ಪ್ರಾಮಾಣಿಕತೆ, ವಿಶ್ವಾಸ ಮತ್ತು ಗೆಳೆತನ

Study buddhism dalai lama oa

ಸಂತೋಷ ಎಂದರೇನು

ಪ್ರತಿಯೊಬ್ಬರೂ ಸಂತೋಷವಾಗಿರುವ ಜೀವನವನ್ನು ಬಯಸುತ್ತಾರೆ, ಹಾಗಾದರೆ ಉದ್ಭಿವಿಸುವ ಪ್ರಶ್ನೆಯಿದು, ಸಂತೋಷ ಎಂದರೇನು? ನಿಜವಾದ ದೀರ್ಘಾವಧಿಯ, ವಿಶ್ವಾಸಾರ್ಹ ಸಂತೋಷ ಎಂದರೇನು? ನಾವು ಇದರ ಬಗ್ಗೆ ಸಾಕಷ್ಟು ಆಳವಾಗಿ ನೋಡಬೇಕಾಗಿದೆ. ಹೆಚ್ಚಾಗಿ ನಮ್ಮ ಪಂಚೇದ್ರಿಯಗಳ ಮೂಲಕ ದೊರೆಯುವ ಆನಂದ ಅಥವಾ ಸಂತೋಷ - ಒಳ್ಳೆಯದನ್ನು ನೋಡುವುದು, ಒಳ್ಳೆಯದನ್ನು ಕೇಳುವುದು, ಒಳ್ಳೆಯ ಅಭಿರುಚಿಗಳು ಅಥವಾ ವಾಸನೆಗಳಂತಹ ಅನುಭವಗಳು – ಸ್ವಲ್ಪ ಮಟ್ಟಿಗೆ ತೃಪ್ತಿಯನ್ನು ನೀಡುತ್ತವೆ ಹೌದು. ಆದರೆ ಈ ಇಂದ್ರಿಯಗಳ ಅನುಭವಗಳನ್ನು ಆಧರಿಸಿದ ಆನಂದವು ಬಹಳ ಬಾಹ್ಯರೂಪದ್ದು. ಕೆಲವು ಸೌಲಭ್ಯಗಳು ಇದ್ದಾಕ್ಷಣ, ನೀವು ಹಲವು ರೀತಿಯ ಆನಂದ ಅಥವಾ ಸಂತೋಷ ಅಥವಾ ಉತ್ಸಾಹವನ್ನು ಪಡೆಯುತ್ತೀರಿ, ಆದರೆ ಯಾವುದೇ ರೀತಿಯ ದೊಡ್ಡ ಗೊಂದಲದ ಸದ್ದು ಬಂದಾಕ್ಷಣ, ಆನಂದ ಕಣ್ಮರೆಯಾಗುತ್ತದೆ. ದೂರದರ್ಶನವನ್ನು ವೀಕ್ಷಿಸುವುದರಿಂದ ಒಂದು ರೀತಿಯ ಆನಂದವನ್ನು ದೊರೆಯುವ ಜನರಿರುವರು, ಅವರು ದೂರದರ್ಶನವಿಲ್ಲದೆ ಕೇವಲ ಒಂದು ಗಂಟೆಯ ಕಾಲದಲ್ಲಿ ಬೇಸರಗೊಳ್ಳುತ್ತಾರೆ. ಕೆಲವರು ಮೋಜು ಮಸ್ತಿ ಮಾಡಲು ಮತ್ತು ಪ್ರಪಂಚದ ವಿವಿಧ ಭಾಗಗಳಿಗೆ ಪ್ರಯಾಣಿಸಲು ತುಂಬಾ ಇಷ್ಟಪಡುತ್ತಾರೆ ಮತ್ತು ನಿರಂತರವಾಗಿ ಹೊಸ ಸ್ಥಳಗಳು, ಸಂಸ್ಕೃತಿಗಳು, ಸಂಗೀತ ಮತ್ತು ಅಭಿರುಚಿಗಳನ್ನು ಅನುಭವಿಸುತ್ತಿರುತ್ತಾರೆ. ಇದು ಮಾನಸಿಕ ತರಬೇತಿಯ ಮೂಲಕ ಆಂತರಿಕ ಶಾಂತಿಯನ್ನು ಸೃಷ್ಟಿಸುವ ಸಾಮರ್ಥ್ಯದ ಕೊರತೆಯಿಂದ ಬರುತ್ತದೆ ಎಂದು ನಾನು ಭಾವಿಸುತ್ತೇನೆ.

ಆದರೆ ಸನ್ಯಾಸತ್ವದ ಜೀವನಶೈಲಿಯನ್ನು ವರ್ಷಾನುಗಟ್ಟಲೆ ಅನುಸರಿಸುವವರು, ನಿಜವಾಗಿಯೂ ಸಂತೋಷದ ಜೀವನವನ್ನು ಅನುಭವಿಸುತ್ತಾರೆ. ಬಾರ್ಸಿಲೋನಾದಲ್ಲಿ ಒಮ್ಮೆ ನಾನು ಕ್ಯಾಥೋಲಿಕ್ ಸನ್ಯಾಸಿಯೊಬ್ಬರನ್ನು ಭೇಟಿಯಾದೆ, ಅವರ ಇಂಗ್ಲಿಷ್ ನನ್ನಂತೆಯೇ ಇದ್ದ ಕಾರಣ ಅವರೊಂದಿಗೆ ಮಾತನಾಡಲು ನನಗೆ ಹೆಚ್ಚು ಧೈರ್ಯವಿತ್ತು! ಅವರು ಐದು ವರ್ಷಗಳ ಕಾಲ ಪರ್ವತಗಳಲ್ಲಿ ಸನ್ಯಾಸಿಯಾಗಿ ಕಳೆದಿದ್ದಾರೆ ಎಂದು ಸಂಘಟಕರು ನನಗೆ ತಿಳಿಸಿದರು. ಅವರು ಪರ್ವತಗಳಲ್ಲಿ ಏನು ಮಾಡಿದರೆಂದು ನಾನು ಕೇಳಿದೆ, ಅದಕ್ಕೆ ಅವರು, ನಾನು ಪ್ರೀತಿಯ ಬಗ್ಗೆ ಯೋಚಿಸಿದೆ ಅಥವಾ ಧ್ಯಾನಿಸಿದೆ ಎಂದು ಹೇಳಿದರು. ಇದನ್ನು ಪ್ರಸ್ತಾಪಿಸುವಾಗ ಅವರು ಮನಸ್ಸಿನ ಶಾಂತಿಯನ್ನು ನಿಜವಾಗಿಯೂ ಅನುಭವಿಸಿದರು ಎಂದು ಸೂಚಿಸಲು ಅವರ ಕಣ್ಣುಗಳಲ್ಲಿ ಒಂದು ವಿಶೇಷವಾದ ಅಭಿವ್ಯಕ್ತಿ ಇತ್ತು. ಹೀಗೊಂದು ಇಂದ್ರಿಯಗಳ ಅನುಭವಗಳ ಮೇಲೆ ಅವಲಂಬಿತವಾಗದೆ, ಆಳವಾದ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯುವ ಒಂದು ಉದಾಹರಣೆಯಾಗಿದೆ. ಪ್ರೀತಿಯ ಬಗ್ಗೆಯ ನಿರಂತರವಾದ ಯೋಚನೆಯ ಮೂಲಕ, ನಿಜವಾದ ಶಾಂತಿಯು ಸೃಷ್ಟಿಯಾಯಿತು.

ಈಗ ನಾನು ಭಾಷಣ ಮಾಡುವಾಗ, ಭೌತಿಕ ಸೌಕರ್ಯಗಳು ಭೌತಿಕ ಅಭಿವೃದ್ಧಿಗಾಗಿ ಬಹಳ ಅವಶ್ಯಕ, ಆದರೆ ಭೌತಿಕ ಮೌಲ್ಯವು ಎಂದೂ ಮನಸ್ಸಿಗೆ ನೆಮ್ಮದಿಯನ್ನು ನೀಡುವುದಿಲ್ಲ ಎಂದು ಯಾವಾಗಲೂ ಒತ್ತಿಹೇಳುತ್ತೇನೆ. ಕೆಲವೊಮ್ಮೆ ಜನರು ಶ್ರೀಮಂತರಾದಾಗ, ಅವರು ದುರಾಸೆಗೊಳಗಾಗಿ ಹೆಚ್ಚು ಒತ್ತಡಕ್ಕೀಡಾಗುತ್ತಾರೆ. ಇದರ ಫಲಿತಾಂಶ ಒಬ್ಬ ಅತೃಪ್ತ ವ್ಯಕ್ತಿ. ಆದ್ದರಿಂದ, ಜೀವನದಲ್ಲಿ ಸಂತೋಷವನ್ನು ಸಾಧಿಸಲು, ಕೇವಲ ಭೌತಿಕ ಮೌಲ್ಯವನ್ನು ನಂಬಬೇಡಿ. ಭೌತಿಕ ಮೌಲ್ಯಗಳು ಅವಶ್ಯಕ, ಆದರೆ ಅದರ ಜೊತೆಗೆ ನಾವು ನಮ್ಮ ಆಂತರಿಕ ಮೌಲ್ಯಗಳನ್ನೂ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು. ನಾವು ಧಾರ್ಮಿಕ ನಂಬಿಕಸ್ಥರಾಗಿರಬಹುದು, ಇಲ್ಲವಾಗಿರಬಹುದು, ಆದರೆ ಮಾನವರಾಗಿರುವವರೆಗೆ, ಆಂತರಿಕ ಶಾಂತಿ ಅತ್ಯಗತ್ಯ.

ಮನಸ್ಸಿನ ಶಾಂತಿ ಮತ್ತು ಉತ್ತಮ ಆರೋಗ್ಯ 

ಕೆಲವು ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ, ಅತಿಯಾದ ಒತ್ತಡವು ರಕ್ತದೊತ್ತಡ ಮತ್ತು ಇತರೆ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮತ್ತು ಕೆಲವು ವೈದ್ಯಕೀಯ ವಿಜ್ಞಾನಿಗಳ ಪ್ರಕಾರ ನಿರಂತರ ಭಯ, ಕೋಪ ಮತ್ತು ದ್ವೇಷವು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಆದ್ದರಿಂದ ಉತ್ತಮ ಆರೋಗ್ಯದ ಪ್ರಮುಖ ಅಂಶವೆಂದರೆ ಶಾಂತವಾದ ಮನಸ್ಸು, ಏಕೆಂದರೆ ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮನಸ್ಸಿನ ನಡುವೆ ಬಹಳ ನಿಕಟ ಸಂಬಂಧವಿದೆ. ನನ್ನ ಸ್ವಂತ ಅನುಭವದಲ್ಲಿ, ಎರಡು ವರ್ಷಗಳ ಹಿಂದೆ, ಒಂದು ರೀತಿಯ ಪತ್ರಿಕಾಗೋಷ್ಠಿಯಲ್ಲಿ, ಮಾಧ್ಯಮದವರು ನನ್ನ ಪುನರ್ಜನ್ಮದ ಬಗ್ಗೆ ಕೇಳಿದ್ದರು. ನಾನು ತಮಾಷೆಗಾಗಿ ಅವರನ್ನು ನೋಡುತ್ತಾ, ನನ್ನ ಕನ್ನಡಕವನ್ನು ತೆಗೆದು ಕೇಳಿದೆ, “ನನ್ನ ಮುಖವನ್ನು ನೋಡಿದರೆ ಎನನ್ನಿಸುವುದು, ನನ್ನ ಪುನರ್ಜನ್ಮವು ತುರ್ತು ಸಂಗತಿಯೇ, ಇಲ್ಲವೇ?!”, ಅದಕ್ಕೆ ಅವರು ಯಾವುದೇ ಆತುರವಿಲ್ಲ ಎಂದು ಹೇಳಿದರು! 

ಇತ್ತೀಚಿಗೆ ನಾನು ಯುರೋಪಿನಲ್ಲಿದ್ದಾಗ, ಕೆಲವು ದೀರ್ಘಕಾಲದ ಸ್ನೇಹಿತರೆಲ್ಲರೂ ನನ್ನ ಇಪ್ಪತ್ತು, ಮೂವತ್ತು, ನಲವತ್ತು ವರ್ಷಗಳ ಹಿಂದೆ ತೆಗೆದ ಚಿತ್ರಗಳನ್ನು ಹೋಲಿಸಿ ನನ್ನ ಮುಖ ಯುವವಯಸ್ಸಿನಲ್ಲಿದ್ದ ಹಾಗೆ ಕಾಣುತ್ತದೆ ಎಂದು ಹೇಳಿದರು. ನನ್ನ ಜೀವನದಲ್ಲಿ, ನಾನು ಸಾಕಷ್ಟು ಸಮಸ್ಯೆಗಳಿರುವ ಕಠಿಣ ಸಮಯಗಳನ್ನು ದಾಟಿದ್ದೇನೆ ಮತ್ತು ಆತಂಕ, ಖಿನ್ನತೆ ಮತ್ತು ಒಂಟಿತನವನ್ನು ಸೃಷ್ಟಿಸಲು ಸಾಕಷ್ಟು ಅವಕಾಶಗಳಿರುವುದನ್ನು ನೀವು ಕಾಣಬಹುದು. ಆದರೆ ನನ್ನ ಮನಸ್ಸು ತುಲನಾತ್ಮಕವಾಗಿ ಶಾಂತಿಯುತವಾಗಿದೆ ಎಂದು ನಾನು ಭಾವಿಸುತ್ತೇನೆ. ಸಾಂದರ್ಭಿಕವಾಗಿ ನಾನು ಕೋಪಗೊಂಡಿದ್ದೇನೆ, ಆದರೆ ಮೂಲತಃ ನನ್ನ ಮಾನಸಿಕ ಸ್ಥಿತಿಯು ಸಾಕಷ್ಟು ಶಾಂತವಾಗಿರುತ್ತದೆ.

ಸೌಂದರ್ಯವರ್ಧಕಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುವ ಯುವತಿಯರನ್ನು ಟೀಕಿಸಲು ನಾನು ಇಷ್ಟಪಡುತ್ತೇನೆ. ಮೊದಲನೆಯದಾಗಿ, ನಿಮ್ಮ ಗಂಡಂದಿರು ಇದು ತುಂಬಾ ದುಬಾರಿಯಾಗಿದೆ ಎಂದು ದೂರಬಹುದು! ಬಾಹ್ಯ ಸೌಂದರ್ಯವು ಮುಖ್ಯವಾಗಿದ್ದರೂ, ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಆಂತರಿಕ ಸೌಂದರ್ಯ. ನಿಮ್ಮ ಮುಖ ಸುಂದರವಾಗಿರಬಹುದು, ಆದರೆ ನಿಜವಾದ ನಗು ಮತ್ತು ವಾತ್ಸಲ್ಯವಿದ್ದರೆ ಮೇಕ್ಅಪ್ ಇಲ್ಲದೆಯೂ ಕುರೂಪವಾಗಿರುವ ಮುಖ ಚೆನ್ನಾಗಿ ಕಾಣುತ್ತದೆ. ಇದು ನಿಜವಾದ ಸೌಂದರ್ಯ; ನಿಜವಾದ ಮೌಲ್ಯ ನಮ್ಮೊಳಗೇ ಇದೆ. ಬಾಹ್ಯ ಸೌಲಭ್ಯಗಳಿಗೆ ಬಹಳಷ್ಟು ಹಣದ ಅಗತ್ಯವಿದೆ - ಯಾವಾಗಲೂ ದೊಡ್ಡ ಅಂಗಡಿಗಳು ಮತ್ತು ದೊಡ್ಡ ಸೂಪರ್ಮಾರ್ಕೆಟ್ಗಳು. ಆದರೆ ಆಂತರಿಕ ಶಾಂತಿಗೆ ಯಾವುದೇ ವೆಚ್ಚದ ಅಗತ್ಯವಿಲ್ಲ! ಈ ಆಂತರಿಕ ಮೌಲ್ಯಗಳ ಬಗ್ಗೆ ಯೋಚಿಸಿ ಮತ್ತು ಅವುಗಳ ಜೊತೆಗೆ ನೀವು ಪರಿಚಿತರಾಗಿರಿ, ಆಗ ಕಾಲಕ್ರಮೇಣ, ವಿನಾಶಕಾರಿ ಭಾವನೆಗಳು ಕಡಿಮೆಯಾಗುತ್ತವೆ. ಇದು ಆಂತರಿಕ ಶಾಂತಿಯನ್ನು ತರುತ್ತದೆ.

ಹೆಚ್ಚು ಸಹಾನುಭೂತಿಯ ವರ್ತನೆ ಅಥವಾ ಇತರರ ಯೋಗಕ್ಷೇಮದ ಬಗೆಗಿರುವ ಕಾಳಜಿಯು, ಆತ್ಮ ವಿಶ್ವಾಸವನ್ನು ಹುಟ್ಟಿಸುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ, ನಿಮ್ಮ ಎಲ್ಲಾ ಕಾರ್ಯಗಳನ್ನು ಪಾರದರ್ಶಕವಾಗಿ, ಸತ್ಯವಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಬಹುದು. ಇದು ಇತರರೊಂದಿಗಿನ ನಂಬಿಕೆಯನ್ನು ಸೃಷ್ಟಿಸುತ್ತದೆ ಮತ್ತು ನಂಬಿಕೆಯೇ ಗೆಳೆತನದ ಆಧಾರವಾಗಿದೆ. ಮಾನವರು ಸಾಮಾಜಿಕ ಪ್ರಾಣಿಗಳಾಗಿದ್ದು, ನಮಗೆ ಸ್ನೇಹಿತರ ಅಗತ್ಯವಿದೆ. ಸ್ನೇಹಿತರು ಅಧಿಕಾರ ಅಥವಾ ಹಣ, ಶಿಕ್ಷಣ ಅಥವಾ ಜ್ಞಾನದಿಂದೇನು ಬರುವುದಿಲ್ಲ, ಆದರೆ ಸ್ನೇಹದ ಪ್ರಮುಖ ಅಂಶವಾಗಿರುವುದು ನಂಬಿಕೆ. ಆದ್ದರಿಂದ ಇತರ ಜನರ ಜೀವನ ಮತ್ತು ಯೋಗಕ್ಷೇಮದ ಬಗೆಗಿನ ಕಾಳಜಿ ಮತ್ತು ಗೌರವ ಸಂಭಾಷಣೆಯ ಆಧಾರವಾಗಿದೆ.

Top