ಪ್ರಜ್ಞೆಯಿರುವ ಎಲ್ಲಾ ಜೀವಿಗಳು, ಅದರಲ್ಲೂ ನಿರ್ದಿಷ್ಟವಾಗಿ ಮಾನವರು, ಸಂತೋಷ ಮತ್ತು ದುಃಖ, ಒಳ್ಳೆಯದು ಮತ್ತು ಕೆಟ್ಟದ್ದು, ಯಾವುದು ಹಾನಿಕಾರಕ ಮತ್ತು ಯಾವುದು ಪ್ರಯೋಜನಕಾರಿ ಎಂಬುದನ್ನು ಪ್ರತ್ಯೇಕಿಸುವ ಶಕ್ತಿಯನ್ನು ಹೊಂದಿರುತ್ತೇವೆ. ಈ ವಿಭಿನ್ನ ರೀತಿಯ ಭಾವನೆಗಳನ್ನು ಗುರುತಿಸುವ ಮತ್ತು ಪ್ರತ್ಯೇಕಿಸುವ ಸಾಮರ್ಥ್ಯದಿಂದಾಗಿ, ನಾವೆಲ್ಲರೂ ಸಂತೋಷವನ್ನು ಬಯಸುವುದರಲ್ಲಿ ಮತ್ತು ದುಃಖವನ್ನು ಬಯಸದೇ ಇರುವುದರಲ್ಲಿ ಒಂದೇ ಆಗಿರುತ್ತೇವೆ.
ಈ ವಿಭಿನ್ನ ಭಾವನೆಗಳು ಹೇಗೆ ಬೆಳೆಯುತ್ತವೆ ಎಂಬುದರ ಮೂಲವನ್ನು ಪತ್ತೆಹಚ್ಚುವ ಸಂಕೀರ್ಣತೆಯನ್ನು ಇಲ್ಲಿ ನಾನು ವಿಶ್ಲೇಷಿಸುವುದಿಲ್ಲ, ಆದರೆ ನಮಗೆಲ್ಲರಿಗೂ ಸ್ಪಷ್ಟವಾಗಿರುವ ಸಂಗತಿಯೆಂದರೆ, ನಾವು ಸಂತೋಷವನ್ನು ಇಷ್ಟಪಡುತ್ತೇವೆ ಮತ್ತು ನೋವು - ಸಂಕಟಗಳ ಅನುಭವಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ಸಾಮರಸ್ಯ ಮತ್ತು ಶಾಂತಿಯನ್ನು ತರುವ ಮತ್ತು ಗೊಂದಲ ಮತ್ತು ಪ್ರಕ್ಷುಬ್ಧತೆಯನ್ನು ತರದ ಜೀವನವನ್ನು ನಡೆಸುವುದು ಬಹಳ ಮುಖ್ಯ.
ಶಾಂತಿ ಮತ್ತು ಸಂತೋಷದ ಸಾಧನೆಯ ಬಗೆಗಿನ ಪ್ರಶ್ನೆ ಬಂದಾಗ, ನಮ್ಮ ಎಲ್ಲಾ ಶಾಂತಿ ಮತ್ತು ಸಂತೋಷವು ಕೇವಲ ಬಾಹ್ಯ, ಭೌತಿಕ ಸಮೃದ್ಧಿಯಿಂದಲೇ ಬರುತ್ತದೆ ಎಂದು ಭಾವಿಸುವುದು ತಪ್ಪು. ಭೌತಿಕ ಸೌಲಭ್ಯಗಳನ್ನು ಅವಲಂಬಿಸಿ, ನಾವು ನಮ್ಮ ದೈಹಿಕ ಸಂತೋಷವನ್ನು ಮತ್ತು ಆನಂದವನ್ನು ಹೆಚ್ಚಿಸಬಹುದೇನೋ ಹೌದು ಮತ್ತು ನಮ್ಮ ಕೆಲವು ದೈಹಿಕ ತೊಂದರೆಗಳನ್ನು ತೊಡೆದುಹಾಕಬಹುದು. ಆದರೆ ಭೌತಿಕ ಸೌಲಭ್ಯಗಳ ಗಳಿಕೆಗಳೆಲ್ಲವೂ ದೇಹದ ಅನುಭವಕ್ಕೆ ಸೀಮಿತವಾಗಿವೆ.
ಇತರ ಪ್ರಾಣಿಗಳಿಗಿಂತ ಭಿನ್ನವಾಗಿ, ಮಾನವರಿಗೆ ಯೋಚಿಸುವ, ಲೆಕ್ಕಾಚಾರ ಮಾಡುವ, ನಿರ್ಣಯಿಸುವ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಮಾಡುವ ಅಪಾರ ಸಾಮರ್ಥ್ಯವಿದೆ. ಆದ್ದರಿಂದ, ನಾವು ಮಾನವರಾಗಿ ಅನುಭವಿಸುವ ನೋವು ಮತ್ತು ಸಂತಸಗಳು ಹೆಚ್ಚು ಬಲುವಾಗಿದ್ದು, ಹೆಚ್ಚು ಶಕ್ತಿಯುತವಾಗಿವೆ. ಆ ಕಾರಣದಿಂದಾಗಿ, ಮಾನವನ ಯೋಚಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿರುವ ಹೆಚ್ಚು ಸಂಕಟಗಳನ್ನು ಮನುಷ್ಯರು ಅನುಭವಿಸುವ ಸಾಧ್ಯತೆಯಿದೆ.
ಉದಾಹರಣೆಗೆ, ಪ್ರಾಣಿಗಳಿಗಿಂತ ಭಿನ್ನವಾಗಿ, ಮಾನವರ ಸನ್ನಿವೇಶದಲ್ಲಿ, ನಾವು ಒಂದು ರೀತಿಯ ತಾತ್ಕಾಲಿಕ ಸಂತೋಷವನ್ನು ಸಾಧಿಸುವುದರಿಂದ ಮತ್ತು ತಾತ್ಕಾಲಿಕ ದುಃಖವನ್ನು ತೊಡೆದುಹಾಕುವುದರಿಂದ ತೃಪ್ತರಾಗುವುದಿಲ್ಲ. ಏಕೆಂದರೆ, ಮಾನವರಾದ ನಾವು ದೀರ್ಘಾವಧಿಯ ಯೋಜನೆ ಮತ್ತು ಲೆಕ್ಕಾಚಾರಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ, ಆದ್ದರಿಂದ ನಾವು ನಮ್ಮ ಮತ್ತು ಇತರರ ನಡುವೆ ವಿಭಜನೆಯನ್ನು ರಚಿಸುತ್ತೇವೆ. ಈ ವಿಭಾಗಗಳ ಆಧಾರದ ಮೇಲೆ, ನಾವು ವಿವಿಧ ರಾಷ್ಟ್ರಗಳು, ವಿವಿಧ ಜನಾಂಗಗಳು ಮತ್ತು ವಿವಿಧ ಧರ್ಮಗಳ ಬಗ್ಗೆ ಮಾತನಾಡುತ್ತೇವೆ. ನಾವು ಲೆಕ್ಕವಿಲ್ಲದಷ್ಟು ವಿಭಾಗಗಳನ್ನು ರಚಿಸುತ್ತೇವೆ ಮತ್ತು ಇವುಗಳ ಆಧಾರದ ಮೇಲೆ ಅನೇಕ ವಿವೇಚನಾಶೀಲ ಆಲೋಚನೆಗಳು ಮತ್ತು ತಪ್ಪು ಕಲ್ಪನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಆ ಕಾರಣದಿಂದಾಗಿ, ನಮ್ಮಲ್ಲಿ ಕೆಲವೊಮ್ಮೆ ಅತಿಯಾದ ಭರವಸೆ ಮತ್ತು ಕೆಲವೊಮ್ಮೆ ಅತಿಯಾದ ಅನುಮಾನಗಳು ಹುಟ್ಟುತ್ತವೆ.
ಆದ್ದರಿಂದ, ಮಾನವ ಬುದ್ಧಿವಂತಿಕೆಯ ಮತ್ತು ಪರಿಕಲ್ಪನೆಯ ಸಂಪೂರ್ಣ ಆಧಾರದ ಮೇಲೆ, ನಾವು ಅನೇಕ ರೀತಿಯ ಅತೃಪ್ತಿಗಳನ್ನು ಅನುಭವಿಸುತ್ತೇವೆ. ಆರ್ಯದೇವರ ನಾಲ್ಕು ನೂರು ಶ್ಲೋಕಗಳ ಗ್ರಂಥದಲ್ಲಿ ಇದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ, ಅವರು (II.8) ಹೇಳುತ್ತಾರೆ: "ಸವಲತ್ತು ಹೊಂದಿರುವವರು ಮಾನಸಿಕವಾಗಿ ಬಳಲುತ್ತಾರೆ, ಆದರೆ ಸಾಮಾನ್ಯ ಜನರಿಗೆ ದೈಹಿಕ ಬಳಲಿಕೆ ಉಂಟಾಗುತ್ತದೆ." ಇದರರ್ಥ, ಹೆಚ್ಚಿನ ಶಕ್ತಿ, ಹೆಚ್ಚಿನ ಸಂಪತ್ತಿರುವ ಜನರು ಹೆಚ್ಚಾದ ದೈಹಿಕ ಬಳಲಿಕೆಯನ್ನು ಅನುಭವಿಸುವುದಿಲ್ಲ, ಆದರೆ ಅವರು ಹೆಚ್ಚು ಮಾನಸಿಕ ನೋವನ್ನು ಅನುಭವಿಸುತ್ತಾರೆ. ಸಾಮಾನ್ಯ ಜನರ ವಿಷಯದಲ್ಲಿ, ಅವರಿಗೆ ಅವಶ್ಯಕವಾಗಿರುವ ಬಟ್ಟೆ, ಆಹಾರ ಮತ್ತು ಮುಂತಾದವುಗಳನ್ನು ಪಡೆಯಲು ಸಾಧ್ಯವಾಗದೆ, ಹೆಚ್ಚು ದೈಹಿಕವಾಗಿ ಬಳಲುತ್ತಾರೆ. ಹೀಗೆ, ಅವರ ಯೋಚನೆಯ ವಿಧಾನದಿಂದಾಗಿ ಮಾನವರು ಹೆಚ್ಚಿನ ದುಃಖವನ್ನು ಅನುಭವಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.
ನಾನು ಮೊದಲೇ ಹೇಳಿದಂತೆ, ಭೌತಿಕ ಪ್ರಗತಿಯ ಮೂಲಕ ನಾವು ದೈಹಿಕ ಬಳಲಿಕೆಯನ್ನು ಕಡಿಮೆ ಮಾಡಬಹುದು. ಆದರೆ, ನಿಮ್ಮ ಮಾನಸಿಕ ವರ್ತನೆಯಿಂದಾಗಿ ಎದುರಾಗುವ ಸಂಕಟವನ್ನು, ನಿಮ್ಮ ಭೌತಿಕ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಕಡಿಮೆ ಮಾಡಲು ಸಾಧ್ಯವಿಲ್ಲ. ಒಂದು ಸ್ಪಷ್ಟ ಉದಾಹರಣೆಯೆಂದರೆ, ತಮ್ಮ ಇತ್ಯರ್ಥದಲ್ಲಿ ಎಲ್ಲಾ ಭೌತಿಕ ಸೌಲಭ್ಯಗಳನ್ನು ಹೊಂದಿರುವ ಅನೇಕ ಶ್ರೀಮಂತರು ಅನೇಕ ರೀತಿಯ ಮಾನಸಿಕ ನೋವನ್ನು ಅನುಭವಿಸುತ್ತಿರುವುದನ್ನು ನಾವು ನೋಡಬಹುದು. ಇದು ನಾವೆಲ್ಲರೂ ಗಮನಿಸಬಹುದಾದ ಸಂಗತಿ. ಹೀಗಾಗಿ, ಕೇವಲ ನಿಮ್ಮ ಮಾನಸಿಕ ಮನೋಭಾವದಿಂದ ಉಂಟಾಗುವ ಅಶಾಂತಿ, ಸಮಸ್ಯೆಗಳು ಮತ್ತು ಸಂಕಟಗಳನ್ನು, ನಿಮ್ಮ ಮಾನಸಿಕ ದೃಷ್ಟಿಕೋನವನ್ನು ಬದಲಾಯಿಸುವ ಮೂಲಕ ಕಡಿಮೆ ಮಾಡಬಹುದು ಮತ್ತು ತೊಡೆದುಹಾಕಬಹುದೇ ಹೊರತು ಬಾಹ್ಯ ಭೌತಿಕ ಸೌಲಭ್ಯಗಳ ಮೂಲಕ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಈ ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ಸಂತೋಷ ಮತ್ತು ದುಃಖವನ್ನು ಅನುಭವಿಸುವ ಬಗ್ಗೆ ಮಾತನಾಡುವಾಗ, ಅವುಗಳನ್ನು ಅನುಭವಿಸುವ ಎರಡು ಮಾರ್ಗಗಳಿವೆ. ಒಂದು ಇಂದ್ರಿಯ ಅನುಭವಗಳಿಗೆ ಬಹಳ ಸಂಬಂಧಿಸಿವೆ - ಅಂದರೆ ಐದು ಇಂದ್ರಿಯಗಳ ಮೂಲಕ ನಾವು ಅನುಭವಿಸುವ ಸಂತೋಷ ಮತ್ತು ನೋವುಗಳು - ಇನ್ನೊಂದು ನಮ್ಮ ಮನಸ್ಸು ಅಥವಾ ಮಾನಸಿಕ ವರ್ತನೆಯ ಆಧಾರದ ಮೇಲೆ ಅನುಭವಿಸುವ ಮತ್ತೊಂದು ಹಂತದ ಸಂತೋಷ ಮತ್ತು ದುಃಖ. ಈ ಎರಡರಲ್ಲಿ, ನೀವು ಮನಸ್ಸಿನ ಮೂಲಕ ಅನುಭವಿಸುವ ಸಂತೋಷ ಮತ್ತು ನೋವು, ಇಂದ್ರಿಯಗಳ ಮೂಲಕ ಅನುಭವಿಸುವುದಕ್ಕಿಂತ ಹೆಚ್ಚು ಪ್ರಬಲವಾಗಿದೆ ಮತ್ತು ಹೆಚ್ಚು ಶಕ್ತಿಯುತವಾಗಿದೆ.
ಒಂದು ಸ್ಪಷ್ಟ ಉದಾಹರಣೆಯೆಂದರೆ, ನಿಮಗೆ ಬೇಕಾದಷ್ಟುಎಲ್ಲಾ ಭೌತಿಕ ಸೌಲಭ್ಯಗಳಿದ್ದರೂ ಸಹ, ನಿಮಗೆ ಯಾವುದೇ ರೀತಿಯ ದೈಹಿಕ ತೊಂದರೆಗಳು ಮತ್ತು ಸಂಕಟಗಳು ಇಲ್ಲದಿದ್ದರೂ ಸಹ, ನಿಮ್ಮ ಮನಸ್ಸಿಗೆ ನೆಮ್ಮದಿಯಿಲ್ಲದಿದ್ದಾಗ, ನೀವು ಮಾನಸಿಕವಾಗಿ ಬಳಲುತ್ತಿರುವಾಗ, ಈ ಭೌತಿಕ ಸೌಕರ್ಯಗಳಿಂದ, ನಿಮ್ಮ ಮಾನಸಿಕ ಮಟ್ಟದಲ್ಲಿ ನೀವು ಎದುರಿಸುತ್ತಿರುವ ದುಃಖಗಳನ್ನು ಜಯಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ, ನೀವು ಕೆಲವು ದೈಹಿಕ ಅಸ್ವಸ್ಥತೆ ಮತ್ತು ಸಂಕಟಗಳನ್ನು ಎದುರಿಸುತ್ತಿರುವಾಗ, ನೀವು ಆ ಪರಿಸ್ಥಿತಿಯನ್ನು ಮಾನಸಿಕವಾಗಿ ಒಪ್ಪಿಕೊಂಡರೆ, ನಿಮಗೆ ಆ ದೈಹಿಕ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ.
ಉದಾಹರಣೆಗೆ ಕೆಲವು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಸಂಪೂರ್ಣವಾಗಿ ಬದ್ಧವಾಗಿರುವ ವ್ಯಕ್ತಿಯೊಬ್ಬರನ್ನು ಪರಿಗಣಿಸಿ. ಆ ಧಾರ್ಮಿಕ ಆಚರಣೆಯನ್ನು ಅನುಸರಿಸುವಾಗ, ಅವರು ಅನೇಕ ದೈಹಿಕ ಸಂಕಟಗಳನ್ನು ಎದುರಿಸಬೇಕಾಗಬಹುದು; ಅದೇನೇ ಇದ್ದರೂ, ಸಂತುಷ್ಟದ ಮತ್ತು ಸಂತೃಪ್ತಿಯ ಭಾವನೆಯಿಂದ ಅವರು ಅನುಸರಿಸುತ್ತಿರುವ ಗುರಿಯ ಸ್ಪಷ್ಟ ದೃಷ್ಟಿಯನ್ನು ಹೊಂದಿರುವುದರಿಂದ, ಆ ವ್ಯಕ್ತಿಯು ಆ ಸಂಕಷ್ಟಗಳನ್ನು ಕಷ್ಟಕರವೆಂದು ಕಾಣುವ ಬದಲು, ಒಂದು ರೀತಿಯ ಅಲಂಕಾರವಾಗಿ ಕಾಣುತ್ತಾರೆ. ಆದ್ದರಿಂದ, ಉನ್ನತ ಉದ್ದೇಶಗಳನ್ನು ಮತ್ತು ಗುರಿಯನ್ನು ಸಾಧಿಸುವ ಸಲುವಾಗಿ, ಈ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತಹ ಮಾನಸಿಕ ಸಿದ್ಧತೆಯ ಮೂಲಕ, ದೈಹಿಕ ನೋವನ್ನು ಜಯಿಸಲು ಸಾಧ್ಯವಾಗುತ್ತದೆ. ನಾವು ಮಹತ್ವದ ಉದ್ದೇಶ ಮತ್ತು ಗುರಿಗಾಗಿ ಕೆಲಸ ಮಾಡುವಾಗ, ನಾವು ದೈಹಿಕ ನೋವುಗಳನ್ನು ಜಯಿಸುವ ಬಗೆಗೆ ಹಲವಾರು ಉದಾಹರಣೆಗಳಿವೆ. ಅಂತಹ ಸಂದರ್ಭಗಳಲ್ಲಿ, ನಾವು ಸಾಕಷ್ಟು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ನಾವು ಅವನ್ನು ಬಹಳ ಸಂತೋಷದಿಂದ, ಆನಂದದಿಂದ, ಅಲಂಕಾರವಾಗಿ ಪರಿಗಣಿಸುತ್ತೇವೆ.
ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಇಂದ್ರಿಯಗಳ ಮೂಲಕ ಮತ್ತು ನಿಮ್ಮ ಮನಸ್ಸಿನ ಮೂಲಕ ಎದುರಿಸುವ ಅನುಭವಗಳಲ್ಲಿ, ನಿಮ್ಮ ಮನಸ್ಸಿನ ಮೂಲಕ ನೀವು ಎದುರಿಸುವ ಮತ್ತು ಅನುಭವಿಸುವ ಅನುಭವವು ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ.
ನಾನು ಹೇಳಿದಂತೆ, ಮಾನಸಿಕ ಸಮಸ್ಯೆಗಳನ್ನು ನಿಭಾಯಿಸುವಾಗ, ನಿಮ್ಮ ಮಾನಸಿಕ ವರ್ತನೆ ಮತ್ತು ಮಾನಸಿಕ ದೃಷ್ಟಿಕೋನದಿಂದ ಸಂಪೂರ್ಣವಾಗಿ ಉಂಟಾಗುವ ಸಮಸ್ಯೆಗಳನ್ನು ನಿಮ್ಮ ವರ್ತನೆಯನ್ನು ಬದಲಾಯಿಸುವ ಮೂಲಕ ಕಡಿಮೆ ಮಾಡಬಹುದು ಮತ್ತು ತೊಡೆದುಹಾಕಬಹುದು. ಆದ್ದರಿಂದ, ಮಾನಸಿಕ ಸಮಸ್ಯೆಗಳನ್ನು ತೆಗೆದುಹಾಕಲು ಒಂದು ಮಾರ್ಗವಿದೆ, ಒಂದು ವಿಧಾನವಿದೆ ಮತ್ತು ಒಂದು ಕ್ರಮವಿದೆ. ಅದಕ್ಕಾಗಿ, ನಾವು ಈ ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡುವ ಮತ್ತು ತೆಗೆದುಹಾಕುವ ವಿಧಾನಗಳು ಮತ್ತು ಕ್ರಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದಲ್ಲದೆ, ಈ ಮಾನಸಿಕ ಸಮಸ್ಯೆಗಳನ್ನು ತೊಡೆದುಹಾಕಲು ನಾವು ಈ ವಿಧಾನಗಳು ಮತ್ತು ಕ್ರಮಗಳ ಬಗ್ಗೆ ಮಾತನಾಡುವಾಗ, ನಮ್ಮ ಜನ್ಮಸಿದ್ಧ ಉತ್ತಮ ಮಾನವ ಗುಣಗಳನ್ನು ತಿಳಿದುಕೊಳ್ಳುವುದು ಮತ್ತು ಗುರುತಿಸುವುದು ಮುಖ್ಯವಾಗಿದೆ.
ಉದಾಹರಣೆಗೆ, ನಾನು ಇದನ್ನು ಈ ರೀತಿ ಗ್ರಹಿಸುತ್ತೇನೆ: ನೀವು ಈ ಮಾನವ ಸಮಾಜವನ್ನು ಎಚ್ಚರವಿಟ್ಟು ಗಮನಿಸಿದರೆ, ನಾವು ಸಾಮಾಜಿಕ ಪ್ರಾಣಿಗಳು ಎಂಬುದು ನಿಮಗೆ ಅರಿವಾಗಬಹುದು. ಇದರರ್ಥ ನಾವು ಸಮಾಜದಲ್ಲಿ ವಾಸಿಸುತ್ತಿದ್ದೇವೆ ಮತ್ತು ನಾವು ಪರಸ್ಪರರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆ. ನಾವು ಹುಟ್ಟಿದಾಗಿನಿಂದ ವಯಸ್ಕರಾಗಿ ನಮ್ಮ ಕಾಲ ಮೇಲೆ ನಾವೇ ನಿಲ್ಲುವ ತನಕ, ನಮ್ಮ ದೈಹಿಕ ಯೋಗಕ್ಷೇಮಕ್ಕಾಗಿಯೂ ಸಹ ನಾವು ಇತರರ ದಯೆಯ ಮೇಲೆ ಅವಲಂಬಿತರಾಗುರುತ್ತೇವೆ. ಇದಕ್ಕೆ ಕಾರಣ ನಮ್ಮ ಜೀವಶಾಸ್ತ್ರದ ರಚನೆ, ನಮ್ಮ ದೇಹದ ರಚನೆಯೇ ಆಗಿರುವುದು. ನಾವು ಹೆಚ್ಚು ಸಾಮೀಪ್ಯವನ್ನು ತೋರಿಸಿದಷ್ಟು, ನಾವು ಪರಸ್ಪರರ ಬಗ್ಗೆ ಹೆಚ್ಚು ಸಹಾನುಭೂತಿ ಮತ್ತು ಕಾಳಜಿಯನ್ನು ಬೆಳೆಸಿಕೊಂಡಷ್ಟು, ನಾವು ಹೆಚ್ಚು ಶಾಂತಿ ಮತ್ತು ಸಂತೋಷವನ್ನು ಸಾಧಿಸಬಹುದಾಗಿದೆ. ಈ ಮೂಲಭೂತ ಮಾನವೀಯ ಮೌಲ್ಯಗಳ ಪ್ರಯೋಜನದಿಂದಾಗಿ, ಈ ಮೂಲಭೂತ ಮಾನವ ಮೌಲ್ಯಗಳು ಮುಖ್ಯವೆಂದು ನಾವು ಹೇಳಬಹುದು, ಅವು ಅವಶ್ಯಕವಾಗಿವೆ, ಆದ್ದರಿಂದ ಅವು ಅಗತ್ಯ ಗುಣಗಳು.
ಇನ್ನು ಕೆಲವು ಉದಾಹರಣೆಗಳನ್ನು ನೋಡುವುದಾದರೆ, ಚಿಟ್ಟೆಯ ಅಥವಾ ಆಮೆಯ ಸಂತತಿಯನ್ನು ನೋಡಿದರೆ, ಆಮೆ ಮತ್ತು ಚಿಟ್ಟೆಗಳ ತಾಯಿ ಮತ್ತು ಸಂತತಿಗಳ ನಡುವೆ ಹೆಚ್ಚು ಅವಲಂಬನೆ ಇಲ್ಲವೆಂದು ತೋರುತ್ತದೆ. ಉದಾಹರಣೆಗೆ, ಮೊಟ್ಟೆಗಳನ್ನು ಇಟ್ಟ ನಂತರ, ಚಿಟ್ಟೆಗಳ ಸಂತತಿಯು ತಮ್ಮ ಹೆತ್ತವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ, ಮತ್ತು ಆಮೆಯ ವಿಷಯದಲ್ಲಿ, ಅವುಗಳು ಮೊಟ್ಟೆಗಳನ್ನು ಇಟ್ಟ ನಂತರ ಕಣ್ಮರೆಯಾಗುತ್ತವೆ. ನೀವು ಅವುಗಳ ತಾಯಿಯನ್ನು ಬಳಿಗೆ ಕರೆತಂದರೂ ಸಹ, ಈ ಸಂತತಿಗೆ ತಮ್ಮ ಹೆತ್ತವರೊಡನೆ ಯಾವುದೇ ರೀತಿಯ ಪ್ರೀತಿ ಮತ್ತು ವಾತ್ಸಲ್ಯದಿಂದ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ನನಗೆ ಅನುಮಾನವಿದೆ, ಏಕೆಂದರೆ ಅವು ಹುಟ್ಟಿನಿಂದಲೇ ಸ್ವತಂತ್ರ ಜೀವನವನ್ನು ನಡೆಸಲು ಶುರುಮಾಡುತ್ತವೆ. ಇದು ಬಹುಶಃ ಅವುಗಳ ಹಿಂದಿನ ಜೀವನಶೈಲಿಯಿಂದಾಗಿರಬಹುದು ಅಥವಾ ಅವುಗಳ ದೈಹಿಕ ರಚನೆಯ ಕಾರಣದಿಂದಾಗಿರಬಹುದು. ಆಮೆಯ ಸಂತತಿಯ ವಿಷಯದಲ್ಲಿ, ಅವುಗಳ ಹಿಂದಿನ ಜೀವನಶೈಲಿಯಿಂದಾಗಿ ಅಥವಾ ಅವುಗಳ ದೈಹಿಕ ರಚನೆಯಿಂದಾಗಿ, ಅವು ತಮ್ಮನ್ನು ತಾವೇ ನೋಡಿಕೊಳ್ಳಲು ಸಮರ್ಥರಾಗಿರುತ್ತವೆ. ಸಮುದ್ರದ ಅಲೆಗಳ ಶಬ್ದವನ್ನು ಕೇಳಿದಾಗ, ಅವು ಕ್ರಮೇಣವಾಗಿ ಸಾಗರದ ಕಡೆಗೆ ಚಲಿಸುತ್ತಾ, ತಮ್ಮನ್ನು ತಾವು ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಅವುಗಳ ತಾಯಂದಿರು ಸಂತತಿಯನ್ನು ಆಹ್ವಾನಿಸಲು ಮತ್ತು ಈಜು ಕಲಿಸಲು ಮತ್ತು ನೋಡಿಕೊಳ್ಳಲು ಖಂಡಿತ ಬರುವುದಿಲ್ಲ; ಈ ರೀತಿಯ ವ್ಯವಸ್ಥೆ ಅವುಗಳಿಗಿಲ್ಲ. ಆದ್ದರಿಂದ, ಅವು ಸ್ವತಂತ್ರವಾದ ಜೀವನವನ್ನು ನಡೆಸುತ್ತವೆ ಮತ್ತು ಅಲ್ಲಿ ನಾವು ಸಂತತಿ ಮತ್ತು ಹೆತ್ತವರ ನಡುವೆ ಹೆಚ್ಚಿನ ಪ್ರೀತಿಯನ್ನು ಕಾಣುವುದಿಲ್ಲ.
ಈಗ ಮನುಷ್ಯರ ವಿಷಯದಲ್ಲಿ, ನಮ್ಮ ದೈಹಿಕ ರಚನೆಯಿಂದಾಗಿ, ನಾವು ಹುಟ್ಟಿದಾಗಿನಿಂದಲೇ ನಮ್ಮ ಹೆತ್ತವರಿಗೆ, ವಿಶೇಷವಾಗಿ ನಮ್ಮ ತಾಯಂದರಿಗೆ ಬಲುವಾದ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಲು ಸಾಧ್ಯವಾಗುತ್ತದೆ. ನಾನು ಈ ವಿಷಯಗಳನ್ನು ಒತ್ತಿ ಹೇಳುತ್ತಿರುವುದು ಹಿಂದಿನ ಮತ್ತು ಭವಿಷ್ಯದ ಜೀವನವನ್ನು ಸ್ವೀಕರಿಸುವ ದೃಷ್ಟಿಯಿಂದ ಅಥವಾ ಧಾರ್ಮಿಕ ವಿಷಯವಾಗಿ ಅಲ್ಲ, ಆದರೆ ಮನುಷ್ಯ ಹೇಗೆ ಬದುಕುತ್ತಾನೆ ಮತ್ತು ಹೇಗೆ ಅಭಿವೃದ್ಧಿಗೊಳ್ಳುತ್ತಾನೆ ಎಂಬುದನ್ನು ನೀವು ಗಮನವಿಟ್ಟು ನೋಡಿದರೆ, ನಮ್ಮ ಉಳಿವಿಗಾಗಿ ನಾವು ಮಾನವೀಯ ಮೌಲ್ಯಗಳು, ಮಾನವ ಪ್ರೀತಿ ಮತ್ತು ಸಹಾನುಭೂತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆ ಎಂಬುದನ್ನು ಕಂಡುಹಿಡಿಯುತ್ತೀರಿ. ಮತ್ತು ಮಾನವ ಮಕ್ಕಳ ವಿಷಯದಲ್ಲಿ, ಹುಟ್ಟಿನಿಂದಲೇ ಅವರು ತಮ್ಮ ತಾಯಿಯ ಹಾಲಿನ ಮೇಲೆ ಅವಲಂಬಿತರಾಗಿರುತ್ತಾರೆ, ನಂತರ ಕ್ರಮೇಣವಾಗಿ ಅವರು ತಮ್ಮನ್ನು ತಾವು ನೋಡಿಕೊಳ್ಳಲು ಸಾಧ್ಯವಾಗುವವರೆಗೆ, ಹೆತ್ತವರ ದಯೆಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ದೊಡ್ಡವರಾದ ನಂತರವೂ, ಅವರು ಇತರರ ದಯೆಯ ಮೇಲೆ ಅವಲಂಬಿತರಾಗಿರುತ್ತಾರೆ.
ನಿಮ್ಮೊಂದಿಗೆ ಒಡನಾಡಿಯೊಬ್ಬರು ಇರುವವರೆಗೆ, ನಿಮ್ಮನ್ನು ನೋಡಿಕೊಳ್ಳಲು ಯಾರಾದರೂ ಇರುವವರೆಗೆ, ನೀವು ಹೆಚ್ಚು ಶಾಂತಿಯನ್ನು ಅನುಭವಿಸುತ್ತೀರಿ, ಹೆಚ್ಚು ವಿಶ್ರಾಂತಿ ಪಡೆಯುತ್ತೀರಿ, ಹೆಚ್ಚು ಹೆಚ್ಚು ಹಿತಕರವಾಗಿರುತ್ತೀರಿ. ಆದ್ದರಿಂದ, ನೀವು ಯಾರಿಗೂ ಹಾನಿ ಮಾಡದೆ, ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುವಂತಹ ಜೀವನವನ್ನು ನಡೆಸುವುದು ಮುಖ್ಯವಾಗಿದೆ. ನೀವು ಇತರ ಜೀವಿಗಳನ್ನು ಪ್ರೀತಿಸಿದರೆ, ಅಕ್ಕರೆಯನ್ನು ಹೊಂದಿದ್ದರೆ, ಪ್ರತಿಯಾಗಿ ನಿಮ್ಮನ್ನೂ ಕೂಡ ಎಲ್ಲರೂ ಇಷ್ಟಪಡುತ್ತಾರೆ ಮತ್ತು ಪ್ರೀತಿಸುತ್ತಾರೆ; ಸಾವಿನ ಸಮಯದಲ್ಲಿಯೂ ಸಹ ನಿಮಗೆ ಯಾವುದೇ ರೀತಿಯ ಆತಂಕ, ಭಯ, ಮಾನಸಿಕ ತೊಂದರೆ ಇರುವುದಿಲ್ಲ.
ಆದರೆ, ನಾವು ದೊಡ್ಡವರಾದಂತೆ, ಕೆಲವೊಮ್ಮೆ ಒಂದು ರೀತಿಯ ಮಾನವ ಬುದ್ಧಿವಂತಿಕೆಯು ದೃಶ್ಯದಲ್ಲಿ ಬರುತ್ತದೆ ಮತ್ತು ಕೆಲವೊಮ್ಮೆ ಈ ಮಾನವ ಬುದ್ಧಿವಂತಿಕೆಯು ನಮಗೆ ಬರಿದಾದ ಭರವಸೆಯನ್ನು ನೀಡುತ್ತದೆ. ನಾವು ನಮ್ಮ ಮಾನವ ಬುದ್ಧಿವಂತಿಕೆಯಿಂದ ಹೊಸ ವಿಷಯಗಳನ್ನು ಕಲಿಯುತ್ತೇವೆ, ಹೊಸ ಜ್ಞಾನವನ್ನು ಪಡೆದುಕೊಳ್ಳುತ್ತೇವೆ. ಈ ರೀತಿಯ ಜ್ಞಾನದಿಂದ, ನಾವು ಕೆಲವೊಮ್ಮೆ ಯೋಚಿಸುತ್ತೇವೆ, ವಿಶೇಷವಾಗಿ ನೀವು ತುಂಬಾ ಯಶಸ್ವಿಯಾದಾಗ ನೀವು ಹೀಗೆ ಯೋಚಿಸಬಹುದು: "ನಾನು ಇತರ ಜನರನ್ನು ಬೆದರಿಸಬಲ್ಲೆ, ನಾನು ಇತರ ಜನರನ್ನು ಬಳಸಿಕೊಳ್ಳಬಹುದು, ಏಕೆಂದರೆ ನನಲ್ಲಿ ಈ ಅದ್ಭುತ ಬುದ್ಧಿವಂತಿಕೆ ಮತ್ತು ಜ್ಞಾನವಿದೆ, ಆದ್ದರಿಂದ ನನ್ನ ವಿಷಯದಲ್ಲಿ ಮೂಲಭೂತ ಮಾನವೀಯ ಮೌಲ್ಯಗಳು ಮುಖ್ಯವಲ್ಲ.” ನೀವು ಈ ರೀತಿಯ ಬರಿದಾದ ಭರವಸೆಯನ್ನು ಪಡೆಯುತ್ತೀರಿ ಮತ್ತು ವಿಭಿನ್ನ ರೀತಿಯ ಮಾನಸಿಕ ವರ್ತನೆ ಮತ್ತು ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತೀರಿ ಮತ್ತು ಆ ಮೂಲಕ ನೀವು ಏನೋ ಲಾಭ ಸಿಗುವುದು ಎಂಬಂತೆ ಇತರರನ್ನು ಶೋಷಿಸಲು ಮತ್ತು ಬೆದರಿಸಲು ಹಿಂಜರಿಯುವುದಿಲ್ಲ.
ಆದರೆ, ವಾಸ್ತವದಲ್ಲಿ, ನೀವು ಇತರರ ಸಂತೋಷದ ಬಗ್ಗೆ ಕಾಳಜಿ ವಹಿಸದೆ ಜೀವನವನ್ನು ನಡೆಸಿದರೆ, ಕಾಲಕ್ರಮೇಣ ಇತರರೂ ನಿಮ್ಮ ಶತ್ರುಗಳಾಗುವುದನ್ನು ನೀವು ನೋಡಬಹುದು. ನೀವು ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ, ಎಲ್ಲಿ ನೋಡಿದರೂ, ನಿಮ್ಮನ್ನು ಇಷ್ಟಪಡುವವರು ಯಾರೂ ಇಲ್ಲ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ. ಅಂತಹ ನಕಾರಾತ್ಮಕ ಜೀವನವನ್ನು ನಡೆಸುವುದರಿಂದ, ನಿಮ್ಮ ಸಾವಿನ ಸಮಯದಲ್ಲಿ ಎಲ್ಲರೂ ನಿಮ್ಮ ಸಾವಿನ ಬಗ್ಗೆ ಸಂತೋಷಪಡಬಹುದು. ನೀವೂ ಸಹ ಯಾವ ರೀತಿಯ ಜೀವನವನ್ನು ನಡೆಸಿದಿರಿ ಎಂಬುದನ್ನು ನೆನೆಸಿಕೊಂಡು, ಆಲೋಚಿಸಿ, ಪಶ್ಚಾತ್ತಾಪಪಡಲು ಪ್ರಾರಂಭಿಸಬಹುದು. ನಿಮ್ಮ ಜೀವನಶೈಲಿಯಿಂದಾಗಿ, ನಿಮ್ಮನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂಬುದರ ಬಗ್ಗೆ ನೀವು ನಿರಾಶರಾಗಬಹುದು. ಆದ್ದರಿಂದ, ನೀವು ಈ ಮೂಲಭೂತ ಮಾನವ ಮೌಲ್ಯಗಳನ್ನು ನಿರ್ಲಕ್ಷಿಸಿದರೆ, ನಿಜವಾದ ಸಂತೋಷ ಅಥವಾ ದೀರ್ಘಕಾಲೀನ ಶಾಂತಿಯನ್ನು ನಿರೀಕ್ಷಿಸುವುದು ಉಳಿತಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ನೀವು ಅಂತಿಮವಾಗಿ ಸಾವನಪ್ಪಿದಾಗ, ನಿಮ್ಮನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ, ನಿಮ್ಮನ್ನು ಪ್ರೀತಿಸುವವರು ಯಾರೂ ಇರುವುದಿಲ್ಲ, ಮತ್ತು ನೀವು ಈ ಜಗತ್ತನ್ನು ಅಧಿಕವಾದ ಬರಿದಾದ ಭಾವನೆಯೊಂದಿಗೆ, ಅಧಿಕವಾದ ನಿರಾಶೆಯ ಭಾವನೆಯೊಂದಿಗೆ, ಖಾಲಿ ಕೈಯಲ್ಲಿ ಬಿಟ್ಟು ಹೋಗುತ್ತೀರಿ. ಹೀಗಾಗಿ, ಇತರ ಪ್ರಜ್ಷೆಯಿರುವ ಜೀವಿಗಳ ಬಗ್ಗೆ ಕಾಳಜಿಯಿಲ್ಲದ ಜೀವನಶೈಲಿಯೂ ನಿಜವಾಗಿಯೂ ಮೂರ್ಖತನದ ಮಾರ್ಗವಾಗಿದೆ.
ಆದರೆ ಇನ್ನೊಂದೆಡೆ, ನೀವು ಈ ಮೂಲಭೂತ ಮಾನವ ಮೌಲ್ಯಗಳನ್ನು, ನಮ್ಮ ಮಹಾನ್ ಮಾನವ ಬುದ್ಧಿವಂತಿಕೆ ಮತ್ತು ಜ್ಞಾನದ ಸಹಾಯದಿಂದ ಪೋಷಿಸಿ ಪಾಲಿಸಿದರೆ, ನೀವು ಈ ಮಾನವ ಸಹಾನುಭೂತಿಯನ್ನು ಮಿತಿಯಿಲ್ಲದ ಮಟ್ಟಿಗೆ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಜೀವನವನ್ನು ನಡೆಸುವುದು ಬುದ್ಧಿವಂತರ ಮಾರ್ಗವಾಗಿದೆ; ಇದು ನಿಮ್ಮ ಜೀವನವನ್ನು ಅರ್ಥಪೂರ್ಣಗೊಳಿಸುವ ಮಾರ್ಗವಾಗಿದೆ.