ಇತರ ಧರ್ಮಗಳ ಬಗ್ಗೆಗಿರುವ ಬೌದ್ಧ ದೃಷ್ಟಿಕೋನ

ಈ ಗ್ರಹದ ಮೇಲೆ ಶತಕೋಟಿ ಜನರಿರುವಂತೆ, ಶತಕೋಟಿ ವಿಭಿನ್ನ ಸ್ವಭಾವಗಳು ಮತ್ತು ಒಲವುಗಳಿವೆ. ಬೌದ್ಧ ದೃಷ್ಟಿಕೋನದಿಂದ, ವಿಭಿನ್ನ ಜನರ ವಿವಿಧ ಅಗತ್ಯಗಳಿಗೆ ಸರಿಹೊಂದಲು, ವ್ಯಾಪಕವಾದ ಧರ್ಮಗಳ ಆಯ್ಕೆಗಳ ಅಗತ್ಯವಿದೆ. ಎಲ್ಲಾ ಧರ್ಮಗಳು, ಮನುಕುಲದ ಯೋಗಕ್ಷೇಮಕ್ಕಾಗಿ ಶ್ರಮ ಪಡುವ ಸಾಮಾನ್ಯ ಗುರಿಯನ್ನು ಹಂಚಿಕೊಳ್ಳುತ್ತವೆ ಎಂದು ಬೌದ್ಧಧರ್ಮವು ಗುರುತಿಸುತ್ತದೆ. ಈ ಸಾಮಾನ್ಯ ಆಧಾರದ ಮೇಲೆ, ಬೌದ್ಧರು ಮತ್ತು ಕ್ರಿಶ್ಚಿಯನ್ನರು, ಪರಸ್ಪರ ಸಹಕಾರ ಮತ್ತು ಗೌರವದಿಂದ ಕಲಿಯಲು ವಿನಿಮಯ ಕಾರ್ಯಕ್ರಮಗಳನ್ನು ಸ್ಥಾಪಿಸಿದ್ದಾರೆ.

ಎಲ್ಲರಿಗೂ ಒಂದೇ ರೀತಿಯ ಒಲವು ಮತ್ತು ಆಸಕ್ತಿಗಳಿಲ್ಲದ ಕಾರಣ, ಬುದ್ಧ ವಿವಿಧ ಜನರಿಗೆ ಸರಿಹೊಂದುವಂತೆ ವಿವಿಧ ವಿಧಾನಗಳನ್ನು ಕಲಿಸಿದರು. ಇದನ್ನು ಗಮನದಲ್ಲಿಟ್ಟುಕೊಂಡು, ವಿಶ್ವದಲ್ಲಿ ಹಲವಾರು ವಿಭಿನ್ನ ಧರ್ಮಗಳು ಅಸ್ತಿತ್ವದಲ್ಲಿರುವುದು ಅದ್ಭುತವಾಗಿದೆ ಎಂದು ಪರಮಪೂಜ್ಯರಾದ ದಲೈ ಲಾಮಾ ಅವರು ಹೇಳಿದ್ದಾರೆ. ಹೇಗೆ ಒಂದೇ ರೀತಿಯ ಖಾದ್ಯವು ಎಲ್ಲರಿಗೂ ಇಷ್ಟವಾಗುವುದಿಲ್ಲವೋ ಅದೇ ರೀತಿ ಒಂದು ಧರ್ಮ ಅಥವಾ ನಂಬಿಕೆಗಳು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲಾಗುವುದಿಲ್ಲ ಎಂಬುದು ನಿಜ. ವಿವಿಧ ಧರ್ಮಗಳು ಲಭ್ಯವಿರುವುದು ಬಹಳ ಪ್ರಯೋಜನಕಾರಿಯಾಗಿದೆ ಮತ್ತು ಇದನ್ನು ನಾವು ಆಲಂಗಿಸಿಕೊಂಡು, ಸಂತೋಷಪಡಬೇಕಾದ ಸಂಗತಿಯಾಗಿದೆ. 

ಸರ್ವಧರ್ಮ ಸಂವಾದ 

ಪ್ರಸ್ತುತವಾಗಿ, ಬೌದ್ಧ ಗುರುಗಳು ಮತ್ತು ಇತರ ಧರ್ಮಗಳ ನಾಯಕರ ನಡುವೆಯಿರುವ ಪರಸ್ಪರ ಗೌರವದಿಂದ ಸಂಭಾಷಣೆ ಬೆಳೆಯುತ್ತಿದೆ. ದಲೈ ಲಾಮಾ ಅವರು ಪೋಪ್ ಜಾನ್ ಪಾಲ್ II ಅವರನ್ನು ಆಗಾಗ್ಗೆ ಭೇಟಿಮಾಡುತ್ತಿದ್ದರು ಮತ್ತು 1986ರಲ್ಲಿ, ಇಟಲಿಯ ಅಸ್ಸಿಸಿಯಲ್ಲಿ ನಡೆದ ಮಹಾಸಭೆಗೆ, ಎಲ್ಲಾ ವಿಶ್ವ ಧರ್ಮಗಳ ನಾಯಕರನ್ನು ಪೋಪ್ ಆಹ್ವಾನಿಸಿದ್ದರು. ಅಲ್ಲಿ 150 ಪ್ರತಿನಿಧಿಗಳಿದ್ದು, ಪೋಪ್ ಪಕ್ಕದಲ್ಲೇ ಕುಳಿತಿದ್ದ ದಲೈ ಲಾಮಾ ಅವರಿಗೆ ಮೊದಲ ಭಾಷಣ ಮಾಡುವ ಗೌರವವನ್ನು ನೀಡಲಾಯಿತು. ಸಮ್ಮೇಳನದಲ್ಲಿ, ಎಲ್ಲಾ ಧರ್ಮಗಳಿಗೂ ಸಾಮಾನ್ಯವಾದ ನೈತಿಕತೆ, ಪ್ರೀತಿ ಮತ್ತು ಸಹಾನುಭೂತಿಯಂತಹ ವಿಷಯಗಳನ್ನು ಆಧ್ಯಾತ್ಮಿಕ ಗುರುಗಳು ಚರ್ಚಿಸಿದರು. ವಿವಿಧ ಧಾರ್ಮಿಕ ನಾಯಕರ ನಡುವೆ ಇರುವ ಪರಸ್ಪರ ಸಹಕಾರ, ಸೌಹಾರ್ದತೆ ಮತ್ತು ಗೌರವದಿಂದ ಜನರು ಬಹಳ ಉತ್ತೇಜಿತರಾಗಿದ್ದರು. 

ನಿಸ್ಸಂದೇಹವಾಗಿ, ಪ್ರತಿಯೊಂದು ಧರ್ಮವೂ ವಿಭಿನ್ನವಾಗಿರುತ್ತದೆ. ಮೆಟಾಫಿಸಿಕ್ಸ್ ಮತ್ತು ದೇವತಾಶಾಸ್ತ್ರವನ್ನು ನೋಡಿದರೆ, ಈ ವ್ಯತ್ಯಾಸಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಅರಿವಾಗುತ್ತದೆ ಆದರೆ ಅದರಿಂದ ನಾವು ಜಗಳಕ್ಕಿಳಿಯಬೇಕೆಂದಲ್ಲ. "ನನ್ನ ನಂಬಿಕೆಗಳು ನಿಮ್ಮ ನಂಬಿಕೆಗಳಿಗಿಂತ ಉತ್ತಮವಾಗಿವೆ" ಎಂಬ ಮನೋಭಾವದಿಂದ ಯಾವುದೇ ಸಹಾಯವಾಗುವುದಿಲ್ಲ. ಬದಲಿಗೆ ಎಲ್ಲಾ ಧರ್ಮಗಳಲ್ಲಿ ಸಾಮಾನ್ಯವಾಗಿರುವುದು ಏನು ಎಂಬುದನ್ನು ಹುಡುಕುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ: ಅಂದರೆ, ಅವೆಲ್ಲವೂ ಮಾನವೀಯತೆಯ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತವೆ ಮತ್ತು ನೈತಿಕ ನಡವಳಿಕೆಯನ್ನು ಮತ್ತು ಪ್ರೀತಿ, ಸಹಾನುಭೂತಿ ಮತ್ತು ಕ್ಷಮೆಯ ಮಾರ್ಗವನ್ನು ಅನುಸರಿಸುವಂತೆ ಜನರಿಗೆ ಕಲಿಸುವ ಮೂಲಕ ಎಲ್ಲರ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತವೆ. ಜನರು, ಜೀವನದ ಭೌತಿಕ ವಿಷಯಗಳಲ್ಲಿ ಸಂಪೂರ್ಣವಾಗಿ ಸಿಲುಕಿಕೊಳ್ಳದಂತೆ, ಕನಿಷ್ಠಪಕ್ಷ ಆಧ್ಯಾತ್ಮಿಕ ಪ್ರಗತಿಯನ್ನು ಹುಡುಕುವ ಮೂಲಕ ಸ್ವಲ್ಪವಾದರೂ ಸಮತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸುವಂತೆ ಅವುಗಳೆಲ್ಲವೂ ಕಲಿಸುತ್ತವೆ. 

ಪ್ರಪಂಚದ ಪರಿಸ್ಥಿತಿಯನ್ನು ಸುಧಾರಿಸಲು ಎಲ್ಲಾ ಧರ್ಮಗಳು ಒಟ್ಟಾಗಿ ಕೆಲಸ ಮಾಡಿದರೆ ಅದು ಬಹಳಾ ಸಹಾಯಕವಾಗಿರುತ್ತದೆ. ಭೌತಿಕ ಪ್ರಗತಿಯು ಮುಖ್ಯವಾಗಿರುತ್ತದೆ, ಆದರೆ ಆಧ್ಯಾತ್ಮಿಕ ಪ್ರಗತಿಯು ಸಹ ಅಷ್ಟೇ ಅಗತ್ಯವಾಗಿದೆ ಎಂಬುದು ಬಹಳಾ ಸ್ಪಷ್ಟವಾಗುತ್ತಿದೆ. ನಾವು ಜೀವನದ ಭೌತಿಕ ಅಂಶಗಳಿಗೆ ಮಾತ್ರ ಒತ್ತು ನೀಡಿದಾಗ, ಎಲ್ಲರನ್ನೂ ಅಳಿಸಿಹಾಕುವ ಸಾಮರ್ಥ್ಯವಿರುವ ಶಕ್ತಿಯುತ ಬಾಂಬ್ ಅನ್ನು ತಯಾರಿಸುವುದು ಅಪೇಕ್ಷಣೀಯ ಗುರಿಯಾಗುತ್ತದೆ. ಆದರೆ ನಾವು ಮಾನವೀಯತೆಯಿಂದ ಅಥವಾ ಆಧ್ಯಾತ್ಮಿಕವಾಗಿ ಯೋಚಿಸಿದರೆ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಮತ್ತಷ್ಟು ಉತ್ಪಾದಿಸುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಮಗೆ ತಿಳಿಯುತ್ತದೆ. ಆದರೆ, ನಾವು ಕೇವಲ ಆಧ್ಯಾತ್ಮಿಕವಾಗಿ ಅಭಿವೃದ್ಧಿಯಾಗಿ, ಭೌತಿಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರೆ, ಎಲ್ಲರೂ ಹಸಿವಿನಿಂದ ಬಳಲುತ್ತಾರೆ. ಅದೂ ಒಳ್ಳೆಯದಲ್ಲ! ಆದ್ದರಿಂದ, ಸಮತೋಲನವು ಮುಖ್ಯವಾಗಿರುತ್ತದೆ.

ಒಬ್ಬರನ್ನೊಬ್ಬರಿಂದ ಕಲಿಯುವುದು 

ವಿಶ್ವ ಧರ್ಮಗಳ ನಡುವಿನ ಪರಸ್ಪರ ಸಂವಹನದ ಒಂದು ಅಂಶವೆಂದರೆ ಅವರು ತಮ್ಮ ಕೆಲವು ವಿಶೇಷತೆಗಳನ್ನು ಹಂಚಿಕೊಳ್ಳುತ್ತಾರೆ. ಉದಾಹರಣೆಗೆ, ಅನೇಕ ಕ್ರಿಶ್ಚಿಯನ್ ಚಿಂತಕರು ಬೌದ್ಧಧರ್ಮದಿಂದ ಏಕಾಗ್ರತೆ ಮತ್ತು ಧ್ಯಾನದ ವಿಧಾನಗಳನ್ನು ಕಲಿಯಲು ಆಸಕ್ತಿ ತೋರಿಸಿದ್ದಾರೆ ಮತ್ತು ಹಲವಾರು ಕ್ಯಾಥೋಲಿಕ್ ಪಾದ್ರಿಗಳು, ಮಠಾಧೀಶರು, ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಈ ಕೌಶಲ್ಯಗಳನ್ನು ಕಲಿತು ತಮ್ಮ ಸ್ವಂತ ಸಂಪ್ರದಾಯಗಳಿಗೆ ಅವನ್ನು ಅಳವಡಿಸಿಕೊಳ್ಳಲು, ಭಾರತದಲ್ಲಿನ ಧರ್ಮಶಾಲಾವನ್ನು ಭೇಟಿ ಮಾಡಿದ್ದಾರೆ. ಹಲವಾರು ಬೌದ್ಧರು, ಕ್ಯಾಥೋಲಿಕ್ ಸಮ್ಮೇಳನಗಳಲ್ಲಿ ಪ್ರಚಾರ ಮಾಡಿರುವರು, ನಾನೂ ಕೂಡ ಧ್ಯಾನ ಮಾಡುವುದು ಹೇಗೆ, ಏಕಾಗ್ರತೆಯನ್ನು ಹೇಗೆ ಬೆಳೆಸಿಕೊಳ್ಳುವುದು ಮತ್ತು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದರ ಬಗ್ಗೆ ಮಾತನಾಡಲು ಆಹ್ವಾನಿತನಾಗಿದ್ದೇನೆ. ಕ್ರಿಶ್ಚಿಯನ್ ಧರ್ಮವು ಪ್ರತಿಯೊಬ್ಬರನ್ನು ಪ್ರೀತಿಸಲು ನಮಗೆ ಕಲಿಸುತ್ತದೆ, ಆದರೆ ಅದನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ವಿವರವಾದ ವಿವರಣೆಯನ್ನು ನೀಡುವುದಿಲ್ಲ, ಆದರೆ ಬೌದ್ಧಧರ್ಮವು ಪ್ರೀತಿಯನ್ನು ಅಭಿವೃದ್ಧಿಪಡಿಸುವ ವಿಧಾನಗಳಲ್ಲಿ ಸಮೃದ್ಧವಾಗಿದೆ. ಕ್ರಿಶ್ಚಿಯನ್ ಧರ್ಮವು, ಅದರ ಉನ್ನತ ಮಟ್ಟದಲ್ಲಿ, ಬೌದ್ಧಧರ್ಮದಿಂದ ಈ ವಿಧಾನಗಳನ್ನು ಕಲಿಯಲು ಮುಂದಾಗಿದೆ. ಆದರೆ ಅವರೆಲ್ಲರೂ ಬೌದ್ಧರಾಗುತ್ತಾರೆ ಎಂಬುದು ಇದರರ್ಥವಲ್ಲ - ಇಲ್ಲಿ ಬೇರೆಯವರನ್ನು ಮತಾಂತರಿಸಲು ಯಾರೂ ಪ್ರಯತ್ನಿಸುತ್ತಿಲ್ಲ. ಅವರು ತಮ್ಮ ಸ್ವಂತ ಧರ್ಮದೊಳಗೆ ಅಳವಡಿಸಿಕೊಳ್ಳುವ ಸಾಧನಗಳಾಗಿ ಈ ವಿಧಾನಗಳನ್ನು ಕಲಿಯಬಹುದು, ಇವು ಉತ್ತಮ ಕ್ರಿಶ್ಚಿಯನ್ನರಾಗಲು ಅವರಿಗೆ ಸಹಾಯ ಮಾಡುತ್ತವೆ. 

ಅಂತೆಯೇ, ಅನೇಕ ಬೌದ್ಧರು, ಕ್ರಿಶ್ಚಿಯನ್ ಧರ್ಮದಿಂದ ಸಮಾಜ ಸೇವೆಯ ಬಗ್ಗೆ ಕಲಿಯಲು ಆಸಕ್ತಿ ತೋರಿಸಿದ್ದಾರೆ. ಬಹುಪಾಲು ಕ್ರಿಶ್ಚಿಯನ್ ಸಂಪ್ರದಾಯಗಳು ತಮ್ಮ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಬೋಧನೆ, ಆಸ್ಪತ್ರೆಯಲ್ಲಿನ ಸೇವೆ, ವೃದ್ಧರು, ಅನಾಥರನ್ನು ನೋಡಿಕೊಳ್ಳುವುದು ಮತ್ತು ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಿ ಹೇಳುತ್ತವೆ. ಈಗಾಗಲೇ, ಕೆಲವು ಬೌದ್ಧ ದೇಶಗಳಲ್ಲಿ ಈ ಸಾಮಾಜಿಕ ಸೇವೆಗಳನ್ನು ಅಭಿವೃದ್ಧಿಪಡಿಸಿದ್ದರೂ, ವಿವಿಧ ಸಾಮಾಜಿಕ ಮತ್ತು ಭೌಗೋಳಿಕ ಕಾರಣಗಳಿಂದಾಗಿ ಎಲ್ಲಾ ದೇಶಗಳಲ್ಲಿ ಇವನ್ನು ಅಭಿವೃದ್ಧಿಪಡಿಸಲಾಗಿಲ್ಲ. ಬೌದ್ಧರು, ಕ್ರಿಶ್ಚಿಯನ್ನರಿಂದ ಸಮಾಜ ಸೇವೆಯ ಬಗ್ಗೆ ಬಹಳಷ್ಟು ಕಲಿಯಬಹುದು ಮತ್ತು ಪರಮಪೂಜ್ಯರು ಕೂಡ ಇದನ್ನು ಸಮ್ಮತಿಸಿದ್ದಾರೆ. ಪ್ರತಿಯೊಬ್ಬರೂ ಇನ್ನೊಬ್ಬರಿಂದ ಕಲಿಯಬಹುದು, ಮತ್ತು ಇತರರೊಂದಿಗೆ, ಅವರದೇ ಆದ ವಿಶೇಷ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಕಲಿಯಬಹುದು ಎಂಬುದು ಒಳ್ಳೆಯ ವಿಷಯವಾಗಿದೆ. ಈ ರೀತಿಯಾಗಿ, ಪರಸ್ಪರ ಗೌರವದ ಆಧಾರದ ಮೇಲೆ, ವಿಶ್ವ ಧರ್ಮಗಳ ನಡುವೆ ಮುಕ್ತ ವೇದಿಕೆಯೊಂದು ಇರಬಹುದು.  

ಸಾರಾಂಶ 

ಇಲ್ಲಿಯವರೆಗೆ, ಧರ್ಮಗಳ ನಡುವಿನ ಪರಸ್ಪರ ಸಂವಹನವು ಧಾರ್ಮಿಕ ನಾಯಕರ ಉನ್ನತ ಮಟ್ಟದಲ್ಲಿ ಸಂಭವಿಸಿದೆ - ಅಲ್ಲಿ ಜನರು ಹೆಚ್ಚು ಮುಕ್ತವಾಗಿದ್ದು, ಅಲ್ಪಮಟ್ಟದ ಪೂರ್ವಾಗ್ರಹಗಳನ್ನು ಹೊಂದಿರುವಂತೆ ಕಾಣುತ್ತದೆ. ಕೆಳ ಹಂತಗಳಲ್ಲಿ, ಜನರು ಹೆಚ್ಚು ಅಭದ್ರತೆಯಿಂದಿದ್ದು, ಫುಟ್ಬಾಲ್ ತಂಡದ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ - ಅಲ್ಲಿ ಸ್ಪರ್ಧೆ ಮತ್ತು ಹೋರಾಟವು ಸಾಮಾನ್ಯವಾಗಿರುತ್ತದೆ. ಈ ರೀತಿಯ ಮನೋಭಾವವಿರುವುದು ಬಹಳಾ ದುಃಖಕರವಾದ ಸಂಗತಿ, ಇದು ಧರ್ಮಗಳ ನಡುವೆ ಇರಲಿ ಅಥವಾ ವಿವಿಧ ಬೌದ್ಧ ಸಂಪ್ರದಾಯಗಳ ನಡುವೆಯಿರಲಿ. ಬುದ್ಧ ಅನೇಕ ವಿಭಿನ್ನ ವಿಧಾನಗಳನ್ನು ಕಲಿಸಿದರು, ಅವೆಲ್ಲವೂ ವಿವಿಧ ರೀತಿಯ ಜನರಿಗೆ ಸಹಾಯ ಮಾಡಲು ಸಾಮರಸ್ಯದಿಂದ ಕೆಲಸ ಮಾಡುತ್ತವೆ. ಆದ್ದರಿಂದ, ಬೌದ್ಧಧರ್ಮ ಮತ್ತು ವಿಶ್ವ ಧರ್ಮಗಳಲ್ಲಿರುವ ಎಲ್ಲಾ ಸಂಪ್ರದಾಯಗಳನ್ನು ಗೌರವಿಸುವುದು ಮುಖ್ಯವಾಗಿದೆ. 

Top