ಸಹಾನುಭೂತಿಯ ಭಾವನೆ

ನಮ್ಮ ಸಮಸ್ಯೆಗಳು ಮತ್ತು ಅವುಗಳ ಕಾರಣಗಳಿಂದ ಮುಕ್ತರಾಗಲು ನಿರ್ಧರಿಸಿದಾಗ, ನಾವು ನಮ್ಮ ಕಾಳಜಿಯನ್ನು ಇತರರಿಗೆ ತಿರುಗಿಸಬಹುದು, ಮತ್ತು ಸಹಾನುಭೂತಿಯಿಂದ, ಅವರೂ ಕೂಡ ಮುಕ್ತರಾಗಬೇಕೆಂಬ ಬಯಕೆಯನ್ನು ಬೆಳೆಸಿಕೊಳ್ಳಬಹುದು.
Meditation feeling compassion

ವಿವರಣೆ

ನಾವು ಕಾಳಜಿಯುಳ್ಳ, ವಾಸ್ತವಿಕ ಮನೋಭಾವವನ್ನು ಬೆಳೆಸಿಕೊಂಡ ನಂತರ, ನಮ್ಮ ಮುಂದಿನ ಹೆಜ್ಜೆಯು ಇತರರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದಾಗಿರುತ್ತದೆ. ಸಹಾನುಭೂತಿಯು, ಇತರರನ್ನು ಕನಿಕರದಿಂದ ಕೀಳಾಗಿ ನೋಡುವುದಲ್ಲ, ಬದಲಿಗೆ ಅನುಕಂಪವನ್ನು, ಅಂದರೆ ಇತರರ ಭಾವನೆಗಳನ್ನು ಅನುಭವಿಸುವುದರ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ ಸಹಾನುಭೂತಿಯು, ನಮ್ಮಂತೆಯೇ, ಇತರರೂ ಕೂಡ ದುಃಖದಿಂದ ಮತ್ತು ಅದರ ಕಾರಣಗಳಿಂದ ಮುಕ್ತರಾಗಬೇಕೆಂಬ ಬಯಕೆಯಾಗಿರುತ್ತದೆ. ಇದೇನು ಹತಾಶೆಯ ವಿಷಯದ ಬಗ್ಗೆಗಿರುವ ಆಶಾವಾದಿ ಚಿಂತನೆಯಾಗಿರುವುದಿಲ್ಲ; ಬದಲಿಗೆ, ಅವುಗಳಿಂದ ಮುಕ್ತವಾಗಿರಲು ಸಾಧ್ಯ ಎಂಬ ವಿಶ್ವಾಸವನ್ನು ಆಧರಿಸಿರುತ್ತದೆ. ಸಹಾನುಭೂತಿಯು, ಸಹಾಯ ಮಾಡುವ ಒಂದು ಇಚ್ಛೆ ಮತ್ತು ನಾವು ಯಾವುದೇ ರೀತಿಯಲ್ಲಾದರೂ ಸಹಾಯ ಮಾಡಬೇಕೆಂಬ ಉದ್ದೇಶವನ್ನು ಸಹ ಒಳಗೊಂಡಿರುತ್ತದೆ. ಇದು ಕೇವಲ ನಿಷ್ಕ್ರಿಯವಾಗಿರುವುದಿಲ್ಲ. ಸಾಮಾನ್ಯವಾಗಿ ನಾವು ದೈಹಿಕ ಅಥವಾ ಭೌತಿಕ ರೀತಿಯಲ್ಲಿ ಸಹಾಯ ಮಾಡುತ್ತೇವೆ, ಅಥವಾ ಅಗತ್ಯವಿದ್ದಲ್ಲಿ, ಮಾನಸಿಕವಾಗಿ, ಇತರರಿಗೆ ಅವರ ಸಮಸ್ಯೆಗಳನ್ನು ನಿವಾರಿಸಲು ಅಗತ್ಯವಿರುವ ಮನಸ್ಥಿತಿಯನ್ನು ಸೃಷ್ಟಿಸಿ, ಅವರಿಗೆ ಅದನ್ನು ನೀಡುವಂತೆ ಕಲ್ಪಿಸಿಕೊಳ್ಳುತ್ತೇವೆ. 

ಧ್ಯಾನ 

  • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
  • ಭೂಕಂಪದಲ್ಲಿ ನಿಮ್ಮ ಮನೆ ಮತ್ತು ಆಸ್ತಿಯನ್ನು ಕಳೆದುಕೊಂಡಿರುವಿರಿ ಮತ್ತು ನೀವು ತೆರೆದ ಸ್ಥಳದಲ್ಲಿ ಮಲಗಬೇಕಾಗಿದೆ, ಆಹಾರ ಮತ್ತು ನೀರಿಗಾಗಿ ಹೆಣಗಾಡಬೇಕಾಗಿದೆ ಮತ್ತು ನಿಮ್ಮ ಜೀವನವನ್ನು ಪುರ್ನನಿರ್ಮಿಸಲು ನಿಮ್ಮ ಬಳಿ ಹಣವಿಲ್ಲ ಎಂದು ಕಲ್ಪಿಸಿಕೊಳ್ಳಿ. ನೀವು ಸಂಪೂರ್ಣವಾಗಿ ಹತಾಶರಾಗಿರುವಿರಿ ಮತ್ತು ಖಿನ್ನತೆಯನ್ನು ಅನುಭವಿಸುತ್ತಿರುವಿರಿ. 
  • ನೀವು ಈ ಪರಿಸ್ಥಿತಿಯಿಂದ ಹೇಗೆ ಮುಕ್ತರಾಗಲು ಬಯಸುತ್ತೀರಿ ಎಂಬುದನ್ನು ಕಲ್ಪಿಸಿಕೊಳ್ಳಿ ಮತ್ತು ನಿಮ್ಮ ದುಃಖಕ್ಕೆ ಕಾರಣವು ನಿಮ್ಮ ಖಿನ್ನತೆಯಾಗಿದೆ ಎಂಬುದನ್ನು ಅರಿತುಕೊಳ್ಳಿ, ಆದ್ದರಿಂದ ಈ ಖಿನ್ನತೆಯಿಂದ ಮುಕ್ತರಾಗಲು ಮತ್ತು ಮರುನಿರ್ಮಾಣಕ್ಕಾಗಿ ಮಾರ್ಗಗಳನ್ನು ಕಂಡುಕೊಳ್ಳಲು ನಿರ್ಧರಿಸಿ. 
  • ನಂತರ ನಿಮ್ಮ ತಾಯಿಯನ್ನು ಅದೇ ಪರಿಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಿ ಮತ್ತು ನೀವು ಮುಕ್ತಾರಾಗಬೇಕೆನ್ನುವ ನಿಮ್ಮ ನಿರ್ಧಾರವನ್ನು ಬದಲಿಸಿ, ನಿಮ್ಮ ತಾಯಿಯೂ ಕೂಡ ಈ ಪರಿಸ್ಥಿತಿಯಿಂದ ಮುಕ್ತರಾಗಬೇಕೆಂದು ನಿರ್ಧರಿಸಲು, ಸಹಾನುಭೂತಿಯನ್ನು ಬೆಳೆಸಿಕೊಳ್ಳಿ. 
  • ಅವರ ವಿಶ್ವಾಸವು ಕುಂದಬಾರದೆಂದು ಮತ್ತು ಪುನರ್ನಿರ್ಮಿಸಲು ಅವರಲ್ಲಿ ಧೈರ್ಯ ಮತ್ತು ಶಕ್ತಿಯಿರಬೇಕೆಂದು ಹಾರೈಸಿ. 
  • ನಂತರ, ಪ್ರಸ್ತುತವಾಗಿ, ಇದೇ ಪರಿಸ್ಥಿತಿಯಲ್ಲಿರುವ ನೂರಾರು ಸಾವಿರ ನೇಪಾಳಿಯರೊಂದಿಗೆ ಇದನ್ನು ಕಲ್ಪಿಸಿಕೊಳ್ಳಿ ಮತ್ತು ಅವರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳಿ. 
  • ಭಾವನಾತ್ಮಕ ಅಸಮತೋಲನಕ್ಕಾಗಿ ಇದೇ ವಿಧಾನವನ್ನು ಬಳಸಿ. ನೀವು ಭಾವನಾತ್ಮಕವಾಗಿ ಅಸಮತೋಲಿತರಾಗಿದ್ದ ಒಂದು ಸಮಯದಲ್ಲಿ, ಶಾಂತ, ಸ್ಪಷ್ಟವಾದ ಮನಸ್ಸನ್ನು ಅಭಿವೃದ್ಧಿಪಡಿಸುವ ಮೂಲಕ ನೀವು ಭಾವನಾತ್ಮಕ ಸಮತೋಲನವನ್ನು ಪಡೆಯಬಹುದು ಎಂಬುದನ್ನು ಅರಿತುಕೊಂಡದ್ದನ್ನು ನೆನಪಿಸಿಕೊಳ್ಳಿ ಮತ್ತು ಅಸಮತೋಲನದಿಂದ ಮುಕ್ತರಾಗಲು ನಿರ್ಧಾರವನ್ನು ತೆಗೆದುಕೊಳ್ಳಿ. 
  • ನಂತರ ಇದರಲ್ಲಿ ನಿಮ್ಮ ತಾಯಿಯನ್ನು ಸೇರಿಸುವಂತೆ ಬದಲಿಸಿಕೊಳ್ಳಿ, ತದನಂತರ ಎಲ್ಲಾ ಜೀವಿಗಳನ್ನು ಸೇರಿಸುವಂತೆ ಬದಲಾಯಿಸಿಕೊಳ್ಳಿ. 

ಸಾರಾಂಶ 

ಹೇಗೆ ನಾವು ಸಂತೋಷವಾಗಿರಲು ಮತ್ತು ಅಸಂತೋಷವಾಗದೇ ಇರಲು ಬಯಸುತ್ತೇವೆಯೋ, ಅದೇ ರೀತಿ ಉಳಿದವರೂ ಸಹ ಯೋಚಿಸುತ್ತಾರೆ. ನಮ್ಮಂತೆಯೇ ಪ್ರತಿಯೊಬ್ಬರು ತಮ್ಮ ನೋವು ಮತ್ತು ದುಃಖಗಳಿಂದ ಮುಕ್ತರಾಗಲು ಬಯಸುತ್ತಾರೆ. ಅವರ ಬಗ್ಗೆ ಸಹಾನುಭೂತಿಯನ್ನು - ಅಂದರೆ ಅವರು ತಮ್ಮ ದುಃಖದಿಂದ ಮುಕ್ತರಾಗಬೇಕೆಂಬ ಬಯಕೆ – ಬೆಳೆಸಿಕೊಳ್ಳಲು, ಮೊದಲು ನಾವು ನಮ್ಮ ಸ್ವಂತ ಸಮಸ್ಯೆಗಳನ್ನು ಒಪ್ಪಿಕೊಳ್ಳಬೇಕು ಮತ್ತು ಎದುರಿಸಬೇಕು ಮತ್ತು ಅವುಗಳಿಂದ ಮುಕ್ತರಾಗುವ ಬಲವಾದ ಬಯಕೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸ್ವಂತ ದುಃಖಗಳನ್ನು ತೊಡೆದುಹಾಕುವ ನಮ್ಮ ನಿರ್ಧಾರವು ಬಲವಾದಷ್ಟು, ಇತರರ ದುಃಖಗಳ ಬಗ್ಗೆ ಅನುಕಂಪದಿಂದಿರಲು ಮತ್ತು ಅವರ ದುಃಖಗಳನ್ನು ಜಯಿಸಲು ಅವರಿಗೆ ಸಹಾಯ ಮಾಡುವ ನಮ್ಮ ನಿರ್ಧಾರವನ್ನು ಅಷ್ಟೇ ಉತ್ತಮವಾಗಿ ಅಭಿವೃದ್ಧಿಪಡಿಸಲು ನಮ್ಮಿಂದ ಸಾಧ್ಯವಾಗುತ್ತದೆ. ಇತರರಿಗಾಗಿ ಬೆಳೆಸಿಕೊಳ್ಳುವ ಈ ನಿರ್ಧಾರವನ್ನು ನಾವು "ಸಹಾನುಭೂತಿ" ಎಂದು ಕರೆಯುತ್ತೇವೆ.

Top