ಬೌದ್ಧ ತರಬೇತಿಯಲ್ಲಿನ ಚರ್ಚೆಯ ಮುಖ್ಯ ಉದ್ದೇಶವು, ನಿರ್ಣಾಯಕ ಅರಿವನ್ನು (nges-shes) ಅಭಿವೃದ್ಧಿಪಡಿಸಲು ನಿಮಗೆ ಸಹಾಯ ಮಾಡುವುದಾಗಿರುತ್ತದೆ. ನೀವು ಒಂದು ಸ್ಥಾನವನ್ನು ತೆಗೆದುಕೊಳ್ಳುತ್ತೀರಿ ಮತ್ತು ನಂತರ ನಿಮ್ಮ ಚರ್ಚಾ ಸಂಗಾತಿ, ಅನೇಕ ದೃಷ್ಟಿಕೋನಗಳಿಂದ ಅದನ್ನು ಸವಾಲು ಮಾಡುತ್ತಾರೆ. ಎಲ್ಲಾ ಆಕ್ಷೇಪಣೆಗಳ ವಿರುದ್ಧ ನಿಮ್ಮ ಸ್ಥಾನವನ್ನು ಸಮರ್ಥಿಸಿಕೊಂಡರೆ ಮತ್ತು ಅದರಲ್ಲಿ ಯಾವುದೇ ತಾರ್ಕಿಕ ಅಸಂಗತತೆಗಳಿಲ್ಲ ಮತ್ತು ಯಾವುದೇ ವಿರೋಧಾಭಾಸಗಳಿಲ್ಲ ಎಂದು ನೀವು ಕಂಡುಕೊಂಡರೆ, ನೀವು ಆ ಸ್ಥಾನದ ಮೇಲೆ ಕೇಂದ್ರೀಕರಿಸಬಹುದು ಅಥವಾ ಅಲುಗಾಡದ ಸಂಪೂರ್ಣ ನಿರ್ಣಾಯಕ ಅರಿವಿನೊಂದಿಗೆ ಅದನ್ನು ಗಮನಿಸಬಹುದು. ಮನಸ್ಸಿನ ಈ ಸ್ಥಿತಿಯನ್ನು ನಾವು ನಿಶ್ಚಲವಾದ ಧೃಡವಿಶ್ವಾಸ (mos-pa) ಎಂದೂ ಕರೆಯುತ್ತೇವೆ. ಅಶಾಶ್ವತತೆ, ಸ್ವಯಂ ಮತ್ತು ಇತರರ ಸಮಾನತೆ, ಇತರರನ್ನು ತನಗಿಂತ ಹೆಚ್ಚು ಅಮೂಲ್ಯವೆಂದು ಪರಿಗಣಿಸುವುದು, ಬೋಧಿಚಿತ್ತ, ಶೂನ್ಯತೆ ಇತ್ಯಾದಿಗಳಂತಹ ಯಾವುದೇ ವಿಷಯದ ಬಗ್ಗೆ ಏಕ ಮನಸ್ಸಿನಿಂದ ಧ್ಯಾನಿಸುವಾಗ, ನೀವು ಈ ಮನವರಿಕೆಯಾದ ಅರಿವು ಮತ್ತು ನಿಶ್ಚಲವಾದ ದೃಢವಿಶ್ವಾಸವನ್ನು ಹೊಂದಿರಬೇಕು. ವಿಶ್ಲೇಷಣಾತ್ಮಕ ಧ್ಯಾನದ ಮೂಲಕ ಅಥವಾ ಧರ್ಮದ ಬಗ್ಗೆ ಯೋಚಿಸುವ ಮೂಲಕ, ಈ ಮನವರಿಕೆಯನ್ನು ನೀವು ಏಕಾಂತದಲ್ಲಿ ಅಭಿವೃದ್ಧಿಪಡಿಸಲು ಪ್ರಯತ್ನಿಸಿದರೆ, ಉತ್ತಮ ತಿಳುವಳಿಕೆಯುಳ್ಳ ಸಹಪಾಠಿಗಳ ವ್ಯಾಪಕ ವರ್ಗವು, ನಿಮ್ಮೊಂದಿಗೆ ಚರ್ಚಿಸುವ ಮೂಲಕ ನಿಮ್ಮ ಮುಂದಿಡುವ ಬಹಳಷ್ಟು ಆಕ್ಷೇಪಣೆಗಳೊಂದಿಗೆ, ನಿಮ್ಮ ತಿಳುವಳಿಕೆಯನ್ನು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಇತರರು, ನಿಮ್ಮ ತರ್ಕದಲ್ಲಿನ ಅಸಂಗತತೆ ಅಥವಾ ತಪ್ಪುಗಳನ್ನು ನಿಮಗಿಂತಲೂ ಸುಲಭವಾಗಿ ಕಂಡುಕೊಳ್ಳಬಹುದು.
ಇದಲ್ಲದೆ, ಆರಂಭಿಕರಿಗೆ ಏಕಾಗ್ರತೆಯನ್ನು ಅಭಿವೃದ್ಧಿಪಡಿಸಲು ಧ್ಯಾನಕ್ಕಿಂತ ಹೆಚ್ಚಾಗಿ ಚರ್ಚೆಯು ಅನುಕೂಲಕರವಾದ ಪರಿಸ್ಥಿತಿಯನ್ನು ಒದಗಿಸಿಕೊಡುತ್ತದೆ. ಚರ್ಚೆಯಲ್ಲಿ, ನಿಮ್ಮ ಸಂಗಾತಿಯ ಸವಾಲುಗಳು ಮತ್ತು ಸಹಪಾಠಿಗಳು ಕೇಳುವ ಪ್ರಶ್ನೆಗಳ ಪ್ರಭಾವವು, ನಿಮ್ಮನ್ನು ಕೇಂದ್ರಿಕರಿಸುವಂತೆ ಹುರಿದುಂಬಿಸುತ್ತವೆ. ಏಕಾಂಗಿಯಾಗಿ ಧ್ಯಾನಿಸುವಾಗ, ಇಚ್ಛಾಶಕ್ತಿ ಮಾತ್ರ ನಿಮ್ಮನ್ನು ಮಾನಸಿಕವಾಗಿ ಅಲೆದಾಡುವುದರಿಂದ ಅಥವಾ ನಿದ್ರಿಸುವುದರಿಂದ ನಿಲ್ಲಿಸುತ್ತದೆ. ಜೊತೆಗೆ, ಸನ್ಯಾಸಿಗಳ ಚರ್ಚೆಯ ಮೈದಾನದಲ್ಲಿ, ಅನೇಕ ಚರ್ಚೆಗಳು, ಬಹಳಾ ಜೋರಾಗಿ, ಪಕ್ಕ ಪಕ್ಕದಲ್ಲೇ ನಡೆಯುತ್ತವೆ. ಇದು ಕೂಡ ನಿಮ್ಮನ್ನು ಕೇಂದ್ರೀಕರಿಸುವಂತೆ ಒತ್ತಾಯಿಸುತ್ತದೆ. ನಿಮ್ಮ ಸುತ್ತಲಿನ ಚರ್ಚೆಗಳು ನಿಮ್ಮನ್ನು ವಿಚಲಿತಗೊಳಿಸಿದರೆ ಅಥವಾ ನಿಮಗೆ ಕಿರಿಕಿರಿ ಉಂಟುಮಾಡಿದರೆ, ನೀವು ಕಳೆದುಹೋಗುತ್ತೀರಿ. ಚರ್ಚೆಯ ಮೈದಾನದಲ್ಲಿ ನೀವು ಏಕಾಗ್ರತೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದ ನಂತರ, ನೀವು ಅವುಗಳನ್ನು ಧ್ಯಾನಕ್ಕೆ ಅನ್ವಯಿಸಬಹುದು, ಗದ್ದಲದ ಸ್ಥಳಗಳಲ್ಲಿಯೂ ಧ್ಯಾನಿಸಬಹುದು.
ಇದಲ್ಲದೆ, ಚರ್ಚೆಯು ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ನೀವು ನಾಚಿಕೆಪಟ್ಟರೆ, ನಿಮಗೆ ಚರ್ಚಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಎದುರಾಳಿಯು ನಿಮಗೆ ಸವಾಲು ಹಾಕಿದಾಗ, ನೀವು ಮಾತನಾಡಲೇಬೇಕು. ಮತ್ತೊಂದೆಡೆ, ನೀವು ದುರಹಂಕಾರಿಯಾಗಿದ್ದರೆ ಅಥವಾ ಕೋಪಗೊಂಡರೆ, ನಿಮ್ಮ ಮನಸ್ಸು ಅಸ್ಪಷ್ಟವಾಗಿರುತ್ತದೆ ಮತ್ತು ನಿಮ್ಮ ಸಂಗಾತಿಯು ನಿಮ್ಮನ್ನು ಖಂಡಿತವಾಗಿ ಸೋಲಿಸುತ್ತಾರೆ. ಎಲ್ಲಾ ಸಮಯದಲ್ಲೂ, ನೀವು ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ನೀವು ಗೆಲ್ಲಲಿ, ಸೋಲಲಿ, ನೀವು ನಿರಾಕರಿಸಬೇಕಾದ "ನಾನು" ಎಂಬುದನ್ನು ಗುರುತಿಸಲು, ಚರ್ಚೆಯು ಅತ್ಯುತ್ತಮವಾದ ಅವಕಾಶವನ್ನು ಒದಗಿಸಿಕೊಡುತ್ತದೆ. "ನಾನು ಗೆದ್ದಿದ್ದೇನೆ; ನಾನು ಬಹಳಾ ಬುದ್ಧಿವಂತ," ಅಥವಾ "ನಾನು ಸೋತಿದ್ದೇನೆ; ನಾನು ಬಹಳಾ ದಡ್ಡ" ಎಂದು ನೀವು ಭಾವಿಸಿದಾಗ, ನೀವು ಗುರುತಿಸುವ ಘನವಾದ, ಸ್ವಯಂ-ಕೇಂದ್ರಿತವಾದ "ನಾನು" ಎಂಬುದರ ಪ್ರಕ್ಷೇಪಣವನ್ನು ನೀವು ಸ್ಪಷ್ಟವಾಗಿ ಗುರುತಿಸಬಹುದು. ಇದು ಸಂಪೂರ್ಣವಾಗಿ ಕಾಲ್ಪನಿಕವಾದ, ನಿರಾಕರಿಸಬೇಕಾದ "ನಾನು" ಆಗಿರುತ್ತದೆ.
ನಿಮ್ಮ ಚರ್ಚಾ ಸಂಗಾತಿಯ ಸ್ಥಾನವು ತರ್ಕಬದ್ಧವಾಗಿಲ್ಲ ಎಂದು ನೀವು ಸಾಬೀತುಪಡಿಸಿದಾಗಲೂ, ನೀವು ಬುದ್ಧಿವಂತರು ಮತ್ತು ಅವರು ದಡ್ಡರು ಎಂದು ಸಾಬೀತುಪಡಿಸುವುದಿಲ್ಲ ಎಂದು ನೀವು ನೆನಪಿಟ್ಟುಕೊಳ್ಳಬೇಕು. ನಿಮ್ಮ ಸಂಗಾತಿಗೆ, ತಾರ್ಕಿಕವಾಗಿ ಸಾಬೀತುಪಡಿಸಬಹುದಾದ ಸ್ಪಷ್ಟ ತಿಳುವಳಿಕೆ ಮತ್ತು ನಿಶ್ಚಲವಾದ ದೃಢವಿಶ್ವಾಸವನ್ನು ಅಭಿವೃದ್ಧಿಪಡಿಸುವಂತೆ ಸಹಾಯ ಮಾಡುವುದೇ ನಿಮ್ಮ ಪ್ರೇರಣೆಯಾಗಿರಬೇಕು.