ವಿವರಣೆ
ಅಶಾಶ್ವತತೆ ಎಂದರೆ ಬದಲಾವಣೆ: ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತರಾಗಿ, ವಿಷಯಗಳು ಎಂದಿಗೂ ಸ್ಥಿರವಾಗಿರುವುದಿಲ್ಲ, ಅವು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತವೆ. ಒಮ್ಮೆ ನಿರ್ಮಿತವಾದ ನಂತರ, ಕೆಲವುಗಳು - ನಿಮ್ಮ ಕಂಪ್ಯೂಟರ್, ನಿಮ್ಮ ಕಾರು ಅಥವಾ ನಿಮ್ಮ ದೇಹವು, ಕೊನೆಗೊಳ್ಳುವವರೆಗೆ ನಿಧಾನವಾಗಿ ಕ್ಷೀಣಿಸುತ್ತವೆ ಮತ್ತು ಕುಸಿಯುತ್ತವೆ. ಇತರ ವಿಷಯಗಳು ಸವೆದುಹೋಗದೆ, ಯಾವಾಗಲೂ ನವೀಕರಿಸಲ್ಪಟ್ಟಿರುವುದರಿಂದ, ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತವೆ, ಉದಾಹರಣೆಗೆ, ನಿಮ್ಮ ಮೂಲಭೂತ ಮಾನಸಿಕ ಚಟುವಟಿಕೆ - ಮಗುವಾಗಿರುವಾಗ, ಸಕ್ರಿಯ ವಯಸ್ಕರಾಗಿರುವಾಗ ಅಥವಾ ಆಲ್ಝೈಮರ್ನ ವಯಸ್ಸಾದ ರೋಗಿಯಾಗಿದ್ದರೂ, ಅದು ಸವೆಯುವುದಿಲ್ಲ. ತಾಪಮಾನ ಅಥವಾ ನಿಮ್ಮ ಧ್ಯಾನದ ಗುಣಮಟ್ಟದಂತಹ ಕೆಲವು ವಿಷಯಗಳಲ್ಲಿ ಏರಿಳಿತವಾಗುತ್ತಿರುತ್ತದೆ; ಇನ್ನುಳಿದವು, ವಿಮಾನದಲ್ಲಿ ಹಾರಾಡುವ ಜನರಂತೆ, ಒಟ್ಟುಗೂಡಿ ನಂತರ ಪಸರಿಸುತ್ತವೆ. ಕೆಲವು ವಿಷಯಗಳು ಋತುಗಳು ಅಥವಾ ಹಗಲು ರಾತ್ರಿಯ ಚಕ್ರದಂತಹ ಪುನರಾವರ್ತಿತ ಚಕ್ರಗಳನ್ನು ಅನುಸರಿಸುತ್ತವೆ ಮತ್ತು ಇನ್ನೂ ಕೆಲವು, ಬೌದ್ಧರ ದೃಷ್ಟಿಕೋನದ ಪ್ರಕಾರದ ಬ್ರಹ್ಮಾಂಡಗಳಂತೆ ಪುನರಾವರ್ತಿತವಾಗಿ ಉದ್ಭವಿಸುತ್ತವೆ, ಅನುಭವಿಸುತ್ತವೆ ಮತ್ತು ಅಂತ್ಯಗೊಳ್ಳುತ್ತವೆ. ಹೀಗೆ ಹಲವಾರು ರೀತಿಯ ಅಶಾಶ್ವತತೆಗಳಿವೆ.
ದುರದೃಷ್ಟವಶಾತ್, ನಮ್ಮ ಮನಸ್ಸು, ಒಂದೇ ಕ್ಷಣದಲ್ಲಿ ಸಮಯದ ವಿಸ್ತಾರವನ್ನು ಗ್ರಹಿಸದ ಕಾರಣ, ನಾವು ಗೊಂದಲಕ್ಕೊಳಗೊಂಡು, ನಮ್ಮ ಸಂಬಂಧಗಳು, ನಮ್ಮ ಯೌವನ, ನಮ್ಮ ಮನಸ್ಥಿತಿ ಮತ್ತು ಮುಂತಾದವುಗಳು ಸ್ಥಿರವಾಗಿರುತ್ತವೆ ಮತ್ತು ಎಂದಿಗೂ ಬದಲಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಹಾಗೆ ಯೋಚಿಸಿದಾಗ ನಮಗೆ ನಾವೇ ಅತೃಪ್ತಿ ಮತ್ತು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಉದಾಹರಣೆಗೆ, ನಾವು ಒಬ್ಬರೊಂದಿಗೆ ಪ್ರೀತಿಯಿಂದ ಕೂಡಿದ ಸಂಬಂಧದಲ್ಲಿದ್ದೇವೆ. ಈ ಸಂಬಂಧವು ಹಲವು ಕಾರಣಗಳು ಮತ್ತು ಸಂದರ್ಭಗಳಿಂದ ಹುಟ್ಟಿಕೊಂಡಿತು - ನಾವಿಬ್ಬರೂ ಒಂದೇ ಸ್ಥಳದಲ್ಲಿದ್ದೆವು, ನಾವಿಬ್ಬರೂ ಸಂಗಾತಿಯನ್ನು ಹುಡುಕುತ್ತಿದ್ದೆವು, ನಮ್ಮಿಬ್ಬರ ಜೀವನದಲ್ಲಿ ಇತರ ಕೆಲವು ಸಂಬಂಧಿತ ಘಟನೆಗಳು ನಡೆಯುತ್ತಿದ್ದವು. ಆದರೆ, ಕಾಲಕ್ರಮೇಣ ಆ ಪರಿಸ್ಥಿತಿಗಳು ಬದಲಾದವು. ಪ್ರಾರಂಭದಲ್ಲಿ ಮತ್ತು ಆರಂಭಿಕ ಹಂತಗಳಲ್ಲಿ, ನಮ್ಮಿಬ್ಬರ ನಡುವೆಯಿದ್ದ ಸಂಬಂಧದ ಪ್ರಕಾರವನ್ನೇ ನಾವು ಹಿಡಿದಿಟ್ಟುಕೊಂಡರೆ, ನಮ್ಮ ಸಂಗಾತಿಗಳು ಉದ್ಯೋಗಗಳನ್ನು ಬದಲಾಯಿಸಿದಾಗ ಅಥವಾ ಬೇರೆ ನಗರಕ್ಕೆ ಹೋದಾಗ ಅಥವಾ ಅತಿಥಿಗಳನ್ನು ಬರಮಾಡಿಕೊಂಡಾಗ ಅಥವಾ ಹೊಸ ಸ್ನೇಹಿತರನ್ನು ಮಾಡಿಕೊಂಡಾಗ ಅಥವಾ ಈ ರೀತಿಯ ಏನಾದರೂ ನಮ್ಮ ಜೀವನದಲ್ಲಿ ಸಂಭವಿಸಿದಾಗ, ನಮ್ಮ ಸಂಬಂಧವನ್ನು ಸರಿಹೊಂದಿಸಲು ನಮಗೆ ಸಾಧ್ಯವಾಗುವುದಿಲ್ಲ. ಮೊದಲಿದ್ದ ನಮ್ಮ ಸಂಬಂಧದ ರೀತಿಗೆ ನಾವು ಅಂಟಿಕೊಳ್ಳುತ್ತೇವೆ ಮತ್ತು ಅದು ವಾಸ್ತವಕ್ಕೆ ಹೋಲಿಕೆ ಹೊಂದಿಲ್ಲದ ಕಾರಣ, ನಾವು ಬಳಲುತ್ತೇವೆ ಮತ್ತು ಅತೃಪ್ತರಾಗುತ್ತೇವೆ.
ನಮ್ಮ ಧ್ಯಾನಕ್ಕಾಗಿ, ನಮ್ಮ ಜೀವನದಲ್ಲಿ ಅಶಾಶ್ವತತೆಗೆ ಒಳಪಟ್ಟಿರುವ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸೋಣ ಮತ್ತು ಅವು ಬದಲಾಗಿವೆ ಮತ್ತು ಸಮಯ ಕಳೆದಂತೆ ಬದಲಾಗುತ್ತಲೇ ಇರುತ್ತವೆ ಮತ್ತು ಅಂತಿಮವಾಗಿ ಅಂತ್ಯಗೊಳ್ಳುತ್ತವೆ ಎಂಬ ಅರಿವಿನೊಂದಿಗೆ ಅವುಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸೋಣ.
ಧ್ಯಾನ
- ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ.
- ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಕೇಂದ್ರೀಕರಿಸಿ.
- ಅದು ಹೇಗೆ ಪ್ರಾರಂಭವಾಯಿತು ಎಂಬುದನ್ನು ಗಮನಿಸಿ - ನೀವು ಶಿಶುವಾಗಿರುವಾಗ ಅದು ಪ್ರಾರಂಭವಾಗಿ, ನಿಮ್ಮ ಸಂಬಂಧವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಪ್ರಭಾವಿಸಿರುತ್ತದೆ.
- ನಂತರ ನೀವು ಮತ್ತು ನಿಮ್ಮ ತಾಯಿ ಬೆಳೆದಿರಿ ಮತ್ತು ನೀವು ಮಗುವಾಗಿದ್ದಾಗ, ಹದಿಹರೆಯದವರಾಗಿದ್ದಾಗ ಮತ್ತು ನಂತರ ವಯಸ್ಕರಾದಾಗ, ಮತ್ತು ಅವರಿಗೆ ವಯಸ್ಸಾದಾಗ, ನಿಮ್ಮ ಸಂಬಂಧವು ಬದಲಾಗುತ್ತಿರುತ್ತದೆ – ಅಥವಾ ಇಲ್ಲವೇ?
- ಅವರು ಅಸುನೀಗಿದಾಗ ಅಥವಾ ಅವರು ಈಗಾಗಲೇ ಅಸುನೀಗಿದ್ದಲ್ಲಿ, ನಿಮ್ಮ ಸಂವಾದಾತ್ಮಕ ಸಂಬಂಧವು ಕೊನೆಗೊಂಡಿದ್ದರೂ, ನಿಮ್ಮ ವರ್ತನೆ ಮತ್ತು ಅವರ ಸ್ಮರಣೆಯು ಹೇಗೆ ಬದಲಾಗಿದೆ ಮತ್ತು ಬದಲಾಗುತ್ತಲೇ ಇರುತ್ತದೆ ಎಂಬುದನ್ನು ಗಮನಿಸಿ.
- ಅದೇ ರೀತಿಯಲ್ಲಿ ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಕೇಂದ್ರೀಕರಿಸಿ.
- ನಿಮ್ಮ ಪ್ರೀತಿಪಾತ್ರರಾದ ನಿಮ್ಮ ಸಂಗಾತಿಯೊಬ್ಬರ ಮೇಲೆ ಅಥವಾ ಪ್ರೀತಿಸಿದ ಸಂಗಾತಿಯೊಬ್ಬರ ಸಂಬಂಧದ ಮೇಲೆ ಕೇಂದ್ರೀಕರಿಸಿ.
- ನಿಮ್ಮ ವೃತ್ತಿಪರ ಜೀವನದ ಮೇಲೆ ಕೇಂದ್ರೀಕರಿಸಿ.
ಸಾರಾಂಶ
ಅಶಾಶ್ವತತೆ ಜೀವನದ ಸತ್ಯವಾಗಿದೆ. ನಾವು ಇಷ್ಟಪಡುತ್ತೇವೆಯೋ ಇಲ್ಲವೋ, ಎಲ್ಲವೂ ಸಾರ್ವಕಾಲಿಕ ಬದಲಾಗುತ್ತದೆ ಮತ್ತು ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲ. ಈ ವಾಸ್ತವವನ್ನು ನಾವು ಒಪ್ಪಿಕೊಂಡಾಗ, ಎಲ್ಲವೂ ಶಾಶ್ವತವಾಗಿರುತ್ತದೆವೆಂಬಂತೆ ಅದಕ್ಕೆ ಅಂಟಿಕೊಳ್ಳುವುದು ನಿರರ್ಥಕ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಜೀವನದಲ್ಲಿ, ನಮ್ಮ ಸಂಬಂಧಗಳಲ್ಲಿ, ನಮ್ಮ ದೇಹಗಳಲ್ಲಿ ಮತ್ತು ಮುಂತಾದವುಗಳಲ್ಲಿ ಅನಿವಾರ್ಯವಾಗಿ ಸಂಭವಿಸುವ ಬದಲಾವಣೆಗಳಿಗೆ ನಾವು ಹೊಂದಿಕೊಳ್ಳಲು ಸಾಧ್ಯವಾದಾಗ, ನಾವು ಎದುರಿಸಬಹುದಾದ ಹೆಚ್ಚಿನ ಅಸಂತೋಷ ಮತ್ತು ಸಮಸ್ಯೆಗಳನ್ನು ನಾವು ತಪ್ಪಿಸಬಹುದು.