ಬೌದ್ಧಧರ್ಮದಲ್ಲಿ ಪ್ರಾರ್ಥನೆ ಎಂದರೇನು?

Study buddhism prayer 02

ಸುಮೇರಿಯನ್ ದೇವಾಲಯದ ಸ್ತೋತ್ರಗಳಿಂದ ಹಿಡಿದು ಪ್ರಾಚೀನ ಈಜಿಪ್ಟಿನ ದೇವತೆಗಳ ಮಂತ್ರಗಳವರೆಗೆ, ಮಾನವ ನಾಗರಿಕತೆಯ ಅತ್ಯಂತ ಪ್ರಾಚೀನವಾಗಿರುವ, ಅಸ್ತಿತ್ವದಲ್ಲಿರುವ ಸಾಹಿತ್ಯವು ಪ್ರಾರ್ಥನೆಗಳಿಗೆ ಸಂಬಂಧಿಸಿದೆ. ಮತ್ತು ಇಂದು, ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳಲ್ಲಿ, ಪ್ರಾರ್ಥನೆಯ ಕೆಲವು ಅಂಶಗಳನ್ನು ಕಾಣಬಹುದಾಗಿದೆ. ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಯಹೂದಿಗಳು ದೇವರನ್ನು ಪ್ರಾರ್ಥಿಸುತ್ತಾರೆ, ಮತ್ತು ಹಿಂದೂಗಳು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ವಿವಿಧ ದೇವತೆಗಳಲ್ಲಿ ಆಯ್ಕೆ ಮಾಡಬಹುದು. ಹೊರಮುಖವಾಗಿ, ಬೌದ್ಧಧರ್ಮವೇನು ಭಿನ್ನವಾಗಿಲ್ಲ. ಯಾವುದೇ ಬೌದ್ಧ ದೇಶದಲ್ಲಿರುವ ದೇವಾಲಯ ಅಥವಾ ಮಠಕ್ಕೆ ಭೇಟಿ ನೀಡಿ, ಅಲ್ಲಿ ಬುದ್ಧನ ಪ್ರತಿಮೆಗಳ ಮುಂದೆ ಪದಗಳನ್ನು ಪಠಿಸುವ ಸಂದರ್ಶಕರ ಗುಂಪುಗಳನ್ನು ನೀವು ಕಾಣಬಹುದು. ಮತ್ತು ಟಿಬೆಟಿಯನ್ ಬೌದ್ಧಧರ್ಮದ ಬಗ್ಗೆ ತಿಳಿದಿರುವವರಿಗೆ ಇದು ಗೊತ್ತಿರುವುದು, ನಮ್ಮಲ್ಲಿ ಪ್ರಾರ್ಥನಾ ಮಣಿಗಳು, ಪ್ರಾರ್ಥನಾ ಚಕ್ರಗಳು ಮತ್ತು ಪ್ರಾರ್ಥನಾ ಧ್ವಜಗಳು ಎನ್ನುವ ವಸ್ತುಗಳಿರುವವು. 

ಪ್ರಾರ್ಥನೆಯ ಕ್ರಿಯೆಯು ಮೂರು ಅಂಶಗಳನ್ನು ಹೊಂದಿದೆ: ಪ್ರಾರ್ಥನೆ ಮಾಡುವ ವ್ಯಕ್ತಿ, ಪ್ರಾರ್ಥಿಸುವ ವಸ್ತು ಮತ್ತು ಪ್ರಾರ್ಥಿಸಿದ ವಸ್ತು. ಹೀಗಾಗಿ, ಬೌದ್ಧಧರ್ಮದಲ್ಲಿನ ಪ್ರಾರ್ಥನೆಯ ಪ್ರಶ್ನೆಯು ಸಂಕೀರ್ಣವಾಗಿದೆ. ಯಾವುದೇ ಸೃಷ್ಟಿಕರ್ತ ಇಲ್ಲದ ನಾಸ್ತಿಕ ಧರ್ಮದಲ್ಲಿ, ಬೌದ್ಧರು ಯಾರನ್ನು ಮತ್ತು ಯಾವುದಕ್ಕಾಗಿ ಪ್ರಾರ್ಥಿಸುತ್ತಾರೆ? ನಮಗೆ ಆಶೀರ್ವಾದ ನೀಡಲು ಯಾರೂ ಇಲ್ಲದಿದ್ದರೆ, ಪ್ರಾರ್ಥನೆಯ ಪ್ರಯೋಜನವೇನು? ಬೌದ್ಧರಿಗೆ ಅತ್ಯಗತ್ಯವಾದ ಪ್ರಶ್ನೆಯೆಂದರೆ, "ನಮ್ಮ ದುಃಖಗಳನ್ನು ಮತ್ತು ಸಮಸ್ಯೆಗಳನ್ನು ತೊಡೆದುಹಾಕಲು ಬೇರೆಯವರಿಗೆ ಸಾಧ್ಯವೇ?"

ಕೇವಲ ಬದಲಾವಣೆಗಾಗಿ ಪ್ರಾರ್ಥಿಸುವುದು ಸಾಕಾಗುವುದಿಲ್ಲ. ಕ್ರಮವನ್ನೂ ಕೈಗೊಳ್ಳಬೇಕು - ಪರಮಪೂಜ್ಯ 14 ನೇ ದಲೈ ಲಾಮಾ 

ತನ್ನ ಎಲ್ಲಾ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವನ್ನು ಬಳಸಿದರೂ, ಸ್ವತಃ ಬುದ್ಧನಿಗೂ ನಮ್ಮ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಬುದ್ಧನು ಹೇಳಿರುವನು. ಇದು ಅಸಾಧ್ಯ. ನಮ್ಮ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳಬೇಕು. ನಾವು ಸಮಸ್ಯೆಗಳನ್ನು ಮತ್ತು ದುಃಖವನ್ನು ಅನುಭವಿಸಲು ಬಯಸದಿದ್ದರೆ, ನಾವು ಅವುಗಳ ಕಾರಣಗಳನ್ನು ದೂರವಿಡಬೇಕು. ನಾವು ಸಂತೋಷವನ್ನು ಅನುಭವಿಸಲು ಬಯಸಿದರೆ, ಸಂತೋಷದ ಕಾರಣಗಳನ್ನು ನಾವೇ ರಚಿಸಬೇಕಾಗಿದೆ. ಬೌದ್ಧ ದೃಷ್ಟಿಕೋನದಿಂದ, ನಿರ್ಮಲವಾದ ನೈತಿಕತೆ ಮತ್ತು ನೀತಿಗಳನ್ನು ಅನುಸರಿಸುವ ಮೂಲಕ ನಾವು ಇದನ್ನು ಸಾಧಿಸಬಹುದಾಗಿದೆ. ನಮಗೆ ಬೇಕಾದ ಜೀವನವನ್ನು ರಚಿಸಲು ನಮ್ಮ ನಡವಳಿಕೆ ಮತ್ತು ಮನೋಭಾವವನ್ನು ಬದಲಾಯಿಸುವ ಜಾವಾಬ್ದಾರಿ ಸಂಪೂರ್ಣವಾಗಿ ನಮ್ಮ ಮೇಲೆ ಅವಲಂಬಿತವಾಗಿರುವುದು.

ಬೌದ್ಧರು ಯಾರನ್ನು ಪ್ರಾರ್ಥಿಸುತ್ತಾರೆ

ಜನರು ಪ್ರತಿಮೆಗಳಿಗೆ ನಮಸ್ಕರಿಸುವುದನ್ನು, ದೇವಾಲಯಗಳಲ್ಲಿ ಧೂಪವನ್ನು ಅರ್ಪಿಸುವುದನ್ನು ಮತ್ತು ಸಭಾಂಗಣಗಳಲ್ಲಿ ಪದ್ಯಗಳನ್ನು ಪಠಿಸುವುದನ್ನು ನಾವು ನೋಡಿದಾಗ, ಅವರು ಏನು ಕೇಳುತ್ತಿದ್ದಾರೆ ಮತ್ತು ಅವರು ಯಾರನ್ನು ಪ್ರಾರ್ಥಿಸುತ್ತಿದ್ದಾರೆ? ಎಂಬ ಪ್ರಶ್ನೆಗಳು ಮೂಡಬಹುದು. "ಶಾಕ್ಯಮುನಿ ಬುದ್ಧ, ದಯವಿಟ್ಟು ನನಗೆ ಮರ್ಸಿಡಿಸ್ ಸಿಗಲಿ!" ಎಂದು ಜನರು ಯೋಚಿಸುತ್ತಿರಬಹುದು, ಅಥವಾ, "ಔಷಧಿಯನ್ನು ನೀಡಿ ಬುದ್ಧ, ದಯವಿಟ್ಟು ನನ್ನ ಕಾಯಿಲೆಯನ್ನು ಗುಣಪಡಿಸಿ". ಹೆಚ್ಚಿನ ಬೌದ್ಧ ಶಿಕ್ಷಕರ ಪ್ರಕಾರ ಇಂತಹ ಪ್ರಾರ್ಥನೆಗಳಿಂದ ಸ್ವಲ್ಪವೂ ಪ್ರಯೋಜನವಾಗುವುದಿಲ್ಲ. 

ಬದಲಾಗಿ, ಬೌದ್ಧಧರ್ಮದಲ್ಲಿ, ನಾವು ಬುದ್ಧರಿಗೆ ಮತ್ತು ಬೋಧಿಸತ್ವರಿಗೆ ನಮ್ಮ ಸುಧಾರಣೆಗೆ ಶ್ರಮ ಪಡುವಂತಹ ಸ್ಫೂರ್ತಿ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇವೆ, ಇದರಿಂದ ನಾವು ನಮ್ಮ ಸ್ವಂತ ಸಂತೋಷದ ಕಾರಣಗಳನ್ನು ರಚಿಸಬಹುದು, ಹಾಗೆಯೇ ಇತರರಿಗೆ ಸಾಧ್ಯವಾದಷ್ಟು ಸಹಾಯಕವಾಗಿರಬಹುದು. ಅವರು ಯಾವುದೋ ಮಾಂತ್ರಿಕದಂಡವನ್ನು ಬೀಸಿದ ತಕ್ಷಣ, ಇದ್ದಕ್ಕಿದ್ದಂತೆ ಹಾಗೆ ಮಾಡಲು ನಮಗೆ ವಿಶೇಷ ಶಕ್ತಿ ಸಿಗುತ್ತದೆಯೆಂದಲ್ಲ, ಬದಲಿಗೆ ಅವರು ನಮಗೆ ಮಾದರಿಗಳಾಗಿ ಕಾರ್ಯನಿರ್ವಹಿಸುವುದರಿಂದ, ಅವರ ಮಾದರಿಯ ಬಗ್ಗೆ ಯೋಚಿಸಿದರೆ, ಅದು ನಮ್ಮಲ್ಲಿ,"ನಾನು ಕೂಡ ಹೀಗೆ ಮಾಡಬಹುದು!" ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ. 

ಬೌದ್ಧ ಪ್ರಾರ್ಥನಾ ಚಟುವಟಿಕೆಗಳಾದ ಸೂತ್ರಗಳ ಪಠಣ, ಮಂತ್ರಗಳ ಪುನರಾವರ್ತನೆ, ಹಾಗೆಯೇ ದೇವತೆಗಳ ದೃಶ್ಯೀಕರಣ, ಇವೆಲ್ಲವೂ ಸಹಾನುಭೂತಿ, ಉತ್ಸಾಹ, ತಾಳ್ಮೆ ಮತ್ತು ಮುಂತಾದ ರಚನಾತ್ಮಕ ಭಾವನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಇತರರಿಗೆ ಸಹಾಯ ಮಾಡುವಂತಹ ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು, ನಮ್ಮದೇ ಆದ ಆಂತರಿಕ ಸಾಮರ್ಥ್ಯದೊಂದಿಗೆ ಸಂಪರ್ಕಗೊಳ್ಳುವುದಕ್ಕಾಗಿ ಇರುತ್ತವೆ.

ಸಪ್ತಾಂಗ ಪ್ರಾರ್ಥನೆ 

ಸಪ್ತಾಂಗ ಪ್ರಾರ್ಥನೆಯು ಬಹಳ ಪ್ರಸಿದ್ಧವಾದ ಅಭ್ಯಾಸವಾಗಿದ್ದು, ಬೌದ್ಧ ಮಾರ್ಗದ ಸಂಪೂರ್ಣ ಸಾರವನ್ನು ಒಳಗೊಂಡಿರುತ್ತದೆ. ಇದರಲ್ಲಿ ಏಳು ಭಾಗಗಳಿದ್ದು, ಪ್ರತಿಯೊಂದು ಭಾಗವೂ ನಿರ್ದಿಷ್ಟ ಪರಿಣಾಮವನ್ನು ಹೊಂದಿರುತ್ತದೆ: 

(1) ತ್ರಿಕಾಲವನ್ನು ದಯಪಾಲಿಸಿದ ಎಲ್ಲಾ ಬುದ್ಧರಿಗೆ, ಧರ್ಮ ಮತ್ತು ಸರ್ವೋಚ್ಛ ಸಭೆಗೆ, ಪ್ರಪಂಚದ ಎಲ್ಲಾ ಪರಮಾಣುಗಳಂತೆ, ಅಸಂಖ್ಯಾತ ದೇಹಗಳೊಂದಿಗೆ ನಮಸ್ಕರಿಸುತ್ತೇನೆ. 
(2) ಮಂಜುಶ್ರೀ ಮತ್ತು ಇತರರು ಪರಮಾತ್ಮರಾದ ನಿಮಗೆ ಅರ್ಪಣೆಗಳನ್ನು ಸಲ್ಲಿಸಿದಂತೆ, ನಾನು ಸಹ, ನನ್ನ ತಥಾಗತರಾದ ನಿಮಗಾಗಿ ಮತ್ತು ನಿಮ್ಮ ಆಧ್ಯಾತ್ಮಿಕ ಸಂತತಿಗಾಗಿ ಅರ್ಪಣೆಗಳನ್ನು ಸಲ್ಲಿಸುತ್ತೇನೆ. 
(3) ನನ್ನ ಆರಂಭಿವಿಲ್ಲದ ಸಾಂಸಾರಿಕ ಅಸ್ತಿತ್ವದಲ್ಲಿ, ಇಂದಿನ ಮತ್ತು ಇತರ ಜೀವಿತಾವಧಿಯಲ್ಲಿ, ನನಗೆ ಅರಿವಿಲ್ಲದೆ ನಕಾರಾತ್ಮಕ ಕೃತ್ಯಗಳನ್ನು ಎಸಗಿದ್ದೇನೆ ಅಥವಾ ಹಾಗೆ ಮಾಡುವಂತೆ ಬೇರೆಯವರನ್ನು ಪ್ರೇರೇಪಿಸಿದ್ದೇನೆ ಮತ್ತು ಅದರ ಮೇಲಾಗಿ, ನನ್ನ ಮುಗ್ಧತೆಯ ವಂಚನೆಯಿಂದಾಗಿ, ನಾನು ಅವುಗಳಿಂದ ಆನಂದ ಪಟ್ಟಿರುವೆ - ನಾನು ಏನೇ ಮಾಡಿದ್ದರೂ, ನನ್ನ ತಪ್ಪುಗಳನ್ನು ಗುರುತಿಸಿ, ನನ್ನ ಹೃದಯಾಳದಿಂದ ಅವುಗಳನ್ನು ನನ್ನ ರಕ್ಷಕರಾದ ನಿಮ್ಮ ಮುಂದಿರಿಸುತ್ತದ್ದೇನೆ.  
(4) ಎಲ್ಲಾ ಸೀಮಿತ ಜೀವಿಗಳಿಗೆ ಸಂತೋಷವನ್ನು ತರುವ ಮತ್ತು ಸೀಮಿತ ಜೀವಿಗಳಿಗೆ ಸಹಾಯ ಮಾಡುವ ನಿಮ್ಮ ಕಾರ್ಯಗಳ ಸಕಾರಾತ್ಮಕ ಶಕ್ತಿಯನ್ನು ಪಡೆಯಲು ನೀವು ಅಭಿವೃದ್ಧಿಪಡಿಸಿದ ಬೋಧಿಚಿತ್ತದ ಗುರಿಗಳ ಸಾಗರದಲ್ಲಿ ನಾನು ಆನಂದದಿಂದ ವಿಲಾಸಿಸುತ್ತೇನೆ. 
(5) ಸರ್ವ ದಿಕ್ಕಿನಲ್ಲಿರುವ ಬುದ್ಧರಿಗೆಲ್ಲರಿಗೂ ಕೈಮುಗಿದು ಮನವಿ ಮಾಡುವೆ: ದುಃಖದಲ್ಲಿರುವ ಮತ್ತು ಕತ್ತಲೆಯಲ್ಲಿ ಅಲೆಯುತ್ತಿರುವ ಸೀಮಿತ ಜೀವಿಗಳಿಗಾಗಿ ನಿಮ್ಮ ಧರ್ಮದ ದೀಪವನ್ನು ಬೆಳಗಿಸಿ. 
(6) ದುಃಖವನ್ನು ಮೀರುವ ಓ ಪರಮಾತ್ಮನೇ, ನಿನಗೆ ನಾನು ಕೈಮುಗಿದು ಬೇಡುವೆ: ಈ ಅಲೆದಾಡುವ ಆತ್ಮಗಳನ್ನು ಕತ್ತಲೆಯಲ್ಲಿ ಬಿಡದಂತೆ, ಅಸಂಖ್ಯಾತ ಯುಗಗಳವರೆಗೆ ನಮ್ಮೊಂದಿಗೆ ಇರಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.  
(7) ಇಷ್ಟೆಲ್ಲ ಮಾಡುವ ಮೂಲಕ ನಾನು ಏನೇನು ಸಕಾರಾತ್ಮಕ ಶಕ್ತಿಯನ್ನು ಸಂಪಾದಿಸಿದ್ದೇನೆಯೋ, ಅದರ ಮೂಲಕ ಎಲ್ಲಾ ಸೀಮಿತ ಜೀವಿಗಳ ಎಲ್ಲಾ ದುಃಖಗಳನ್ನು ತೊಡೆದುಹಾಕಲು ನನ್ನಿಂದ ಸಾಧ್ಯವಾಗಲಿ.
  • ಪ್ರಾರ್ಥನೆಯ ಮೊದಲ ಭಾಗ ಸಾಷ್ಟಾಂಗ ನಮನವಾಗಿದೆ. ಬುದ್ಧರು ಪ್ರತಿನಿಧಿಸುವ ಪ್ರತಿಯೊಂದಕ್ಕೂ, ಗೌರವದ ಸಂಕೇತವಾಗಿ ನಾವು ಅವರಿಗೆ ನಮಸ್ಕರಿಸುತ್ತೇವೆ: ಸಹಾನುಭೂತಿ, ಪ್ರೀತಿ ಮತ್ತು ಬುದ್ಧಿವಂತಿಕೆ. ನಮ್ಮ ದೇಹದ ಅತ್ಯುನ್ನತ ಭಾಗವಾಗಿರುವ ತಲೆಯನ್ನು ನೆಲದ ಮೇಲೆ ಇರಿಸುವ ಸಾಷ್ಟಾಂಗ ನಮನ, ಅಹಂಕಾರವನ್ನು ಜಯಿಸಲು ಮತ್ತು ನಮ್ರತೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. 
  • ನಂತರ ನಾವು ಅರ್ಪಣೆಗಳನ್ನು ಸಲ್ಲಿಸುತ್ತೇವೆ. ಅನೇಕ ಬೌದ್ಧರು ನೀರಿನ ಬಟ್ಟಲುಗಳನ್ನು ನೀಡುತ್ತಾರೆ, ಆದರೆ ಅರ್ಪಣೆಯ ವಸ್ತುವಿಗಿಂತ ಹೆಚ್ಚಾಗಿ ನಮ್ಮ ಕೊಡುಗೆಯು ಹಿಂದಿನ ಪ್ರೇರಣೆಯು ಮುಖ್ಯವಾದುದು - ಸಮಯ, ಶ್ರಮ, ಶಕ್ತಿ, ಹಾಗೆಯೇ ಆಸ್ತಿ - ಇವು ಬಾಂಧವ್ಯವನ್ನು ಮೀರಲು ನಮಗೆ ಸಹಾಯ ಮಾಡುತ್ತವೆ. 
  • ಮೂರನೆಯದಾಗಿ, ನಮ್ಮ ನ್ಯೂನತೆಗಳನ್ನು ಮತ್ತು ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. ಬಹುಶಃ ಕೆಲವೊಮ್ಮೆ ನಾವು ಸೋಮಾರಿಗಳು ಅಥವಾ ಸ್ವಾರ್ಥಿಗಳಾಗಿರಬಹುದು, ಮತ್ತು ಕೆಲವೊಮ್ಮೆ ನಾವು ಬಹಳ ವಿನಾಶಕಾರಿ ರೀತಿಯಲ್ಲಿ ವರ್ತಿಸಬಹುದು. ನಾವು ಇವುಗಳನ್ನು ಒಪ್ಪಿಕೊಳ್ಳುತ್ತೇವೆ, ವಿಷಾದಿಸುತ್ತೇವೆ ಮತ್ತು ಅದೇ ತಪ್ಪುಗಳನ್ನು ಪುನರಾವರ್ತಿಸದಿರಲು ಪ್ರಯತ್ನಿಸುವ ಬಲವಾದ ನಿರ್ಣಯದೊಂದಿಗೆ ಮುಂದುವರಿಯುತ್ತೇವೆ. ಇದು ನಕಾರಾತ್ಮಕ ಕರ್ಮದ ಪ್ರಚೋದನೆಗಳ ಪ್ರಭಾವದಿಂದ ಹೊರಬರುವ ಭಾಗವಾಗಿದೆ. 
  • ನಂತರ, ನಾವು ಆನಂದ ಪಡುತ್ತೇವೆ. ನಾವೇ ಸಾಧಿಸಿರುವ ಎಲ್ಲಾ ಒಳ್ಳೆಯ ವಿಷಯಗಳನ್ನು ಮತ್ತು ಇತರರು ಸಾಧಿಸಿರುವ ಎಲ್ಲಾ ಅದ್ಭುತ ರಚನಾತ್ಮಕ ಕೆಲಸಗಳ ಬಗ್ಗೆ ನಾವು ಆಲೋಚಿಸುತ್ತೇವೆ. ಬುದ್ಧರು ಮಾಡಿದ ಮಹತ್ಕಾರ್ಯಗಳನ್ನೂ ನೋಡುತ್ತೇವೆ. ಇದು ಅಸೂಯೆಯನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ. 
  • ನಂತರ, ನಾವು ಬೋಧನೆಗಳನ್ನು ವಿನಂತಿಸುತ್ತೇವೆ, ಅದು ನಮ್ಮೊಳಗೆ ಗ್ರಹಿಸುವ ಮನಸ್ಥಿತಿಯನ್ನು ಸೃಷ್ಟಿಸುತ್ತದೆ. "ನಾವು ಕಲಿಯಲು ಬಯಸುತ್ತೇವೆ, ನಮಗಾಗಿ ಮತ್ತು ಇತರರಿಗೆ ಸಂತೋಷವನ್ನು ಸೃಷ್ಟಿಸಲು ನಾವು ಬಯಸುತ್ತೇವೆ!" ಎಂದು ನಾವು ವ್ಯಕ್ತಪಡಿಸುತ್ತೇವೆ. 
  • ನಾವು ಗುರುಗಳನ್ನು ನಿರ್ಗಮಿಸದಂತೆ ಬೇಡಿಕೊಳ್ಳುತ್ತೇವೆ. ಈ ಹಿಂದಿನ ಭಾಗದಲ್ಲಿ, ನಾವು ಬೋಧನೆಗಳನ್ನು ಸ್ವೀಕರಿಸಿದೆವು ಮತ್ತು ಈಗ ಗುರುಗಳು ನಮ್ಮನ್ನು ಬಿಟ್ಟು ಹೋಗದಂತೆ, ನಾವು ಪೂರ್ಣ ಜ್ಞಾನವನ್ನು ತಲುಪುವವರೆಗೆ ನಮಗೆ ಕಲಿಸಬೇಕೆಂದು ನಾವು ಬಯಸುತ್ತೇವೆ. 
  • ಅಂತಿಮವಾಗಿ, ಸಮರ್ಪಣೆಯು ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ. ನಮಗೆ ಮತ್ತು ಇತರ ಎಲ್ಲಾ ಜೀವಿಗಳಿಗೆ ಉಪಕಾರಿಯಾಗುವಂತೆ ನಾವು ರಚಿಸಿರುವ ಸಕಾರಾತ್ಮಕ ಶಕ್ತಿಯನ್ನು ಅರ್ಪಿಸುತ್ತೇವೆ. 

ಈ ಪ್ರಾರ್ಥನೆಯಿಂದ ನಾವು ನೋಡುವಂತೆ, ಬೌದ್ಧಧರ್ಮದ ಗುರಿಯು ಯಾವುದೋ ಬಾಹ್ಯ ಜೀವಿಯೊಂದು ಕೆಳಗಿಳಿದು, ನಮ್ಮನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸುವುದಾಗಿರುವುದಿಲ್ಲ. ಗಾದೆಮಾತಿನಂತೆ, "ನೀವು ಕುದುರೆಯನ್ನು ನೀರಿನ ಬಳಿ ಕರೆದೊಯ್ಯಬಹುದು, ಆದರೆ ಅದಕ್ಕೆ ಕುಡಿಸಲು ಸಾಧ್ಯವಿಲ್ಲ." ಬೇರೆ ರೀತಿಯಲ್ಲಿ ಹೇಳುವುದಾದರೆ, ಬುದ್ಧರು ನಮಗೆ ಮಾರ್ಗವನ್ನು ತೋರಿಸಿದ್ದಾರೆ, ಆದರೆ ಬಾಂಧವ್ಯ ಮತ್ತು ಅಜ್ಞಾನವನ್ನು ಮೀರಲು ಮತ್ತು ನಾವೆಲ್ಲರೂ ಹೊಂದಿರುವ ಮಿತಿಯಿಲ್ಲದ ರಚನಾತ್ಮಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ನಾವು ಶ್ರಮ ಪಡಬೇಕಾಗುತ್ತದೆ. 

ಕಡೆನುಡಿ 

ಹೊರಮುಖವಾಗಿ, ಬೌದ್ಧಧರ್ಮವು ಪ್ರಾರ್ಥನೆ ಮತ್ತು ಆಚರಣೆಗಳನ್ನು ಒಳಗೊಂಡಿರುವಂತೆ ಕಂಡರೂ, ನಮ್ಮ ದೈನಂದಿನ ಜೀವನದ ಸಹಾಯಕ್ಕಾಗಿ ಯಾವುದೋ ಬಾಹ್ಯ ಜೀವಿಗಳಿಗೆ ಮನವಿ ಮಾಡುವ ಉದ್ದೇಶವಿಲ್ಲ. ಬುದ್ಧರು ಮತ್ತು ಬೋಧಿಸತ್ವರು, ನಮ್ಮ ಪ್ರಸ್ತುತ ಸ್ಥಿತಿಯಿಂದ, ಪರಿಪೂರ್ಣ ಜ್ಞಾನೋದಯದ ಹಾದಿಯನ್ನು ಗೋಚರಿಸುವ ಅತ್ಯುನ್ನತ ಮಾದರಿಯಾಗಿದ್ದಾರೆ. ಬುದ್ಧರು ಮತ್ತು ಬೋಧಿಸತ್ವರಿಗೆ ಪ್ರಾರ್ಥಿಸುವ ಮೂಲಕ, ನಾವು ಅವರಿಂದ ಸ್ಫೂರ್ತಿಗೊಂಡು ನಮ್ಮ ಸ್ವಂತ ಆಂತರಿಕ ಸಾಮರ್ಥ್ಯಗಳನ್ನು ಎಚ್ಚರಗೊಳಿಸುತ್ತೇವೆ: ಮಿತಿಯಿಲ್ಲದ ಸಹಾನುಭೂತಿ, ಪ್ರೀತಿ ಮತ್ತು ಬುದ್ಧಿವಂತಿಕೆಯು ಸಾಮರ್ಥ್ಯವನ್ನು ನಮ್ಮೆಲ್ಲರ ಒಳಗಿದೆ.

Top