ಲಿಂಗ್ ರಿಂಪೋಚೆ ಅವರಿಂದ ಸಂದೇಶ

ಇಂಟರ್ನೆಟ್ ಮೂಲಕ ಮಾಹಿತಿಯು ಹೆಚ್ಚು ಸುಲಭವಾಗಿ ಮತ್ತು ವ್ಯಾಪಕವಾಗಿ ಲಭ್ಯವಾಗುತ್ತಿದ್ದಂತೆ, ಬೌದ್ಧಧರ್ಮ ಮತ್ತು ಟಿಬೆಟಿಯನ್ ಸಂಸ್ಕೃತಿಯ ಇತರ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಪ್ರಪಂಚದಾದ್ಯಂತದ ಜನರು, ಮಾಹಿತಿಗಾಗಿ ಇದರ ಕಡೆಯೇ ತಿರುಗುತ್ತಾರೆ. ಇನ್ನೂ ಆಳವಾಗಿ ಅಧ್ಯಯನ ಮಾಡಲು ಬಯಸುವವರು, ಅರ್ಹ ಗುರುಗಳನ್ನು ಹುಡುಕುತ್ತಾರೆ ಮತ್ತು ಅವಕಾಶ ಸಿಕ್ಕಲ್ಲಿ ಅವರೊಂದಿಗೆ ಅಧ್ಯಯನ ಮಾಡಲು ಪ್ರಾರಂಭಿಸುತ್ತಾರೆ. ಅಂತಹ ವ್ಯಕ್ತಿಗಳಿಗೆ, ಅವರ ಅಧ್ಯಯನಕ್ಕೆ ಪೂರಕವಾಗಿ ಇಂಟರ್ನೆಟ್ ಒಂದು ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ದುರದೃಷ್ಟವಷಾತ್, ಕೆಲವರಿಗೆ ಹಲವು ಕಾರಣಗಳಿಂದಾಗಿ ಅರ್ಹ ಗುರುಗಳನ್ನು ಹುಡುಕಲು ಸಾಧ್ಯವಾಗದಿರಬಹುದು. ಒಬ್ಬರು ಸಿಕ್ಕರೂ ಸಹ, ಹಣಕಾಸಿನ ಅಥವಾ ಸಾಂಸ್ಥಿಕ ಕಾರಣಗಳಿಂದಾಗಿ ಅವರೊಂದಿಗೆ ಅಧ್ಯಯನ ಮಾಡಲು ಸಾಧ್ಯವಾಗದಿರಬಹುದು. ಅಂತಹವರಿಗೆ, ಬೋಧನೆಗಳನ್ನು ಪಡೆಯಲು ಇಂಟರ್ನೆಟ್ ಇನ್ನೂ ಹೆಚ್ಚಿನ ಅಗತ್ಯ ಮೂಲವಾಗಿರುತ್ತದೆ.

ಬೌದ್ಧಧರ್ಮ ಮತ್ತು ಟಿಬೆಟಿಯನ್ ಸಂಸ್ಕೃತಿಯನ್ನು ಕುರಿತು ಅನೇಕ ಸೈಟ್‌ಗಳಿಂದ ಇಂಟರ್ನೆಟ್ ತುಂಬಿದೆ. ಕೆಲವು ನಿಖರವಾದ ಮಾಹಿತಿಯನ್ನು ಒದಗಿಸುತ್ತವೆ ಮತ್ತು ಕೆಲವು, ದುರದೃಷ್ಟವಶಾತ್, ಅಷ್ಟಾಗಿ ವಿಶ್ವಾಸಾರ್ಹವಾಗಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ, ಅಲೆಕ್ಸ್ ಬರ್ಜಿನ್ ಅವರು ಬರ್ಜಿನ್ ಆರ್ಕೈವ್ಸ್ ವೆಬ್‌ಸೈಟ್ ಅನ್ನು ಸಿದ್ಧಪಡಿಸಿ, ಅದರಲ್ಲಿ ಅಧಿಕೃತ ವಸ್ತುಗಳನ್ನು ಉಚಿತವಾಗಿ, ವಿವಿಧ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿರುವುದರಿಂದ ನನಗೆ ಬಹಳಾ ಸಂತೋಷವಾಗಿದೆ. ಅದರಲ್ಲಿರುವ ವಿಷಯಗಳು ಅಂಗವಿಕಲರಿಗೆ ನಿಲುಕುವಂತೆ ಮಾಡುತ್ತಿರುವ ಪ್ರಯತ್ನವನ್ನೂ ಸಹ ನಾನು ಪ್ರಶಂಸಿಸುತ್ತೇನೆ – ಇವರು ಹೆಚ್ಚಾಗಿ ಬೆಳೆಯುತ್ತಿರುವ ಪ್ರೇಕ್ಷಕರಾಗಿರುವರು, ಆದರೆ ದುಃಖಕರವಾದ ವಿಷಯವೆಂದರೆ ಇವರನ್ನು ಆಗಾಗ್ಗೆ ನಿರ್ಲಕ್ಷಿಸಲಾಗಿದೆ.

ಅಲೆಕ್ಸ್ ನನ್ನ ಪೂರ್ವವರ್ತಿ ಯೋಂಗ್‌ಜಿನ್ ಲಿಂಗ್ ರಿನ್‌ಪೋಚೆ ಅವರ ವಿದ್ಯಾರ್ಥಿ ಮತ್ತು ಸಾಂದರ್ಭಿಕ ಅನುವಾದಕರಾಗಿದ್ದರು. ಈ ಜೀವಿತಾವಧಿಯಲ್ಲಿಯೂ ನಾವು ನಮ್ಮ ಸಂಬಂಧವನ್ನು ಮುಂದುವರಿಸಿದ್ದೇವೆ. ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳ ಬುದ್ಧಿವಂತ ಮತ್ತು ಸಹಾನುಭೂತಿಯ ಮಿಶ್ರಣದಿಂದ, ಮಾಹಿತಿ ಮತ್ತು ಆಧ್ಯಾತ್ಮಿಕ ತರಬೇತಿಯನ್ನು ನೀಡುವ ಮೂಲಕ ಈ ಜಗತ್ತಿನಲ್ಲಿ ಶಾಂತಿ ಮತ್ತು ಸಂತೋಷವು ಬೆಳೆಯಲಿ.

ಮೇ 19, 2009
ಲಿಂಗ್ ರಿಂಪೋಚೆ

Top