದರ ಗಮನವನ್ನು ನಿಧಾನವಾಗಿ ಉಸಿರಾಟದ ಕಡೆಗೆ ತಿರುಗಿಸಿ.
ಇಲ್ಲಿ ನಾವು ನಮ್ಮ ಮನಸ್ಸನ್ನು ನಿಷ್ಕ್ರಿಯಗೊಳಿಸುತ್ತಿಲ್ಲ. ಇದರ ನಿಜವಾದ ಉದ್ದೇಶವು, ನಮ್ಮ ಗಮನವು ದೂರ ಸರಿದಿರುವುದನ್ನು ಆದಷ್ಟು ಬೇಗ ಗುರುತಿಸಿ, ಅದನ್ನು ಮರಳಿ ತರುವುದಾಗಿದೆ; ಅಥವಾ, ನಾವು ಮಂದವಾಗಿ, ನಿದ್ರಾಹೀನರಾಗಲು ಪ್ರಾರಂಭಿಸಿದರೆ, ನಮ್ಮನ್ನು ಎಚ್ಚರಗೊಳಿಸುವುದಾಗಿದೆ. ಇದು ಅಷ್ಟು ಸುಲಭವಲ್ಲ! ನಮ್ಮ ದಡ್ಡತನ ಅಥವಾ ಮಾನಸಿಕ ಅಲೆದಾಟವನ್ನು ನಾವು ಅಷ್ಟಾಗಿ ಗಮನಿಸುವುದಿಲ್ಲ – ವಿಶೇಷವಾಗಿ ಇದು ಯಾವುದಾದರೂ ಗೊಂದಲಮಯ ಭಾವನೆಯು ಒಳಗೊಂಡಿದ್ದರೆ, ಉದಾರಣೆಗೆ, ನಾವು ಕೋಪಗೊಂಡವರ ಬಗ್ಗೆ ಯೋಚಿಸುತ್ತಿದ್ದರೆ. ಆದರೆ ಉಸಿರು ಯಾವಾಗಲೂ ಇರುತ್ತದೆ; ಇದು ನಾವು ಎಂದೆಂದಿಗೂ ನಮ್ಮ ಗಮನವನ್ನು ಮರಳಿ ತರಬಹುದಾದ ಸ್ಥಿರವಾದ ವಿಷಯವಾಗಿದೆ.
ಉಸಿರಾಟದ ಮೇಲಿನ ಧ್ಯಾನದ ಪ್ರಯೋಜನಗಳು
ಒತ್ತಡವನ್ನು ಎದುರಿಸಲು ಸಹಾಯ ಮಾಡುವುದರ ಹೊರತಾಗಿ, ಉಸಿರಾಟದ ಮೇಲಿನ ಧ್ಯಾನವು ಇತರ ಪ್ರಯೋಜನಗಳನ್ನು ಹೊಂದಿದೆ. ನಾವು ಯಾವಾಗಲೂ ನಮ್ಮದೇ ಆಲೋಚನೆಗಳಲ್ಲಿ ಕಳೆದುಹೋಗುವಂತಹವರಾಗಿದ್ದರೆ, ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ, ನಮ್ಮ ಮನಸ್ಸನ್ನು ಸ್ಥಿರಗೊಳಿಸಲು ಸಹಾಯಕವಾಗುತ್ತದೆ. ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ನಲ್ಲಿನ ಕೆಲವು ಆಸ್ಪತ್ರೆಗಳಲ್ಲಿ, ನೋವು ನಿರ್ವಹಣೆಗಾಗಿ ಉಸಿರಾಟದ ಧ್ಯಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದು ದೈಹಿಕ ನೋವನ್ನು ನಿವಾರಿಸುವುದಲ್ಲದೆ, ಭಾವನಾತ್ಮಕ ನೋವನ್ನು ಸಹ ಕಡಿಮೆ ಮಾಡುತ್ತದೆ.
ಇತರರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು
ನಾವು ಉಸಿರಾಟದ ಧ್ಯಾನದಿಂದ ನಮ್ಮ ಮನಸ್ಸನ್ನು ಶಾಂತಗೊಳಿಸಿದ ನಂತರ, ನಮ್ಮ ಮುಕ್ತ ಮತ್ತು ಎಚ್ಚರಿಕೆಯ ಸ್ಥಿತಿಯನ್ನು, ಇತರರಿಗಾಗಿ ಹೆಚ್ಚು ಪ್ರೀತಿಯನ್ನು ಬೆಳೆಸಿಕೊಳ್ಳಲು ಬಳಸಬಹುದು. ಆರಂಭದಲ್ಲಿ, "ಈಗ ನಾನು ಎಲ್ಲರನ್ನು ಪ್ರೀತಿಸುತ್ತೇನೆ" ಎಂದು ಕೇವಲ ಯೋಚಿಸುವುದರಿಂದ, ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಅದರ ಹಿಂದೆ ಯಾವುದೇ ಶಕ್ತಿ ಇರುವುದಿಲ್ಲ. ಪ್ರೀತಿಯ ಭಾವನೆಯನ್ನು ನಿರ್ಮಿಸಲು ನಾವು ತರ್ಕಬದ್ಧ ಚಿಂತನೆಯ ಪ್ರಕ್ರಿಯೆಯನ್ನು ಬಳಸುತ್ತೇವೆ:
- ಎಲ್ಲಾ ಜೀವಿಗಳು ಪರಸ್ಪರ ಸಂಬಂಧ ಹೊಂದಿವೆ, ಇಲ್ಲಿ ನಾವೆಲ್ಲರೂ ಒಂದಾಗಿ ಇದ್ದೇವೆ.
- ಸಂತೋಷವನ್ನು ಬಯಸುವುದರಲ್ಲಿ ಮತ್ತು ದುಃಖವನ್ನು ಬಯಸದೆ ಇರುವುದರಲ್ಲಿ ನಾವೆಲ್ಲರೂ ಒಂದೇ ಆಗಿದ್ದೇವೆ.
- ಎಲ್ಲರೂ, ಇತರರಿಂದ ಪ್ರೀತಿ ಸಿಗಬೇಕು ಎಂದು ಬಯಸುತ್ತಾರೆ; ಯಾರೂ ತಮ್ಮನ್ನು ಇಷ್ಟಪಡದೇ ಇರಬೇಕೆಂದು ಅಥವಾ ನಿರ್ಲಕ್ಷಿಸಬೇಕೆಂದು ಬಯಸುವುದಿಲ್ಲ.
- ನನ್ನನ್ನೂ ಒಳಗೊಂಡಂತೆ, ಎಲ್ಲಾ ಜೀವಿಗಳು ಒಂದೇ ಆಗಿವೆ.
ನಾವೆಲ್ಲರೂ ಪರಸ್ಪರ ಸಂಬಂಧ ಹೊಂದಿರುವುದರಿಂದ, ನಾವು ಹೀಗೆ ಭಾವಿಸುತ್ತೇವೆ:
- ಪ್ರತಿಯೊಬ್ಬರೂ ಸಂತೋಷವಾಗಿರಲಿ ಮತ್ತು ಸಂತೋಷಕ್ಕಾಗಿ ಕಾರಣಗಳನ್ನು ಹೊಂದಿರಲಿ. ಪ್ರತಿಯೊಬ್ಬರೂ ಸಂತೋಷವಾಗಿದ್ದರೆ ಮತ್ತು ಯಾವುದೇ ದುಃಖವನ್ನು ಅನುಭವಿಸದಿದ್ದರೆ ಅದು ಎಷ್ಟು ಅದ್ಭುತವಾಗಿರುತ್ತಿತ್ತು.
ನಾವು ಇದರ ಬಗ್ಗೆ ಆಲೋಚಿಸುತ್ತೇವೆ ಮತ್ತು ನಮ್ಮ ಹೃದಯದಲ್ಲಿ ಸೂರ್ಯನಂತೆ ಬೆಳಗುವ, ಬೆಚ್ಚಗಿನ, ಹಳದಿ ಬೆಳಕನ್ನು ಕಲ್ಪಿಸಿಕೊಳ್ಳುತ್ತೇವೆ, ಇದರ ಕಿರಣಗಳು, ಎಲ್ಲರಿಗಾಗಿ, ಪ್ರೀತಿಯಿಂದ, ಎಲ್ಲಾ ದಿಕ್ಕುಗಳಲ್ಲಿಯೂ ಹೊಳೆಯುತ್ತದೆ. ನಮ್ಮ ಗಮನವು ಅಲೆದಾಡಿದರೆ, ನಾವು ಅದನ್ನು "ಎಲ್ಲರೂ ಸಂತೋಷವಾಗಿರಲಿ" ಎಂಬ ಭಾವನೆಯತ್ತ ಮರಳಿಸುತ್ತೇವೆ.
ದೈನಂದಿನ ಜೀವನಕ್ಕಾಗಿ ಧ್ಯಾನ
ಈ ರೀತಿಯ ಧ್ಯಾನವನ್ನು ಅಭ್ಯಾಸ ಮಾಡಿದರೆ, ನಾವು ದೈನಂದಿನ ಜೀವನದಲ್ಲಿ ಬಳಸಬಹುದಾದ ಸಾಧನಗಳನ್ನು ಅಭಿವೃದ್ಧಿಪಡಿಸುತ್ತೇವೆ. ಇದರ ಅಂತಿಮ ಗುರಿಯು, ಇಡೀ ದಿನ ನಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದಾಗಿರುವುದಿಲ್ಲ, ಬದಲಿಗೆ ನಾವು ಬಯಸಿದಾಗ ಗಮನಹರಿಸುವಂತಹ ಕೌಶಲ್ಯವನ್ನು ಪಡೆಯುವುದಾಗಿದೆ. ನಾವು ಯಾರೊಂದಿಗಾದರೂ ಸಂಭಾಷಣೆಯನ್ನು ನಡೆಸುತ್ತಿರುವಾಗ, ನಾವು "ಇವರು ಯಾವಾಗ ಬಾಯಿ ಮುಚ್ಚುತ್ತಾರೆ?!" ಎಂದು ಯೋಚಿಸಿದರೆ, ನಮ್ಮ ಧ್ಯಾನದ ಅಭ್ಯಾಸವು ನಮಗೆ ಹೀಗೆ ಯೋಚಿಸಲು ಅನುವು ಮಾಡಿಕೊಡುತ್ತದೆ - "ಇವರು ನನ್ನಂತೆಯೇ ಒಬ್ಬ ಮನುಷ್ಯರಾಗಿದ್ದು, ಇವರೂ ಕೂಡ ಇತರರಿಂದ ಪ್ರೀತಿಯನ್ನು ಮತ್ತು ಇತರರು ತಮ್ಮ ಮಾತನ್ನು ಕೇಳಿಸಿಕೊಳ್ಳಬೇಕೆಂದು ಬಯಸುತ್ತಾರೆ." ಈ ರೀತಿಯಾಗಿ, ಧ್ಯಾನವು ನಮ್ಮ ವೈಯಕ್ತಿಕ ಜೀವನದಲ್ಲಿ ಮತ್ತು ಇತರರೊಂದಿಗಿನ ಸಂವಹನದಲ್ಲಿ ನಮಗೆ ಸಹಾಯ ಮಾಡುತ್ತದೆ.