ಜೀವನದ ಮೌಲ್ಯವನ್ನು ಪ್ರಶಂಸಿಸುವುದು

ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು, ಸ್ವಯಂವೃದ್ಧಿಗೊಳ್ಳಲು ನಮಗಿರುವ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಪ್ರಶಂಸಿಸಲು ಕಲಿಯಿರಿ.
Meditations appreciating life

ವಿವರಣೆ 

ಸಾಮಾನ್ಯವಾಗಿ, ಕೆಲವು ಸಣ್ಣ ಸಣ್ಣ ಸಮಸ್ಯೆಗಳಿಂದಾಗಿ, ನಮಗೆ ನಮ್ಮ ಮೇಲೇ ಕನಿಕರ ಹುಟ್ಟುತ್ತದೆ, ಉದಾಹರಣೆಗೆ, ರೆಸ್ಟೋರೆಂಟ್‌ನಲ್ಲಿ ನಾವು ಸೇವಿಸಲು ಬಯಸುವ ಸವಿರುಚಿಯು ಖಾಲಿಯಾಗಿರುವ ಕಾರಣವಾಗಿ, ಅಥವಾ ನಾವು ಬಯಸಿದ ಸಮಯ ಅಥವಾ ದಿನಾಂಕದಂದು ವಿಮಾನ ಅಥವಾ ರೈಲನ್ನು ಕಾಯ್ದಿರಿಸಲು ಸಾಧ್ಯವಾಗದೇ ಇರುವುದು ಅಥವಾ ನಾವು ಶೀತ ಹಿಡಿದು, ನಾವು ಬಯಸಿದ ಹಾಗೆ ಈಜಾಡಲು ಸಾಧ್ಯವಾಗದೇ ಇರುವುದು ಇತ್ಯಾದಿ. ಆದರೆ ನಮ್ಮ ಜೀವನವನ್ನು ವಸ್ತುನಿಷ್ಠವಾಗಿ ನೋಡಿದಾಗ, ನಾವು ಎಷ್ಟು ಅದೃಷ್ಟವಂತರು ಎಂಬುದು ನಮಗೆ ಮನದಟ್ಟಾಗುತ್ತದೆ. ರಚನಾತ್ಮಕವಾದ ಅಥವಾ ಉಪಯುಕ್ತವಾದದ್ದನ್ನು ಮಾಡುವ ನಮ್ಮ ಸಾಮರ್ಥ್ಯವನ್ನು ಅಡ್ಡಿಪಡಿಸುವ ದುರದೃಷ್ಟಕರ ಸನ್ನಿವೇಶಗಳಿಂದ ನಾವು ಮುಕ್ತರಾಗಿದ್ದೇವೆ. ಅಲ್ಲದೆ, ಜೀವನದಲ್ಲಿ ನಮ್ಮ ಪರಿಸ್ಥಿತಿಗಳನ್ನು ಸುಧಾರಿಸಲು, ಬೌದ್ಧಧರ್ಮದಂತಹ ಆಧ್ಯಾತ್ಮಿಕ ಬೋಧನೆಗಳ ಬಗ್ಗೆ ಕಲಿಯುವಂತಹ ಅನೇಕ ಅವಕಾಶಗಳು ನಮಗಿವೆ. 

ನಾವು 2015 ರ ನೇಪಾಳದ ಭೂಕಂಪದಂತಹ ವಿಪತ್ತಿನ ವಲಯದಲ್ಲಿ ಸಿಕ್ಕಿಬಿದ್ದರೆ, ಅಥವಾ ಕ್ಷಾಮ ಪ್ರದೇಶದಲ್ಲಿ, ಅಥವಾ ಯುದ್ಧ ವಲಯದಲ್ಲಿ, ಅಥವಾ ಆಧ್ಯಾತ್ಮಿಕ ಅಭ್ಯಾಸವು ಕಾನೂನು ವಿರೋಧವಾಗಿದ್ದರೆ ಅಥವಾ ಲಭ್ಯವಿಲ್ಲದಿದ್ದರೆ ಅಥವಾ ಜೈಲಿನಲ್ಲಿ ಹಿಂಸಾತ್ಮಕ ಅಪರಾಧಿಗಳೊಂದಿಗೆ ಸಿಕ್ಕಿಬಿದ್ದಿದ್ದರೆ, ಅಥವಾ ಯುದ್ಧದಲ್ಲಿ ಸೈನ್ಯದಲ್ಲಿ ಹೋರಾಡಬೇಕಿದ್ದರೆ, ನಾವು ಬೌದ್ಧ ಬೋಧನೆಗಳು ಮತ್ತು ಅದರ ವಿಧಾನಗಳನ್ನು ಕಲಿಯಲಾಗುತ್ತಿತ್ತೇ ಮತ್ತು ಅವುಗಳನ್ನು ಅಭ್ಯಾಸ ಮಾಡಲಾಗುತ್ತಿತ್ತೇ? ಅಥವಾ ನಾವು ತೀವ್ರವಾಗಿ ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ವಿಕಲಾಂಗರಾಗಿದ್ದರೆ, ಅದನ್ನು ಅಭ್ಯಾಸಮಾಡಲು ಸಾಧ್ಯವಾಗಬಹುದಾದರೂ ಅದು ಬಹಳಾ ಕಷ್ಟಕರವಾಗಿರುತ್ತದೆಯಲ್ಲವೇ? ಅಥವಾ ನಾವು ಬಹಳಾ ಶ್ರೀಮಂತರಾಗಿದ್ದು, ನಾವು ಎಂದೂ ಕೆಲಸ ಮಾಡಬೇಕಾಗದೆ, ನಮ್ಮ ಜೀವನಪೂರ್ತಿ ಪಾರ್ಟಿಗಳು ಮತ್ತು ಮನರಂಜನೆಯಿಂದ ತುಂಬಿದ್ದಲ್ಲಿ, ನಾವು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿಲ್ಲದೇ ಇರಬಹುದಲ್ಲವೇ? ಅಥವಾ ನಾವು ಬಹಳಾ ಸಂಕುಚಿತ ಮನೋಭಾವದವರಾಗಿದ್ದರೆ, ಆಧ್ಯಾತ್ಮಿಕ ಅಭ್ಯಾಸಕ್ಕೆ ವಿರೋಧವಾಗಿರಬಹುದಲ್ಲವೇ? 

ಅಲ್ಲದೆ, ಇಂದು ನಮಗೆ ಸಾಕಷ್ಟು ಅವಕಾಶಗಳಿವೆ. ಬೋಧನೆಗಳ ಅನುವಾದಗಳಿವೆ, ಅವುಗಳು ಪುಸ್ತಕಗಳಲ್ಲಿ ಮತ್ತು ಇಂಟರ್ನೆಟ್ನಲ್ಲಿ ಲಭ್ಯವಿವೆ, ಬೆಂಬಲಿಗರು ಅವುಗಳ ಪ್ರಕಟಣೆಯನ್ನು ಬೆಂಬಲಿಸಿದ್ದಾರೆ, ಶಿಕ್ಷಕರಿದ್ದಾರೆ, ನಾವು ಕಲಿಯಬಹುದಾದ ಕೇಂದ್ರಗಳಿವೆ ಮತ್ತು ಜನರು ಅವುಗಳನ್ನು ಬೆಂಬಲಿಸಿದ್ದಾರೆ, ಮತ್ತು ಕಲಿಯಲು ನಮ್ಮಲ್ಲಿ ಬುದ್ಧಿವಂತಿಕೆ ಮತ್ತು ಆಸಕ್ತಿಯಿದೆ. 

ನಾವು ಈ ಕೆಟ್ಟ ಸನ್ನಿವೇಶಗಳಿಂದ ಮುಕ್ತರಾಗಿ, ಇಂತಹ ಅವಕಾಶಗಳಿಂದ ಸಮೃದ್ಧವಾಗಿರುವುದಕ್ಕಾಗಿಯೇ ನಮ್ಮ ಜೀವನವು ಅನನ್ಯವಾಗಿರುತ್ತದೆ. ನಮ್ಮ ಅಮೂಲ್ಯವಾದ ಜೀವನದಲ್ಲಿ ನಾವು ಸಂತೋಷವಾಗಿರಬೇಕು ಮತ್ತು ಅದನ್ನು ಸಂಪೂರ್ಣವಾಗಿ ಉಪಯುಕ್ತಪಡಿಸಿಕೊಳ್ಳಬೇಕು. 

ಧ್ಯಾನ 

 • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
 • ಭೂಕಂಪದ ಸಮಯದಲ್ಲಿ ನೀವು ನೇಪಾಳದ ಪರ್ವತಗಳಲ್ಲಿ ಟ್ರೆಕ್ಕಿಂಗ್ ಮಾಡುತ್ತಿದ್ದೀರಿ ಮತ್ತು ಹೊರಬರಲು ಯಾವುದೇ ಮಾರ್ಗವಿಲ್ಲದೆ, ಆಹಾರ ಅಥವಾ ನೀರಿಲ್ಲದೆ ನೀವು ಅಲ್ಲಿ ಸಿಲುಕಿಕೊಂಡಿದ್ದೀರಿ ಎಂದು ಕಲ್ಪಿಸಿಕೊಳ್ಳಿ. 
 • ನಂತರ ನೀವು ಏರ್ಲಿಫ್ಟ್ ಆಗಿ, ಮನೆಗೆ ಹಿಂತಿರುಗಿದ್ದೀರಿ ಎಂದು ಕಲ್ಪಿಸಿಕೊಳ್ಳಿ. 
 • ಆ ಭಯಾನಕ ಪರಿಸ್ಥಿತಿಯಿಂದ ಮುಕ್ತರಾಗುವುದರಿಂದ ಎಷ್ಟು ಅದ್ಭುತವೆನಿಸುತ್ತದೆ ಎಂಬುದನ್ನು ಭಾವಿಸಿಕೊಳ್ಳಿ. 
 • ಆ ಸ್ವಾತಂತ್ರ್ಯವನ್ನು ಆನಂದಿಸಿ. 
 • ನೀವು ಸಿರಿಯಾದಲ್ಲಿ ಇರುವಿರಿ ಎಂದು ಕಲ್ಪಿಸಿಕೊಳ್ಳಿ ಮತ್ತು ಆಗ ಇಸ್ಲಾಮಿಕ್ ಆಡಳಿತ ನಿಮ್ಮ ನಗರವನ್ನು ವಶಪಡಿಸಿಕೊಂಡಿದ್ದು, ನಿಮಗೆ ಹೊರಬರಲು ಯಾವುದೇ ಮಾರ್ಗವಿಲ್ಲ ಎಂದು ಊಹಿಸಿಕೊಳ್ಳಿ. 
 • ನಂತರ ಅದರಿಂದ ಮುಕ್ತರಾಗುವುದನ್ನು ಕಲ್ಪಿಸಿಕೊಳ್ಳಿ. 
 • ಆನಂದ ಪಡಿ. 
 • ಹಗಲು ರಾತ್ರಿ ನಿಮ್ಮನ್ನು ಬೆದರಿಸುವ, ಹಿಂಸಾತ್ಮಕ ಮತ್ತು ಒರಟು ಜೈಲು ಸದಸ್ಯರ ಗುಂಪಿನೊಂದಿಗೆ ನೀವು ಜೈಲಿನಲ್ಲಿ ಸಿಲುಕಿಕೊಂಡಂತೆ ಕಲ್ಪಿಸಿಕೊಳ್ಳಿ. 
 • ನಂತರ ಜೈಲಿನಿಂದ ಬಿಡುಗಡೆ ಹೊಂದುವುದನ್ನು ಕಲ್ಪಿಸಿಕೊಳ್ಳಿ. 
 • ಆನಂದ ಪಡಿ.
 • ಸುಡಾನ್‌ನಲ್ಲಿ ಬರಗಾಲ ಮತ್ತು ಕ್ಷಾಮದ ಕಾರಣದಿಂದಾಗಿ ಹಸಿವಿನಿಂದ ಬಳಲುತ್ತಿರುವುದನ್ನು ಕಲ್ಪಿಸಿಕೊಳ್ಳಿ.
 • ನಂತರ ಫೂಡ್ ಡ್ರಾಪ್ ಆದ ನಂತರ, ನಿಮಗೆ ಉಣ್ಣಲು ಮತ್ತು ಕುಡಿಯಲು ಸಾಕಷ್ಟು ಆಹಾರ ಮತ್ತು ನೀರಿರುವಂತೆ ಕಲ್ಪಿಸಿಕೊಳ್ಳಿ. 
 • ಆನಂದ ಪಡಿ. 
 • ಆಲ್ಝೈಮರ್ನ ಕಾಯಿಲೆಯಿಂದಾಗಿ ನೀವು ಯಾವುದನ್ನೂ ಅಥವಾ ಯಾರನ್ನೂ ನೆನಪಿಸಿಕೊಳ್ಳಲಾಗದೆ, ಮೂರಕ್ಷರ ಮಾತನಾಡಲಾಗದೇ ಇರುವಂತೆ ಕಲ್ಪಿಸಿಕೊಳ್ಳಿ.
 • ನಂತರ ಗುಣವಂತರಾಗುವಂತೆ ಕಲ್ಪಿಸಿಕೊಳ್ಳಿ. 
 • ಆನಂದ ಪಡಿ. 
 • ನಂತರ, ಹಂತಹಂತವಾಗಿ, ನಿಮ್ಮ ಬೆನ್ನ ಮೇಲಿರುವ ಈ ಹೊರೆಗಳಿಂದ ಮುಕ್ತರಾಗಿರಿ - ನೇಪಾಳದಲ್ಲಿನ ಭೂಕಂಪದಲ್ಲಿ ಸಿಲುಕಿಕೊಂಡಿರುವುದು, ಸಿರಿಯಾದಲ್ಲಿ ISIS ಕೈಯಲ್ಲಿ ಸಿಕ್ಕಿಬಿದ್ದಿರುವುದು, ಹಿಂಸಾತ್ಮಕ ಗುಂಪಿನ ಸದಸ್ಯರೊಂದಿಗೆ ಜೈಲಿನಲ್ಲಿ ಸಿಲುಕಿಕೊಂಡಿರುವುದು, ಸುಡಾನ್‌ನಲ್ಲಿನ ಕ್ಷಾಮದಿಂದಾಗಿ ಹಸಿವಿನಿಂದ ಬಳಲುವುದು, ಆಲ್ಝೈಮರ್‌ನಿಂದ ಬಳಲುವುದು. 
 • ನಿಮಗಿರುವ ಅದ್ಭುತವಾದ ಸ್ವಾತಂತ್ರ್ಯವನ್ನು ಅನುಭವಿಸಿ. 
 • ನಂತರ ನಿಮಗಿರುವ ಎಲ್ಲಾ ಅದ್ಭುತವಾದ ಅವಕಾಶಗಳ ಬಗ್ಗೆ ಯೋಚಿಸಿ: ಬೋಧನೆಗಳ ಅನುವಾದಗಳಿವೆ, ಅವು ಪುಸ್ತಕಗಳಲ್ಲಿ ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿವೆ, ಬೆಂಬಲಿಗರು ಅವುಗಳ ಪ್ರಕಟಣೆಯನ್ನು ಬೆಂಬಲಿಸಿದ್ದಾರೆ, ಶಿಕ್ಷಕರಿದ್ದಾರೆ, ನಾವು ಕಲಿಯಬಹುದಾದ ಕೇಂದ್ರಗಳಿವೆ ಮತ್ತು ಅವನ್ನು ಜನರು ಬೆಂಬಲಿಸುತ್ತಾರೆ, ನಮ್ಮಲ್ಲಿ ಕಲಿಯಲು ಬುದ್ಧಿವಂತಿಕೆ ಮತ್ತು ಆಸಕ್ತಿಯಿದೆ.  
 • ಕೊನೆಯದಾಗಿ, ನಿಮಗಿರುವ ಎಲ್ಲಾ ರೀತಿಯ ಸ್ವಾತಂತ್ರ್ಯದ ಬಗ್ಗೆ ಮತ್ತು ಪುಷ್ಟೀಕರಿಸುವ ಅಂಶಗಳ ಬಗ್ಗೆ ನೆನಪಿಸಿಕೊಳ್ಳಿ ಮತ್ತು ಇತಿಹಾಸದಲ್ಲಿನ ಹೆಚ್ಚಿನ ಜನರಿಗೆ ಮತ್ತು ಹೆಚ್ಚಿನ ಕಾಲಕ್ಕೆ ಹೋಲಿಸಿಕೊಂಡರೆ, ಇದು ಎಷ್ಟು ವಿಶಿಷ್ಟವಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ. 
 • ಅದರ ಬಗ್ಗೆ ಆನಂದ ಪಡಿ ಮತ್ತು ನಿಮಗಿರುವ ಈ ಅನನ್ಯ ಜೀವನವನ್ನು ಖಂಡಿತವಾಗಿಯೂ ವ್ಯರ್ಥ ಮಾಡದೆ, ಸಂಪೂರ್ಣವಾಗಿ ಉಪಯೋಗಿಸುವಂತೆ ನಿರ್ಧರಿಸಿ. 

ಸಾರಾಂಶ 

ಕನಿಷ್ಠ ಪಕ್ಷ ಈ ಕ್ಷಣದಲ್ಲಿ, ನಮ್ಮ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮತ್ತು ನಾವು ಎಷ್ಟು ಅದೃಷ್ಟವಂತರಾಗಿದ್ದೇವೆ ಎಂಬುದರ ಬಗ್ಗೆ ಯೋಚಿಸಿದಾಗ, ನಮ್ಮ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯತ್ತ ಕಾರ್ಯ ನಿರ್ವಹಿಸಲು, ಬಿಡುವಿಲ್ಲದಂತಹ ಜೀವನದ ವಿಷಮ ಪರಿಸ್ಥಿತಿಗಳಿಂದ ಮುಕ್ತರಾಗಿದ್ದೇವೆ ಎಂದು ಯೋಚಿಸಿದಾಗ, ನಮ್ಮ ಬಳಿಯಿರುವ ಪರಿಸ್ಥಿತಿಗಳ ಬಗ್ಗೆ ನಾವು ಆಳವಾದ ಮೆಚ್ಚಿಗೆಯ ಭಾವನೆಯನ್ನು ಬೆಳೆಸಿಕೊಳ್ಳುತ್ತೇವೆ. ಯಾರೊಬ್ಬರ ಜೀವನವೂ ಪರಿಪೂರ್ಣವಾಗಿರುವುದಿಲ್ಲ ಮತ್ತು ಯಾವುದೇ ಸನ್ನಿವೇಶವೂ ಪರಿಪೂರ್ಣವಾಗಿರುವುದಿಲ್ಲವಾದರೂ, ಅದು ಎಷ್ಟು ಭೀಕರವಾಗಿರಬಹುದು ಎಂಬುದಕ್ಕೆ ಹೋಲಿಸಿದರೆ, ನಾವು ನಿಜವಾಗಿಯೂ ಬಹಳಾ ಅದೃಷ್ಟವಂತರು ಎಂದು ನಮಗೆ ಅರಿವಾಗುತ್ತದೆ. ಈ ಮೆಚ್ಚುಗೆಯೊಂದಿಗೆ, ನಮ್ಮ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು, ನಮಗಿರುವ ಅವಕಾಶಗಳನ್ನು ಉಪಯುಕ್ತಗೊಳಿಸಲು, ಅಗತ್ಯವಾದ ಆತ್ಮವಿಶ್ವಾಸವನ್ನು ನಾವು ಬೆಳೆಸಿಕೊಳ್ಳುತ್ತೇವೆ.

Top