What is love zach lucero unsplash

ಇತರರು ಸಂತೋಷವಾಗಿರುವಂತೆ ಮತ್ತು ಸಂತೋಷವಾಗಿರಲು ಕಾರಣಗಳನ್ನು ಪಡೆಯುವಂತೆ ಬಯಸುವುದೇ ಪ್ರೀತಿ. ಪ್ರತಿಯೊಬ್ಬರೂ ಸಂತೋಷವಾಗಿರುವ ಬಯಕೆಯಲ್ಲಿ ಸಮಾನರಾಗಿರುತ್ತಾರೆ ಎಂಬ ತಿಳುವಳಿಕೆಯ ಆಧಾರದ ಮೇಲೆ ಇದು ಸಾರ್ವತ್ರಿಕವಾಗಿದೆ ಮತ್ತು ಬೇಷರತ್ತಾಗಿದೆ. ಇದು ಇತರರ ಅಗತ್ಯಗಳಿಗೆ ಸಂವೇದನಾಶೀಲವಾಗಿರುವ ಗುಣ ಮತ್ತು ಅವರ ಸಂತೋಷಕ್ಕಾಗಿ ಕಾರಣರಾಗುವ ಇಚ್ಛೆಯನ್ನೂ ಒಳಗೊಂಡಿದೆ. ಒಬ್ಬರೊಂದಿಗಿನ ಸಂಬಂಧವನ್ನು ಮತ್ತು ಅವರ ಕಾರ್ಯಗಳನ್ನು ಲೆಕ್ಕಿಸದೆ, ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ, ಇದನ್ನು ಎಲ್ಲರಿಗೂ ಸಮಾನವಾಗಿ ವಿಸ್ತರಿಸಬಹುದು. ಬೌದ್ಧಧರ್ಮದಲ್ಲಿ, ಪ್ರೀತಿಯೇ ಸಂತೋಷದ ದೊಡ್ಡ ಮೂಲವಾಗಿದೆ. 

ಪ್ರೀತಿ ಮತ್ತು ಬಾಂಧವ್ಯದ ನಡುವಿನ ವ್ಯತ್ಯಾಸ 

ಪ್ರೀತಿಯು ಹೆಚ್ಚಾಗಿ ಇತರ ಭಾವನೆಗಳ ಜೊತೆಗೂಡುತ್ತದೆ. ಅನುಚಿತ ಬಾಂಧವ್ಯದೊಂದಿಗೆ, ನಾವು ಒಬ್ಬರಲ್ಲಿರುವ ಉತ್ತಮ ಗುಣಗಳನ್ನು ಉತ್ಪ್ರೇಕ್ಷಿಸುತ್ತೇವೆ - ಅವು ನಿಜವಾಗಿರಬಹುದು ಅಥವಾ ಕಾಲ್ಪನಿಕವಾಗಿರಬಹುದು - ಮತ್ತು ಅವರ ನ್ಯೂನತೆಗಳನ್ನು ನಿರಾಕರಿಸುತ್ತೇವೆ. ನಾವು ಅವರಿಗೆ ಅಂಟಿಕೊಳ್ಳುತ್ತೇವೆ ಮತ್ತು ಅವರು ನಮ್ಮತ್ತ ಗಮನ ಹರಿಸದಿದ್ದಾಗ ಅಸಮಾಧಾನಗೊಂಡು, “ನಾನು ನಿನ್ನನ್ನು ಪ್ರೀತಿಸುತ್ತೇನೆ; ನನ್ನನ್ನು ಎಂದಿಗೂ ಬಿಡಬೇಡ; ನೀನಿಲ್ಲದೆ ನಾನು ಬದುಕಲಾರೆ." ಎಂದು ಯೋಚಿಸುತ್ತೇವೆ.

ನಾವು ಅವುಗಳನ್ನು ಇಷ್ಟಪಡಲಿ ಅಥವಾ ಇಲ್ಲದೆ ಇರಲಿ, ಆದರೂ ನಿಷ್ಪಕ್ಷಪಾತವಾಗಿ ಎಲ್ಲಾ ಜೀವಿಗಳ ಸಂತೋಷವನ್ನು ಕಾಪಾಡಿಕೊಳ್ಳಬೇಕೆಂಬ ಬಯಕೆಯೇ ನಿಜವಾದ ಪ್ರೀತಿ. - ಯೋಂಗ್ಜಿನ್ ಲಿಂಗ್ ರಿಂಪೋಚೆ 

ಬೌದ್ಧಧರ್ಮದಲ್ಲಿ ಪ್ರೀತಿಯೆಂದರೆ ಇತರರೊಂದಿಗೆ ನಿಕಟತೆಯ ಭಾವನೆಯನ್ನು ಹೊಂದಿರುವುದು, ಆದರೆ ಅದು ಅವರು ಪ್ರತಿಯಾಗಿ ನಮ್ಮನ್ನು ಪ್ರೀತಿಸುತ್ತಾರೆಯೇ ಮತ್ತು ಕಾಳಜಿ ವಹಿಸುತ್ತಾರೆಯೇ ಎಂಬುದನ್ನು ಆಧರಿಸಿಲ್ಲವಾದ್ದರಿಂದ, ಅದು ಯಾರ ಮೇಲೂ ಅವಲಂಬಿತವಾಗಿರುವುದಿಲ್ಲ. ಬಾಂಧವ್ಯ ಮತ್ತು ಅವಲಂಬನೆಯಿಂದ ಕಲುಷಿತಗೊಂಡ ಪ್ರೀತಿಯು ಅಸ್ಥಿರವಾಗಿರುತ್ತದೆ. ನಾವು ಪ್ರೀತಿಸುವ ವ್ಯಕ್ತಿಯು ನಮಗೆ ನೋವುಂಟುಮಾಡಿದರೆ, ನಾವು ಅವರನ್ನು ನಂತರ ಪ್ರೀತಿಸುವುದಿಲ್ಲ. ಎಷ್ಟೊಂದು ಮದುವೆಗಳು ಪ್ರೀತಿಯಿಂದ ಪ್ರಾರಂಭವಾಗಿ, ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ! ನಾವು ನಿರೀಕ್ಷೆಗಳಿಂದ ಮುಕ್ತರಾದಾಗ, ನಮ್ಮನ್ನು ಪ್ರೀತಿಯಿಂದ ದೂರವಿಡಲಾಗುವುದಿಲ್ಲ. ತಮ್ಮ ತುಂಟ ಮಗುವನ್ನು ಎಂದೆಂದೂ ಪ್ರೀತಿಸುವ ಮತ್ತು ಯಾವಾಗಲೂ ಒಳ್ಳೆಯದನ್ನೇ ಬಯಸುವ ಪೋಷಕರಂತೆ, ನಾವು ಕೂಡ ಸ್ಥಿರವಾದ ಪ್ರೀತಿಯನ್ನು ಬೆಳೆಸಿಕೊಳ್ಳುವುದರಿಂದ, ನಾವು ಎಲ್ಲಾ ರೀತಿಯ ಸವಾಲೊಡ್ಡುವ ಜನರೊಂದಿಗೆ ವ್ಯವಹರಿಸಬಹುದಾಗಿದೆ. ಇದಕ್ಕಾಗಿ ತರಬೇತಿಯ ಅಗತ್ಯವಿದೆ, ಆದರೆ ನಮ್ಮೆಲ್ಲರಲ್ಲೂ ಈ ಸಾಮರ್ಥ್ಯವಿದೆ. 

ಸ್ವಯಂ ಪ್ರೀತಿ 

ಸಾಮಾನ್ಯವಾಗಿ ಸಾರ್ವತ್ರಿಕ ಪ್ರೀತಿಯು ಕಡೆಗಣಿಸುವ ಅಂಶವೆಂದರೆ: ನಾವು ನಮ್ಮನ್ನು ಪ್ರೀತಿಸಬೇಕು - ಸ್ವಯಂಕೇಂದ್ರಿತ, ಸ್ವಾರ್ಥ ರೀತಿಯಲ್ಲಿ ಅಲ್ಲ, ಬದಲಿಗೆ ನಮ್ಮ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಒಳಿತಿಗಾಗಿ ಪ್ರಾಮಾಣಿಕವಾದ ಕಾಳಜಿಯಿರಬೇಕು. ನಮ್ಮ ವ್ಯಕ್ತಿತ್ವದ ಕೆಲವು ಸ್ವಯಂ-ವಿನಾಶಕಾರಿ ಅಂಶಗಳನ್ನು ನಾವು ಇಷ್ಟಪಡದಿರಬಹುದು, ಆದರೆ ಇದರಿಂದ ನಾವು ಪ್ರೀತಿಗೆ ವಿರುದ್ಧವಾಗಿ ಅತೃಪ್ತರಾಗಿರಲು ಬಯಸುವುದಿಲ್ಲ. ಸಹಜವಾಗಿ, ನಾವು ಸಂತೋಷವಾಗಿರಲು ಬಯಸುತ್ತೇವೆ. 

ನಾವು ಪ್ರೀತಿಯನ್ನು ನಮ್ಮೆಡೆಗೆ ನಿರ್ದೇಶಿಸಿದಾಗ, ಅದು ಕೇವಲ ಆನಂದ ಮತ್ತು ಮನರಂಜನೆಗಾಗಿ ನಮ್ಮ ಪ್ರಕ್ಷುಬ್ಧ ಬಯಕೆಯನ್ನು ಪೂರೈಸಲು ಆಗಿರುವುದಿಲ್ಲ. ಅಂತಹ ವಿಷಯಗಳಿಂದ ನಾವು ಪಡೆಯುವ ಸಂತೋಷವು ಚಿಕ್ಕದಾಗಿದ್ದು, ಅಲ್ಪಾವಧಿಯಾಗಿದ್ದು, ನಾವು ಅವುಗಳನ್ನು ಇನ್ನೂ ಹೆಚ್ಚಾಗಿ ಬಯಸುತ್ತೇವೆ. ನಾವು ನಿಜವಾಗಿಯೂ ನಮ್ಮನ್ನು ಪ್ರೀತಿಸಿದರೆ, ನಾವು ನಿಜವಾದ, ಶಾಶ್ವತವಾದ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ, ಕೇವಲ ತಾತ್ಕಾಲಿಕ ಆನಂದವಲ್ಲ. ನಾವು ನಮ್ಮನ್ನು ನಿಜವಾಗಿ ಪ್ರೀತಿಸಿದಾಗ ಮಾತ್ರ ಬೇರೆಯವರನ್ನು ನಿಜವಾಗಿಯೂ ಪ್ರೀತಿಸಬಹುದು.

Top