ಸಾವಿನ ಬಗ್ಗೆ ವಾಸ್ತವಿಕವಾಗಿರುವುದು

ನಮ್ಮ ಬದುಕು ಕ್ಷಣಿಕವಾದದ್ದು ಮತ್ತು ಯಾವುದೇ ಕ್ಷಣದಲ್ಲಿ ಕೊನೆಗೊಳ್ಳಬಹುದು ಎಂಬ ವಾಸ್ತವವನ್ನು ಅರಿತಾಗ, ನಾವು ಅಮೂಲ್ಯ ಅವಕಾಶಗಳನ್ನು ವ್ಯರ್ಥಮಾಡುವುದನ್ನು ನಿಲ್ಲಿಸಿ, ಸದವಕಾಶವಿರುವಾಗ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಬಹುದು.
Meditation being realistic about death 1

ವಿವರಣೆ 

ಸಾವು, ಬಹಳಷ್ಟು ಜನರು ಯೋಚಿಸಲು ಇಷ್ಟಪಡದ ವಿಷಯವಾಗಿದೆ. ಆದರೆ ಸಾವು, ಜೀವನದ ಒಂದು ಸತ್ಯವಾಗಿದೆ ಮತ್ತು ಪ್ರತಿಯೊಬ್ಬರೂ ಎದುರಿಸಬೇಕಾದ ಸಂಗತಿಯಾಗಿದೆ. ಈ ಅನಿವಾರ್ಯದ ಸಂಗತಿಗಾಗಿ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳದಿದ್ದರೆ, ನಾವು ಭೀಕರವಾದ ಭಯ ಮತ್ತು ವಿಷಾದದಿಂದಲೇ ಸಾಯಬಹುದು. ಆದ್ದರಿಂದ, ಸಾವಿನ ಧ್ಯಾನವು ಬಹಳಾ ಸಹಾಯಕವೂ ಹೌದು, ಜೊತೆಗೆ ಮುಖ್ಯವೂ ಆಗಿದೆ. 

ಸಾವಿನ ಬಗ್ಗೆ ನಾವು ಮಾಡಬಹುದಾದ ಅನೇಕ ಧ್ಯಾನಗಳಿವೆ, ಉದಾಹರಣೆಗೆ ನಮಗೆ ಗುಣಪಡಿಸಲಾಗದ ಮಾರಣಾಂತಿಕ ಕಾಯಿಲೆ ಇದೆ ಎಂದು ಹೇಳಲಾದಾಗ, ನಾವು ಆ ಸುದ್ದಿಯನ್ನು ಹೇಗೆ ಎದುರಿಸುತ್ತೇವೆ ಎಂದು ಕಲ್ಪಿಸಿಕೊಳ್ಳಬಹುದು. ಅವಕಾಶವಿರುವಾಗ, ನಮ್ಮ ವರ್ತನೆಗಳು ಮತ್ತು ನಡವಳಿಕೆಯನ್ನು ಸುಧಾರಿಸುವತ್ತ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುವ ಸಲುವಾಗಿ ಈ ಕೆಳಗಿನ ಧ್ಯಾನವು ಪ್ರಮಾಣಿತವಾಗಿದೆ. ಈ ಧ್ಯಾನದಲ್ಲಿ, ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾದ ನಂತರ, ನಾವು ಈ ಕೆಳಗಿನ ಅಂಶಗಳ ಬಗ್ಗೆ ಯೋಚಿಸುತ್ತೇವೆ: 

ಧ್ಯಾನ 

ಸಾವು ಅನಿವಾರ್ಯ, ಏಕೆಂದರೆ: 

  • ಸಾವು ಬರುವುದು ಖಚಿತ, ಯಾವುದೇ ಸನ್ನಿವೇಶದಲ್ಲಿ ಅದರ ಸಂಭವಿಕೆಯನ್ನು ತಡೆಯಲು ನಮಗೆ ಸಾಧ್ಯವಿಲ್ಲ – ಇತಿಹಾಸದುದ್ದಕ್ಕೂ,ಹುಟ್ಟಿದವರೆಲ್ಲರೂ ಸಾವನ್ನಪ್ಪಿದ್ದಾರೆ, ಹಾಗಿರುವಾಗ ಸಾವನಪ್ಪದೇ ಇರಲು ನಮ್ಮಲ್ಲಿ ವಿಶೇಷವಾದದ್ದು ಏನಿದೆ? 
  • ನಾವು ಸಾವನಪ್ಪುವ ಸಮಯ ಬಂದಾಗ, ನಮ್ಮ ಜೀವಿತಾವಧಿಯನ್ನು ವಿಸ್ತರಿಸಲಾಗುವುದಿಲ್ಲ, ನಮ್ಮ ಉಳಿದಿರುವ ಜೀವಿತಾವಧಿಯು ನಿರಂತರವಾಗಿ ಕಡಿಮೆಯಾಗುತ್ತಿರುತ್ತದೆ - ನಮ್ಮ ಜೀವನದ ಪ್ರತಿ ಕ್ಷಣದಲ್ಲಿ, ನಮಗೆ ವಯಸ್ಸಾಗಿ, ಸಾವಿಗೆ ಹತ್ತಿರವಾಗುತ್ತಿದ್ದೇವೆಯೇ ಹೊರತು, ಯುವಕರಾಗಿ, ಸಾವಿನಿಂದ ದೂರ ಹೋಗುತ್ತಿಲ್ಲ. ಚಲಿಸುವ ಕನ್ವೇಯರ್ ಬೆಲ್ಟ್‌ನಲ್ಲಿರುವಂತೆ, ನಮ್ಮ ಅನಿವಾರ್ಯವಾದ ಸಾವಿನ ಕಡೆಗೆ ನಾವು ನಿರಂತರವಾಗಿ ಸರಿಯುತ್ತಿದ್ದೇವೆ. 
  • ನಾವು ಜೀವಂತವಾಗಿರುವಾಗ, ಮನಃಶಾಂತಿಯಿಂದ ಮತ್ತು ಯಾವುದೇ ವಿಷಾದವಿಲ್ಲದೆ ಸಾಯಲು ಕ್ರಮಗಳನ್ನು ಕೈತೆಗೆದುಕೊಳ್ಳಲು ಸಮಯವಿಲ್ಲದಿದ್ದರೂ ಸಹ ಸಾವನ್ನು ತಪ್ಪಿಸಲಾಗುವುದಿಲ್ಲ - ಹಠಾತ್ತಾದ ಹೃದಯಾಘಾತ ಅಥವಾ ಕಾರು ಅಪಘಾತದಿಂದ, ನಾವು ನಿರೀಕ್ಷಿಸದೇ ಇರುವಾಗ ಇದ್ದಕ್ಕಿದ್ದಂತೆ ಸಾವನಪ್ಪಬಹುದು.   

ನಾವು ಯಾವಾಗ ಸಾಯುತ್ತೇವೆ ಎಂಬುದರ ಬಗ್ಗೆ ಯಾವುದೇ ಖಚಿತತೆಯಿಲ್ಲ, ಏಕೆಂದರೆ: 

  • ನಮ್ಮ ಜೀವಿತಾವಧಿಯ ಬಗ್ಗೆ ಯಾವುದೇ ಖಚಿತತೆಯಿಲ್ಲ ¬– ಸಾವನಪ್ಪಲು ನಮಗೆ ವಯಸ್ಸಾಗಿರಬೇಕೆಂದಿಲ್ಲ. 
  • ಜೀವಂತವಾಗಿ ಉಳಿಯುವ ಸಾಧ್ಯತೆಗಳು ಕಡಿಮೆಯಿದ್ದು, ಸಾಯುವ ಸಾಧ್ಯತೆಗಳು ಹೆಚ್ಚಿವೆ ¬– ಜಾಗತಿಕ ತಾಪಮಾನದ ಏರಿಕೆಯೊಂದಿಗೆ, ನೈಸರ್ಗಿಕ ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ; ನಿರಂತರವಾಗಿ ಕ್ಷೀಣಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳು ಮತ್ತು ಆರ್ಥಿಕ ಅಸಮಾನತೆಯಿಂದ, ಹಿಂಸಾಚಾರವು ಹೆಚ್ಚಾಗುತ್ತಿದೆ; ಹೆಚ್ಚುತ್ತಿರುವ ಹತಾಶತೆಯ ಭಾವನೆಗಳೊಂದಿಗೆ, ಡ್ರಗ್ ಓವರ್ಡೋಸ್ನ ಸನ್ನಿವೇಶಗಳು ಹೆಚ್ಚುತ್ತಿವೆ, ಇತ್ಯಾದಿ. 
  • ನಮ್ಮ ದೇಹಗಳು ಬಹಳಾ ನಾಜೂಕಾಗಿವೆ - ಚಿಕ್ಕದೊಂದು ಕಾಯಿಲೆ ಅಥವಾ ಅಪಘಾತವು ನಮ್ಮ ಸಾವಿಗೆ ಕಾರಣವಾಗಬಹುದು. 

ನಮ್ಮ ವರ್ತನೆಗಳು ಮತ್ತು ನಡವಳಿಕೆಯನ್ನು ಸುಧಾರಿಸುವತ್ತ ಕೆಲಸ ಮಾಡುವಂತಹ ಕ್ರಮಗಳನ್ನು ಕೈತೆಗೆದುಕೊಳ್ಳುವುದನ್ನು ಹೊರತುಪಡಿಸಿದರೆ, ಬೇರೆ ಯಾವುದೂ ನಮಗೆ ಮನಸ್ಸಿನ ಶಾಂತಿ ಮತ್ತು ವಿಷಾದವಿರದೇ ಸಾಯಲು ಸಹಾಯ ಮಾಡುವುದಿಲ್ಲ. ನಮ್ಮ ಸಾವನ್ನು ನಾವು ಇಂದೇ ಎದುರಿಸಬೇಕಾದರೆ: 

  • ನಮ್ಮ ಸಂಪತ್ತಿನಿಂದ ಯಾವುದೇ ಸಹಾಯವಾಗುವುದಿಲ್ಲ - ನಮ್ಮ ಹಣವು, ಕಂಪ್ಯೂಟರ್ ಪರದೆಯ ಮೇಲಿರುವ ಸಂಖ್ಯೆಗಳಾಗಿರುತ್ತವೆ ಅಷ್ಟೇ 
  • ಸ್ನೇಹಿತರು ಮತ್ತು ಸಂಬಂಧಿಕರಿಂದ ಯಾವುದೇ ಸಹಾಯವಾಗುವುದಿಲ್ಲ - ನಾವು ಅವರನ್ನು ಬಿಟ್ಟು ಹೋಗಬೇಕಾಗುತ್ತದೆ ಮತ್ತು ಅವರು ನಮ್ಮ ಸುತ್ತಲೂ ಸೇರಿ ಕಣ್ಣೀರು ಸುರಿಸುತ್ತಿದ್ದರೆ ಅದರಿಂದ ನಮಗೆ ಬಹಳಾ ದುಃಖವಾಗುತ್ತದೆ. 
  • ನಮ್ಮ ದೇಹದಿಂದಲೂ ಯಾವುದೇ ಸಹಾಯವಾಗುವುದಿಲ್ಲ - ಆ ಹೆಚ್ಚುವರಿ ಕಿಲೋಗಳು ಅಥವಾ ಪೌಂಡ್‌ಗಳನ್ನು ಕಳೆದುಕೊಳ್ಳುವುದರಿಂದ ನಾವು ಎಷ್ಟೆಂದು ಸುಖ ಪಡಬಹುದು? 

ಆದ್ದರಿಂದ, ಭಯ ಮತ್ತು ವಿಷಾದದಿಂದ ಸಾಯುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವುದೇ, ಜೀವನದಲ್ಲಿನ ಅರ್ಥಪೂರ್ಣವಾದ, ಏಕೈಕ ವಿಷಯವೆಂಬ ನಿರ್ಧಾರಕ್ಕೆ ನಾವು ಬರುತ್ತೇವೆ.  

ಸಾರಾಂಶ 

ಸಾವಿನ ಅನಿವಾರ್ಯತೆಯ ಅರಿವನ್ನು ಪಡೆಯುವುದು, ನಮ್ಮನ್ನು ಖಿನ್ನತೆಗೆ ಅಥವಾ ಭಯದಿಂದ ತುಂಬಿಸುವುದಕ್ಕಾಗಿ ಅಲ್ಲ. ನಮ್ಮ ಜೀವನದಲ್ಲಿ ಉಳಿದಿರುವ ಸಮಯವು ಸೀಮಿತವಾಗಿದೆ ಮತ್ತು ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರಿಂದಲೂ ಖಾತರಿಪಡಿಸಲಾಗುವುದಿಲ್ಲ ಎಂಬುದನ್ನು ನಾವು ಅರಿತುಕೊಂಡಾಗ, ನಾವು ಇಂದಿರುವ ಅವಕಾಶಗಳನ್ನು ಮತ್ತು ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸುವಂತೆ ಪ್ರೇರೇಪಿತರಾಗುತ್ತೇವೆ. ಸಾವಿನ ಬಗ್ಗೆ ಎಚ್ಚರವಾಗಿರುವುದರಿಂದ, ಸೋಮಾರಿತನ ಮತ್ತು ಆಲಸ್ಯವನ್ನು ಹೋಗಲಾಡಿಸಿ, ಅದರಿಂದ ಭವಿಷ್ಯವು ಹದಗೆಡುವುದರಿಂದ ತಡೆಯಲು, ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ.

Top