Arrow left ಹಿಂದೆ
ಧ್ಯಾನಗಳು
ಲೇಖನ 13 ರಲ್ಲಿ 13

ಅಪರಾಧಿ ಪ್ರಜ್ನೆಯನ್ನು ಹೋಗಲಾಡಿಸುವುದು

ನಮ್ಮ ದೋಷ ಅಥವಾ ತಪ್ಪುಗಳನ್ನು, ನಮ್ಮ ಸಂಪೂರ್ಣ ಜೀವನದ ಯಥಾದೃಷ್ಟಿಯಲ್ಲಿ ಗೋಚರಿಸಿದಾಗ, ನಾವು ಅವುಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚಿಸುವುದನ್ನು ನಿಲ್ಲಿಸುತ್ತೇವೆ. ನಾವು ಅಪರಾಧಿಯ ಪ್ರಜ್ಞೆಯಿಂದಲ್ಲ, ಕ್ಷಮಾಶೀಲತೆಯಿಂದ ನಮ್ಮ ತಪ್ಪುಗಳನ್ನು ಪುನರಾವರ್ತಿಸದಿರಲು ನಿರ್ಧರಿಸುತ್ತೇವೆ.
Meditation dispelling guilt

ವಿವರಣೆ 

ಕ್ಷಮೆ ಎಂದರೆ ಅಪರಾಧ, ದೋಷ ಅಥವಾ ತಪ್ಪಿನಿಂದ ಕೋಪಗೊಳ್ಳದಿರುವುದು ಮತ್ತು ಹಗೆತನದಿಂದಿರದೇ ಇರುವುದು. ಇದು ಇತರರು ಮಾಡಿದ ಹಾನಿಕಾರಕ ಕಾರ್ಯಗಳು ಮತ್ತು ಅವರು ಮಾಡಿದ ತಪ್ಪುಗಳಿಗೆ ಪ್ರತಿಕ್ರಿಯೆಯಾಗಿ ನಾವು ಅಭಿವೃದ್ಧಿಪಡಿಸಬೇಕಿರುವ ಸಕಾರಾತ್ಮಕ ಮನಸ್ಥಿತಿಯಲ್ಲದೆ, ನಮ್ಮ ಸ್ವಂತ ನಕಾರಾತ್ಮಕ ಕಾರ್ಯಗಳಿಗೆ ಮತ್ತು ತಪ್ಪುಗಳಿಗೆ ಪ್ರತಿಕ್ರಿಯೆಯಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಹೀಗೆ ಮಾಡಲು, ನಾವು ಮಾಡಿದ ಯಾವುದೇ ನಿರ್ದಿಷ್ಟ ಕ್ರಿಯೆ ಅಥವಾ ತಪ್ಪಿನಿಂದ ನಮ್ಮನ್ನು ಪ್ರತ್ಯೇಕಗೊಳಿಸಿ, ನಮ್ಮನ್ನು ಒಬ್ಬ ವ್ಯಕ್ತಿಯಾಗಿ ಪರಿಗಣಿಸಬೇಕು. ನಾವು ನಮ್ಮ ಬಗ್ಗೆ ಯೋಚಿಸುವಾಗ, ನಮ್ಮ ಸಂಪೂರ್ಣ ಜೀವನದ ದೃಷ್ಟಿಕೋನದಿಂದ ಯೋಚಿಸಬೇಕು - ಮತ್ತು ನಾವು ಪುನರ್ಜನ್ಮದ ಬಗ್ಗೆಗಿನ ಬೌದ್ಧ ಬೋಧನೆಗಳನ್ನು ಒಪ್ಪಿಕೊಂಡಿದ್ದರೆ, ನಮ್ಮ ಹಿಂದಿನ ಮತ್ತು ಭವಿಷ್ಯದ ಜೀವನವನ್ನು ಇದರಲ್ಲಿ ಸೇರಿಸಿಕೊಳ್ಳಬೇಕು. ಈ ರೀತಿಯಾಗಿ ಒಂದು ವಿಶಾಲವಾದ ದೃಷ್ಟಿಕೋನದಲ್ಲಿ ನಮ್ಮನ್ನು ಪರಿಗಣಿಸುವಂತೆ ನಮ್ಮ ಮನಸ್ಸನ್ನು ತೆರೆದಾಗ, ನಾವು ಮಾಡಿದ ಯಾವುದೇ ನಕಾರಾತ್ಮಕ ಕ್ರಿಯೆ ಅಥವಾ ತಪ್ಪು ಕೇವಲ ಒಂದೇ ಘಟನೆ ಎಂದು ನಾವು ನೋಡುತ್ತೇವೆ. ನಮ್ಮ ಜೀವನದಲ್ಲಿ ನಾವು ಇತರ ಹಲವಾರು ಕಾರ್ಯಗಳನ್ನು ಮಾಡಿದ್ದೇವೆ ಮತ್ತು ನಾವು ಬುದ್ಧರಲ್ಲವಾದ್ದರಿಂದ, ನಾವು ಅನಿವಾರ್ಯವಾಗಿ ತಪ್ಪುಗಳನ್ನು ಮಾಡುತ್ತೇವೆ. ನಾವು ಮಾಡಿದ ತಪ್ಪು ಅಥವಾ ಅಪಕಾರದಿಂದ ಮಾತ್ರ ನಮ್ಮನ್ನು ಗುರುತಿಸಿಕೊಂಡರೆ ಮತ್ತು ಅದನ್ನೇ ನಮ್ಮ ನಿಜವಾದ ಗುರುತಾಗಿ ಹಿಡಿದಿಟ್ಟುಕೊಂಡರೆ, ನಾವು ತಪ್ಪಿತಸ್ಥರೆಂದು ಭಾವಿಸುತ್ತೇವೆ. ನಾವು ಹೆಚ್ಚು ಕಾಲ ಹಿಡಿದಿಟ್ಟುಕೊಂಡಷ್ಟು, ನಾವು ಅಷ್ಟೇ ಹೆಚ್ಚಾಗಿ ನಾವು ತಪ್ಪಿತಸ್ಥರೆಂದು ಭಾವಿಸುತ್ತೇವೆ ಮತ್ತು ಬೇಸರವನ್ನು ಅನುಭವಿಸುತ್ತೇವೆ. 

ನಮ್ಮನ್ನು ನಾವೇ ಕ್ಷಮಿಸುಕೊಳ್ಳುವುದು ಎಂದರೆ ನಮ್ಮ ಕಾರ್ಯದಿಂದ ಏನೇನೂ ಆಗಿಲ್ಲ ಎಂಬಂತೆ ಮರೆತುಬಿಡುವುದು ಎಂದಲ್ಲ. ನಾವು ಮಾಡಿದ ಹಾನಿ ಅಥವಾ ನಾವು ಮಾಡಿದ ತಪ್ಪುಗಳಿಗೆ ನಾವು ಜವಾಬ್ದಾರರಾಗಿರುತ್ತೇವೆ. ಆದರೆ ಅದರಿಂದ ನಾವು ಅಪರಾಧಿಯ ಭಾವನೆಯನ್ನು ಹಿಡಿದಿಟ್ಟುಕೊಳ್ಳುವುದಿಲ್ಲ ಮತ್ತು ನಮ್ಮ ಮೇಲೆ ಕೋಪಗೊಳ್ಳುವುದಿಲ್ಲ. ನಾವು ನಮ್ಮ ತಪ್ಪುಗಳನ್ನು ಮತ್ತು ಅಪಕಾರಗಳನ್ನು ಒಪ್ಪಿಕೊಳ್ಳುತ್ತೇವೆ, ಮತ್ತು ಕೇವಲ ಅವುಗಳೊಂದಿಗೆ ಗುರುತಿಸಿಕೊಳ್ಳುವುದನ್ನು ಬಿಟ್ಟುಬಿಡುತ್ತೇವೆ - ನಾನು "ಕೆಟ್ಟ ವ್ಯಕ್ತಿ" ಅಥವಾ "ಮೂರ್ಖ" ಎಂದು ಭಾವಿಸುವುದನ್ನು ನಿಲ್ಲಿಸುತ್ತೇವೆ - ಮತ್ತು ಈ ನಾಲ್ಕು ವಿರೋಧವಾದ ಶಕ್ತಿಗಳನ್ನು ಅನ್ವಯಿಸುತ್ತೇವೆ: 

  1. ಪಶ್ಚಾತ್ತಾಪ ಪಡಿ 
  2. ಆ ಹಾನಿಕಾರಕ ಕ್ರಿಯೆ ಅಥವಾ ತಪ್ಪನ್ನು ಪುನರಾವರ್ತಿಸದಿರುವಂತೆ ನಿಮ್ಮ ಕೈಲಾದಷ್ಟು ಪ್ರಯತ್ನಿಸಲು ನಿರ್ಧರಿಸಿ 
  3. ನಿಮ್ಮ ಜೀವನದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವ ಸಕರಾತ್ಮಕ ದಿಕ್ಕನ್ನು ಮತ್ತೊಮ್ಮೆ ದೃಢೀಕರಿಸಿ 
  4. ನಿಮ್ಮ ತಪ್ಪನ್ನು ಸರಿಪಡಿಸಿ, ಸಾಧ್ಯವಾದಲ್ಲಿ, ಕ್ಷಮೆಯಾಚಿಸುವ ಮೂಲಕ ನೀವು ಮಾಡಿದ ಹಾನಿಯನ್ನು ಕಡಿಮೆಗೊಳಿಸಿ ಮತ್ತು ಸಾಧ್ಯವಾದಲ್ಲಿ ಕೆಲವು ಸಕಾರಾತ್ಮಕ ಕ್ರಿಯೆಗಳೊಂದಿಗೆ ಅದನ್ನು ಸಮತೋಲನಗೊಳಿಸಿ. 

ಧ್ಯಾನ 

  • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
  • ನೀವು ಮಾಡಿದ ಹಾನಿಕರ ಕಾರ್ಯವೊಂದನ್ನು ನೆನಪಿಸಿಕೊಳ್ಳಿ - ಬಹುಶಃ ನಿಮ್ಮ ಕ್ರಿಯೆಗಳು ಅಥವಾ ಮಾತುಗಳಿಂದ ಒಬ್ಬರಿಗೆ ನೋವುಂಟುಮಾಡಿರಬಹುದು - ಮತ್ತು ನಂತರ ನೀವು ಮಾಡಿದ ಕಾರ್ಯದ ಬಗ್ಗೆ ಅಥವಾ ಮಾತಿನ ಬಗ್ಗೆ ಪಶ್ಚಾತ್ತಾಪ ಪಡುತ್ತೀರಿ ಮತ್ತು ನಿಮ್ಮ ಮೇಲೆ ನೀವೇ ಕೋಪಗೊಂಡಿರುವಿರಿ. 
  • ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ನಿಮ್ಮ ಸಂಪೂರ್ಣ ಜೀವನದ ಪರಿಭಾಷೆಯಲ್ಲಿ ನಿಮ್ಮ ಬಗ್ಗೆ ಯೋಚಿಸಿ - ಇದು ಕೇವಲ ಒಂದು ಘಟನೆ ಎಂದು ಗುರುತಿಸಿ ಮತ್ತು ಅದು ಮರುಕಳಿಸಿದರೂ ಸಹ, ನಿಮ್ಮ ಜೀವನದಲ್ಲಿ ಇನ್ನೂ ಅನೇಕ ಘಟನೆಗಳು ನಡೆದಿವೆ ಮತ್ತು ನಡೆಯಲಿವೆ. 
  • ಈ ಒಂದು ಕಾರ್ಯದೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುವುದರಿಂದ ಮತ್ತು ಅದರಲ್ಲಿ ಸಿಲುಕಿಕೊಳ್ಳುವುರಿಂದ, ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯೆದ್ದು, ನಿಮ್ಮಲ್ಲಿ ಬೇಸರದ ಭಾವನೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ಗುರುತಿಸಿ. ನೀವು ಬಹಳಾ ಸೀಮಿತ ವ್ಯಾಪ್ತಿಯಲ್ಲಿ ನಿಮ್ಮ ಬಗ್ಗೆ ಯೋಚಿಸುತ್ತಿರುವಿರಿ. 
  • ಇದು ನಿಮ್ಮ ಸಂಪೂರ್ಣತೆಯೊಂದಿಗೆ ಅನುರೂಪವಾಗುವುದಿಲ್ಲ ಎಂಬ ಅರಿವಿಕೆಯನ್ನು ಪಡೆಯುವ ಮೂಲಕ ಆ ಗುರುತನ್ನು ಬಿಟ್ಟುಬಿಡಿ. 
  • ನಂತರ ಮತ್ತೊಮ್ಮೆ, ನಿಮ್ಮ ಸಂಪೂರ್ಣ ಜೀವನದ ದೃಷ್ಟಿಕೋನದಿಂದ ನಿಮ್ಮನ್ನು ನೋಡಿ ಮತ್ತು ನೀವು ಮಾಡಿದ ಎಲ್ಲಾ ಸಕಾರಾತ್ಮಕ, ರಚನಾತ್ಮಕ ಕೆಲಸಗಳ ಬಗ್ಗೆ ಆನಂದಿಸಿ. 
  • ನೀವು ಮಾಡಿದ್ದು ವಿನಾಶಕಾರಿ ಮತ್ತು ಹಾನಿಕಾರಕವಾಗಿತ್ತು ಎಂದು ಒಪ್ಪಿಕೊಳ್ಳಿ. ನೀವು ಇನ್ನೂ ವಿಮೋಚನೆಗೊಂಡಿಲ್ಲವಾದ್ದರಿಂದ, ಕೆಲವೊಮ್ಮೆ ನೀವು ಹಾನಿಕಾರಕ ಕಾರ್ಯಗಳನ್ನು ಮಾಡುತ್ತೀರಿ.  
  • ನೀವೆಸಗಿದ ಕಾರ್ಯವನ್ನು ಬದಲಾಯಿಸಲಾಗದಿದ್ದರೂ, ಹಾಗೆ ಮಾಡಿದ್ದಕ್ಕಾಗಿ ನೀವು ಪಸ್ಚಾತ್ತಾಪ ವ್ಯಕ್ತಪಡಿಸುತ್ತೀರಿ. ಅಂದರೆ ನೀವು ಹಾಗೆ ಮಾಡಬಾರದಿತ್ತು ಎಂದು ಬಯಸುತ್ತೀರಿ.  
  • ಈ ಹಾನಿಕಾರಕ ಕ್ರಿಯೆಯನ್ನು ಪುನರಾವರ್ತಿಸದಿರಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಲು ನಿರ್ಧರಿಸಿ. ನೀವು ಹೇಗೆ ವರ್ತಿಸುತ್ತೀರಿ ಮತ್ತು ಮಾತನಾಡುತ್ತೀರಿ ಎಂಬುದರ ಬಗ್ಗೆ ಗಮನವಿಡಲು ಪ್ರಯತ್ನಿಸಿ ಮತ್ತು ಏನಾದರೂ ವಿನಾಶಕಾರಿಯಾದ ಕಾರ್ಯವನ್ನು ಮಾಡುವಂತೆ ಅಥವಾ ಮಾತನಾಡುವಂತೆ ಎನಿಸಿದಾಗ, ಸಂಯಮದಿಂದ ವರ್ತಿಸಿ. 
  • ನಿಮ್ಮ ಜೀವನದಲ್ಲಿ ನೀವು ಅನುಸರಿಸುತ್ತಿರುವ ಸಕಾರಾತ್ಮಕ ದಿಕ್ಕನ್ನು ಮತ್ತೊಮ್ಮೆ ದೃಢೀಕರಿಸಿ - ನಿಮ್ಮ ನ್ಯೂನತೆಗಳು ಮತ್ತು ಸಮಸ್ಯಾತ್ಮಕ ಅಂಶಗಳನ್ನು ಜಯಿಸಲು ಮತ್ತು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವತ್ತ ನೀವು ಶ್ರಮ ಪಡುತ್ತಿದ್ದೀರಿ. 
  • ಕನಿಷ್ಠಪಕ್ಷ, ನೀವು ನೋಯಿಸಿದ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ನಿಮ್ಮ ಮನಸ್ಸಿನಲ್ಲಾದರೂ ಕ್ಷಮೆಯಾಚಿಸಿ ಮತ್ತು ನೀವು ಮಾಡಿದ್ದನ್ನು ಸರಿದೂಗಿಸಲು ಅವರಿಗೆ ಒಳ್ಳೆಯದನ್ನು ಮಾಡುವಂತೆ ಕಲ್ಪಿಸಿಕೊಳ್ಳಿ. ನೀವು ಆ ವ್ಯಕ್ತಿಯನ್ನು ಮತ್ತೊಮ್ಮೆ ಭೇಟಿಯಾದರೆ, ನಿಮ್ಮ ಕಲ್ಪನೆಯಂತೆ ನಿಮ್ಮ ವಾಸ್ತವದಲ್ಲಿ ನಡೆದುಕೊಳ್ಳುವಿರಿ ಎಂದು ನಿರ್ಧರಿಸಿ. 

ನೀವು ಮಾಡಿದ ತಪ್ಪಿಗಳಿಗಾಗಿ ಈ ಕೆಳಗಿನಂತೆ ಪುನರಾವರ್ತಿಸಿ: 

  • ನೀವು ಮಾಡಿದ ಯಾವುದಾದರೂ ಒಂದು ತಪ್ಪನ್ನು ನೆನಪಿಸಿಕೊಳ್ಳಿ - ಬಹುಶಃ ನಿಮ್ಮ ಕಂಪ್ಯೂಟರ್‌ನಲ್ಲಿರುವ ಒಂದು ಪ್ರಮುಖ ಫೈಲ್ ಅನ್ನು ತಪ್ಪಿ ಅಳಿಸಿರಬಹುದು – ಅದರ ಬಗ್ಗೆ ನೀವು ಹೇಗೆ ಕೋಪಗೊಂಡು ಮತ್ತು ಅಸಮಾಧಾನಗೊಂಡು, ನಿಮ್ಮನ್ನು ನೀವೇ ದಡ್ಡ ಎಂದು ಬೈದುಕೊಂಡಿರಬಹುದು. 
  • ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತು ನಿಮ್ಮ ಸಂಪೂರ್ಣ ಜೀವನದ ಪರಿಭಾಷೆಯಲ್ಲಿ ನಿಮ್ಮ ಬಗ್ಗೆ ಯೋಚಿಸಿ ಮತ್ತು ಇದು ಕೇವಲ ಒಂದು ಘಟನೆ ಎಂದು ಗುರುತಿಸಿ ಮತ್ತು ಅದು ಮರುಕಳಿಸಿದರೂ ಸಹ, ನಿಮ್ಮ ಜೀವನದಲ್ಲಿ ಇನ್ನೂ ಅನೇಕ ಘಟನೆಗಳು ನಡೆದಿವೆ ಮತ್ತು ನಡೆಯಲಿವೆ. ಹೆಚ್ಚಾಗಿ ನೀವು ಒಳ್ಳೆಯ ಕೆಲಸವನ್ನೇ ಮಾಡುತ್ತೀರಿ. 
  • ಕೇವಲ ಈ ತಪ್ಪಿನಿಂದ ನಿಮ್ಮನ್ನು ಗುರುತಿಸಿಕೊಳ್ಳುವುದರಿಂದ ಮತ್ತು ಅದರಲ್ಲಿ ಸಿಲುಕಿಕೊಳ್ಳುವುದರಿಂದ ನಿಮ್ಮಲ್ಲಿ ಬೀಭತ್ಸ ಮತ್ತು ಅಸಮಾಧಾನವನ್ನು ಉಂಟುಮಾಡುತ್ತದೆ ಎಂಬುದನ್ನು ಗುರುತಿಸಿ. ನಿಮ್ಮ ಬಗ್ಗೆ ನೀವು ಬಹಳಾ ಸೀಮಿತ ವ್ಯಾಪ್ತಿಯಲ್ಲಿ ಯೋಚಿಸುತ್ತಿರುವಿರಿ.  
  • ಇದು ನಿಮ್ಮ ಸಂಪೂರ್ಣತೆಗೆ ಹೊಂದಿಕೆಯಾಗುವುದಿಲ್ಲ ಎಂದು ಅರಿಯುವ ಮೂಲಕ ಆ ಗುರುತನ್ನು ಬಿಟ್ಟುಬಿಡಿ. 
  • ನಂತರ ನಿಮ್ಮ ಸಂಪೂರ್ಣ ಜೀವನದ ದೃಷ್ಟಿಕೋನದಿಂದ ನಿಮ್ಮನ್ನು ಮತ್ತೊಮ್ಮೆ ನೋಡಿ ಮತ್ತು ನೀವು ಮಾಡಿದ ಎಲ್ಲಾ ಒಳ್ಳೆಯ ಮತ್ತು ಉತ್ತಮ ಕೆಲಸಗಳ ಬಗ್ಗೆ ಆನಂದ ಪಡಿ. 
  • ನೀವು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳಿ ಮತ್ತು ಕೆಲವೊಮ್ಮೆ ನೀವು ತಪ್ಪುಗಳನ್ನು ಮಾಡುತ್ತೀರಿ - ಇದರಲ್ಲಿ ವಿಶೇಷವೇನೂ ಇಲ್ಲ. 
  • ನೀವು ತಪ್ಪು ಮಾಡಿರುವಿರಿ ಎಂಬ ಅಂಶವನ್ನು ಬದಲಾಯಿಸಲಾಗದಿದ್ದರೂ, ಅದನ್ನು ಮಾಡಿದ್ದಕ್ಕಾಗಿ ನೀವು ಪಶ್ಚಾತ್ತಾಪ ಪಡುತ್ತೀರಿ. ಅಂದರೆ ನೀವು ಹಾಗೆ ಮಾಡಬಾರದಿತ್ತು ಎಂದು ಬಯಸುತ್ತೀರಿ. 
  • ಆ ತಪ್ಪನ್ನು ಪುನರಾವರ್ತಿಸದಿರಲು, ನಿಮ್ಮ ಕೈಲಾದಷ್ಟು ಪ್ರಯತ್ನಿಸಲು ನಿರ್ಧರಿಸಿ. ನೀವು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಗಮನದಿಂದಿರಲು ಮತ್ತು ಎಚ್ಚರವಾಗಿರಲು ಪ್ರಯತ್ನಿಸಿ, ಇದರಿಂದ ನೀವು ಯಾವಾಗಲೂ ಜಾಗರೂಕರಾಗಿರಿ. 
  • ನಿಮ್ಮ ಜೀವನದಲ್ಲಿ ನೀವು ಅನುಸರಿಸುತ್ತಿರುವ ಸಕಾರಾತ್ಮಕ ದಿಕ್ಕನ್ನು ಮತ್ತೊಮ್ಮೆ ದೃಢೀಕರಿಸಿ - ನಿಮ್ಮ ಕೊರತೆಗಳನ್ನು ಮತ್ತು ತಪ್ಪುಗಳನ್ನು ಜಯಿಸಲು ನಿಮ್ಮ ಮೇಲೆ ನೀವೇ ಕೆಲಸ ಮಾಡುತ್ತಿರುವಿರಿ, ಉದಾಹರಣೆಗೆ, ನಿಮ್ಮ ಕೆಲಸದ ಮೇಲೆ ಗಮನ ಹರಿಸದಿರುವುದು ಮತ್ತು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವುದು. 
  • ಶಾಂತ ಮನಸ್ಥಿತಿಯೊಂದಿಗೆ, ನೀವು ಫೈಲ್‌ನಲ್ಲಿ ಏನಿತ್ತು ಎಂಬುದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ, ಅದನ್ನು ಪುನಃ ಟೈಪ್ ಮಾಡುವಂತೆ ನಿರ್ಧರಿಸಿ. ನಂತರ ನಿಜವಾಗಿಯೂ ಹಾಗೆ ಮಾಡಿ. 

ಸಾರಾಂಶ 

ನಾವು ಮಾಡಿದ ಹಾನಿ ಅಥವಾ ನಾವು ಮಾಡಿದ ತಪ್ಪುಗಳಿಗಾಗಿ ನಮ್ಮನ್ನು ಕ್ಷಮಿಸಿಕೊಳ್ಳುವುದು ಎಂದರೆ ನಮ್ಮ ಮೇಲೆ ಕೋಪಗೊಳ್ಳದಿರುವುದು ಅಥವಾ ನಾವು ಕೆಟ್ಟ ವ್ಯಕ್ತಿ ಮತ್ತು ತಪ್ಪಿತಸ್ಥರೆಂದು ಭಾವಿಸದಿರುವುದು ಅಥವಾ ನಮ್ಮನ್ನು ನಾವೇ ಮೂರ್ಖರೆಂದು ಎಂದು ಶಪಿಸಿಕೊಳ್ಳದಿರುವುದು ಎಂದಲ್ಲ. ಇದು ನಾವು ಮಾಡಿದ ತಪ್ಪು ಅಥವಾ ಅಪಕಾರದ ಸೀಮಿತ ದೃಷ್ಟಿಯಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದನ್ನು ನಿಲ್ಲಿಸುವುದಾಗಿದೆ, ಏಕೆಂದರೆ ಇದು ನಮ್ಮ ಜೀವನದ ಸಂಪೂರ್ಣತೆಯೊಂದಿಗೆ ಅನುರೂಪವಾಗಿರುವುದಿಲ್ಲ. ನಮ್ಮ ಕಾರ್ಯಗಳ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಮತ್ತು ಅವುಗಳೊಂದಿಗೆ ವ್ಯವಹರಿಸುತ್ತೇವೆ. ನಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡು, ನಾವು ಪಶ್ಚಾತ್ತಾಪ ಪಡುತ್ತೇವೆ, ಅದನ್ನು ಪುನರಾವರ್ತಿಸದಿರಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂಬ ಭರವಸೆ ನೀಡುತ್ತೇವೆ, ಜೀವನದಲ್ಲಿ ನಾವು ಅನುಸರಿಸಲು ಪ್ರಯತ್ನಿಸುತ್ತಿರುವ ಸಕಾರಾತ್ಮಕ ದಿಕ್ಕನ್ನು ಧೃಡೀಕರಿಸುತ್ತೇವೆ ಮತ್ತು ಕ್ಷಮೆಯಾಚಿಸಿ, ನಾವು ಮಾಡಿದ ಹಾನಿಯನ್ನು ಎದುರಿಸಲು ಏನಾದರೂ ಒಳ್ಳೆಯದನ್ನು ಮಾಡುತ್ತೇವೆ, ಅಥವಾ ನಾವು ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ.

Top