ಸುಮಾರು 2,500 ವರ್ಷಗಳ ಹಿಂದೆ ಭಾರತದಲ್ಲಿ ವಾಸಿಸುತ್ತಿದ್ದ ಮತ್ತು ಪಾಠ ಮಾಡುತ್ತಿದ್ದ ಮಹಾನ್ ಆಧ್ಯಾತ್ಮಿಕ ಗುರುವಾದ ಬುದ್ಧನ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಶಾಕ್ಯಮುನಿ ಬುದ್ಧ ಎಂದು ಕರೆಯಲ್ಪಡುವ ಐತಿಹಾಸಿಕ ಬುದ್ಧರೊಬ್ಬರೇ ಬುದ್ದನಾಗಿಲ್ಲ. ಬೌದ್ಧಧರ್ಮದಲ್ಲಿ, ಅಸಂಖ್ಯಾತ ಬುದ್ಧರಿದ್ದಾರೆ ಮತ್ತು ವಿಶ್ವದಲ್ಲಿರುವ ಪ್ರತಿಯೊಂದು ಜೀವಿಯು ಸ್ವತಃ ಬುದ್ಧನಾಗುವ ಸಾಮರ್ಥ್ಯವನ್ನು ಹೊಂದಿದೆ ಎಂಬುದೇ ಬೌದ್ಧಧರ್ಮದ ಪ್ರಮುಖ ಬೋಧನೆಯಾಗಿರುವುದು.
Who is buddha 01

ಐತಿಹಾಸಿಕ ಬುದ್ಧ 

ಹೆಚ್ಚಿನ ಸಾಂಪ್ರದಾಯಿಕ ಜೀವನಚರಿತ್ರೆಗಳ ಪ್ರಕಾರ, ಮುಂದೊಂದು ದಿನ ಬುದ್ಧನಾಗುವ ವ್ಯಕ್ತಿಯು 5 ನೇ ಶತಮಾನ BCE ಯಲ್ಲಿ, ಉತ್ತರ ಭಾರತದಲ್ಲಿನ ಶ್ರೀಮಂತ ಶಾಕ್ಯ ಕುಲದಲ್ಲಿ ಜನಿಸಿದರು. ಅವರಿಗೆ ಸಿದ್ಧಾರ್ಥ ಗೌತಮ ಎಂದೆ ಹೆಸರಿಡಲಾಯಿತು, ಮತ್ತು ಅವರ ಜನ್ಮದಾಚರಣೆಯಲ್ಲಿ, ಅಸಿತ ಎಂಬ ಬುದ್ಧಿವಂತ ಸನ್ಯಾಸಿಯು, ಈ ಚಿಕ್ಕ ಮಗುವು ಮಹಾನ್ ರಾಜ ಅಥವಾ ಶ್ರೇಷ್ಠ ಧಾರ್ಮಿಕ ಗುರುವಾಗಿತ್ತಾನೆ ಎಂದು ಘೋಷಿಸಿದನು. ಸಿದ್ಧಾರ್ಥನ ತಂದೆಯಾದ ಶುದ್ಧೋಧನನು ಶಾಕ್ಯ ಕುಲದ ಮುಖ್ಯಸ್ಥನಾಗಿದ್ದು, ಅವನ ಮಗನು ತನ್ನ ಹೆಜ್ಜೆಗಳನ್ನು ಅನುಸರಿಸಬೇಕೆಂಬುವ ಹಂಬಲದಿಂದ, ತನ್ನ ಮಗನನ್ನು ಮಹಾನ್ ರಾಜನಾಗುವ ಹಾದಿಯಿಂದ ದೂರವಿಡಲು ಕಾರಣವಾಗುವ ಯಾವುದೇ ವಿಷಯದಿಂದ ಅವನನ್ನು ರಕ್ಷಿಸಲು ನಿರ್ಧರಿಸಿದನು. 

ಯುವ ಸಿದ್ಧಾರ್ಥನನ್ನು ಕುಟುಂಬದ ಅರಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಯಿತು ಮತ್ತು ಅವನಿಗೆ ಅಸ್ತಿತ್ವದಿಲ್ಲಿರುವ ಎಲ್ಲ ರೀತಿಯ ಐಷಾರಾಮಿಗಳನ್ನು ನೀಡಲಾಯಿತು: ಅಮೂಲ್ಯವಾದ ಆಭರಣಗಳು ಮತ್ತು ಸುಂದರ ಮಹಿಳೆಯರು, ಕಮಲದ ಕೊಳಗಳು ಮತ್ತು ಆನಂದಮಯ ಪ್ರಾಣಿಸಂಗ್ರಹಾಲಯಗಳು. ಅನಾರೋಗ್ಯದಿಂದ ಬಳಲುವವರನ್ನು ಮತ್ತು ವೃದ್ಧರನ್ನು ಅರಮನೆಯನ್ನು ಪ್ರವೇಶಿವುದರಿಂದ ನಿಷೇಧಿಸಿದ್ದರಿಂದ, ಸಿದ್ಧಾರ್ಥ ಯಾವುದೇ ರೀತಿಯ ದುಃಖ ಅಥವಾ ದುರದೃಷ್ಟದ ಅನುಭವದಿಂದ ಸುರಕ್ಷಿತರಾಗಿದ್ದರು. ಕಾಲಾನಂತರದಲ್ಲಿ, ಸಿದ್ಧಾರ್ಥ ತಮ್ಮ ಅಧ್ಯಯನದಲ್ಲಿ ಮತ್ತು ಕ್ರೀಡೆಯಲ್ಲಿ ಉನ್ನತವಾದ ಸಾಧನೆಗಳನ್ನು ಪಡೆದು, ಯಶೋಧರರನ್ನು ಮದುವೆಯಾದನು, ಮತ್ತು ಅವರಿಗೆ ರಾಹುಲ ಎಂಬ ಮಗನಿದ್ದನು. 

ಸುಮಾರು 30 ವರ್ಷಗಳ ಕಾಲ, ಸಿದ್ಧಾರ್ಥ ಐಷಾರಾಮಿ ಜೀವನವನ್ನು ನಡೆಸಿದರು, ಆದರೆ ಅರಮನೆಯ ಗೋಡೆಗಳ ಹೊರಗಿರುವ ಜಗತ್ತಿನ ಬಗ್ಗೆಯ ಕುತೂಹಲವು ಹೆಚ್ಚಾಯಿತು. "ಈ ನೆಲವು ನನ್ನದಾಗಬೇಕಾದರೆ, ನಾನು ಈ ನೆಲದಲ್ಲಿ ವಾಸಿಸುವ ನನ್ನ ಜನರನ್ನು ನೋಡಬೇಕಲ್ಲವೇ?" ಎಂದು ಅವರು ಯೋಚಿಸಿದರು. ಅಂತಿಮವಾಗಿ, ಶುದ್ಧೋಧನನು ತನ್ನ ಮಗನನ್ನು ಅರಮನೆಯಿಂದ ವಿಹಾರಕ್ಕೆ ಕರೆದೊಯ್ಯಲು ವ್ಯವಸ್ಥೆಯನ್ನು ಮಾಡಿದನು. ಬೀದಿಗಳನ್ನು ಸ್ವಚ್ಛಗೊಳಿಸಲಾಯಿತು, ರೋಗಿಗಳನ್ನು ಮತ್ತು ವೃದ್ಧರನ್ನು ಮರೆಮಾಡಲಾಯಿತು, ಮತ್ತು ಸ್ಥಳೀಯ ಜನರು ಕೈಬೀಸುತ್ತಾ ನಗುವಾಗ, ಸಿದ್ಧಾರ್ಥರನ್ನು ಅವರ ಸಾರಥಿಯಾದ ಚನ್ನನು ಬೀದಿಗಳಲ್ಲಿ ಕರೆದೊಯ್ದನು. ಆದರೂ, ಜನಸಮೂಹದ ನಡುವೆ, ರಸ್ತೆಯ ಪಕ್ಕದಲ್ಲಿ, ಒಬ್ಬ ಬಾಗಿದ ಮತ್ತು ಸುಕ್ಕುಗಟ್ಟಿದ ವೃದ್ಧನನ್ನು ಸಿದ್ಧಾರ್ಥ ಗಮನಿಸಿದರು. ಆಶ್ಚರ್ಯ ಮತ್ತು ಆಘಾತಕ್ಕೊಳಗಾದ ಅವರು, ಈ ಬಡ ಜೀವಿಗೆ ಏನಾಯಿತು ಎಂದು ಚನ್ನನನ್ನು ಕೇಳಿದರು. "ನೀವು ನೋಡುತ್ತಿರುವುದು ಒಬ್ಬ ವಯಸ್ಸಾದ ವೃದ್ಧರನ್ನು, ಇದು ನಮ್ಮೆಲ್ಲರ ಅಂತಿಮವಾದ ವಿಧಿಯಾಗಿದೆ." ಎಂದು ಚನ್ನ ಉತ್ತರಿಸಿದನು. ಮುಂದೆ ಸಾಗಿದಂತೆ, ಸಿದ್ಧಾರ್ಥ ಒಬ್ಬ ಅಸ್ವಸ್ಥ ವ್ಯಕ್ತಿ ಮತ್ತು ಶವವೊಂದನ್ನು ನೋಡಿದರು. ಇವುಗಳು ಅನಿವಾರ್ಯವೂ ಹೌದು, ಸಾಮಾನ್ಯವೂ ಹೌದು, ಮತ್ತು ಇವೆರಡು ಜೀವನದ ಅನುಭವಗಳು ಅವರನ್ನೂ ಸಹ ಅಂತಿಮವಾಗಿ ಸ್ಪರ್ಶಿಸುತ್ತದೆ ಎಂಬ ವಿಷಯವು ಅವರ ಕಣ್ತೆರೆಯಿತು. 

ಅಂತಿಮವಾಗಿ, ಅವರು ದುಃಖದಿಂದ ವಿಮೋಚನೆಯನ್ನು ಹುಡುಕುತ್ತಿದ್ದ ಒಬ್ಬ ಸನ್ಯಾಸಿಯನ್ನು ಭೇಟಿಯಾದರು. ಈ ಮೊದಲ ಮೂರು ದೃಶ್ಯಗಳಿಂದ ಸಿದ್ಧಾರ್ಥ ತಾನು ದುಃಖಗಳಿಂದ ದೂರವಾಗಿ, ಅರಮನೆಯಲ್ಲಿನ ಜೀವನದಿಂದ ಮೋಸ ಹೋಗಿದ್ದೇನೆ ಎಂದು ಅರಿತುಕೊಂಡರು. ಸನ್ಯಾಸಿಯನ್ನು ನೋಡಿದಾಗ, ಈ ದುಃಖದಿಂದ ಹೊರಬರುವ ಮಾರ್ಗವನ್ನು ಹುಡುಕುವ ಸಾಧ್ಯತೆಯಿರುವ ಬಗ್ಗೆ ಜಾಗೃತಗೊಂಡರು.

ಸಿದ್ಧಾರ್ಥನು, ಈ ಮೊದಲು ವೃದ್ಧರನ್ನು ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ಭೇಟಿಯಾಗದೇ ಇರುವುದು ಅಸಂಭವನೀಯವಾಗಿದೆ; ಆದರೆ ಅವರು - ಮತ್ತು ನಾವೆಲ್ಲರೂ - ಜೀವನದ ದುಃಖಗಳನ್ನು ನಿರ್ಲಕ್ಷಿಸಿ ಹೇಗೆ ಬದುಕುತ್ತೇವೆ ಎಂಬುದನ್ನು ಇದು ಸಾಂಕೇತಿಕವಾಗಿ ತೋರಿಸುತ್ತದೆ. ಅರಮನೆಗೆ ಹಿಂತಿರುಗಿದ ಸಿದ್ಧಾರ್ಥ ಬಹಳ ಚಿಂತೆಗೊಳಗಾದರು. ಇಲ್ಲಿಯ ತನಕ ಅವರು ತಮ್ಮ ಪ್ರೀತಿಪಾತ್ರರೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು, ಆದರೆ ಒಂದು ದಿನ ತಾನೂ ಸೇರಿದಂತೆ ಎಲ್ಲಾ ಪ್ರೀತಿಪಾತ್ರರು ವಯಸ್ಸಾಗಿ, ಅನಾರೋಗ್ಯದಿಂದ ಬಳಲಿ, ಸಾವನಪ್ಪುತ್ತಾರೆ ಎಂಬ ಜ್ಞಾನವನ್ನು ಪಡೆದ ನಂತರ ಅವರು ಆನಂದ ಅಥವಾ ವಿಶ್ರಾಂತಿಯಿಂದಿರಲು ಹೇಗೆ ತಾನೆ ಸಾಧ್ಯ? ಒಂದು ರಾತ್ರಿ, ಅವರು ಗಡಿಬಿಡಿಯಲ್ಲಿ ಅರಮನೆಯಿಂದ ತಪ್ಪಿಸಿಕೊಂಡು, ಎಲ್ಲರಿಗಾಗಿ ಒಂದು ದಾರಿಯನ್ನು ಹುಡುಕುವ ಉದ್ದೇಶದಿಂದ ಒಬ್ಬ ಅಲೆದಾಡುವ ತಪಸ್ವಿಯ ಜೀವನವನ್ನು ನಡೆಸಲು ಮುಂದಾದರು.

ಸಿದ್ಧಾರ್ಥ ಅನೇಕ ಶ್ರೇಷ್ಠ ಗುರುಗಳನ್ನು ಭೇಟಿಯಾಗಿ, ಅವರ ಮಾರ್ಗದರ್ಶನದಲ್ಲಿ ಧ್ಯಾನದ ಮೂಲಕ ಉನ್ನತ ಮಟ್ಟದ ಏಕಾಗ್ರತೆಯನ್ನು ಗಳಿಸಿದರೂ ಸಹ, ಈ ಧ್ಯಾನಸ್ಥ ಸ್ಥಿತಿಗಳಿಂದ ದುಃಖದ ಅಂತ್ಯವನ್ನು ಕಾಣದ ಕಾರಣವಾಗಿ ಅವರು ಇನ್ನೂ ಅತೃಪ್ತರಾಗಿದ್ದರು. ಅವರು ಸನ್ಯಾಸತ್ವದ ಅಭ್ಯಾಸಗಳಿಗೆ ತಿರುಗಿದರು, ತಮ್ಮ ದೇಹವನ್ನು ಆಹಾರ ಮತ್ತು ಎಲ್ಲಾ ದೈಹಿಕ ಸೌಕರ್ಯಗಳಿಂದ ದೂರವಿಟ್ಟರು ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆದರು. ಆರು ವರ್ಷಗಳ ಕಾಲ ಈ ಅಭ್ಯಾಸಗಳಲ್ಲಿ ತೊಡಗಿಸಿಕೊಂಡ ಅವರ ದೇಹವು ತೀರ ತೆಳ್ಳಗಾಗಿದ್ದು, ಚರ್ಮದ ತೆಳುವಾದ ಪದರದಲ್ಲಿ ಮುಚ್ಚಿದ ಅಸ್ಥಿಪಂಜರದಂತೆ ಅವರು ಕಂಡರು. 

ಒಂದು ದಿನ, ನದಿಯ ದಡದಲ್ಲಿ ಕುಳಿತಿರುವಾಗ, ಒಬ್ಬ ಗುರುಗಳು ಒಂದು ಚಿಕ್ಕ ಮಗುವಿಗೆ ವಾದ್ಯವನ್ನು ನುಡಿಸಲು ನೀಡುವ ಸೂಚನೆಗಳನ್ನು ಅವರು ಕೇಳಿಸಿಕೊಂಡರು: “ತಂತಿಗಳು ತುಂಬಾ ಸಡಿಲವಾಗಿರಬಾರದು, ಇಲ್ಲದಿದ್ದರೆ ನೀನು ವಾದ್ಯವನ್ನು ನುಡಿಸಲು ಸಾಧ್ಯವಾಗುವುದಿಲ್ಲ. ಅಂತೆಯೇ, ಅವು ತುಂಬಾ ಬಿಗಿಯಾಗಿರಬಾರದು, ಇಲ್ಲದಿದ್ದರೆ ಅವು ಕಡಿದುಹೋಗುತ್ತವೆ.” ಇದನ್ನು ಕೇಳಿದ, ಸಿದ್ಧಾರ್ಥರಿಗೆ ತಮ್ಮ ಹಲವು ವರ್ಷಗಳ ಸನ್ಯಾಸತ್ವದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬ ಅರಿವಾಯಿತು. ಅರಮನೆಯಲ್ಲಿನ ಐಷಾರಾಮಿ ಜೀವನದಂತೆಯೇ, ಸನ್ಯಾಸತ್ವದ ವಿಪರೀತ ಸ್ಥಿತಿಯಿಂದ ಅವರಿಗೆ ದುಃಖವನ್ನು ಜಯಿಸಲಾಗಲಿಲ್ಲ. ಈ ವಿಪರೀತಗಳ ನಡುವಿನ ಮಧ್ಯಮ ಮಾರ್ಗವೇ ಉತ್ತರವಾಗಿರಬೇಕು ಎಂದು ಅವರು ಭಾವಿಸಿದರು. 

ಆ ಕ್ಷಣದಲ್ಲಿ, ಸುಜಾತ ಎಂಬ ಯುವತಿಯು ಹಾದು ಹೋಗುತ್ತಿದ್ದು, ಸಿದ್ಧಾರ್ಥರಿಗೆ ಸ್ವಲ್ಪ ಪಾಯಸವನ್ನು ನೀಡಿದರು. ಅದು ಅವರು ಆರು ವರ್ಷಗಳಲ್ಲಿ ಮೊದಲ ಸಲ ಸೇವಿಸಿದ ಸರಿಯಾದ ಊಟವಾಗಿತ್ತು. ಅವರು ಉಣ್ಣುವುದನ್ನು ಕಂಡ ಅವರ ಸಹವರ್ತಿ ತಪಸ್ವಿ ಸ್ನೇಹಿತರು ಆಶ್ಚರ್ಯಗೊಂಡರು. ನಂತರ ಅವರು ಅಂಜೂರದ ಮರದ ಕೆಳಗೆ ಕುಳಿತಕೊಂಡರು. "ನನಗೆ ಸಂಕಲ್ಪ ಸಿದ್ದಿಯಾಗುವವರೆಗೆ ನಾನು ಈ ಆಸನದಿಂದ ಮೇಲೇಳುವುದಿಲ್ಲ." ಎಂದು ಅವರು ನಿರ್ಧರಿಸಿದರು. ಇಂದು ಬೋಧಿವೃಕ್ಷ ಎಂದು ಕರೆಯಲ್ಪಡುವ ಈ ಮರದ ಕೆಳಗೆ ಸಿದ್ಧಾರ್ಥ ಪೂರ್ಣ ಜ್ಞಾನೋದಯವನ್ನು ಪಡೆದುಕೊಂಡರು ಮತ್ತು ಸಂಕಲ್ಪಸದ್ಧಿಯಾದ ಬುದ್ಧನೆಂದು ಪ್ರಸಿದ್ಧರಾದರು.

ಜ್ಞಾನೋದಯದ ನಂತರ, ಬುದ್ಧ ಚತುರಾರ್ಯ ಸತ್ಯಗಳು ಮತ್ತು ಅಷ್ಟಾಂಗಿಕ ಮಾರ್ಗಗಳ ಬಗ್ಗೆ ಬೋಧನೆಗಳನ್ನು ನೀಡಿದರು. ಮುಂದಿನ 40 ವರ್ಷಗಳ ಕಾಲ, ಅವರು ಉತ್ತರ ಭಾರತದ ಬಯಲು ಪ್ರದೇಶಗಳಾದ್ಯಂತ ಸಂಚರಿಸಿ, ತಾವು ಸಾಧಿಸಿದ ಸಾಕ್ಷಾತ್ಕಾರಗಳನ್ನು ಇತರರಿಗೆ ಕಲಿಸಿದರು. ಅವರು ಸಂಘ ಎಂದು ಕರೆಯಲ್ಪಡುವ ಸನ್ಯಾಸಿಗಳ ಪದ್ಧತಿಯೊಂದನ್ನು ಸ್ಥಾಪಿಸಿದರು, ಅವರು ಬುದ್ಧನ ಬೋಧನೆಗಳನ್ನು ಭಾರತದಾದ್ಯಂತ ಮತ್ತು ಅಂತಿಮವಾಗಿ ಏಷ್ಯಾ ಮತ್ತು ಪ್ರಪಂಚದಾದ್ಯಂತ ಹರಡಿದರು. 

ಸುಮಾರು 80 ನೇ ವಯಸ್ಸಿನಲ್ಲಿ ಬುದ್ಧ ಕುಶಿನಗರದಲ್ಲಿ ನಿಧನರಾದರು. ಅದಕ್ಕೂ ಮುನ್ನ ಅವರು ಬೋಧನೆಗಳಲ್ಲಿ ಯಾವುದೇ ಅನುಮಾನಗಳಿವೆಯೇ ಅಥವಾ ಸ್ಪಷ್ಟೀಕರಣದ ಅಗತ್ಯವಿದೆಯೇ ಎಂದು ಸಂಘವನ್ನು ಕೇಳಿದರು. ಧರ್ಮ ಮತ್ತು ನೈತಿಕ ಸ್ವಯಂ-ಶಿಸ್ತಿನ ಮೇಲೆ ಅವಲಂಬಿತರಾಗಲು ತಮ್ಮ ಅನುಯಾಯಿಗಳಿಗೆ ಸಲಹೆ ನೀಡುತ್ತಾ, ಅವರು ತಮ್ಮ ಕೊನೆಯ ಮಾತುಗಳನ್ನಾಡಿದರು: “ಇಗೋ, ಓ ಸನ್ಯಾಸಿಗಳೇ, ಇದು ನಿಮಗೆ ನನ್ನ ಕೊನೆಯ ಸಲಹೆಯಾಗಿದೆ. ಪ್ರಪಂಚದ ಎಲ್ಲಾ ಘಟಕ ವಸ್ತುಗಳು ಬದಲಾಗಬಲ್ಲವು. ಅವು ಶಾಶ್ವತವಲ್ಲ. ನಿಮ್ಮ ಸ್ವಂತ ಮೋಕ್ಷವನ್ನು ಪಡೆಯಲು ಶ್ರಮ ಪಡಿ.” ಹಾಗೆಂದು, ಅವರು ತಮ್ಮ ಬಲಭಾಗದಲ್ಲಿ ಮಲಗಿ ಕೊನೆಯ ಉಸಿರೆಳೆದರು. 

ಬುದ್ಧರು ಎಂದರೇನು

ಐತಿಹಾಸಿಕ ಬುದ್ಧ ಯಾರೆಂದು ನಾವು ನೋಡಿದ್ದೇವೆ, ಆದರೆ ವಾಸ್ತವದಲ್ಲಿ ಬುದ್ಧನ ಅರ್ಥವೇನು? 

ಸರಳವಾಗಿ ಹೇಳುವುದಾದರೆ, ಬುದ್ಧ ಎಂದರೆ ಒಬ್ಬ ಜಾಗೃತರಾಗಿರುವ ವ್ಯಕ್ತಿ. ಬುದ್ಧರು ಒಂದು ಗಾಢ ನಿದ್ರೆಯಿಂದ ಎದ್ದಿರುವರು. ಇದು ರಾತ್ರಿಯೆಲ್ಲಾ ಪಾರ್ಟಿ ಮಾಡಿದ ನಂತರ ನಾವು ಅನುಭವಿಸಬಹುದಾದ ಆಳವಾದ ನಿದ್ರೆಯಲ್ಲ, ಬದಲಿಗೆ ಇದು ನಮ್ಮ ಜೀವನದ ಪ್ರತಿ ಕ್ಷಣವನ್ನು ಆವರಿಸುವ ಗೊಂದಲದ ಗಾಢ ನಿದ್ರೆ; ನಾವು ನಿಜವಾಗಿಯೂ ಹೇಗೆ ಅಸ್ತಿತ್ವದಲ್ಲಿದ್ದೇವೆ ಮತ್ತು ವಾಸ್ತವದಲ್ಲಿ ಎಲ್ಲವೂ ಹೇಗೆ ಅಸ್ತಿತ್ವದಲ್ಲಿದೆ ಎಂಬುದರ ಬಗ್ಗೆಯ ಗೊಂದಲದ ಗಾಢ ನಿದ್ರೆ. 

ಬುದ್ಧರು ದೇವರುಗಳಲ್ಲ, ಅವರು ಸೃಷ್ಟಿಕರ್ತರೂ ಅಲ್ಲ. ಎಲ್ಲಾ ಬುದ್ಧರು ನಮ್ಮಂತೆಯೇ ಪ್ರಾರಂಭಿಸುತ್ತಾರೆ, ಗೊಂದಲ, ತಳಮಳದ ಭಾವನೆಗಳು ಮತ್ತು ಸಾಕಷ್ಟು ಸಮಸ್ಯೆಗಳಿಂದ ತುಂಬಿರುತ್ತಾರೆ. ಆದರೆ, ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಮಾರ್ಗವನ್ನು ನಿಧಾನವಾಗಿ ಅನುಸರಿಸುವ ಮೂಲಕ ಮತ್ತು ಈ ಎರಡು ಸಕಾರಾತ್ಮಕ ಗುಣಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸುವ ಮೂಲಕ, ಸ್ವತಃ ಜ್ಞಾನೋದಯವನ್ನು ಪಡೆಯಲು ಸಾಧ್ಯವಿದೆ. 

ಬುದ್ಧರಲ್ಲಿ ಈ ಮೂರು ಪ್ರಮುಖ ಗುಣಗಳನ್ನು ಕಾಣಬಹುದು: 

  1. ಬುದ್ಧಿವಂತಿಕೆ - ಬುದ್ಧರಿಗೆ ಯಾವುದೇ ಮಾನಸಿಕ ನಿರ್ಬಂಧಗಳಿರುವುದಿಲ್ಲ, ಆದ್ದರಿಂದ ಅವರು ಎಲ್ಲವನ್ನೂ ಸಂಪೂರ್ಣವಾಗಿ ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ, ವಿಶೇಷವಾಗಿ ಇತರರಿಗೆ ಸಹಾಯ ಮಾಡುವುದರ ಬಗ್ಗೆ ತಿಳಿದಿರುತ್ತಾರೆ. 
  2. ಸಹಾನುಭೂತಿ - ಈ ಮೇಲಿನಂತೆ ವಿವರಿಸಿದ ಬುದ್ಧಿವಂತಿಕೆಯಿಂದಾಗಿ, ನಾವೆಲ್ಲರೂ ಪರಸ್ಪರ ಸಂಬಂಧ ಹೊಂದಿದ್ದೇವೆ ಎಂದು ಅರಿತಾಗ, ಬುದ್ಧರು ಅಪಾರವಾದ ಸಹಾನುಭೂತಿಯ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ತಾವು ಎಲ್ಲರಿಗೂ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ತಿಳಿಯುತ್ತಾರೆ. ಸಹಾನುಭೂತಿ ಇಲ್ಲದ ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯನ್ನು ಬಹಳ ವಿದ್ಯಾವಂತನನ್ನಾಗಿ ಮಾಡಬಹುದು, ಆದರೆ ಅವರು ಸಮಾಜಕ್ಕೆ ಹೆಚ್ಚು ಉಪಯೋಗವಾಗುವುದಿಲ್ಲ. ಸಹಾನುಭೂತಿಯು ಪ್ರತಿಯೊಬ್ಬರ ಪ್ರಯೋಜನಕ್ಕಾಗಿ ಕೆಲಸ ಮಾಡಲು ಅವರನ್ನು ಪ್ರೇರೇಪಿಸುತ್ತದೆ. ಅದಕ್ಕಾಗಿಯೇ ಬುದ್ಧರು ನಮ್ಮೆಲ್ಲರೊಂದಿಗೆ ಸಂಬಂಧ ಹೊಂದಲು ಈ ಎರಡನೆಯ ಗುಣವನ್ನು ಬೆಳೆಸಿಕೊಳ್ಳುತ್ತಾರೆ. 
  3. ಸಾಮರ್ಥ್ಯಗಳು - ದುಃಖವನ್ನು ತೊಡೆದುಹಾಕುವ ಮತ್ತು ಇತರರಿಗೆ ಸಹಾಯ ಮಾಡುವ ಬಲವಾದ ಆಶಯದ ಈ ಎರಡು ಗುಣಗಳೊಂದಿಗೆ, ಬುದ್ಧರು ನಮಗೆ ಜ್ಞಾನೋದಯದ ಹಾದಿಯಲ್ಲಿ ಸಾಗಲು, ವಿವಿಧ ಕೌಶಲ್ಯಗಳನ್ನು ಕಲಿಸುವ ಮೂಲಕ ನಮಗೆ ಮತ್ತು ಇತರರಿಗೆ ಪ್ರಯೋಜನಕಾರಿಯಾಗುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾರೆ. 

ಹೇಗೆ ಅವರು ದುಃಖವನ್ನು ಬಯಸುವುದಿಲ್ಲವೋ, ಹಾಗೆಯೇ ಬೇರೆ ಯಾರೂ ದುಃಖವನ್ನು ಬಯಸುವುದಿಲ್ಲ ಎಂಬುದನ್ನು ಬುದ್ಧರು ಅರ್ಥಮಾಡಿಕೊಳ್ಳುತ್ತಾರೆ. ಎಲ್ಲರೂ ಸಂತೋಷವಾಗಿರಲು ಬಯಸುತ್ತಾರೆ. ಆದ್ದರಿಂದ, ಬುದ್ಧರು ತಮಗಾಗಿ ಮಾತ್ರವಲ್ಲ, ವಿಶ್ವದಲ್ಲಿರುವ ಪ್ರತಿಯೊಂದು ಜೀವಿಗಾಗಿ ಕೆಲಸ ಮಾಡುತ್ತಾರೆ. ಅವರು ತಮ್ಮ ಬಗ್ಗೆ ಕಾಳಜಿ ವಹಿಸುವಷ್ಟೇ ಇತರರ ಬಗ್ಗೆ ಕಾಳಜಿ ವಹಿಸುತ್ತಾರೆ. 

ಅವರ ಅಗಾಧವಾದ ಸಹಾನುಭೂತಿಯಿಂದ ಪ್ರೇರೇಪಿಸಲ್ಪಟ್ಟು, ಎಲ್ಲಾ ದುಃಖಗಳನ್ನು ತೊಡೆದುಹಾಕಲು ಅವರು ಪರಿಹಾರವನ್ನು ಕಲಿಸುತ್ತಾರೆ, ಇದನ್ನು ಬುದ್ಧಿವಂತಿಕೆ ಎಂದು ಕರೆಯಲಾಗುತ್ತದೆ - ವಾಸ್ತವ ಮತ್ತು ಕಾಲ್ಪನಿಕತೆಯ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಗುರುತಿಸುವ ಮನಸ್ಸಿನ ಸ್ಪಷ್ಟತೆ. ಅಂತಿಮವಾಗಿ, ಈ ಬುದ್ಧಿವಂತಿಕೆಯಿಂದ ನಾವು ಎಲ್ಲಾ ನಕಾರಾತ್ಮಕ ವಿಷಯಗಳನ್ನು ತೊಡೆದುಹಾಕಬಹುದು: ಎಲ್ಲಾ ಗೊಂದಲ, ಸ್ವಾರ್ಥ ಮತ್ತು ನಕಾರಾತ್ಮಕ ಭಾವನೆಗಳು. ನಾವು ಕೂಡ ಪರಿಪೂರ್ಣ ಬುದ್ಧರಾಗಬಹುದು ಮತ್ತು ಸಂಪೂರ್ಣ ಆಂತರಿಕ ಶಾಂತಿಯನ್ನು ಅನುಭವಿಸಬಹುದು. 

ಸಾರಾಂಶ 

ತಮ್ಮ ಕೌಶಲ್ಯಪೂರ್ಣ ವಿಧಾನಗಳೊಂದಿಗೆ ನಮಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿದಿರುವ ಪರಿಪೂರ್ಣ ಗುರುಗಳೇ ಬುದ್ಧರು. ಅವರು ಸಹಾನುಭೂತಿಯುಳ್ಳವರಾಗಿದ್ದಾರೆ ಮತ್ತು ನಮಗಾಗಿ ಸರಿಯಾದ ಹಾದಿಯನ್ನು ಬೆಳಗುವ ಮೂಲಕ ನಮಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. 

ಸಿದ್ಧಾರ್ಥನಂತೆಯೇ ನಾವೂ ಸಹ ಪ್ರಪಂಚದ ದುಃಖಗಳಿಗೆ ಹೆಚ್ಚಾಗಿ ಕುರುಡಾಗಿರುತ್ತೇವೆ. ಆದರೆ ನಾವು ಅವುಗಳಿಂದ ಎಷ್ಟೇ ದೂರ ಓಡಿದರೂ ಅಥವಾ ನಿರ್ಲಕ್ಷಿಸಲು ಪ್ರಯತ್ನಿಸಿದರೂ, ವೃದ್ಧಾಪ್ಯ, ಅನಾರೋಗ್ಯ ಮತ್ತು ಸಾವನ್ನು ತಪ್ಪಿಸಲಾಗುವುದಿಲ್ಲ. ಬುದ್ಧರಂತೆಯೇ, ನಾವೂ ಕೂಡ ದುಃಖದ ನೈಜತೆಯನ್ನು ಎದುರಿಸುವ ಮತ್ತು ಅರ್ಥಮಾಡಿಕೊಳ್ಳುವ ಮೂಲಕ, ನಾವು ಜೀವನದಲ್ಲಿ ಅನುಭವಿಸುವ ಎಲ್ಲಾ ಹತಾಶೆಯಿಂದ ನಮ್ಮನ್ನು ಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿಯಲು ಬುದ್ಧನ ಜೀವನದ ಕಥೆಯು ನಮಗೆ ಸ್ಫೂರ್ತಿಯಾಗಿದೆ. ಅವರಂತೆ, ನಾವು ಕೂಡ ಎಲ್ಲಾ ಜೀವಿಗಳಿಗೆ ಪ್ರಯೋಜನಕಾರಿಯಾಗಿಲು, ನಮ್ಮ ವಿನಾಶಕಾರಿ ಭಾವನೆಗಳು ಮತ್ತು ಗೊಂದಲಗಳನ್ನು ಜಯಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು ಎಂಬುದನ್ನು ಅವರ ಜೀವನ ಮತ್ತು ಬೋಧನೆಗಳು ನಮಗೆ ನೆನಪಿಸುತ್ತವೆ.

Top