ಪವಿತ್ರ ದಲೈ ಲಾಮಾ ಅವರಿಂದ ವೆಸಕ್ ಸಂದೇಶ

Study buddhism life of buddha

ಪ್ರಪಂಚದಾದ್ಯಂತ ವೆಸಕ್ (ಬುದ್ಧ ಪೂರ್ಣಿಮಾ) ಆಚರಿಸುತ್ತಿರುವ ನನ್ನ ಬೌದ್ಧ ಸಹೋದರ ಸಹೋದರಿಯರಿಗೆ ಶುಭಾಶಯಗಳನ್ನು ನೀಡಲು ನಾನು ಬಹಳಾ ಸಂತೋಷಪಡುತ್ತೇನೆ.

ಶಾಕ್ಯಮುನಿ ಬುದ್ಧ ಲುಂಬಿನಿಯಲ್ಲಿ ಜನಿಸಿ, ಬೋಧಗಯಾದಲ್ಲಿ ಜ್ಞಾನೋದಯವನ್ನು ಪಡೆದು, 2600 ವರ್ಷಗಳ ಹಿಂದೆ ಕುಶಿನಗರದಲ್ಲಿ ನಿಧನರಾದರೂ, ಅವರ ಬೋಧನೆಯು ಸಾರ್ವತ್ರಿಕವಾಗಿದ್ದು, ಪ್ರಸ್ತುತವಾಗಿಯೂ ಅನ್ವಯವಾಗುತ್ತದೆ ಎಂದು ನಾನು ನಂಬುತ್ತೇನೆ. ಇತರರಿಗೆ ಸಹಾಯ ಮಾಡುವ ಆಳವಾದ ಕಾಳಜಿಯಿಂದ ಪ್ರೇರೇಪಿಸಲ್ಪಟ್ಟ ಬುದ್ಧ, ತಮ್ಮ ಜ್ಞಾನೋದಯದ ನಂತರ ತಮ್ಮ ಉಳಿದ ಜೀವಕಾಲವನ್ನು ಸನ್ಯಾಸಿಯಾಗಿ ಕಳೆದರು, ತಮ್ಮ ಅನುಭವವನ್ನು ಕೇಳಲು ಬಯಸುವ ಪ್ರತಿಯೊಬ್ಬರೊಂದಿಗೆ ಹಂಚಿಕೊಂಡರು. ಅವಲಂಬಿಕೆಯ ಬಗ್ಗೆಯ ಅವರ ದೃಷ್ಟಿಕೋನ ಮತ್ತು ಯಾರಿಗೂ ಹಾನಿ ಮಾಡದಿರುವ, ಆದರೆ ಕೈಲಾದಷ್ಟು ಸಹಾಯ ಮಾಡುವ ಅವರ ಸಲಹೆಗಳೆರಡೂ, ಅಹಿಂಸಾಚರಣೆಯನ್ನು ಎತ್ತಿ ಹಿಡಿಯುತ್ತವೆ. ಇವು, ಇಂದಿನ ಜಗತ್ತಿನ ಒಳಿತಿಗಾಗಿರುವ ಅತ್ಯಂತ ಮಹತ್ವದ ಶಕ್ತಿಗಳಲ್ಲಿ ಒಂದಾಗಿವೆ; ಏಕೆಂದರೆ ಸಹಾನುಭೂತಿಯಿಂದ ಪ್ರೇರೇಪಿಸಲ್ಪಟ್ಟ ಅಹಿಂಸೆಯು, ನಮ್ಮ ಸಹ ಜೀವಿಗಳಿಗೆ ಸೇವೆ ಸಲ್ಲಿಸುವುದಾಗಿದೆ. 

ಪರಸ್ಪರ ಅವಲಂಬಿಕೆಯು ಹೆಚ್ಚುತ್ತಿರುವ ಜಗತ್ತಿನಲ್ಲಿ, ನಮ್ಮ ಸ್ವಂತ ಕಲ್ಯಾಣ ಮತ್ತು ಸಂತೋಷವು ಇತರ ಅನೇಕ ಜನರ ಮೇಲೆ ಅವಲಂಬಿತವಾಗಿದೆ. ಇಂದಿನ ಸವಾಲುಗಳನ್ನು ಎದುರಿಸಲು, ಮಾನವೀಯತೆಯ ಏಕತೆಯನ್ನು ಒಪ್ಪಿಕೊಳ್ಳುವುದು ಅವಶ್ಯಕವಾಗಿದೆ. ನಮ್ಮ ನಡುವಿನ ಬಾಹ್ಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಜನರು ಶಾಂತಿ ಮತ್ತು ಸಂತೋಷದ ಮೂಲಭೂತ ಆಶಯದಲ್ಲಿ ಸಮಾನರಾಗಿದ್ದಾರೆ. ಬೌದ್ಧ ಆಚರಣೆಯ ಒಂದು ಭಾಗವು ಧ್ಯಾನದ ಮೂಲಕ ನಮ್ಮ ಮನಸ್ಸನ್ನು ತರಬೇತಿಗೊಳಿಸುವುದಾಗಿದೆ. ನಮ್ಮ ಮನಸ್ಸನ್ನು ಶಾಂತಗೊಳಿಸುವ ನಮ್ಮ ತರಬೇತಿಯು, ಜೊತೆಗೆ ಪ್ರೀತಿ, ಸಹಾನುಭೂತಿ, ಔದಾರ್ಯ ಮತ್ತು ತಾಳ್ಮೆಯಂತಹ ಗುಣಗಳನ್ನು ಬೆಳೆಸಿಕೊಳ್ಳಲು, ಅವುಗಳು ಪರಿಣಾಮಕಾರಿಯಾಗಿರಲು, ನಾವು ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಇತ್ತೀಚಿನವರೆಗೂ, ಪ್ರಪಂಚದ ವೈವಿಧ್ಯಮಯ ಬೌದ್ಧ ಸಮುದಾಯಗಳಿಗೆ ಪರಸ್ಪರರ ಅಸ್ತಿತ್ವದ ಬಗ್ಗೆ ಹೆಚ್ಚಾದ ತಿಳುವಳಿಕೆಯಿಲ್ಲದೆ, ನಮ್ಮಲ್ಲಿರುವ ಸಮಾನತೆಯನ್ನು ಪ್ರಶಂಸಿಸಲು ಯಾವುದೇ ಅವಕಾಶವಿರಲಿಲ್ಲ. ಇಂದು, ವಿವಿಧ ದೇಶಗಳಲ್ಲಿ ವಿಕಸನಗೊಂಡ ಬೌದ್ಧ ಸಂಪ್ರದಾಯಗಳ ಸಂಪೂರ್ಣ ರಚನೆಯು, ಆಸಕ್ತಿಯುಳ್ಳವರೆಲ್ಲರಿಗೂ ಲಭ್ಯವಿದೆ. ಇದಕ್ಕಿಂತ ಹೆಚ್ಚಾಗಿ, ಈ ವಿವಿಧ ಬೌದ್ಧ ಸಂಪ್ರದಾಯಗಳನ್ನು ಆಚರಿಸುವ ಮತ್ತು ಕಲಿಸುವ ನಮ್ಮಂತಹವರು, ಈಗ ಒಬ್ಬರನ್ನೊಬ್ಬರನ್ನು ಭೇಟಿಮಾಡಬಹುದು ಮತ್ತು ಕಲಿಯಬಹುದು. 

ಟಿಬೆಟಿನ ಬೌದ್ಧ ಸನ್ಯಾಸಿಯಾಗಿ, ನಾನು ನನ್ನನ್ನು ನಳಂದಾ ಸಂಪ್ರದಾಯದ ಒಬ್ಬ ಉತ್ತರಾಧಿಕಾರಿ ಎಂದು ಪರಿಗಣಿಸುತ್ತೇನೆ. ತರ್ಕ ಮತ್ತು ತರ್ಕಶಾಸ್ತ್ರದಲ್ಲಿ ಬೇರೂರಿರುವ ನಳಂದ ವಿಶ್ವವಿದ್ಯಾಲಯದಲ್ಲಿ, ಬೌದ್ಧಧರ್ಮವನ್ನು ಕಲಿಸಿದ ಮತ್ತು ಅಧ್ಯಯನ ಮಾಡಿದ ರೀತಿಯು, ಭಾರತದಲ್ಲಿ ಅದರ ಉತ್ತುಂಗದ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ನಾವು 21 ನೇ ಶತಮಾನದ ಬೌದ್ಧರಾಗಬೇಕಿದ್ದರೆ, ಕೇವಲ ನಂಬಿಕೆಯ ಮೇಲೆ ಅವಲಂಬಿತರಾಗದೆ, ಬುದ್ಧನ ಬೋಧನೆಗಳ ಅಧ್ಯಯನ ಮತ್ತು ವಿಶ್ಲೇಷಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಬಹಳ ಮುಖ್ಯ. 

ಬುದ್ಧನ ಕಾಲದಿಂದ ಜಗತ್ತು ಗಣನೀಯವಾಗಿ ಬದಲಾಗಿದೆ. ಆಧುನಿಕ ವಿಜ್ಞಾನವು, ಭೌತಿಕ ಕ್ಷೇತ್ರದ ಅತ್ಯಾಧುನಿಕ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಿದೆ. ಮತ್ತೊಂದೆಡೆ ಆಧುನಿಕ ವಿಜ್ಞಾನಕ್ಕೆ ಇನ್ನೂ ಹೊಸ ವಿಷಯಗಳಾದ ಮನಸ್ಸು ಮತ್ತು ಭಾವನೆಗಳ ಕಾರ್ಯನಿರ್ವಹಣೆಯ ಬಗ್ಗೆ ಬೌದ್ಧ ವಿಜ್ಞಾನವು ವಿವರವಾದ, ವೈಯಕ್ತಿಕ ತಿಳುವಳಿಕೆಯನ್ನು ಸಾಧಿಸಿದೆ. ಆದ್ದರಿಂದ ಪ್ರತಿಯೊಂದೂ ಸಹ ನಿರ್ಣಾಯಕ ಜ್ಞಾನವನ್ನು ಹೊಂದಿದ್ದು ಅದು ಇನ್ನೊಂದಕ್ಕೆ ಪೂರಕವಾಗಿರುತ್ತದೆ. ಈ ಎರಡು ವಿಧಾನಗಳನ್ನು ಸಂಯೋಜಿಸುವುದರಿಂದ ನಮ್ಮ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಉತ್ಕೃಷ್ಟಗೊಳಿಸುವ ಆವಿಷ್ಕಾರಗಳಿಗೆ ಕಾರಣವಾಗಬಹುದು ಎಂದು ನಾನು ನಂಬುತ್ತೇನೆ. 

ಬೌದ್ಧರಾದ ನಾವು ಬುದ್ಧನ ಬೋಧನೆಯನ್ನು ಎತ್ತಿಹಿಡಿಯುವವರಾಗಿದ್ದೇವೆ, ಆದರೆ ಅವರ ಸಂದೇಶವು ಉಳಿದ ಮಾನವೀಯತೆಯೊಂದಿಗಿನ ನಮ್ಮ ವಿಶಾಲವಾದ ಸಂವಹನದಲ್ಲಿಯೂ ಪ್ರಸ್ತುತವಾಗಿರುತ್ತದೆ. ಎಲ್ಲಾ ಧರ್ಮಗಳು, ಎಲ್ಲಾ ಜನರ ಸಂತೋಷವನ್ನು ಪ್ರತಿಪಾದಿಸುತ್ತವೆ ಎಂಬ ಅಂಶವನ್ನು ಆಧಾರವಾಗಿಟ್ಟುಕೊಂಡು, ನಾವು ಅಂತರ್-ಧರ್ಮೀಯ ತಿಳುವಳಿಕೆಯನ್ನು ಉತ್ತೇಜಿಸಬೇಕಾಗಿದೆ. ಅಲ್ಲದೆ, ಜಗತ್ತನ್ನು ಕಾಡುತ್ತಿರುವ ಈ ಭೀಕರ  ದುರಂತದ ಸಮಯದಲ್ಲಿ,  ನಮ್ಮ ಆರೋಗ್ಯಕ್ಕೆ ಬೆದರಿಕೆಗಳನ್ನು ಎದುರಿಸುತ್ತಿರುವಾಗ ಮತ್ತು ನಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರು ನಮ್ಮನ್ನು ಅಗಲಿದ ದುಃಖದಲ್ಲಿರುವಾಗ, ನಮ್ಮೆಲ್ಲರನ್ನು ಒಂದೇ ಮಾನವ ಕುಟುಂಬದ ಸದಸ್ಯರಾಗಿ ಒಗ್ಗೂಡಿಸುವ ಬಗ್ಗೆ ಗಮನಹರಿಸಬೇಕು. ಅಂತೆಯೇ, ನಾವು ಒಬ್ಬರಿಗೊಬ್ಬರು ಸಹಾನುಭೂತಿಯಿಂದ ಕೈಚಾಚಬೇಕು, ಏಕೆಂದರೆ ಸಂಘಟಿತವಾದ, ಜಾಗತಿಕ ಪ್ರಯತ್ನದಲ್ಲಿ ಒಟ್ಟುಗೂಡುವ ಮೂಲಕ ಮಾತ್ರ ನಾವು ಅಭೂತಪೂರ್ವ ಸವಾಲುಗಳನ್ನು ಎದುರಿಸಬಹುದಾಗಿದೆ.

ದಲೈ ಲಾಮಾ, 7 ಮೇ 2020

Top