ಆತಂಕವನ್ನು ಹೇಗೆ ನಿಭಾಯಿಸುವುದು

How to deal with anxiety

ಈ ಪ್ರಪಂಚವು ಹುಚ್ಚುತನದಿಂದ ಕೂಡಿದ ಸ್ಥಳದಂತೆ ತೋರುತ್ತದೆ. ಪ್ರತಿದಿನದ ಸಮಾಚಾರವನ್ನು ಕೇಳಿ: ಉಗ್ರರು ದಾಳಿ ನಡೆಸಲಿದ್ದಾರೆ! ಆರ್ಥಿಕತೆಯು ದುರಂತ ಸ್ಥಿತಿಯಲ್ಲಿದೆ! ಮತ್ತು ಪರಿಸರದ ಬಗ್ಗೆಯಂತೂ ಕೇಳಲೇ ಬೇಡಿ. ವಾರದ ಇನ್ನುಳಿದ ದಿನಗಳನ್ನು ಹಾಸಿಗೆಯಲ್ಲೇ ಕಳೆಯುವಂತಹ ಬಯಕೆಯನ್ನು ಹುಟ್ಟಿಸುತ್ತದೆ.

ಮೇಲಿನದ್ದು ಕೇವಲ ಹೊರಗಿನ ಪ್ರಪಂಚದ ತೊಂದರೆಗಳು. ಅದರೊಂದಿಗೆ ನಾವು ನಮ್ಮ ಸ್ವಂತ ಜೀವನವನ್ನು ಸಹ ನಿಭಾಯಿಸಬೇಕಾಗಿದೆ. ನಮ್ಮ ಮುಂದಿನ ರಜೆಯಲ್ಲಿ ಎಲ್ಲಿಗೆ ಪ್ರವಾಸ ಹೋಗಬೇಕು? ನಾವು ಬಹಳಾ ಬಯಸುತ್ತಿದ್ದ ಬಡ್ತಿಯನ್ನು ಪಡೆದ ಆ ಸಹೋದ್ಯೋಗಿಯನ್ನು ಹೇಗೆ ಎದುರಿಸುವುದು? ನಿಜವಾಗಿಯೂ, ನಮ್ಮ ಜೀವನದೊಂದಿಗೆ ನಾವು ಏನು ಮಾಡಬೇಕು? 

ನಾವು ಚಿಕ್ಕವರಾಗಿದ್ದಾಗ, ನಾವು ಏನು ಬೇಕಾದರೂ ಆಗಬಹುದು ಎಂದು ನಮಗೆ ಹೇಳಲಾಗುತ್ತದೆ. "ನಿಮ್ಮ ಕನಸುಗಳನ್ನು ಅನುಸರಿಸಿ," ಎಂದು ಹೇಳಲಾಗುತ್ತದೆ. ಆದರೆ ನಮ್ಮಲ್ಲಿ ಎಷ್ಟು ಮಂದಿ, ಆ ಕನಸಿನ ಜೀವನವನ್ನು ನಡೆಸುತ್ತಿದ್ದೇವೆ? ನಮ್ಮಲ್ಲಿ ಎಷ್ಟು ಮಂದಿ ನಮ್ಮ ಸಾಮಾಜಿಕ ಜಾಲತಾಣಗಳನ್ನು ನೋಡುವಾಗ, ಇತರರ ಕನಸು ನನಸಾಗುವುದನ್ನು ಕಂಡು ಅಸೂಯೆಪಡುತ್ತೇವೆ? ಅವರು ಕಡಲತೀರದಲ್ಲಿ ಹಲ್ಲುಕಿರಿಯುತ್ತಾ ತಮ್ಮ ರಜಾದಿನಗಳನ್ನು ಕಳೆಯುತ್ತಿದ್ದಾರೆ – ಆಹಾ, ಅವರು ಜೀವನದ ಆನಂದದ ಕೀಲಿಕೈಯನ್ನು ಪಡೆದುಕೊಂಡಿದ್ದಾರೆ! ನಾವಿಲ್ಲಿ ನಮ್ಮ ಮಂಕುಕವಿದ ಕಚೇರಿಯಲ್ಲಿ ಸಿಲುಕಿಕೊಂಡಿದ್ದೇವೆ. 

"ಸಂತೋಷ"ದ ಈ ಕಲ್ಪನೆಯು ಒಂದು ಕಾಲ್ಪನಿಕ ಕಥೆ ಅಥವಾ ಜಾಹೀರಾತು ಘೋಷಣೆಯಂತೆ ಕಾಣಬಹುದು - ಒಂದು ಅನಿರ್ದಿಷ್ಟ ಭವಿಷ್ಯದ ದಿನದಂದು ಆರಾಮವಾಗಿ ಆನಂದಿಸಲು, ಇಂದು ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ನಾವು ಎಷ್ಟೇ ಕಷ್ಟಪಟ್ಟರೂ ಸಂತೋಷದ ಭರವಸೆ ಇರುವುದಿಲ್ಲ. ಪಿಎಚ್‌ಡಿ ಪಡೆದವರಲ್ಲಿ ಕೆಲವರು ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡುತ್ತಾರೆ, ಇತರರು ನಂಬಲಾಗದಷ್ಟು ಶ್ರೀಮಂತರು ಮತ್ತು ಪ್ರಸಿದ್ಧರಾಗುತ್ತಾರೆ, ಆದರೆ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇವೆಲ್ಲವೂ ನಮಗೆ ಜೀವನದ ಬಗ್ಗೆ ಆತಂಕವನ್ನುಂಟುಮಾಡುತ್ತದೆ ಮತ್ತು ಇದು ಸಾಮಾಜಿಕ ಆತಂಕಕ್ಕೆ ಕಾರಣವಾಗುತ್ತದೆ, ಅಲ್ಲಿ ನಾವು ನಿರಂತರವಾಗಿ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಿರುತ್ತೇವೆ. ನಾವು ಇನ್ನೊಬ್ಬರನ್ನು ಭೇಟಿಯಾದಾಗ, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಅಹಿತಕರ, ಅಸುರಕ್ಷಿತವೆನಿಸುತ್ತದೆ, ಆದ್ದರಿಂದ ನಾವು ನಮ್ಮ ಸ್ಮಾರ್ಟ್‌ಫೋನ್‌ನ ಪರದೆಯ ಹಿಂದೆ ಮರೆಯಾಗಲು ಪ್ರಯತ್ನಿಸುತ್ತೇವೆ. 

ಇದೇ ನಮ್ಮ ಕಾಲದ ಪಿಡುಗು. ಇದು ಏಡ್ಸ್, ಕ್ಯಾನ್ಸರ್ ಅಥವಾ ಖಿನ್ನತೆಯಂತೆ ಅಪಾಯಕಾರಿಯಾಗಿ ಕಾಣಿಸದಿರಬಹುದು, ಆದರೆ ಆತಂಕವು ನಮ್ಮ ಶಕ್ತಿಯನ್ನು ಬರಿದುಮಾಡುತ್ತದೆ ಮತ್ತು ನಿರಂತರ ಅಸ್ವಸ್ಥತೆಯ ಭಾವನೆಯೊಂದನ್ನು ಸೃಷ್ಟಿಸುತ್ತದೆ. ನಮ್ಮ ಆಲೋಚನೆಗಳೊಂದಿಗೆ ಏಕಾಂಗಿಯಾಗಿರುವುದು ನಮಗೆ ಅಸಹನೀಯವೆನಿಸಿದ್ದು, ಹೊಸ ಟಿವಿ ಸೀರಿಯಲ್ ಅಥವಾ ನಮ್ಮ ಫೇಸ್‌ಬುಕ್ ಫೀಡ್ ಅನ್ನು ಸದಾ ನೋಡುತ್ತಾ, ನಮ್ಮನ್ನು ನಾವು ವಿಚಲಿತಗೊಳಿಸಲು ಪ್ರಯತ್ನಿಸುತ್ತೇವೆ. ವಿಷಯಗಳನ್ನು ಸಹನೀಯವಾಗಿಸಲು ನಮಗೆ ಇಯರ್‌ಫೋನ್‌ಗಳು ಮತ್ತು ನಿರಂತರ ಸಂಗೀತದ ಅಗತ್ಯವಿರುತ್ತದೆ. 

ಇದು ಹೀಗೇ ಇರಬೇಕೆಂದೇನೂ ಇಲ್ಲ. ನಮ್ಮ ಬಳಿಯಿರುವ ಜೀವನದ ಬಗ್ಗೆ ನಾವು ಕೃತಜ್ಞರಾಗಿರಬೇಕು ಮತ್ತು ನಾವು ಎಂದಿಗೂ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬಾರದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದರ ವಾಸ್ತವಿಕವಾದ ಅರ್ಥವೇನು? ನಾವು ಆತಂಕವನ್ನು ಹೇಗೆ ಮೀರಬಹುದು? 

ಒಂದು ಹೆಜ್ಜೆ ಹಿಂದಿಡಿ 

ನಾವು ಒಂದು ಹೆಜ್ಜೆ ಹಿಂದಿಟ್ಟು, ನಮ್ಮ ಜೀವನವನ್ನು ವಿಶ್ಲೇಷಿಸಬೇಕು. ಇದು ನೀರಸವೆನಿಸಬಹುದು, ಆದರೆ ನಾವು ಇದನ್ನು ಮಾಡಲೇಬೇಕಾಗಿರುವುದು. ನಾವು ಜೀವನದಿಂದ ಏನು ಬಯಸುತ್ತೇವೆ? ಎಲ್ಲರಿಗೂ ಸರಿಹೊಂದುವಂತಹ ಏಕೈಕ ಮಾರ್ಗವಿಲ್ಲ, ಆದರೆ ನಮ್ಮ ಹಾದಿಯಲ್ಲೇ, ನಮಗಿಂತ ಮೊದಲು ಬೇರೆಯವರು ನಡೆದಿರುತ್ತಾರೆ. ನಾವು ರಾಕ್ ಸ್ಟಾರ್ ಆಗಲು ಬಯಸಬಹುದು, ಆದರೆ ಪಾಪರಾಜಿ ನಮ್ಮನ್ನು 24/7 ಕಾಲ ಬೆನ್ನಟ್ಟುವುದರಿಂದ ನಾವು ನಿಜವಾಗಿಯೂ ಸಂತೋಷವಾಗಿರುತ್ತೇವೆಯೇ? ವರ್ಷಗಳು ಕಳೆದಂತೆ ರಾಕ್ ಸ್ಟಾರ್‌ಗಳು ಹೆಚ್ಚು ಸಂತೋಷವಾಗಿರುತ್ತಾರೆಯೇ? ಎಷ್ಟು ಮಂದಿ ಮಧ್ಯಪಾನ ಮತ್ತು ಡ್ರಗ್ಸ್ ಕಡೆಗೆ ತಿರುಗುತ್ತಾರೆ? ಅದಕ್ಕಾಗಿ ನಮ್ಮ ಸಮಯ ಮತ್ತು ಶಕ್ತಿಯನ್ನು ಮೀಸಲಿಡಲು ನಾವು ಸಿದ್ಧರಿದ್ದೇವೆಯೇ ಎಂದು ನಾವು ಯೋಚಿಸಬೇಕಾಗಿದೆ. 

ನಿಮಗಾಗಿ ಮಾದರಿಯಾಗಬಲ್ಲ ಒಬ್ಬ ವ್ಯಕ್ತಿಯನ್ನು ಹುಡುಕಿ 

ಜೀವನವನ್ನು ಸಂತೋಷದಾಯಕ ಮತ್ತು ಹೆಚ್ಚು ಅರ್ಥಪೂರ್ಣವಾಗಿಸುವ ಜೀವನಶೈಲಿಯ ವಿಧಾನಗಳನ್ನು ನಾವು ಕಂಡುಕೊಂಡಿದ್ದರೆ, ಮುಂದಿನ ಹಂತವು ಅದನ್ನು ಸಾಕಾರಗೊಳಿಸುವ ವ್ಯಕ್ತಿಯನ್ನು ಕಂಡುಹಿಡಿಯುವುದಾಗಿದೆ. ಉತ್ತಮ ಸಂಗೀತಗಾರನಾಗಲು, ನಾವು ಅಭ್ಯಾಸ ಮಾಡಬೇಕು. ಫುಟ್ಬಾಲ್ ಆಟಗಾರನಾಗಲು, ನಾವು ಅಭ್ಯಾಸ ಮಾಡಬೇಕು. ನಮಗೀಗ ನೆನಪಿಲ್ಲವಾದರೂ, ನಾವು ನಡೆಯಲು ಸಹ ಅಭ್ಯಾಸ ಮಾಡಬೇಕಾಗಿತ್ತು. ಇಲ್ಲಿರುವ ಸಂದೇಶವೆಂದರೆ, ಕಾರಣವಿಲ್ಲದೆ ಯಾವುದೇ ಫಲಿತಾಂಶವಿರುವುದಿಲ್ಲ. ಜೀವನದಲ್ಲಿ ಎಲ್ಲೇ ತಲುಪಲು ನಿಯತ್ತು ಬೇಕಾಗಿರುತ್ತದೆ. ಒಬ್ಬ ಮಾದರಿ ವ್ಯಕ್ತಿ ನಮಗೆ ಬೇಕಾದ ಸಲಹೆಗಳನ್ನು ನೀಡಬಹುದು ಮತ್ತು ಉತ್ತಮ ಸ್ಫೂರ್ತಿಯಾಗಬಹುದು.  

ಇತರರಿಗೆ ಸಹಾಯ ಮಾಡಿ 

ನಮ್ಮ ಸ್ವಂತ ಆಲೋಚನೆಗಳು ಮತ್ತು ಆಸೆಗಳೊಂದಿಗೆ ಲೀನವಾಗುವುದು ಬಹಳಾ ಸುಲಭ. ಜೀವನದಿಂದ ನಮಗೆ ಏನು ಬೇಕು ಮತ್ತು ಏನು ಅಗತ್ಯವಿದೆ ಎಂಬುದನ್ನು ನಾವು ಮುಖ್ಯವಾಗಿ ಯೋಚಿಸುತ್ತೇವೆ, ಮತ್ತು ಪ್ರತಿ ಬಾರಿಯೂ ಯಾರಾದರೂ ನಮ್ಮ ದಾರಿಗೆ ಅಡ್ಡವಾದರೆ, ನಾವು ಪರದಾಡುತ್ತೇವೆ. ಆತಂಕದ ಭಾವನೆಯ ಹೆಚ್ಚಿನ ಭಾಗವು ಪ್ರತ್ಯೇಕತೆಯನ್ನು ಅನುಭವಿಸುವುದಾಗಿರುತ್ತದೆ, ಆದರೆ ಇತರರೊಂದಿಗೆ ಸಂಬಂಧ ಸಾಧಿಸುವ ಉತ್ತಮ ಮಾರ್ಗವು, ಅವರ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವುದಾಗಿದೆ. ನಾವು ಕೇವಲ ನಮ್ಮ ಬಗ್ಗೆ ಯೋಚಿಸಿದರೆ, ನಾವು ದುಃಖಿತರಾಗುತ್ತೇವೆ; ಆದರೆ ತುಂಬುಹೃದಯದಿಂದ ಇತರರಿಗೆ ಸಹಾಯ ಮಾಡುವುದರಿಂದ ಆತಂಕವು ದೂರವಾಗುತ್ತದೆ ಮತ್ತು ನಮ್ಮ ಸಂತೋಷವು ಹೆಚ್ಚಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ಇದು ದೊಡ್ಡದಾಗಿರಬೇಕಾಗಿಲ್ಲ. ಮಂಕಾದ ದಿನದಂದು ಯಾರಿಗಾದರೂ ಒಂದು ಕಿರುನಗೆ ನೀಡುವುದು ಅಥವಾ ಯಾರಿಗಾದರೂ ಪ್ರಾಮಾಣಿಕವಾಗಿ ಧನ್ಯವಾದ ಹೇಳಿದರೇ ಸಾಕು, ಅದರಿಂದ ಎರಡೂ ಕಡೆಯವರ ಉತ್ಸಾಹವನ್ನು ಹೆಚ್ಚಿಸಬಹುದು. ಬಾಧ್ಯತೆಯ ಭಾವನೆಯಿಂದ ಇದನ್ನು ಮಾಡಬೇಡಿ, ಬದಲಿಗೆ ಒಬ್ಬರ ದಿನವನ್ನು ಬೆಳಗಿಸುವ ನಿಜವಾದ ಬಯಕೆಯಿಂದ ಮಾಡಿರಿ. ನಂತರ, ನಿಮ್ಮ ಮಾನಸಿಕ ಸ್ಥಿತಿಯ ಮೇಲೆ, ಅದರಿಂದಾಗುವ ಪ್ರಭಾವವನ್ನು ಗಮನಿಸಿ. 

ನೀವು ಯಾರೆಂದು ಅರಿತುಕೊಳ್ಳಿ 

ನಾವೆಲ್ಲರೂ ಅನನ್ಯರು ಎಂದು ಯೋಚಿಸಲು ಇಷ್ಟಪಡುತ್ತೇವೆ, ಆದರೆ ಇದು ನಾವೆಲ್ಲರೂ ಒಂದೇ ಎಂದು ಸಾಬೀತುಪಡಿಸುತ್ತದೆ. "ನೀವು ಯಾರೆಂದು ಅರಿತುಕೊಳ್ಳಿ" ಎಂದು ಹೇಳಿದಾಗ, ಅದರ ನಿಜವಾದ ಅರ್ಥವು, ನಾವು ಯಾರೆಂಬುದನ್ನು ಅರ್ಥಮಾಡಿಕೊಳ್ಳುವುದಾಗಿರುತ್ತದೆ. ನಮಗೆಲ್ಲರಿಗೂ ಸಮಸ್ಯೆಗಳಿದ್ದು, ಪರಿಪೂರ್ಣವಾದ ಜೀವನವೆಂಬುದು ಅಸ್ತಿತ್ವದಲ್ಲಿರುವುದಿಲ್ಲ. ನೀವು ಯೋಚಿಸುವುದೆಲ್ಲವನ್ನೂ ನಂಬಬೇಡಿ! 

ಹೇಗೆ ‘ಕೆಟ್ಟದಾಗಿ ಕಾಣುತ್ತೇವೆ’ ಎಂದು ನಾವು ಭಾವಿಸುವ ಫೋಟೋಗಳನ್ನು ಎಂದಿಗೂ ಯಾರಿಗೂ ತೋರಿಸುವುದಿಲ್ಲವೋ, ಹಾಗೆಯೇ ಇತರರೂ ಅಂತಹ ಫೋಟೋಗಳನ್ನು ತೋರಿಸುವುದಿಲ್ಲ. ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗಾಗಲು ನಾವೊಬ್ಬರೇ ಅಲ್ಲ, ಎಲ್ಲರೂ ಭಯಪಡುತ್ತಾರೆ! ನಾವು ಪರಿಪೂರ್ಣ ಜೀವನದ ತೋರಿಕೆಯ ಬೃಹತ್ ಯುಗದಲ್ಲಿ ವಾಸಿಸುತ್ತಿದ್ದರೂ, ನಾವು ಅದರ ಬಲೆಗೆ ಬೀಳಬಾರದು. ನಾವು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ, ಇತರರಿಗೆ ಸಂತೋಷವನ್ನು ತರಲು ತುಂಬುಹೃದಯದಿಂದ ಪ್ರಯತ್ನಿಸಿದರೆ ಮತ್ತು ನಮ್ಮ ಸ್ವಂತ ಜೀವನವನ್ನು ಅರ್ಥಪೂರ್ಣವಾಗಿಸಲು ಪ್ರಯತ್ನಿಸಿದರೆ, ನಮ್ಮ ಆತಂಕವು ಕ್ರಮೇಣವಾಗಿ ಕರಗುತ್ತದೆ. 

Top