ಕೋಪವನ್ನು ನಿಭಾಯಿಸಲು 8 ಬೌದ್ಧ ಸಲಹೆಗಳು

ಇಂದು ನಾವು ನಮ್ಮ ಕೋಪವನ್ನು ವ್ಯಕ್ತಪಡಿಸುವಂತೆ ಉತ್ತೇಜಿಸುವ ಯುಗದಲ್ಲಿ ವಾಸಿಸುತ್ತಿದ್ದೇವೆ, ಆದರೆ ಇದನ್ನು ಬುದ್ಧನು ಸಮ್ಮತಿಸುವುದಿಲ್ಲ. ಕೋಪದಿಂದ ವರ್ತಿಸುವುದರಿಂದ, ಭವಿಷ್ಯದಲ್ಲಿ ಮತ್ತೆ ಹಾಗೆ ಮಾಡುವುದು ಸುಲಭವಾಗುತ್ತದೆ, ಮತ್ತು ಇದರಿಂದ ಎಂದಿಗೂ ಅಂತ್ಯವಿಲ್ಲದ ಚಕ್ರವೊಂದು ಸೃಷ್ಟಿಯಾಗುತ್ತದೆ. ಬುದ್ಧ, ನಮ್ಮ ಭಾವನೆಗಳನ್ನು ಅಡಗಿಸುವಂತೆ ಅಥವಾ ಉಕ್ಕಿ ಹರಿಯಲು ಬಿಡುವಂತೆ ಸಲಹೆ ನೀಡುವುದಿಲ್ಲ, ಬದಲಿಗೆ ಅವುಗಳನ್ನು ವಿಶ್ಲೇಷಿಸಲು ಮತ್ತು ಕೋಪದ ಹಿಂದಿನ ತಪ್ಪು ಆಲೋಚನೆಯನ್ನು ಅರ್ಥಮಾಡಿಕೊಳ್ಳಲು ಸಲಹೆ ನೀಡುತ್ತಾರೆ.
Study buddhism 8 buddhist tips dealing with anger

ಬೌದ್ಧರು ಪ್ರೀತಿ, ಸಹಾನುಭೂತಿ ಮತ್ತು ಸಹಿಷ್ಣುತೆಯ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ, ಆದರೆ ದಲೈ ಲಾಮಾ ಅವರಂತಹ ಮಹಾನ್ ಗುರುಗಳೇ ಕೆಲವೊಮ್ಮೆ ಕೋಪಗೊಂಡಿರುವುದನ್ನು ಒಪ್ಪಿಕೊಂಡಾಗ, ನಮ್ಮಂತಹವರು ಏನು ಮಾಡಲು ಸಾಧ್ಯ? ಕೋಪದ ಭಾವನೆಯು ಸಂಪೂರ್ಣವಾಗಿ ಸಾಮಾನ್ಯವಾದದ್ದು ಎಂದು ವಿಜ್ಞಾನ ಹೇಳಬಹುದು, ಮನಶ್ಶಾಸ್ತ್ರಜ್ಞರು ನಮ್ಮ ಕೋಪವನ್ನು ವ್ಯಕ್ತಪಡಿಸುವಂತೆ ಸಲಹೆ ನೀಡಬಹುದು ಮತ್ತು ಕೆಲವು ಧರ್ಮಗಳು ನ್ಯಾಯಯುತ ಕೋಪವನ್ನು ಹೊಂದಿರಬಹುದು. ಮತ್ತೊಂದೆಡೆ, ಬೌದ್ಧಧರ್ಮವು ಕೋಪವು ಯಾವಾಗಲೂ ಕೆಟ್ಟದ್ದಾಗಿರುತ್ತದೆ ಎಂದು ಹೇಳುತ್ತದೆ. 

8ನೇ ಶತಮಾನದ ಬೌದ್ಧ ವಿದ್ವಾಂಸ ಶಾಂತಿದೇವ, ಕೋಪವನ್ನು ಅತ್ಯಂತ ನಕಾರಾತ್ಮಕ ಶಕ್ತಿ ಎಂದು ಬಣ್ಣಿಸಿದ್ದು, ನಾವು ಬಹಳಾ ಕಷ್ಟಪಟ್ಟು ಸೃಷ್ಟಿಸಿದ ಕ್ಷೇಮವನ್ನು ನಾಶಮಾಡುವ ಸಾಮರ್ಥ್ಯವನ್ನು ಅದು ಹೊಂದಿರುವುದು. ಅದರ ಬಗ್ಗೆ ಸ್ವಲ್ಪ ಯೋಚಿಸಿ. ಒಂದು ಕ್ಷಣದ ಕೋಪದಲ್ಲಿ, ಬಂದೂಕೊಂದು ಕೈಗೆ ಸಿಕ್ಕರೆ, ಒಬ್ಬರ ಭವಿಷ್ಯವು, ಸ್ವಾತಂತ್ರ್ಯದ ಜೀವನದಿಂದ ಕಂಬಿ ಎಣಿಸುವಂತಹ ಜೀವನಕ್ಕೆ ಸಂಪೂರ್ಣವಾಗಿ ಬದಲಾಗಬಹುದು. ಇನ್ನು ದಿನನಿತ್ಯದ ಉದಾಹರಣೆಯೆಂದರೆ, ಕೋಪವು ದಶಕಗಳಿಂದ ನಿರ್ಮಿಸಲ್ಪಟ್ಟ ಸ್ನೇಹ ಮತ್ತು ವಿಶ್ವಾಸವನ್ನು ನಾಶಪಡಿಸಬಹುದು. ಅಂತಿಮವಾಗಿ, ಪ್ರಪಂಚದ ಎಲ್ಲಾ ಬಾಂಬ್‌ಗಳು ಮತ್ತು ಬಂದೂಕುಗಳು ಮತ್ತು ಚಾಕುಗಳನ್ನು ಒಟ್ಟಿಗೆ ಸೇರಿಸಿದರೂ, ಕೋಪ ಅವುಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ. 

ಕೋಪವು ಮನಸ್ಸಿನ ಸಂತೋಷದ ಸ್ಥಿತಿಯಲ್ಲ ಎಂದು ನಮಗೆ ತಿಳಿದಿದೆ, ಆದರೆ ಅದರ ಬಗ್ಗೆ ನಾವು ಏನು ಮಾಡಬಹುದು? ಬೌದ್ಧಧರ್ಮವು ನಮ್ಮ ಮನಸ್ಸನ್ನು ಪರಿವರ್ತಿಸಲು ಸಹಾಯ ಮಾಡುವ ಹಲವಾರು ಸರಳ ವಿಧಾನಗಳನ್ನು ನೀಡುತ್ತದೆ. ಎಚ್ಚರಿಕೆ – ಇಲ್ಲಿ ಯಾವುದೇ ಮ್ಯಾಜಿಕ್ ಮಾತ್ರೆ ಇಲ್ಲ! ಕೋಪವನ್ನು ನಿಭಾಯಿಸಲು ಪ್ರಮುಖವಾದ ಎಂಟು ಬೌದ್ಧ ಸಲಹೆಗಳು ಇಲ್ಲಿವೆ: 

ಇದೇ ಜೀವನ: ಸಂಸಾರ 

2,500 ವರ್ಷಗಳ ಹಿಂದೆ ಬುದ್ಧನ ಮೊದಲ ಬೋಧನೆಯು ನೇರವಾಗಿ, ದಿಟ್ಟವಾಗಿ ಹೇಳುತ್ತದೆ: ಜೀವನವು ಅತೃಪ್ತಿಕರವಾಗಿದೆ. ಅದಲ್ಲದೆ ಇನ್ನೊಂದು ವಿಷಯ. ನಮ್ಮ ಜೀವನ ಎಂದಿಗೂ ತೃಪ್ತಿಕರವಾಗುವುದಿಲ್ಲ

ನಾವು ಹುಟ್ಟುತ್ತೇವೆ, ಸಾಯುತ್ತೇವೆ. ನಡುವೆ ಒಳ್ಳೆಯ ಕ್ಷಣಗಳಿರುತ್ತವೆ ಮತ್ತು ಕೆಟ್ಟ ಕ್ಷಣಗಳಿರುತ್ತವೆ, ಮತ್ತು ಕೆಲವು ಕ್ಷಣಗಳನ್ನು ಬಹುಶಃ ನಾವು ಹೆಚ್ಚಾಗಿ ಅನುಭವಿಸುವುದೇ ಇಲ್ಲ: ಈ ಅಂತ್ಯವಿಲ್ಲದ ಚಕ್ರವನ್ನು ಬೌದ್ಧಧರ್ಮವು "ಸಂಸಾರ" ಎಂದು ಕರೆಯುತ್ತದೆ. ನಾವು ಈ ಜಗತ್ತಿಗೆ ಬಂದಾಗ, ಜೀವನವು ಸುಂದರವಾಗಿರುತ್ತದೆ ಮತ್ತು ಸುಲಭವಾಗಿರುತ್ತದೆ ಮತ್ತು ಎಂದೆಂದಿಗೂ ವಿನೋದಮಯವಾಗಿರುತ್ತದೆ, ಮತ್ತು ನಾವು ಬಯಸಿದಂತೆಯೇ ಯಾವಾಗಲೂ ನಿಖರವಾಗಿ ನಡೆಯುತ್ತದೆ ಎಂದು ಯಾರು ಹೇಳುವುದಿಲ್ಲ. ಸಂಸಾರದಲ್ಲಿನ ನಮ್ಮದೇ ಆದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಾಗ, ಅದು ಎಲ್ಲರನ್ನೂ ಅರ್ಥಮಾಡಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ. 

ಇದರಲ್ಲಿ ನಾವೆಲ್ಲ ಒಟ್ಟಾಗಿದ್ದೇವೆ. ಸಂದರ್ಭಗಳ ಮೇಲೆ, ಇತರರ ಮೇಲೆ ಅಥವಾ ನಮ್ಮ ಮೇಲೆ ಕೋಪಗೊಳ್ಳುವುದರಿಂದ ಯಾವುದನ್ನೂ ಸಡಿಲಗೊಳಿಸಲಾಗುವುದಿಲ್ಲ. ಇತರ ಜನರು ನಮಗೆ ಇಷ್ಟವಾಗದಂತೆ ಮಾತನಾಡುತ್ತಾರೆ ಮತ್ತು ನಡೆದುಕೊಳ್ಳುತ್ತಾರೆ, ಏಕೆಂದರೆ, ನಮ್ಮಂತೆಯೇ, ಅವರ ಜೀವನವೂ ಸಹ ಹದಗೆಟ್ಟಿರುತ್ತದೆ.  

ಈ ರೀತಿಯ ಚಿಂತನೆಯು ನಮ್ಮ ದೃಷ್ಟಿಕೋನವನ್ನು ಆಮೂಲಾಗ್ರವಾಗಿ ಪರಿವರ್ತಿಸಬಹುದು. ನಮ್ಮಲ್ಲಿ, ಪ್ರತಿಯೊಬ್ಬರೂ ನಮ್ಮದೇ ಆದ ಬ್ರಹ್ಮಾಂಡದ ಕೇಂದ್ರವಾಗಿದ್ದರೂ ಸಹ, ಎಲ್ಲವೂ ನಮಗೆ ಬೇಕಾದ ರೀತಿಯಲ್ಲೇ ನಿಖರವಾಗಿ ನಡೆಯಲು – ಅಥವಾ ನಾವು ಹೇಳಿದಂತೆಯೇ ಆಗಲು ಸಾಧ್ಯವಿಲ್ಲ. 

ವೀರರಾಗಿರಿ: ತಾಳ್ಮೆ 

ಗೊಂದಲದ ಭಾವನೆಗಳಿಗೆ ಅವುಗಳ ಎದುರಾಳಿಗಳೇ ಎದುರುತ್ತರ ನೀಡಬೇಕು; ಬೆಂಕಿಯನ್ನು ಬೆಂಕಿಯಿಂದಲೇ ಜಯಿಸಲು ಸಾಧ್ಯವಿಲ್ಲ. ಏಕೆ? ಏಕೆಂದರೆ ನಮ್ಮ ಮನಸ್ಸಿಗೆ, ಎರಡು ವಿರುದ್ಧವಾದ ಭಾವನೆಗಳನ್ನು ಏಕಕಾಲದಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯ. ನೀವು ಒಬ್ಬರ ಮೇಲೆ ಕಿರುಚಾಡಿ, ಅದೇ ಸಮಯದಲ್ಲಿ ಅವರೊಂದಿಗೆ ತಾಳ್ಮೆಯಿಂದ ವರ್ತಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಅನೇಕರು ತಾಳ್ಮೆಯನ್ನು ದೌರ್ಬಲ್ಯದ ಸಂಕೇತವಾಗಿ ನೋಡುತ್ತಾರೆ, ನೀವು ಇತರರಿಗೆ ನಿಮ್ಮ ಮೇಲೆ ಹರಿಹಾಯುವಂತೆ ಮತ್ತು ಅವರು ಬಯಸಿದ್ದನ್ನು ಪಡೆಯಲು ಅವಕಾಶ ಮಾಡಿಕೊಟ್ಟಂತೆ ನೋಡುತ್ತಾರೆ. ಆದರೆ ವಾಸ್ತವವು ಅದಕ್ಕಿಂತ ಭಿನ್ನವಾಗಿದೆ. ನಾವು ನಿರಾಶೆಗೊಂಡಾಗ, ಕೇವಲ ಕಿರುಚುವುದು ಮತ್ತು ಕೂಗುವುದು ಎಷ್ಟು ಸುಲಭ? ಮತ್ತು ಶಾಂತವಾಗಿರಲು ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸಲು ಎಷ್ಟು ಕಷ್ಟ? ನಮ್ಮ ಭಾವನೆಗಳು ನಮ್ಮನ್ನು ಯಾವ ದಿಕ್ಕಿನಲ್ಲಿ ಎಳೆಯುತ್ತವೆಯೋ ಆ ದಿಕ್ಕಿನಲ್ಲಿ ಹೋಗುವುದು ನಮ್ಮನ್ನು ವೀರರಾಗಿ ಮಾಡುವುದಿಲ್ಲ - ಅದು ನಮ್ಮನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಗಂಟಲು ಬಿರಿಯುವಂತೆ ಕಿರುಚುವ ಅಂಚಿನಲ್ಲಿರುವಾಗ, ನಿಮ್ಮ ತಾಳ್ಮೆಯ ಕತ್ತಿಯನ್ನು ಎಳೆಯಿರಿ ಮತ್ತು ನಿಮ್ಮ ಸ್ವಂತ ಕೋಪದ ತಲೆಯನ್ನು ಕತ್ತರಿಸಿ. 

ಹೇಗೆ? ನಾವು ಉದ್ವಿಗ್ನರಾಗಿರುವುದನ್ನು ಗಮನಿಸಿದರೆ, ನಾವು ಆಳವಾಗಿ ಉಸಿರಾಡಲು ಪ್ರಯತ್ನಿಸಬಹುದು - ನಾವು ಕೋಪಗೊಂಡಾಗ ನಮ್ಮ ಸಣ್ಣದಾದ, ತೀಕ್ಷ್ಣವಾದ ಉಸಿರಾಟಕ್ಕೆ ಇದು ನೇರವಾದ ಪ್ರತಿವಿಷವಾಗಿರುತ್ತದೆ. ನಾವು ನಂತರ ವಿಷಾದಿಸುವಂತಹ ಮಾತಗಳನ್ನಾಡುವುದನ್ನು ತಡೆಯಲು, ನಾವು ನಿಧಾನವಾಗಿ 100 ಕ್ಕೆ ಎಣಿಸಬಹುದು. ಅಥವಾ, ನಾವು ನೇರವಾದ ಘರ್ಷಣೆಯಲ್ಲಿದ್ದರೆ, ಪರಿಸ್ಥಿತಿಯು ಹದಗೆಟ್ಟುವ ಮೊದಲು, ನಾವು ನಮ್ಮನ್ನು ಆ ಸನ್ನಿವೇಶದಿಂದ ದೂರವಾಗುವಂತೆ ಕ್ರಮ ಕೈಗೊಳ್ಳಬಹುದು. ಪ್ರತಿಯೊಂದು ಸನ್ನಿವೇಶವೂ ವಿಭಿನ್ನವಾಗಿರುತ್ತದೆ, ಆದ್ದರಿಂದ ನಿಮಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ನಿಮ್ಮ ಬುದ್ಧಿಯನ್ನು ಬಳಸಬೇಕಾಗುತ್ತದೆ.

ವಾಸ್ತವವನ್ನು ಒಪ್ಪಿಕೊಳ್ಳಿ: ಪರಿಸ್ಥಿತಿಯನ್ನು ವಿಶ್ಲೇಷಿಸಿ 

ನಾವು ಕೋಪಗೊಂಡಾಗ, ನಮ್ಮ ಕೋಪವು ಒಂದು ರೀತಿಯ ರಕ್ಷಕನಂತೆ ಕಾಣುತ್ತದೆ, ಯುದ್ಧಭೂಮಿಯಲ್ಲಿ ನಮ್ಮೊಂದಿಗೆ ಹೋರಾಡುವ, ನಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳುವ ನಮ್ಮ ಆತ್ಮೀಯ ಸ್ನೇಹಿತನಂತೆ ಕಾಣುತ್ತದೆ. ಇದರಿಂದ ನಮ್ಮಲ್ಲಿ, ನಾವು ಕೋಪಗೊಳ್ಳುವುದನ್ನು ಸಮರ್ಥಿಸಬಲ್ಲೆವು ಎಂಬ ಭ್ರಮೆಯಿರುತ್ತದೆ. ಆದರೆ ನಾವು ಎಚ್ಚರವಿಟ್ಟು ನೋಡಿದರೆ, ಕೋಪವು ನಮ್ಮ ಗೆಳೆಯನಾಗಿರುವುದಿಲ್ಲ, ಬದಲಿಗೆ ನಮ್ಮ ಶತ್ರುವಾಗಿರುತ್ತದೆ. 

ಕೋಪವು ನಮ್ಮಲ್ಲಿ ನಿದ್ರೆ ಮತ್ತು ಹಸಿವನ್ನು ಕೆಳೆದುಕೊಳ್ಳಲು, ಒತ್ತಡ ಮತ್ತು ಯಾತನೆಯನ್ನು ಸೃಷ್ಟಿಸಲು ಕಾರಣವಾಗಿರುತ್ತದೆ. ನಾವು ಒಬ್ಬರ ಮೇಲೆ ಬಹಳ ಕಾಲ ಕೋಪಗೊಂಡರೆ, ಅದು ಇತರರ ಮೇಲೆ ದೀರ್ಘಕಾಲೀನ ಪ್ರಭಾವವನ್ನು ಉಂಟುಮಾಡುತ್ತದೆ. ಸತ್ಯವನ್ನು ಎದುರಿಸೋಣ: ಕುಪಿತ ವ್ಯಕ್ತಿಯೊಂದಿಗೆ ಬೆರೆಯಲು ಯಾರು ತಾನೇ ಬಯಸುತ್ತಾರೆ? 

ನಮ್ಮ ಮೇಲೆ ಯಾವುದಾದರೂ ಆರೋಪವನ್ನು ಹೇರಿಸಿದಾಗ, ಅದರಿಂದ ನಮ್ಮನ್ನು ರಕ್ಷಿಸುವಂತೆ ಹೊಟ್ಟೆಯು ಗಂಟಿಕ್ಕಲು ಶುರುವಾದಾಗ, ನಾವು ಅದನ್ನು ನಿಲ್ಲಿಸಿ, ತರ್ಕಬದ್ಧವಾಗಿ ಯೋಚಿಸಬೇಕು. ನಮಗಿರುವುದು ಕೇವಲ ಎರಡು ಆಯ್ಕೆಗಳು: ಒಂದೋ ಆರೋಪವು ನಿಜವಾಗಿದೆ, ಇಲ್ಲವಾದಲ್ಲಿ ಅದು ಸುಳ್ಳಾಗಿದೆ. ಇದು ನಿಜವಾಗಿದ್ದರೆ, ನಾವು ಏಕೆ ಕೋಪಗೊಳ್ಳಬೇಕು? ನಾವು ಹೆಚ್ಚು ಪ್ರಬುದ್ಧರಾಗಲು ಬಯಸಿದರೆ, ನಾವು ಅದನ್ನು ಒಪ್ಪಿಕೊಳ್ಳಬೇಕು, ಅದರಿಂದ ಕಲಿಯಬೇಕು ಮತ್ತು ನಮ್ಮ ಜೀವನವನ್ನು ಮುಂದುವರಿಸಬೇಕು. ಇದು ನಿಜವಲ್ಲದಿದ್ದರೆ, ನಾವು ಏಕೆ ಕೋಪಗೊಳ್ಳಬೇಕು? ಒಬ್ಬ ವ್ಯಕ್ತಿಯು ತಪ್ಪು ಮಾಡಿದ್ದಾನೆ – ನಾವೆಲ್ಲರೂ ಜೀವನದಲ್ಲಿ ತಪ್ಪು ಮಾಡಿದ್ದೇವೆ ಅಲ್ಲವೇ?

ನಿಮ್ಮ ಮನಸ್ಸನ್ನು ಗಮನಿಸಿ: ಧ್ಯಾನ 

ಕೋಪವನ್ನು ಎದುರಿಸಲು, ಧ್ಯಾನ ಮತ್ತು ಸಾವಧಾನತೆಯ ಅಭ್ಯಾಸಗಳು ಬಹಳಾ ಪ್ರಯೋಜನಕಾರಿಯಾಗಿರುತ್ತವೆ. ಬಹಳಷ್ಟು ಜನರು ಧ್ಯಾನದಿಂದ ಸಮಯ ವ್ಯರ್ಥವಾಗುತ್ತದೆ ಎಂದು ಯೋಚಿಸುತ್ತಾರೆ - ಚೆನ್ನಾಗಿ ಉಪಯೋಗಿಸಿಕೊಳ್ಳಬಹುದಾದ 20 ನಿಮಿಷಗಳನ್ನು ಕುಶನ್ ಮೇಲೆ ಕುಳಿತು ವ್ಯರ್ಥ ಮಾಡುವುದೇಕೆ? ಇತರರಿಗೆ, ಧ್ಯಾನವು ಜೀವನದ ವಾಸ್ತವತೆಯಿಂದ ತಪ್ಪಿಸಿಕೊಳ್ಳಲು, ನಮ್ಮ ಮಕ್ಕಳು/ಇಮೇಲ್‌ಗಳು/ಗಂಡ/ಹೆಂಡತಿಯಿಂದ ದೂರ ಕಳೆಯಲು ಉಪಕಾರಿ ಎಂದು ಭಾವಿಸುತ್ತಾರೆ. 

ಆದರೆ ಧ್ಯಾನವು ಅದಕ್ಕಿಂತ ಮಿಗಿಲಾದದ್ದು - ಇದು ಜೀವನದ ವಾಸ್ತವತೆಗಾಗಿರುವ ತಯಾರಿಯಾಗಿದೆ. ನಾವು ಪ್ರತಿದಿನ ಬೆಳಿಗ್ಗೆ ಸಹಾನುಭೂತಿಯ ಬಗ್ಗೆ ಧ್ಯಾನಿಸಿ, ಕೆಲಸಕ್ಕೆ ಬಂದ ಕೂಡಲೇ, ನಮ್ಮ ಉದ್ಯೋಗಿಗಳತ್ತ ಕಿರುಚಾಡಿ ಮತ್ತು ನಮ್ಮ ಸಹೋದ್ಯೋಗಿಗಳ ಬಗ್ಗೆ ದೂರು ನೀಡಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ.

ಧ್ಯಾನವು ನಮ್ಮ ಮನಸ್ಸನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪರಿಚಿತಗೊಳಿಸುತ್ತದೆ - ತಾಳ್ಮೆ, ಪ್ರೀತಿ, ಸಹಾನುಭೂತಿ - ಮತ್ತು ಇದನ್ನು ನಾವು ಎಲ್ಲಿಯಾದರೂ, ಯಾವಾಗ ಬೇಕಾದರೂ ಮಾಡಬಹುದು. ನಮ್ಮ ಬೆಳಗಿನ ಪ್ರಯಾಣದ ಅರ್ಧ ಗಂಟೆಯನ್ನು ನಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತಾ ಕಳೆದರೆ, ಅದರಲ್ಲಿ ಕನಿಷ್ಠ ಹತ್ತು ನಿಮಿಷಗಳ ಕಾಲ ನಾವು ಇತರರ ಬಗ್ಗೆ ಪ್ರೀತಿಯಿಂದ, ದಯೆಯಿಂದ ಯೋಚಿಸುತ್ತಾ ಕಳೆಯಬಹುದು – ಕೋಪವನ್ನು ಕಡಿಮೆ ಮಾಡಲು ಮತ್ತು ಇತರರು ಜೊತೆಗಿರಲು ಬಯಸುವಂತಹ ವ್ಯಕ್ತಿಯಾಗಲು ಇದು ಪರಿಣಾಮಕಾರಿಯಾಗಿರುತ್ತದೆ. 

ತಲೆಬಾಗಿಸಿ: ನಿಮ್ಮ ಶತ್ರುಗಳಿಂದ ಕಲಿಯಿರಿ 

ನಾವು ಸಾಮಾನ್ಯವಾಗಿ ಏನು ಮಾಡುಲಿಚ್ಛಿಸುತ್ತೇವೆಯೋ, ಅದಕ್ಕೆ ನೇರವಾಗಿ ವಿರುದ್ಧವಾಗಿ ನಡೆದುಕೊಳ್ಳುವಂತೆ ಬೌದ್ಧಧರ್ಮವು ನಮಗೆ ಉಪದೇಶಿಸುತ್ತದೆ. ನಾವು ಯಾರೊಂದಿಗಾದರೂ ಕೋಪಗೊಂಡಾಗ, ನಮ್ಮ ಮೊದಲ ಯೋಚನೆಯು ಸೇಡು ತೀರಿಸಿಕೊಳ್ಳುವುದಾಗಿರುತ್ತದೆ.  ಅದರ ಫಲಿತಾಂಶ? ನಾವು ಮೊದಲಿಗಿಂತ ಹೆಚ್ಚು ಶೋಚನೀಯ ಸ್ಥಿತಿಯಿಲ್ಲಿರುತ್ತೇವೆ. ಇದು ವಿರೋಧಾಭಾಸವಾಗಿ ತೋರಿದರೂ, ನಮ್ಮ ಅನಿಸಿಕೆಗೆ ವಿರುದ್ಧವಾಗಿ ನಡೆದರೆ, ನಮಗೆ ಅದರ ವಿರುದ್ಧವಾದ ಫಲಿತಾಂಶವನ್ನು ನೀಡುತ್ತದೆ: ಅದೇ ಸಂತೋಷದ ಮಾರ್ಗ. 

ಇದು ಹುಚ್ಚು ಮಾತಿನಂತೆ ತೋರಬಹುದು, ಆದರೆ ನಿಮ್ಮನ್ನು ಕೋಪಗೊಳಿಸುವುದನ್ನು ನಿಮ್ಮ ಗುರುವಾಗಿ ಸ್ವೀಕರಿಸುವ ಬಗ್ಗೆ ಯೋಚಿಸಿ. ನಾವು ಹೆಚ್ಚು ಪ್ರಬುದ್ಧರಾಗಲು ಬಯಸಿದರೆ - ಅಂದರೆ, ಹೆಚ್ಚು ತಾಳ್ಮೆ, ಹೆಚ್ಚು ಪ್ರೀತಿ, ದಯೆ, ಸಂತೋಷವಿರುವ ಜನರಾಗಲು - ನಾವು ಅಭ್ಯಾಸ ಮಾಡಬೇಕಾಗುತ್ತದೆ. ವಿಶ್ವ ದರ್ಜೆಯ ಫುಟ್‌ಬಾಲ್ ಆಟಗಾರ ಅಥವಾ ಪಿಟೀಲು ವಾದಕರಾಗಲು ಸಮಯ ಮತ್ತು ಶ್ರಮ ಬೇಕಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿರುವಂತೆಯೇ, ಮಾನಸಿಕ ವ್ಯಾಯಾಮಗಳನ್ನು ಕಲಿಯಲು ಸಹ ಇವು ಮುಖ್ಯವಾಗಿರುತ್ತವೆ. ನಮ್ಮ ಸುತ್ತಮುತ್ತ, ಕೇವಲ ನಮಗೆ ಬೇಕಾದ ಹಾಗೆ ಎಲ್ಲವನ್ನೂ ಮಾಡುವ ಮತ್ತು ಒಪ್ಪಿಕೊಳ್ಳುವ ಜನರಿದ್ದರೆ, ನಾವು ಎಂದಿಗೂ ಸವಾಲುಗಳನ್ನು ಎದುರಿಸುವುದಿಲ್ಲ. 

ಈ ರೀತಿಯಾಗಿ, ನಮ್ಮನ್ನು ಕೋಪಗೊಳಿಸುವ ವ್ಯಕ್ತಿಯು ಅತ್ಯಂತ ಅಮೂಲ್ಯವಾಗಿದ್ದು, ತಾಳ್ಮೆಯನ್ನು ಬೆಳೆಸಿಕೊಳ್ಳುವ ಒಂದು ಉತ್ತಮ ಅವಕಾಶವನ್ನು ನೀಡುತ್ತಾರೆ. ಇದು ತಕ್ಷಣವೇ ನಮ್ಮ ಕೋಪದ ಉಬ್ಬರವಿಳಿತವನ್ನು ಶಾಂತವಾಗಿಸುತ್ತದೆ, ಏಕೆಂದರೆ ಇದು ನಮ್ಮ ದೃಷ್ಟಿಕೋನವನ್ನು ‘ಅವರು ನಮಗೆ ಏನು ಮಾಡಿದ್ದಾರೆ’ ಎನ್ನವುದರಿಂದ ‘ಅವರು ನಮಗಾಗಿ ಏನು ಮಾಡುತ್ತಿದ್ದಾರೆ’ ಎಂಬುದಕ್ಕೆ ಬದಲಾಯಿಸುತ್ತದೆ. 

ಮೃತ್ಯುವನ್ನು ಮರೆಯಬೇಡಿ: ಅಶಾಶ್ವತತೆ 

ನೀವು ಸಾವನಪ್ಪುವಿರಿ. ನಾನು ಸಾವನಪ್ಪುವೆ. ನಾವೆಲ್ಲರೂ ಸಾವನಪ್ಪುತ್ತೇವೆ. ಆದ್ದರಿಂದ ನಿಮಗೆ ಕಿರಿಕಿರಿಯುಂಟುಮಾಡುವ ಒಬ್ಬ ವ್ಯಕ್ತಿಯಿಂದ ಸಿಟ್ಟೇರಿದಾಗ, ಒಂದು ನಿಮಿಷ ನಿಂತು ಯೋಚಿಸಿ: "ನನ್ನ ಮರಣಶಯ್ಯೆಯಲ್ಲಿದ್ದಾಗ, ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತೇನೆಯೇ?". ಆ ವ್ಯಕ್ತಿಯು ಜಗತ್ತನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ನಾಶಮಾಡಲು ಪಣದೊಡದೆ ಇದ್ದಲ್ಲಿ, ಇದರ ಉತ್ತರವು ಬಹುಶಃ "ಇಲ್ಲ" ಎಂದಾಗಿರುತ್ತದೆ. ಈ ಚಿಕ್ಕ ಸಲಹೆಯು ಬಹಳಾ ಸರಳವಾಗಿದ್ದರೂ, ಜೀವನದ ಅನೇಕ ಸಣ್ಣಪುಟ್ಟ ಕಿರಿಕಿರಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 

ನಾವು ಸಾಯುತ್ತೇವೆ ಎಂದು ನಮಗೆಲ್ಲರಿಗೂ ಗೊತ್ತಿದೆ ಹೌದು, ಆದರೆ ಅದರ ಬಗ್ಗೆ ನಮಗೆ ನಿಜವಾಗಿಯೂ ತಿಳಿದಿರುವುದಿಲ್ಲ. ಮೃತ್ಯು ಒಂದು ಅಮೂರ್ತ, ದೂರದ ಪರಿಕಲ್ಪನೆಯಾಗಿದ್ದು ಅದು ಇತರ ಜನರಿಗೆ ಸಂಭವಿಸುವುದಾಗಿರುತ್ತದೆ - ವೃದ್ಧರು, ರೋಗಿಗಳು, ನಂಬಲಾಗದಂತಹ ಅಪಘಾತಗಳಲ್ಲಿ ತೊಡಗಿದವರು. ಆದರೆ ಅದು ವಾಸ್ತವವಾಗಿರುವುದಿಲ್ಲ. ಪ್ರತಿದಿನವೂ, ಯುವಕರು ವಯಸ್ಸಾದವರಿಗಿಂತ ಮೊದಲು ಸಾಯುತ್ತಾರೆ, ಆರೋಗ್ಯವಂತರು ರೋಗಿಗಳಿಗಿಂತ ಮೊದಲು ಸಾಯುತ್ತಾರೆ. 

ನಮ್ಮ ಭವಿಷ್ಯದಲ್ಲಿನ (ನಾಳೆ? ಒಂದು ವರ್ಷದಲ್ಲಿ? 50 ವರ್ಷಗಳಲ್ಲಿ?) ಖಚಿತವಾದ ಸಾವಿನ ಮೇಲೆ ಕೇಂದ್ರೀಕರಿಸಿದಾಗ, ನಮ್ಮನ್ನು ಸಾಮಾನ್ಯವಾಗಿ ಕೋಪಗೊಳಿಸುವ ಬಹಳಷ್ಟು ಸಂಗತಿಗಳು ಮಹತ್ವವೆನಿಸುವುದಿಲ್ಲ. ಅಂದರೆ ಅವು ಇನ್ನು ಮುಂದೆ ನಮ್ಮನ್ನು ಕಿರಿಕಿರಿಗೊಳಿಸುವುದಿಲ್ಲ ಎಂದು ಹೇಳುತ್ತಿಲ್ಲ, ಆದರೆ ನಾವು ನಮ್ಮ ಅಮೂಲ್ಯವಾದ ಸಮಯ, ಉಸಿರು ಅಥವಾ ಶಕ್ತಿಯನ್ನು ಅವುಗಳ ಮೇಲೆ ವ್ಯರ್ಥ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾವು ಗುರುತಿಸುತ್ತೇವೆ.

ಮಾಡಿದ್ದುಣ್ಣೋ ಮಹಾರಾಯ: ಕರ್ಮ 

"ಮಾಡಿದ್ದುಣ್ಣೋ ಮಹಾರಾಯ," ಅಥವಾ, "ಇದೇ ಅವನ ಕರ್ಮ – ಅವನಿಗೆ ಹೀಗೆ ಆಗಬೇಕು" ಎಂದು ಜನರು ಮಾತನಾಡುತ್ತಾರೆ, ಇದರರ್ಥ, ನೀವು ಏನು ಮಾಡುತ್ತೀರೋ ಅದರ ಫಲವನ್ನು ಸ್ವೀಕರಿಸುತ್ತೀರಿ. ಆದರೆ ಬೌದ್ಧಧರ್ಮದಲ್ಲಿನ ಕರ್ಮದ ತಿಳಿವಳಿಕೆಯು ಹೆಚ್ಚು ಸಂಕೀರ್ಣ ಮತ್ತು ಸೂಕ್ಷ್ಮವಾಗಿರುತ್ತದೆ. ಇತರರ ದುಃಖವನ್ನು ನೋಡಿ, ಅದು ಅವರ ಕರ್ಮ ಎಂದು ಬಹಳ ಮೋಜಿನಿಂದ ಬೆರಳು ತೋರಿಸುವವರು, ತಮ್ಮ ಸಂಕಟದ ಪರಿಸ್ಥಿತಿಯೂ ಕೂಡ ತಮ್ಮ ಕರ್ಮದಿಂದಲೇ ಉದ್ಭವಿಸಿವೆ ಎಂಬುದನ್ನು ಒಪ್ಪಿಕೊಳ್ಳಲು ಹಿಂದು ಮುಂದು ನೋಡುತ್ತಾರೆ. 

ನಾವು ಅನುಭವಿಸುವ ಎಲ್ಲವೂ - ನಂಬಲಾಗದಷ್ಟು ಸಂತೋಷದಾಯಕ ಕ್ಷಣಗಳಿಂದ ಹಿಡಿದು ದೀರ್ಘವಾದ ಹತಾಶೆಯ ಭಾವನೆಗಳವರೆಗೆ - ಕಾರಣಗಳಿಂದ ಉದ್ಭವಿಸುತ್ತವೆ. ಈ ಕಾರಣಗಳು ಎಲ್ಲಿಂದಲೋ ಬಂದು ನಮ್ಮ ಮಡಿಲಲ್ಲಿ ಬೀಳುವುದಿಲ್ಲ, ಬದಲಿಗೆ ನಾವೇ ಅವುಗಳನ್ನು ರಚಿಸಿರುತ್ತೇವೆ. ಆದ್ದರಿಂದ, ನಾವು ಯಾವುದೇ ಭೀಕರ ಪರಿಸ್ಥಿತಿಯನ್ನು ಅನುಭವಿಸುತ್ತಿರುವಾಗ, ಕೋಪಗೊಳ್ಳುವ ಬದಲು, ಒಂದು ನಿಮಿಷ ನಿಂತು ಯೋಚಿಸಬಹುದು: ಇದು ಎಲ್ಲಿಂದ ಬಂದಿದೆ ಮತ್ತು ನಾನು ಇದನ್ನು ಇನ್ನೂ ಹದಗೆಡಿಸಲು ಬಯಸುವೆನೇ? 

ಕರ್ಮವು, ನಾವು ಹೇಗೆ ಪ್ರಚೋದಿತವಾಗಿ ವರ್ತಿಸುತ್ತೇವೆ, ಹೇಗೆ ವಿಷಯಗಳಿಗೆ ನಮಗೆ ರೂಢಿಯಾದ ರೀತಿಯಲ್ಲೇ ಪ್ರತಿಕ್ರಿಯಿಸುತ್ತೇವೆ ಎಂಬುದಾಗಿರುತ್ತದೆ. ಕರ್ಮ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡರೆ, ನಮ್ಮ ಇಂದಿನ ಕಾರ್ಯಗಳ ಆಧಾರದ ಮೇಲೆ ನಮ್ಮ ಭವಿಷ್ಯದ ಅನುಭವಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ – ಇಲ್ಲಿನ ಇದರ ಅರ್ಥವು, ಕೋಪವು ಸಿಡಿದೆಬ್ಬಿದಾಗ, ತಾಳ್ಮೆಯನ್ನು ಆಲಂಗಿಸಿಕೊಳ್ಳುವುದು ಎಂದಾಗಿದೆ. 

ಇದು ಸತ್ಯವಲ್ಲ: ಶೂನ್ಯತೆ 

ನಮ್ಮ ಕೋಪವನ್ನೂ ಸೇರಿಸಿದಂತೆ ನಮ್ಮ ಎಲ್ಲಾ ಸಮಸ್ಯೆಗಳು ಮತ್ತು ತೊಂದರೆಗಳಿಗಾಗಿ ತಾಳ್ಮೆಯು ನೇರವಾದ ಪ್ರತಿವಿಷವಾಗಿದ್ದರೂ, ಶೂನ್ಯತೆಯು ಅತ್ಯಂತ ಪ್ರಬಲವಾದ ಪ್ರತಿವಿಷವಾಗಿದೆ. ವಾಸ್ತವದಲ್ಲಿ, ನಾವು ಶೂನ್ಯತೆಯನ್ನು ಅರ್ಥಮಾಡಿಕೊಳ್ಳದಿದ್ದರೆ, ನಾವು ಎಷ್ಟೇ ತಾಳ್ಮೆಯಿಂದಿದ್ದರೂ ಸಾಕಾಗುವುದಿಲ್ಲ, ಸಮಸ್ಯೆಗಳು ಮುಂಗಾರು ಮಳೆಯಂತೆ ಸುರಿಯುತ್ತಲೇ ಇರುತ್ತವೆ. 

ನಾವು ಕೋಪಗೊಂಡಾಗ, ನಮ್ಮ ಮನಸ್ಸನ್ನು ವಿಶ್ಲೇಷಿಸಲು ಸ್ವಲ್ಪ ಸಮಯ ತೆಗೆದುಕೊಂಡರೆ, ನಾವು ಇದನ್ನು ಗಮನಿಸುತ್ತೇವೆ: "ನಾನು" ಎಂಬುದರ ಬಲವಾದ ಭಾವನೆಯಿರುತ್ತದೆ. “ನೀನು ಹೇಳಿದ ಮಾತುಗಳಿಂದ ನಾನು ಬಹಳ ಕೋಪಗೊಂಡಿದ್ದೇನೆ! ಅವನು ನನ್ನ ಗೆಳೆಯನೊಂದಿಗೆ ಹಾಗೆ ಮಾಡುವುದು ಸರಿಯೇ? ಇದರ ಬಗ್ಗೆ ನಾನು ಖಂಡಿತವಾಗಿಯೂ ಸರಿಯಾಗಿದ್ದೇನೆ, ಮತ್ತು ಅವಳು ತಪ್ಪಾಗಿದ್ದಾಳೆ!” …ನಾನು, ನಾನು, ನಾನು. 

ನಾವು ಕೋಪಗೊಂಡಾಗ, ಈ "ನಾನು" ಅನ್ನುವುದನ್ನು ನಿಖರವಾಗಿ ವಿಶ್ಲೇಷಿಸಲು ನಮಗೊಂದು ಉತ್ತಮ ಅವಕಾಶವಿದೆ. ಇದು ಅಸ್ತಿತ್ವದಲ್ಲಿರುವುದಿಲ್ಲ! ಇದರರ್ಥ ನಾವು ಭೌತಿಕವಾಗಿ ಅಸ್ತಿತ್ವದಲ್ಲಿಲ್ಲ ಅಥವಾ ನಾವು ಮುಖ್ಯವಲ್ಲ ಎಂದಲ್ಲ, ಆದರೆ ಈ "ನಾನು" ಎನ್ನುವುದನ್ನು ಹುಡುಕಲು ಪ್ರಯತ್ನಿಸಿದಾಗ, ಅದು ಎಲ್ಲಿದೆ? ಅದು ನಮ್ಮ ಮನಸ್ಸಿನಲ್ಲಿದೆಯೇ? ನಮ್ಮ ದೇಹ? ಎರಡರಲ್ಲೂ? "ಹೌದು, ಅದು ಇಲ್ಲಿದೆ!" ಎಂದು ನಮಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. 

ಇದನ್ನು ಗ್ರಹಿಸಲು ಜನರಿಗೆ ಕಷ್ಟಕರವಾಗಿರಬಹುದು, ಆದರೆ ಸತ್ಯವೆಂದರೆ, ನಾವು ವಾಸ್ತವವನ್ನು ವಿಶ್ಲೇಷಿಸಲು ಪ್ರಾರಂಭಿಸಿದಾಗ, ಅದು ನಮ್ಮ ದೃಷ್ಟಿಕೋನವನ್ನು ಆಮೂಲಾಗ್ರವಾಗಿ ಬದಲಾಯಿಸುತ್ತದೆ. ನಾವು ಕೋಪಗೊಳ್ಳುವಂತಹ ಯಾವುದೇ ವಿಷಯದತ್ತ ಬೆರಳು ತೋರಿಸಲಾಗುವುದಿಲ್ಲ ಎಂದು ನಾವು ತಿಳಿದುಕೊಳ್ಳುತ್ತೇವೆ.

ಸಾರಾಂಶ 

ಪ್ರಾಮಾಣಿಕವಾದ ಪ್ರಯತ್ನವಿಲ್ಲದೆ ನಾವು ಎಷ್ಟೇ ಬಾರಿ "ನಾನು ಕೋಪಗೊಳ್ಳುವುದಿಲ್ಲ" ಎಂದು ಪಣತೊಟ್ಟರೂ ಅದರಿಂದ ಪ್ರಯೋಜನವಾಗುವುದಿಲ್ಲ, ನಾವೆಲ್ಲರೂ ಬಯಸುವ ಮನಸ್ಸಿನ ಶಾಂತಿಯನ್ನು ನಾವು ಎಂದಿಗೂ ಸಾಧಿಸುವುದಿಲ್ಲ. 

ಮೇಲಿನ ಸಲಹೆಗಳು ಕೇವಲ ಒಂದು ಚೆನ್ನಾಗಿ ಕಾಣುವ ಪಟ್ಟಿಯಲ್ಲ - ಅವು ನಮ್ಮ ಹತಾಶೆ, ಕೋಪ ಮತ್ತು ದುಃಖದಿಂದ ನಮ್ಮನ್ನು ಮುಕ್ತಗೊಳಿಸಲು ನಾವು ಬಳಸಬಹುದಾದ ನಿಜವಾದ ಸಾಧನಗಳಾಗಿವೆ. ಅಭ್ಯಾಸದೊಂದಿಗೆ, ನಾವೆಲ್ಲರೂ ಇವನ್ನು ಅನುಸರಿಸಬಹುದು.  

Top