Arrow left ಹಿಂದೆ
ಏನಿದು…
ಲೇಖನ 20 ರಲ್ಲಿ 20
Study buddhism dino 1 1

ಡಾರ್ವಿನ್‌ನ ವಿಕಾಸತ್ವದ ಸಿದ್ಧಾಂತವು ನೈಸರ್ಗಿಕ ಆಯ್ಕೆಯ ಪ್ರಕ್ರಿಯೆಯನ್ನು ಮತ್ತು ಕಾಲಾನಂತರದಲ್ಲಿ ಜೈವಿಕ ಗುಂಪುಗಳ ದೇಹಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡುತ್ತದೆ. ಅವರ ಕೃತಿ, ‘ದಿ ಆರಿಜಿನ್ ಆಫ್ ದಿ ಸ್ಪೀಸೀಸ್’ ನಲ್ಲಿ ಇದನ್ನು ವಿವರಿಸಲಾಗಿದ್ದು, ಈ ವಿಷಯವನ್ನು ಅಂದಿನ ಕಾಲದಲ್ಲಿ ಧರ್ಮದ್ರೋಹಿ ಎಂದು ಪರಿಗಣಿಸಲಾಗಿತ್ತು, ಏಕೆಂದರೆ ಈ ಸಿದ್ಧಾಂತವು, ಸರ್ವಶಕ್ತನಾದ ದೇವರು ಈ ಸ್ಥಿರವಾದ ಜಗತ್ತನ್ನು ಮತ್ತು ಅದರಲ್ಲಿರುವ ಎಲ್ಲಾ ಬದಲಾಗದ ಜೀವಿಗಳನ್ನು ಸೃಷ್ಟಿಸಿದ ಕಲ್ಪನೆಗೆ ವಿರುದ್ಧವಾಗಿತ್ತು. ಇಂದಿಗೂ ಕೆಲವು ಧರ್ಮಗಳಿಗೆ ವಿಕಾಸತ್ವದ ಸಿದ್ಧಾಂತವು ಅಹಿತಕರವೆನಿಸಿದರೂ, ಅದರ ಸಾಮಾನ್ಯ ಕಲ್ಪನೆಗೆ ವಿರುದ್ಧವಾಗಿ ಬೌದ್ಧ ಬೋಧನೆಗಳಲ್ಲಿ ಏನೂ ಇಲ್ಲ. ವಾಸ್ತವದಲ್ಲಿ ಬೌದ್ಧರಿಗೆ, ಈ ಸಿದ್ಧಾಂತವು ಬುದ್ಧನ ಬೋಧನೆಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದು, ಅವಲಂಬಿಕೆಯ ಉದ್ಭವ – ಸೃಷ್ಟಿವಾದವಲ್ಲ - ಧರ್ಮದ ನಾಲ್ಕು ವಿಶಿಷ್ಟ ಲಕ್ಷಣಗಳಲ್ಲಿ ಮೊದಲನೆಯದಾಗಿದೆ: ಅಶಾಶ್ವತತೆ. ಅನೇಕ ಕಾರಣಗಳು ಮತ್ತು ಪರಿಸ್ಥಿತಿಗಳ ಆಧಾರದ ಮೇಲೆ ವಿದ್ಯಮಾನಗಳು ನಿರಂತರವಾಗಿ ಉದ್ಭವಿಸುತ್ತವೆ ಮತ್ತು ವಿಕಸನಗೊಳ್ಳುತ್ತವೆ ಮತ್ತು ಮಾನವರ ಜೊತೆಗೆ ಪ್ರಾಣಿಗಳೂ ಸಹ, ಸ್ಥಿರತೆಯಿಲ್ಲದ ಈ ದೊಡ್ಡ ಹರಿವಿನ ಭಾಗವಾಗಿರುವರು. 

ಆದರೆ ಸಮಯ ಮತ್ತು ವಿಕಾಸದ ಬೌದ್ಧ ಕಲ್ಪನೆಯು, ಡಾರ್ವಿನ್‌ನ ಕಲ್ಪನೆಗೆ ನಿಖರವಾಗಿ ಅನುರೂಪವಾಗಿದೆ ಎಂದು ಹೇಳಲಾಗುವುದಿಲ್ಲ. ಡಾರ್ವಿನ್‌ನ ಸಿದ್ಧಾಂತವು ಸಂವೇದನೆಯ ಉದ್ಭವಕ್ಕೆ ಆಧಾರವಾಗುವ ಜೈವಿಕ ಮತ್ತು ಭೌತಿಕ ನೆಲೆಗಳ ಮೇಲೆ ಕೇಂದ್ರೀಕರಿಸಿದೆ; ಜೊತೆಗೆ ಜೀವ ರೂಪಗಳು ಹೆಚ್ಚು ಸಂಕೀರ್ಣವಾದಂತೆ, ಅರಿವು ಹೆಚ್ಚುತ್ತದೆ ಎಂಬ ಕಲ್ಪನೆಯಿದ್ದರೂ, ಸೂಕ್ಷ್ಮಜೀವಿಗಳಿಂದ ಹಿಡಿದು ಬುದ್ಧನ ಪೂರ್ಣ ಜ್ಞಾನೋದಯದವರೆಗಿರುವ ಅರಿವಿನ ವಿಕಾಸದ ವಿವರಣೆಯ ಬಗ್ಗೆ ಬುದ್ಧನಷ್ಟು ಆಳವಾಗಿ ವಿಶ್ಲೇಷಿಸುವುದಿಲ್ಲ. ಅಲ್ಲದೆ, ಡಾರ್ವಿನ್ ಗುಂಪುಗಳ ಅರಿವಿನ ವಿಕಾಸದ ಬಗ್ಗೆ ಸಮಸ್ತವಾಗಿ ಮಾತನಾಡುತ್ತಾರೆ, ಆದರೆ ಬೌದ್ಧಧರ್ಮವು ಇದರೊಂದಿಗೆ ವೈಯಕ್ತಿಕ ಜೀವಿಗಳಲ್ಲಿ ಅರಿವು ವಿಕಾಸಗೊಂಡ ಬಗ್ಗೆಯೂ ಮಾತನಾಡುತ್ತದೆ. 

ಇದಲ್ಲದೆ, ಡಾರ್ವಿನಿಯನ್ ವಿಕಾಸತ್ವವು ಕ್ರಮೇಣವಾದ ಮತ್ತು ಸ್ಥಿರವಾದ "ಸುಧಾರಣೆ" ಯನ್ನು ಹೊಂದಿದೆ - ಅಂದರೆ, ಜೀವಿಗಳು ತಮ್ಮ ಉಳಿವಿಗಾಗಿ ಮತ್ತು ಸಂತತಿಯನ್ನು ಉತ್ಪಾದಿಸುವ ಸಾಮರ್ಥ್ಯಕ್ಕಾಗಿ, ಪ್ರಗತಿಪರವಾಗಿ ಮತ್ತು ಸಕಾರಾತ್ಮಕವಾಗಿ, ಉನ್ನತ ರೂಪಗಳಿಗೆ ಅಭಿವೃದ್ಧಿ ಹೊಂದುತ್ತವೆ. ಬೌದ್ಧಧರ್ಮವು, ಯಾವುದೇ ಪ್ರಜ್ಞಾಪರ ಜೀವಿಯು ವಿವಿಧ ರೂಪವಾಗಿ ಮರುಜನ್ಮ ಪಡೆಯಬಹುದು ಎಂದು ಕಲಿಸುತ್ತದೆ ಮತ್ತು ಈ ಪ್ರಕ್ರಿಯೆಯು ರೇಖಾತ್ಮಕ ಸುಧಾರಣೆಯಾಗಿರುವುದಿಲ್ಲ. ಕರ್ಮ, ಕಾರಣಗಳು ಮತ್ತು ಕಟ್ಟುಪಾಡುಗಳ ಆಧಾರದ ಮೇಲೆ ಪ್ರತ್ಯೇಕ ಜೀವಿಗಳು ಮತ್ತು ಇಡೀ ಜೀವಜಾತಿಗಳೇ ಹಿಮ್ಮೆಟ್ಟಬಹುದು. ಹೀಗಾಗಿ, ವಿವರಗಳು ಭಿನ್ನವಾಗಿದ್ದರೂ, ವಿಕಾಸದ ತತ್ವವನ್ನು ಎರಡೂ ವ್ಯವಸ್ಥೆಗಳಲ್ಲಿ ಕಾಣಬಹುದು. 

ಬ್ರಹ್ಮಾಂಡದ ವಿಕಸನ ಮತ್ತು ವಿಘಟನೆ 

ವಿಜ್ಞಾನಿಗಳ ಪ್ರಕಾರ, 14 ಶತಕೋಟಿ ವರ್ಷಗಳ ಹಿಂದೆ ಸಂಭವಿಸಿದ ಬ್ರಹ್ಮಾಂಡದ ಬೃಹತ್, ಕ್ಷಿಪ್ರ ವಿಸ್ತರಣೆಯಾದ ಬಿಗ್ ಬ್ಯಾಂಗ್ ಆದಿಕಾಲದ ಆರಂಭವಾಗಿದ್ದು, 4 ಶತಕೋಟಿ ವರ್ಷಗಳ ಹಿಂದೆ, ನಮ್ಮ ಗ್ರಹದ ರಚನೆಗೆ ಆಧಾರವಾಗಿತ್ತು. ಕಾಲಾನಂತರದಲ್ಲಿ, ಹೈಡ್ರೋಜನ್ ಅನಿಲವು ವಿವಿಧ ನಕ್ಷತ್ರಗಳು ಮತ್ತು ಗ್ರಹಗಳಾಗಿ ಅಭಿವೃದ್ಧಿಗೊಂಡಿತು ಮತ್ತು ಇಂದು ನಾವು ಭೂಮಿ ಎಂದು ಕರೆಯುವ ಗ್ರಹದಲ್ಲಿ, ಏಕಕೋಶೀಯ ಜೀವಿಗಳು ಹುಟ್ಟಿಕೊಂಡವು. ಇವು ತಮ್ಮ ಸಂಕೀರ್ಣತೆಯಲ್ಲಿ ಬೆಳೆದು, ಇಂದು ನಮ್ಮ ಸುತ್ತಲೂ ಕಾಣುವ ವಿವಿಧ ಸುಧಾರಿತ ಜೀವ ರೂಪಗಳಾದವು. ಬ್ರಹ್ಮಾಂಡವು ಶತಕೋಟಿ ವರ್ಷಗಳಿಂದ ವಿಸ್ತರಿಸಿ ಮತ್ತು ವಿಕಸನಗೊಂಡ ನಂತರ, ಬ್ರಹ್ಮಾಂಡವು ಅಂತ್ಯಗೊಳ್ಳುತ್ತದೆ ಎಂದು ಸಹ ವಿಜ್ಞಾನಿಗಳು ಹೇಳಿದ್ದು, ಅದು ಹೇಗೆ ಸಂಭವಿಸುತ್ತದೆ ಎಂಬುದರ ಕುರಿತು ಅವರು ಹಲವಾರು ವಿಭಿನ್ನ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. 

ಬುದ್ಧನು, ನಾಲೆಡ್ಜ್ ಆಫ್ ಬಿಗಿನಿಂಗ್ಸ್ ಸೂತ್ರದಲ್ಲಿ(ಪಾಲಿ: ಅಗ್ಗನ್ನ ಸುತ್ತ) ಬ್ರಹ್ಮಾಂಡದ ವಿಕಾಸ ಮತ್ತು ಅಂತಿಮವಾಗಿ ಉಂಟಾಗುವ ವಿಘಟನೆಯನ್ನು ಚರ್ಚಿಸಿದರು. ಅದರಲ್ಲಿ ಅವರು ನಮ್ಮ ಗ್ರಹದಲ್ಲಿನ ಪರಿಸರದ ನಿರ್ಮಾಣ ಮತ್ತು ಕೊನೆಗಾಗುವ ಅವನತಿ, ಹಾಗೆಯೇ ವಿವಿಧ ಜೀವ ರೂಪಗಳ ಹುಟ್ಟು ಮತ್ತು ಅವುಗಳ ಅಳಿವು ಮತ್ತು ವಿವಿಧ ಸಮಾಜಗಳ ಅಭಿವೃದ್ಧಿ ಮತ್ತು ಅವುಗಳ ಅಂತಿಮ ಅವಸಾನವನ್ನು ಸಹ ವಿಮರ್ಶಿಸುತ್ತಾರೆ. ಆಧುನಿಕ ವಿಜ್ಞಾನ ಮತ್ತು ಬೌದ್ಧಧರ್ಮದ ನಡುವಿನ ಒಂದು ವ್ಯತ್ಯಾಸವೆಂದರೆ, ಬುದ್ಧನು ಬ್ರಹ್ಮಾಂಡದ ಹುಟ್ಟು, ಬದುಕು ಮತ್ತು ನಾಶ ಅನೇಕ ಚಕ್ರಗಳ ಒಂದು ಭಾಗವಾಗಿದೆ ಮತ್ತು ಸಮಯಕ್ಕೆ ಪ್ರಾರಂಭ ಅಥವಾ ಅಂತ್ಯವಿಲ್ಲ ಎಂದು ಹೇಳಿರುವರು. ಸೂತ್ರವು ಹೀಗೆ ಹೇಳುತ್ತದೆ: 

ವಾಸೆಟ್ಠಾ, ಒಂದಲ್ಲ ಒಂದು ದಿನ, ಅನಂತ ಕಾಲ ಕಳೆದ ನಂತರ, ಈ ಪ್ರಪಂಚವು ಕ್ಷೀಣಿಸುತ್ತದೆ ... ಆದರೆ ಒಂದಲ್ಲ ಒಂದು ದಿನ, ಅನಂತ ಕಾಲ ಕಳೆದ ನಂತರ, ಈ ಪ್ರಪಂಚವು ವಿಕಸನಗೊಳ್ಳುತ್ತದೆ ... ಆ ಕಾಲದಲ್ಲಿ, ವಾಸೆಟ್ಠಾ, ಕೇವಲ ನೀರಿನ ಒಂದು ಸಮೂಹವಿರುತ್ತದೆ, ನೀರು, ಮತ್ತು ಎಲ್ಲೆಡೆ ಕತ್ತಲೆ, ಕುರುಡು ಕತ್ತಲೆ. ಚಂದ್ರ ಮತ್ತು ಸೂರ್ಯ ಸ್ಪಷ್ಟವಾಗಿಲ್ಲ, ನಕ್ಷತ್ರಪುಂಜಗಳು ಮತ್ತು ನಕ್ಷತ್ರಗಳು ಸ್ಪಷ್ಟವಾಗಿಲ್ಲ, ರಾತ್ರಿ ಮತ್ತು ಹಗಲು ಸ್ಪಷ್ಟವಾಗಿಲ್ಲ, ತಿಂಗಳು ಮತ್ತು ಪಾಕ್ಷಿಕವು ಸ್ಪಷ್ಟವಾಗಿಲ್ಲ, ಋತುಗಳು ಮತ್ತು ವರ್ಷಗಳು ಸ್ಪಷ್ಟವಾಗಿಲ್ಲ, ಗಂಡು ಮತ್ತು ಹೆಣ್ಣು ಸ್ಪಷ್ಟವಾಗಿಲ್ಲ. ಜೀವಿಗಳನ್ನು (ಕೇವಲ) ಜೀವಿಗಳಾಗಿ ವರ್ಗೀಕರಿಸಲಾಗಿದೆ…

ಇಲ್ಲಿ ಬುದ್ಧನು, ಜೀವಿಗಳ ಉಲ್ಲೇಖದೊಂದಿಗೆ, ವಿಶ್ವ ವ್ಯವಸ್ಥೆಗಳ ಚಕ್ರಗಳ ಬಗ್ಗೆ ಸಾಕಷ್ಟು ಸ್ಪಷ್ಟವಾಗಿ ಮಾತನಾಡುತ್ತಾರೆ ಎಂದು ನಾವು ನೋಡಬಹುದು. ಲಿಂಗಗಳು ಹೇಗೆ ಪ್ರಕಟವಾಗುತ್ತವೆ ಮತ್ತು ವಿವಿಧ ವರ್ಗದ ಜನರೊಂದಿಗೆ ಸಮಾಜಗಳು ಹೇಗೆ ಅಭಿವೃದ್ಧಿಗೊಳ್ಳುತ್ತವೆ ಎಂಬುದರ ಕುರಿತು ಸೂತ್ರ ಮುಂದುವರಿಯುತ್ತದೆ. ನಂತರ ಅದರಲ್ಲಿರುವ ಪರಿಸರ ಮತ್ತು ಜೀವಿಗಳು ಹೇಗೆ ಅವನತಿಯಾಗುತ್ತವೆ ಮತ್ತು ಕಣ್ಮರೆಯಾಗುತ್ತವೆ ಎಂಬುದನ್ನು ವಿವರಿಸುತ್ತದೆ. 

ಈ ಸೂತ್ರದಿಂದ ಮತ್ತು ಮೂಲ ಮತ್ತು ಅಶಾಶ್ವತತೆಯ ಮೇಲೆ ಅವಲಂಬಿತವಾದ ಬೌದ್ಧ ಬೋಧನೆಗಳಿಂದ, ಬಿಗ್ ಬ್ಯಾಂಗ್‌ನ ವೈಜ್ಞಾನಿಕ ಸಿದ್ಧಾಂತಗಳನ್ನು ಅಥವಾ ಈ ಬ್ರಹ್ಮಾಂಡದ ಅಂತ್ಯದ ಯಾವುದೇ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವಲ್ಲಿ ಯಾವುದೇ ವಿರೋಧಾಭಾಸವಿಲ್ಲ ಎಂದು ನಾವು ನೋಡಬಹುದು.

ದೇಹಗಳ ವಿಕಾಸ 

ಈಗ, ಜೈವಿಕ ದೇಹಗಳ ವಿಕಾಸದ ಬಗ್ಗೆ ಆಳವಾಗಿ ನೋಡೋಣ. ನಾವೆಲ್ಲರೂ ಏಕ-ಕೋಶ ಜೀವಿಗಳಿಂದ ವಿಕಸನಗೊಂಡಿದ್ದೇವೆ – ಈ ಮಾತಿನ ಬಗ್ಗೆ ವಿಕಾಸದ ಸಿದ್ಧಾಂತವು ಸ್ಪಷ್ಟವಾಗಿದೆ. ಡಾರ್ವಿನ್ನ ಸಿದ್ಧಾಂತವು ಪ್ರಗತಿಶೀಲ ವಿಕಸನವನ್ನು ಪ್ರಸ್ತಾಪಿಸುತ್ತದೆ, ಇದರಲ್ಲಿ ಜೀವಿಗಳು ಮೇಲ್ಮುಖವಾಗಿ ವಿಕಸನಗೊಳ್ಳುತ್ತವೆ - ಬೇರೆ ರೀತಿಯಲ್ಲಿ ಹೇಳುವುದಾದರೆ, ಸುಧಾರಿತ ರೀತಿಯಲ್ಲಿ ಮಾತ್ರ ವಿಕಸನಗೊಳ್ಳುವುದು ಸಹಜ ಪ್ರವೃತ್ತಿಯಾಗಿರುವುದು. ಇಲ್ಲಿ, ನಾವು ಕೇವಲ ಭೌತಿಕ ಆಧಾರದ ಬಗ್ಗೆ ಮಾತನಾಡುತ್ತಿದ್ದೇವೆ, ಏಕೆಂದರೆ ಬೌದ್ಧಧರ್ಮದ ಪ್ರಕಾರ, ಗ್ರಹದಲ್ಲಿನ ಭೌತಿಕ ಜೀವ ರೂಪಗಳು ಮತ್ತು ಅವುಗಳಿಂದ ಮರುಹುಟ್ಟು ಪಡೆದ ಜೀವಿಗಳ ಮಾನಸಿಕ ನಿರಂತರತೆಯ ಅನಂತತೆಯ ನಡುವೆ ಬಹಳ ವ್ಯತ್ಯಾಸವಿದೆ. 

ನಮ್ಮ ಗ್ರಹದ ಮೇಲೆ ಡೈನೋಸಾರ್‌ಗಳು ಓಡಾಡುತ್ತಿದ್ದವು, ಆದರೆ ಈಗ ಅವು ನಾಶವಾಗಿವೆ. ಇಂದು ನಾವು ಡೈನೋಸಾರ್ ಆಗಿ ಏಕೆ ಮರುಜನ್ಮ ಪಡೆಯಲಾಗುವುದಿಲ್ಲ? ವೈಜ್ಞಾನಿಕ ಸಿದ್ಧಾಂತಗಳ ಪ್ರಕಾರ, ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ, ಒಂದು ದುರಂತದ ಘಟನೆಯು ಡೈನೋಸಾರ್‌ಗಳ ಅಳಿವಿಗೆ ಕಾರಣವಾಯಿತು, ಆದರೆ ಎಲ್ಲಾ (ಮಾನವರಂತೆ) ಸಸ್ತನಿಗಳು ಅವನತಿಯಾಗಲಿಲ್ಲ, ಮತ್ತು ಅವು ನಂತರ ಪ್ರವರ್ಧಮಾನಕ್ಕೆ ಬಂದವು. ಡಾರ್ವಿನ್‌ನ ಸಿದ್ಧಾಂತವು, ಡೈನೋಸಾರ್‌ಗಳು "ಸರ್ವೈವಲ್ ಆಫ್ ದಿ ಫಿಟೆಸ್ಟ್" ಓಟದಲ್ಲಿ ಗೆಲ್ಲಲಾಗಲಿಲ್ಲ, ಆದ್ದರಿಂದ ಅವುಗಳ ಅವನತಿಯಾಯಿತು ಎಂದು ಹೇಳುವುದು. 

ಬೌದ್ಧ ದೃಷ್ಟಿಕೋನದಿಂದ, ಕರ್ಮ ಶಕ್ತಿಗಳು ಮತ್ತು ಸಾಮರ್ಥ್ಯಗಳು ಫಲವತ್ತಾಗಲು ಸೂಕ್ತ ಸಂದರ್ಭಗಳು ಲಭ್ಯವಿರಬೇಕು. ಡೈನೋಸಾರ್ ಆಗಿ ಮರುಜನ್ಮ ಪಡೆಯುವ ಪರಿಸ್ಥಿತಿಯು ಈ ಕ್ಷಣದಲ್ಲಿ, ಈ ಗ್ರಹದ ಮೇಲೆ ಸಾಧ್ಯವಾಗುವುದಿಲ್ಲ. ಬದಲಿಗೆ, ಪುನರ್ಜನ್ಮಕ್ಕಾಗಿ ಲಭ್ಯವಿರುವ ಬಹಳಷ್ಟು ವಿವಿಧ ಭೌತಿಕ ಆಧಾರಗಳಿವೆ. ಇವು ಕೂಡ, ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಗಾಗುತ್ತವೆ. ಆದರೆ, ನಮ್ಮ ಬ್ರಹ್ಮಾಂಡದ ಇನ್ನೊಂದು ಭಾಗದಲ್ಲಿ, ಯಾವುದಾದರೂ ಗ್ರಹದಲ್ಲಿ, ಪ್ರಸ್ತುತವಾಗಿ ಡೈನೋಸಾರ್‌ಗಳಿದ್ದರೆ, ನಾವು ಅಲ್ಲಿ ಡೈನೋಸಾರ್ ಆಗಿ ಮರುಜನ್ಮ ಪಡೆಯಬಹುದು ಎಂದು ಬೌದ್ಧಧರ್ಮವು ಒಪ್ಪಿಕೊಳ್ಳುತ್ತದೆ! 

ಪರಮಪೂಜ್ಯರಾದ ದಲೈ ಲಾಮಾ ಅವರು ವಿಜ್ಞಾನಿಗಳೊಂದಿಗೆ ನಡೆಸಿದ ಚರ್ಚೆಯೊಂದರಲ್ಲಿ, ಕಂಪ್ಯೂಟರ್‌ಗಳು ಪ್ರಜ್ಞಾಪರ ಜೀವಿಗಳಾಗಬಹುದೇ ಎಂದು ಅವರನ್ನು ಕೇಳಲಾಯಿತು: ಕಂಪ್ಯೂಟರ್‌ಗಳು ಒಂದು ದಿನ ಮನಸ್ಸನ್ನು ಹೊಂದಬಹುದೇ? ಇದರ ಬಗ್ಗೆ ಅವರು ಬಹಳ ಆಸಕ್ತಿದಾಯಕ ರೀತಿಯಲ್ಲಿ ಉತ್ತರವನ್ನು ನೀಡಿದರು - ಕಂಪ್ಯೂಟರ್ ಅಥವಾ ರೋಬೋಟ್, ಮಾನಸಿಕ ನಿರಂತರೆತೆಯ ಆಧಾರವಾಗಿ ಕಾರ್ಯನಿರ್ವಹಿಸುವಷ್ಟು ಅತ್ಯಾಧುನಿಕವಾಗಿರುವ ಹಂತವನ್ನು ತಲುಪಿದರೆ, ಮಾನಸಿಕ ನಿರಂತರತೆಯು, ತನ್ನ ಜೀವನದ ಭೌತಿಕ ಆಧಾರಕ್ಕಾಗಿ, ಒಂದು ಸಂಪೂರ್ಣವಾಗಿ ಅಜೈವಿಕವಾಗಿರುವ ಯಂತ್ರದೊಂದಿಗೆ ಸಂಪರ್ಕಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇದರರ್ಥ ಕಂಪ್ಯೂಟರ್ನ ಬಳಿ ಮನಸ್ಸಿದೆ ಎಂದಲ್ಲ. ನಾವು ಕಂಪ್ಯೂಟರ್ನಲ್ಲಿ ಕೃತಕವಾಗಿ ಮನಸ್ಸನ್ನು ರಚಿಸಬಹುದು ಎಂದೂ ಅಲ್ಲ. ಆದರೆ, ಕಂಪ್ಯೂಟರ್ ಸಾಕಷ್ಟು ಅತ್ಯಾಧುನಿಕವಾಗಿದ್ದಲ್ಲಿ, ಮಾನಸಿಕ ನಿರಂತರತೆಯು ಅದರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಅದನ್ನು ತನ್ನ ಭೌತಿಕ ಆಧಾರವಾಗಿ ತೆಗೆದುಕೊಳ್ಳಬಹುದು. ಇದು ಡಾರ್ವಿನ್‌ಗಿಂತಲೂ ಹೆಚ್ಚು ಮಹತ್ತರವಾಗಿದೆ!

ಏಕೆ ಬುದ್ಧನು ವಿಕಾಸದ ಬಗ್ಗೆ ಹೆಚ್ಚು ವಿವರಿಸಲಿಲ್ಲ

ಬೌದ್ಧರು ಬುದ್ಧನನ್ನು ಸರ್ವಜ್ಞ ಎಂದು ಪರಿಗಣಿಸುವಾಗ – ಅಂದರೆ ಪೂರ್ಣ ಜ್ಞಾನೋದಯವನ್ನು ಪಡೆದ ನಂತರ, ಅವರಿಗೆ ಎಲ್ಲವೂ ತಿಳಿದಿರುವುದು - ಅವರು ಬ್ರಹ್ಮಾಂಡದ ಕಾರ್ಯವೈಖರಿ ಮತ್ತು ಜೀವಿಗಳ ವಿಕಾಸದ ಬಗ್ಗೆ ಏಕೆ ಇನ್ನಷ್ಟು ವಿವರವಾಗಿ ಚರ್ಚಿಸಲಿಲ್ಲ ಅಥವಾ ಬಹಿರಂಗಪಡಿಸಲಿಲ್ಲ? ಎಂದು ನಮಗೆ ಆಶ್ಚರ್ಯವಾಗಬಹುದು.  

ಸಾಮಾನ್ಯವಾಗಿ, ಬುದ್ಧನು ಕಲಿಸಿದ ಪ್ರತಿಯೊಂದು ಪಾಠವು, ವಿಮೋಚನೆ ಮತ್ತು ಜ್ಞಾನೋದಯದ ಹಾದಿಯಲ್ಲಿ ನಮ್ಮನ್ನು ಮುಂದೆ ಸಾಗಿಸುವ ಗುರಿಯನ್ನು ಹೊಂದಿದೆ. ಹೀಗಾಗಿ, ಬ್ರಹ್ಮಾಂಡಗಳು ಮತ್ತು ಅದರಲ್ಲಿರುವ ಜೀವಿಗಳು ಹಾದುಹೋಗುವ ವಿಶಾಲ ಚಕ್ರಗಳನ್ನು ವಿವರಿಸುವ ಅವರ ಉದ್ದೇಶವು, ಜನರಿಗೆ ಅವರ ಪ್ರಸ್ತುದಲ್ಲಿರುವ ಅಮೂಲ್ಯವಾದ ಮಾನವ ಪುನರ್ಜನ್ಮದ ಅಪರೂಪವನ್ನು ಅರಿತುಕೊಳ್ಳಲು ಸಹಾಯ ಮಾಡುವುದಾಗಿತ್ತು. ಅದರ ವಿರಳತೆ ಮತ್ತು ಮತ್ತೊಮ್ಮೆ ಸಿಗುವ ಅಸಾಮಾನ್ಯತೆಯನ್ನು ಶ್ಲಾಘಿಸುವ ಮೂಲಕ, ಈ ಆಧ್ಯಾತ್ಮಿಕ ಗುರಿಗಳತ್ತ ಶ್ರಮಪಡಲು ಜನರು ತಮ್ಮ ಪ್ರಸ್ತುತ ಪರಿಸ್ಥಿತಿಯನ್ನು ಉನ್ನತವಾಗಿ ಉಪಯೋಗಿಸುವಂತೆ ಪ್ರೇರೇಪಿಸಲ್ಪಡುತ್ತಾರೆ. ನಮಗೆ ವಿಶ್ವವಿಜ್ಞಾನ ಅಥವಾ ಖಗೋಳ ಭೌತಶಾಸ್ತ್ರವನ್ನು ಕಲಿಸಲು ಬುದ್ಧ ಈ ಜಗತ್ತಿಗೆ ಬರಲಿಲ್ಲ. 

ಆ ಗುರಿಗೆ ಅಪ್ರಸ್ತುತವಾಗಿರುವ ಸಮಸ್ಯೆಗಳನ್ನು ಆಲೋಚಿಸುವುದು ಸಮಯ ಮತ್ತು ಶಕ್ತಿಯ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ. ನಮ್ಮ ಮನಸ್ಸು ಮೊದಲೇ ಗೊಂದಲಮಯವಾಗಿರುವಾಗ ಮತ್ತು ಗೊಂದಲದ ಭಾವನೆಗಳಿಂದ ಪ್ರೇರೇಪಿಸಲ್ಪಟ್ಟಾಗ, ಬ್ರಹ್ಮಾಂಡದ ಬಗ್ಗೆ ಮತ್ತು ಅದರಲ್ಲಿರುವ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ಆಲೋಚಿಸುವುದು - ವಿಶೇಷವಾಗಿ ಅವುಗಳ ಬಗ್ಗೆಯ ತಪ್ಪು ಮಾಹಿತಿಯಲ್ಲಿನ ನಮ್ಮ ನಂಬಿಕೆಯ ಆಧಾರದ ಮೇಲೆ - ನಮ್ಮ ಗುರಿಯಾದ ವಿಮೋಚನೆಯಿಂದ ಮತ್ತು ಇತರರಿಗೆ ಸಹಾಯ ಮಾಡುವ ಸಾಮರ್ಥ್ಯದಿಂದ ನಮ್ಮನ್ನು ದೂರವಿಡುತ್ತದೆ. ನಾವು ಇನ್ನೂ ಹೆಚ್ಚಿನ ಗೊಂದಲದೊಳಗೆ ಸಿಲುಕಬಹುದು. 

ಬುದ್ಧನ ಜೀವನದಲ್ಲಿ ಈ ಅಂಶವನ್ನು ವಿವರಿಸುವ ಹಲವಾರು ಕಥೆಗಳಿವೆ. ಉದಾಹರಣೆಗೆ, ಬ್ರಹ್ಮಾಂಡವು ಶಾಶ್ವತವಾಗಿದೆಯೇ ಇಲ್ಲವೇ ಮತ್ತು ಸಾವಿನ ನಂತರ, ಆತ್ಮವು ಅಸ್ತಿತ್ವದಲ್ಲಿರುತ್ತದೆಯೇ ಇಲ್ಲವೇ ಎಂದು ಬುದ್ಧನನ್ನು ಕೇಳಲಾಯಿತು. ಈ ಎಲ್ಲಾ ನಿದರ್ಶನಗಳಲ್ಲಿ, ಬುದ್ಧನು ಮೌನವಾಗಿರಲು ನಿರ್ಧರಿಸಿ, ಉತ್ತರವನ್ನು ನೀಡಲಿಲ್ಲ. ಕೊನೆಯಲ್ಲಿ, ಬುದ್ಧನು, ಜನರು ಸೃಷ್ಟಿ ಮತ್ತು ಬದಲಾಗದ, ಸೃಷ್ಟಿಸಿದ ಆತ್ಮದಂತಹ ವಿಷಯಗಳನ್ನು ನಂಬಿ, ಗೊಂದಲಕ್ಕೊಳಗಾದಾಗ, ಅವರಿಗೆ ಏನೇ ಉತ್ತರ ನೀಡಿದರೂ ಅದು ಅವರ ಗೊಂದಲವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಬದಲಾಗದ, ಸೃಷ್ಟಿಯಾದ ಆತ್ಮ ಎಂಬುದೇ ಇಲ್ಲವಾದರೆ, ಅಂತಹ ಆತ್ಮಗಳ ಸಂಖ್ಯೆಯು ಸೀಮಿತವೋ ಅಥವಾ ಅನಂತವೋ ಎಂದು ಪ್ರಶ್ನಿಸುವುದರಲ್ಲಿ ಯಾವ ಅರ್ಥವಿದೆ? 

ಇದರಲ್ಲೇ ನಾವು ಮಹತ್ವದ ಪಾಠವೊಂದನ್ನು ಕಲಿಯಬಹುದು. ಬ್ರಹ್ಮಾಂಡದ ಗಾತ್ರ ಅಥವಾ ಅದರಲ್ಲಿರುವ ಜೀವಿಗಳ ಸಂಖ್ಯೆಯನ್ನು ತಿಳಿದುಕೊಂಡರೆ – ಒಂದು ಪಕ್ಷ ಅವುಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದರ ಕುರಿತು ಸರಿಯಾದ ಮಾಹಿತಿಯನ್ನೇ ತಿಳಿದುಕೊಂಡರೆ - ನಮ್ಮ ದುಃಖ ಮತ್ತು ಸಮಸ್ಯೆಗಳನ್ನು ಮೀರಲು ಅವು ನಮಗೇನು ಸಹಾಯಮಾಡುತ್ತವೆಯೇ? ಇದು ಇತರ ಜೀವಿಗಳಿಗೆ ಪ್ರಯೋಜನಕಾರಿಯಾಗಿ ಸಹಾಯ ಮಾಡುತ್ತದೆಯೇ? ಅಂತಹ ಪ್ರಶ್ನೆಗಳನ್ನು ಪರಿಹರಿಸುವ ಮೊದಲು ನಾವು ಮರಣ ಹೊಂದುತ್ತೇವೆ ಮತ್ತು ನಮಗಿರುವ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡುತ್ತೇವೆ ಎಂದು ಬುದ್ಧ ಹೇಳಿದರು. ಇಂತಹ ಊಹಾಪೋಹಗಳು, ಬಹುಶಃ ವಿನೋದಮಯವಾಗಿದ್ದರೂ, ವಾಸ್ತವದಲ್ಲಿ ನಮಗೆ ಸಹಾಯ ಮಾಡುವುದಿಲ್ಲ. ನಮ್ಮ ಪ್ರಸ್ತುತ ಪರಿಸ್ಥಿತಿಯ ವಾಸ್ತವತೆಯನ್ನು ಗುರುತಿಸುವುದು ಮತ್ತು ನಮಗಿರುವ ಅಪರೂಪದ ಅವಕಾಶಗಳನ್ನು ಬಳಸಿಕೊಳ್ಳುವುದು ಅತ್ಯಂತ ಮುಖ್ಯವಾದುದು. ನಾವು ಸಂಸಾರದ ಭಾಗವಾಗಿದ್ದೇವೆ, ಮತ್ತು ಇಂದು ಈ ಅಮೂಲ್ಯವಾದ ಮಾನವ ದೇಹ ಮತ್ತು ಮನಸ್ಸನ್ನು ಹೊಂದಿದ್ದೇವೆ, ಇವನ್ನು ದುಃಖವನ್ನು ಮೀರಲು ಮತ್ತು ಇತರರಿಗೆ ಸಹಾಯ ಮಾಡಲು ಬಳಸಬಹುದು ಎಂದು ಅರ್ಥಮಾಡಿಕೊಳ್ಳಬೇಕು. ನಮ್ಮನ್ನು ಪೂರ್ಣ ಜ್ಞಾನೋದಯಕ್ಕೆ ಕರೆದೊಯ್ಯುವ ವಿಧಾನಗಳನ್ನು ನಾವು ಅಭ್ಯಾಸ ಮಾಡಬಹುದು. ಬಹುಶಃ, ಒಮ್ಮೆ ಅಲ್ಲಿಗೆ ತಲುಪಿದ ನಂತರ, ಈ ಎಲ್ಲಾ ಉತ್ತರಿಸಲಾಗದ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಪಡೆಯಬಹುದು!

Top