ನೈತಿಕತೆಯ ಮೂಲಕ ಸಂತೋಷವಾದ ಮನಸ್ಸಿನ ಸಾಧನೆ

Studybuddhism universal values 01

ಜಾತ್ಯತೀತ ವಿಧಾನಗಳನ್ನು ಬಳಸಿಕೊಂಡು, ಅದರಿಂದ ಹೇಗೆ ಸಂತೋಷದ ಮನಃಸ್ಥಿತಿಯನ್ನು ಸಾಧಿಸಬಹುದು ಎಂಬುದರ ಕುರಿತು ಇಂದು ನಾನು ಮಾತನಾಡುತ್ತೇನೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಜನರೊಂದಿಗೆ ಮಾತನಾಡಲು ಇರುವ ಈ ಅವಕಾಶದ ಬಗ್ಗೆ ನನಗೆ ಸಂತಸವಿದೆ. ಡೇವಿಡ್ ಲಿವಿಂಗ್ಸ್ಟೋನ್, ಎಂಬ ಅಮೆರಿಕಾದ ವಿಜ್ಞಾನಿ, ನನ್ನ ಅದ್ಭುತ ಗೆಳೆಯರಾಗಿದ್ದರು, ಇಂದು ಅವರು ನಮ್ಮೊಂದಿಗೆ ಇಲ್ಲ - ಅವರು ಹೇಳುತ್ತಿದ್ದರು, ಒಬ್ಬ ಸೌಹಾರ್ದತೆಯ ಮನಸ್ಸಿನುಳ್ಳ ವ್ಯಕ್ತಿ ಬೇರೆಯವರನ್ನು ಭೇಟಿಯಾದಾಗ, ಅವನ ಅಥವಾ ಅವಳ ಕಣ್ಣುಗಳು ದೊಡ್ಡದಾಗಿ, ಕಣ್ಣಿನ ಪಾಪೆಯು ದೊಡ್ಡದಾಗುತ್ತದೆ ಎಂದು. ಅವರಿಗೆ ಹೀಗೆ ಕೇವಲ ಇಬ್ಬರೊಂದಿಗೆ ಮಾತ್ರ ಅನುಭವವಾಯಿತು – ನನ್ನನ್ನು ಭೇಟಿಯಾದಾಗ ಮತ್ತು ಅವರ ಹೆಂಡತಿಯನ್ನು ನೋಡಿದಾಗ. ಆದರೆ ಈಗ, ನಾನು ಭೇಟಿ ನೀಡುವ ಪ್ರತಿಯೊಂದು ಸ್ಥಳದಲ್ಲಿ, ಅಲ್ಲಿನ ಸ್ಥಳೀಯರು ಅಂತಹದೇ ಸ್ನೇಹಪೂರ್ಣ ಭಾವನೆಯಿಂದ ನನ್ನನ್ನು ನೋಡುತ್ತಾರೆ, ಇದಕ್ಕೆ ನಾನು ಆಭಾರಿಯಾಗಿದ್ದೇನೆ, ಧನ್ಯವಾದಗಳು. 

"ಜಾತ್ಯಾತೀತತೆ" ಎಂದರೆ ಏನು? ಭಾರತೀಯ ಸಂಪ್ರದಾಯದಲ್ಲಿನ ಅದರ ಬಳಕೆಯ ಪ್ರಕಾರ ನಾನು ಅದನ್ನು ಬಳಸುತ್ತೇನೆ. ಆದರೆ, ನನ್ನ ಕೆಲವು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸ್ನೇಹಿತರು, "ಜಾತ್ಯಾತೀತತೆ" ಎಂಬ ಪದವು ಸ್ವಲ್ಪಮಟ್ಟಿಗೆ ಧರ್ಮದ ವಿರುದ್ಧವಾಗಿರುವುದನ್ನು ಸೂಚಿಸುತ್ತದೆ ಎಂದು ಭಾವಿಸುತ್ತಾರೆ, ಆದ್ದರಿಂದ ನಾನು ಈ ಪದವನ್ನು ಬಳಸುವುದು ಅವರಿಗೆ ಇಷ್ಟವಾಗುವುದಿಲ್ಲ. ಮತ್ತು ಕೆಲವರು "ನೀತಿಗಳು" ಧರ್ಮವನ್ನು ಆಧರಿಸಿರಬೇಕು ಎಂದು ಭಾವಿಸುತ್ತಾರೆ, ಆದರೆ ಭಾರತೀಯ ಸಂವಿಧಾನವು ಜಾತ್ಯತೀತತೆಯನ್ನು ಆಧರಿಸಿದೆ; ಅದು ಧರ್ಮ ವಿರೋಧಿ ಅಲ್ಲ. ಭಾರತದಲ್ಲಿ, ಜನರು ಧರ್ಮವನ್ನು ಬಹಳ ಗೌರವಿಸುತ್ತಾರೆ. ಗಾಂಧಿ ಮತ್ತು ಭಾರತೀಯ ಸಂವಿಧಾನದ ರಚನಾಕಾರರು ಬಹಳ ಧಾರ್ಮಿಕ ವ್ಯಕ್ತಿಗಳಾಗಿದ್ದರು. ಈ ಸನ್ನಿವೇಶದಲ್ಲಿ "ಜಾತ್ಯಾತೀತ" ಎಂದರೆ, ಯಾವುದೇ ಒಂದು ಧರ್ಮವನ್ನು ಇತರ ಧರ್ಮಗಳಿಗಿಂತ ಉತ್ತಮವೆಂದು ಪರಿಗಣಿಸದೆ, ಎಲ್ಲಾ ಧರ್ಮಗಳನ್ನು ಗೌರವಿಸುವುದು; ಸಾವಿರಾರು ವರ್ಷಗಳಿಂದ ಈ ಜಾತ್ಯಾತೀತತೆ, ಭಾರತದಲ್ಲಿ, ಧರ್ಮದಲ್ಲಿ ನಂಬಿಕೆಯಿಲ್ಲದವರ ಹಕ್ಕುಗಳನ್ನೂ ಗೌರವಿಸಿದೆ. ಹಾಗಾಗಿ ನಾನು ಇದನ್ನು ಅರ್ಥೈಸಲು "ಜಾತ್ಯಾತೀತತೆ" ಎಂಬ ಪದವನ್ನು ಬಳಸುತ್ತೇನೆ.

ಮಾನವನಾಗಿ, ಪ್ರಾಣಿಗಳು ಮತ್ತು ಕೀಟಗಳು ಸಹ, ನಮಗೆಲ್ಲರಿಗೂ ಹೆಚ್ಚಿನ ಶಾಂತಿ ಮತ್ತು ಶಾಂತತೆಯ ಬಯಕೆ ಇದೆ. ಯಾರೂ ಕೂಡ ಯಾವುದೇ ಗೊಂದಲವನ್ನು ಬಯಸುವುದಿಲ್ಲ; ಪ್ರತಿಯೊಬ್ಬರಿಗೂ ಸಂತೋಷವನ್ನು ಸಾಧಿಸಲು ಮತ್ತು ಯಾವುದೇ ಅಡಚಣೆಗಳು, ಸಮಸ್ಯೆಗಳು ಮತ್ತು ಸಂಕಟಗಳನ್ನು ಮೀರುವ ಹಕ್ಕಿದೆ. ಅದನ್ನು ತಾರ್ಕಿಕವಾಗಿ ಅಥವಾ ಪ್ರಯೋಗದ ಮೂಲಕ ಸಾಬೀತುಪಡಿಸುವ ಅಗತ್ಯವಿಲ್ಲ. ಈ ಯಥಾಸ್ಥಿತಿಯಿರುವುದು ಸಹಜವಾಗಿ, ಸರಳವಾಗಿ; ಮತ್ತು ಪ್ರಜ್ಞೆಯಿರುವ ಎಲ್ಲಾ ಜೀವಿಗಳು - ಪಕ್ಷಿಗಳು, ಪ್ರಾಣಿಗಳು, ಮಾನವರು, ನಾವೆಲ್ಲರೂ ಆ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತೇವೆ. ಆ ಗುರಿಯನ್ನು ಸಾಧಿಸುವ ವಿಧಾನ ಮುಖ್ಯವಾದುದು. ಇದು ವಾಸ್ತವಿಕವಾಗಿರಬೇಕು; ಅವಾಸ್ತವಿಕ ಮಾರ್ಗಗಳನ್ನು ಬಳಸುವುದರಿಂದ ಆ ಗುರಿಯನ್ನು ಪೂರೈಸುವಲ್ಲಿ ವಿಫಲರಾಗುತ್ತೇವೆ. ಉದಾಹರಣೆಗೆ, ಕೆಲವೊಮ್ಮೆ, ಪ್ರಾಣಿಗಳು ಭಯಭೀತರಾಗಿ, ತಪ್ಪು ದಿಕ್ಕಿನಲ್ಲಿ ಓಡುತ್ತವೆ; ಹಾನಿಯುಂಟು ಮಾಡುವುದರಿಂದ ದೂರವಾಗುವ ಬದಲು, ಹೆಚ್ಚಾಗಿ ಅದರ ದಿಕ್ಕಿನಲ್ಲೇ ಓಡುತ್ತವೆ. ಆದರೆ ನಾವು ಮಾನವರು ಮತ್ತು ನಾವು ಅದ್ಭುತವಾದ ಬುದ್ಧಿವಂತಿಕೆಯನ್ನು ಹೊಂದಿದ್ದೇವೆ, ನಾವು ಆಲೋಚನೆ ಮತ್ತು ಬುದ್ಧಿವಂತಿಕೆಯ ಮೂಲಕ ವಾಸ್ತವಿಕ ವಿಧಾನವನ್ನು ಅನುಸರಿಸಲು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದೇವೆ, ಆದ್ದರಿಂದ ನಾವು ಹೆಚ್ಚು ಯಶಸ್ವಿಯಾಗಿದ್ದೇವೆ. ನಾವು ದೀರ್ಘಾವಧಿಯ ಅರಿವನ್ನು ಹೊಂದಿದ್ದೇವೆ, ಆದ್ದರಿಂದ ಕೆಲವೊಮ್ಮೆ ನಾವು ದೀರ್ಘಾವಧಿಯ ಯಶಸ್ಸಿಗಾಗಿ, ಕ್ಷಣಿಕವಾದ ಹಿತವನ್ನು, ಸ್ವಇಚ್ಛೆಯಿಂದ ತ್ಯಾಗ ಮಾಡುತ್ತೇವೆ. ಇದು ನಾವು ಪ್ರಾಣಿಗಳಿಗಿಂತ ಬುದ್ದಿವಂತರಾಗಿರುವುದರ ಸೂಚನೆಯಾಗಿದೆ. ಮತ್ತು ಈ ಬುದ್ಧಿವಂತಿಕೆಯಿಂದಾಗಿ, ಮಾನವರಾದ ನಾವು, ದೀರ್ಘಕಾಲೀನ ಲಾಭವನ್ನು ಸಾಧಿಸಲು ಪ್ರಯತ್ನಿಸುತ್ತೇವೆ.

ಹಾಗಾದರೆ, ಯಾವ ಮಟ್ಟದ ಅನುಭವವು ನಮಗೆ ಹೆಚ್ಚು ಲಾಭಕಾರಿಯಾಗಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂದ್ರಿಯಗಳ ಮಟ್ಟದ ಅನುಭವವು, ಹೆಚ್ಚಾಗಿ ತಾತ್ಕಾಲಿಕವಾದದ್ದು. ಉದಾಹರಣೆಗೆ, ನೀವು ಯಾವುದೋ ಚಿತ್ರ ಅಥವಾ ಕ್ರೀಡಾಕೂಟವನ್ನು ನೋಡುತ್ತೀರಿ, ಅಥವಾ ಪ್ರವಾಸಿಗರು, ವಿವಿಧ ಸ್ಥಳಗಳು ಮತ್ತು ದೃಶ್ಯಾವಳಿಗಳು, ವೇಷಭೂಷಣಗಳು, ಜನರನ್ನು ನೋಡಲು ಹೋಗುತ್ತಾರೆ; ಇದರಿಂದ ನೀವು ಸ್ವಲ್ಪ ಆನಂದವನ್ನು ಪಡೆಯುತ್ತೀರಿ, ಉದಾಹರಣೆಗೆ ನಿಮ್ಮ ಕಣ್ಣುಗಳ ಮೂಲಕ. ಉದಾಹರಣೆಗೆ, ದೆಹಲಿಯಲ್ಲಿರುವ ನನ್ನ ಚಾಲಕ, ಒಬ್ಬ ಭಾರತೀಯ, ಕ್ರಿಕೆಟ್ ಅನ್ನು ಪ್ರೀತಿಸುತ್ತಾನೆ. ನಿನ್ನೆ ರಾತ್ರಿ, ಕ್ರಿಕೆಟ್ ಕೂಟವಿದ್ದಾಗ ಎಷ್ಟು ಗಂಟೆ ನಿದ್ದೆ ಮಾಡಿದೆ ಎಂದು ಕೇಳಿದಾಗ ನಾಲ್ಕು ಗಂಟೆ ಎಂದನು. ನಂತರ ನಾನು ಅವನಿಗೆ ಬೈದೆ, ಕ್ರೀಡೆಯನ್ನು ನೋಡುವುದಕ್ಕಿಂತ ಒಳ್ಳೆಯ ನಿದ್ರೆ ಪಡೆಯುವುದು ಉತ್ತಮ ಎಂದು ಅವನಿಗೆ ಹೇಳಿದೆ. ಇದು ಮನಸ್ಸಿಗೂ ಉತ್ತಮ. ಅದಲ್ಲದೆ ಸಂಗೀತ, ಸುಗಂಧ ದ್ರವ್ಯಗಳು ಮತ್ತು ಆಹಾರ ಮತ್ತು ಆಹ್ಲಾದಕರ ದೈಹಿಕ ಸಂವೇದನೆಗಳೂ ಇವೆ. ಇಂದ್ರಿಯ ಮಟ್ಟದಲ್ಲಿ, ಈ ಆನಂದಗಳು ಕೇವಲ ತಾತ್ಕಾಲಿಕ. ಅವು ಮುಗಿದ ಮೇಲೆ, ನಮ್ಮಲ್ಲಿ ಅವುಗಳ ನೆನಪು ಮಾತ್ರ ಉಳಿಯುತ್ತದೆ.

ಮತ್ತೊಂದೆಡೆ, ಕೆಲವು ಅನುಭವಗಳು ಮಾನಸಿಕ ಮಟ್ಟದಲ್ಲಿದ್ದು, ಅವು ಇಂದ್ರಿಯಗಳ ಅನುಭವಗಳ ಮೇಲೆ ಅವಲಂಬಿತವಾಗಿರುವುದಿಲ್ಲ; ಮತ್ತು ಅವುಗಳಿಂದ ಸಿಗುವ ಆನಂದವು ಹೆಚ್ಚಿನ ಕಾಲವಿರುತ್ತದೆ. ಆದ್ದರಿಂದ ಸಂತೋಷ ಮತ್ತು ಅಸಂತೋಷವನ್ನು ಅನುಭವಿಸುವುದರಲ್ಲಿ ಎರಡು ಹಂತಗಳಿವೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಒಂದು, ಇಂದ್ರಿಯಗಳ ಮಟ್ಟದಲ್ಲಿ ತಾತ್ಕಾಲಿಕವಾದದ್ದು ಮತ್ತು ಇನ್ನೊಂದು, ಮಾನಸಿಕ ಮಟ್ಟದಲ್ಲಿ ಹೆಚ್ಚು ಆಳವಾದದ್ದು.

ನಮ್ಮ ಆಧುನಿಕ ಕಾಲದಲ್ಲಿ, ಜನರು ಇಂದ್ರಿಯಗಳ ಮಟ್ಟದೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದು, ಅವು ಅತ್ಯಂತ ಮಹತ್ವವಾದದ್ದು ಎಂದು ಪರಿಗಣಿಸುತ್ತಾರೆ, ಆದ್ದರಿಂದ ಅವರು ಯಾವಾಗಲೂ ಸಂತೋಷಕ್ಕಾಗಿ, ಬಾಹ್ಯ ವಸ್ತುಗಳ ಮೂಲಗಳತ್ತ ನೋಡುತ್ತಾರೆ ಮತ್ತು ಆಂತರಿಕವಾದ, ಆಳವಾದ ಮಟ್ಟವನ್ನು ನಿರ್ಲಕ್ಷಿಸುತ್ತಾರೆ. ಹಲವು ವರ್ಷಗಳ ಹಿಂದೊಮ್ಮೆ, ನಾನು ಜರ್ಮನಿಯ ಬರ್ಲಿನ್‌ನಲ್ಲಿದ್ದೆ ಮತ್ತು ನಾನು ಉಳಿದುಕೊಂಡಿದ್ದ ಹೋಟೆಲ್, ನೈಟ್ ಕ್ಲಬ್‌ನ ಎದುರು ಇತ್ತು. ರಾತ್ರಿ, ಸುಮಾರು 7:30 ಅಥವಾ 8 ಗಂಟೆಗೆ ನಾನು ಮಲಗಲು ಹೋಗುತ್ತೇನೆ, ಆಗ ಹೊರಗೆ ಕೆಂಪು ನೀಲಿ, ಹೀಗೆ ವಿವಿಧ ಬಣ್ಣದ ದೀಪಗಳು ಮಿನುಗುತ್ತಿದ್ದವು ಮತ್ತು ಜೋರಾದ ತಡತಡ ಸದ್ದಾಗುತ್ತಿದುದನ್ನು ನಾನು ಗಮನಿಸಿದೆ. ನಾನು ನಿದ್ದೆ ಮಾಡಿದೆ ಮತ್ತು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಾಗ ಅದು ಇನ್ನೂ ನಡೆಯುತ್ತಿತ್ತು; ನಾನು ಸುಮಾರು ನಾಲ್ಕು ಗಂಟೆಗೆ ಎದ್ದಾಗಲೂ ಅದು ಮುಂದುವರೆದಿತ್ತು. ಅಲ್ಲಿನ ಜನರ ಶಕ್ತಿಯೆಲ್ಲವೂ ಆ ಇಂದ್ರಿಯಗಳ ಮಟ್ಟದಲ್ಲಿ ಆವಿಯಾಗಿತ್ತು. ಮರುದಿನ, ಅವರೆಲ್ಲರೂ ಸಂಪೂರ್ಣವಾಗಿ ದಣಿದಿದ್ದರು ಎಂದು ನಾನು ಭಾವಿಸುತ್ತೇನೆ.

ಇತ್ತೀಚೆಗೆ ನಾನು ಕೆಲವು ಮಕ್ಕಳಿರುವ ಭಾರತೀಯ ಕುಟುಂಬವೊಂದನ್ನು ಭೇಟಿಯಾದೆ, ಪೋಷಕರು ಸಹ ಅಲ್ಲೇ ಇದ್ದರು. ನಾವು ಹಾಗೆ ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಮಾತನಾಡಿದೆವು. ಕಳೆದ ಎರಡು - ಮೂರು ವರ್ಷಗಳಿಂದ ನಾನು ದೂರದರ್ಶನವನ್ನು ನೋಡದೇ ಇರುವುದನ್ನು, ಕೇವಲ BBC ರೇಡಿಯೊದಲ್ಲಿ ಸುದ್ದಿ ಕೇಳುವುದನ್ನು ಅವರಿಗೆ ತಿಳಿಸಿದೆ. ಆಗ ಆ ಭಾರತೀಯ ಕುಟುಂಬದ ಯುವ ಸದಸ್ಯರು ನನಗೆ ಹೇಳಿದರು, "ನೀವು ದೂರದರ್ಶನವನ್ನು ನೋಡದೆ ಬೇಸರಗೊಂಡಿರಬೇಕು!". ಆ ಮಾತಿನಿಂದ ಅವರು ಅದನ್ನು ಸಾಕಷ್ಟು ವೀಕ್ಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಅದರಲ್ಲೂ, ಅಮೇರಿಕಾ ಮತ್ತು ಯುರೋಪ್ನಲ್ಲಿನ ಮಕ್ಕಳು, ಅತಿಯಾಗಿ ಟಿವಿ ನೋಡುತ್ತಾರೆ. ಇದೇನು ಹೆಚ್ಚಾಗಿ ಸಹಾಯಕವಾಗುವುದಿಲ್ಲ, ಏಕೆಂದರೆ ಇದು ತೀಕ್ಷ್ಣವಾದ ಬುದ್ಧಿವಂತಿಕೆಯೊಂದಿಗೆ ವಿಶ್ಲೇಷಿಸುವ ಅವರ ಮಾನಸಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಂತೋಷವನ್ನು ಕಂಡುಕೊಳ್ಳುವ ಮಾರ್ಗಕ್ಕಾಗಿ, ಕೇವಲ ಇಂದ್ರಿಯಗಳ ಮಟ್ಟದಲ್ಲದೆ, ಮಾನಸಿಕ ಮಟ್ಟದಲ್ಲಿಯೂ ಕಾರ್ಯ ನಿರ್ವಹಿಸುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.

ಮತ್ತೊಂದು ಮಾತೆಂದರೆ, ನಿಜವಾದ ಭಾವನಾತ್ಮಕ ಅಡಚಣೆಯು ಹೆಚ್ಚಾಗಿ ಮಾನಸಿಕ ಮಟ್ಟದಿಂದ ಬರುತ್ತದೆ; ಆದ್ದರಿಂದ, ಸಂತೋಷದ ಜೀವನಕ್ಕಾಗಿ ನಮಗೆ ಬೇಕಾಗಿರುವುದು ಶಾಂತಿಯುತ ಮನಸ್ಸು. ಅಡಚಣೆಗಳ ಮೂಲವು ಮಾನಸಿಕ ಮಟ್ಟದಿಂದ ಬರುವುದರಿಂದ, ಶಾಂತಿಯನ್ನು ಸಾಧಿಸಲೂ ನಾವು ಮಾನಸಿಕ ಮಟ್ಟದಲ್ಲಿ ವ್ಯವಹರಿಸಬೇಕು. ಆದ್ದರಿಂದ, ಮೊದಲನೆಯದಾಗಿ, ನಾವು ನಮ್ಮ ಆಂತರಿಕ ಪ್ರಪಂಚ, ಆಂತರಿಕ ಮೌಲ್ಯಗಳತ್ತ ಹೆಚ್ಚು ಗಮನ ಹರಿಸಬೇಕು. ಮೆದುಳಿನ ಸಣ್ಣ ಜಾಗದಲ್ಲಿ, ನಾವು ಮನಸ್ಸಿನ ವಿಶಾಲವಾದ ಆಂತರಿಕ ಸ್ಥಳವನ್ನು ಅನ್ವೇಷಿಸಬಹುದು, ಆದರೆ ಈ ಆಂತರಿಕ ಸ್ಥಳದ ಬಗ್ಗೆ ನಮಗೆ ಬಹಳ ಕಡಿಮೆ ತಿಳಿದಿದೆ. ಆದ್ದರಿಂದ, ನಾವು ಭಾವನೆಗಳನ್ನು ಪರಿಶೀಲಿಸಬೇಕಿದೆ. ಪ್ರಬಲವಾದ ಭಾವನೆಗಳು ಉದ್ಭವಿಸಿದಾಗ, ಮನಸ್ಸಿನ ಒಂದು ಭಾಗದಿಂದ ನಾವು ಆ ಭಾವನೆಗಳನ್ನು ಪರಿಶೀಲಿಸಿದರೆ, ಕಾಲಕ್ರಮೇಣ ಅವು ಕಡಿಮೆಯಾಗುವುದನ್ನು ನಾವು ಗಮನಿಸುತ್ತೇವೆ. ಕೋಪದಿಂದ ಆವರಿಸಿದ ಮನಸ್ಸನ್ನು ವೀಕ್ಷಿಸುವ ಸಾಮರ್ಥ್ಯ ನಮಗಿದೆ; ಅದನ್ನು ನಾವು ಪರಿಶೀಲಿಸಿದಾಕ್ಷಣ, ಅದರ ತೀವ್ರತೆಯು ಕಡಿಮೆಯಾಗುತ್ತದೆ. ಮನಸ್ಸಿನ ಆಳವಾದ ನೋಟವು ಬಹಳ ಆಸಕ್ತಿದಾಯಕವಾಗಿದೆ. 

ನಾವೀಗ ಇಪ್ಪತ್ತೊಂದನೇ ಶತಮಾನದಲ್ಲಿದ್ದೇವೆ. ಇಪ್ಪತ್ತನೇ ಶತಮಾನವು ಮಾನವ ಇತಿಹಾಸದಲ್ಲಿನ ಅತ್ಯಂತ ಪ್ರಮುಖ ಶತಮಾನವೆಂದು ತೋರುತ್ತದೆ. ಏಕೆಂದರೆ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಹಲವಾರು ಬೆಳವಣಿಗೆಗಳಾದವು. ಹಾಗಾಗಿ ನಮ್ಮ ಜ್ಞಾನ ಹೆಚ್ಚಿತು, ಜೀವನಮಟ್ಟ ಹೆಚ್ಚಾಯಿತು. ಆದರೆ, ಇದು ರಕ್ತಪಾತದ ಶತಮಾನವೂ ಹೌದು. ನಿಮ್ಮ ತಂದೆ-ತಾಯಿ ಮತ್ತು ಅವರ ತಂದೆ-ತಾಯಂದಿರು ಬಹಳ ತೊಂದರೆಗಳನ್ನು ಮತ್ತು ಸಂಕಟಗಳನ್ನು ಅನುಭವಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳನ್ನೂ ಒಳಗೊಂಡಂತೆ ಇನ್ನೂರು ಮಿಲಿಯನ್ ಜನರು ಹತ್ಯೆಗೊಂಡರು. ಆ ಭೀಕರ ಹಿಂಸಾಚಾರದಿಂದ ಯಾವುದಾದರೂ ಹೊಸ ವ್ಯವಸ್ಥೆ ಜನಿಸಿದ್ದರೆ, ಬಹುಶಃ ನಾವು ಅದನ್ನು ಸಮರ್ಥಿಸಬಹುದೇನೋ, ಆದರೆ ಹಾಗಾಗಲಿಲ್ಲ. ಇಂದಿಗೂ, ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ, ಇರಾಕ್, ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಎಷ್ಟೊಂದು ಸಮಸ್ಯೆಗಳಿವೆ, ಎಷ್ಟೊಂದು ಭಯೋತ್ಪಾದನೆ; ಇದು ಹಿಂದಿನ ತಪ್ಪುಗಳ ಮತ್ತು ನಿರ್ಲಕ್ಷ್ಯದ ಲಕ್ಷಣವಾಗಿದೆ. ಆಗ ಕೇವಲ ಬಾಹ್ಯ ವಿಷಯಗಳ ಮೇಲೆ ಹೆಚ್ಚಿನ ಗಮನವಿತ್ತು. ಈಗ ಕೇವಲ ಬಾಹ್ಯ ಪರಿಸ್ಥಿತಿಗಳ ಬಗ್ಗೆ ಅಲ್ಲ, ನಾವು ಆಂತರಿಕ ಮೌಲ್ಯಗಳ ಬಗ್ಗೆಯೂ ಹೆಚ್ಚು ಯೋಚಿಸಬೇಕಾಗಿದೆ.

ಸಾಮಾನ್ಯವಾಗಿ, ಭೌತಿಕ ಸಾದನೆಗಳಲ್ಲಿ ತಪ್ಪೇನಿಲ್ಲವಾದರೂ, ಶ್ರೀಮಂತ ಮತ್ತು ಬಡವರ ನಡುವಿನ ಅಂತರವು ಒಂದು ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಆಸ್ಟ್ರಿಯಾದಲ್ಲಿ, ಸಮಾನತೆಯ ಮಟ್ಟವು ಉತ್ತಮವಾಗಿದೆ, ಆದರೆ ಕಳೆದ ವರ್ಷ ನಾನು ಮೆಕ್ಸಿಕೊ, ಅರ್ಜೆಂಟೀನಾ ಮತ್ತು ಬ್ರೆಜಿಲ್‌ಗೆ ಭೇಟಿ ನೀಡಿದಾಗ, ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ದೊಡ್ಡದೇ ಅಥವಾ ಚಿಕ್ಕದಾಗಿದೆಯೇ ಎಂದು ನಾನು ಪ್ರಶ್ನಿಸಿದಾಗ, ಅವರು ಬಹಳ ದೊಡ್ಡದು ಎಂದು ಉತ್ತರಿಸಿದರು. ಬಹುಶಃ ಇಲ್ಲಿ ಆಸ್ಟ್ರಿಯಾದಲ್ಲಿ ಅದು ಚಿಕ್ಕದಾಗಿದೆ.

ಅಲ್ಲದೆ ನಾನು ಕೇಳಿದೆ, “ಭ್ರಷ್ಟಾಚಾರದ ಮಟ್ಟ ದೊಡ್ಡದೋ ಚಿಕ್ಕದೋ?” ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ಮಾತಿನ ಮತ್ತು ಪತ್ರಿಕಾ ಸ್ವತಂತ್ರವಿದ್ದರೂ, ಅಲ್ಲಿ ಬಹಳಷ್ಟು ಭ್ರಷ್ಟಾಚಾರವಿರಬಹುದು. ಇದಕ್ಕೆ ಕಾರಣ, ಸ್ವಯಂ ಶಿಸ್ತಿನ ಮತ್ತು ನೈತಿಕ ತತ್ವಗಳ ಕೊರತೆ. ಉದಾಹರಣೆಗೆ, ಭಾರತವು ಬಹಳ ಧಾರ್ಮಿಕವಾದ ರಾಷ್ಟ್ರವಾಗಿದ್ದರೂ, ಅಲ್ಲಿ ಬಹಳಷ್ಟು ಭ್ರಷ್ಟಾಚಾರವಿದೆ. ಅನೇಕ ಭಾರತೀಯರ ಮನೆಗಳಲ್ಲಿ, ದೇವರು ಮತ್ತು ದೇವತೆಗಳ ವಿಗ್ರಹಗಳಿದ್ದು, ಅವುಗಳಿಗೆ ಧೂಪದ್ರವ್ಯ, ಹೂವುಗಳು ಮತ್ತು ಪ್ರಾರ್ಥನೆಗಳನ್ನು ಅರ್ಪಿಸುತ್ತಾರೆ, ಆದರೆ ಕೆಲವೊಮ್ಮೆ ನಾನು ತಮಾಷೆ ಮಾಡುತ್ತೇನೆ, ಅವರ ಪ್ರಾರ್ಥನೆಯಿರುವುದು "ನನ್ನ ಭ್ರಷ್ಟಾಚಾರ ಯಶಸ್ವಿಯಾಗಲಿ" ಎಂದು. ಆದ್ದರಿಂದ, ಇದು ಬಹಳಾ ದುಃಖಕರ ಸಂಗತಿ. ಧಾರ್ಮಿಕ ಮನಸ್ಸಿನವರಾದರೂ ಬಹಳಷ್ಟು ಜನರು ಭ್ರಷ್ಟರಾಗಿದ್ದಾರೆ. ಅವರು ನಂಬಿಕೆಯುಳ್ಳವರು ಎಂದು ಹೇಳಕೊಳ್ಳುತ್ತಾರೆ, ಆದರೆ ಅವರು ತಮ್ಮ ಧರ್ಮದ ತತ್ವಗಳನ್ನು ನಿಜವಾಗಿ ನಿರ್ವಹಿಸುವ ಮತ್ತು ದೇವರನ್ನು ಭಯಪಡುವ ಮಟ್ಟಿಗೆ ನಂಬುವವರಲ್ಲ.

ಕೆಲವು ವರ್ಷಗಳ ಹಿಂದೆ, ನಾನು ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ಮತ್ತು ಅವುಗಳ ಲಾಭ ಹೇಗೆ ಪಾರದರ್ಶಕವಾಗಿಲ್ಲ ಎಂಬುದರ ಕುರಿತು ಒಬ್ಬ ವಿದ್ವಾಂಸರೊಂದಿಗೆ ಚರ್ಚಿಸಿದ್ದೆ. ನಾವು ಈ ವಿಷಯಗಳ ಬಗ್ಗೆ ಚರ್ಚೆ ಮಾಡುವಾಗ ನಾನು ಹೇಳಿದೆ "ಈ ಕಂಪನಿಗಳನ್ನು ನಡೆಸುವವರು ದೇವರ ಬಗ್ಗೆ ತಗ್ಗಿಬಗ್ಗಿ ನಡೆಯುತ್ತೇವೆ ಎನ್ನುತ್ತಾರೆ, ಹಾಗಾದರೆ ಅವರು ಸ್ವಲ್ಪ ಶಿಸ್ತು ಕಲಿತುಕೊಳ್ಳಬೇಕು", ಅದಕ್ಕೆ ಉತ್ತರವಾಗಿ ಅವರು ಹೇಳಿದರು,"ಅದು ಹದಿನೆಂಟನೇ ಶತಮಾನದ ಯೋಚನೆ" ಎಂದು. ಹೀಗೆ, ಈ ಜನರು ದೇವರನ್ನು ಪ್ರಾರ್ಥಿಸಬಹುದಾದರೂ, ಅವರು ಅದರ ಬಗ್ಗೆ ತೀರಾ ಗಂಭೀರವಾಗಿಲ್ಲ. ಅವರು ಗಂಭೀರವಾಗಿದ್ದರೆ, ಅವರ ದೇವರ ಸಲಹೆಗಳಾದ ಪ್ರಾಮಾಣಿಕತೆ, ಕಾಳಜಿ ಮತ್ತು ನೈತಿಕತೆಯನ್ನು ಅನುಸರಿಸಬೇಕು. ಹೀಗಾಗಿ ನಾವು ಇತರರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಆದ್ದರಿಂದ, ನಾವು ನೈತಿಕ ನೀತಿಶಾಸ್ತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕು, ಇದರರ್ಥ ಸ್ವಯಂ-ಶಿಸ್ತಿಗೆ ಹೆಚ್ಚಿನ ಒತ್ತು ನೀಡಬೇಕು. ಕರ್ತವ್ಯ ಅಥವಾ ಭಯದಿಂದ ಅಲ್ಲ, ಬದಲಿಗೆ ಸ್ವಯಂಪ್ರೇರಣೆಯಿಂದ, "ನಾನು ಈ ಕಾರ್ಯದಲ್ಲಿ ತೊಡಗಿಸಿಕೊಂಡರೆ, ಅದು ನೈತಿಕ ತತ್ವಗಳಿಗೆ ವಿರುದ್ಧವಾಗಿದೆ" ಎಂಬ ಅರಿವಿಕೆಯ ಆಧಾರದ ಮೇಲೆ.

ನೈತಿಕತೆಯನ್ನು ಹೆಚ್ಚಿಸಲು ನಾವು ಹೆಚ್ಚು ಶ್ರಮ ಪಡಬೇಕು, ಇಲ್ಲದಿದ್ದರೆ ಜನಸಂಖ್ಯೆಯು ಹೆಚ್ಚಾದಂತೆ ಮತ್ತು ಸಂಪನ್ಮೂಲಗಳು ಕಡಿಮೆಯಾದಂತೆ, ಇನ್ನೂ ಹೆಚ್ಚು-ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ನಾವು ಈ ಇಪ್ಪತ್ತೊಂದನೇ ಶತಮಾನವನ್ನು ಕರುಣಾಮಯಿ ಶತಮಾನವನ್ನಾಗಿ ಮಾಡುವಲ್ಲಿ ಪ್ರಯತ್ನಪಡಬೇಕಾಗಿದೆ. ಅದು ನೈತಿಕ ನೀತಿ, ಜಾತ್ಯತೀತ ನೀತಿಗಳ ಮೂಲ ತತ್ವ.

ನೈತಿಕ ನೀತಿಗಳು ಮತ್ತು ಸೌಹಾರ್ದತೆಯ ನಡುವೆ ಗಾಢವಾದ ಸಂಬಂಧವಿದೆ. ಇದರರ್ಥ, ಇತರರ ಬಗ್ಗೆ ಹೆಚ್ಚು ಹೆಚ್ಚು ಕಾಳಜಿ ವಹಿಸುವುದು. ಅವರು ಕೂಡ ಸಂತೋಷವಾಗಿರಲು ಬಯಸುತ್ತಾರೆ; ದುಃಖವನ್ನು ಬಯಸುವುದಿಲ್ಲ, ಹೀಗೆ ನಾವೆಲ್ಲರೂ ಪರಸ್ಪರ ಸಂಬಂಧಿತರಾಗಿದ್ದೇವೆ. ಅವರ ಸಂತೋಷವೇ ನಮ್ಮ ಸಂತೋಷದ ಮೂಲ. ನಾವು ಇದನ್ನು ಅರ್ಥಮಾಡಿಕೊಂಡಾಗ ಮತ್ತು ಅವರನ್ನು ಗೌರವಿಸಿದಾಗ ಸುಳ್ಳು, ಮೋಸ, ಬೆದರಿಕೆ ಅಥವಾ ಶೋಷಣೆಗೆ ಅವಕಾಶವಿರುವುದಿಲ್ಲ. ಈ ಪ್ರಕಾರ ಸೌರ್ಹಾದತೆಯು ಸಂತೋಷದ ಮೂಲವಾಗಿದೆ; ಮತ್ತು ಇದು ನಮ್ಮ ತಾಯಂದಿರ ಸಮಯದಿಂದ ಜೈವಿಕ ಅಂಶವಾಗಿ ಬಂದಿರುತ್ತದೆ: ನಾವು ನಮ್ಮ ತಾಯಂದಿರ ಪ್ರೀತಿಯ ಮೂಲಕ, ಅವರ ಹಾಲಿನ ಮೂಲಕ ಬದುಕಿದ್ದೇವೆ. ಈ ಅನುಭವವು ನಮ್ಮ ಜೀನ್‌ಗಳಲ್ಲಿ ಮತ್ತು ನಮ್ಮ ರಕ್ತದಲ್ಲಿ ಬೆರೆತಿವೆ. ಪ್ರಶ್ನೆಯೆಂದರೆ: ಮಕ್ಕಳು ಇತರರಿಂದ ಹಣ ಮತ್ತು ಸಾಂಸ್ಕೃತಿಕ ವಿಷಯಗಳಿಗಿಂತ, ಪ್ರೀತಿಯನ್ನು ದೊರೆಯುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಆದರೆ ಅವರು ದೊಡ್ಡವರಾದಂತೆ, ಅವರು ಬುದ್ಧಿವಂತರಾಗದಿದ್ದಲ್ಲಿ, ಅವರ ಮೌಲ್ಯಗಳು ಕುಸಿಯುತ್ತವೆ. ಏಕೆ? ಏಕೆಂದರೆ ಅವರು ಹೆಚ್ಚು ಸ್ವಯಂ-ಕೇಂದ್ರಿತರಾಗುತ್ತಾರೆ. ಅವರು ಇತರರಿಗೆ ಸಹಾಯ ಮಾಡಿದರೆ ಅದು “ಪ್ರತಿಯಾಗಿ ನಾನು ಏನು ಪಡೆಯುತ್ತೇನೆ?" ಎಂಬ ಸ್ವಯಂ ಆಸಕ್ತಿಯಿಂದ. ಆದ್ದರಿಂದ ಸ್ವಯಂ-ಕೇಂದ್ರಿತತೆಯು, ದೊಡ್ಡ ಸಮಸ್ಯೆಗಳ ಮೂಲವಾಗಿರುವ "ನಾನು" ಎಂಬುದರ ಮಹತ್ವವನ್ನು ಬೆಂಬಲಿಸುತ್ತದೆ. ನಾವು ಯುರೋಪಿಯನ್ ಒಕ್ಕೂಟದ ಭಾಗವಾಗಿ ಅಥವಾ ಇಡೀ ಪ್ರಪಂಚದ ಭಾಗವಾಗಿ ಪರಿಗಣಿಸುವ ಮೂಲಕ ಇಡೀ ಮಾನವೀಯತೆಯನ್ನು "ನಾವು" ಎಂದು ಪರಿಗಣಿಸಬೇಕಾಗಿದೆ. ಈ ಪ್ರಪಂಚದ ಎಲ್ಲಾ ಏಳು ಶತಕೋಟಿ ಜನರನ್ನು "ನಾವು" ಎಂದು ಪರಿಗಣಿಸಬೇಕು ಮತ್ತು ನಾವೆಲ್ಲರೂ ಕೂಡ "ನಾವು"ವಿನ ಭಾಗವಾಗಿದ್ದೇವೆ; ಈ ಚಿಕ್ಕದಾದ "ನಾನು" ಪರಿಭಾಷೆಯಲ್ಲಿ ಯೋಚಿಸಬೇಡಿ. ಹಾಗಾಗಿ, ನಾವು ಶ್ರೀಮಂತರು ಮತ್ತು ಬಡವರಿಬ್ಬರನ್ನೂ ಗೌರವಿಸಬೇಕು. ಆರ್ಥಿಕವಾಗಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿಯೂ, ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕು. ಇಂತಹ ಗೌರವವು ನಾವು ಇತರರ ಯೋಗಕ್ಷೇಮದ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳುವುದರಿಂದ ಬರುತ್ತದೆ.

ಇದು ಧರ್ಮದ ಭಾಗವೇನಲ್ಲ; ಧರ್ಮವು ಸ್ವಂತದ ವಿಷಯ; ಆದರೆ ಇವೆಲ್ಲವೂ ಮಾನವೀಯತೆಯ ವಿಷಯವಾಗಿವೆ. ನಾವು ಎಲ್ಲರನ್ನು ಗೌರವಿಸಿದರೆ, ಶೋಷಣೆ ಇರುವುದಿಲ್ಲ. ಅಲ್ಲದೆ, ಸೌಹಾರ್ದತೆಯು ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ನಿರಂತರ ಅಪಾಯದಿಂದ ಮತ್ತು ಭಯಭೀತರಾಗಿರುವುದರಿಂದ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ ಎಂದು ಕೆಲವು ವಿಜ್ಞಾನಿಗಳು ಹೇಳುತ್ತಾರೆ, ಆದ್ದರಿಂದ ನಾವು ಸ್ವಯಂ-ಕೇಂದ್ರಿತವಾಗಿದ್ದಾಗ ನಾವು ನಮ್ಮಿಂದಲೇ ಸಾಕಷ್ಟು ಭಯವನ್ನು ಅನುಭವಿಸುತ್ತೇವೆ ಮತ್ತು ಇತರರ ಬಗ್ಗೆ ಹೆಚ್ಚಿನ ಸಂಶಯ ಬೆಳೆಸಿಕೊಳ್ಳುತ್ತೇವೆ. ಇದು ಒಂಟಿತನ ಮತ್ತು ಭಯಕ್ಕೆ ಕಾರಣವಾಗುತ್ತದೆ, ನಂತರ ಹತಾಶೆಗೆ ಮತ್ತು ಅಂತಿಮವಾಗಿ ಕೋಪಕ್ಕೆ ಕಾರಣವಾಗುತ್ತದೆ. ಆದರೆ ಒಮ್ಮೆ, ನಾವು ನಮ್ಮ ಹೃದಯವನ್ನು ತೆರೆದು ಇತರರ ಬಗ್ಗೆ ಕಾಳಜಿಯನ್ನು ಬೆಳೆಸಿಕೊಂಡಾಗ, ನಾವು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುತ್ತೇವೆ. ಆ ಮೂಲಕ ನಾವು ಮುಕ್ತವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬಹುದು. ನಾವು ಯಾರನ್ನೇ ನೋಡಿದರೂ, ಭೇಟಿಯಾದರೂ, ನಮ್ಮ ಸುತ್ತಮುತ್ತ ಇರುವವರನ್ನು ನಮ್ಮ ಸಹೋದರ ಮತ್ತು ಸಹೋದರಿಯರೆಂದು ಪರಿಗಣಿಸುತ್ತೇವೆ; ನಾವು ಸೌಹಾರ್ದತೆಯಿಂದ ಇತರರ ಬಗ್ಗೆ ಕಾಳಜಿವಹಿಸದರೆ, ಹೆಚ್ಚಿನ ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಹಾಗೆ ಯಾವಾಗಲೂ ಆಗುವುದಿಲ್ಲ. ನಾನು ಕಾರಿನಲ್ಲಿ ಸುತ್ತಾಡಿದಾಗಲೆಲ್ಲಾ ದಾರಿಯುದ್ದಕ್ಕೂ ಜನರನ್ನು ನೋಡಿ ಅವರತ್ತ ನಗುಬೀರುತ್ತೇನೆ. ಜರ್ಮನಿಯಲ್ಲಿ ಒಮ್ಮೆ ನಾನು ಪಾದಚಾರಿ ಮಾರ್ಗದಲ್ಲಿ ಒಬ್ಬ ಮಹಿಳೆಯನ್ನು ನೋಡಿ ಮುಗುಳ್ನಕ್ಕಾಗ ಅವಳು ತುಂಬಾ ಅನುಮಾನಗೊಂಡಳು, ಆದ್ದರಿಂದ ನನ್ನ ನಗು ಅವಳಿಗೆ ಸಂತೋಷವನ್ನುಂಟುಮಾಡುವ ಬದಲು ಭಯವನ್ನು ಉಂಟುಮಾಡಿತು, ಆದ್ದರಿಂದ ನಾನು ತಲೆ ತಿರುಗಿಸಿದೆ. ಆದರೆ ಸಾಮಾನ್ಯವಾಗಿ ಹೀಗಾಗುವುದಿಲ್ಲ.

ಸೌಹಾರ್ದತೆಯು ನಮ್ಮ ತಾಯಂದಿರಿಂದ ನಾವು ಕಲಿಯುತ್ತೇವೆ, ಆದ್ದರಿಂದ ಅದನ್ನು ನಮ್ಮ ಜೀವನದುದ್ದಕ್ಕೂ ಕೊಂಡೊಯ್ಯುವ ಅಗತ್ಯವಿದೆ. ವಿಜ್ಞಾನ ಸಭೆಯಲ್ಲಿ ನಾವು ಒಂದು ಸ್ಲೋಗನ್ ಅನ್ನು ಹೊಂದಿದ್ದೇವೆ: "ಸ್ವಸ್ಥ ಮನಸ್ಸು, ಸ್ವಸ್ಥ ದೇಹ." ಇದಕ್ಕಾಗಿ ನಾವು ವಾಸ್ತವವನ್ನು ತಿಳಿದುಕೊಳ್ಳಬೇಕು, ಶಾಂತಿಯುತ ಮನಸ್ಥಿತಿಯನ್ನು ಹೊಂದಿರಬೇಕು; ನಾವು ತೊಂದರೆಗೊಳಗಾದರೆ, ನಾವು ಪಕ್ಷಪಾತಿಗಳಾಗುತ್ತೇವೆ ಮತ್ತು ವಾಸ್ತವವನ್ನು ಕಾಣದೇ ಇರುವುದರಿಂದ ಬಹಳಷ್ಟು ಸಮಸ್ಯೆಗಳು ಎದುರು ಬರುತ್ತವೆ. ಆದ್ದರಿಂದ ಸೌರ್ಹಾದತೆಯು ಶಾಂತ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ನಮ್ಮಲ್ಲಿ ಶಾಂತ ಮನಸ್ಥಿತಿ ಇಲ್ಲದಿದ್ದರೆ, ಇದು ನಮ್ಮ ಶಿಕ್ಷಣದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮನಸ್ಸು ಶಾಂತವಾಗಿ ಮತ್ತು ಸಂತೋಷವಾಗಿರದಿದ್ದರೆ, ಕಲಿಕೆ ಬಹಳಾ ಕಷ್ಟ; ಆದ್ದರಿಂದ ಶಾಂತ ಮನಸ್ಸು ರಾಜಕೀಯ ಸೇರಿದಂತೆ ಎಲ್ಲಾ ಕೆಲಸಗಳನ್ನು ಮತ್ತು ಎಲ್ಲಾ ವೃತ್ತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮನಸ್ಸಿನ ಶಾಂತಿಯು ಆತ್ಮ ವಿಶ್ವಾಸಕ್ಕೆ ಕಾರಣವಾಗುತ್ತದೆ ಮತ್ತು ಆತ್ಮ ವಿಶ್ವಾಸದಿಂದ ನಾವು ವಾಸ್ತವವನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ ಮತ್ತು ಅದರ ಆಧಾರದ ಮೇಲೆ ನಾವು ಹೆಚ್ಚು ಹೆಚ್ಚು ಸೌಹಾರ್ದತೆಯನ್ನು ಬೆಳೆಸಿಕೊಳ್ಳುತ್ತೇವೆ.

ಇವು ಜಾತ್ಯತೀತ ನೀತಿಯ ಮೂಲ ತತ್ವಗಳು ಮತ್ತು ಸಂತೋಷದ ಕಲೆಯ ಕೀಲಿಕೈ. ನನಗಾಗಿ, ಇವು ಸಾಕಷ್ಟು ಉಪಕಾರಿಯಾಗಿವೆ ಎಂದು ಕಂಡುಕೊಂಡಿದ್ದೇನೆ. ಇವು ಅರ್ಥಪೂರ್ಣವೆನಿಸಿದರೆ, ಇವನ್ನು ಅಭ್ಯಸಿಸಲು ಪ್ರಯತ್ನಿಸಿ. ನಿಮಗೆ ಅರ್ಥಹೀನವೆನಿಸಿದ್ದಲ್ಲಿ, ಇವನ್ನು ಮರೆತುಬಿಡಿ. ಧನ್ಯವಾದಗಳು.

Top