"ಧರ್ಮ" ಎಂಬ ಪದವನ್ನು ಬುದ್ಧನ ಬೋಧನೆಗಳನ್ನು ಉಲ್ಲೇಖಿಸಲು ಬೌದ್ಧರಿಂದ ಬಳಸಲಾಗುತ್ತದೆ, ಇದು ನಮ್ಮ ಪ್ರಸ್ತುತದ ಗೊಂದಲಮಯ ಮತ್ತು ದುಃಖದ ಸ್ಥಿತಿಯಿಂದ ಎಚ್ಚರಿಕೆ ಮತ್ತು ಸಂತೋಷದ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆ. "ರಿಲಿಜನ್ " ಎಂಬ ಇಂಗ್ಲಿಷ್ ಪದವು "ಒಟ್ಟಿಗೆ ಬಿಗಿಯಾಗಿರುವುದು" ಎಂಬ ಲ್ಯಾಟಿನ್ ಪದದಿಂದ ಬಂದಂತೆ, ಧರ್ಮವು, ಸಂಸ್ಕೃತದ "ಧರ್" ನಿಂದ ಬಂದಿದೆ, ‘ದೃಢವಾಗಿ ಹಿಡಿದಿಟ್ಟುಕೊಳ್ಳುವುದು’ ಅಥವಾ ‘ಬೆಂಬಲಿಸುವುದು’ ಇದರರ್ಥವಾಗಿದೆ. ನಮ್ಮನ್ನು ಕೆಳಮಟ್ಟದ, ದುರದೃಷ್ಟಕರ ಅಸ್ತಿತ್ವದ ಸ್ಥಿತಿಗಳಿಗೆ ಬಿದ್ದು, ದೀರ್ಘಕಾಲದ ಅನಿಯಂತ್ರಿತ ದುಃಖವನ್ನು ಅನುಭವಿಸುವುದರಿಂದ ತಡೆಯುವ ಮೂಲಕ ಧರ್ಮವು ನಮ್ಮನ್ನು ದೃಢವಾಗಿ ಬೆಂಬಲಿಸುತ್ತದೆ.
What is dharma

ಬುದ್ಧನ ಮೊದಲ ಧರ್ಮ ಬೋಧನೆ 

2,500 ವರ್ಷಗಳ ಹಿಂದೆ ಬುದ್ಧನು ಬೋಧಗಯಾದಲ್ಲಿ ಜ್ಞಾನೋದಯವನ್ನು ಪಡೆದಾಗ, ಧರ್ಮವನ್ನು ಬೋಧಿಸುವ ಮುನ್ನ ಅವರು ಹಿಂಜರಿದರು - ಅದು ತುಂಬಾ ಆಳವಾಗಿದ್ದು, ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಅಥವಾ ಲೌಕಿಕ ಆನಂದದಿಂದ ಮೋಹಗೊಂಡ ಜನರು ಇದರಲ್ಲಿ ಆಸಕ್ತಿ ವಹಿಸುವುದಿಲ್ಲ ಎಂದು ಆತಂಕಪಟ್ಟರು. ಆರಂಭಿಕ ಗ್ರಂಥಗಳ ಪ್ರಕಾರ, ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಬುದ್ಧನ ಮುಂದೆ ಕಾಣಿಸಿಕೊಂಡು, ಜೀವಿಗಳಿಗೆ ಉಳಿತಾಗಲು ಧರ್ಮವನ್ನು ಬೋಧಿಸುವಂತೆ ವಿನಂತಿಸಿದನು, ಏಕೆಂದರೆ ಜ್ಞಾನೋದಯವನ್ನು ಸಾಧಿಸುವಂತಹವರು ಖಂಡಿತವಾಗಿಯೂ ಇರುವರು. ಇದರಿಂದ, ಬುದ್ಧನು ಸಾರ್ನಾಥ್ನಲ್ಲಿ ನಾಲ್ಕು ಆರ್ಯ ಸತ್ಯಗಳ ಮೇಲೆ ತಮ್ಮ ಮೊದಲ ಧರ್ಮ ಬೋಧನೆಯನ್ನು ನೀಡಿದರು, ಇದು ಇಡೀ ಬೌದ್ಧ ಮಾರ್ಗದ ಚೌಕಟ್ಟನ್ನು ರೂಪಿಸಿದ್ದು, ಇಂದಿಗೂ ಪ್ರಪಂಚದ ಎಲ್ಲಾ ಬೌದ್ಧ ಸಂಪ್ರದಾಯಗಳಿಗೆ ಅಡಿಪಾಯವಾಗಿದೆ. 

ಬುದ್ಧ ಬೋಧಿಸಿದ ಮೊದಲ ಸತ್ಯವೆಂದರೆ ಜೀವನವು ಯಾವಾಗಲೂ ಅತೃಪ್ತಿಕರವಾಗಿರುತ್ತದೆ. ನಾವು ಯಾವುದೇ ಸಮಯದಲ್ಲಿ ಎಷ್ಟೇ ಸಂತೋಷವನ್ನು ಅನುಭವಿಸಿದರೂ, ಈ ಸಂತೋಷದ ಸ್ಥಿತಿಯು ಅಸ್ಥಿರವಾಗಿದ್ದು, ತಾತ್ಕಾಲಿಕವಾಗಿರುತ್ತದೆ. ಇದು ಸಾರ್ವತ್ರಿಕವಾಗಿದೆ - ನಾವೆಲ್ಲರೂ ಇದನ್ನು ನಮ್ಮ ಜೀವನದಲ್ಲಿ ಅನುಭವಿಸುತ್ತೇವೆ. ನಾವು ಹೊಂದಿರುವ ಯಾವುದೇ ಸಂತೋಷವು ಶಾಶ್ವತವಾಗಿ ಉಳಿಯುವುದಿಲ್ಲ ಮತ್ತು ಯಾವುದೇ ಕ್ಷಣದಲ್ಲಿ ದುಃಖಕ್ಕೆ ಬದಲಾಗಬಹುದು. ಎರಡನೆಯ ಸತ್ಯವೆಂದರೆ ನಮ್ಮ ಅತೃಪ್ತಿಯು ಹೊರಗಿನಿಂದ ಬರುವುದಿಲ್ಲ, ಬದಲಿಗೆ ನಮಗೆ ಬೇಕಾದುದನ್ನು ಪಡೆಯುವ ನಮ್ಮ ಸ್ವಂತ ಬಾಂಧವ್ಯದಿಂದ ಬರುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಸ್ತಿತ್ವದ ಬಗೆಗಿರುವ ನಮ್ಮ ಅಜ್ಞಾನದಿಂದ ಬರುತ್ತದೆ. ಮೂರನೆಯ ಸತ್ಯವು ಎಲ್ಲಾ ದುಃಖ ಮತ್ತು ಸಮಸ್ಯೆಗಳಿಂದ ಮುಕ್ತವಾಗಿರಲು ಸಾಧ್ಯವಿದೆ ಎಂದು ಹೇಳುತ್ತದೆ ಮತ್ತು ನಾಲ್ಕನೆಯದು ಒಂದು ಮಾರ್ಗವನ್ನು ವಿವರಿಸುತ್ತದೆ, ನಾವು ಅದನ್ನು ಅನುಸರಿಸಿದ್ದಲ್ಲಿ, ಎಲ್ಲಾ ಸಮಸ್ಯೆಗಳಿಂದ ಶಾಶ್ವತವಾಗಿ ವಿಮೋಚನೆಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ. 

ಬುದ್ಧನ ಬೋಧನೆಗಳು ದುಃಖವನ್ನು ತೊಡೆದುಹಾಕುವ ಗುರಿಯನ್ನು ಹೊಂದಿವೆ 

ಬುದ್ಧನ ಕಾಲದಲ್ಲಿ, ಎಲ್ಲಾ ಧರ್ಮ ಬೋಧನೆಗಳನ್ನು ಮೌಖಿಕವಾಗಿ ನೀಡಲಾಗಿತ್ತು ಮತ್ತು ಸ್ಮರಣೆಗೆ ಬದ್ಧಿತವಾಗಿತ್ತು. ಅವುಗಳನ್ನು ಹಸ್ತಪ್ರತಿಗಳಾಗಿ ಸಂಕಲಿಸುವ ಮೊದಲು, ಹಲವಾರು ತಲೆಮಾರುಗಳಲ್ಲಿ ಈ ರೀತಿಯಾಗಿಯೇ ರವಾನಿಸಲಾಗಿತ್ತು. ಇಂದು ನಮ್ಮಲ್ಲಿ ನೂರಾರು ಸೂತ್ರಗಳು, ಬುದ್ಧನ ದೀಕ್ಷೆ ಪಡೆದ ಅನುಯಾಯಿಗಳ ನಿಯಮಗಳಿರುವ ಪಠ್ಯಗಳು ಮತ್ತು ತಾತ್ವಿಕ ಪ್ರವಚನಗಳು ಉಳಿದಿವೆ, ಇವುಗಳು ಒಟ್ಟಾಗಿ ತ್ರಿಪಿಟಕ ಎಂದು ಕರೆಯಲ್ಪಡುತ್ತವೆ. ಸಂಪ್ರದಾಯದ ಪ್ರಕಾರ, ನಮ್ಮ 84,000 ಗೊಂದಲದ ಭಾವನೆಗಳನ್ನು ಜಯಿಸಲು ಸಹಾಯ ಮಾಡಲು, ಬುದ್ಧನು ಒಟ್ಟಾರೆಯಾಗಿ 84,000 ಧರ್ಮ ಬೋಧನೆಗಳನ್ನು ನೀಡಿದರು. ಸಂಖ್ಯೆಯು ಅನಿಯಂತ್ರಿತವೆನಿಸದರೂ, ಅವು ನಾವು ಸಹಿಸಿಕೊಳ್ಳಬೇಕಾದ ಸಮಸ್ಯೆಗಳು, ಹತಾಶೆಗಳು ಮತ್ತು ದುಃಖದ ವಿಧಗಳ ಪ್ರಮಾಣವನ್ನು ತೋರಿಸಲು ಮತ್ತು ಬುದ್ಧನು ಇವೆಲ್ಲವನ್ನೂ ಎದುರಿಸಲು ನೀಡಿದ ಬೋಧನೆಗಳ ವ್ಯಾಪಕ ಶ್ರೇಣಿಯನ್ನು ಸರಳವಾಗಿ ತೋರಿಸುವ ಒಂದು ಮಾರ್ಗವಾಗಿದೆ.

ವಾಸ್ತವದಲ್ಲಿ, ಬುದ್ಧನ ಎಲ್ಲಾ ಬೋಧನೆಗಳು ದುಃಖವನ್ನು ನಿವಾರಿಸುವುದರ ಬಗ್ಗೆಯಾಗಿರುವವು. ಬುದ್ಧನು ಆಧ್ಯಾತ್ಮಿಕ ಊಹಾಪೋಹಗಳಲ್ಲಿ ಆಸಕ್ತಿ ಹೊಂದಿರಲಿಲ್ಲ, ಅಲ್ಲದೆ ಆತ್ಮ ಮತ್ತು ಬ್ರಹ್ಮಾಂಡದ ಬಗ್ಗೆಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಕೂಡ ನಿರಾಕರಿಸಿದರು, ಏಕೆಂದರೆ ಈ ಸಮಸ್ಯೆಗಳನ್ನು ಆಲೋಚಿಸುವುದರಿಂದ ನಾವು ವಿಮೋಚನೆಗೆ ಹತ್ತಿರವಾಗುವುದಿಲ್ಲ. ಬುದ್ಧನು ಮಾನವ ಸ್ಥಿತಿಯನ್ನು ಆಲೋಚಿಸಿ, ನಾವೆಲ್ಲರೂ ಬಳಲುತ್ತಿರುವುದನ್ನು ನೋಡಿದರು ಮತ್ತು ಇದಕ್ಕೆ ಪರಿಹಾರವನ್ನು ಕಂಡುಕೊಂಡರು. ಅದಕ್ಕಾಗಿಯೇ ಸಾಮಾನ್ಯವಾಗಿ ಬುದ್ಧನನ್ನು ವೈದ್ಯರಿಗೆ ಹೋಲಿಸಲಾಗುತ್ತದೆ ಮತ್ತು ಧರ್ಮ ಬೋಧನೆಗಳನ್ನು ಔಷಧಕ್ಕೆ ಹೋಲಿಸಲಾಗುತ್ತದೆ. ಧರ್ಮದ ಈ ಔಷಧಿಯು ನಮ್ಮ ಎಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. 

ಬುದ್ಧ, ಧರ್ಮ ಮತ್ತು ಸಂಘವು ಆಶ್ರಯದ ತ್ರಿರತ್ನವಾಗಿದ್ದರೂ, ಧರ್ಮವೇ ನಿಜವಾದ ಆಶ್ರಯವಾಗಿದೆ. ಬುದ್ಧ ಧರ್ಮವನ್ನು ಬೋಧಿಸಬಹುದು, ಆದರೆ ಅವರಿಗೆ ಚಿಟಿಕೆ ಹೊಡೆದು, ನಮ್ಮ ದುಃಖವನ್ನು ಅದ್ಭುತವಾಗಿ ಮಾಯಮಾಡಲು ಸಾಧ್ಯವಿಲ್ಲ. ಮತ್ತು ಸಂಘವು ನಮಗೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಬಹುದಾದರೂ, ಅದು ನಮ್ಮನ್ನು ಧರ್ಮವನ್ನು ಅಭ್ಯಾಸ ಮಾಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ನಾವೇ ಪ್ರಾಮಾಣಿಕವಾಗಿ ಧರ್ಮವನ್ನು ಅಧ್ಯಯನ ಮಾಡಬೇಕು ಮತ್ತು ಅದರಲ್ಲಿ ತೊಡಗಿಸಿಕೊಳ್ಳಬೇಕು: ಅದು ದುಃಖದಿಂದ ಹೊರಬರುವ ಏಕೈಕ ಮಾರ್ಗವಾಗಿದೆ. ಅಂದರೆ, ನಾವೇ ನಮ್ಮ ವಿಮೋಚಕರಾಗಿದ್ದೇವೆ.

ಧರ್ಮದ ಗುಣಗಳು 

ಧರ್ಮವು ಅಸಂಖ್ಯಾತ ಗುಣಗಳನ್ನು ಹೊಂದಿರುವುದು, ಆದರೆ ಅದರ ಮುಖ್ಯ ಗುಣಗಳೆಂದರೆ:

  1. ಧರ್ಮವು ಅನೇಕ ವೈವಿಧ್ಯಮಯ ಮತ್ತು ವಿಭಿನ್ನ ಸ್ವಭಾವಗಳಿಗೆ ಸೂಕ್ತವಾಗಿದೆ. ಬೌದ್ಧಧರ್ಮವು ಥೈಲ್ಯಾಂಡ್, ಟಿಬೆಟ್, ಶ್ರೀಲಂಕಾ, ಜಪಾನ್ ಮತ್ತು ಮುಂತಾದ ಸ್ಥಳಗಳಲ್ಲಿ ಗಮನಾರ್ಹವಾದ ವಿಭಿನ್ನ ರೂಪಗಳನ್ನು ಪಡೆದಿದ್ದರೂ, ಅವುಗಳೆಲ್ಲದರ ಸಂಪ್ರದಾಯಗಳು ಮೂಲಭೂತ ಬೌದ್ಧ ಬೋಧನೆಗಳನ್ನು ಒಳಗೊಂಡಿದ್ದು, ವಿಮೋಚನೆಯನ್ನು ಸಾಧಿಸುವ ಗುರಿಯನ್ನು ಹೊಂದಿವೆ. 
  2. ಧರ್ಮವು ತರ್ಕವನ್ನು ಆಧರಿಸಿದೆ. ಇದು ನಮ್ಮ ಮನಸ್ಸನ್ನು ಮತ್ತು ನಮ್ಮ ಎಲ್ಲಾ ಅನುಭವಗಳನ್ನು ವಾಸ್ತವಿಕವಾಗಿ ನೋಡಲು ಕೇಳುತ್ತದೆ. ಇದು ದೇವರು ಅಥವಾ ದೇವತೆಗಳಲ್ಲಿನ ನಂಬಿಕೆಯ ಅಗತ್ಯವಿರುವ ಸಿದ್ಧಾಂತವಲ್ಲ, ಬದಲಿಗೆ ತರ್ಕದೊಂದಿಗೆ ಎಲ್ಲವನ್ನೂ ಪ್ರಶ್ನಿಸಲು ನಮ್ಮನ್ನು ಕೇಳುತ್ತದೆ. ಪ್ರಜ್ಞೆ ಮತ್ತು ಮನಸ್ಸಿನಂತಹ ಪ್ರಮುಖ ಬೌದ್ಧ ಪರಿಕಲ್ಪನೆಗಳನ್ನು ಪರಿಶೀಲಿಸಲು ಪರಮಪೂಜ್ಯರಾದ ದಲೈ ಲಾಮಾ ಅವರು ಅನೇಕ ವರ್ಷಗಳಿಂದ ವಿಜ್ಞಾನಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಬೌದ್ಧರು ಮತ್ತು ವಿಜ್ಞಾನಿಗಳು ಸಮಾನವಾಗಿ ಪರಸ್ಪರ ಕಲಿಯುತ್ತಿದ್ದಾರೆ. 
  3. ಧರ್ಮವು ಕೇವಲ ಒಂದೇ ಸಮಸ್ಯೆಯ ಕಡೆ ನಿರ್ದೇಶಿಸಲ್ಪಟ್ಟಿಲ್ಲ, ಅದು ಎಲ್ಲಾ ಸಮಸ್ಯೆಗಳ ಮೂಲವನ್ನು ತನ್ನ ಗುರಿಯಾಗಿರಿಸಿಕೊಂಡಿದೆ. ನಮಗೆ ಪ್ರತಿದಿನ ತಪ್ಪದೆ ಭಯಾನಕ ತಲೆನೋವಿದ್ದರೆ, ನಾವು ಆಸ್ಪಿರಿನ್ ತೆಗೆದುಕೊಳ್ಳಬಹುದು. ಇದು ಸ್ವಲ್ಪ ಹೊತ್ತಿನ ಆರಾಮ ನೀಡುತ್ತದೆ ಹೌದು, ಆದರೆ ತಲೆನೋವು ಮತ್ತೆ ಬರುತ್ತದೆ. ತಲೆನೋವಿಗೆ ಶಾಶ್ವತ ಪರಿಹಾರ ನೀಡುವ ಮಾತ್ರೆ ಇದ್ದರೆ ಅದನ್ನು ನಾವು ಖಂಡಿತ ಸೇವಿಸುತ್ತಿದ್ದೆವು. ಧರ್ಮವು ಹೀಗೆಯೇ ಇರುವುದು, ಏಕೆಂದರೆ ಅದು ತಲೆನೋವಿಗೆ ಮಾತ್ರವಲ್ಲ, ಬದಲಿಗೆ ಎಲ್ಲಾ ಸಮಸ್ಯೆಗಳು ಮತ್ತು ಸಂಕಟಗಳಿಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ. 

ಸಾರಾಂಶ 

ಬುದ್ಧನು ಅತ್ಯಂತ ನುರಿತ ವೈದ್ಯನಂತೆ ನಮ್ಮ ನೋವನ್ನು ಪತ್ತೆಹಚ್ಚಿ, ನಮಗೆ ಆದಷ್ಟು ಉತ್ತಮವಾದ ಔಷಧವಾದ ಧರ್ಮವನ್ನು ಒದಗಿಸಿದ್ದಾರೆ. ಆದರೆ ಔಷಧಿಯನ್ನು ತೆಗೆದುಕೊಳ್ಳುವುದು - ಅಥವಾ ಧರ್ಮಾಚರಣೆಗಳಲ್ಲಿ ತೊಡಗುವುದು – ನಮಗೆ ಬಿಟ್ಟಿದ್ದು. ಹಾಗೆ ಮಾಡಲು ಯಾರೂ ನಮ್ಮನ್ನು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ನಮ್ಮ ಎಲ್ಲಾ ಸಮಸ್ಯೆಗಳು, ಹತಾಶೆಗಳು ಮತ್ತು ದುಃಖಗಳನ್ನು ತೊಡೆದುಹಾಕಿ, ಮನಸ್ಸಿನ ಶಾಂತಿಯನ್ನು ಪಡೆಯಲು ಸಹಾಯಮಾಡಲು ಧರ್ಮವು ಪ್ರಯೋಜನಕಾರಿಯಾಗಿರುತ್ತದೆ ಎಂಬುದನ್ನು ನಾವು ನೋಡಿದಾಗ, ನಮಗೆ ಮತ್ತು ಇತರರೆಲ್ಲರಿಗೂ ಒಳಿತಾಗುವಂತೆ ಧರ್ಮವನ್ನು ಸಂತೋಷದಿಂದ ಆಚರಿಸುತ್ತೇವೆ.

Top