ಸಂತೋಷದ ಮೂಲವಾಗಿ ಸಹಾನುಭೂತಿ

Compassion as a source of happiness

ಜೀವನದ ಉದ್ದೇಶ ಮತ್ತು ಗುರಿ ಸಂತೋಷಕ್ಕಾಗಿ ಶ್ರಮಿಸುವುದಾಗಿದೆ 

ನಾವು ಇಲ್ಲಿ ಇದ್ದೇವೆ; ನಾವು ಅಸ್ತಿತ್ವದಲ್ಲಿದ್ದೇವೆ ಮತ್ತು ನಮ್ಮ ಅಸ್ತಿತ್ವ ನಮ್ಮ ಹಕ್ಕು. ಹೂವುಗಳಂತಹ ಪ್ರಜ್ಞಾಹೀನ ಜೀವಿಗಳಿಗೂ ಅಸ್ತಿತ್ವದ ಹಕ್ಕಿದೆ. ಅವುಗಳ ವಿರುದ್ಧ ವಿನಾಶಕಾರಿ ಬಲವನ್ನು ಪ್ರಯೋಗಿಸಿದರೆ, ರಾಸಾಯನಿಕ ಮಟ್ಟದಲ್ಲಿ, ಹೂವುಗಳು ಬದುಕಲು ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತವೆ. ಆದರೆ [ಅದಕ್ಕಿಂತ ಹೆಚ್ಚಾಗಿ], ಮಾನವರಿಂದ ಹಿಡಿದು ಕ್ರಿಮಿ-ಕೀಟಗಳಂತಹ ಚಿಕ್ಕ ಜೀವಿಗಳನ್ನೂ ಸಹ ಪ್ರಜ್ಞಾವಂತ ಜೀವಿಗಳೆಂದು ಪರಿಗಣಿಸಲಾಗುತ್ತದೆ. [ಪ್ರಜ್ಞಾವಂತ ಜೀವಿಗಳಾಗಿ, ಬದುಕಲು ಸಹಾಯವಾಗುವಂತೆ ಇನ್ನೂ ಹೆಚ್ಚಿನ ಕಾರ್ಯವಿಧಾನಗಳನ್ನು ತಿಳಿದುಕೊಂಡಿರುತ್ತೇವೆ.] 

ನಾನು ವಿಜ್ಞಾನಿಗಳೊಂದಿಗೆ ನಡೆಸಿದ ಚರ್ಚೆಗಳ ಪ್ರಕಾರ, ಸ್ವಇಚ್ಛೆಯಿಂದ ಅಥವಾ ಬಯಕೆಯಿಂದ ಚಲಿಸಬಹುದಾದವುಗಳನ್ನು, "ಪ್ರಜ್ಞಾವಂತ ಜೀವಿ" ಎಂದು ಕರೆಯಬಹುದು. "ಪ್ರಜ್ಞಾವಂತ" ಎಂದರೆ ಪ್ರಜ್ಞಾಪೂರ್ವಕವಾಗಿರುವುದು ಅಥವಾ ಮಾನವರಂತೆ ಪ್ರಜ್ಞಾಪೂರ್ವಕವಾಗಿರುವುದು ಎಂದರ್ಥವಲ್ಲ. ನಿಜವಾಗಿ ಹೇಳಬೇಕಾದಾರೆ, "ಪ್ರಜ್ಞಾವಂತ" ಅಥವಾ "ಪ್ರಜ್ಞೆ" ಎಂದರೆ ಏನು ಎಂದು ವ್ಯಾಖ್ಯಾನಿಸುವುದು ಕಷ್ಟ. ಸಾಮಾನ್ಯವಾಗಿ ಇದು ಮನಸ್ಸಿನ ಸ್ಪಷ್ಟವಾದ ಅಂಶವನ್ನು ಅರ್ಥೈಸುತ್ತದೆ, ಆದರೆ ನಾವು ಅರೆಪ್ರಜ್ಞೆ ಅಥವಾ ಸುಪ್ತಾವಸ್ಥೆಯಲ್ಲಿದ್ದಾಗ ನಮಗೆ ಪ್ರಜ್ಞೆ ಇರುವುದಿಲ್ಲವೇ? ಕೀಟಗಳಿಗೆ ಪ್ರಜ್ಞೆ ಇದೆಯೇ? ಬಹುಶಃ ಪ್ರಜ್ಞೆಯ ಬದಲು "ಅರಿವಿನ ಸಹಜಶಕ್ತಿ" ಎಂದು ಹೇಳುವುದು ಉತ್ತಮ. 

ನಾವು ಇಲ್ಲಿ [ಅರಿವಿನ ಸಹಜಶಕ್ತಿ]ಯಿಂದ ಉಲ್ಲೇಖಿಸುತ್ತಿರುವ ಮುಖ್ಯ ಅಂಶವೆಂದರೆ, ಭಾವನೆಗಳನ್ನು ಅನುಭವಿಸುವ ಸಾಮರ್ಥ್ಯ: ನೋವು, ಸಂತೋಷ ಅಥವಾ ತಟಸ್ಥ ಭಾವನೆಗಳಾಗಲಿ. ವಾಸ್ತವವಾಗಿ, ಆನಂದ ಮತ್ತು ನೋವು [ಮತ್ತು ಸಂತೋಷ ಮತ್ತು ಅತೃಪ್ತಿ]ಅನ್ನು ನಾವು ಹೆಚ್ಚು ಆಳವಾಗಿ ಪರಿಶೀಲಿಸಬೇಕಾಗಿದೆ. ಉದಾಹರಣೆಗೆ, ಪ್ರತಿ ಜೀವಿಗೂ ಬದುಕುವ ಹಕ್ಕಿದೆ; ಇದರರ್ಥ ಬದುಕುವುದಕ್ಕಾಗಿ, ಸಂತೋಷ ಅಥವಾ ಸೌಕರ್ಯದ ಬಯಕೆಯನ್ನು ಹೊಂದಿರುವುದು: ಅದಕ್ಕಾಗಿಯೇ ಪ್ರಜ್ಞಾವಂತ ಜೀವಿಗಳು ಬದುಕಲು ಶ್ರಮಿಸುವವು. ಆದ್ದರಿಂದ, ನಮ್ಮ ಉಳಿವು, ಭರವಸೆಯ ಮೇಲೆ ಆಧಾರಿತವಾಗಿದೆ - ಒಳ್ಳೆಯದರ ಭರವಸೆ: ಸಂತೋಷ. ಆ ಕಾರಣದಿಂದಾಗಿ, ನಮ್ಮ ಜೀವನದ ಉದ್ದೇಶ ಸಂತೋಷವಾಗಿರುವುದು ಎಂದು ನಾನು ಯಾವಾಗಲೂ ಅಭಿಪ್ರಾಯ ಪಡುತ್ತೇನೆ. ಭರವಸೆ ಮತ್ತು ಸಂತೋಷದಿಂದ, ನಮ್ಮ ದೇಹವು ಸ್ವಸ್ಥವಾಗಿರುತ್ತದೆ. ಆದ್ದರಿಂದ ಭರವಸೆ ಮತ್ತು ಸಂತೋಷವು ನಮ್ಮ ಆರೋಗ್ಯಕ್ಕೆ ಸಕಾರಾತ್ಮಕ ಅಂಶಗಳಾಗಿವೆ. ಆರೋಗ್ಯವು, ಸಂತೋಷದ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. 

ಮತ್ತೊಂದೆಡೆ, ಕೋಪವು ಅಭದ್ರತೆಯ ಭಾವನೆಯ ಮೇಲೆ ಆಧಾರಿತವಾಗಿದೆ ಮತ್ತು ನಮ್ಮಲ್ಲಿ ಭಯವನ್ನುಂಟುಮಾಡುತ್ತದೆ. ನಾವು ಏನಾದರೂ ಹಿತಕರವಾದದ್ದನ್ನು ಕಂಡಾಗ, ನಾವು ಸುರಕ್ಷಿತವಾಗಿದ್ದೇವೆ ಅನಿಸುತ್ತದೆ. ನಮಗೆ ಯಾವುದೇ ರೀತಿಯ ಬೆದರಿಕೆ ಬಂದಾಗ, ನಾವು ಅಸುರಕ್ಷಿತವಾಗಿದ್ದೇವೆ ಅನಿಸುತ್ತದೆ ಮತ್ತು ನಂತರ ನಾವು ಕೋಪಗೊಳ್ಳುತ್ತೇವೆ. ಕೋಪವು, ನಮ್ಮ ಉಳಿವಿಗೆ ಹಾನಿಯುಂಟುಮಾಡುವ ವಿಷಯಗಳಿಂದ ನಮ್ಮನ್ನು ರಕ್ಷಿಸುವ ಮನಸ್ಸಿನ ಭಾಗವಾಗಿದೆ. ಆದರೆ ಕೋಪವು [ಸ್ವತಃ ನಮ್ಮಲ್ಲಿಯೇ ಕೆಟ್ಟ ಭಾವನೆಯನ್ನು ಉಂಟುಮಾಡುತ್ತದೆ, ಆದ್ದರಿಂದ ಅಂತಿಮವಾಗಿ, ಇದು] ನಮ್ಮ ಆರೋಗ್ಯಕ್ಕೆ ಕೆಟ್ಟದು.

ಬಾಂಧವ್ಯವು ಬದುಕಲು ಸಹಾಯಕವಾದ ಅಂಶವಾಗಿದೆ. ಯಾವುದೇ ಜಾಗೃತ ಅಂಶವಿಲ್ಲದ ಸಸ್ಯದಲ್ಲೂ ಸಹ ಕೆಲವು ರೀತಿಯ ರಾಸಾಯನಿಕ ಅಂಶವಿದ್ದು, ಅದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದರ ಬೆಳವಣಿಗೆಗೆ ಸಹಾಯವಾಗುತ್ತದೆ. ಭೌತಿಕ ಮಟ್ಟದಲ್ಲಿ ನಮ್ಮ ದೇಹವು ಸಹ ಹಾಗೆಯೇ ಇರುತ್ತದೆ. ಆದರೆ, ಮಾನವರಾಗಿ, ನಮ್ಮ ದೇಹವು ಭಾವನಾತ್ಮಕ ಮಟ್ಟದಲ್ಲಿ ಸಕಾರಾತ್ಮಕ ಅಂಶವೊಂದನ್ನು ಹೊಂದಿದೆ, ಅದರಿಂದ ನಾವು ಬೇರೊಬ್ಬರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳಬಹುದು ಅಥವಾ ನಮ್ಮ ಸಂತೋಷದೊಂದಿಗೇ ಬಂಧನವಿರಬಹುದು. [ಮತ್ತೊಂದೆಡೆ, ಕೋಪ] ಹಾನಿಯನ್ನು ಉಂಟುಮಾಡುವ ಅಂಶದೊಂದಿಗೆ, [ಸಂತೋಷವನ್ನು ಒಳಗೊಂಡಂತೆ], ಹಲವು ವಿಷಯಗಳಿಂದ ನಮ್ಮನ್ನು ದೂರ ತಳ್ಳುತ್ತದೆ. ಭೌತಿಕ ಮಟ್ಟದಲ್ಲಿ, ಆನಂದವು [ಸಂತೋಷ ತರುವಂತಹ] ದೇಹಕ್ಕೆ ಒಳ್ಳೆಯದು; ಕೋಪವು [ಮತ್ತು ಅದರಿಂದ ಉಂಟಾಗುವ ಅತೃಪ್ತಿ] ಹಾನಿಕಾರಕವಾಗಿರುವುದು. ಆದ್ದರಿಂದ, [ಉಳಿವಿನ ಅನ್ವೇಷಣೆಯ ದೃಷ್ಟಿಕೋನದಿಂದ,] ಜೀವನದ ಉದ್ದೇಶವು, ಸಂತೋಷವಾದ ಜೀವನವನ್ನು ನಡೆಸುವುದಾಗಿದೆ. 

ನಾನಿಲ್ಲಿ ಮಾತನಾಡುತ್ತಿರುವುದು ಮೂಲಭೂತ ಮಾನವ ಮಟ್ಟದ ಬಗ್ಗೆ; ನಾನು ಧಾರ್ಮಿಕ, ದ್ವಿತೀಯ ಹಂತದ ಬಗ್ಗೆ ಮಾತನಾಡುತ್ತಿಲ್ಲ. ಸಹಜವಾಗಿ, ಧಾರ್ಮಿಕ ಮಟ್ಟದಲ್ಲಿ, ಜೀವನದ ಉದ್ದೇಶದ ಬಗ್ಗೆ ವಿಭಿನ್ನ ವಿವರಣೆಗಳಿವೆ. ದ್ವಿತೀಯ ಅಂಶವೋ, ಸಾಕಷ್ಟು ಜಟಿಲವಾಗಿರುವುದು; ಆದ್ದರಿಂದ, ಕೇವಲ ಮೂಲಭೂತ ಮಾನವ ಮಟ್ಟದ ಬಗ್ಗೆ ಮಾತನಾಡುವುದು ಉತ್ತಮ.

ಸಂತೋಷ ಎಂದರೇನು

ನಮ್ಮ ಜೀವನದ ಗುರಿ ಮತ್ತು ಉದ್ದೇಶ ಸಂತೋಷವಾಗಿರುವುದಾದರೆ, ಸಂತೋಷ ಎಂದರೇನು? ಕೆಲವೊಮ್ಮೆ ದೈಹಿಕ ಬಳಲಿಕೆಯಿಂದ, ಹೆಚ್ಚು ತೃಪ್ತಿ ಪ್ರಾಪ್ತಿಯಾಗಬಹುದು. [ಒಬ್ಬ ಕ್ರೀಡಾಪಟುವು, ಶಕ್ತಿಹ್ರಾಸಕ ವ್ಯಾಯಾಮ ಮಾಡಿದಂತೆ.] ಆದ್ದರಿಂದ, "ಸಂತೋಷ" ಎಂದರೆ ಪ್ರಧಾನವಾಗಿ, ದೀರ್ಘವಾಗಿ ತೃಪ್ತರಾಗುವುದು ಎಂದರ್ಥ. ಆದ್ದರಿಂದ, ಜೀವನದ ಉದ್ದೇಶ ಅಥವಾ ನಮ್ಮ ಗುರಿಯು ತೃಪ್ತಿಯಾಗಿದೆ. 

ಸಂತೋಷ, ದುಃಖ ಅಥವಾ ಬಳಲಿಕೆ - ಇವುಗಳಲ್ಲಿ ಎರಡು ಹಂತಗಳಿವೆ: ಇಂದ್ರಿಯಗಳ ಮಟ್ಟ ಮತ್ತು ಮಾನಸಿಕ ಮಟ್ಟ. ನೊಣದಂತಹ ಕೀಟಗಳೂ ಸೇರಿದಂತೆ, ಸಣ್ಣ ಸಸ್ತನಿಗಳಲ್ಲಿ ಇಂದ್ರಿಯ ಮಟ್ಟವು ಸಾಮಾನ್ಯವಾಗಿದೆ. ತಣ್ಣನೆಯ ವಾತಾವರಣದಲ್ಲಿ, ಸೂರ್ಯ ಹೊರಬಂದಾಗ, ಒಂದು ನೊಣವು ಸಂತೋಷವನ್ನು ವ್ಯಕ್ತ ಪಡಿಸುತ್ತದೆ: ಅದು ಚೆನ್ನಾಗಿ ಹಾರಾಡುತ್ತದೆ. ತಣ್ಣನೆಯ  ಕೋಣೆಯಲ್ಲಿ, ಅದು ನಿಧಾನಗೊಳ್ಳುತ್ತದೆ: ದುಃಖದ ಸಂಕೇತವನ್ನು ವ್ಯಕ್ತ ಪಡಿಸುತ್ತದೆ. ಆದರೆ, ಅತ್ಯಾಧುನಿಕ ಮೆದುಳು ಇದ್ದರೆ, ಇಂದ್ರಿಯಗಳಿಂದ ಸಿಗುವ ಆನಂದವು ಕೂಡ ಹೆಚ್ಚಾದ ಅರ್ಥವನ್ನು ಪಡೆದುಕೊಳ್ಳುತ್ತವೆ. [ಆದರೂ, ಜೊತೆಗೆ,] ನಮ್ಮ ಅತ್ಯಾಧುನಿಕ ಮೆದುಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ, ನಮ್ಮಲ್ಲಿ ಬುದ್ಧಿವಂತಿಕೆಯೂ ಸಹ ಇರುವುದು.

[ಹೀಗೊಂದು ಪ್ರಕರಣವನ್ನು ಪರಿಗಣಿಸಿ] ಯಾವುದೇ ದೈಹಿಕ ಬೆದರಿಕೆಗಳನ್ನು ಅನುಭವಿಸದ ಮಾನವರು. ಅವರ ಬಳಿ ಸಂತೋಷದ, ಆರಾಮದಾಯಕವಾದ ಜೀವನವಿದೆ, ಉತ್ತಮ ಸ್ನೇಹಿತರು, ಸಂಬಳ ಮತ್ತು ಪ್ರಖ್ಯಾತಿಯಿದೆ. ಆದರೂ ನಾವು ಕೆಲವು ಮಿಲಿಯನೇರ್‌ಗಳನ್ನು ಉದಾಹರಣೆಗೆ ನೋಡುವುದಾದರೆ, ಅವರು ತಮ್ಮನ್ನು ಸಮಾಜದ ಪ್ರಮುಖ ಭಾಗವೆಂದು ಭಾವಿಸುತ್ತಾರೆ, ಆದರೂ ಈ ವ್ಯಕ್ತಿಗಳು ಬಹಳ ಅತೃಪ್ತ ವ್ಯಕ್ತಿಗಳಾಗಿರುತ್ತಾರೆ. ನಾನು ಕೆಲವು ಶ್ರೀಮಂತ, ಪ್ರಭಾವಶಾಲಿ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ, ಅವರು ಆಳವಾದ ಒಂಟಿತನ, ಒತ್ತಡ ಮತ್ತು ಚಿಂತೆಯಂತಹ ಬಹಳ ತೊಂದರೆಗೀಡಾದ ಭಾವನೆಗಳನ್ನು ವ್ಯಕ್ತ ಪಡಿಸಿದರು. ಆದ್ದರಿಂದ, ಮಾನಸಿಕ ಮಟ್ಟದಲ್ಲಿ, ಅವರು ಬಳಲುತ್ತಿರುವರು.

ನಮ್ಮಲ್ಲಿ ಅದ್ಭುತವಾದ ಬುದ್ಧಿವಂತಿಕೆಯಿರುವುದರಿಂದ ನಮ್ಮ ಅನುಭವದ ಮಾನಸಿಕ ಮಟ್ಟವು ದೈಹಿಕ ಮಟ್ಟಕ್ಕಿಂತ ಹೆಚ್ಚು ಪ್ರಬಲವಾಗಿರುತ್ತದೆ. ದೈಹಿಕ ನೋವನ್ನು ಇದರಿಂದ ಕಡಿಮೆ ಮಾಡಬಹುದು ಅಥವಾ ನಿಗ್ರಹಿಸಬಹುದು. ಒಂದು ಸಣ್ಣ ಉದಾಹರಣೆ, ಕೆಲವು ಸಮಯದ ಹಿಂದೆ, ನಾನೊಂದು ಗಂಭೀರವಾದ ಅನಾರೋಗ್ಯದಿಂದ ಬಳಲುತ್ತಿದ್ದೆ. ನನ್ನ ಕರುಳಿನಲ್ಲಿ ಬಹಳ ನೋವುಂಟಾಗಿತ್ತು. ಆ ಸಮಯದಲ್ಲಿ, ನಾನು ಭಾರತದ ಅತ್ಯಂತ ಬಡ ರಾಜ್ಯವಾದ ಬಿಹಾರದಲ್ಲಿದ್ದೆ ಮತ್ತು ನಾನು ಬೋಧಗಯಾ ಮತ್ತು ನಳಂದಾ ಮೂಲಕ ಹಾದು ಹೋಗಿದ್ದೆ. ಅಲ್ಲಿ ನಾನು ಬಹಳ ಬಡ ಮಕ್ಕಳನ್ನು ನೋಡಿದೆ. ಅವರು ಸಗಣಿಯನ್ನು ಸಂಗ್ರಹಿಸುತ್ತಿದ್ದರು. ಅವರಿಗೆ ಯಾವುದೇ ಶಿಕ್ಷಣದ ಸೌಲಭ್ಯಗಳು ಇರಲಿಲ್ಲ ಎಂಬುದನ್ನು ನೋಡಿ ನನಗೆ ಬಹಳ ದುಃಖವಾಯಿತು. ನಂತರ ರಾಜ್ಯದ ರಾಜಧಾನಿಯಾದ ಪಾಟ್ನಾ ಬಳಿ ನಾನು ಬೆವರು ಸುರಿಯುವಂತಹ ನೋವನ್ನು ಅನುಭವಿಸಿದೆ. ಆಗ ಒಬ್ಬ ಅಸ್ವಸ್ಥ ಮುದುಕ, ಅಸ್ವಸ್ಥ ವ್ಯಕ್ತಿಯನ್ನು ನೋಡಿದೆ, ಅವರು ಬಹಳ ಕೊಳಕಾಗಿರುವ ಬಿಳಿ ಬಟ್ಟೆಯನ್ನು ಧರಿಸಿರುವುದನ್ನು ನಾನು ಗಮನಿಸಿದೆ. ಆ ವ್ಯಕ್ತಿಯನ್ನು ಯಾರೂ ನೋಡಿಕೊಳ್ಳುತ್ತಿರಲಿಲ್ಲ; ಇದು ನಿಜವಾಗಿಯೂ ತುಂಬಾ ದುಃಖಕರವಾಗಿತ್ತು. ಆ ರಾತ್ರಿ, ನನ್ನ ಹೋಟೆಲ್ ಕೋಣೆಯಲ್ಲಿ, ನನ್ನ ದೈಹಿಕ ನೋವು ಬಹಳ ತೀವ್ರವಾಗಿತ್ತು, ಆದರೆ ನನ್ನ ಮನಸ್ಸು ಆ ಮಕ್ಕಳ ಮತ್ತು ಆ ಮುದುಕನ ಬಗ್ಗೆ ಯೋಚಿಸುತ್ತಿತ್ತು. ಆ ಕಾಳಜಿಯು ನನ್ನ ದೈಹಿಕ ನೋವನ್ನು ಬಹಳ ಕಡಿಮೆ ಮಾಡಿತು. 

ಉದಾಹರಣೆಗೆ, ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ತಯಾರಿ ನಡೆಸುವವರನ್ನು ಪರಿಗಣಿಸಿ. ಅವರು ತೀವ್ರ ಬಲಮಟ್ಟದ ತರಬೇತಿಯನ್ನು ನಡೆಸುತ್ತಾರೆ ಮತ್ತು ಎಷ್ಟೇ ನೋವು ಮತ್ತು ಕಷ್ಟಗಳನ್ನು ಅನುಭವಿಸಿದರೂ, ಮಾನಸಿಕ ಮಟ್ಟದಲ್ಲಿ ಅವರು ಸಂತೋಷವಾಗಿರುತ್ತಾರೆ. ಆದ್ದರಿಂದ, ದೈಹಿಕ ಅನುಭವಕ್ಕಿಂತ ಹೆಚ್ಚಾಗಿ ಮಾನಸಿಕ ಮಟ್ಟವು ಮುಖ್ಯವಾಗಿದೆ. ಆದ್ದರಿಂದ, ಜೀವನದಲ್ಲಿ ನಿಜವಾಗಿಯೂ ಮುಖ್ಯವಾದುದು ಸಂತೋಷ ಮತ್ತು ತೃಪ್ತಿ.

ಸಂತೋಷದ ಕಾರಣಗಳು

ಸಂತೋಷದ ಕಾರಣಗಳು ಏನು? ದೇಹದ ಅಂಶವು ವಿಚಲಿತ ಮನಸ್ಸಿನೊಂದಿಗೆ ಅಲ್ಲ, ಬದಲಿಗೆ ಶಾಂತ ಮನಸ್ಸಿನೊಂದಿಗೆ ಚೆನ್ನಾಗಿ ಬೆಸೆಯುವುದರಿಂದ, ಶಾಂತ ಮನಸ್ಸು ಬಹಳ ಮುಖ್ಯವಾದುದು ಎಂದು ನಾನು ಭಾವಿಸುತ್ತೇನೆ. ನಮ್ಮ ದೈಹಿಕ ಪರಿಸ್ಥಿತಿ ಪರವಾಗಿಲ್ಲ, ಮಾನಸಿಕ ಶಾಂತತೆಯು ಅತ್ಯಂತ ಮುಖ್ಯ. ಹಾಗಾದರೆ, ನಾವು ಶಾಂತ ಮನಸ್ಸನ್ನು ಹೇಗೆ ಪಡೆಯಬಹುದು?

ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕುವುದೆಂದರೆ, ಅದು ಅಪ್ರಾಯೋಗಿಕವಾಗಿದೆ; ಮನಸ್ಸನ್ನು ಮಂದಗೊಳಿಸುವ ಮೂಲಕ ನಮ್ಮ ಸಮಸ್ಯೆಗಳನ್ನು ಮರೆತುಬಿಡುವುದೆಂದರೆ, ಅದು ಕೆಲಸ ಮಾಡುವುದಿಲ್ಲ. ನಾವು ನಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ಅವಲೋಕಿಸಿ, ಅವುಗಳೊಂದಿಗೆ ವ್ಯವಹರಿಸಬೇಕು, ಅದೇ ಸಮಯದಲ್ಲಿ ಶಾಂತವಾದ ಮನಸ್ಸನ್ನು ಇಟ್ಟುಕೊಳ್ಳಬೇಕು, ಇದರಿಂದ ನಾವು ವಾಸ್ತವಿಕ ಮನೋಭಾವದಿಂದ ಅವುಗಳನ್ನು ಸರಿಯಾಗಿ ಪರಿಗಣಿಸಿ, ಉತ್ತಮವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. 

ಟ್ರ್ಯಾಂಕ್ವಿಲೈಜರ್ಗಳನ್ನು ತೆಗೆದುಕೊಳ್ಳುವವರಿಗೆ – ಅದರ ಬಗ್ಗೆ ನನಗೆ ಯಾವುದೇ ಅನುಭವವಿಲ್ಲ. ಜನರು ಟ್ರ್ಯಾಂಕ್ವಿಲೈಜರ್‌ಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ, ಅವರ ಬುದ್ಧಿವಂತಿಕೆಯು ತೀಕ್ಷ್ಣವಾಗಿರುತ್ತದೆಯೇ ಅಥವಾ ಮಂದವಾಗಿರುತ್ತದೆಯೇ ಎಂದು ನನಗೆ ತಿಳಿದಿಲ್ಲ; ಅದರ ಬಗ್ಗೆ ಕೇಳಬೇಕು. ಉದಾಹರಣೆಗೆ, 1959 ರಲ್ಲಿ, ನಾನು ಮಸ್ಸೂರಿಯಲ್ಲಿದ್ದಾಗ, ನನ್ನ ತಾಯಿ ಅಥವಾ ಬೇರೊಬ್ಬರು ತೊಂದರೆಗೀಡಾಗಿದ್ದು, ಸಾಕಷ್ಟು ಆತಂಕದಲ್ಲಿದ್ದರು: ಅವರು ಸರಿಯಾಗಿ ನಿದ್ರಿಸುತ್ತಿರಲಿಲ್ಲ. ಅವರು ತೆಗೆದುಕೊಳ್ಳಬಹುದಾದ ಕೆಲವು ಔಷಧಿಗಳಿವೆ ಎಂದು ವೈದ್ಯರು ವಿವರಿಸಿದರು, ಆದರೆ ಇವು ಮನಸ್ಸನ್ನು ಸ್ವಲ್ಪ ಮಂದಗೊಳಿಸುವವು ಎಂದರು. ಆಗ ಅದು ಒಳ್ಳೆಯದಲ್ಲ ಎಂದು ನನಗನ್ನಿಸಿತು. ಒಂದೆಡೆ, ನೀವು ಸ್ವಲ್ಪ ಶಾಂತತೆಯನ್ನು ಪಡೆಯುತ್ತೀರಿ, ಆದರೆ ಇನ್ನೊಂದೆಡೆ, ಪರಿಣಾಮವು ನೀರಸವಾದರೆ, ಅದು ಒಳ್ಳೆಯದಲ್ಲ. ನಾನು ಇನ್ನೊಂದು ರೀತಿಯನ್ನು ಆಯ್ಕೆ ಮಾಡುತ್ತೇನೆ. ನಾನು ಬುದ್ಧಿವಂತಿಕೆಯನ್ನು, ಗೊಂದಲವಿಲ್ಲದೆ, ಸಂಪೂರ್ಣವಾಗಿ ಕ್ರಿಯಾತ್ಮತೆ, ಗಮನ ಮತ್ತು ಎಚ್ಚರಿಕೆಯಲ್ಲಿಡಲು ಬಯಸುತ್ತೇನೆ. ಗೊಂದಲವಿಲ್ಲದ ಮಾನಸಿಕ ಶಾಂತಿಯು ಅತ್ಯುತ್ತಮವಾದುದು. 

ಇದಕ್ಕಾಗಿ, ಸಹಾನುಭೂತಿಯಿಂದ ತುಂಬಿದ ಮಾನವ ವಾತ್ಸಲ್ಯವು ಬಹಳ ಮುಖ್ಯವಾಗಿದೆ: ನಮ್ಮ ಮನಸ್ಸು ಎಷ್ಟು ಸಹಾನುಭೂತಿಯಿಂದ ಕೂಡಿರುತ್ತದೋ, ಅಷ್ಟೇ ಚೆನ್ನಾಗಿ ನಮ್ಮ ಮೆದುಳು ಕಾರ್ಯನಿರ್ವಹಿಸುತ್ತದೆ. ನಮ್ಮ ಮನಸ್ಸಿನಲ್ಲಿ ಭಯ ಮತ್ತು ಕೋಪ ಹುಟ್ಟಿದರೆ, ನಮ್ಮ ಮೆದುಳು ತೀರ ಕಳಪೆಯಾಗಿ ಕಾರ್ಯನಿರ್ವಹಿಸುತ್ತದೆ. ಒಮ್ಮೆ ನಾನು ಎಂಬತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದ ವಿಜ್ಞಾನಿಯನ್ನು ಭೇಟಿಯಾಗಿದ್ದೆ. ಅವರು ತಮ್ಮ ಒಂದು ಪುಸ್ತಕವನ್ನು ನನಗೆ ನೀಡಿದರು. ಅದರ ಹೆಸರು ‘ವೀ ಆರ್ ಪ್ರಿಸನರ್ಸ್ ಆಫ್ ಆಂಗರ್’ ಎಂದೇನೋ ಇತ್ತು ಎಂದು ನಾನು ಭಾವಿಸುತ್ತೇನೆ. ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ಅವರು ಹೇಳಿದರು, ನಾವು ಒಂದು ವಸ್ತುವಿನ ಮೇಲೆ ಕೋಪಗೊಂಡಾಗ, ಆ ವಸ್ತುವು ತುಂಬಾ ನಕಾರಾತ್ಮಕವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಆ ಋಣಾತ್ಮಕತೆಯ ತೊಂಬತ್ತು ಪ್ರತಿಶತ ನಮ್ಮ ಮಾನಸಿಕ ಪ್ರಕ್ಷೇಪಣವಾಗಿದೆ. ಇದು ಅವರ ಸ್ವಂತ ಅನುಭವವಾಗಿತ್ತು. 

ಬೌದ್ಧ ಧರ್ಮವೂ ಇದನ್ನೇ ಹೇಳುತ್ತದೆ. ನಕಾರಾತ್ಮಕ ಭಾವನೆಗಳು ಬೆಳೆದಾಗ, ನಾವು ವಾಸ್ತವವನ್ನು ನೋಡಲಾಗುವುದಿಲ್ಲ. ನಾವು ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾದಾಗ ನಮ್ಮ ಮನಸ್ಸು ಕೋಪದಿಂದ ಪ್ರಭಾವಿತವಾಗಿದ್ದರೆ, ನಾವು ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಯಾರೂ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ, ಆದರೆ ಆ ಕ್ಷಣದಲ್ಲಿ, ಸರಿ ತಪ್ಪುಗಳನ್ನು ಪ್ರತ್ಯೇಕಿಸಿ, ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವ ನಮ್ಮ ಬುದ್ಧಿವಂತಿಕೆ ಮತ್ತು ಮೆದುಳಿನ ಭಾಗವು ಬಹಳ ಕಳಪೆಯಾಗಿ ಕಾರ್ಯನಿರ್ವಹಿಸುತ್ತದೆ. ಮಹಾನ್ ನಾಯಕರು ಕೂಡ ಇದನ್ನು ಅನುಭವಿಸುತ್ತಾರೆ. 

ಆದ್ದರಿಂದ, ಸಹಾನುಭೂತಿ ಮತ್ತು ವಾತ್ಸಲ್ಯವು ಮೆದುಳಿನ ಹೆಚ್ಚು ಸುಗಮವಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ. ಎರಡನೆಯದಾಗಿ, ಸಹಾನುಭೂತಿಯು ನಮಗೆ ಆಂತರಿಕ ಶಕ್ತಿಯನ್ನು ನೀಡುತ್ತದೆ; ಇದು ನಮಗೆ ಆತ್ಮ ವಿಶ್ವಾಸವನ್ನು ನೀಡುತ್ತದೆ ಮತ್ತು ಅದರಿಂದ ಭಯ ಕಡಿಮೆಯಾಗುತ್ತದೆ, ಹೀಗೆ ಇದು ನಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಆದ್ದರಿಂದ, ಸಹಾನುಭೂತಿ ಎರಡು ಕಾರ್ಯವನ್ನು ನಿರ್ವಹಿಸುತ್ತದೆ: ಇದು ನಮ್ಮ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಕಾರಣವಾಗುತ್ತದೆ ಮತ್ತು ನಮಗೆ ಆಂತರಿಕ ಶಕ್ತಿಯನ್ನು ನೀಡುತ್ತದೆ. ಹಾಗಾದರೆ, ಇವು ಸಂತೋಷದ ಕಾರಣಗಳು. ಇದು ಹೀಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ಅನಿಸುತ್ತದೆ. 

ಇತರ ಸಹಜಶಕ್ತಿಗಳೂ ಸಹ ಸಂತೋಷಕ್ಕಾಗಿ ಒಳ್ಳೆಯದೇ. ಉದಾಹರಣೆಗೆ, ಪ್ರತಿಯೊಬ್ಬರೂ ಹಣವನ್ನು ಇಷ್ಟಪಡುತ್ತಾರೆ. ನಮ್ಮ ಬಳಿ ಹಣವಿದ್ದರೆ, ಉತ್ತಮ ಸೌಲಭ್ಯಗಳನ್ನು ಅನುಭವಿಸಬಹುದು. ಸಾಮಾನ್ಯವಾಗಿ, ನಾವು ಇವುಗಳನ್ನು ಪ್ರಮುಖ ವಿಷಯಗಳೆಂದು ಪರಿಗಣಿಸುತ್ತೇವೆ, ಆದರೆ ನಾನು ಅದನ್ನು ಹಾಗೆಂದು ಪರಿಗಣಿಸುವುದಿಲ್ಲ. ಭೌತಿಕ ಸೌಕರ್ಯವು ದೈಹಿಕ ಪ್ರಯತ್ನದಿಂದ ಬರಬಹುದು, ಆದರೆ ಮಾನಸಿಕ ನೆಮ್ಮದಿಯು ಮಾನಸಿಕ ಪ್ರಯತ್ನದಿಂದ ಬರಬೇಕು. ನಾವು ಅಂಗಡಿಗೆ ಹೋಗಿ, ಅಂಗಡಿಯವರಿಗೆ ಕಾಸು ನೀಡಿ, ಮನಃಶಾಂತಿಯನ್ನು ಖರೀದಿಸಲು ಬಯಸುತ್ತೇವೆ ಎಂದು ಹೇಳಿದರೆ, ಅವರ ಬಳಿ ಮಾರಲು ಏನೂ ಇಲ್ಲ ಎಂದು ಹೇಳುತ್ತಾರೆ. ಕೆಲವರು ಇದು ಹುಚ್ಚುತನ ಎಂದು ನಮ್ಮನ್ನು ನೋಡಿ ನಗುತ್ತಾರೆ. ಕೆಲವು ಚುಚ್ಚುಮದ್ದು ಅಥವಾ ಮಾತ್ರೆಗಳು ತಾತ್ಕಾಲಿಕವಾಗಿ ಸಂತೋಷ ಅಥವಾ ಮನಸ್ಸಿನ ಶಾಂತತೆಯನ್ನು ನೀಡಬಹುದು, ಆದರೆ ಪೂರ್ಣ ಮಟ್ಟದಲ್ಲಲ್ಲ. ಚರ್ಚೆ ಮತ್ತು ತಾರ್ಕಿಕತೆಯ ಮೂಲಕ ನಾವು ಭಾವನೆಗಳನ್ನು ನಿಭಾಯಿಸುವ ಅಗತ್ಯವಿದೆ ಎಂದು ನಾವು ಕೌನ್ಸೆಲಿಂಗ್ನ ಉದಾಹರಣೆಗಳೊಂದಿಗೆ ನೋಡಬಹುದಾಗಿದೆ. ಆದ್ದರಿಂದ, ನಾವು ಮಾನಸಿಕ ವಿಧಾನವನ್ನು ಬಳಸಬೇಕು. ಆದ್ದರಿಂದ, ನಾನು ಭಾಷಣಗಳನ್ನು ನೀಡಿದಾಗಲೆಲ್ಲಾ, ಆಧುನಿಕ ಜನರಾದ ನಾವು, ಬಾಹ್ಯ ಅಭಿವೃದ್ಧಿಯ ಬಗ್ಗೆ ಅತಿಯಾಗಿ ಯೋಚಿಸುತ್ತೇವೆ ಎಂದು ಹೇಳುತ್ತೇನೆ. ನಾವು ಕೇವಲ ಆ ಮಟ್ಟಕ್ಕೆ ಗಮನ ನೀಡುವುದು ಸಾಕಾಗುವುದಿಲ್ಲ. ನಿಜವಾದ ಸಂತೋಷ ಮತ್ತು ತೃಪ್ತಿ ಒಳಗಿನಿಂದ ಬರಬೇಕು.

ಇದಕ್ಕೆ ಮೂಲ ಅಂಶಗಳಾದ ಸಹಾನುಭೂತಿ ಮತ್ತು ಮಾನವ ವಾತ್ಸಲ್ಯ, ಇವುಗಳೆರಡೂ ಜೀವಶಾಸ್ತ್ರದಿಂದ ಬರುತ್ತವೆ. ಶಿಶುವಾಗಿ, ನಮ್ಮ ಬದುಕುಳಿಯುವಿಕೆಯು, ಕೇವಲ ಪ್ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರೀತಿಯಿದ್ದಲ್ಲಿ ನಾವು ಸುರಕ್ಷಿತವಾಗಿರುತ್ತೇವೆ. ಅದು ಇಲ್ಲದಿದ್ದಲ್ಲಿ, ನಾವು ಆತಂಕ ಮತ್ತು ಅಸುರಕ್ಷಿತತೆಯನ್ನು ಅನುಭವಿಸುತ್ತೇವೆ. ನಮ್ಮ ತಾಯಿಯಿಂದ ಬೇರ್ಪಟ್ಟರೆ, ನಾವು ಅಳುತ್ತೇವೆ. ನಮ್ಮ ತಾಯಿಯ ತೋಳುಗಳಲ್ಲಿ, ಬಿಗಿಯಾಗಿ, ಬೆಚ್ಚಗೆ ಅಪ್ಪಿ ಹಿಡಿದಿದ್ದರೆ, ನಾವು ಸಂತೋಷವಾಗಿರುತ್ತೇವೆ ಮತ್ತು ಶಾಂತವಾಗಿರುತ್ತೇವೆ. ಇದು ಮಗುವಿನ ಜೈವಿಕ ಅಂಶವಾಗಿದೆ. ಉದಾಹರಣೆಗೆ, ನನ್ನ ಶಿಕ್ಷಕರಾದ, ಪರಮಾಣು ವಿರೋಧಿ ಹಿಂಸಾಚಾರದಲ್ಲಿ ತೊಡಗಿರುವ ಜೀವಶಾಸ್ತ್ರಜ್ಞರೊಬ್ಬರು ಹೇಳಿದರು – ಮಗುವಿನ ಜನನದ ನಂತರ, ಮಗುವಿನ ಮೆದುಳಿನ ವಿಸ್ತರಣೆಗೆ ಮತ್ತು ಬೆಳವಣಿಗೆಗೆ, ಹಲವಾರು ವಾರಗಳವರೆಗೆ ತಾಯಿಯ ದೈಹಿಕ ಸ್ಪರ್ಶವು ಬಹಳ ಮುಖ್ಯವಾದುದು. ಇದು ಸುರಕ್ಷತೆ ಮತ್ತು ಆತ್ಮೀಯತೆಯ ಭಾವನೆಯನ್ನು ನೀಡುತ್ತದೆ ಮತ್ತು ಇದು ಮೆದುಳು ಸೇರಿದಂತೆ ಸರಿಯಾದ ದೈಹಿಕ ಬೆಳವಣಿಗೆಗೆ ಕಾರಣವಾಗುತ್ತದೆ. 

ಆದ್ದರಿಂದ, ಸಹಾನುಭೂತಿ ಮತ್ತು ವಾತ್ಸಲ್ಯದ ಬೀಜವನ್ನು ಧರ್ಮ ಬಿತ್ತುವುದಿಲ್ಲ: ಅದು ಜೀವಶಾಸ್ತ್ರದಿಂದ ಹುಟ್ಟುತ್ತದೆ. ನಾವು ಪ್ರತಿಯೊಬ್ಬರೂ ನಮ್ಮ ತಾಯಿಯ ಗರ್ಭದಿಂದ ಹುಟ್ಟಿದ್ದೇವೆ ಮತ್ತು ನಾವು ಪ್ರತಿಯೊಬ್ಬರೂ ನಮ್ಮ ತಾಯಿಯ ಕಾಳಜಿ ಮತ್ತು ವಾತ್ಸಲ್ಯದಿಂದಾಗಿ ಬದುಕಿದ್ದೇವೆ. ಭಾರತೀಯ ಸಂಪ್ರದಾಯದಲ್ಲಿ, ನಾವು ಪವಿತ್ರ ಭೂಮಿಯಲ್ಲಿ, ಕಮಲದಿಂದ ಜನ್ಮ ಪಡೆದೆವೆಂದು ಪರಿಗಣಿಸಲಾಗುತ್ತದೆ. ಕೇಳಲು ಬಹಳ ಚೆನ್ನಾಗಿದೆ, ಆದರೆ ಬಹುಶಃ ಅಲ್ಲಿನ ಜನರಿಗೆ, ಮನುಷ್ಯರಿಗಿಂತ‍ ಕಮಲಗಳ ಮೇಲೆ ಹೆಚ್ಚು ಪ್ರೀತಿ ಇದೆ ಅನಿಸುತ್ತದೆ. ಆದ್ದರಿಂದ ತಾಯಿಯ ಗರ್ಭದಿಂದ ಹುಟ್ಟುವುದು ಉತ್ತಮ. ಆಗ ನಮ್ಮಲ್ಲಿ ಮೊದಲಿನಿಂದಲೇ ಕರುಣೆಯ ಬೀಜವನ್ನು ಬಿತ್ತಲಾಗಿರುತ್ತದೆ. ಹೀಗೆ, ಅವು ಸಂತೋಷದ ಕಾರಣಗಳಾಗಿವೆ.

Top