ಇತರರನ್ನು ಕ್ಷಮಿಸುವುದು

ನಾವು ಒಬ್ಬರ ಅಪರಾಧ ಅಥವಾ ತಪ್ಪಿನ ಬದಲು, ಒಬ್ಬ ವ್ಯಕ್ತಿಯ ಕಡೆಗೆ ಗಮನ ಹರಿಸಿದಾಗ, ಅವರು ಅಸಮಾಧಾನ ಅಥವಾ ಗೊಂದಲಕ್ಕೊಳಗಾಗಿದ್ದಾರೆಂದು ತಿಳಿದುಕೊಂಡಾಗ, ನಾವು ಕೋಪಗೊಳ್ಳುವುದನ್ನು ನಿಲ್ಲಿಸಿ, ಸಹಾನುಭೂತಿಯಿಂದ, ಅವರನ್ನು ಕ್ಷಮಿಸುತ್ತೇವೆ.
Meditation forgiving others 1

ವಿವರಣೆ

ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ, ಕ್ಷಮೆ ಎಂದರೆ ಇತರರ ಅಪರಾಧ, ನ್ಯೂನತೆ ಅಥವಾ ತಪ್ಪಿಗಾಗಿ ಕೋಪ ಅಥವಾ ಅಸಮಾಧಾನವನ್ನು ಅನುಭವಿಸುವುದನ್ನು ನಿಲ್ಲಿಸುವುದು. ಕೆಲವರಿಗೆ, ಇದರ ಹೆಚ್ಚುವರಿ ಅರ್ಥವು, ನೊಂದ ವ್ಯಕ್ತಿಯು ಅಥವಾ ಒಬ್ಬ ಉನ್ನತ ಮಟ್ಟದಲ್ಲಿರುವವರೊಬ್ಬರು ಕ್ಷಮಾಪಣೆ ನೀಡುವುದಾಗಿರುತ್ತದೆ, ಇದು ಅಪರಾಧಿಯನ್ನು ಅವರ ಕೃತ್ಯಗಳಿಗಿರುವ ಎಲ್ಲಾ ರೀತಿಯ ಶಿಕ್ಷೆಯಿಂದ ಮುಕ್ತಗೊಳಿಸುತ್ತದೆ. 

ಮಾನಸಿಕ ಅಂಶಗಳ ಬಗ್ಗೆಗಿರುವ ಬೌದ್ಧ ವಿಶ್ಲೇಷಣೆಯು ಕ್ಷಮಾಪಣೆಯ ಪದವನ್ನು ಅಭಿವ್ಯಕ್ತವಾಗಿ ಒಳಗೊಂಡಿಲ್ಲವಾದರೂ, ಕೋಪ, ಅಪ್ರಸನ್ನತೆ (ಇದು ದ್ವೇಷವನ್ನು ಹಿಡಿದಿಟ್ಟುಕೊಳ್ಳುವುದನ್ನು ಒಳಗೊಂಡಿರುತ್ತದೆ) ಮತ್ತು ಅವುಗಳ ವಿರೋಧಿಗಳನ್ನು ಒಳಗೊಂಡಿರುತ್ತದೆ, ಅವುಗಳೆಂದರೆ ಕೋಪಗೊಳ್ಳದಿರುವುದು ಮತ್ತು ಕ್ರೂರವಾಗದಿರುವುದು.

 • ಕೋಪಗೊಳ್ಳದಿರುವುದು ಎಂದರೆ ಪ್ರತೀಕಾರದ ಭಾವನೆಯನ್ನು ಹೊಂದದಿರುವುದು ಮತ್ತು ನಮಗೆ ಅಥವಾ ಇತರರಿಗೆ ನಮ್ಮ ಪ್ರತೀಕಾರದ ಕ್ರಿಯೆಗಳಿಂದ ಹಾನಿಯನ್ನುಂಟುಮಾಡದಿರುವುದು.
 • ಕ್ರೂರವಾಗದಿರುವುದು ಈ ಮೇಲಿನ ಸಹಾನುಭೂತಿಯ ಭಾವನೆಯನ್ನು ಹೆಚ್ಚಿಸುತ್ತದೆ, ಇದು ಅವರು ತಮ್ಮ ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಬೇಕೆಂಬ ಬಯಕೆಯಾಗಿರುತ್ತದೆ.

ಆದ್ದರಿಂದ, ಬೌದ್ಧ ದೃಷ್ಟಿಕೋನದಿಂದ, ನಮ್ಮ ಹಾನಿಕಾರಕ ಕ್ರಿಯೆಗಳ ಪರಿಣಾಮವಾಗಿ ನಾವು ಅಥವಾ ಇತರರು ಯಾವುದೇ ರೀತಿಯ ದುಃಖವನ್ನು ಅನುಭವಿಸಬಾರದು ಎಂದು ನಾವು ಬಯಸುತ್ತೇವೆ. ಆದರೆ ಒಬ್ಬರ ದುಷ್ಕೃತ್ಯಗಳ ಕರ್ಮದ ಪರಿಣಾಮಗಳಿಂದ ಅವರನ್ನು ಕ್ಷಮಿಸುವ ಅಧಿಕಾರವು ಯಾರಿಗೂ ಇರುವುದಿಲ್ಲ, ಆದ್ದರಿಂದ ಅಪರಾಧಿಗಳನ್ನು ಕ್ಷಮಿಸುವಾಗ, ನಾವು ಎಲ್ಲರಿಗಿಂತ ಪವಿತ್ರವಾದ ಒಬ್ಬ ಪಾದ್ರಿಯಂತೆ ಅಥವಾ ನ್ಯಾಯಾಧೀಶರಂತೆ ಎಂದು ಯೋಚಿಸುವ ಸೊಕ್ಕಿನ ಭಾವನೆಯನ್ನು ಬೆಳೆಸಿಕೊಳ್ಳುವ ಭಯವಿರುವುದಿಲ್ಲ. 

ಬೌದ್ಧ ವಿಧಾನದಲ್ಲಿನ ಕ್ಷಮೆಯ ಮುಖ್ಯ ಅಂಶವು, ಒಬ್ಬ ವ್ಯಕ್ತಿಯನ್ನು – ಅದು ಬೇರೊಬ್ಬರಾಗಿರಬಹುದು ಅಥವಾ ನಾವೇ ಆಗಿರಬಹುದು - ಅವರ ಹಾನಿಕಾರಕ ಅಥವಾ ವಿನಾಶಕಾರಿ ಕ್ರಿಯೆಗಳಿಂದ ಅಥವಾ ಅವರ ತಪ್ಪುಗಳಿಂದ ಪ್ರತ್ಯೇಕಿಸುವುದಾಗಿರುತ್ತದೆ. ನೆನಪಿಡಿ, ನಾವು ವಿನಾಶಕಾರಿಯಾಗಿ ವರ್ತಿಸಿ, ತಪ್ಪುಗಳನ್ನು ಮಾಡುವುದರ ಕಾರಣ ನಾವು ಕೆಟ್ಟವರಾಗಿರುತ್ತೇವೆ ಎಂದಲ್ಲ, ಬದಲಿಗೆ ನಮಗೆ ಪ್ರಾಯೋಗಿಕ ಕಾರಣ ಮತ್ತು ಪರಿಣಾಮದ ಬಗ್ಗೆ ಮತ್ತು ವಾಸ್ತವದ ಬಗ್ಗೆ ಗೊಂದಲವಿರುವುದರಿಂದ ಮತ್ತು ನಮ್ಮ ತಿಳುವಳಿಕೆಯು ಸೀಮಿತವಾಗಿರುವುದರಿಂದ ನಾವು ತಪ್ಪುಗಳನ್ನು ಮಾಡುತ್ತೇವೆ. ನಾವು ಅನಿಯಂತ್ರಿತವಾಗಿ ಮರುಕಳಿಸುವ ಗೊಂದಲ ಮತ್ತು ಸಮಸ್ಯೆಗಳಿರುವ ಸೀಮಿತವಾದ ಸಂಸಾರಿಕ ಜೀವಿಗಳು, ಆದ್ದರಿಂದ ಸಹಾನುಭೂತಿಯನ್ನು ಪಡೆಯಬಲ್ಲ ಸೂಕ್ತ ಜೀವಿಗಳು. ನಾವು ನಮಗಾಗಿಯೇ ಸಾಕಷ್ಟು ಹಾನಿ ಮತ್ತು ದುಃಖವನ್ನು ಹುಟ್ಟಿಸಿಕೊಳ್ಳುತ್ತೇವೆ, ಅದಕ್ಕೆ ಇನ್ನೂ ಹೆಚ್ಚಿನ ನೋವನ್ನು ಸೇರಿಸುವ ಅಗತ್ಯವಿಲ್ಲ. 

ಆದ್ದರಿಂದ, ಬೌದ್ಧ ಧರ್ಮದಲ್ಲಿ ಕ್ಷಮೆ ಎಂದರೆ: 

 • ಕೃತ್ಯದಿಂದ ವ್ಯಕ್ತಿಯನ್ನು ಪ್ರತ್ಯೇಕಿಸುವುದು – ಅದು ಬೇರೆಯವರಾಗಲಿ ಅಥವಾ ನಾವೇ ಆಗಿರಲಿ 
 • ನಮ್ಮ ಮೇಲೆ ಅಥವಾ ಅವರ ಮೇಲೆ ಕೋಪಗೊಳ್ಳದಿರುವುದು ಅಥವಾ ಕ್ರೂರಿಯಾಗದಿರುವುದು, ಬದಲಿಗೆ, 
 • ನಾವು ಅಥವಾ ಅವರು ವಿನಾಶಕಾರಿಯಾಗಿ ವರ್ತಿಸಲು ಅಥವಾ ತಪ್ಪು ಮಾಡಲು ಇರುವ ಯಾವುದೇ ಕಾರಣದಿಂದ ಮುಕ್ತರಾಗಬೇಕು ಎಂಬ ಆಶಯದೊಂದಿಗೆ ಸಹಾನುಭೂತಿಯನ್ನು ಅನುಭವಿಸುವುದು. 

ಆದರೆ ಹಾನಿಕಾರಕ ನಡವಳಿಕೆ ಅಥವಾ ತಪ್ಪಾದಾಗ, ನಾವು ಏನೂ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮತ್ತಷ್ಟು ವಿನಾಶಕಾರಿ ನಡವಳಿಕೆಯನ್ನು ನಿಲ್ಲಿಸಲು ಮತ್ತು ತಪ್ಪುಗಳನ್ನು ಸರಿಪಡಿಸಲು ನಾವು ಸರಿಹೊಂದುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ – ಆದರೆ ಇದನ್ನು ಕೋಪ ಅಥವಾ ದ್ವೇಷವನ್ನು ಇಟ್ಟುಕೊಳ್ಳದೆ ಅಥವಾ ನಾವು ಅವರನ್ನು ಕ್ಷಮಿಸುತ್ತಿದ್ದೇವೆ ಎಂಬ ಅಹಂಕಾರದ ಭಾವನೆಯಿಲ್ಲದೆ ಮಾಡುತ್ತೇವೆ. 

ಧ್ಯಾನ 

ನಾವು ಇತರರಿಗಾಗಿ ಮತ್ತು ನಮಗಾಗಿ ಕ್ಷಮೆಯನ್ನು ಬೆಳೆಸಿಕೊಳ್ಳಬೇಕು, ಇಂದು ನಾವು ಇತರರ ಮೇಲೆ ಕೇಂದ್ರೀಕರಿಸೋಣ. ಮುಂದಿನ ಬಾರಿ, ನಮ್ಮ ಮೇಲೆ ಕೇಂದ್ರೀಕರಿಸೋಣ. 

 • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
 • ನಿಮ್ಮನ್ನು ನೋಯಿಸುವ ಅಥವಾ ನಿಮಗೆ ಕಿರಿಕಿರಿಯುಂಟುಮಾಡುವ ಹಾಗೆ ಯಾರಾದರೂ ಏನಾದರೂ ಮಾಡಿದನ್ನು ನೆನಪಿಸಿಕೊಳ್ಳಿ, ನೀವು ಇದರಿಂದ ಕೋಪಗೊಂಡು, ಅಪ್ರಸನ್ನತೆಯನ್ನು ಅನುಭವಿಸಿದಿರಿ, ಬಹುಶಃ ದ್ವೇಷವನ್ನು ಸಹ ಹೊಂದಿದ್ದೀರಿ, ಇದರಿಂದಾಗಿ ಅವರ ಕೃತ್ಯದ ಬಗ್ಗೆ ನೀವು ಅನಂತರವೂ ಯೋಚಿಸುತ್ತಾ, ಅವರು ಬಗ್ಗೆ ಕೋಪಗೊಂಡು, ಅಪ್ರಸನ್ನರಾಗಿರುವಿರಿ. 
 • ನಿಮ್ಮಲ್ಲಿ ಉಂಟಾದ ಭಾವನೆಯನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಈ ರೀತಿಯ ಭಾವನೆಯು ಸಂತೋಷವಾದ ಅಥವಾ ಆರಾಮದಾಯಕ ಮನಸ್ಸಿನ ಸ್ಥಿತಿಯಲ್ಲ ಎಂಬುದನ್ನು ಗಮನಿಸಿ. 
 • ಈಗ, ನಿಮ್ಮ ಮನಸ್ಸಿನಲ್ಲಿ ಆ ವ್ಯಕ್ತಿಯನ್ನು ಅವರ ಕೃತ್ಯದಿಂದ ಪ್ರತ್ಯೇಕಿಸಲು ಪ್ರಯತ್ನಿಸಿ. ಇದು ಅನೇಕ ಬಾರಿ ಸಂಭವಿಸಿದರೂ, ಅವರ ಇಡೀ ಜೀವನದಲ್ಲಿ, ಇದು ಕೇವಲ ಒಂದು ಘಟನೆಯಾಗಿದೆ. 
 • ಆ ವ್ಯಕ್ತಿಯು, ನನ್ನಂತೆ, ಎಲ್ಲರಂತೆ, ಸಂತೋಷವಾಗಿರಲು ಬಯಸುತ್ತಿದ್ದರು, ದುಃಖವನ್ನಲ್ಲ, ಆದರೆ ಅವರು ಯಾವುದು ಸಂತೋಷವನ್ನು ತರುತ್ತದೆ ಎಂಬುದರ ಕುರಿತು ಗೊಂದಲಕ್ಕೊಳಗಾಗಿ, ದುಃಖದಿಂದ, ನಂತರ ಅರಿವಿಲ್ಲದೆ ಮತ್ತು ಅಜ್ಞಾನದಿಂದ, ನಿಮ್ಮನ್ನು ನೋಯಿಸುವ ಮೂಲಕ ಅಥವಾ ನಿಮ್ಮಲ್ಲಿ ಸಿಟ್ಟೇರಿಸುವ ಮೂಲಕ ವಿನಾಶಕಾರಿಯಾಗಿ ವರ್ತಿಸಿದರು. 
 • ಈ ತಿಳುವಳಿಕೆಯ ಮೇಲೆ ನೀವು ಎಷ್ಟು ಹೆಚ್ಚು ಗಮನಹರಿಸುತ್ತೀರೋ ಅಷ್ಟೇ ನಿಮ್ಮ ಕೋಪ ಮತ್ತು ಅಪ್ರಸನ್ನತೆಯು ಕಡಿಮೆಯಾಗುತ್ತದೆ ಎಂಬುದನ್ನು ಗಮನಿಸಿ. 
 • ಅವರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳಿ, ಅವರು ನಿಮ್ಮನ್ನು ನೋಯಿಸಲು ಅಥವಾ ನಿಮಗೆ ಕಿರಿಕಿರಿ ಉಂಟುಮಾಡಲು ಕಾರಣವಾದ ಗೊಂದಲ ಮತ್ತು ದುಃಖದಿಂದ ಮುಕ್ತರಾಗಲಿ ಎಂದು ಆಶಿಸಿ. 
 • ಕೆಲವು ಸೂಕ್ತ ಸಮಯದಲ್ಲಿ, ನೀವು ಶಾಂತರಾಗಿರುವಾಗ ಮತ್ತು ಅವರು ಕೇಳಿಸಿಕೊಳ್ಳುವಂತೆ ಇರುವಾಗ, ಅವರು ನಿಮಗೆ ನೋವುಂಟುಮಾಡಿದ್ದರ ಬಗ್ಗೆ ಮಾತನಾಡಿ ಮತ್ತು ಆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ. 

ತಪ್ಪು ಮಾಡಿದ ವ್ಯಕ್ತಿಯೊಂದಿಗೂ ಇದನ್ನು ಪುನರಾವರ್ತಿಸಿ: 

 • ಅವರು ಮಾಡಿದ ತಪ್ಪನ್ನು ಮತ್ತು ನೀವು ಅವರ ಬಗ್ಗೆ ಹೇಗೆ ಕೋಪಗೊಂಡಿರಿ ಎಂಬುದನ್ನು ನೆನಪಿಸಿಕೊಳ್ಳಿ. 
 • ನಿಮ್ಮಲ್ಲಿ ಉಂಟಾದ ಭಾವನೆಯನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಈ ಭಾವನೆಯು ಸಂತೋಷವಾದ ಅಥವಾ ಆರಾಮದಾಯಕ ಮನಸ್ಸಿನ ಸ್ಥಿತಿಯಾಗಿರಲಿಲ್ಲ ಎಂಬುದನ್ನು ಗಮನಿಸಿ. 
 • ಈಗ, ನಿಮ್ಮ ಮನಸ್ಸಿನಲ್ಲಿ ಆ ವ್ಯಕ್ತಿಯನ್ನು ಅವರು ಮಾಡಿದ ತಪ್ಪಿನಿಂದ ಪ್ರತ್ಯೇಕಿಸಲು ಪ್ರಯತ್ನಿಸಿ. 
 • ಆ ವ್ಯಕ್ತಿಯು, ನನ್ನಂತೆಯೇ, ಎಲ್ಲರಂತೆ, ಸಹಾಯ ಮಾಡಲು ಬಯಸುವರು ತಪ್ಪನ್ನಲ್ಲ, ಆದರೆ ಸಹಾಯಮಾಡುವುದರ ಅಥವಾ ಕಾರ್ಯನಿರ್ವಹಿಸುವ ಅತ್ಯುತ್ತಮವಾದ ಮಾರ್ಗದ ಕುರಿತು ಗೊಂದಲಕ್ಕೊಳಗಾಗಿರಬಹುದು, ಅಥವಾ ಬಹುಶಃ ಗಮನ ಹರಿಸದಿರಬಹುದು, ಅಥವಾ ಸೋಮಾರಿಯಾಗಿರಬಹುದು, ಅದೇನೇ ಆಗಿದ್ದರೂ ಅಜ್ಞಾನ ಮತ್ತು ಗೊಂದಲದ ಭಾವನೆಗಳಿಂದ ಅವರು ತಪ್ಪು ಮಾಡಿದರು. ಅವರು ಸೀಮಿತ ಸಂಸಾರಿಕ ಜೀವಿಗಳು, ಆದ್ದರಿಂದ ಅವರು ಯಾವಾಗಲೂ ನಿಷ್ಕಳಂಕವಾಗಿ, ಎಂದಿಗೂ ತಪ್ಪು ಮಾಡದಿರುವಂತೆ ನಿರೀಕ್ಷಿಸುವುದು ಅವಾಸ್ತವಿಕವಾಗಿರುತ್ತದೆ.
 • ಈ ತಿಳುವಳಿಕೆಯ ಮೇಲೆ ನೀವು ಎಷ್ಟು ಹೆಚ್ಚು ಗಮನಹರಿಸುತ್ತೀರೋ, ಅಷ್ಟೇ ನಿಮ್ಮ ಕೋಪವು ಕಡಿಮೆಯಾಗುತ್ತದೆ ಎಂಬುದನ್ನು ಗಮನಿಸಿ. 
 • ಅವರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳಿ, ಅವರು ತಪ್ಪು ಮಾಡಲು ಕಾರಣವಾದ ಗೊಂದಲ, ಅಜ್ಞಾನ ಮತ್ತು ಪರದಾಟದ ಭಾವನೆಗಳಿಂದ ಮುಕ್ತರಾಗಲಿ ಎಂದು ಆಶಿಸಿ. 
 • ಒಂದು ಸೂಕ್ತ ಸಮಯದಲ್ಲಿ, ನೀವು ಶಾಂತರಾಗಿರುವಾಗ ಮತ್ತು ಅವರು ಕೇಳಿಸಿಕೊಳ್ಳುವಂತೆ ಇರುವಾಗ, ನೀವು ಅವರ ತಪ್ಪನ್ನು ತೋರಿಸಿ, ಅದನ್ನು ಸರಿಪಡಿಸಲು ಅವರಿಗೆ ಸಹಾಯ ಮಾಡುತ್ತೀರಿ ಎಂದು ನಿರ್ಣಯಿಸಿ. 

ಸಾರಾಂಶ 

ಕ್ಷಮೆ ಎಂದರೆ ಒಬ್ಬರಿಗೆ ಅವರ ವಿನಾಶಕಾರಿ ನಡವಳಿಕೆಗಾಗಿ ಅಥವಾ ಅವರ ತಪ್ಪುಗಳಿಗಾಗಿ ಕ್ಷಮಾಪಣೆ ನೀಡುವುದೆಂದಲ್ಲ, ನಾವು ಅವರಿಗಿಂತ ಹೆಚ್ಚು ಪವಿತ್ರರಾದಂತೆ ಅಥವಾ ಅವರಿಗಿಂತ ಹೆಚ್ಚು ಪರಿಪೂರ್ಣ ಜೀವಿ ಎಂಬಂತೆ, ಅವರು ನಮಗಿಂತ ಕೆಟ್ಟವರೆಂದು ನಾವು ಅಧಿಕಾರದ ಅಹಂಕಾರದಿಂದ, ಅವರು ಪಶ್ಚಾತ್ತಾಪ ಪಡದಿದ್ದರೂ ಅವರನ್ನು ಕ್ಷಮಿಸುವುದಾಗಿರುವುದಿಲ್ಲ. ಕ್ಷಮೆ ಎಂದರೆ ಕೋಪಗೊಳ್ಳದಿರುವುದು, ಅಪ್ರಸನ್ನತೆಯನ್ನು ಅನುಭವಿಸದಿರುವುದು ಮತ್ತು ದ್ವೇಷವನ್ನು ಇಟ್ಟುಕೊಳ್ಳದಿರುವುದು ಮತ್ತು ಸೇಡು ತೀರಿಸಿಕೊಳ್ಳಲು ಬಯಸದೇ ಇರುವುದು. ನಾವು ಆ ವ್ಯಕ್ತಿಯನ್ನು ಅವರ ಕೃತ್ಯ ಅಥವಾ ತಪ್ಪಿನಿಂದ ಪ್ರತ್ಯೇಕಿಸುತ್ತೇವೆ, ಆ ವ್ಯಕ್ತಿಯ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಅವರ ಕಾರ್ಯವನ್ನು ಸರಿಪಡಿಸಲು ಅಥವಾ ಅವರ ತಪ್ಪನ್ನು ಪುನರಾವರ್ತಿಸದಂತೆ ಸಹಾಯ ಮಾಡಲು ಕ್ರಮಗಳನ್ನು ಕೈತೆಗೆದುಕೊಳ್ಳುತ್ತೇವೆ. ಈ ರೀತಿಯಾಗಿ, ಕೋಪವು ನಮ್ಮಲ್ಲಿ ಉಂಟುಮಾಡುವ ಅಪಾಯಗಳು ಮತ್ತು ದುಃಖವನ್ನು ನಾವು ತಪ್ಪಿಸುತ್ತೇವೆ, ವಿಶೇಷವಾಗಿ ಇದು ಕೋಪದ ಆಲೋಚನೆಗಳು, ಆಕ್ರಮಣಕಾರಿ, ಪ್ರತಿಕೂಲವಾದ ಮಾತುಗಳಿಗೆ ಮತ್ತು ಕೋಪಗೊಂಡ, ಅಜಾಗರೂಕ ವರ್ತನೆಗೆ ಕಾರಣವಾಗಬಹುದಾದ್ದರಿಂದ ನಾವು ಇದನ್ನು ತಪ್ಪಿಸುತ್ತೇವೆ.

Top