ಪ್ರಾಚೀನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದು

ಪರಮಪೂಜ್ಯರಾದ ದಲೈ ಲಾಮಾ ಅವರ ನಾಲ್ಕು ಪ್ರಮುಖ ಬದ್ಧತೆಗಳಲ್ಲಿ ಒಂದಾದ, ಪುರಾತನ ಭಾರತೀಯ ಮೌಲ್ಯಗಳ ಪುನರುಜ್ಜೀವನದ ಬಗ್ಗೆ ಮಾತನಾಡಲು ನನ್ನನ್ನು ವಿನಂತಿಸಲಾಗಿದೆ. ಈ ವಿಷಯವು ಹಲವಾರು ಪ್ರಶ್ನೆಗಳೊಂದಿಗೆ ವ್ಯವಹರಿಸುತ್ತದೆ

  • ಮೊದಲನೆಯದಾಗಿ, ಪ್ರಾಚೀನ ಭಾರತೀಯ ಮೌಲ್ಯಗಳು ಯಾವುವು?
  • ಎರಡನೆಯದಾಗಿ, ಅವುಗಳನ್ನು ಪುನರೂರ್ಜಿತಗೊಳಿಸುವ ಗುರಿ ಮತ್ತು ಉದ್ದೇಶವೇನು? 
  • ಮೂರನೆಯದಾಗಿ, ಅವುಗಳನ್ನು ಪುನರೂರ್ಜಿತಗೊಳಿಸುವುದರ ಅರ್ಥವೇನು? 
  • ನಾಲ್ಕನೆಯದಾಗಿ, ಅವುಗಳ ಪುನರೂರ್ಜಿತಗೊಳಿಸುವ ಕೆಲವು ಪ್ರಾಯೋಗಿಕವಾದ, ಪರಿಣಾಮಕಾರಿಯಾದ ವಿಧಾನಗಳು ಯಾವುವು? 

ಇಲ್ಲಿರುವ ಪ್ರತಿಯೊಂದು ಸಮಸ್ಯೆಯನ್ನು ಒಂದೊಂದಾಗಿ ಪರಿಶೀಲಿಸೋಣ.

ಪ್ರಾಚೀನ ಭಾರತೀಯ ಮೌಲ್ಯಗಳು ಯಾವುವು

ಪ್ರಾಚೀನ ಭಾರತೀಯ ಮೌಲ್ಯಗಳು ಯಾವುವು ಎಂಬುದರ ಬಗ್ಗೆ ನಾವು ಎರಡು ದಿಕ್ಕುಗಳಲ್ಲಿ ಹೋಗಬಹುದು: 

  • ಒಂದು ಅಹಿಂಸೆ ಮತ್ತು ಸಹಾನುಭೂತಿಯ ದಿಕ್ಕು - ಇವು ಪರಮಪೂಜ್ಯರು ನಿಯಮಿತವಾಗಿ ಪ್ರಚಾರ ಮಾಡುವ ಎರಡು ಪ್ರಾಚೀನ ಭಾರತೀಯ ಮೌಲ್ಯಗಳಾಗಿವೆ. ಇವುಗಳನ್ನು ಭಾರತೀಯ ಧಾರ್ಮಿಕ ಸಂಪ್ರದಾಯಗಳಲ್ಲಿ ಕಲಿಸಲಾಗಿದ್ದು, ಆಧುನಿಕ-ದಿನದ ಜಾತ್ಯತೀತ ನೀತಿಗಳ, ಸಾರ್ವತ್ರಿಕ ಮೌಲ್ಯಗಳ ಮತ್ತು ಎಮೋರಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಸಾಮಾಜಿಕ, ಭಾವನಾತ್ಮಕ ಮತ್ತು ನೈತಿಕ ಕಲಿಕೆಯ SEE ಕಲಿಕೆಯ ಕಾರ್ಯಕ್ರಮದ ಆಧಾರವಾಗಿವೆ. ಪ್ರಸ್ತುತವಾಗಿ, ಈ ಕಾರ್ಯಕ್ರಮವನ್ನು ಭಾರತದ ಅನೇಕ ಶಾಲೆಗಳಲ್ಲಿ ಮತ್ತು ಪ್ರಪಂಚದಾದ್ಯಂತ ಹಲವಾರು ಇತರ ದೇಶಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. 
  • ಇನ್ನೊಂದು ದಿಕ್ಕಿನಲ್ಲಿ ಭಾವನಾತ್ಮಕ ನೈರ್ಮಲ್ಯವಿದೆ - ಇದು ಪರಮಪೂಜ್ಯರು ಪ್ರಚಾರಿಸುವ ಮತ್ತೊಂದು ಪುರಾತನ ಭಾರತೀಯ ಮೌಲ್ಯವಾಗಿದ್ದು, ಇದು ಪ್ರಾಥಮಿಕವಾಗಿ ಮನಸ್ಸು, ಭಾವನೆಗಳು, ತಿಳಿವಳಿಕೆಯ ವಿಧಾನಗಳು ಮತ್ತು ತಾರ್ಕಿಕ ವಿಧಾನಗಳ ಪ್ರಾಚೀನ ಭಾರತೀಯ ತತ್ವ ವ್ಯವಸ್ಥೆಗಳ ಬೋಧನೆಗಳಲ್ಲಿ ಕಂಡುಬರುತ್ತದೆ. 

ಪ್ರಾಚೀನ ಭಾರತೀಯ ಮೌಲ್ಯಗಳ ಈ ಎರಡನೆಯ ಅಂಶವನ್ನು ಪುನರೂರ್ಜಿತಗೊಳಿಸುವುದರ ಬಗ್ಗೆ ಕೇಂದ್ರೀಕರಿಸಲು ನಾನು ಬಯಸುತ್ತೇನೆ: ಭಾವನಾತ್ಮಕ ನೈರ್ಮಲ್ಯ. ಪರಮಪೂಜ್ಯರಂತೆ, ಬೌದ್ಧ ಬೋಧನೆಗಳಲ್ಲಿ ಉಲ್ಲೇಖಿಸಲಾದ ಭಾರತೀಯ ವಿಜ್ಞಾನ, ತತ್ವಶಾಸ್ತ್ರ ಮತ್ತು ಧರ್ಮದ ಬಗ್ಗೆ ನಾವು ಮಾತನಾಡುವುದಾದರೆ, ಭಾವನಾತ್ಮಕ ನೈರ್ಮಲ್ಯವು ಹೆಚ್ಚಾಗಿ ಭಾರತೀಯ ವಿಜ್ಞಾನದ ಕ್ಷೇತ್ರದ ಭಾಗವಾಗಿರುತ್ತದೆ. ಆದರೆ, ಆತ್ಮ, ಸತ್ಯ ಮತ್ತು ವಾಸ್ತವಕ್ಕೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ಇದು ಭಾರತೀಯ ತತ್ತ್ವಶಾಸ್ತ್ರದೊಂದಿಗೆ ಅತಿಕ್ರಮಿಸುತ್ತದೆ. ನಾವು ನಮ್ಮನ್ನು ಮತ್ತು ಇತರರನ್ನು ಹೇಗೆ ಪರಿಗಣಿಸುತ್ತೇವೆ ಮತ್ತು ಏನನ್ನು ವಾಸ್ತವತೆ ಮತ್ತು ಸತ್ಯವಾಗಿ ಪರಿಗಣಿಸುತ್ತೇವೆ ಎಂಬುದು ನಮ್ಮ ಭಾವನಾತ್ಮಕ ಯೋಗಕ್ಷೇಮದ ಮೇಲೆ ಸ್ಪಷ್ಟವಾದ ಪರಿಣಾಮ ಬೀರುತ್ತದೆ. 

ಪುರಾತನ ಭಾರತೀಯ ತತ್ತ್ವ ವ್ಯವಸ್ಥೆಗಳು ನಾಲ್ಕು ಬೌದ್ಧ ಮತ್ತು ಎಂಟು ಬೌದ್ಧೇತರ ಸಿದ್ಧಾಂತಗಳನ್ನು ಒಳಗೊಂಡಿವೆ ಮತ್ತು ಅವುಗಳಲ್ಲಿ ಹಲವು ತತ್ವಗಳು ಕೆಲವು ಉಪ-ಶಾಲೆಗಳನ್ನು ಹೊಂದಿವೆ. ಆದರೆ, ಪ್ರತಿಯೊಂದು ಸಿದ್ಧಾಂತದ ವ್ಯವಸ್ಥೆಯು ಒಂದು ಸಂಪೂರ್ಣ ವ್ಯವಸ್ಥೆಯಾಗಿದ್ದು, ಭಾವನಾತ್ಮಕ ನೈರ್ಮಲ್ಯದ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ತಮ್ಮದೇ ಆದ ವಿಶಿಷ್ಟವಾದ ಸಮರ್ಥನೆಗಳನ್ನು ಹೊಂದಿವೆ. ಪ್ರತಿಯೊಂದೂ ಸಹ, ತನ್ನದೇ ಆದ ಮನಸ್ಸು ಮತ್ತು ಭಾವನೆಗಳ ನಕ್ಷೆಯನ್ನು ನೀಡುತ್ತದೆ, ಮನಸ್ಸು ಮತ್ತು ಆತ್ಮದ ನಡುವಿನ ಸಂಬಂಧದ ತನ್ನದೇ ಆದ ಸಮರ್ಥನೆ, ತನ್ನದೇ ಆದ ಅರಿವಿನ ಸಿದ್ಧಾಂತ ಮತ್ತು ತಾರ್ಕಿಕ ಪುರಾವೆಗಳ ತನ್ನದೇ ಆದ ರಚನೆಯನ್ನು ನೀಡುತ್ತದೆ. ಇದಲ್ಲದೆ, ಅವುಗಳೆಲ್ಲವೂ ಆತ್ಮ, ಸತ್ಯ ಮತ್ತು ವಾಸ್ತವತೆಯ ತಾತ್ವಿಕ ವಿಷಯಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುತ್ತವೆ. 

ಜೊತೆಗೆ, ಚಾರ್ವಾಕಗಳನ್ನು ಹೊರತುಪಡಿಸಿ, ಉಳಿದೆಲ್ಲವೂ, ಭಾರತೀಯ ಧರ್ಮಗಳ ಮುಖ್ಯ ವಿಷಯಗಳನ್ನು ಸಂಬಂಧಿಸಿದಂತೆ ತಮ್ಮ ವೈಜ್ಞಾನಿಕ ಮತ್ತು ತಾತ್ವಿಕ ಪ್ರತಿಪಾದನೆಗಳನ್ನು ಪ್ರಸ್ತುತಪಡಿಸುತ್ತವೆ. ಈ ವಿಷಯಗಳಲ್ಲಿ ಕರ್ಮ, ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮ (ಬೇರೆ ರೀತಿಯಲ್ಲಿ ಹೇಳುವುದಾದರೆ, ಸಂಸಾರ), ಸಂಸಾರದ ದುಃಖಗಳು, ಸಂಸಾರಕ್ಕೆ ಕಾರಣವಾದ ಆತ್ಮದ ಮತ್ತು ವಾಸ್ತವದ ಬಗ್ಗೆಯ ಅಜ್ಞಾನ ಮತ್ತು ಸಂಸಾರದಿಂದ ವಿಮೋಚನೆಯನ್ನು ಸಾಧಿಸುವ ಸಾಧನವಾಗಿ ಆತ್ಮದ ಮತ್ತು ವಾಸ್ತವದ ಸರಿಯಾದ ತಿಳುವಳಿಕೆ ಸೇರಿವೆ. ನಮ್ಮ ಭಾವನಾತ್ಮಕ ಸ್ಥಿತಿಗಳು ಅಜ್ಞಾನದಿಂದ ಪ್ರಭಾವಿತವಾಗಿರುವುದರಿಂದ ಮತ್ತು ನಮ್ಮ ಕರ್ಮದ ನಡವಳಿಕೆಯ ಮೇಲೆ ಪರಿಣಾಮ ಬೀರುವುದರಿಂದ, ಅವು ಸಂಸಾರಿಕ ಪುನರ್ಜನ್ಮದ ದುಃಖಗಳನ್ನು ಕರೆತರುತ್ತವೆ. ಅಜ್ಞಾನದ ಆಧಾರದ ಮೇಲಿನ ಈ ಭಾವನಾತ್ಮಕ ಸ್ಥಿತಿಗಳನ್ನು ನಮ್ಮಿಂದ ನಿರ್ಮೂಲಗೊಳಿಸುವ ವಿಧಾನಗಳು ಸಂಸಾರಿಕ ಪುನರ್ಜನ್ಮದಿಂದ ವಿಮೋಚನೆಗೆ ಕಾರಣವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ, ಭಾವನಾತ್ಮಕ ನೈರ್ಮಲ್ಯದಲ್ಲಿನ ಭಾರತೀಯ ವಿಜ್ಞಾನದ ಅಂಶವನ್ನು, ಭಾರತೀಯ ತತ್ವಶಾಸ್ತ್ರ ಮತ್ತು ಧರ್ಮದ ಮೂಲ ಪ್ರತಿಪಾದನೆಗಳಿಂದ ಬೇರ್ಪಡಿಸುವುದು ಸರಳವಾದ ವಿಷಯವೇನಲ್ಲ.

ಪ್ರಾಚೀನ ಭಾರತೀಯ ವಿಜ್ಞಾನ, ತತ್ತ್ವಶಾಸ್ತ್ರ ಮತ್ತು ಧರ್ಮಗಳಲ್ಲಿ ಸಾಮಾನ್ಯವಾಗಿರುವ ಮೂಲಭೂತ ಸಮರ್ಥನೆಗಳಾವುವು ಎಂಬುದರ ಬಗ್ಗೆ ವಿಶಾಲವಾದ ವೈವಿಧ್ಯತೆಯ ವಿಚಾರವಿದೆ, ಹಾಗಾದರೆ ಭಾವನಾತ್ಮಕ ನೈರ್ಮಲ್ಯದ ನಿಜವಾದ ಪ್ರಾಚೀನ ಭಾರತೀಯ ಮೌಲ್ಯಗಳು ಯಾವುವು? ಅವುಗಳೆಂದರೆ: 

  • ತರ್ಕಬದ್ಧವಾದ, ವಿಶ್ಲೇಷಣಾತ್ಮಕ ಚಿಂತನೆಯ ಬಳಕೆಯಿಂದ ಸತ್ಯ ಮತ್ತು ಕಾಲ್ಪನಿಕ ಕಥೆಗಳ ನಡುವೆ ವ್ಯತ್ಯಾಸವನ್ನು ಗೋಚರಿಸುವ ಮೌಲ್ಯ.
  • ನಮಗಾಗಿ ಮತ್ತು ಇತರರಿಗಾಗಿ ನಾವು ಸೃಷ್ಟಿಸುವ ದುಃಖಗಳನ್ನು ನಿವಾರಿಸಲು ನಮ್ಮ ಮನಸ್ಸು ಮತ್ತು ಭಾವನೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೌಲ್ಯ. 

ಭಾವನಾತ್ಮಕ ನೈರ್ಮಲ್ಯವನ್ನು ಕಾಪಾಡಿಕೊಳ್ಳವ ಈ ಪ್ರಾಚೀನ ಭಾರತೀಯ ತತ್ವ ವ್ಯವಸ್ಥೆಗಳು ಸಾಮಾನ್ಯವಾಗಿ ಹಂಚಿಕೊಂಡ ವಿಧಾನಗಳಲ್ಲಿ ನಾವು ಮತ್ತಷ್ಟು ಸಮಾನಾದ ಮೌಲ್ಯಗಳನ್ನು ಬಹಿರಂಗಪಡಿಸಬಹುದು. 

  • ಮೊದಲನೆಯದು ಶಿಕ್ಷಣದ ಮೌಲ್ಯ. ಈ ಎಲ್ಲಾ ವ್ಯವಸ್ಥೆಗಳು ಅಜ್ಞಾನ ಮತ್ತು ದುಃಖವನ್ನು ನಿವಾರಿಸಲು, ಅವುಗಳ ಬೋಧನೆಗಳನ್ನು ಕೇಳುವ ಅಥವಾ ಓದುವ ಮೂಲಕ ಮನಸ್ಸನ್ನು ತರಬೇತುಗೊಳಿಸಲು ಮತ್ತು ನಂತರ ಅವುಗಳ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಿ ಸರಿಯಾದ ತಿಳುವಳಿಕೆ ಪಡೆದು, ಅವು ನಿಜ ಮತ್ತು ಪ್ರಯೋಜನಕಾರಿ ಎಂದು ದೃಢೀಕರಿಸುವುದನ್ನು ಪ್ರಚಾರಿಸುತ್ತವೆ. ಅಧ್ಯಯನ ಮತ್ತು ವಿಮರ್ಶಾತ್ಮಕ ಚಿಂತನೆಯು ಉತ್ತಮವಾದ ಶಿಕ್ಷಣದ ಅಡಿಪಾಯವಾಗಿವೆ. 
  • ಎರಡನೆಯದು, ನಾವು ಕಲಿತದ್ದನ್ನು, ಅರ್ಥಮಾಡಿಕೊಂಡಿರುವುದನ್ನು ಮತ್ತು ಮನವರಿಕೆ ಮಾಡಿಕೊಂಡಿರುವುದನ್ನು ನಮ್ಮ ಜೀವನದಲ್ಲಿ ಸಂಯೋಜಿಸುವ ಮೌಲ್ಯವಾಗಿದೆ. ಇದನ್ನು ಮಾಡುವ ವಿಧಾನವಾಗಿ, ಎಲ್ಲಾ ಭಾರತೀಯ ವ್ಯವಸ್ಥೆಗಳು, ಪ್ರಯೋಜನಕಾರಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಧ್ಯಾನವನ್ನು ಕಲಿಸುತ್ತವೆ. 
  • ಮೂರನೆಯದು ನೈತಿಕ ಸ್ವಯಂ-ಶಿಸ್ತು, ಏಕಾಗ್ರತೆ ಮತ್ತು ಒಳನೋಟದ ಮೌಲ್ಯಗಳಾಗಿವೆ. ಎಲ್ಲವೂ ನಮ್ಮ ಮನಸ್ಸನ್ನು ತರಬೇತುಗೊಳಿಸುವ ಶಿಸ್ತನ್ನು ಪಡೆಯಲು, ನೈತಿಕ ನಡವಳಿಕೆಯೊಂದಿಗೆ ನಮ್ಮ ದೇಹ ಮತ್ತು ಮಾತನ್ನು ಶಿಸ್ತುಬದ್ಧವಾಗಿರಿಸಲು ಕಲಿಸುತ್ತವೆ. ನಂತರ ನಮ್ಮ ಮನಸ್ಸನ್ನು ತರಬೇತುಗೊಳಿಸಲು, ಅವೆಲ್ಲವೂ ಶಮಥ ಧ್ಯಾನದ ವಿಧಾನವನ್ನು ಬಳಸಿ ಏಕಾಗ್ರತೆಯನ್ನು ಅಭಿವೃದ್ಧಿಪಡಿಸುತ್ತವೆ ಮತ್ತು ನಮ್ಮ ಅಜ್ಞಾನವನ್ನು ನಿರ್ಮೂಲಿಸಿ, ಒಳನೋಟವನ್ನು ಅಭಿವೃದ್ಧಿಪಡಿಸಲು ವಿಪಶ್ಯನದ ಧ್ಯಾನದ ವಿಧಾನಗಳನ್ನು ಬಳಸುತ್ತವೆ. ಶಮಥವು, ಎಲ್ಲಾ ಮಾನಸಿಕ ಅಲೆದಾಟ ಮತ್ತು ಮಂದತನದಿಂದ ಶಾಂತವಾಗಿರುವ ಮತ್ತು ಒಂದು ವಸ್ತುವಿನ ಮೇಲೆ ಏಕಮುಖವಾಗಿ ನೆಲೆಗೊಂಡಿರುವ ಮನಸ್ಥಿತಿಯಾಗಿದೆ. ಇದು ತನ್ನ ವಸ್ತುವನ್ನು ಸರಿಯಾದ ರೀತಿಯಲ್ಲಿ ಪರಿಗಣಿಸುವಾಗ, ಅದು ಅಶಾಶ್ವತವಾಗಿರುವುದೆಂದು ಅಥವಾ ಅದರ ಬಗ್ಗೆ ಸಹಾನುಭೂತಿಯಂತಹ ಪ್ರಯೋಜನಕಾರಿ ಮನೋಭಾವದಿಂದ ನೋಡುತ್ತದೆ. ವಿಪಶ್ಯನವು ಅಸಾಧಾರಣವಾದ ಗ್ರಹಿಕೆಯ ಮನಸ್ಥಿತಿಯಾಗಿದ್ದು, ಶಮತಾ ಸ್ಥಿತಿಯನ್ನು ಕಾಪಾಡಿಕೊಳ್ಳುವಾಗ, ಈ ವಸ್ತುವಿನ ತಿಳುವಳಿಕೆಯ ಅಥವಾ ಅದರ ಬಗೆಗಿನ ವರ್ತನೆಯ ಎಲ್ಲಾ ವಿವರಗಳು ಮತ್ತು ಪರಿಣಾಮಗಳನ್ನು ಆಳವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳು ಈ ಕೆಳಗಿನಂತಿವೆ: 

  • ಶಿಕ್ಷಣ 
  • ತರ್ಕಬದ್ಧ, ವಿಶ್ಲೇಷಣಾತ್ಮಕ ಚಿಂತನೆ 
  • ಮನಸ್ಸು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು 
  • ನೈತಿಕ ನಡವಳಿಕೆ 
  • ಏಕಾಗ್ರತೆ ಮತ್ತು ಒಳನೋಟವನ್ನು ಅಭಿವೃದ್ಧಿಪಡಿಸಲು ಧ್ಯಾನ.

ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಗುರಿ ಮತ್ತು ಉದ್ದೇಶವೇನು?

"ಮೌಲ್ಯಗಳು" ಎಂಬ ಪದವು ಸಕಾರಾತ್ಮಕ ಗುರಿಯನ್ನು ಸಾಧಿಸಲು ಮುಖ್ಯವೆಂದು ಪರಿಗಣಿಸಲಾದ ವಿಷಯಗಳನ್ನು ಅರ್ಥೈಸುತ್ತದೆ. ದೈಹಿಕ ನೈರ್ಮಲ್ಯವು ಶುಚಿತ್ವ, ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಸುರಕ್ಷಿತ ನಡವಳಿಕೆಯ ಮೌಲ್ಯಗಳನ್ನು ಆಧರಿಸಿದೆ. ಇವೆಲ್ಲವೂ ಮುಖ್ಯವಾಗಿದ್ದು, ಅವು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ ಮತ್ತು ನಮ್ಮ ಮತ್ತು ಸಮಾಜದ ಯೋಗಕ್ಷೇಮಕ್ಕಾಗಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ, ಭಾವನಾತ್ಮಕ ನೈರ್ಮಲ್ಯವು ಶಿಕ್ಷಣ, ತರ್ಕಬದ್ಧ ಚಿಂತನೆ, ಸರಿಯಾದ ತಿಳುವಳಿಕೆ, ಭಾವನಾತ್ಮಕ ಸಮತೋಲನ, ರಚನಾತ್ಮಕ ನಡವಳಿಕೆ, ಏಕಾಗ್ರತೆ ಮತ್ತು ಒಳನೋಟದ ಮೌಲ್ಯಗಳನ್ನು ಆಧರಿಸಿದೆ. ಇವೆಲ್ಲವೂ ಮುಖ್ಯವಾಗಿದ್ದು, ಸ್ವಂತ ಮತ್ತು ಸಮಾಜ ಎರಡಕ್ಕೂ ವಿನಾಶಕಾರಿಯಾಗಬಲ್ಲ ಅಭಾಗಲಬ್ಧ ಚಿಂತನೆ, ಭಾವನಾತ್ಮಕ ಅಶಾಂತಿ ಮತ್ತು ಪ್ರಚೋದಿತ ನಡವಳಿಕೆಯನ್ನು ತಡೆಯಲು ಸಹಾಯ ಮಾಡುತ್ತವೆ. 

ಭಾವನಾತ್ಮಕ ನೈರ್ಮಲ್ಯದ ಬಗ್ಗೆಗಿನ ಪ್ರಾಚೀನ ಭಾರತೀಯ ಬೋಧನೆಗಳ ಗುರಿ ಮತ್ತು ಉದ್ದೇಶವು, ಯಾವಾಗಲೂ ಜನರಿಗೆ ದುಃಖವನ್ನು ಮೀರಲು ಸಹಾಯ ಮಾಡುವುದಾಗಿದೆ. ಸಂಸಾರದ - ಅನಿಯಂತ್ರಿತವಾಗಿ ಮರುಕಳಿಸುವ ಪುರ್ನಜನ್ಮದ - ದುಃಖಗಳನ್ನು ಜಯಿಸುವುದು ಅಂತಿಮ ಗುರಿಯಾಗಿದ್ದರೂ, ಈ ಬೋಧನೆಗಳು ದೈನಂದಿನ ಸಮಸ್ಯೆಗಳು ಮತ್ತು ದುಃಖಗಳನ್ನು ಜಯಿಸಲು ಸಹ ಸಹಾಯಕವಾಗಿವೆ. ಜನರು ತಮ್ಮ ಮನಸ್ಸು ಮತ್ತು ಭಾವನೆಗಳ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ, ಅವರ ನಡವಳಿಕೆಯ ಮೇಲೆ ಅವರ ಭಾವನೆಗಳು ಬೀರುವ ಪರಿಣಾಮಗಳ ಬಗ್ಗೆ, ಅವರ ಮನಸ್ಸು ಮತ್ತು ಭಾವನೆಗಳಲ್ಲಿ ತೊಂದರೆ ಉಂಟುಮಾಡುವವುಗಳನ್ನು ಗುರುತಿಸುವುದರ ಬಗ್ಗೆ ಮತ್ತು ಸರಿಯಾದ ಅರಿವು, ತರ್ಕ ಮತ್ತು ಕಾರಣ, ಶಿಸ್ತು ಮತ್ತು ಧ್ಯಾನವನ್ನು ಬಳಸಿ ತೊಂದರೆ ಉಂಟುಮಾಡುವವುಗಳನ್ನು ನಿವಾರಿಸುವ ಬಗ್ಗೆ ವಿಶ್ಲೇಷಣಾತ್ಮಕ ಯೋಜನೆಗಳನ್ನು ಒದಗಿಸುವ ಮೂಲಕ ಇವು ಸಹಾಯಕವಾಗಿವೆ.

ಇಂದು ಈ ಬೋಧನೆಗಳನ್ನು ಪುನರುಜ್ಜೀವನಗೊಳಿಸುವುದರ ಗುರಿ ಮತ್ತು ಉದ್ದೇಶವು, ಮೆದುಳಿನ ಕಾರ್ಯಚಟುವಟಿಕೆಗಳ ಬಗೆಗಿರುವ ಇಂದಿನ ವೈಜ್ಞಾನಿಕ ಜ್ಞಾನ ಮತ್ತು ಮನಸ್ಸಿನ ಮಾನಸಿಕ ಸಿದ್ಧಾಂತಗಳಿಗೆ ಪೂರಕವಾಗಿರುವುದಾಗಿದೆ ಮತ್ತು ಜನರಿಗೆ ಸಹಾಯ ಮಾಡಲು ಲಭ್ಯವಿರುವ ವಿಧಾನಗಳನ್ನು ವಿಸ್ತರಿಸುವುದಾಗಿದೆ. ಜನರಿಗೆ ಸಹಾಯ ಮಾಡುವುದು ಎಂದರೆ, ಗಂಭೀರವಾಗಿ ತೊಂದರೆಗೊಳಗಾದ ರೋಗಿಗಳಿಗೆ ಚಿಕಿತ್ಸಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡುವುದು ಎಂದರ್ಥವಲ್ಲ, ಸಾಮಾನ್ಯ ಜನರಿಗೂ, ತಮ್ಮ ದೈನಂದಿನ ಜೀವನದಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸಲು ಸಹಾಯ ಮಾಡುವುದಾಗಿರುತ್ತದೆ. ದುಃಖವನ್ನು ಮೀರಲು ಎಲ್ಲಾ ಜೀವಿಗಳಿಗೆ ಸಹಾಯ ಮಾಡುವುದೇ, ಬಹುಶಃ, ಪರಮಪೂಜ್ಯರ ಪರಮ ಕೇಂದ್ರ ಬದ್ಧತೆಯಾಗಿದೆ. 

ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳನ್ನು ನಮ್ಮ ವರ್ತಮಾನದಲ್ಲಿ ಪುನರುಜ್ಜೀವನಗೊಳಿಸುವುದು ಬಹಳಾ ಮುಖ್ಯವಾಗಿದೆ. ಸಾಮಾನ್ಯವಾಗಿ, ನಮ್ಮ ಪ್ರಸ್ತುತ ಕಾಲವನ್ನು "ಸತ್ಯೋತ್ತರ ಯುಗ" ಎಂದು ಕರೆಯಲಾಗುತ್ತದೆ. ತಪ್ಪು ಮಾಹಿತಿ ಮತ್ತು "ಸುಳ್ಳು ಸುದ್ದಿ" ಎಂಬುವವು ಅತಿರೇಕವಾಗಿದೆ. ಪರಿಶೀಲಿಸಬಹುದಾದ ಸತ್ಯಗಳನ್ನು ಆಧರಿಸಿರುವುದಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿ ನಿಜವೆನಿಸುವ ನಂಬಿಕೆಯ ಮೇಲೆ ಸತ್ಯವು ಆಧಾರಿತವಾಗಿದೆ ಎಂದು ಹಲವರು ಪರಿಗಣಿಸುತ್ತಾರೆ. ಇದು ಅಭಾಗಲಬ್ಧ ನಡವಳಿಕೆ ಮತ್ತು ಸಾಮಾಜಿಕ ಅಸಮನ್ವಯ, ಅಪಸಾಮಾನ್ಯ ಕ್ರಿಯೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಅನೇಕ ಸಮಸ್ಯೆಗಳಿಗೆ ಮತ್ತು ಹೆಚ್ಚಿನ ದುಃಖಗಳಿಗೆ ಕಾರಣವಾಗುತ್ತದೆ. ಭಾವನಾತ್ಮಕ ನೈರ್ಮಲ್ಯದ ಪುರಾತನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದರಿಂದ, ವಾಸ್ತವದ ಬಗ್ಗೆಗಿನ ತಪ್ಪುಗ್ರಹಿಕೆಗಳನ್ನು ಎದುರಿಸಲು ಮತ್ತು ನಿವಾರಿಸಲು ಮಾರ್ಗಗಳನ್ನು ಸೂಚಿಸುವುದರೊಂದಿಗೆ, ಅವುಗಳಿಂದ ಉದ್ಭವಿಸುವ ಗೊಂದಲದ ಭಾವನೆಗಳು ಮತ್ತು ಪ್ರಚೋದಿತ, ವಿನಾಶಕಾರಿ ನಡವಳಿಕೆಯಿಂದ ದುಃಖಿತರಾಗುವಂತಹ ಪರಿಸ್ಥಿತಿಯಲ್ಲಿ ಸಹಾಯಕವಾಗಿರುತ್ತದೆ. 

ಒಂದು ಉದಾಹರಣೆ ಕೊಡುತ್ತೇನೆ. ಪರಮಪೂಜ್ಯರು ಬೌದ್ಧ ಚಿತ್ತಮಾತ್ರದ (ಮನಸ್ಸು-ಮಾತ್ರ) ದೃಷ್ಟಿಕೋನ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್‌ನ ಪರಿಣಾಮಗಳ ನಡುವಿನ ಹೋಲಿಕೆಯ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ. ಇವೆರಡೂ, ವಸ್ತುನಿಷ್ಠ ವಾಸ್ತವತೆಯನ್ನುವುದು ಅಸ್ತಿತ್ವದಲ್ಲಿಲ್ಲ, ಬದಲಿಗೆ ವೀಕ್ಷಕನ ಮನಸ್ಸು, ಅವರು ಗಮನಿಸಿದ ವಸ್ತುಗಳ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ನಿರ್ಣಯಕ್ಕೆ ಬರುತ್ತವೆ. ಹೀಗಾಗಿ, ವಿಭಿನ್ನ ದೃಷ್ಟಿಕೋನಗಳಿಂದ ವಿಭಿನ್ನ ಸ್ಥಿತಿಗಳು ಸತ್ಯವಾಗಿರುತ್ತವೆ, ಉದಾಹರಣೆಗೆ, ಪರಿವೀಕ್ಷಕ ಮತ್ತು ಪರಿಕಲ್ಪನಾ ಚೌಕಟ್ಟಿನ ಆಧಾರದ ಮೇಲೆ ಫೋಟಾನ್ ಒಂದು ಕಣ ಅಥವಾ ಶಕ್ತಿಯ ತರಂಗವಾಗಿರಬಹುದು. ಒಂದು ಶ್ರೇಷ್ಠ ಬೌದ್ಧ ಉದಾಹರಣೆಯೆಂದರೆ, ನಾವು ಮಾನವರಾಗಿ ಅನುಭವಿಸುವ ನೀರು, ದೇವತೆಗಳಿಗೆ ಅಮೃತ ಮತ್ತು ಭೂತ-ಪ್ರೇತಗಳಿಗೆ ಕೀವಾಗಿರುತ್ತದೆ. ಫೋಟಾನ್ ಒಂದು ಕಣ ಮತ್ತು ಶಕ್ತಿಯ ತರಂಗವಾಗಿರುವುದು ತುಲನಾತ್ಮಕವಾಗಿ ಸತ್ಯವಾಗಿರುವಂತೆ, ಪ್ರತಿಯೊಂದು ಜೀವಿಗಳಿಗೆ, ಅವುಗಳು ಅನುಭವಿಸುವುದು ತುಲನಾತ್ಮಕವಾಗಿ ಸತ್ಯವಾಗಿದ್ದು, ಕಾರಣ ಮತ್ತು ಪರಿಣಾಮದ ವಿಷಯದಲ್ಲಿ ಕಾರ್ಯನಿರ್ವಹಿಸುತ್ತವೆ. ನೀರು ಜನರ ಬಾಯಾರಿಕೆಯನ್ನು ನೀಗಿಸುತ್ತದೆ, ಅಮೃತವು ದೇವತೆಗಳಿಗೆ ಎಲ್ಲಿಲದ ಆನಂದವನ್ನು ತರುತ್ತದೆ ಮತ್ತು ಕೀವು ಪ್ರೇತಗಳಿಗೆ ತೀವ್ರವಾದ ನೋವನ್ನು ಉಂಟುಮಾಡುತ್ತದೆ. 

ಆದರೆ, ದೃಷ್ಟಿಕೋನಗಳು ಮತ್ತು ಅನುಭವದ ಈ ಸಾಪೇಕ್ಷತೆಯು ಸಾಂಪ್ರದಾಯಿಕ ಸತ್ಯಕ್ಕೆ ಮಾತ್ರ ಸಂಬಂಧಿಸಿರುವುದು, ಆಳವಾದ ಸತ್ಯವನ್ನಲ್ಲ. ಆದರೆ ಸಾಪೇಕ್ಷವಾದ, ಸಾಂಪ್ರದಾಯಿಕ ಸತ್ಯದ ವಿಷಯದಲ್ಲಿಯೂ ಮಾನ್ಯವಾದ ಸಾಂಪ್ರದಾಯಿಕ ಸತ್ಯ ಮತ್ತು ಅಮಾನ್ಯವಾದ ಸಾಂಪ್ರದಾಯಿಕ ಸತ್ಯದ ನಡುವೆ ವ್ಯತ್ಯಾಸವಿರುತ್ತದೆ. ಒಬ್ಬರು ನಿಜವೆಂದು ಭಾವಿಸುವ ವಿಷಯವು, ಅವರು ಹಾಗೆಂದು ನಂಬುತ್ತಾರೆಂಬ ಕಾರಣಕ್ಕೆ ಮಾತ್ರ ನಿಜವಾಗುವುದಿಲ್ಲ. ಬೆಂಕಿಯ ಮೇಲೆ ಎಣ್ಣೆಯನ್ನು ಸುರಿಯುವುದರಿಂದ ಜ್ವಾಲೆಯನ್ನು ನಂದಿಸಬಹುದು ಎಂದು ಯಾರಾದರೂ ನಂಬಿದರೆ, ವಾಸ್ತವಿಕವಾಗಿ ಹಾಗೇನೂ ಆಗುವುದಿಲ್ಲ. ತರ್ಕ ಮತ್ತು ಕಾರಣದ ಆಧಾರದ ಮೇಲಿನ ವಿಮರ್ಶಾತ್ಮಕ ಚಿಂತನೆಯ ಪ್ರಾಚೀನ ಭಾರತೀಯ ಮೌಲ್ಯವನ್ನು ಪುನರುಜ್ಜೀವನಗೊಳಿಸುವ ಒಂದು ಪ್ರಯೋಜನವೆಂದರೆ, ಈ ಸತ್ಯೋತ್ತರ ಯುಗದ ಸವಾಲುಗಳು ಮತ್ತು ಅವ್ಯವಸ್ಥೆಗಳ ನಡುವೆ ದಾರಿಗಾಣಲು ಜನರಿಗೆ ಸಹಾಯ ಮಾಡುತ್ತದೆ.

ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದರ ಅರ್ಥವೇನು

ಈ ವೈವಿಧ್ಯಮಯ ಬೌದ್ಧ ಮತ್ತು ಬೌದ್ಧೇತರ ತತ್ತ್ವ ವ್ಯವಸ್ಥೆಗಳೇನು ಪ್ರತ್ಯೇಕವಾಗಿ ಅಭಿವೃದ್ಧಿ ಹೊಂದಲಿಲ್ಲ. ಅವು ನಳಂದದಂತಹ ಶ್ರೇಷ್ಠ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಪರಸ್ಪರ ಚರ್ಚೆಯ ಸುದೀರ್ಘ ಇತಿಹಾಸವನ್ನು ಹೊಂದಿದ್ದವು. ಎಲ್ಲಾ ಸಂಪ್ರದಾಯಗಳ ಜ್ಞಾನ ಮತ್ತು ಗೌರವದ ಮೇಲೆ ಆಧಾರಿತವಾದ ಧಾರ್ಮಿಕ ಸಮನ್ವಯವು ಪರಮಪೂಜ್ಯರ ಮತ್ತೊಂದು ಬದ್ಧತೆಯಾಗಿರುವುದು. ಆ ಬದ್ಧತೆಯ ದೃಷ್ಟಿಕೋನದಿಂದ, ಮತ್ತು ಪರಮಪೂಜ್ಯರು ಗೌರವಿಸುವ ನಳಂದದ ಸಂಪ್ರದಾಯಕ್ಕೆ ಅನುಗುಣವಾಗಿ, ಪ್ರಾಚೀನ ಭಾರತೀಯ ಮೌಲ್ಯಗಳ ಪುನರುಜ್ಜೀವನವು, ಬೌದ್ಧ ಮತ್ತು ಬೌದ್ಧೇತರವಾದ ಎಲ್ಲಾ ಭಾರತೀಯ ತತ್ವ ವ್ಯವಸ್ಥೆಗಳಲ್ಲಿ ಕಂಡುಬರುವ ಭಾವನಾತ್ಮಕ ನೈರ್ಮಲ್ಯದ ಬೋಧನೆಗಳನ್ನು ಪುನರುಜ್ಜೀವನಗೊಳಿಸುವುದು ಎಂದಾಗಿದೆ. 

ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಲು, ಸಂಸ್ಕೃತ ಪಠ್ಯಗಳನ್ನು ಆಧುನಿಕ ಭಾಷೆಗಳಿಗೆ ಸರಳವಾಗಿ ಭಾಷಾಂತರಿಸುವ ಕಾರ್ಯವು ಪ್ರಮುಖವಾಗಿದ್ದರೂ, ಕೇವಲ ಅದೊಂದೇ ಸಾಕಾಗುವುದಿಲ್ಲ. ಮೂಲ ಗ್ರಂಥಗಳು ಮತ್ತು ಅವುಗಳ ಭಾರತೀಯ ವ್ಯಾಖ್ಯಾನಗಳು, ಜೊತೆಗೆ ಭಾರತೀಯ ಬೌದ್ಧರ ಮೇಲಿನ ಟಿಬೆಟಿಯನ್ ವ್ಯಾಖ್ಯಾನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವು ಬಹಳ ಆಧುನಿಕವಾಗಿದ್ದು, ಅವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಹಿನ್ನೆಲೆಯ ಅಧ್ಯಯನ ಮತ್ತು ಕಲಿಕೆಯ ಅಗತ್ಯವಿರುತ್ತದೆ. ಈ ಪಠ್ಯಗಳು ಒಳಗೊಂಡಿರುವ ಜ್ಞಾನವನ್ನು ಪುನರುಜ್ಜೀವನಗೊಳಿಸಲು, ಆರಂಭಿಕ ಹಂತದಿಂದ ಪ್ರಾರಂಭಿಸಿ, ಅವುಗಳ ವಿವರಣೆಯ ಶ್ರೇಣಿಕೃತ ಹಂತವು ಅಗತ್ಯವಿರುತ್ತದೆ. ಅಂತಹ ಶ್ರೇಣೀಕೃತ ಸಾಮಾಗ್ರಿಗಳೊಂದಿಗೆ ಮಾತ್ರ ಅವು ಸಾಂಪ್ರದಾಯಿಕ ಭಾರತೀಯ ಚಿಂತನೆಯ ಹಿನ್ನೆಲೆಯಿಲ್ಲದವರಿಗೆ ಅರ್ಥವಾಗಬಲ್ಲವು. 

ಭೋದನೆಗಳನ್ನು ಶ್ರೇಣೀಕೃತ ಹಂತಗಳಾಗಿ ಪ್ರಸ್ತುತಪಡಿಸುವುದೆಂದರೆ, ಈ ವ್ಯವಸ್ಥೆಗಳ ಅಧ್ಯಯನದಲ್ಲಿ ಮೇಲೆ ಸಾಗಿದಂತೆ ಅವು ಹೆಚ್ಚು ನಿಖರವಾಗುವಂತೆ ಮತ್ತು ಮಾನ್ಯವಾಗುವಂತೆ ಶ್ರೇಣೀಕೃತ ಕ್ರಮದಲ್ಲಿ ಜೋಡಿಸುವುದು ಎಂದರ್ಥವಲ್ಲ. ಹಾಗಾಗಿದ್ದರೆ ಒಂದು ವ್ಯವಸ್ಥೆಯು ಇತರ ವ್ಯವಸ್ಥೆಗಳಿಗಿಂತ ಉತ್ತಮವಾಗಿದೆ ಎಂದಾಗುತ್ತದೆ ಮತ್ತು "ಕೆಳಗಿರುವ ವ್ಯವಸ್ಥೆಗಳು" ಎಂದು ಪರಿಗಣಿಸಲ್ಪಟ್ಟಿರುವ ಅಧ್ಯಯನಗಳು, ಈ ಉತ್ತಮವಾದ ಅಧ್ಯಯನಕ್ಕಿರುವ ಮೆಟ್ಟಿಲುಗಳು ಎಂದಾಗುತ್ತದೆ. ಅನೇಕ ವಿದ್ವಾಂಸರು ಈ ಶ್ರೇಣೀಕೃತ ರೀತಿಯಲ್ಲಿ ಬೌದ್ಧ ಸಿದ್ಧಾಂತದ ವ್ಯವಸ್ಥೆಗಳ ಅಧ್ಯಯನವನ್ನು ವ್ಯವಸ್ಥೆಗೊಳಿಸಿದರೂ, ಬೌದ್ಧ ಮತ್ತು ಬೌದ್ಧೇತರ ಸಿದ್ಧಾಂತದ ವ್ಯವಸ್ಥೆಗಳ ಅಧ್ಯಯನಕ್ಕೆ ಈ ವಿಧಾನವನ್ನು ಅನ್ವಯಿಸುವುದು ಪರಮಪೂಜ್ಯರು ಪ್ರಚಾರಿಸುವ ಅಂತರ್ಧರ್ಮೀಯ ಸಮನ್ವಯದ ಮೌಲ್ಯಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿವೆ. ಬೌದ್ಧ ಮತ್ತು ಬೌದ್ಧೇತರ ಬೋಧನೆಗಳನ್ನು ಶ್ರೇಣೀಕೃತ ಕ್ರಮದಲ್ಲಿ ಪ್ರಸ್ತುತಪಡಿಸುವುದು ಎಂದರೆ ಪ್ರತಿಯೊಂದು ಸಿದ್ಧಾಂತ ವ್ಯವಸ್ಥೆಗಳನ್ನು ಸಂಕೀರ್ಣತೆಯ ಶ್ರೇಣೀಕೃತ ಕ್ರಮಗಳಲ್ಲಿ ಪ್ರತ್ಯೇಕವಾಗಿ ಪ್ರಸ್ತುತಪಡಿಸುವುದಾಗಿದೆ. 

ಬೌದ್ಧ ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ಬೋಧನೆಗಳನ್ನು ಧರ್ಮದಿಂದ ಪ್ರತ್ಯೇಕವಾಗಿ, ಶೈಕ್ಷಣಿಕ ವಿಷಯಗಳಾಗಿ ಅಧ್ಯಯನ ಮಾಡಬಹುದೆಂದು ಪರಮಪೂಜ್ಯರು ಆಗಾಗ್ಗೆ ಹೇಳುತ್ತಾರೆ. ಇದು ಭಾರತೀಯ ವಿಜ್ಞಾನ ಮತ್ತು ತತ್ವಶಾಸ್ತ್ರಕ್ಕೂ ಅನ್ವಯಿಸುತ್ತದೆ. ಈ ಪ್ರಾಚೀನ ಬುದ್ಧಿವಂತಿಕೆಯ ಪುನರುಜ್ಜೀವನವು, ಅದನ್ನು ಕೇವಲ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಸ್ತುಸಂಗ್ರಹಾಲಯದ ತುಣುಕುಗಳನ್ನು ಅಧ್ಯಯನ ಮಾಡುವಂತಹ ಸಂರಕ್ಷಣೆಗೆ ಸೀಮಿತವಾಗಿಸಬಾರದು. ಈಗಾಗಲೇ ಪ್ರಪಂಚದಾದ್ಯಂತದ ಅನೇಕ ವಿಶ್ವವಿದ್ಯಾನಿಲಯಗಳು ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರದ ಕೋರ್ಸ್‌ಗಳನ್ನು ಒಳಗೊಂಡಿರುವ ದಕ್ಷಿಣ ಏಷ್ಯಾದ ಅಧ್ಯಯನಗಳ ವಿಭಾಗಗಳನ್ನು ಹೊಂದಿವೆ. ಈ ಅಧ್ಯಯನಗಳಲ್ಲಿ ಪರಿಣತಿ ಪಡೆಯಲು, ಹೊಸ ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಈ ಕಾರ್ಯಕ್ರಮಗಳನ್ನು ವಿಸ್ತರಿಸುವುದು ಒಂದು ಪ್ರಮುಖ ಹೆಜ್ಜೆಯಾಗಿದೆ, ಆದರೆ ಇದು ಸಾಕಾಗುವುದಿಲ್ಲ. 

ಪರಮಪೂಜ್ಯರು ಯಾವಾಗಲೂ ಪ್ರಚಾರ ಮಾಡುವಂತೆ, ಶಿಶುವಿಹಾರದಿಂದ ವಿಶ್ವವಿದ್ಯಾನಿಲಯದವರೆಗೆ, ಎಲ್ಲಾ ಹಂತಗಳಲ್ಲಿ, ಶಾಲಾ ಪಠ್ಯಕ್ರಮಗಳಲ್ಲಿ ಈ ಮೌಲ್ಯಗಳನ್ನು ಸಂಯೋಜಿಸುವ ಮೂಲಕ ಮಕ್ಕಳಿಗೆ ಭಾವನಾತ್ಮಕ ನೈರ್ಮಲ್ಯದ ಮಹತ್ವ ಮತ್ತು ಮೌಲ್ಯವನ್ನು ಪರಿಚಯಿಸಬೇಕಾಗಿದೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕರೆತರುವ ಉತ್ತಮ ಮಾರ್ಗವು ಮಕ್ಕಳ ಶಿಕ್ಷಣದಿಂದ ಪ್ರಾರಂಭವಾಗುತ್ತದೆ ಎಂದು ಪರಮಪೂಜ್ಯರು ಬಲವಾಗಿ ನಂಬುತ್ತಾರೆ. ಆದ್ದರಿಂದ ಪರಮಪೂಜ್ಯರು, ಕೇವಲ ಅಹಿಂಸೆ ಮತ್ತು ಸಹಾನುಭೂತಿಯ ಪ್ರಾಚೀನ ಭಾರತೀಯ ಮೌಲ್ಯಗಳನ್ನಲ್ಲ – ಮಕ್ಕಳ ಶಿಕ್ಷಣದಲ್ಲಿನ ಪ್ರಸ್ತುತ ಭೌತಿಕ ಒತ್ತುಗೆಗೆ ಸರಿಹೊಂದುವಂತಹ ಭಾವನಾತ್ಮಕ ನೈರ್ಮಲ್ಯವನ್ನೂ ಸಹ ಪ್ರತಿಪಾದಿಸುತ್ತಾರೆ. 

ಪ್ರಾಚೀನ ಭಾರತೀಯ ಮೌಲ್ಯಗಳನ್ನು ಜಾತ್ಯತೀತ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಚಯಿಸಲು, ದೀರ್ಘಾವಧಿಯ ಕಾರ್ಯತಂತ್ರವೊಂದನ್ನು ಅನುಸರಿಸುವುದು ಸಮಾಜದ ಮೇಲೆ ಸಮಗ್ರವಾದ ಸಕಾರಾತ್ಮಕ ಪ್ರಭಾವವನ್ನು ಉಂಟುಮಾಡಲಿರುವ ಅತ್ಯಂತ ಗಟ್ಟಿಯಾದ ಮಾರ್ಗವಾಗಿದೆ. ಈ ಮೌಲ್ಯಗಳನ್ನು ಪ್ರಚಾರ ಮಾಡುವ ಬೋಧನೆಗಳೆಲ್ಲವೂ ಭಾರತೀಯ ಚಿಂತನೆಗಳಲ್ಲಿ ಕಂಡುಬರುವ ಮೂಲಭೂತ ಪ್ರಮೇಯಗಳ ವ್ಯವಸ್ಥೆಯನ್ನು ಹಂಚಿಕೊಳ್ಳುವ ಭಾರತೀಯ ಮೂಲಗಳಿಂದ ಹುಟ್ಟಿಕೊಂಡಿರುವುದರಿಂದ, ಈ ಮೌಲ್ಯಗಳನ್ನು ಮೊದಲು ಭಾರತದಲ್ಲಿ ಪುನರುಜ್ಜೀವನಗೊಳಿಸಬೇಕೆಂದು ಪರಮಪೂಜ್ಯರು ಪ್ರತಿಪಾದಿಸುತ್ತಾರೆ. ಈ ಕಾರ್ಯಕ್ರಮದ ಫಲಿತಾಂಶಗಳ ಆಧಾರದ ಮೇಲೆ, ಈ ಪ್ರಮೇಯಗಳನ್ನು ಹಂಚಿಕೊಳ್ಳದವರಿಗೆ, ಜಾಗತಿಕ ಮಟ್ಟದಲ್ಲಿ ಈ ಮೌಲ್ಯಗಳನ್ನು ಪರಿಚಯಿಸಲು ಕಾರ್ಯಕ್ರಮಗಳನ್ನು ರೂಪಿಸಬಹುದು. 

ಈ ಬೋಧನೆಗಳು ಮತ್ತು ಮೌಲ್ಯಗಳು ನಿಜವಾಗಿಯೂ ಪುನರುಜ್ಜೀವನಗೊಳ್ಳಲು, ಜನರ ದೈನಿಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ, ಅವುಗಳನ್ನು ಹೇಗೆ ಅಳವಡಿಸಬಹುದು ಎಂಬುದರ ವಿವರಣೆಗಳು ಮತ್ತು ಪ್ರಾಯೋಗಿಕ ಮಾರ್ಗಸೂಚಿಗಳೊಂದಿಗೆ ಅವುಗಳಿಗೆ ಪುನರ್ಜನ್ಮ ನೀಡಬೇಕಾಗಿದೆ. ಭಾರತದಲ್ಲಿಯೂ ಸಹ, ಈ ಬೋಧನೆಗಳನ್ನು ಕರ್ಮ, ಪುನರ್ಜನ್ಮ ಮತ್ತು ವಿಮೋಚನೆಗೆ ಸಂಬಂಧಿಸಿದ ಮೂಲ ಧಾರ್ಮಿಕ ಅಂಶಗಳಿಂದ ದೂರವಿಟ್ಟು, ಜಾತ್ಯತೀತ ಚೌಕಟ್ಟಿಗೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ವಿವಿಧ ಬೌದ್ಧ ಮತ್ತು ಬೌದ್ಧೇತರ ತತ್ವ ವ್ಯವಸ್ಥೆಗಳು ಈ ವಿಷಯಗಳನ್ನು ಸಾಮಾನ್ಯವಾಗಿ ವಿವಾದಿತವಾಗಿ ವಿವರಿಸುವುದರಿಂದ, ಇದು ವಿಶೇಷವಾಗಿ ಮುಖ್ಯವಾಗಿರುವುದು. ಅಲ್ಲದೆ, ಒಂದು ಸಾಮಾನ್ಯ ಆಧಾರವನ್ನು ಕಂಡುಹಿಡಿಯುವುದು ಹೆಚ್ಚು ಜಟಿಲವಾಗಿರುವುದು, ಏಕೆಂದರೆ ಆತ್ಮ, ಸತ್ಯ ಮತ್ತು ವಾಸ್ತವದ ಬಗ್ಗೆ ವಿವಿಧ ಬೌದ್ಧ ಮತ್ತು ಬೌದ್ಧೇತರ ತತ್ವ ವ್ಯವಸ್ಥೆಗಳ ತಾತ್ವಿಕ ಪ್ರತಿಪಾದನೆಗಳು ಸಹ ಆಗಾಗ್ಗೆ ಪರಸ್ಪರ ಸಂಘರ್ಷಗೊಳಗಾಗುತ್ತವೆ. ಧರ್ಮ ಮತ್ತು ತತ್ತ್ವಶಾಸ್ತ್ರದ ಕ್ಷೇತ್ರದಲ್ಲಿನ ಈ ವಿಭಿನ್ನ ಸಮರ್ಥನೆಗಳು, ಭಾವನಾತ್ಮಕ ನೈರ್ಮಲ್ಯದ ವಿವಿಧ ಅಂಶಗಳ ಬಗೆಗಿನ ಸಿದ್ಧಾಂತ ವ್ಯವಸ್ಥೆಗಳ ಪ್ರಸ್ತುತಿಗಳ ಮೇಲೆ ಪರಿಣಾಮ ಬೀರುತ್ತವೆ.

ಉದಾಹರಣೆಗೆ, ಎಲ್ಲಾ ಭಾರತೀಯ ತತ್ವ ವ್ಯವಸ್ಥೆಗಳು, ವಾಸ್ತವದ ಬಗ್ಗೆಗಿನ ಅಜ್ಞಾನವು ನಮ್ಮ ದುಃಖಕ್ಕೆ ಕಾರಣ ಎಂದು ಪ್ರತಿಪಾದಿಸುತ್ತವೆ. ಅಲ್ಲದೆ ಈ ಅಜ್ಞಾನವು ಎಲ್ಲಾ ಭಾವನೆಗಳಿಗೆ - ವಿನಾಶಕಾರಿ ಮತ್ತು ರಚನಾತ್ಮಕ ಭಾವನೆಗಳಿಗೆ, ಹಾಗೆಯೇ ಎಲ್ಲಾ ಸಂತೋಷ ಮತ್ತು ಅಸಂತೋಷದ ಭಾವನೆಗಳಿಗೂ ಸಹ ಆಧಾರವಾಗಿದೆ ಎಂದು ಅವು ಸಾಮಾನ್ಯವಾಗಿ ಪ್ರತಿಪಾದಿಸುತ್ತವೆ. ಅವೆಲ್ಲವೂ, 

  • ಮನಸ್ಸು ಹೇಗೆ ವಿಷಯಗಳನ್ನು ತಿಳಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ 
  • ಅಮಾನ್ಯವಾದ ತಿಳಿವಳಿಕೆಯ ವಿಧಾನಗಳಿಂದ, ಮಾನ್ಯವಾದ ವಿಧಾನಗಳನ್ನು ಪ್ರತ್ಯೇಕಿಸುವ ಮೂಲಕ ಮತ್ತು 
  • ತರ್ಕ ಮತ್ತು ಕಾರಣವನ್ನು ಬಳಸಿಕೊಳ್ಳುವ ಮೂಲಕ 

ನಾವು ಈ ಅಜ್ಞಾನವನ್ನು ನಿವಾರಿಸಬಹುದು ಮತ್ತು ಹೀಗೆ ನಮ್ಮ ದುಃಖವನ್ನು ಕೊನೆಗೊಳಿಸಬಹುದು ಎಂದು ಒಪ್ಪುತ್ತವೆ. 

ಸಾಮ್ಯತೆಗಳು ಅಲ್ಲಿಗೆ ಕೊನೆಗೊಳ್ಳುತ್ತವೆ. ಬೌದ್ಧೇತರ ವ್ಯವಸ್ಥೆಗಳು, ಆತ್ಮ ಬದಲಾಗದ ಅಸ್ತಿತ್ವವಾಗಿದೆ ಎಂದು ಪ್ರತಿಪಾದಿಸುತ್ತವೆ - ಅದು ದುಃಖ ಮತ್ತು ಪುನರ್ಜನ್ಮದಿಂದ ವಿಮೋಚನೆಗೊಂಡಾಗ, ದೇಹ ಮತ್ತು ಮನಸ್ಸಿನಿಂದ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುತ್ತದೆ. ಈ ಸಮರ್ಥನೆಗೆ ಅನುಗುಣವಾಗಿ, ನಮ್ಮಲಿನ ಅಜ್ಞಾನವನ್ನು ತೊಡೆದುಹಾಕುವುದೆಂದರೆ ನಮ್ಮಲಿನ ಎಲ್ಲಾ ಅನಿಸಿಕೆ ಮತ್ತು ಭಾವನೆಗಳನ್ನು ತೊಡೆದುಹಾಕುವುದು ಎಂದು ಅವು ನಮಗೆ ಹೇಳಿಕೊಡುತ್ತದೆ. ಆದ್ದರಿಂದ, ವಿಮೋಚನೆಯನ್ನು ಪಡೆಯಲು, ನಾವು ಎಲ್ಲಾ ಭಾವನೆಗಳನ್ನು, ರಚನಾತ್ಮಕವಾದ ಮತ್ತು ವಿನಾಶಕಾರಿಯಾದ, ಮತ್ತು ಎಲ್ಲಾ ಸಂತೋಷದ ಮತ್ತು ಅಸಂತೋಷದ ಭಾವನೆಗಳನ್ನು ಮೀರಬೇಕು. ದೇಹ, ಮನಸ್ಸು, ಅನಿಸಿಕೆ ಅಥವಾ ಭಾವನೆಗಳಿಲ್ಲದೆ ಆತ್ಮವು ಅಸ್ತಿತ್ವದಲ್ಲಿ ಮುಂದುವರಿಯುತ್ತದೆ. 

ಇದಕ್ಕೆ ವ್ಯತಿರಿಕ್ತವಾಗಿ ಬೌದ್ಧ ವ್ಯವಸ್ಥೆಗಳು, ಆತ್ಮವು ವಿಮೋಚನೆಗೊಂಡಾಗಲೂ ದೇಹ ಮತ್ತು ಮನಸ್ಸಿನ ಮೇಲೆ ಅವಲಂಬಿತವಾಗಿ ಅಸ್ತಿತ್ವದಲ್ಲಿರುತ್ತದೆ ಎಂದು ಕಲಿಸುತ್ತವೆ. ಅಜ್ಞಾನವನ್ನು ತೊಡೆದುಹಾಕಿದಾಗ, ಅಜ್ಞಾನದಿಂದ ಕಳಂಕಿತವಾಗದ ರಚನಾತ್ಮಕ ಭಾವನೆಗಳು ಮತ್ತು ಕಳಂಕವಿಲ್ಲದ ಸಂತೋಷದ ಭಾವನೆಗಳು ನಮ್ಮಲ್ಲಿ ಉಳಿದಿರುತ್ತವೆ. ನಂತರ, ವಿಮೋಚನೆಗೊಂಡ ಆತ್ಮವು ಈ ಕಳಂಕವಿಲ್ಲದ ಅನಿಸಿಕೆಗಳು ಮತ್ತು ಕಳಂಕವಿಲ್ಲದ ಭಾವನೆಗಳ ಮೇಲೆ ಆಧಾರಿತವಾಗಿ ಅಸ್ತಿತ್ವದಲ್ಲಿ ಮುಂದುವರಿಯುತ್ತದೆ, ಅದೇ ರೀತಿ ಅಜ್ಞಾನದಿಂದ ಕಳಂಕಿತವಾಗದ ದೇಹ ಮತ್ತು ಮನಸ್ಸಿನೊಂದಿಗೆ ಅನುಭವಿಸುತ್ತದೆ. ಆದ್ದರಿಂದ, ಬೌದ್ಧೇತರ ಮತ್ತು ಬೌದ್ಧ ವ್ಯವಸ್ಥೆಗಳೆರಡೂ ಭಾವನಾತ್ಮಕ ನೈರ್ಮಲ್ಯವು, ವಾಸ್ತವದಿಂದ ಅಜ್ಞಾನವನ್ನು ತೊಡೆದುಹಾಕುವುದರ ಮೇಲೆ ಅವಲಂಬಿತವಾಗಿದೆ ಎಂದು ಒಪ್ಪಿಕೊಂಡರೂ, ಫಲಿತಾಂಶವು ವಿಭಿನ್ನವಾಗಿರುತ್ತದೆ. ಭಾವನಾತ್ಮಕ ನೈರ್ಮಲ್ಯದ ಬೌದ್ಧೇತರ ಆದರ್ಶ ಸ್ಥಿತಿಯೆಂದರೆ, ಯಾವುದೇ ಭಾವನೆಗಳು ಅಥವಾ ಸಂತೋಷದ ಭಾವನೆಗಳಿಲ್ಲದೇ ಇರುವುದು, ಆದರೆ ಬೌದ್ಧರ ಆದರ್ಶ ಭಾವನಾತ್ಮಕ ನೈರ್ಮಲ್ಯವು, ಕಳಂಕವಿಲ್ಲದ ರಚನಾತ್ಮಕ ಭಾವನೆಗಳಾದ ಪ್ರೀತಿ ಮತ್ತು ಸಹಾನುಭೂತಿ ಮತ್ತು ಕಳಂಕರಹಿತ ಸಂತೋಷವನ್ನು ಹೊಂದಿರುವುದಾಗಿದೆ. ಈ ರೀತಿಯಾಗಿ, ವಿವಿಧ ಪ್ರಾಚೀನ ಭಾರತೀಯ ತತ್ವ ವ್ಯವಸ್ಥೆಗಳ ತಾತ್ವಿಕ ಮತ್ತು ಧಾರ್ಮಿಕ ಸಮರ್ಥನೆಗಳು, ಆದರ್ಶ ಭಾವನಾತ್ಮಕ ನೈರ್ಮಲ್ಯದ ಬಗ್ಗೆಗಿನ ಅವರ ಸಮರ್ಥನೆಗಳ ಮೇಲೆ ಬಲವಾದ ಪರಿಣಾಮ ಬೀರುತ್ತವೆ. 

ಭಾವನಾತ್ಮಕ ನೈರ್ಮಲ್ಯದ ಕುರಿತಾದ ಪ್ರಾಚೀನ ಭಾರತೀಯ ಬೋಧನೆಗಳನ್ನು, ಶೈಕ್ಷಣಿಕ ವಿಷಯವಾಗಿ ವಿಶ್ವವಿದ್ಯಾನಿಲಯಗಳಲ್ಲಿ ಪುನರುಜ್ಜೀವನಗೊಳಿಸುವುದರಲ್ಲಿ, ಮನಸ್ಸಿನ ಭಾವನಾತ್ಮಕ ನಕ್ಷೆ, ಅರಿವಿನ ಸಿದ್ಧಾಂತ, ತಿಳುವಳಿಕೆಯ ವಿಧಾನಗಳು, ತಾರ್ಕಿಕ ವಿಧಾನಗಳನ್ನು ಒಳಗೊಂಡ ವಿವಿಧ ಸಿದ್ಧಾಂತ ವ್ಯವಸ್ಥೆಗಳಲ್ಲಿನ ಪ್ರಸ್ತುತಿಗಳ ಸಂಪೂರ್ಣ ವೈಜ್ಞಾನಿಕ ಅಂಶಗಳ ಧಾರ್ಮಿಕ ಮತ್ತು ತಾತ್ವಿಕ ಸನ್ನಿವೇಶಗಳನ್ನು, ಆರಾಮವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಈ ವ್ಯತ್ಯಾಸಗಳನ್ನು ಎದುರಿಸಲು ವಿದ್ಯಾರ್ಥಿಗಳು ಬೌದ್ಧಿಕವಾಗಿ ಸಾಕಷ್ಟು ಪ್ರಬುದ್ಧರಾಗಿರಬೇಕು. ಆದರೆ ವಿಭಿನ್ನ ಧಾರ್ಮಿಕ ಮತ್ತು ತಾತ್ವಿಕ ಬೋಧನೆಗಳನ್ನು ಶಾಲಾ ಮಕ್ಕಳಿಗೆ ಅಧ್ಯಯನ ಮಾಡಲು ತುಂಬಾ ಕ್ಲಿಷ್ಟಕರ ಮತ್ತು ಗೊಂದಲಮಯವಾಗಿರುತ್ತದೆ. 

ಹಾಗಾದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಿಚಯಿಸಲು ಸೂಕ್ತವಾದ ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳು ಯಾವುವು? 

  • ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದರ ಮೌಲ್ಯ ಮತ್ತು ಪ್ರಾಮುಖ್ಯತೆ 
  • ನಮ್ಮ ಭಾವನೆಗಳ ವಿಶ್ಲೇ‍ಷಣೆಯ ಮೌಲ್ಯ ಮತ್ತು ಪ್ರಾಮುಖ್ಯತೆ ಮತ್ತು ಅವು ನಮ್ಮ ವರ್ತನೆಗಳಿಂದ ಮತ್ತು ನಾವು ಹೇಗೆ ಯೋಚಿಸುತ್ತೇವೆ ಎನ್ನುವುದರಿಂದ ಹೇಗೆ ಪ್ರಭಾವಿತಗೊಳ್ಳುತ್ತವೆ 
  • ನಮ್ಮ ಭಾವನೆಗಳು ಮತ್ತು ವರ್ತನೆಗಳು ಪ್ರತಿಯಾಗಿ, ನಮ್ಮ ನಡವಳಿಕೆ ಮತ್ತು ಯೋಗಕ್ಷೇಮವನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದರ ಮೌಲ್ಯ ಮತ್ತು ಪ್ರಾಮುಖ್ಯತೆ 
  • ತರ್ಕದ ಆಧಾರದ ಮೇಲೆ ವಿಮರ್ಶಾತ್ಮಕವಾಗಿ ಮತ್ತು ತರ್ಕಬದ್ಧವಾಗಿ ಯೋಚಿಸುವುದರ ಮೌಲ್ಯ ಮತ್ತು ಪ್ರಾಮುಖ್ಯತೆ. 

ನಾವು ಇದನ್ನೂ ಸೇರಿಸಿಕೊಳ್ಳಬಹುದು 

  • ಏಕಾಗ್ರತೆ ಮತ್ತು ಒಳನೋಟವನ್ನು ಅಭಿವೃದ್ಧಿಪಡಿಸಲು ನೈತಿಕ ಶಿಸ್ತು ಮತ್ತು ಧ್ಯಾನದ ಮೌಲ್ಯಗಳು. 

ಈ ಮೌಲ್ಯಗಳಿಗೆ ಸನ್ನಿವೇಶವನ್ನು ರೂಪಿಸುವ ತಾತ್ವಿಕ ಮತ್ತು ಧಾರ್ಮಿಕ ವ್ಯತ್ಯಾಸಗಳು, ಶಾಲಾ ಮಕ್ಕಳಿಗೆ ಅಷ್ಟಾಗಿ ಮುಖ್ಯವಾಗಿರುವುದಿಲ್ಲ.

ಪ್ರಾಚೀನ ಭಾರತೀಯ ಮೌಲ್ಯಗಳ ಪುನರುಜ್ಜೀವನವನ್ನು ಕರೆತರುವ ಕೆಲವು ಪ್ರಾಯೋಗಿಕ, ಪರಿಣಾಮಕಾರಿ ವಿಧಾನಗಳು ಯಾವುವು

ಈಗಾಗಲೇ ಪರಮಪೂಜ್ಯರು ಭಾವನಾತ್ಮಕ ನೈರ್ಮಲ್ಯದ ಬಗ್ಗೆಗಿನ ಬೌದ್ಧ ಬೋಧನೆಗಳನ್ನು ಪುನರುಜ್ಜೀವನಗೊಳಿಸಲು ಅಗತ್ಯವಾದ ಮೊದಲ ಹೆಜ್ಜೆಗಳನ್ನು ಇಟ್ಟಿದ್ದಾರೆ. ಬುದ್ಧನ ಮಾತುಗಳ ಭಾರತೀಯ ಗುರುಗಳ ವ್ಯಾಖ್ಯಾನಗಳ ಟಿಬೆಟಿಯನ್ ಅನುವಾದಗಳ ಸಂಗ್ರಹವಾದ ತೆಂಗ್ಯೂರ್‌ನಿಂದ ಬೌದ್ಧ ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ವಸ್ತುಗಳನ್ನು ಸಂಗ್ರಹಿಸಲು ಅವರು ಟಿಬೆಟಿಯನ್ ವಿದ್ವಾಂಸರನ್ನು ನಿಯೋಜಿಸಿದ್ದಾರೆ. ಈ ಅದ್ಭುತ ಕಾರ್ಯವನ್ನು ಈಗ ಪೂರ್ಣಗೊಳಿಸಲಾಗಿದ್ದು, ಟಿಬೆಟಿಯನ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಈಗಾಗಲೇ ಸೈನ್ಸ್ ಅಂಡ್ ಫಿಲೋಸಫಿ ಇನ್ ದಿ ಇಂಡಿಯನ್ ಬುದ್ಧಿಸ್ಟ್ ಕ್ಲಾಸಿಕ್ಸ್ ಎಂದು ಇಂಗ್ಲಿಷ್‌ಗೆ ಭಾಗಶಃ ಅನುವಾದಿಸಲಾಗಿದೆ. ಇತರ ಆಧುನಿಕ ಭಾಷೆಗಳಿಗೂ ಅನುವಾದಗಳನ್ನು ಯೋಜಿಸಲಾಗಿದೆ. ಈ ಕೃತಿಯ ಎರಡನೇ ಸಂಪುಟ, ಮೈಂಡ್, ಈಗಾಗಲೇ ಇಂಗ್ಲಿಷ್‌ನಲ್ಲಿ ಲಭ್ಯವಿದ್ದು, ಭಾವನಾತ್ಮಕ ನೈರ್ಮಲ್ಯದ ವಿಷಯವನ್ನು ಒಳಗೊಂಡಿದೆ. ಈ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಪರಮಪೂಜ್ಯರ ಬದ್ಧತೆಯನ್ನು ಪೂರೈಸುವಲ್ಲಿ ಇದು ಉತ್ತಮವಾದ ಹೆಜ್ಜೆಯಾಗಿದೆ. ಬೌದ್ಧೇತರ ಭಾರತೀಯ ತತ್ವ ವ್ಯವಸ್ಥೆಗಳಲ್ಲಿ ಕಂಡುಬರುವ ಈ ಮೌಲ್ಯಗಳ ಮೇಲಿನ ಬೋಧನೆಗಳನ್ನು ಪುನರುಜ್ಜೀವನಗೊಳಿಸಲು, ಅವುಗಳ ಪ್ರಾಚೀನ ಪಠ್ಯಗಳ ಇದೇ ರೀತಿಯ ಸಂಕಲನಗಳು ಮತ್ತು ಅನುವಾದಗಳ ಅಗತ್ಯವಿರುತ್ತದೆ. 

ಈಗಾಗಲೇ ತೆಂಗ್ಯೂರ್‌ನಿಂದ ಭಾವನಾತ್ಮಕ ನೈರ್ಮಲ್ಯದ ಬಗ್ಗೆಯ ವಿಷಯವನ್ನು ಸಂಗ್ರಹಿಸಿಕೊಂಡು ಅದನ್ನು ಅನುವಾದಿಸಿದ್ದರೂ, ಆಧುನಿಕ ಪ್ರೇಕ್ಷಕರಿಗೆ ಅದನ್ನು ಅರ್ಥೈಸುವಲ್ಲಿ ಇನ್ನೂ ಅನೇಕ ಸವಾಲುಗಳಿವೆ. ಮೊದಲನೆಯದಾಗಿ, ಭಾರತೀಯ ವ್ಯಾಖ್ಯಾನಗಳೊಂದಿಗಿನ ಭಾರತೀಯ ಪಠ್ಯಗಳನ್ನು ಅರ್ಥಮಾಡಿಕೊಳ್ಳುವುದು ಇಂದಿಗೂ ಬಹಳ ಕಷ್ಟವಾಗಿರುವುದು. ಅವುಗಳ ಬಗ್ಗೆ ಹೆಚ್ಚಿನ ವಿವರಣೆಗಳು ಬೇಕಾಗಿವೆ. ಅವುಗಳಲ್ಲಿನ ಬೋಧನೆಗಳನ್ನು ಪುನರುಜ್ಜೀವನಗೊಳಿಸುವಲ್ಲಿನ ಇನ್ನೊಂದು ಸವಾಲೆಂದರೆ, ನಳಂದಾ ಸಂಪ್ರದಾಯದ ಉತ್ತರಾಧಿಕಾರಿಗಳಾಗಿರುವ ವಿವಿಧ ಟಿಬೆಟಿಯನ್ ಗುರುಗಳು, ಈ ಭಾರತೀಯ ಪಠ್ಯಗಳನ್ನು ವಿಭಿನ್ನವಾಗಿ ಮತ್ತು ವಿವಾದಿತವಾಗುವ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ವಿಶೇಷವಾಗಿ ಅರಿವಿನ ಸಿದ್ಧಾಂತ ಮತ್ತು ತಿಳಿವಳಿಕೆಯ ವಿಧಾನಗಳ ಅವರ ವಿಶ್ಲೇಷಣೆಗಳಲ್ಲಿ ಇದನ್ನು ಗಮನಿಸಬಹುದಾಗಿದೆ.

ಉದಾಹರಣೆಗೆ, ಸಕ್ಯ ಪಂಡಿತನ (ಸಾ-ಪಾನ್) ವ್ಯಾಖ್ಯಾನಗಳ ಸಕ್ಯ, ಕಗ್ಯು ಮತ್ತು ನ್ಯಿಂಗ್ಮಾ ಅನುಯಾಯಿಗಳು, ಕಲ್ಪನಾತ್ಮಕವಲ್ಲದ ದೃಶ್ಯ ಗ್ರಹಿಕೆಯ ಜ್ಞಾನವು, ಏಕ ಕಾಲದಲ್ಲಿ ಕೇವಲ ಒಂದು ಕ್ಷಣದ ಬಣ್ಣವಿರುವ ಆಕಾರಗಳನ್ನು ಗ್ರಹಿಸುತ್ತದೆ ಎಂದು ಪ್ರತಿಪಾದಿಸುತ್ತಾರೆ, ಉದಾಹರಣೆಗೆ ಒಂದು ಕಿತ್ತಳೆಯ ಒಂದು ಕ್ಷಣದ ಬಣ್ಣವಿರುವ ಆಕಾರಗಳು. ದೃಶ್ಯ ಗ್ರಹಿಕೆಯ ಅರಿವು, ಈ ಬಣ್ಣವಿರುವ ಆಕಾರಗಳನ್ನು ಸಾಮಾನ್ಯ ಬುದ್ಧಿವಂತಿಕೆಯ ವಸ್ತು ಎಂದು ನಿರ್ಧರಿಸುವುದಿಲ್ಲ. ಕೇವಲ ಪರಿಕಲ್ಪನಾ ಅರಿವು, ಕಿತ್ತಳೆಯನ್ನು ದೃಷ್ಟಿ, ವಾಸನೆ, ರುಚಿ ಮತ್ತು ದೈಹಿಕ ಸಂವೇದನೆಯನ್ನು ಒಳಗೊಂಡಿರುವ ಒಂದು ಸಾಮಾನ್ಯ ವಸ್ತುವಾಗಿರುವಂತೆ ಗುರುತಿಸುತ್ತದೆ ಮತ್ತು ಇದು ಕಾಲಾನಂತರದಲ್ಲಿ ವಿಸ್ತಾರವಾಗುತ್ತದೆ. ಇಂತಹ ಪರಿಕಲ್ಪನೆಯ ಅರಿವು ಮಾತ್ರ ತನ್ನ ವಸ್ತುವನ್ನು ಕಿತ್ತಳೆ ಎಂದು ನಿರ್ಧರಿಸುತ್ತದೆ. 

ಇದಕ್ಕೆ ವಿರುದ್ಧವಾಗಿ, ಚಾಪಾ (ಫೈವಾ-ಪಾ)ನ ಗೆಲುಗ್ ಅನುಯಾಯಿಗಳು, ದೃಶ್ಯ ಗ್ರಹಿಕೆಯ ಅರಿವು, ಕೇವಲ ಕಿತ್ತಳೆಯ ಬಣ್ಣವಿರುವ ಆಕಾರಗಳ ಒಂದು ಕ್ಷಣವನ್ನು ಗ್ರಹಿಸುವುದಲ್ಲದೆ, ಕಿತ್ತಳೆಯನ್ನೂ ಗ್ರಹಿಸಿ, ಅದು ಸಾಮಾನ್ಯವಾದ ವಸ್ತು ಎಂಬ ನಿರ್ಣಯವನ್ನು ಪ್ರತಿಪಾದಿಸುತ್ತಾರೆ. ಈ ಎರಡು ವ್ಯತಿರಿಕ್ತ ದೃಷ್ಟಿಕೋನಗಳು, ಭಾವನಾತ್ಮಕ ನೈರ್ಮಲ್ಯದ ಇತರ ಹಲವು ಅಂಶಗಳ ವ್ಯಾಖ್ಯಾನದ ಮೇಲೆ ಪರಿಣಾಮ ಬೀರುತ್ತವೆ, ಉದಾಹರಣೆಗೆ ಮಾನ್ಯವಾದ ಅರಿವು ಮತ್ತು ಸತ್ಯವಾಗಿರುವುದು ಯಾವುದು? 

ಇಂತಹ ಬೋಧನೆಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಲು, ಭಾರತೀಯ ಬೌದ್ಧ ಮೂಲಗಳಿಗೆ ಪೂರಕವಾಗಿ ಟಿಬೆಟಿಯನ್ ವಿವರಣೆಗಳನ್ನು ಸೇರಿಸಬೇಕಾಗಿದೆ. ಆದರೆ, ಮತ್ತೊಮ್ಮೆ, ಈ ಹೆಚ್ಚುವರಿ ವಿವರಣೆಗಳನ್ನು ಭಾವನಾತ್ಮಕ ನೈರ್ಮಲ್ಯದ ವಿಶ್ವವಿದ್ಯಾನಿಲಯ ಮಟ್ಟದ ಶೈಕ್ಷಣಿಕ ಅಧ್ಯಯನಕ್ಕೆ ಮಾತ್ರ ಸೇರಿಸಬೇಕೆ? ಅಥವಾ ವಿಶ್ವವಿದ್ಯಾನಿಲಯದ ಮುಂಚೆ, ಸಾರ್ವಜನಿಕ ಶಿಕ್ಷಣದ ಕನಿಷ್ಠ ಉನ್ನತ ಮಟ್ಟಕ್ಕೆ ಸೇರಿಸಬಹುದೇ ಎಂಬ ಪ್ರಶ್ನೆಗಳನ್ನು ಕೇಳಬೇಕಾಗಿದೆ. 

ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದರಲ್ಲಿ ಒಂದು ಮುಖ್ಯ ಉದ್ದೇಶವು ತರ್ಕಬದ್ಧ ಚಿಂತನೆಯನ್ನು ಉತ್ತೇಜಿಸುವುದಾಗಿರುವುದರಿಂದ, ವಿಶ್ವವಿದ್ಯಾನಿಲಯ ಮತ್ತು ಪೂರ್ವ- ವಿಶ್ವವಿದ್ಯಾನಿಲಯದ ಹಂತಗಳಲ್ಲಿ ತರ್ಕ ಮತ್ತು ಚರ್ಚೆಯ ಪ್ರಾಚೀನ ಭಾರತೀಯ ಸಾಧನಗಳನ್ನು ವಿದ್ಯಾರ್ಥಿಗಳಿಗೆ ನೀಡಿ, ಅವರಲ್ಲೇ ಈ ವಿಭಿನ್ನ ಸಿದ್ಧಾಂತಗಳ ಸಾಧಕ-ಬಾಧಕಗಳನ್ನು ಚರ್ಚಿಸಲು ಬಿಡುವುದು ಒಂದು ಸಂಭವನೀಯ ಉತ್ತರವಾಗಿದೆ. ಈ ಕಾರ್ಯವಿಧಾನವನ್ನು ವಿವಿಧ ಬೌದ್ಧ ಮತ್ತು ಬೌದ್ಧೇತರ ತತ್ವ ವ್ಯವಸ್ಥೆಗಳಲ್ಲಿ ಭಿನ್ನವಾಗಿರುವ ಅಂಶಗಳಿಗೂ ಸಹ ಅಳವಡಿಸಬಹುದಾಗಿದೆ, ಉದಾಹರಣೆಗೆ ಆದರ್ಶ ಭಾವನಾತ್ಮಕ ನೈರ್ಮಲ್ಯ ಯಾವುದಾಗಿರುವುದು ಎನ್ನುವುದರ ಬಗ್ಗೆ.

ಎಲ್ಲಿ ಪ್ರಾರಂಭಿಸಬೇಕು?

ರೆಕ್ವೆಸ್ಟ್ಸ್ ಡು ದಿ ಸೆವೆಂಟೀನ್ ಗ್ಲೋರಿಯಸ್ ನಳಂದ ಮಾಸ್ಟರ್ಸ್ನಲ್ಲಿ, ಆಧುನಿಕ ಮನಸ್ಥಿತಿಗೆ ಹೆಚ್ಚು ಸೂಕ್ತವಾದ ನಳಂದ ಗುರುಗಳ ಬೌದ್ಧ ಬೋಧನೆಗಳನ್ನು ಅಧ್ಯಯನ ಮಾಡುವ ವಿಧಾನವನ್ನು ಪರಮಪೂಜ್ಯರು ಸೂಚಿಸಿದ್ದಾರೆ. ಇದು ಎರಡು ಸತ್ಯಗಳನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ, ನಂತರ ಎರಡು ಸತ್ಯಗಳಿಂದ ಚತುರ್ಯಾಯ ಸತ್ಯಗಳನ್ನು ಮತ್ತು ನಂತರ ನಾಲ್ಕು ಸತ್ಯಗಳಿಂದ ಮೂರು ಮೋಕ್ಷಗಳನ್ನು ಅರ್ಥಮಾಡಿಕೊಳ್ಳುವುದಾಗಿರುತ್ತದೆ. ಈ ಅನುಕ್ರಮವು ಆರಂಭಿಕ ಹಂತದಲ್ಲಿ, ಲೌಕಿಕ ರೀತಿಯಲ್ಲಿ ಭಾವನಾತ್ಮಕ ನೈರ್ಮಲ್ಯವನ್ನು ಬೋಧಿಸಲು ಸಹಾಯಕವಾಗಬಹುದು, ಕೊನೆಯ ಅಂಶವನ್ನು ಬೌದ್ಧ ಧರ್ಮದ ತ್ರಿರತ್ನಗಳ ಮೂಲಕವೇ ನಿರ್ದಿಷ್ಟಪಡಿಸಬೇಕಾಗಿಲ್ಲ. ಒಬ್ಬರನ್ನು ದುಃಖದಿಂದ ರಕ್ಷಿಸಿಕೊಳ್ಳಲು ಜೀವನದಲ್ಲಿನ ಸುರಕ್ಷಿತ ನಿರ್ದೇಶನವಾಗಿ ಇದನ್ನು ಪ್ರಸ್ತುತಪಡಿಸಬಹುದು. 

ಪರಮಪೂಜ್ಯರ ಶಿಫಾರಸುಗಳನ್ನು ಅನ್ವೇಷಿಸೋಣ. ಸಾಮಾನ್ಯವಾಗಿ ಎಲ್ಲರಿಗೂ ಸ್ವೀಕಾರಾರ್ಹವಾದ ಪರಿಭಾಷೆಯಲ್ಲಿ, ಎರಡು ಸತ್ಯಗಳಲ್ಲಿ ಒಂದು ಕಡೆ, ನಾವು ನಿಜವೆಂದು ನಂಬುವ ಸುಳ್ಳು ರೂಪಗಳಿವೆ ಮತ್ತು ಮತ್ತೊಂದೆಡೆ, ವಾಸ್ತವತೆಯಿದೆ. ನಾವು ನಮಗೆ ಗೋಚರಿಸುವ ವಿಷಯಗಳನ್ನೇ ಸತ್ಯವೆಂದು ನಂಬುತ್ತೇವೆ, ಏಕೆಂದರೆ ನಾವು ಅವನ್ನು ನಿಜವಾಗಿಯೂ ಭಾವನಾತ್ಮಕವಾಗಿ ಸತ್ಯವೆಂದು ಭಾವಿಸುವುದರಿಂದ, ವಿಮರ್ಶೆಯಿಲ್ಲದೆ, ಅವು ವಾಸ್ತವಕ್ಕೆ ಹೊಂದುತ್ತವೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ನಾವು ಈ ಕಪಟ ರೂಪಗಳನ್ನು ಪರಿಶೀಲಿಸಿದರೆ, ಅವು ಭ್ರಮೆಯಂತೆ ಇರುವವು ಎಂದು ನಾವು ಕಂಡುಕೊಳ್ಳಬಹುದು; ಅವು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ. ನೈಜವಾದ ವಾಸ್ತವವು ಸತ್ಯವನ್ನು ಆಧರಿಸಿದ್ದು, ಅದನ್ನು ಪರಿಶೀಲಿಸಬಹುದಾಗಿರುತ್ತದೆ; ಭ್ರಮೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಸುಳ್ಳು ಎಂದು ಕಂಡುಬರುತ್ತದೆ. ಬೌದ್ಧ ಮತ್ತು ಬೌದ್ಧೇತರವಾದ ಎಲ್ಲಾ ಭಾರತೀಯ ತತ್ವ ವ್ಯವಸ್ಥೆಗಳು, ಈ ಅಂಶದ ಬಗ್ಗೆ ಒಪ್ಪಿಗೆಯಲ್ಲಿವೆ. ಚಿಕ್ಕ ಮಕ್ಕಳೂ ಸಹ ಈ ವಿಷಯವನ್ನು ಅರ್ಥಮಾಡಿಕೊಳ್ಳಬಹುದು, ತಮ್ಮ ಹಾಸಿಗೆಯ ಕೆಳಗೆ ಒಂದು ಭೂತವಿದೆ ಎಂದು ಕಲ್ಪಿಸಿಕೊಂಡ ನಂತರ ಹಾಸಿಗೆಯ ಕೆಳಗೆ ನೋಡಿದಾಗ, ವಾಸ್ತವದಲ್ಲಿ ಭೂತವಿಲ್ಲವೆಂದು ತಿಳಿಯುತ್ತಾರೆ.  

ಒಮ್ಮೆ ಮಕ್ಕಳು ಎರಡು ಸತ್ಯಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಂಡರೆ, ಚತುರ್ಯಾಯ ಸತ್ಯಗಳ ಸಾಮಾನ್ಯ ಕಲ್ಪನೆಯನ್ನು ಅವರಿಗೆ ಪರಿಚಯಿಸಬಹುದು. ತಮ್ಮ ಕಲ್ಪನೆಗಳನ್ನು ನಿಜವೆಂದು ಅವರು ನಂಬಿದರೆ, ಅವರು ಭಯಭೀತಗೊಂಡು ನಿದ್ರಿಸಲಾಗುವುದಿಲ್ಲ. ಅದರಿಂದ ಅವರು ಬಳಲುತ್ತಾರೆ. ಅವರ ಬಳಲಿಕೆಯ ಕಾರಣ ಅವರು ಕಲ್ಪಿಸಿಕೊಂಡದ್ದು ನಿಜವಲ್ಲ ಎಂದು ತಿಳಿಯದಿರುವುದು. ಆದರೆ ಅವರು ಹಾಸಿಗೆಯ ಕೆಳಗೆ ನೋಡಿ, ಯಾವುದೇ ಭೂತವಿಲ್ಲವೆಂದು ಅರಿತುಕೊಂಡಾಗ, ಅವರ ಭಯ ಮತ್ತು ಅತೃಪ್ತಿ ದೂರವಾಗುತ್ತವೆ. 

ದುಃಖದ ಈ ಚಾತುರ್ಯಾಯ ಸತ್ಯಗಳನ್ನು, ದುಃಖದ ಮೂಲವು ವಾಸ್ತವದ ಬಗ್ಗೆಗಿನ ಅಜ್ಞಾವೆಂದು ಮತ್ತು ವಾಸ್ತವವನ್ನು ಅರ್ಥಮಾಡಿಕೊಳ್ಳುವ ಮೂಲಕ ದುಃಖವನ್ನು ತೊಡೆದುಹಾಕಬಹುದೆಂದು ಅರ್ಥಮಾಡಿಕೊಂಡಾಗ, ಮಕ್ಕಳು ಹೀಗೆ ಯೋಚಿಸಬಹುದು: “ಇಂದಿನಿಂದ ಎಂದೂ ಭಯಪಡದೇ ಇರುವುದು ಅಥವಾ ಅತೃಪ್ತರಾಗದೇ ಇರುವುದು ಎಷ್ಟು ಅದ್ಭುತವಾಗಿದೆ. ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಎಷ್ಟು ಅದ್ಭುತವಾಗಿದೆ. ಶಿಕ್ಷಣ ಮತ್ತು ನನ್ನ ಮನಸ್ಸಿಗೆ ತರಬೇತಿ ನೀಡುವ ಮೂಲಕ, ನಾನು ಆ ಸ್ಥಿತಿಯನ್ನು ತಲುಪಬಹುದು. ನಾನು ಆ ದಿಕ್ಕಿನಲ್ಲಿ ಹೋಗಲು ಬಯಸುತ್ತೇನೆ; ಆ ಸುರಕ್ಷಿತ ದಿಕ್ಕಿನಲ್ಲಿ ಸಾಗುವುದರಿಂದ, ಭಯ ಮತ್ತು ದುಃಖದಿಂದ ನನ್ನನ್ನು ರಕ್ಷಿಸಿಕೊಳ್ಳಬಹುದಾಗಿದೆ.” 

ಎರಡು ಸತ್ಯಗಳಿಂದ ಚಾತುರ್ಯಾಯ ಸತ್ಯಗಳನ್ನು ಅರಿತು, ಈ ರೀತಿಯಾಗಿ ಜೀವನದಲ್ಲಿ ಸುರಕ್ಷಿತ ದಿಕ್ಕನ್ನು ಅನುಸರಿಸಿ ಮುನ್ನಡೆಯುವುದರಿಂದ, ಕೇವಲ ಮಕ್ಕಳು ಮಾತ್ರವಲ್ಲ, ಎಲ್ಲಾ ವಯಸ್ಸಿನ ಜನರು ತಮ್ಮ ಭಯ ಮತ್ತು ಅತೃಪ್ತಿಯ ಮುಖ್ಯ ಮೂಲವು, ಅವರ ಮನಸ್ಸು ಮತ್ತು ಗೊಂದಲದ ಭಾವನೆಗಳಾಗಿವೆ ಎಂದು ತಿಳಿಯಬಹುದು, ಮತ್ತು ಆ ಸಮಸ್ಯೆಗಳನ್ನು ನಿವಾರಣೆಗೆ ಭಾವನಾತ್ಮಕ ನೈರ್ಮಲ್ಯವನ್ನು ಪಡೆಯುವ ಮೌಲ್ಯವನ್ನು ಅವರು ಪ್ರಶಂಸಿಸಲು ಕಲಿಯಬಹುದು. ಭಾವನಾತ್ಮಕ ನೈರ್ಮಲ್ಯದ ಪ್ರಯೋಜನಗಳು ಮತ್ತು ಮೌಲ್ಯವನ್ನು ಶ್ಲಾಘಿಸುವುದು ಮತ್ತು ಅದನ್ನು ಸಾಧಿಸಲು ಕಾರ್ಯ ನಿರ್ವಹಿಸುವ ಆಶಯ ಮತ್ತು ಉದ್ದೇಶವನ್ನು ಅಭಿವೃದ್ಧಿಪಡಿಸುವುದೇ ಎಲ್ಲಾ ಉನ್ನತ ತರಬೇತಿಯ ಅಗತ್ಯವಾದ ಅಡಿಪಾಯವಾಗಿರುತ್ತದೆ. 

ಒಮ್ಮೆ ಕಪಟ ರೂಪಗಳು ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಈ ಅಡಿಪಾಯವು ಸುರಕ್ಷಿತವಾದ ನಂತರ, ಮುಂದಿನ ಹಂತದಲ್ಲಿ, ಭಾವನಾತ್ಮಕ ನೈರ್ಮಲ್ಯಕ್ಕಾಗಿ ಬೇಕಾದ ಸಾಧನಗಳನ್ನು ಪರಿಚಯಿಸಬಹುದು. ಪ್ರತಿಯೊಂದು ಬೌದ್ಧ ಮತ್ತು ಬೌದ್ಧೇತರ ಸಿದ್ಧಾಂತ ವ್ಯವಸ್ಥೆಗಳು ಈ ಪ್ರತಿಯೊಂದು ಸಾಧನಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಸಮರ್ಥನೆಗಳನ್ನು ನೀಡುವುದರಿಂದ, ಮೊದಲು ನಮಗೆ ಎಲ್ಲಾ ವ್ಯವಸ್ಥೆಗಳಲ್ಲೂ ಸ್ವೀಕಾರಾರ್ಹವಾದ ಸಂಪೂರ್ಣ ಪರಿಕರಗಳ ಸಾಧಾರಣ ರೀತಿಯಲ್ಲಿ ವಿವರಿಸಲಾದ ಸಾಮಾನ್ಯ ಪರಿಚಯದ ಅಗತ್ಯವಿದೆ. ನಂತರ, ಉನ್ನತವಾದ ವಿದ್ಯಾರ್ಥಿಗಳಿಗೆ, ಪ್ರತಿ ವ್ಯವಸ್ಥೆಯಲ್ಲಿನ ಸಂಪೂರ್ಣ ಉಪಕರಣಗಳ ಪ್ರಸ್ತುತಿಗಳನ್ನು, ಒಂದೊಂದಾಗಿ ವಿಸ್ತಾರವಾಗಿ ವಿವರಿಸಬಹುದು. ಇವೆಲ್ಲವನ್ನೂ ಕಿಚಡಿಯಂತೆ ಒಟ್ಟಾಗಿ ಬೆರೆಸಿದರೆ, ಈ ಪ್ರಾಚೀನ ವ್ಯವಸ್ಥೆಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. 

ಮನಸ್ಸು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತರಬೇತುಗೊಳಿಸಲು, ಮನಸ್ಸು ಮತ್ತು ಭಾವನೆಗಳು ಏನೆಂದು ಮೊದಲು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಸಾಂಖ್ಯ ಮತ್ತು ವೈಶೇಷಿಕ ಅಂತಹ ಕೆಲವು ಬೌದ್ಧೇತರ ವ್ಯವಸ್ಥೆಗಳು, ಮನಸ್ಸು ಮತ್ತು ಭಾವನೆಗಳನ್ನು ಭೌತಿಕ ಘಟಕಗಳಾಗಿ ಗುರುತಿಸುತ್ತವೆ. ಈ ದೃಷ್ಟಿಕೋನವು, ಮನಸ್ಸು ಮತ್ತು ಭಾವನೆಗಳನ್ನು ಕೇವಲ ಮೆದುಳಿನಲ್ಲಿನ ದೈಹಿಕ ಪ್ರಕ್ರಿಯೆಗಳಂತೆ ಕಾಣುವ ಪಾಶ್ಚಿಮಾತ್ಯ ವೈಜ್ಞಾನಿಕತೆಯ ವಿಚಾರವನ್ನು ನೆನಪಿಸುತ್ತವೆ. ಬೌದ್ಧೇತರವಾದ ನ್ಯಾಯ ಸಂಪ್ರದಾಯವು, ವೈಶೇಷಿಕದ ಭೌತಿಕ ಪ್ರತಿಪಾದನೆಯನ್ನು ಸ್ವೀಕರಿಸುತ್ತದೆ, ಆದರೆ ಪ್ರತ್ಯೇಕ ಅಸ್ತಿತ್ವವನ್ನು ತಿಳಿದುಕೊಳ್ಳುವ ಮಾನ್ಯ ವಿಧಾನಗಳನ್ನು ಸಹ ಅಳವಡಿಸಿಕೊಂಡಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬೌದ್ಧ ವ್ಯವಸ್ಥೆಗಳು, ಮನಸ್ಸನ್ನು ಸಂಪೂರ್ಣವಾದ ಭೌತಿಕ ಘಟಕವಾಗಿ ಅಥವಾ ಭೌತಿಕ ಪ್ರಕ್ರಿಯೆಗೆ ಕಡೆಗಾಣುವುದನ್ನು ತಿರಸ್ಕರಿಸುತ್ತದೆ, ಬದಲಾಗಿ ಮನಸ್ಸೆಂದರೆ ಸ್ಪಷ್ಟತೆ ಮತ್ತು ಅರಿವು ಎಂದು ವ್ಯಾಖ್ಯಾನಿಸುತ್ತದೆ. ಪರಮಪೂಜ್ಯರು ವಿವರಿಸಿದಂತೆ, ಸ್ಪಷ್ಟತೆಯು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ, ವಸ್ತುವಿನ ಅರಿವಿನ ಅಂಶವನ್ನು ಉಗಮಿಸುವ ಚಟುವಟಿಕೆಯಾಗಿದೆ, ಮತ್ತು ಅರಿವು ಒಂದು ವಸ್ತುವಿನೊಂದಿಗೆ, ಒಂದು ರೀತಿಯಲ್ಲಿ ಪ್ರಜ್ಞೆಯಿಂದ, ಏಕಕಾಲಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಹೀಗಾಗಿ, ಸ್ಪಷ್ಟತೆ ಮತ್ತು ಅರಿವು ಒಂದೇ ಮಾನಸಿಕ ಪ್ರಕ್ರಿಯೆಯನ್ನು ವಿವರಿಸುತ್ತವೆ.

ಭಾವನೆಯೊಂದಿಗೆ ಮನಸ್ಸು ಹೇಗೆ ಅರಿವನ್ನು ಹುಟ್ಟುಹಾಕುತ್ತದೆ ಎಂಬುದರ ಪ್ರಸ್ತುತಿಗಳನ್ನು ಪೂರ್ಣಗೊಳಿಸಲು ಎಲ್ಲಾ ಬೌದ್ಧ ಮತ್ತು ಬೌದ್ಧೇತರ ವ್ಯವಸ್ಥೆಗಳು, ಆತ್ಮದ ಪಾತ್ರವನ್ನು ಬಳಸುತ್ತಾರೆ. ಆದರೆ ಆತ್ಮ, ಮತ್ತು ಮನಸ್ಸು ಮತ್ತು ಭಾವನೆಯೊಂದಿಗಿನ ಅದರ ವ್ಯವಹಾರಗಳ ಬಗೆಗಿನ ಈ ವ್ಯವಸ್ಥೆಗಳಲ್ಲಿನ ವ್ಯತಿರಿಕ್ತ ದೃಷ್ಟಿಕೋನಗಳನ್ನು ಹೊರತುಪಡಿಸಿದರೆ, ಈ ವಿಭಿನ್ನ ದೃಷ್ಟಿಕೋನಗಳಲ್ಲಿ ಸಾಮ್ಯತೆಯಿರುವ ವಿಷಯವೆಂದರೆ, ಭಾವನಾತ್ಮಕ ನೈರ್ಮಲ್ಯದ ಉದ್ದೇಶಗಳಿಗಾಗಿ, ಭಾವನೆಯೊಂದಿಗಿನ ಅರಿವು, ವಸ್ತುಗಳ ವ್ಯಕ್ತಿನಿಷ್ಠ ಅನುಭವವನ್ನು ಸೂಚಿಸುತ್ತದೆ. ಸರಳವಾದ ಅಭ್ಯಾಸಗಳೊಂದಿಗೆ, ಈ ವ್ಯಾಖ್ಯಾನವು ಏನನ್ನು ಸೂಚಿಸುತ್ತದೆ ಎಂಬುದನ್ನು ಜನರು ಗುರುತಿಸಬಹುದು. 

ಮುಂದಿನ ಹೆಜ್ಜೆಯೆಂದರೆ ಈ ಸಾಮ್ಯತೆಯ ಆಧಾರದ ಮೇಲೆ, ಮನಸ್ಸು ಮತ್ತು ಭಾವನೆಗಳ ನಕ್ಷೆಯೊಂದನ್ನು ರಚಿಸುವುದು. ಒಂದು ಸಾಮಾನ್ಯವಾದ ನಕ್ಷೆಯು ಪ್ರಜ್ಞೆಯ ಪ್ರಕಾರಗಳನ್ನು ಒಳಗೊಂಡಿರಬೇಕು - ಸಂವೇದನಾ ಮತ್ತು ಮಾನಸಿಕ - ಮತ್ತು ಮೂಲಭೂತ ಮಾನಸಿಕ ಅಂಶಗಳಾದ ಆಸಕ್ತಿ, ಗಮನ, ಏಕಾಗ್ರತೆ, ಸಂತೋಷ ಅಥವಾ ಅತೃಪ್ತಿಯ ಭಾವನೆಯ ಮಟ್ಟಗಳು ಇತ್ಯಾದಿ. ಪ್ರೀತಿಯಿಂದ ಹಿಡಿದು ಕೋಪದವರೆಗಿನ ವಿವಿಧ ಭಾವನೆಗಳು ಮತ್ತು ಅವು ನಮ್ಮ ಆಲೋಚನೆ, ಮಾತನಾಡುವ ಮತ್ತು ನಡವಳಿಕೆಯ ವಿಧಾನಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಸಹ ಅಗತ್ಯವಿದೆ. ಎಲ್ಲಾ ಪ್ರಾಚೀನ ಭಾರತೀಯ ವ್ಯವಸ್ಥೆಗಳಲ್ಲಿ ಸಾಮಾನ್ಯವಾಗಿ ಪ್ರತಿಪಾದಿತವಾಗುವ ಮೂಲಭೂತ ಮಾನಸಿಕ ಅಂಶಗಳ ಮತ್ತು ಭಾವನೆಗಳ ಪಟ್ಟಿಯನ್ನು ಮಾಡಲು ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಅವೆಲ್ಲವೂ ತೊಂದರೆ ಉಂಟುಮಾಡುವುದರ  ಮುಖ್ಯ ಕಾರಣಗಳು ಹಾತೊರೆಯುವ ಬಯಕೆ, ಕೋಪ ಮತ್ತು ಅಜ್ಞಾನ ಎಂದು ಗುರುತಿಸುತ್ತವೆ. 

ಮುಂದಿನ ಹೆಜ್ಜೆ ಪರಿಕಲ್ಪನಾರಹಿತ ಮತ್ತು ಪರಿಕಲ್ಪನಾ ಅರಿವು ಹೇಗೆ ಕೆಲಸ ಮಾಡುತ್ತದೆ ಎಂಬುದರ ಪ್ರಸ್ತುತಿಯಾಗಿರುತ್ತದೆ, ಮತ್ತು ಇದು ಇವೆರಡರಲ್ಲೂ ಕಾಣಬಹುದಾದ ವಸ್ತುಗಳ ಪ್ರಕಾರಗಳ ಚರ್ಚೆಯನ್ನು ಒಳಗೊಂಡಿರುತ್ತದೆ. ಈ ಪ್ರಸ್ತುತಿಯಲ್ಲಿ ಅನೇಕ ಮಾನ್ಯ ಮತ್ತು ಅಮಾನ್ಯ ವಸ್ತುಗಳನ್ನು ತಿಳಿದುಕೊಳ್ಳುವ ವಿಧಾನಗಳನ್ನು ಪರಿಚಯಿಸುವ ಮೂಲಕ ವಿಸ್ತರಿಸಬಹುದು, ವಿಶೇಷವಾಗಿ ಸ್ಪಷ್ಟವಾದ ಅರಿವು ಮತ್ತು ತೀರ್ಮಾನದ ಬಗ್ಗೆ. ತೀರ್ಮಾನದ ಬಗ್ಗೆಯ ಮಾತುಕತೆಯು ಸಹಜವಾಗಿ, ಚರ್ಚೆಯ ಮತ್ತು ಮಾನ್ಯ ಮತ್ತು ಅಮಾನ್ಯವಾದ ವಿಧಾನಗಳ ಪ್ರಸ್ತುತಿಗೆ ಕಾರಣವಾಗುತ್ತದೆ. ಅಂತಿಮವಾಗಿ, ಈ ಸಾಮಾನ್ಯವಾದ ಅಧ್ಯಯನಕ್ಕೆ ಪೂರಕವಾಗಿ, ಏಕಾಗ್ರತೆ ಮತ್ತು ಒಳನೋಟವನ್ನು ಅಭಿವೃದ್ಧಿಪಡಿಸುವ ಮೂಲ ಧ್ಯಾನದ ವಿಧಾನಗಳನ್ನು ಪರಿಚಯಿಸಬಹುದು.

ಎಲ್ಲಾ ಪ್ರಾಚೀನ ಭಾರತೀಯ ವ್ಯವಸ್ಥೆಗಳು ಸಾಮಾನ್ಯವಾಗಿ ಹಂಚಿಕೊಂಡಿರುವ ಭಾವನಾತ್ಮಕ ನೈರ್ಮಲ್ಯದ ಪರಿಕರಗಳ ಈ ಸಾಮಾನ್ಯ ಸಮೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ಯೋಗ್ಯತೆ, ಸಾಮರ್ಥ್ಯ ಮತ್ತು ಆಸಕ್ತಿಗಳ ಮೇರೆಗೆ, ಪ್ರತಿಯೊಂದು ವ್ಯವಸ್ಥೆಗಳನ್ನು ಒಂದೊಂದಾಗಿ ಆಳವಾಗಿ ಅಧ್ಯಯನ ಮಾಡಬಹುದು ಅಥವಾ ಒಂದೇ ವ್ಯವಸ್ಥೆಯಲ್ಲಿ ಪರಿಣತಿ ಪಡೆಯಬಹುದು. ಆದರೆ ತರಬೇತಿಯ ಎಲ್ಲಾ ಹಂತಗಳಲ್ಲಿ, ಪ್ರತಿಯೊಂದು ಹೆಜ್ಜೆಯಲ್ಲಿ, ಅವರು ಕಲಿಯುತ್ತಿರುವುದನ್ನು ಗುರುತಿಸಲು ಮತ್ತು ಅನ್ವಯಿಸಲು, ಅವರ ದೈನಂದಿನ ಜೀವನದಿಂದ ಉದಾಹರಣೆಗಳನ್ನು ಬಳಸುವಂತೆ ಅಭ್ಯಾಸಗಳನ್ನು ನೀಡಬಹುದು. ನಮ್ಮ studybuddhism.com ವೆಬ್‌ಸೈಟ್‌ನಲ್ಲಿ, ನಮ್ಮ ಬರ್ಜಿನ್ ಆರ್ಕೈವ್ಸ್ ತಂಡವು ಈಗಾಗಲೇ ಇಂತಹ ಹಲವು ಅಭ್ಯಾಸಗಳನ್ನು ಅಭಿವೃದ್ಧಿಪಡಿಸಿದೆ. 

ಇಲ್ಲಿ ವಿವರಿಸಿದ ತರಬೇತಿ ಕಾರ್ಯಕ್ರಮಗಳು, ಭಾವನಾತ್ಮಕ ನೈರ್ಮಲ್ಯದ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಪರಮಪೂಜ್ಯರ ಬದ್ಧತೆಯನ್ನು ಪೂರೈಸುವಲ್ಲಿ ಬಹಳ ದೂರ ಸಾಗಬಹುದು. ಪರಮಪೂಜ್ಯರು ಆಗಾಗ್ಗೆ ಹೇಳುವಂತೆ, “ಮನುಷ್ಯರಾದ ನಾವು ಬುದ್ಧಿವಂತರಾಗಿದ್ದೇವೆ ಮತ್ತು ವಿಷಯಗಳನ್ನು ಯೋಚಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಸಂತೋಷವನ್ನು ಬೆಳೆಸಲು ಮತ್ತು ದುಃಖವನ್ನು ಕಡಿಮೆ ಮಾಡಲು, ನಾವು ಯೋಚಿಸುವ ರೀತಿಯನ್ನು ಬದಲಾಯಿಸಲು ನಾವು ನಮ್ಮ ಮನಸ್ಸನ್ನು ಬಳಸಬಹುದು.” ಧನ್ಯವಾದಗಳು.

Top