ವಿವರಣೆ
ಧ್ಯಾನವು, ಪುನರಾವರ್ತನೆಯ ಮೂಲಕ ಸಕಾರಾತ್ಮಕ ಅಭ್ಯಾಸಗಳನ್ನು ನಿರ್ಮಿಸುವ ಒಂದು ವಿಧಾನವಾಗಿದೆ, ಉದಾಹರಣೆಗೆ ಹೊಸ ನರ ಮಾರ್ಗಗಳನ್ನು ರಚಿಸುವುದು ಮತ್ತು ಹಳೆಯದನ್ನು ದುರ್ಬಲಗೊಳಿಸುವುದು. ಹೀಗೆ ಮಾಡುವ ಮೊದಲು, ಹೊಸತಾದ, ಹೆಚ್ಚು ಪ್ರಯೋಜನಕಾರಿಯಾದ ತಿಳುವಳಿಕೆ ಮತ್ತು ಮನೋಭಾವವನ್ನು ಸೃಷ್ಟಿಸಲು ಮುಕ್ತವಾದ ಸ್ಥಳವನ್ನು ಬರಮಾಡಿಕೊಳ್ಳಲು, ಮೊದಲು ನಮ್ಮ ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸುವುದು ಅಗತ್ಯವಾಗಿರುತ್ತದೆ. ಶಾಂತಗೊಳಿಸುವ ಸಾಮರ್ಥ್ಯವು ಸ್ವತಃ ಪ್ರಯೋಜನಕಾರಿಯಾದ ಅಭ್ಯಾಸವಾಗಿದೆ, ಆದರೆ ಇದೊಂದು ತಟಸ್ಥ ಸ್ಥಿತಿಯಾಗಿದ್ದು, ಇದು ರಚನಾತ್ಮಕ ಅಥವಾ ವಿನಾಶಕಾರಿ ಮನೋಭಾವವನ್ನು ಉತ್ಪಾದಿಸುವ ಆಧಾರವಾಗಿರುತ್ತದೆ. ಈ ಶಾಂತ ಸ್ಥಿತಿಯನ್ನು, ರಚನಾತ್ಮಕ ಮನಸ್ಥಿತಿಯನ್ನು ಸೃಷ್ಟಿಸುವ ಮುಕ್ತ ಸ್ಥಳವಾಗಿ ಬಳಸಲು ನಾವು ಬಯಸುವುದರಿಂದ, ಇದು ಅನಿವಾರ್ಯವಾದ ಪೂರ್ವಸಿದ್ಧತಾ ಹಂತವಾಗಿದೆ.
ಶಾಂತತೆಯು, ಜೀವನದಲ್ಲಿ ಎದುರಾಗುವ ಕಷ್ಟಕರ ಸನ್ನಿವೇಶಗಳನ್ನು ಉತ್ತಮವಾಗಿ ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, ಅವುಗಳೊಂದಿಗೆ ಸರಿಯಾದ ರೀತಿಯಲ್ಲಿ ವ್ಯವಹರಿಸಲಾಗುವುದೇ ಇರವುದಕ್ಕಾಗಿರುವ ಕಾರಣವು, ನಮ್ಮ ಮನಸ್ಸುಗಳ ಅಸ್ಪಷ್ಟತೆಯಾಗಿರುತ್ತದೆ; ಅವು ದಣಿವಿನಿಂದ ಮತ್ತು ಒತ್ತಡದಿಂದ, ಮಾನಸಿಕ ಅಲೆದಾಡುವಿಕೆಯಿಂದ ತುಂಬಿರುತ್ತವೆ. ಉದಾಹರಣೆಗೆ, ಒಂದು ದಿನ ನಮ್ಮ ಕೆಲಸವು ದೀರ್ಘಕಾಲದ್ದಾಗಿದ್ದು, ಕಷ್ಟಕರವಾಗಿರುತ್ತದೆ; ನಾವು ಹೊರಡಲು ಇನ್ನೂ ಒಂದು ಗಂಟೆ ಇದೆ, ಮತ್ತು ಮುಗಿಸಲು ಇನ್ನೂ ಹೆಚ್ಚಿನ ಕೆಲಸವಿದೆ. ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ನಮಗೆ ಶಾಂತವಾಗಲು ಸಹಾಯವಾಗುತ್ತದೆ, ಇದರಿಂದ ನಾವು ಈ ಸವಾಲೊಡ್ಡುವ ಪರಿಸ್ಥಿತಿಯನ್ನು ಸ್ಪಷ್ಟ ಮನಸ್ಸಿನಿಂದ ನಿಭಾಯಿಸಬಹುದು.
ಧ್ಯಾನ
- ನೇರವಾಗಿ ಕುಳಿತುಕೊಳ್ಳಿ, ನಿಮ್ಮ ಕೈಗಳನ್ನು ನಿಮ್ಮ ಮಡಿಲಲ್ಲಿ ಇರಿಸಿ, ನಿಮ್ಮ ಕಣ್ಣುಗಳನ್ನು ಅರ್ಧ ತೆರೆದು, ನೆಲದ ಕಡೆಗೆ ನೋಡಿ ಮತ್ತು ನಿಮ್ಮ ಹಲ್ಲುಗಳನ್ನು ಬಿಗಿಯಾಗಿ ಹಿಡಿಯಬೇಡಿ.
- ನಿಮ್ಮ ದೇಹದಲ್ಲಿ, ವಿಶೇಷವಾಗಿ ನಿಮ್ಮ ಭುಜಗಳು, ಬಾಯಿ ಮತ್ತು ಹಣೆಯಲ್ಲಿನ ಬಿಗಿತವನ್ನು ಸಡಿಲಗೊಳಿಸಿ. ದೇಹದಲ್ಲಿನ ಬಿಗಿತವನ್ನು ಬಿಡುಗಡೆ ಮಾಡದೆ ನಮ್ಮ ಮನಸ್ಸನ್ನು ಶಾಂತಗೊಳಿಸಲು ಸಾಧ್ಯವಿಲ್ಲ.
- ಮೂಗಿನ ಮೂಲಕ ಸಾಮಾನ್ಯವಾಗಿ ಉಸಿರಾಡಿ.
- 11 ಉಸಿರಾಟಗಳ ಸುತ್ತುಗಳನ್ನು ನಿಮ್ಮ ಮನಸ್ಸಿನಲ್ಲಿ ಎಣಿಸಿ, ಮತ್ತು ನಿಮ್ಮ ಮೂಗಿನ ಒಳಗೆ ಮತ್ತು ಹೊರಗೆ ಆಗುವ ಉಸಿರಾಟದ ಸಂವೇದನೆಯ ಮೇಲೆ ಕೇಂದ್ರೀಕರಿಸಿ
- ಉಸಿರಾಟದ ಸಂವೇದನೆ ಮತ್ತು ಎಣಿಕೆಯ ಬಗ್ಗೆ ಗಮನವಿರಲಿ (ಮಾನಸಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಿ).
- ಮಂದತನ ಅಥವಾ ಮಾನಸಿಕ ಅಲೆದಾಟದಿಂದಾಗಿ ನೀವು ಗಮನವನ್ನು ಕಳೆದುಕೊಳ್ಳುವುದರ ಬಗ್ಗೆ ಅರಿವಿರುವಂತೆ ಎಚ್ಚರವಹಿಸಿ.
- ನೀವು ಗಮನವನ್ನು ಕಳೆದುಕೊಂಡಿದ್ದೀರಿ ಎಂದು ನೀವು ಪತ್ತೆಹಚ್ಚಿದಾಗ, ಪುನಃ ಉಸಿರಾಟ ಮತ್ತು ಎಣಿಕೆಯ ಮೇಲೆ ಗಮನಹರಿಸಿ.
- ನಿಮ್ಮಲ್ಲಿ ಮಾನಸಿಕ ಅಲೆದಾಟವನ್ನು ಪತ್ತೆಹಚ್ಚಿದರೆ, ಆ ಆಲೋಚನೆಯನ್ನು ನಿಧಾನವಾಗಿ ಬಿಡುಗಡೆ ಮಾಡಿ, ನಿಮ್ಮ ಉಸಿರಿನೊಂದಿಗೆ ಅದು ಕೂಡ ನಿಮ್ಮ ಮನಸ್ಸಿನಿಂದ ಹೊರಬರುತ್ತದೆ ಎಂದು ಊಹಿಸಿ ಮತ್ತು ನಿಮ್ಮ ಗಮನವನ್ನು ಉಸಿರಾಟ ಮತ್ತು ಎಣಿಕೆಗೆ ಹಿಂದಿರುಗಿಸಿ
- ನಿಮ್ಮ ಭುಜಗಳು ಅಥವಾ ಮುಖವು ಮತ್ತೊಮ್ಮೆ ಬಿಗಿಯಾಗಿದ್ದರೆ, ಅವುಗಳನ್ನು ಮತ್ತೊಮ್ಮೆ ಸಡಿಲಗೊಳಿಸಿ.
- ಕೊನೆಯದಾಗಿ, ಧ್ಯಾನದಿಂದ ಹೊರಬರಲು, ಮತ್ತೊಮ್ಮೆ ನಿಶ್ಚಲ ಮನಸ್ಸಿನೊಂದಿಗೆ ಶಾಂತವಾಗಿರಿ.
ಸಾರಾಂಶ
ನಾವು ದಣಿದಿರುವಾಗ ಮತ್ತು ಒತ್ತಡದಲ್ಲಿರುವಾಗ ಮತ್ತು ಸವಾಲುಗಳನ್ನು ಎದುರಿಸುವ ಸಂದರ್ಭಗಳಲ್ಲಿ ಮನಸ್ಸಿನ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನದ ಅಗತ್ಯವಿರುವಾಗ, ನಾವು ಶಾಂತವಾಗಬೇಕು ಮತ್ತು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಹಿಡಿತವನ್ನು ಮರಳಿ ಪಡೆಯಬೇಕು. ಕಂಪ್ಯೂಟರ್‌ನಂತೆ, ನಾವು ನಮ್ಮ ಮನಸ್ಸನ್ನು ರೀಬೂಟ್ ಮಾಡಬೇಕಾಗುತ್ತದೆ. ಹೀಗೆ ಮಾಡಲು, ನಮ್ಮ ಉಸಿರಾಟದ ಸುತ್ತುಗಳನ್ನು ಎಣಿಸುವಾಗ, ನಾವು ನಮ್ಮ ದೇಹವನ್ನು ವಿಶ್ರಮಿಸಬೇಕು ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸಬೇಕು. ಮನೆಯಲ್ಲಿರುವಾಗ, ಧ್ಯಾನದಿಂದ ಈ ವಿಧಾನವನ್ನು ಅಭ್ಯಾಸ ಮಾಡುವ ಮೂಲಕ, ನರ ಮಾರ್ಗ ಮತ್ತು ಅಭ್ಯಾಸವನ್ನು ನಿರ್ಮಿಸಬಹುದು, ಇದರಿಂದ ನಾವು ದೈನಂದಿನ ಜೀವನದಲ್ಲಿ ಈ ವಿಧಾನವನ್ನು ಅನ್ವಯಿಸಲು ನೆನಪಿಸಿಕೊಳ್ಳುತ್ತೇವೆ ಮತ್ತು ಇದನ್ನು ಅನ್ವಯಿಸಲು ಮತ್ತು ಉಳಿಸಿಕೊಳ್ಳಲು ಸುಲಭವಾಗುತ್ತದೆ.