ಪ್ರೀತಿಯನ್ನು ವಿಸ್ತರಿಸುವುದು

ಎಲ್ಲರೊಂದಿಗಿನ ನಮ್ಮ ಪರಸ್ಪರ ಸಂಬಂಧ ಮತ್ತು ಅವಲಂಬನೆಯನ್ನು ಅರಿತುಕೊಂಡಾಗ, ನಾವು ನಮ್ಮನ್ನು ಮಾನವೀಯತೆಯ ಭಾಗವೆಂದು ಭಾವಿಸತೊಡಗುತ್ತೇವೆ ಮತ್ತು ಸಾರ್ವತ್ರಿಕ ಪ್ರೀತಿಯೊಂದಿಗೆ ಎಲ್ಲರ ಸಂತೋಷವನ್ನು ಬಯಸುತ್ತೇವೆ.
Meditations broadening love 1

ವಿವರಣೆ 

ಬೌದ್ಧಧರ್ಮದಲ್ಲಿನ ಪ್ರೀತಿಯು, ಇತರರು ಸಂತೋಷವಾಗಿರುವಂತೆ ಮತ್ತು ಸಂತೋಷವಾಗಿರಲು ಕಾರಣಗಳನ್ನು ಪಡೆಯುವಂತೆ ಬಯಸುವುದಾಗಿರುತ್ತದೆ ಮತ್ತು ಬೇರೆಯವರು ಸಹಾಯ ಮಾಡಲಿ ಎಂದು ಭಾವಿಸಿ ಸುಮ್ಮನೆ ಕುಳಿತುಕೊಳ್ಳದೆ, ಸಾಧ್ಯವಾದಲ್ಲಿ, ಆ ಸಂತೋಷವನ್ನು ಕರೆತರಲು ಸಹಾಯ ಮಾಡುವ ಇಚ್ಛೆಯನ್ನು ಒಳಗೊಂಡಿರುತ್ತದೆ. ಇದು ಸಾರ್ವತ್ರಿಕವಾಗಿದ್ದು, ಕೇವಲ ನಾವು ಇಷ್ಟಪಡುವವರನ್ನು ಅಥವಾ ನಮಗೆ ಹತ್ತಿರವಾದವರನ್ನಲ್ಲದೆ, ಅಪರಿಚಿತರನ್ನು ಮತ್ತು ನಾವು ಇಷ್ಟಪಡದವರನ್ನೂ ಸಹ ಇದು ಒಳಗೊಂಡಿರುತ್ತದೆ. ಈ ರೀತಿಯ ಸಾರ್ವತ್ರಿಕ ಪ್ರೀತಿಯು ನಿಷ್ಪಕ್ಷಪಾತವಾಗಿರುತ್ತದೆ: ಇದು ಬಾಂಧವ್ಯ, ವಿಕರ್ಷಣೆ ಮತ್ತು ಉದಾಸೀನತೆಯಿಂದ ಮುಕ್ತವಾಗಿರುತ್ತದೆ. ಏಕೆಂದರೆ ಇದು ‘ಎಲ್ಲರೂ ಒಂದೇ’ ಎಂಬ ಅರಿವಿಕೆಯೊಂದಿಗೆ ‘ಎಲ್ಲರೂ ಸಂತೋಷವಾಗಿರಲು ಬಯಸುತ್ತಾರೆ ಮತ್ತು ಅಸಂತೋಷವನ್ನಲ್ಲ’ ಎಂಬುದನ್ನು ಅರಿತುಕೊಳ್ಳುವುದರ ಮೇಲೆ ಆಧಾರಿತವಾಗಿರುತ್ತದೆ. ಕೆಲವರು ಅಸಂತೋಷವನ್ನು ಉಂಟುಮಾಡುವ ವಿನಾಶಕಾರಿ ರೀತಿಯಲ್ಲಿ ವರ್ತಿಸಬಹುದು ಮತ್ತು ಯೋಚಿಸಬಹುದು. ಆದರೆ ಅವರು ಹಾಗೆ ನಡೆದುಕೊಳ್ಳಲು ಕಾರಣವು, ಅವರು ಗೊಂದಲಕ್ಕೊಳಗಾಗಿದ್ದು, ಅವರಿಗೆ ಯಾವುದು ಸಂತೋಷವನ್ನು ಉಂಟುಮಾಡುತ್ತದೆ ಎಂಬುದನ್ನು ತಿಳಿಯದೇ ಇರುವುದಾಗಿರುವುದು. 

ಆದ್ದರಿಂದ, ನಮ್ಮಂತೆ ಇತರರೆಲ್ಲರೂ ಸಂತೋಷವಾಗಿರಲು ಬಯಸುವ ವ್ಯಕ್ತಿಗಳು ಎಂಬ ಯೋಚನೆಯ ಮೇಲೆ ನಮ್ಮ ಪ್ರೀತಿಯನ್ನು ಆಧರಿಸಿರುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದರ ಮೇಲೆ ನಾವು ನಮ್ಮ ಪ್ರೀತಿಯನ್ನು ಆಧರಿಸುವುದಿಲ್ಲ, ಅವರು ನಮಗೆ ಒಳ್ಳೆಯವರಾಗಿದ್ದಾರೆಯೇ ಅಥವಾ ನಮ್ಮನ್ನು ಮರಳಿ ಪ್ರೀತಿಸುತ್ತಾರೆಯೇ ಎಂಬುದರ ಮೇಲಂತೂ ಖಂಡಿತವಾಗಿಯೂ ಆಧರಿಸಿರುವುದಿಲ್ಲ. ನಮ್ಮಲ್ಲಿ ಯಾವುದೇ ನಿರೀಕ್ಷೆಗಳು ಮತ್ತು ಪಕ್ಷಪಾತಗಳಿಲ್ಲದ ಕಾರಣ, ನಮ್ಮ ಬೇಷರತ್ತಾದ ಪ್ರೀತಿಯು ಶಾಂತ ಮನಸ್ಸಿನ ಸ್ಥಿತಿಯಾಗಿರುತ್ತದೆ; ಇದು ಬಾಂಧವ್ಯದ ಆಧಾರದ ಮೇಲೆ ಯಾವುದೇ ಅಭಾಗಲಬ್ಧ ಆಲೋಚನೆ ಅಥವಾ ನಡವಳಿಕೆಯಿಂದ ನಮ್ಮ ಮನಸ್ಸನ್ನು ಕೆಡಿಸುವುದಿಲ್ಲ. 

ನಮ್ಮ ಪ್ರೀತಿಯ ಭಾವನಾತ್ಮಕ ಸ್ವರವು ಎಲ್ಲರೊಂದಿಗಿನ ಸಂಬಂಧದ ಭಾವನೆ ಮತ್ತು ಕೃತಜ್ಞತೆಯ ಭಾವನೆಯಾಗಿರುತ್ತದೆ. ಈ ಸಂಬಂಧ ಮತ್ತು ಕೃತಜ್ಞತೆಯ ಭಾವನೆಯು, ನಾವು ಸೇವಿಸುವ ಅಥವಾ ಬಳಸುವ ಪ್ರತಿಯೊಂದು ವಸ್ತುವು, ಇತರರ ಶ್ರಮದ ಫಲವಾಗಿದೆ ಎಂಬುದನ್ನು ಅರಿತುಕೊಳ್ಳುವುದರಿಂದ ಬರುತ್ತದೆ. ಇತರರು ಶ್ರಮ ಪಡದಿದ್ದರೆ, ನಾವು ಬಳಸುವ ಉತ್ಪನ್ನಗಳು, ಆ ಉತ್ಪನ್ನಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳು, ನಾವು ಸೇವಿಸುವ ಆಹಾರ, ನಾವು ಧರಿಸುವ ಬಟ್ಟೆ, ನಮ್ಮ ಮನೆಗಳಲ್ಲಿನ ವಿದ್ಯುತ್ ಮತ್ತು ನೀರು, ಮಾಹಿತಿ, ಇಂಟರ್ನೆಟ್ ಇತ್ಯಾದಿ, ಎಲ್ಲಿಂದ ಬರುತ್ತದೆ? ನಾವು ಖರೀದಿಸುವ ಉತ್ಪನ್ನಗಳನ್ನು ತಯಾರಿಸಲು ಇತರರನ್ನು ಉತ್ತೇಜಿಸುವ ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ ಜನರು ನಮಗೆ ಪರೋಕ್ಷವಾಗಿಯೂ ಸಹಾಯ ಮಾಡುತ್ತಾರೆ. 

ಈ ಸಂಬಂಧ ಮತ್ತು ಕೃತಜ್ಞತೆಯ ಭಾವನೆಯನ್ನು ಎಷ್ಟು ಬಲವಾಗಿ ಅನುಭವಿಸುತ್ತೇವೆಯೋ ಅಷ್ಟೇ ನಾವು ಸುರಕ್ಷಣೆ ಮತ್ತು ಸಂತೋಷದ ಭಾವನೆಯನ್ನು ಅನುಭವಿಸುತ್ತೇವೆ. ಇದು ಆಕ್ಸಿಟೋಸಿನ್ ಹಾರ್ಮೋನ್ಗೆ ಸಂಬಂಧಿಸಿದೆ – ಇದು ತಾಯಿ ಮತ್ತು ನವಜಾತ ಶಿಶುವಿನ ನಡುವಿನ ಬಂಧದಲ್ಲಿ ಕಾಣಬಹುದು. ಒಮ್ಮೆ ಈ ಪ್ರೀತಿಯ, ಸಂತೋಷದ ಭಾವನೆಯನ್ನು ಹುಟ್ಟುಹಾಕಿದರೆ, ಅದನ್ನು ಮೊದಲು ನಮ್ಮ ಧ್ಯಾನದ ಮೂಲಕ ವಿಸ್ತರಿಸುತ್ತೇವೆ, ಏಕೆಂದರೆ ನಾವೇ ಸಂತೋಷವಾಗಿರಲು ಬಯಸದಿದ್ದರೆ, ಬೇರೆಯವರು ಸಂತೋಷವಾಗಿರಲಿ ಎಂದು ಹೇಗೆ ತಾನೆ ಬಯಸಬಹುದು? ನಂತರ, ಅದು ಎಲ್ಲರನ್ನೂ ಒಳಗೊಳ್ಳುವವರೆಗೆ, ನಾವು ಅದನ್ನು ವ್ಯಾಪಕವಾದ ಗುಂಪುಗಳಿಗೆ ವಿಸ್ತರಿಸುತ್ತೇವೆ. 

ಪ್ರತಿಯೊಂದು ಹಂತದಲ್ಲಿ, ನಮ್ಮ ಪ್ರೀತಿಯು ಈ ಮೂರು ಆಲೋಚನೆಗಳನ್ನು ಒಳಗೊಂಡಿರುತ್ತದೆ: 

ಇತರರು ಸಂತೋಷವಾಗಿದ್ದರೆ ಮತ್ತು ಸಂತೋಷವಾಗಿರಲು ಕಾರಣಗಳನ್ನು ಹೊಂದಿದ್ದರೆ ಎಷ್ಟು ಅದ್ಭುತವಾಗಿರುತ್ತಿತ್ತು. 

ಅವರು ಸಂತೋಷವಾಗಿರಲಿ, ಅಂದರೆ, "ಅವರು ಸಂತೋಷವಾಗಿರಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ." 

"ನಾನು ಅವರಿಗೆ ಸಂತೋಷವನ್ನು ತರುವಂತೆ ಸಾಧ್ಯವಾಗಲಿ." 

ನಾವು ಇತರರಿಗೆ ಸಂತೋಷದ ಕಾರಣಗಳನ್ನು ಕರೆತರಬೇಕೆಂದು ಆಶಿಸಿದಾಗ, ಮೊದಲು ಅವರ ದುಃಖದ ಕಾರಣಗಳನ್ನು ನಾವು ಗುರುತಿಸಬೇಕು. ಅವರಿಗೆ ಹಸಿವಾಗಿದ್ದರೆ, ಕೇವಲ ಅವರಿಗೆ ಉಣ್ಣಲು ಸಾಕಾಗುವಷ್ಟು ಸಿಗಲಿ ಎಂದು ನಾವು ಬಯಸುವುದಿಲ್ಲ; ಅವರು ಊಟದ ನಂತರ ಸಂತೋಷವಾಗಿದ್ದರೂ ಸಹ, ಅವರು ಜಿಡ್ಡು ಪದಾರ್ಥವನ್ನು ಅತಿಯಾಗಿ ಸೇವಿಸಿ, ಸ್ಥೂಲಕಾಯರಾಗಬಹುದು ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದ, ಅವರ ಆಹಾರ ಪದ್ಧತಿಯೊಂದಿಗೆ, ಭಾವನಾತ್ಮಕ ಸಮತೋಲನ, ತೃಪ್ತಿ ಮತ್ತು ಸ್ವಯಂ ನಿಯಂತ್ರಣವನ್ನು ಹೊಂದಿರಬೇಕೆಂದು ನಾವು ಬಯಸುತ್ತೇವೆ. ಹಣ, ವಸ್ತು ಸರಕುಗಳು ಇತ್ಯಾದಿಗಳ ವಿಷಯಗಳಲ್ಲೂ ಇದನ್ನೇ ಅನುಸರಿಸುತ್ತೇವೆ. ಅಲ್ಪಾವಧಿಯ ಭೌತಿಕ ಅಗತ್ಯತೆಯ ನೆರವೇರಿಕೆಯ ಬದಲು ದೀರ್ಘಕಾಲೀನ ಸುಸ್ಥಿರವಾದ ಸಂತೋಷದ ಬಗ್ಗೆ ನಾವು ಯೋಚಿಸುತ್ತೇವೆ. 

ಧ್ಯಾನ 

  • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
  • ನೀವು ಸೇವಿಸುವ ಮತ್ತು ಬಳಸುವ ಎಲ್ಲವೂ ಇತರರ ಮೇಲೆ ಹೇಗೆ ಅವಲಂಬಿತವಾಗಿರುತ್ತದೆ ಎಂಬುದನ್ನು ಯೋಚಿಸಿ. 
  • ಇತರರೆಲ್ಲರೊಂದಿಗಿರುವ ಸಂಬಂಧದ ಭಾವನೆ ಮತ್ತು ಆಳವಾದ ಕೃತಜ್ಞತೆಯ ಭಾವನೆಯ ಮೇಲೆ ಕೇಂದ್ರೀಕರಿಸಿ. 
  • ಇದು ನಿಮ್ಮನ್ನು ಹೇಗೆ ಪ್ರೀತಿಯಿಂದಿರಿಸುತ್ತದೆ, ಹೆಚ್ಚು ಸುರಕ್ಷಿತ ಮತ್ತು ಸಂತೋಷವಾಗಿರಿಸುತ್ತದೆ ಎಂಬುದನ್ನು ಗಮನಿಸಿ. 
  • ನಿಮ್ಮ ಮೇಲೆ ನೀವು ಕೇಂದ್ರೀಕರಿಸಿ ಮತ್ತು ಆಗಾಗ್ಗೆ ಅಸಂತೋಷವಾಗಿರುತ್ತೀರಿ ಎಂಬುದನ್ನು ಗಮನಿಸಿ. 
  • ಹೀಗೆ ಯೋಚಿಸಿ: ನಾನು ಸಂತೋಷವಾಗಿದ್ದರೆ ಮತ್ತು ಸಂತೋಷವಾಗಿರಲು ಕಾರಣಗಳನ್ನು ಹೊಂದಿದ್ದರೆ ಎಷ್ಟು ಅದ್ಭುತವಾಗಿರುತ್ತಿತ್ತು; ನಾನು ಸಂತೋಷವಾಗಿರಲಿ ಎಂದು ಆಶಿಸುತ್ತೇನೆ; ನನಗೆ ಹೆಚ್ಚಿನ ಸಂತೋಷವನ್ನು ತರುವ ಕಾರಣಗಳನ್ನು ನಾನು ಅಭಿವೃದ್ಧಿಪಡಿಸಬೇಕು, ಕೇವಲ ಅಲ್ಪಾವಧಿಯ ಬಾಹ್ಯ ಸಂತೋಷವನ್ನಲ್ಲ, ಬದಲಿಗೆ ದೀರ್ಘಾವಧಿಯ ಸಂತೋಷ. ನಿಮ್ಮನ್ನು ಸಂತೋಷವಾದ ವ್ಯಕ್ತಿಯಾಗಿ ಮಾಡುವ ನಿರ್ದಿಷ್ಟ ವಿಷಯಗಳ ಬಗ್ಗೆಯೂ ಸಹ ನೀವು ಯೋಚಿಸಬಹುದು - ಭಾವನಾತ್ಮಕ ಸಮತೋಲನ ಮತ್ತು ಸ್ಥಿರತೆ, ಶಾಂತವಾದ, ಸ್ಪಷ್ಟವಾದ ಮನಸ್ಸು, ಹೆಚ್ಚಿನ ತಿಳುವಳಿಕೆ, ಇತರರೊಂದಿಗೆ ಉತ್ತಮವಾಗಿ ಸಂಬಂಧವನ್ನು ಹೊಂದುವುದು ಇತ್ಯಾದಿ.
  • [ಐಚ್ಛಿಕ: ಈ ಪ್ರೀತಿಯಿಂದಿರುವ ಸಂತೋಷವನ್ನು ಪ್ರತಿನಿಧಿಸುವ ಬೆಚ್ಚಗಿನ ಹಳದಿ ಬಣ್ಣದ ಬೆಳಕಿನಿಂದ ನೀವು ತುಂಬಿರುವಿರಿ ಎಂದು ಕಲ್ಪಿಸಿಕೊಳ್ಳಿ.] 
  • ನಂತರ ನೀವು ಇಷ್ಟಪಡುವ ಯಾರೊಂದಿಗಾದರೂ ಇದೇ ರೀತಿಯಾಗಿ ಮಾಡಿ ಮತ್ತು ನೀವು ಇಷ್ಟಪಡುವ ಕೆಲವು ಜನರಿಗೆ ಅದನ್ನು ವಿಸ್ತರಿಸಿ. 
  • [ಐಚ್ಛಿಕ: ಆ ಬೆಚ್ಚಗಿನ ಹಳದಿ ಬೆಳಕು ನಿಮ್ಮಿಂದ ಹೊರಹೊಮ್ಮಿ, ಆ ವ್ಯಕ್ತಿಯನ್ನು ಆಲಂಗಿಸುತ್ತಿರುವಂತೆ ಕಲ್ಪಿಸಿಕೊಳ್ಳಿ.] 
  • ನಂತರ, ಜೀವನದಲ್ಲಿ ನಿಮ್ಮೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರದ ವ್ಯಕ್ತಿಗಳಾಗಿರಬಹುದಾದ ಅಂಗಡಿಯಲ್ಲಿನ ಚೆಕ್-ಔಟ್ ಕೌಂಟರ್‌ನಲ್ಲಿರುವ ಗುಮಾಸ್ತ ಅಥವಾ ಬಸ್ ಡ್ರೈವರ್‌ನಂತಹವರಿಗೆ ಇದನ್ನು ವಿಸ್ತರಿಸಿ.
  • ನಂತರ ನೀವು ಇಷ್ಟಪಡದ ಜನರಿಗೆ ವಿಸ್ತರಿಸಿ. 
  • ನಂತರ ಈ ಮೂರು ಗುಂಪುಗಳಲ್ಲಿರುವವರೆಲ್ಲರಿಗೂ ಒಟ್ಟಿಗೆ ವಿಸ್ತರಿಸಿ. 
  • ನಂತರ ನಿಮ್ಮ ನಗರ, ನಿಮ್ಮ ದೇಶ, ಮತ್ತು ಇಡೀ ಪ್ರಪಂಚದ ಪ್ರತಿಯೊಬ್ಬರಿಗೂ ಆ ಪ್ರೀತಿಯನ್ನು ವಿಸ್ತರಿಸಿ. 

ಸಾರಾಂಶ 

ಪಕ್ಷಪಾತವಿಲ್ಲದ, ಸಾರ್ವತ್ರಿಕ ಪ್ರೀತಿಯು ಒಂದು ಸಂಕೀರ್ಣವಾದ ಭಾವನೆಯಾಗಿದ್ದು, ಪ್ರತಿಯೊಬ್ಬರೊಂದಿಗಿನ ಸಂಬಂಧದ ಭಾವನೆಯನ್ನು ಮತ್ತು ಅವರು ನಿಮ್ಮ ಜೀವನದಲ್ಲಿ ನಿಮ್ಮ ಯೋಗಕ್ಷೇಮಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಹೇಗೆ ಕೊಡುಗೆ ನೀಡಿದ್ದಾರೆ ಎಂಬುದರ ಬಗ್ಗೆಗಿರುವ ಕೃತಜ್ಞತೆಯ ಭಾವನೆಯನ್ನು ಸಂಯೋಜಿಸುತ್ತದೆ. ಇದು ಬಾಂಧವ್ಯವಿಲ್ಲದ, ವಿಕರ್ಷಣೆ ಅಥವಾ ಉದಾಸೀನತೆ ಇಲ್ಲದ, ನಮ್ಮ ಅಚ್ಚುಮೆಚ್ಚಿನವರು ಅಥವಾ ನಮಗೆ ದೂರವಾದವರ ಬಗ್ಗೆ ಭಾವನೆಗಳಿಲ್ಲದ, ಶಾಂತವಾದ, ಪ್ರೀತಿಯಿಂದ ಕೂಡಿದ ಭಾವನಾತ್ಮಕ ಸ್ಥಿತಿಯಾಗಿರುತ್ತದೆ. ಇದು ಬೇಷರತ್ತಾಗಿರುತ್ತದೆ ಮತ್ತು ಯಾರು ಹೇಗೆ ವರ್ತಿಸಿದರೂ ಪರವಾಗಿಲ್ಲ, ಇದು ಎಲ್ಲರನ್ನು ಆಲಂಗಿಸುತ್ತದೆ, ಏಕೆಂದರೆ ಇದು ಸಂತೋಷವಾಗಿರುವ ಮತ್ತು ಅಸಂತೋಷವಾಗದೇ ಇರುವ ಬಯಕೆಯ ಸಮಾನತೆಯನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಆಧಾರಿತವಾಗಿರುತ್ತದೆ. ಇದು ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ಇದು ನಿಷ್ಕ್ರಿಯವಾದ ಭಾವನೆಯಾಗಿರುವುದಿಲ್ಲ, ಬದಲಿಗೆ ಇತರರು ಭೌತಿಕ ಅಗತ್ಯಗಳಿಂದ ಮುಕ್ತವಾಗಿರಬೇಕೆನ್ನುವ ಅಲ್ಪಾವಧಿಯ ಸಂತೋಷವನ್ನು ಮಾತ್ರವಲ್ಲದೆ, ಗೊಂದಲಮಯ ಭಾವನೆಗಳು ಮತ್ತು ಆಲೋಚನೆಗಳಿಂದ ಮುಕ್ತವಾಗಿರಬೇಕೆನ್ನುವ ದೀರ್ಘಾವಧಿಯ ಸುಸ್ಥಿರವಾದ ಸಂತೋಷವನ್ನು ಪಡೆಯಲು, ಸಾಧ್ಯವಾಗುವಷ್ಟು ಸಹಾಯ ಮಾಡುವಂತೆ ಪ್ರೇರೇಪಿಸಲು ಕಾರಣವಾಗುತ್ತದೆ.

Top