Study buddhism aryadeva 400

ಆರ್ಯದೇವ

ಆರ್ಯದೇವ ('Phags-pa'i lha) ಶ್ರೀಲಂಕಾದಲ್ಲಿ ರಾಜಮನೆತನದಲ್ಲಿ ಜನಿಸಿದರು ಮತ್ತು 2 ನೇ ಶತಮಾನದ ನಡುವಿನಿಂದ, 3 ನೇ ಶತಮಾನದ ನಡುವಿನ C.E, ತನಕ ಜೀವಿಸಿದ್ದರು. ಕೆಲವು ಹೇಳಿಕೆಗಳ ಪ್ರಕಾರ, ಅವರು ಕಮಲದಿಂದ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಅವರು ಸನ್ಯಾಸತ್ವವನ್ನು ಪಡೆದುಕೊಂಡು, ಬೌದ್ಧ ಧರ್ಮಗ್ರಂಥಗಳಾದ ತ್ರಿಪಿಟಕವನ್ನು ದೀರ್ಘವಾಗಿ ಅಧ್ಯಯನ ಮಾಡಿ, ನಂತರ ರಾಜ ಉದಯಿಭದ್ರನ ಸಾತವಾಹನ ಸಾಮ್ರಾಜ್ಯದಲ್ಲಿ ನಾಗಾರ್ಜುನರೊಂದಿಗೆ ಅಧ್ಯಯನ ಮಾಡಲು ದಕ್ಷಿಣ ಭಾರತಕ್ಕೆ ತೆರಳಿದರು. ನಾಗಾರ್ಜುನರ ಬರಹಗಳಾದ ‘ಸುಹ್ರ್ಲೇಖಾ (ಓರ್ವ ಉತ್ತಮ ಸ್ನೇಹಿತನಿಗೆ)’ ಮತ್ತು ‘ರತ್ನಾವಳಿ’ಯನ್ನು, ರಾಜ ಉದಯಿಭದ್ರನು ಸ್ವೀಕರಿಸಿದನು. ಆರ್ಯದೇವ ನಾಗಾರ್ಜುರನ್ನು ಜೊತೆಗೂಡಿ, ಸಾತವಾಹನ ಸಾಮ್ರಾಜ್ಯದೊಳಗೆ, ಅಂದರೆ ಇಂದಿನ ಆಂಧ್ರಪ್ರದೇಶದ ನಾಗಾರ್ಜುನಕೊಂಡ ಕಣಿವೆಯ ಮೇಲಿರುವ ಪವಿತ್ರ ಪರ್ವತಗಳಾದ ಶ್ರೀ ಪರ್ವತದಲ್ಲಿ ಅಧ್ಯಯನವನ್ನು ಮುಂದುವರೆಸಿದರು.

ಆ ಸಮಯದಲ್ಲಿ ಶಿವಭಕ್ತರಾದ ಮಾತೃಚೇಟನು ನಳಂದದಲ್ಲಿ ಎಲ್ಲರನ್ನೂ ವಾದದಲ್ಲಿ ಸೋಲಿಸುತ್ತಿದ್ದರು. ಆರ್ಯದೇವನು ಸವಾಲನ್ನು ಎದುರಿಸಲು ಹೋದರು. ದಾರಿಯಲ್ಲಿ ಅವರು ವ್ರದ್ಧೆಯೊಬ್ಬರನ್ನು ಭೇಟಿಯಾದರು, ಆಕೆ ವಿಶೇಷ ಶಕ್ತಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ, ಪ್ರಗಲ್ಭ ಸನ್ಯಾಸಿಯೊಬ್ಬನ ಕಣ್ಣು ಬೇಕಾಗಿತ್ತು. ಸಹಾನುಭೂತಿಯಿಂದ, ಅವರು ತನ್ನ ಒಂದು ಕಣ್ಣನ್ನು ನೀಡಿದರು, ಆದರೆ ಆಕೆ ಅದನ್ನು ಪಡೆದಾಗ, ಅದನ್ನು ಬಂಡೆಯಿಂದ ಚಚ್ಚಿ ಹಾಕಿದಳು. ಅದಾದ ನಂತರ, ಒಂದೇ ಕಣ್ಣಿನ ಆರ್ಯದೇವನೆಂದು ಪ್ರಸಿದ್ಧನಾದರು. ಆರ್ಯದೇವನು, ಮಾತೃಚೇಟನನ್ನು ವಿವಾದ ಮತ್ತು ವಿಶೇಷ ಶಕ್ತಿಗಳೆರಡರಲ್ಲೂ ಸೋಲಿಸಿದರು, ಅದಾದ ನಂತರ ಮಾತೃಚೇಟನು ಅವರ ಶಿಷ್ಯರಾದರು.

ಆರ್ಯದೇವ ನಳಂದದಲ್ಲಿ ಹಲವು ವರ್ಷಗಳ ಕಾಲ ವಾಸಿಸಿದರು. ಆದರೆ, ಮುಂದಿನ ದಿನಗಳಲ್ಲಿ, ಅವರು ನಾಗಾರ್ಜುನನ ಬಳಿ ಮರಳಿದರು, ಮತ್ತು ನಾಗಾರ್ಜುನ ಸಾವನಪ್ಪುವ ಮೊದಲು ತಮ್ಮ ಎಲ್ಲಾ ಬೋಧನೆಗಳನ್ನು ಆರ್ಯದೇವನಿಗೆ ಒಪ್ಪಿಸಿದರು. ಆರ್ಯದೇವ ದಕ್ಷಿಣ ಭಾರತದ ಆ ಪ್ರದೇಶದಲ್ಲಿ ಅನೇಕ ಮಠಗಳನ್ನು ನಿರ್ಮಿಸಿದರು ಮತ್ತು ವ್ಯಾಪಕವಾಗಿ ಬೋಧಿಸಿ, ನಿರ್ದಿಷ್ಟವಾಗಿ ತಮ್ಮ ಮಧ್ಯಮಕ ಸಿದ್ಧಾಂತಗಳ ಪಠ್ಯವಾದ ‘ಬೋಧಿಸತ್ವದ ಯೋಗದ ಕ್ರಿಯೆಗಳ ಕುರಿತಾದ ನಾಲ್ಕು ನೂರು ಶ್ಲೋಕಗಳ ಗ್ರಂಥ’ (ಬ್ಯಾಂಗ್-ಚಬ್ ಸೆಮ್ಸ್-ಡಿಪಾಯಿ rnal-'byor spyod-pa bzhi-brgya-pa'i bstan-bcos kyi tshig-le'ur byas-pa, Skt. ಬೋಧಿಸತ್ತ್ವಯೋಗಾಚಾರ್ಯ-ಕತುಃಶತಕ-ಶಾಸ್ತ್ರ-ಕಾರಿಕಾ) ವನ್ನು ಭೋದಿಸಿ, ಮಹಾಯಾನ ಸಂಪ್ರದಾಯವನ್ನು ಸ್ಥಾಪಿಸಿದರು. ಇದನ್ನು ಸಂಕ್ಷಿಪ್ತವಾಗಿ ನಾಲ್ಕು ನೂರು ಶ್ಲೋಕಗಳ ಗ್ರಂಥ ಎಂದು ಕರೆಯಲಾಗುತ್ತದೆ. ನಾಗಾರ್ಜುನರಂತೆ, ಆರ್ಯದೇವರೂ ಕೂಡ ಗುಹ್ಯಸಮಾಜ ತಂತ್ರದ ಬಗ್ಗೆ ವ್ಯಾಖ್ಯಾನಗಳನ್ನು ಬರೆದರು.

Top