ಏಷ್ಯಾದಲ್ಲಿ ಬೌದ್ಧಧರ್ಮದ ಹರಡುವಿಕೆ

04:10
ಧರ್ಮಪ್ರಚಾರಕ ಚಳುವಳಿಗಳನ್ನು ಎಂದಿಗೂ ಕೈಗೊಳ್ಳದಿದ್ದರೂ, ಶತಮಾನಗಳವರೆಗೆ ಬುದ್ಧನ ಬೋಧನೆಗಳು ಬಹಳಾ ದೂರದವರೆಗೆ ಹರಡಿದವು: ಮೊದಲು ಆಗ್ನೇಯ ಏಷ್ಯಾ, ನಂತರ ಮಧ್ಯ ಏಷ್ಯಾದ ಮೂಲಕ ಚೀನಾ ಮತ್ತು ಪೂರ್ವ ಏಷ್ಯಾದ ಉಳಿದ ಭಾಗಗಳಿಗೆ ಮತ್ತು ಅಂತಿಮವಾಗಿ ಟಿಬೆಟ್ ಮತ್ತು ಮಧ್ಯ ಏಷ್ಯಾದ ಮತ್ತಷ್ಟು ಭಾಗಗಳಿಗೆ ತಲುಪಿದವು. ಸಾಮಾನ್ಯವಾಗಿ, ವಿದೇಶಿ ವ್ಯಾಪಾರಿಗಳ ಬೌದ್ಧ ನಂಬಿಕೆಗಳಲ್ಲಿನ ಸ್ಥಳೀಯ ಆಸಕ್ತಿಯಿಂದಾಗಿ, ಈ ಪ್ರದೇಶಗಳಲ್ಲಿ ಇದು ಸಾವಯವವಾಗಿ ಅಭಿವೃದ್ಧಿಗೊಂಡಿತು. ಕೆಲವೊಮ್ಮೆ ಆಡಳಿತಗಾರರು ತಮ್ಮ ಜನರ ಮಧ್ಯೆ ನೈತಿಕತೆಯನ್ನು ಹುಟ್ಟಿಸಲು ಸಹಾಯ ಮಾಡುವಂತೆ ಬೌದ್ಧಧರ್ಮವನ್ನು ಅಳವಡಿಸಿಕೊಂಡರು, ಆದರೆ ಯಾರನ್ನೂ ಬಲವಂತವಾಗಿ ಮತಾಂತರಗೊಳಿಸಲಿಲ್ಲ. ಬುದ್ಧನ ಸಂದೇಶವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವ ಮೂಲಕ, ಜನರು ತಮಗೆ ಸಹಾಯಕವಾದುದನ್ನು ಆಯ್ಕೆ ಮಾಡಲು ಮುಕ್ತರಾಗಿದ್ದರು.

ಬುದ್ಧನ ಬೋಧನೆಗಳು ಭಾರತೀಯ ಉಪಖಂಡದಾದ್ಯಂತ ಶಾಂತಿಯುತವಾಗಿ ಹರಡಿತು ಮತ್ತು ಅಲ್ಲಿಂದ ಏಷ್ಯಾದಾದ್ಯಂತ ಬಹಳಾ ದೂರದವರೆಗೆ ಹರಡಿತು. ಹೊಸ ಸಂಸ್ಕೃತಿಗಳನ್ನು ಸ್ಪರ್ಷಿಸಿದಾಗಲೆಲ್ಲಾ, ಬೌದ್ಧ ವಿಧಾನಗಳು ಮತ್ತು ಶೈಲಿಗಳು ಬುದ್ಧಿವಂತಿಕೆ ಮತ್ತು ಸಹಾನುಭೂತಿಯ ಅಗತ್ಯ ಅಂಶಗಳ ಬಗ್ಗೆ ರಾಜಿ ಮಾಡಿಕೊಳ್ಳದೆ, ಸ್ಥಳೀಯ ಮನಸ್ಥಿತಿಗೆ ಸರಿಹೊಂದುವಂತೆ ಮುಕ್ತವಾಗಿ ಮಾರ್ಪಾಡಾದವು. ಬೌದ್ಧಧರ್ಮವು, ಸರ್ವೋಚ್ಚ ನಾಯಕನಿರುವ ಧಾರ್ಮಿಕ ಅಧಿಕಾರದ ಕ್ರಮವನ್ನು ಎಂದಿಗೂ ಅಭಿವೃದ್ಧಿಪಡಿಸಲಿಲ್ಲ. ಬದಲಿಗೆ, ಅದು ಹರಡಿದ ಪ್ರತಿಯೊಂದು ದೇಶದಲ್ಲಿ ತನ್ನದೇ ಆದ ರೂಪಗಳು, ಧಾರ್ಮಿಕ ರಚನೆ ಮತ್ತು ಆಧ್ಯಾತ್ಮಿಕ ನಾಯಕರನ್ನು ಅಭಿವೃದ್ಧಿಪಡಿಸಿತು. ಪ್ರಸ್ತುತವಾಗಿ, ಈ ಅಧಿಕಾರಿಗಳಲ್ಲಿ, ಅತ್ಯಂತ ಪ್ರಸಿದ್ಧರಾದ ಮತ್ತು ಅಂತರಾಷ್ಟ್ರೀಯವಾಗಿ ಗೌರವಾನ್ವಿತರಾಗಿರುವವರು ಟಿಬೆಟ್ನ ಪರಮಪೂಜ್ಯ ದಲೈ ಲಾಮಾ ಅವರು. 

ಸಂಕ್ಷಿಪ್ತವಾದ ಇತಿಹಾಸ 

ಬೌದ್ಧಧರ್ಮದ ಎರಡು ಪ್ರಮುಖ ವಿಭಾಗಗಳಿವೆ: ಶ್ರಾವಕಯಾನ (ಸಾಧಾರಣ ವಾಹನ), ಇದು ವೈಯಕ್ತಿಕ ವಿಮೋಚನೆಗೆ ಪ್ರಾಧಾನ್ಯ ನೀಡುತ್ತದೆ ಮತ್ತು ಮಹಾಯಾನ (ವಿಶಾಲವಾದ ವಾಹನ), ಇದು ಇತರರಿಗೆ ಪ್ರಯೋಜನವಾಗುವಂತೆ ಸಂಪೂರ್ಣವಾಗಿ ಪ್ರಬುದ್ಧ ಬುದ್ಧರಾಗಲು ಶ್ರಮಪಡುವುದಕ್ಕೆ ಪ್ರಾಧಾನ್ಯ ನೀಡುತ್ತದೆ. ಸಾಧಾರಣ ಮತ್ತು ವಿಶಾಲವಾದ ವಾಹನಗಳೆರಡೂ ಅನೇಕ ಉಪವಿಭಾಗಗಳನ್ನು ಹೊಂದಿವೆ. ಪ್ರಸ್ತುತವಾಗಿ, ಕೇವಲ ಮೂರು ಪ್ರಮುಖ ರೂಪಗಳು ಉಳಿದುಕೊಂಡಿವೆ: ಆಗ್ನೇಯ ಏಷ್ಯಾದಲ್ಲಿ ಒಂದು ಶ್ರಾವಕಯಾನ ಉಪವಿಭಾಗವಿದ್ದು, ಇದನ್ನು ಥೆರವಾದ ಎಂದು ಕರೆಯಲಾಗುತ್ತದೆ ಮತ್ತು ಎರಡು ಮಹಾಯಾನ ವಿಭಾಗಗಳಿವೆ, ಅವುಗಳೆಂದರೆ ಚೀನೀ ಮತ್ತು ಟಿಬೆಟಿನ ಸಂಪ್ರದಾಯಗಳು. 

  • ಥೆರವಾದ ಸಂಪ್ರದಾಯವು ಭಾರತದಿಂದ ಶ್ರೀಲಂಕಾ ಮತ್ತು ಬರ್ಮಾ (ಮ್ಯಾನ್ಮಾರ್) ಕ್ಕೆ 3 ನೇ ಶತಮಾನ BCE ಯಲ್ಲಿ ಹರಡಿತು. ಅಲ್ಲಿಂದ ಇದು ಆಗ್ನೇಯ ಏಷ್ಯಾದ ಉಳಿದ ಭಾಗಗಳನ್ನು (ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಲಾವೋಸ್) ತಲುಪಿತು. 
  • ಇತರ ಶ್ರಾವಕಯಾನ ಪಂಥಗಳು ಇಂದಿನ ಪಾಕಿಸ್ತಾನ, ಅಫ್ಘಾನಿಸ್ತಾನ, ಪೂರ್ವ ಮತ್ತು ಇರಾನಿನ ಕರಾವಳಿ ಪ್ರದೇಶ ಮತ್ತು ಮಧ್ಯ ಏಷ್ಯಾಕ್ಕೆ ಹರಡಿತು. ಮಧ್ಯ ಏಷ್ಯಾದಿಂದ, 2 ನೇ ಶತಮಾನದ CE ಯಲ್ಲಿ, ಚೀನಾಕ್ಕೆ ಹರಡಿತು. ನಂತರ, ಶ್ರಾವಕಯಾನದ ಈ ರೂಪವು, ಭಾರತದಿಂದ ಇದೇ ಮಾರ್ಗದ ಮೂಲಕ ಬಂದ ಮಹಾಯಾನ ಅಂಶಗಳೊಂದಿಗೆ ಸಂಯೋಜಿಸಿದವು, ಅಂತಿಮವಾಗಿ ಮಹಾಯಾನವು ಚೀನಾ ಮತ್ತು ಮಧ್ಯ ಏಷ್ಯಾದಲ್ಲಿನ ಬೌದ್ಧಧರ್ಮದ ಪ್ರಬಲ ರೂಪವಾಯಿತು. ನಂತರ, ಮಹಾಯಾನದ ಚೀನೀ ರೂಪವು ಕೊರಿಯಾ, ಜಪಾನ್ ಮತ್ತು ವಿಯೆಟ್ನಾಂಗೆ ಹರಡಿತು. 
  • ಟಿಬೆಟಿನ ಮಹಾಯಾನ ಸಂಪ್ರದಾಯವು 7 ನೇ ಶತಮಾನ CE ಯಲ್ಲಿ ಪ್ರಾರಂಭವಾಯಿತು, ಇದು ಭಾರತೀಯ ಬೌದ್ಧಧರ್ಮದ ಸಂಪೂರ್ಣ ಐತಿಹಾಸಿಕ ಬೆಳವಣಿಗೆಯನ್ನು ಆನುವಂಶಿಕವಾಗಿ ಪಡೆಯಿತು. ಟಿಬೆಟ್‌ನಿಂದ, ಇದು ಹಿಮಾಲಯದ ಪ್ರದೇಶಗಳಾದ್ಯಂತ ಮತ್ತು ಮಂಗೋಲಿಯಾ, ಮಧ್ಯ ಏಷ್ಯಾ ಮತ್ತು ರಷ್ಯಾದ ಹಲವಾರು ಪ್ರದೇಶಗಳಿಗೆ (ಬುರಿಯಾಟಿಯಾ, ಕಲ್ಮಿಕಿಯಾ ಮತ್ತು ತುವಾ) ಹರಡಿತು. 

ಇದರ ಜೊತೆಗೆ, 2 ನೇ ಶತಮಾನದ CE ಯಿಂದ, ಮಹಾಯಾನ ಬೌದ್ಧಧರ್ಮದ ಭಾರತೀಯ ರೂಪಗಳು ವಿಯೆಟ್ನಾಂ, ಕಾಂಬೋಡಿಯಾ, ಮಲೇಷಿಯಾ, ಸುಮಾತ್ರಾ ಮತ್ತು ಜಾವಾಕ್ಕೆ, ಭಾರತದಿಂದ ದಕ್ಷಿಣ ಚೀನಾದ ಸಮುದ್ರದ ವ್ಯಾಪಾರ ಮಾರ್ಗದ ಮೂಲಕ ಹರಡಿತು. ಇಂದು, ಅವುಗಳಲ್ಲಿ ಯಾವುದೂ ಅಸ್ತಿತ್ವದಲ್ಲಿಲ್ಲ. 

ಬೌದ್ಧಧರ್ಮ ಹೇಗೆ ಹರಡಿತು 

ಏಷ್ಯಾದ ಬಹುತೇಕ ಭಾಗಗಳಲ್ಲಿ ನಡೆದ ಬೌದ್ಧಧರ್ಮದ ವಿಸ್ತರಣೆಯು ಶಾಂತಿಯುತವಾಗಿತ್ತು ಮತ್ತು ಹಲವಾರು ರೀತಿಗಳಲ್ಲಿ ಸಂಭವಿಸಿತು. ಒಬ್ಬ ಸಂಚರಿಸುವ ಗುರುವಾಗಿ, ಶಾಕ್ಯಮುನಿ ಬುದ್ಧ ತಮ್ಮ ಒಳನೋಟಗಳನ್ನು, ಹತ್ತಿರದ ರಾಜ್ಯಗಳಲ್ಲಿ ಆಸಕ್ತಿ ಹೊಂದಿರುವವರೊಂದಿಗೆ ಮತ್ತು ಸ್ವೀಕರಿಸಲು ಇಚ್ಛಿಸುವವರೊಂದಿಗೆ ಹಂಚಿಕೊಳ್ಳುತ್ತಾ, ಪೂರ್ವನಿದರ್ಶನವೊಂದನ್ನು ಸ್ಥಾಪಿಸಿದರು. ತಮ್ಮ ಸನ್ಯಾಸಿಗಳಿಗೆ, ಜಗತ್ತಿನೆಲ್ಲೆಡೆ ತಮ್ಮ ಬೋಧನೆಗಳನ್ನು ಹಂಚಿಕೊಳ್ಳುವಂತೆ ಸೂಚಿಸಿದರು. ಅವರು ಇತರರನ್ನು ಖಂಡಿಸಲು ಮತ್ತು ತಮ್ಮ ಸ್ವಂತ ಧರ್ಮವನ್ನು ತ್ಯಜಿಸಿ, ಹೊಸದಕ್ಕೆ ಮತಾಂತರಗೊಳ್ಳಲು ಕೇಳಲಿಲ್ಲ, ಏಕೆಂದರೆ ಅವರು ತಮ್ಮ ಸ್ವಂತ ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರಲಿಲ್ಲ. ಬುದ್ಧನ ಗುರಿಯು, ಕೇವಲ ಜನರ ವಾಸ್ತವದ ತಿಳುವಳಿಕೆಯ ಕೊರತೆಯಿಂದಾಗಿ ಸೃಷ್ಟಿಯಾಗುವ ದುಃಖ ಮತ್ತು ಸಂಕಟಗಳನ್ನು ಜಯಿಸಲು ಅವರಿಗೆ ಸಹಾಯ ಮಾಡುವುದಾಗಿತ್ತು. ನಂತರದ ಪೀಳಿಗೆಯ ಅನುಯಾಯಿಗಳು ಅವರ ಉದಾಹರಣೆಯಿಂದ ಪ್ರೇರಿತರಾಗಿದ್ದರು ಮತ್ತು ತಮ್ಮ ಜೀವನದಲ್ಲಿ ಉಪಯುಕ್ತವೆಂದು ಕಂಡುಕೊಂಡ ವಿಧಾನಗಳನ್ನು ಅವರು ಇತರರೊಂದಿಗೆ ಹಂಚಿಕೊಂಡರು. ಇಂದು "ಬೌದ್ಧ ಧರ್ಮ" ಎಂದು ಕರೆಯಲ್ಪಡುವ ಧರ್ಮವು, ಹೀಗೆ ವ್ಯಾಪಕವಾಗಿ ಹರಡಿತು. 

ಕೆಲವೊಮ್ಮೆ, ಈ ಪ್ರಕ್ರಿಯೆಯು ಸಾವಯವವಾಗಿ ವಿಕಸನಗೊಂಡಿತು. ಉದಾಹರಣೆಗೆ, ಬೌದ್ಧ ವ್ಯಾಪಾರಿಗಳು ವಿವಿಧ ದೇಶಗಳಿಗೆ ಭೇಟಿ ನೀಡಿ ನೆಲೆಸಿದಾಗ, ಸಹಜವಾಗಿ ಸ್ಥಳೀಯರಲ್ಲಿ ಕೆಲವರು ಈ ವಿದೇಶಿಯರ ನಂಬಿಕೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು - ಇಂಡೋನೇಷ್ಯಾ ಮತ್ತು ಮಲೇಷಿಯಾಕ್ಕೆ ಇಸ್ಲಾಂ ಧರ್ಮದ ಪರಿಚಯವು ಹೀಗೆಯೇ ಸಂಭವಿಸಿತು. ಬೌದ್ಧಧರ್ಮದೊಂದಿಗೆ, ಈ ಪ್ರಕ್ರಿಯೆಯು, ಸಾಮಾನ್ಯ ಯುಗದ ಮೊದಲು ಮತ್ತು ನಂತರದ ಎರಡು ಶತಮಾನಗಳಲ್ಲಿ, ಮಧ್ಯ ಏಷ್ಯಾದ ರೇಷ್ಮೆ ಮಾರ್ಗದ ಉದ್ದಕ್ಕೂ ಇರುವ ಓಯಸಿಸ್ ರಾಜ್ಯಗಳಲ್ಲಿ ಸಂಭವಿಸಿತು. ಸ್ಥಳೀಯ ಆಡಳಿತಗಾರರು ಮತ್ತು ಅವರ ಜನರು ಈ ಭಾರತೀಯ ಧರ್ಮದ ಬಗ್ಗೆ ಹೆಚ್ಚು ಕಲಿತಂತೆ, ಅವರು ವ್ಯಾಪಾರಿಗಳ ಸ್ಥಳೀಯ ಪ್ರದೇಶಗಳಿಂದ ಸನ್ಯಾಸಿಗಳನ್ನು ಸಲಹೆಗಾರರಾಗಿ ಅಥವಾ ಶಿಕ್ಷಕರಾಗಿ ಆಹ್ವಾನಿಸಿದರು ಮತ್ತು ಅಂತಿಮವಾಗಿ, ಅನೇಕರು ಬೌದ್ಧ ನಂಬಿಕೆಯನ್ನು ಅಳವಡಿಸಿಕೊಂಡರು. ಮತ್ತೊಂದು ಸಾವಯವ ವಿಧಾನವು, ವಶಪಡಿಸಿಕೊಳ್ಳುವ ಜನರ ಸಾವಕಾಶವಾದ ಸಾಂಸ್ಕೃತಿಕ ಸಂಯೋಜನೆಯಾಗಿತ್ತು, ಉದಾಹರಣೆಗೆ, 2ನೇ ಶತಮಾನದ BCEಯ ನಂತರದ ಶತಮಾನಗಳಲ್ಲಿ, ಇಂದಿನ ಮಧ್ಯ ಪಾಕಿಸ್ತಾನದಲ್ಲಿರುವ ಗಾಂಧಾರದ ಬೌದ್ಧ ಸಮಾಜಕ್ಕೆ ಗ್ರೀಕರು ಸಂಯೋಜನಗೊಂಡರು. 

ಸಾಮಾನ್ಯವಾಗಿ, ಪ್ರಸರಣವು ಮೊದಲಾಗಿ ಬೌದ್ಧಧರ್ಮವನ್ನು ಅಳವಡಿಸಿಕೊಂಡ ಮತ್ತು ಬೆಂಬಲಿಸಿದ ಪ್ರಬಲ ರಾಜನ ಪ್ರಭಾವದಿಂದಾಗುತ್ತಿತ್ತು. ಉದಾಹರಣೆಗೆ, 3ನೇ ಶತಮಾನದ BCEಯ ಮಧ್ಯಭಾಗದಲ್ಲಿ, ರಾಜ ಅಶೋಕನ ವೈಯಕ್ತಿಕ ಅನುಮೋದನೆಯ ಪರಿಣಾಮವಾಗಿ ಬೌದ್ಧಧರ್ಮವು ಉತ್ತರ ಭಾರತದಾದ್ಯಂತ ಹರಡಿತು. ಈ ಮಹಾನ್ ಸಾಮ್ರಾಜ್ಯ ನಿರ್ಮಾಪಕನು ತನ್ನ ಪ್ರಜೆಗಳು ಬೌದ್ಧಧರ್ಮವನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಲಿಲ್ಲ, ಬದಲಿಗೆ ಅವರ ಸಾಮ್ರಾಜ್ಯದ ಉದ್ದಕ್ಕೂ, ಕಬ್ಬಿಣದ ಕಂಬಗಳ ಮೇಲೆ ಶಾಸನಗಳನ್ನು ಕೆತ್ತುವ ಮೂಲಕ, ತನ್ನ ಜನರು ನೈತಿಕ ಜೀವನವನ್ನು ನಡೆಸುವಂತೆ ಪ್ರೇರೇಪಿಸಿದರು ಮತ್ತು ತತ್ವಗಳನ್ನು ಸ್ವತಃ ಅನುಸರಿಸುವ ಮೂಲಕ, ಬುದ್ಧನ ಬೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಇತರರನ್ನು ಪ್ರೇರೇಪಿಸಿದರು. 

ಅಶೋಕ ಮಹರಾಜನು ತನ್ನ ಸಾಮ್ರಾಜ್ಯದ ಹೊರಗೆ, ದೂರದ ದೇಶಗಳಿಗೆ ಸಕ್ರಿಯವಾಗಿ ಮತಪ್ರಚಾರಕರನ್ನು ಕಳುಹಿಸುತ್ತಿದ್ದರು, ಕೆಲವೊಮ್ಮೆ ವಿದೇಶಿ ಆಡಳಿತಗಾರರ ಆಹ್ವಾನದ ಮೇರೆಗೂ ಕಾರ್ಯನಿರ್ವಹಿಸಲು ಕಳುಹಿಸುತ್ತಿದ್ದರು, ಉದಾಹರಣೆಗೆ, ಶ್ರೀಲಂಕಾದ ರಾಜ ದೇವನಾಂಪಿಯ ತಿಸ್ಸಾ. ಇತರ ಸಮಯಗಳಲ್ಲಿ, ತನ್ನ ಸ್ವಂತ ಉಪಕ್ರಮವಾಗಿ, ಸನ್ಯಾಸಿಗಳನ್ನು ದೂತರನ್ನಾಗಿ ಕಳುಹಿಸುತ್ತಿದ್ದರು. ಭೇಟಿ ನೀಡುವ ಸನ್ಯಾಸಿಗಳು ಮತಾಂತರಗೊಳ್ಳುವಂತೆ ಇತರರನ್ನು ಒತ್ತಾಯಿಸುತ್ತಿರಲಿಲ್ಲ, ಬದಲಿಗೆ ಜನರು ತಮ್ಮ ಸ್ವಂತ ಆಯ್ಕೆಯನ್ನು ಮಾಡಿಕೊಳ್ಳಲು ಅವಕಾಶ ನೀಡಲು, ಬುದ್ಧನ ಬೋಧನೆಗಳನ್ನು ಸರಳವಾಗಿ ಲಭ್ಯವಾಗುವಂತೆ ಕಾರ್ಯನಿರ್ವಹಿಸುತ್ತಿದ್ದರು. ದಕ್ಷಿಣ ಭಾರತ ಮತ್ತು ದಕ್ಷಿಣ ಬರ್ಮಾದಂತಹ ಸ್ಥಳಗಳಲ್ಲಿ ಬೌದ್ಧಧರ್ಮವು ಶೀಘ್ರದಲ್ಲೇ ಬೇರೂರಿತು, ಆದರೆ ಮಧ್ಯ ಏಷ್ಯಾದ ಗ್ರೀಕ್ ವಸಾಹತುಗಳಂತಹ ನೆಲೆಗಳಲ್ಲಿ ಯಾವುದೇ ತಕ್ಷಣದ ಪ್ರಭಾವಗಳ ದಾಖಲೆಗಳಿಲ್ಲ ಎಂಬುದು ಇದಕ್ಕೆ ಸಾಕ್ಷಿಯಾಗಿದೆ.

ಇತರ ಧಾರ್ಮಿಕ ರಾಜರು, ಉದಾಹರಣೆಗೆ 16 ನೇ ಶತಮಾನದ ಮಂಗೋಲ್ನ ಪ್ರಬಲವಾದ ದೊರೆಯಾದ ಅಲ್ತಾನ್ ಖಾನ್, ಬೌದ್ಧ ಗುರುಗಳನ್ನು ತಮ್ಮ ಕ್ಷೇತ್ರಕ್ಕೆ ಆಹ್ವಾನಿಸಿದರು ಮತ್ತು ಅವರ ಜನರನ್ನು ಒಗ್ಗೂಡಿಸಲು ಮತ್ತು ಅವರ ಆಳ್ವಿಕೆಯನ್ನು ಬಲಪಡಿಸಲು ಸಹಾಯ ಮಾಡಲು, ಬೌದ್ಧಧರ್ಮವನ್ನು ಅಲ್ಲಿನ ಅಧಿಕೃತ ಧರ್ಮವೆಂದು ಘೋಷಿಸಿದರು. ಈ ಪ್ರಕ್ರಿಯೆಯಲ್ಲಿ, ಅವರು ಬೌದ್ಧರಲ್ಲದ, ಸ್ಥಳೀಯ ಧರ್ಮಗಳ ಕೆಲವು ಆಚರಣೆಗಳನ್ನು ನಿಷೇಧಿಸಿರಬಹುದು ಮತ್ತು ಅವುಗಳನ್ನು ಅನುಸರಿಸುವವರಿಗೆ ಕಿರುಕುಳ ನೀಡಿರಬಹುದು, ಆದರೆ ಈ ಅಪರೂಪದ ಭೀಕರ ಹೆಜ್ಜೆಗಳು ಹೆಚ್ಚಾಗಿ ರಾಜಕೀಯವಾಗಿ ಪ್ರೇರಿತವಾಗಿದ್ದವು. ಇಂತಹ ಮಹತ್ವಾಕಾಂಕ್ಷೆಯ ಆಡಳಿತಗಾರರೂ ಸಹ ಬೌದ್ಧಧರ್ಮ ಅಥವಾ ಆರಾಧನೆಯ ಪ್ರಕಾರಗಳನ್ನು ಅಳವಡಿಸಿಕೊಳ್ಳುವಂತೆ ಪ್ರಜೆಗಳನ್ನು ಒತ್ತಾಯಿಸಿರಲಿಲ್ಲ. ಇದು ಖಂಡಿತವಾಗಿಯೂ ಧಾರ್ಮಿಕ ನಂಬಿಕೆಯ ಭಾಗವಾಗಿರಲಿಲ್ಲ. 

ಸಾರಾಂಶ 

ಶಾಕ್ಯಮುನಿ ಬುದ್ಧ, ತಮ್ಮ ಬೋಧನೆಗಳನ್ನು ಕುರುಡು ನಂಬಿಕೆಯಿಂದ ಅನುಸರಿಸಬೇಡಿ ಎಂದು ಜನರಿಗೆ ಹೇಳಿದರು, ಬದಲಿಗೆ ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ಹಾಗೆ ಮಾಡಬೇಕೆಂದು ಹೇಳಿದರು. ಉತ್ಸಾಹಭರಿತ ಮತಪ್ರಚಾರಕರಿಂದ ಅಥವಾ ರಾಜಾಜ್ಞೆಯಿಂದ, ಬಲಾತ್ಕಾರದಿಂದ ಬುದ್ಧನ ಬೋಧನೆಗಳನ್ನು ಜನರು ಸ್ವೀಕರಿಸಬಾರದು ಎಂಬುದು ನಮಗೆ ಗೊತ್ತೇ ಇದೆ. 17 ನೇ ಶತಮಾನದ ಆರಂಭದಲ್ಲಿ, ನೇಜಿ ಟೊಯಿನ್, ಮಂಗೋಲ್ ಅಲೆಮಾರಿಗಳಿಗೆ ರುಷುವತ್ತು ನೀಡಲು ಪ್ರಯತ್ನಸಿ, ಪದ್ಯದ ಪ್ರತಿಯೊಂದು ಸಾಲನ್ನು ಕಂಠಪಾಠ ಮಾಡಿದ್ದಲ್ಲಿ ಜಾನುವಾರುಗಳನ್ನು ನೀಡುವ ಮೂಲಕ ಬೌದ್ಧಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸಿದ್ದನು. ಅಲೆಮಾರಿಗಳು ಅಧಿಕಾರಿಗಳಿಗೆ ದೂರು ನೀಡಿದರು, ಮತ್ತು ಮಿತಿಮೀರಿದ ಗುರುವನ್ನು ಶಿಕ್ಷಿಸಿ ಗಡಿಪಾರು ಮಾಡಲಾಯಿತು. 

ವಿವಿಧ ರೀತಿಗಳಲ್ಲಿ, ಬೌದ್ಧಧರ್ಮವು ಏಷ್ಯಾದಾದ್ಯಂತ ಶಾಂತಿಯುತವಾಗಿ ಹರಡಿತು, ಪ್ರೀತಿ, ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಸಂದೇಶವನ್ನು ಹೊತ್ತುಕೊಂಡು, ವಿಭಿನ್ನ ಜನರ ಅಗತ್ಯತೆಗಳು ಮತ್ತು ಸ್ವಭಾವಗಳಿಗೆ ಹೊಂದಿಕೊಂಡಿತು.  

Top