ಜಟಿಲವಾದ ಸಂಬಂಧಗಳನ್ನು ನಿಭಾಯಿಸುವುದು

ನಮ್ಮ ಸಂಬಂಧಗಳನ್ನು ಸುಧಾರಿಸಲು, ತೊಂದರೆಗಳನ್ನು ಉಂಟುಮಾಡುವ ನಮ್ಮ ಅವಾಸ್ತವಿಕ ಪ್ರಕ್ಷೇಪಗಳನ್ನು ತ್ಯಜಿಸಬೇಕು ಮತ್ತು ಕಾಳಜಿಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
Meditation difficult relationships nik shuliahin unsplash

ವಿವರಣೆ 

ಬೌದ್ಧ ಧ್ಯಾನವು ಸಮಸ್ಯೆಗಳನ್ನು ನಿವಾರಿಸುವುದರ ಮೇಲೆ ಆಧಾರಿತವಾಗಿದೆ. ಇವುಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಹಾಯ ಮಾಡಲೆಂದೇ ಬುದ್ಧ ಚತುರಾರ್ಯ ಸತ್ಯಗಳನ್ನು ಬೋಧಿಸಿದರು. ನಾವೆಲ್ಲರೂ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಕೆಲವು, ಇತರ ಸಮಸ್ಯೆಗಳಿಗಿಂತ ಹೆಚ್ಚು ಗಂಭೀರವಾಗಿರುತ್ತವೆ. ಆದರೆ ನಮ್ಮಲ್ಲಿ ಹೆಚ್ಚಿನವರು ಎದುರಿಸುವ ಸಮಸ್ಯೆಗಳು ನಮ್ಮ ಸಂಬಂಧಗಳನ್ನು ಒಳಗೊಂಡಿರುತ್ತವೆ. 

ಅಂತಹ ಕೆಲವು ಸಂಬಂಧಗಳು ಬಹಳಾ ಸಂಕೀರ್ಣವಾಗಿದ್ದು, ನಮಗೆ ಸವಾಲೊಡ್ಡಬಹುದು. ಆದರೆ ಅವುಗಳನ್ನು ಹೇಗೆ ಉತ್ತಮವಾಗಿ ನಿಭಾಯಿಸಬಹುದು ಎಂದು ಬುದ್ಧ ನಮಗೆ ಕಲಿಸಿರುವರು. ಈ ಸಮಸ್ಯೆಗಳ ಕಾರಣಗಳನ್ನು ಕಂಡುಹಿಡಿಯಲು ನಾವು ನಮ್ಮೊಳಗೆ ನೋಡಬೇಕಾಗಿದೆ. ಏಕೆಂದರೆ, ಇತರರು ಎಷ್ಟೇ ಬಲವಾಗಿ ನಮ್ಮ ಸಮಸ್ಯೆಗಳಿಗೆ ಕಾರಣವಾದರೂ, ನಾವು ನಿಯಂತ್ರಿಸಬಹುದಾದ ಏಕೈಕ ವಿಷಯವೆಂದರೆ ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು. ಅಂದರೆ ನಮ್ಮ ವರ್ತನೆ ಮತ್ತು ನಡವಳಿಕೆ ಎರಡರಲ್ಲೂ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು. 

ನಮ್ಮ ನಡವಳಿಕೆಯು ನಮ್ಮ ವರ್ತನೆಗಳಿಂದ ರೂಪುಗೊಳ್ಳುವುದರಿಂದ, ನಮ್ಮ ವರ್ತನೆಗಳನ್ನು ಸುಧಾರಿಸುವಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಬೇಕು. ನಾವು ತೊಂದರೆ ಉಂಟುಮಾಡುವ ವರ್ತನೆಗಳನ್ನು, ವಾಸ್ತವಿಕತೆ ಮತ್ತು ಸಹಾನುಭೂತಿಯನ್ನು ಆಧರಿಸಿದ ಹೆಚ್ಚು ಆರೋಗ್ಯಕರವಾದ ವರ್ತನೆಗಳೊಂದಿಗೆ ಬದಲಾಯಿಸಿದರೆ, ಜಟಿಲವಾದ ಸಂಬಂಧಗಳಿಂದ ನಾವು ಅನುಭವಿಸುವ ನೋವನ್ನು ಸಂಪೂರ್ಣವಾಗಿ ಹೋಗಲಾಡಿಸದಿದ್ದರೆ, ಕೊನೆಯ ಪಕ್ಷ ಕಡಿಮೆಯಾದರೂ ಮಾಡಬಹುದು.  

ಧ್ಯಾನ 

  • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
  • ಮೊದಲ ಚತುರಾರ್ಯ ಸತ್ಯವಾದ, ನಿಜವಾದ ದುಃಖದ ಉದಾಹರಣೆಯಾಗಿ, ನಿಮ್ಮೊಂದಿಗೆ ಜಟಿಲವಾದ ಸಂಬಂಧವನ್ನು ಹೊಂದಿರುವ ಯಾರೊಬ್ಬರ ಮೇಲಾದರೂ ಗಮನಹರಿಸಿ. 
  • ಕಿರಿಕಿರಿಯ ಭಾವನೆಗಳು ಮೂಡಲಿ. 
  • ಎರಡನೆಯ ಚತುರಾರ್ಯ ಸತ್ಯವಾದ ದುಃಖದ ನಿಜವಾದ ಕಾರಣದ ಉದಾಹರಣೆಯಾಗಿ, ನೀವು ಏಕೆ ಹಾಗೆ ಭಾವಿಸುತ್ತೀರಿ ಎಂಬುದನ್ನು ಪರೀಕ್ಷಿಸಿ. ಬಹುಶಃ ಅವರ ಜೊತೆಯಲ್ಲಿರುವುದು ಕಷ್ಟಕರವಾಗಿರಬಹುದು ಮತ್ತು ಅವರು ನಮಗೆ ತೊಂದರೆಯುಂಟುಮಾಡಬಹುದು ಅಥವಾ ಅವರ ಬಗ್ಗೆ ನಮಗೆ ಏನೋ ಇಷ್ಟವಾಗುವುದಿಲ್ಲ, ಅಥವಾ ನಾವು ಅವರೊಂದಿಗೆ ಸಮಯ ಕಳೆಯಲು ಬಯಸಿದಾಗ ಅವರು ಸಿಗುವುದಿಲ್ಲ ಅಥವಾ ಅವರು ಯಾವಾಗಲೂ ಉತ್ತಮ ಮನಸ್ಥಿತಿಯಲ್ಲಿಲ್ಲದಿರಬಹುದು.
  • ನಾವು ಹೆಚ್ಚು ಆಳವಾಗಿ ಪರೀಕ್ಷಿಸಿದಂತೆ, ನಾವು ಅವರನ್ನು ಆ ಒಂದು ಅಂಶದಿಂದ ಮಾತ್ರ ಗುರುತಿಸುತ್ತೇವೆ ಮತ್ತು ಅವರ ಜೀವನದಲ್ಲಿ ನಮ್ಮ ಹೊರತಾಗಿ ಇತರ ಜನರೂ ಇರುವ ಮತ್ತು ಅವರ ಮೇಲೆ ಪರಿಣಾಮ ಬೀರುವ ಇತರ ಎಲ್ಲ ವಿಷಯಗಳನ್ನು ಹೊಂದಿರುವ, ನಮ್ಮಂತೆಯೇ ಭಾವನೆಗಳಿರುವ, ನಮ್ಮಂತೆಯೇ ಎಲ್ಲರಿಂದ ಇಷ್ಟವಾಗಲು ಬಯಸುವ ಒಬ್ಬ ವ್ಯಕ್ತಿಯೆಂದು ಪರಿಗಣಿಸುವುದಿಲ್ಲ ಎಂದು ನೋಡುತ್ತೇವೆ.  
  • ಪ್ರತಿಯೊಬ್ಬರೂ ಅವರ ಬಗ್ಗೆ ಆ ರೀತಿಯಾಗಿ ಭಾವಿಸುವುದಿಲ್ಲ, ಆದ್ದರಿಂದ ಮೂರನೇ ಚತುರಾರ್ಯ ಸತ್ಯವಾದ ದುಃಖದ ನಿಜವಾದ ಅಂತ್ಯದ ಉದಾಹರಣೆಯಾಗಿ, ಅವರೊಂದಿಗಿನ ಕಿರಿಕಿರಿಯ ಮತ್ತು ಕಸಿವಿಸಿಯ ಭಾವನೆಯನ್ನು ಕೊನೆಗೊಳಿಸಲು ಸಾಧ್ಯವಿದೆ. 
  • ಆ ಕಸಿವಿಸಿಯನ್ನು ಹೋಗಲಾಡಿಸಲು, ನಾಲ್ಕನೇ ಚತುರಾರ್ಯ ಸತ್ಯದ ಉದಾಹರಣೆಯಾಗಿ, ಸರಿಯಾದ ತಿಳುವಳಿಕೆಯಿರುವ ನಿಜವಾದ ಮನಸ್ಸಿನ ಮಾರ್ಗವನ್ನು ನಾವು ಅರಿತುಕೊಳ್ಳಬೇಕು - ಅವರು ನಿಜವಾಗಿಯೂ ಕಿರಿಕಿರಿಯನ್ನುಂಟುಮಾಡುವ ವ್ಯಕ್ತಿಯಾಗಿದ್ದರೆ, ಅವರು ಹುಟ್ಟಿದಾಗಿನಿಂದ, ಪ್ರತಿಯೊಬ್ಬರೂ ಅವರಿಂದ ಕಿರಿಕಿರಿಗೊಳ್ಳುತ್ತಿದ್ದರು. ಆದರೆ ಹಾಗಾಗುವುದು ಅಸಾಧ್ಯ. 
  • ಅವರು ನಿಜವಾಗಿಯೂ ಕಿರಿಕಿರಿಗೊಳಿಸುವ ವ್ಯಕ್ತಿ ಎಂದು ಪ್ರಕ್ಷೇಪಿಸುವುದನ್ನು ನಾವು ನಿಲ್ಲಿಸುತ್ತೇವೆ. 
  • ನಂತರ ನಾವು ಅವರನ್ನು ಕಿರಿಕಿರಿಯಿಲ್ಲದೆ ನೋಡುತ್ತೇವೆ. ಅವರು ನಮಗೆ ಕಿರಿಕಿರಿಯುಂಟುಮಾಡುವಂತೆ ಕಾಣಬಹುದು ಆದರೆ ಅದು ಕೇವಲ ನಮ್ಮ ಭ್ರಮೆಯಾಗಿರುತ್ತದೆ. 
  • ನಂತರ ಅವರನ್ನು ನಾವು ಕಾಳಜಿಯ ಮನೋಭಾವದಿಂದ ನೋಡುತ್ತೇವೆ - ಅವರು ಕೂಡ ಮನುಷ್ಯರೇ ಮತ್ತು ಅವರು ಎಲ್ಲರಿಂದ ಇಷ್ಟಪಡಲು ಮತ್ತು ಸಂತೋಷವಾಗಿರಲು ಬಯಸುತ್ತಾರೆ ಮತ್ತು ಇಷ್ಟಪಡದಿರಲು ಬಯಸುವುದಿಲ್ಲ. ಈ ವ್ಯಕ್ತಿಯು, ನಮ್ಮನ್ನು ಕಿರಿಕಿರಿಯುಂಟುಮಾಡುವ ಸೊಳ್ಳೆಯೊಂದರಂತೆ ನೋಡಿದರೆ, ಹೇಗೆ ಅದು ನಮಗೆ ಇಷ್ಟವಾಗುವುದಿಲ್ಲವೋ ಮತ್ತು ಅದರಿಂದ ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆಯೋ, ಹಾಗೆಯೇ, ಅವರೂ ಕೂಡ ಹಾಗೆ ಕಾಣಲು ಇಷ್ಟಪಡುವುದಿಲ್ಲ ಮತ್ತು ಅದು ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. 
  • ಕಾಳಜಿಯ ಮನೋಭಾದಿಂದ ಆ ವ್ಯಕ್ತಿಯನ್ನು ಪರಿಗಣಿಸಿ. 

ಸಾರಾಂಶ 

ಸಹಜವಾಗಿ, ಹಠಮಾರಿ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ, ನಾವು ಅವರನ್ನು ಭೇಟಿಯಾದಾಗ ಅಥವಾ ಅವಕಾಶವಿದ್ದಲ್ಲಿ ಅವರನ್ನು ಭೇಟಿಯಾಗುವ ಮುನ್ನ, ನಾವು ಶಾಂತವಾಗಬೇಕು. ನಂತರ ಅವರೊಂದಿಗಿರುವಾಗ, ಅವರನ್ನು ನಮ್ಮಂತೆಯೇ ಭಾವನೆಗಳಿರುವ ಮನುಷ್ಯರಂತೆ ಪರಿಗಣಿಸಬೇಕು ಮತ್ತು ಅವರ ಬಗ್ಗೆ ಕಾಳಜಿಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅಂತಹ ಮನೋಭಾವವನ್ನು ಬೆಳೆಸಿಕೊಳ್ಳುವುದಕ್ಕಿರುವ ಒಂದು ಅಡಚಣೆಯೆಂದರೆ, ನಾವು ಆ ವ್ಯಕ್ತಿಯನ್ನು ಅವರ ಜೀವನದಲ್ಲಿನ ಪರಿಸ್ಥಿತಿಗಳ ವಿಶಾಲವಾದ ದೃಷ್ಟಿಕೋನದಿಂದ ನೋಡದೇ ಇರುವುದು. ನಾವು ನಮ್ಮ ತಪ್ಪು ಪ್ರಕ್ಷೇಪಗಳನ್ನು ಬಿಟ್ಟು, ಅವರನ್ನು ಮುಕ್ತ ಮತ್ತು ಕಾಳಜಿಯುಳ್ಳ ಮನೋಭಾವದಿಂದ, ಹೆಚ್ಚು ವಾಸ್ತವಿಕ ದೃಷ್ಟಿಯಲ್ಲಿ ನೋಡಿದರೆ, ನಾವು ಅವರೊಂದಿಗೆ ಹೆಚ್ಚು ಯಶಸ್ವಿಯಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ.

Top