ಬೌದ್ಧ ಬೋಧನೆಯನ್ನು ಪರೀಕ್ಷಿಸಲು ಇರುವ ನಾಲ್ಕು ಮೂಲತತ್ವಗಳು

ಒಂದು ಬೌದ್ಧ ಬೋಧನೆಯು ಅರ್ಥಪೂರ್ಣವಾಗಿದೆಯೇ ಎಂದು ಪರೀಕ್ಷಿಸಲು, ನಾವು ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ನಾವು ಉತ್ತಮ ಗುಣಮಟ್ಟವನ್ನು ಅಭಿವೃದ್ಧಿಪಡಿಸಲು ಬಯಸಿದರೆ, ನಾವು ಮುಂಚಿತವಾಗಿ ಏನು ಮಾಡಬೇಕೆಂಬುದನ್ನು ತಿಳಿಯಬೇಕು; ಒಮ್ಮೆ ಅದನ್ನು ಅಭಿವೃದ್ಧಿಪಡಿಸಿದ ನಂತರ, ಅದು ಹೇಗೆ ಸಹಾಯ ಮಾಡುತ್ತದೆ; ಈ ಪ್ರಯೋಜನಗಳು ತಾರ್ಕಿಕವಾದ ಅರ್ಥವನ್ನು ನೀಡುತ್ತವೆಯೇ; ಮತ್ತು ಅವು ವಿಷಯಗಳ ಮೂಲಭೂತ ಸ್ವಭಾವಕ್ಕೆ ಅನುಗುಣವಾಗಿರುತ್ತೇವೆಯೇ. ಬೋಧನೆಯು ಈ ಎಲ್ಲಾ ಮಾನದಂಡಗಳಲ್ಲಿ ತೇರ್ಗಡೆಯಾದರೆ, ಅದನ್ನು ಆಚರಣೆಗೆ ತರುವ ಬಗ್ಗೆ ನಾವು ವಿಶ್ವಾಸದಿಂದಿರಬಹುದು.

ಧರ್ಮಾಚರಣೆಯಲ್ಲಿನ ಯಶಸ್ಸು, ವಾಸ್ತವಿಕ ಮನೋಭಾವವನ್ನು ಅವಲಂಬಿಸಿರುತ್ತದೆ. ಇದರರ್ಥ, ವಿಷಯಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದಕ್ಕೆ ಅನುಗುಣವಾಗಿ, ಧರ್ಮದ ಬೋಧನೆಗಳನ್ನು ಪರೀಕ್ಷಿಸುವುದಾಗಿರುತ್ತದೆ. ಅಂತಹ ಪರೀಕ್ಷೆಗಳಿಗಾಗಿ, ಬುದ್ಧ, ಬೌದ್ಧ ಚಿಂತನೆಯಲ್ಲಿನ ಮೂಲಭೂತ ಊಹೆಗಳಾದ ನಾಲ್ಕು ಮೂಲತತ್ವಗಳನ್ನು (rigs-pa bzhi) ಕಲಿಸಿದರು. ನೆನಪಿರಲಿ, ಬುದ್ಧ ಹೀಗೆ ಹೇಳಿದರು, "ನಾನು ಬೋಧಿಸುವುದನ್ನು ಕೇವಲ ನಂಬಿಕೆ ಅಥವಾ ಗೌರವದಿಂದ ಸ್ವೀಕರಿಸಬೇಡಿ, ಬದಲಿಗೆ ಚಿನ್ನವನ್ನು ಖರೀದಿಸಿದಂತೆ ನೀವೇ ಪರಿಶೀಲಿಸಿ." 

ನಾಲ್ಕು ಮೂಲತತ್ವಗಳೆಂದರೆ: 

  • ಅವಲಂಬನೆ (ltos-pa’i rigs-pa
  • ಕ್ರಿಯಾತ್ಮಕತೆ (bya-ba byed-pa’i rigs-pa
  • ಕಾರಣದಿಂದ ಸ್ಥಾಪನೆ (tshad-ma’i rigs-pa
  • ವಿಷಯಗಳ ಸ್ವರೂಪ (chos-nyid-kyi rigs-pa). 

ಗ್ರಾಂಡ್ ಪ್ರೆಸೆಂಟೇಶನ್ ಆಫ್ ದಿ ಗ್ರೇಡೆಡ್ ಸ್ಟೇಜಸ್ ಆಫ್ ದಿ ಪಾತ್ (ಕ್ರಮವಾದ ಮಾರ್ಗದ ಹಂತಗಳ ಒಂದು ಅತ್ಯುಚ್ಚ ಪ್ರಸ್ತುತಿ) (ಲ್ಯಾಮ್-ರಿಮ್ ಚೆನ್-ಮೊ) ನಲ್ಲಿ ತ್ಸೋಂಗ್‌ಖಾಪಾ ಅವರು ಈ ನಾಲ್ಕನ್ನು ಹೇಗೆ ವಿವರಿಸುತ್ತಾರೆ ಎಂಬುದನ್ನು ನೋಡೋಣ. 

ಅವಲಂಬನೆಯ ತತ್ವ 

ಮೊದಲ ಮೂಲತತ್ವವೆಂದರೆ, ಕೆಲವು ವಿಷಯಗಳು, ಅವುಗಳ ಆಧಾರಕ್ಕಾಗಿ ಇತರ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತವೆ. ಇದು ಅವಲಂಬನೆಯ ಮೂಲತತ್ವವಾಗಿರುತ್ತದೆ. ಫಲಿತಾಂಶವು ಉದ್ಭವವಾಗಲು, ಅದು ಕಾರಣಗಳು ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿರಬೇಕು. ಇದು ನಾವೆಲ್ಲರೂ ಒಪ್ಪಿಕೊಳ್ಳಬಹುದಾದ ತತ್ವವಾಗಿರುತ್ತದೆ. ಇದರರ್ಥ ನಾವು ಒಂದು ವಿಷಯದ ಉತ್ತಮವಾದ ಗುಣಮಟ್ಟದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಬಯಸಿದರೆ, ಅದು ಏನನ್ನು ಅವಲಂಬಿಸಿದೆ ಎಂಬುದನ್ನು ನಾವು ಪರಿಶೀಲಿಸಬೇಕಾಗುತ್ತದೆ. ಅದರ ಆಧಾರವಾಗಿ ಕಾರ್ಯನಿರ್ವಹಿಸುವ ಯಾವುದನ್ನು ನಾವು ಮುಂಚಿತವಾಗಿ ಅಭಿವೃದ್ಧಿಪಡಿಸಬೇಕು? 

ಆಧ್ಯಾತ್ಮಿಕ ಸಾಧನೆಯ ಪ್ರತಿಯೊಂದು ಹಂತವು, ಅದರ ಆಧಾರವಾಗಿ ಇತರ ಸಾಧನೆಗಳು ಮತ್ತು ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ನಾವು ವಿವೇಚನಾತ್ಮಕ ಅರಿವನ್ನು ಅಥವಾ ಶೂನ್ಯತೆ ಅಥವಾ ವಾಸ್ತವತೆಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಬಯಸಿದರೆ, ಈ ತಿಳುವಳಿಕೆಯು ಏನನ್ನು ಅವಲಂಬಿಸಿರುತ್ತದೆ ಎಂಬುದನ್ನು ನಾವು ಪರಿಶೀಲಿಸಬೇಕು ಮತ್ತು ತಿಳಿದುಕೊಳ್ಳಬೇಕು. ಇದು ಏಕಾಗ್ರತೆಯನ್ನು ಅವಲಂಬಿಸಿರುತ್ತದೆ. ಏಕಾಗ್ರತೆ ಇಲ್ಲದೆ, ನಾವು ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಏಕಾಗ್ರತೆಯು ಯಾವ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ? ಇದು ಸ್ವಯಂ ಶಿಸ್ತನ್ನು ಅವಲಂಬಿಸಿರುತ್ತದೆ. ನಮ್ಮ ಗಮನವು ದಾರಿ ತಪ್ಪಿದಾಗ ಅದನ್ನು ಸರಿಪಡಿಸುವ ಶಿಸ್ತು ನಮ್ಮಲ್ಲಿಲ್ಲದಿದ್ದರೆ, ನಾವು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಶೂನ್ಯತೆಯ ವಿವೇಚನಾತ್ಮಕ ಅರಿವನ್ನು ನಾವು ಅಭಿವೃದ್ಧಿಪಡಿಸಲು ಬಯಸಿದರೆ, ಕನಿಷ್ಠಪಕ್ಷ ಸ್ವಲ್ಪ ಸ್ವಯಂ-ಶಿಸ್ತು ಮತ್ತು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ನಾವು ಮೊದಲು ಕೆಲಸ ಮಾಡಬೇಕಾಗುತ್ತದೆ. 

ಧರ್ಮವನ್ನು ಅಧ್ಯಯನ ಮಾಡುವಾಗ ಈ ಮೊದಲ ಮೂಲತತ್ವವನ್ನು ಅನ್ವಯಿಸುವುದು ಬಹಳ ಮುಖ್ಯ. ನಮ್ಮಲ್ಲಿ ಅನೇಕರು, ಧರ್ಮ ಪಠ್ಯಗಳಲ್ಲಿ ಓದುವ ಅದ್ಭುತವಾದ ವಿಷಯಗಳನ್ನು ಸಾಧಿಸಲು ಬಯಸುತ್ತೇವೆ, ಆದರೆ ನಾವು ನಮ್ಮ ಆಶಯಗಳ ಬಗ್ಗೆ ವಾಸ್ತವಿಕವಾಗಿರಲು ಬಯಸಿದ್ದಲ್ಲಿ, ಅವುಗಳ ಸಾಧನೆ ಏನನ್ನು ಅವಲಂಬಿಸಿರುತ್ತದೆ ಎಂಬುದನ್ನು ನಾವು ಪರಿಶೀಲಿಸಬೇಕಾಗುತ್ತದೆ. ನಮ್ಮ ಗುರಿಗಳನ್ನು ತಲುಪಲು ನಾವು ಏನನ್ನು ಅಭಿವೃದ್ಧಿಪಡಿಸಬೇಕು ಎಂದು ನಮಗೆ ತಿಳಿದಾಗ, ಅವುಗಳನ್ನು ಹೇಗೆ ತಲುಪಬೇಕು ಎಂಬುದು ನಮಗೆ ತಿಳಿಯುತ್ತದೆ. ನಂತರ, ನಾವು ಅಡಿಪಾಯದಿಂದ ಶುರುಮಾಡಿ, ಅದರ ಮೇಲೆ ನಿರ್ಮಿಸುತ್ತಾ ಹೋಗಬಹುದು. ಇದು ನಮ್ಮ ಅನ್ವೇಷಣೆಗಳನ್ನು ವಾಸ್ತವಿಕವಾಗಿಸುತ್ತದೆ. 

ಕ್ರಿಯಾತ್ಮಕತೆಯ ಮೂಲತತ್ವ 

ಎರಡನೆಯದು ಕ್ರಿಯಾತ್ಮಕತೆಯ ಮೂಲತತ್ವವಾಗಿರುತ್ತದೆ. ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುವ ಪ್ರತಿಯೊಂದು ವಿದ್ಯಮಾನವು ಅದರ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ. ಸುಡುವ ಕಾರ್ಯವನ್ನು ಬೆಂಕಿ ನಿರ್ವಹಿಸುತ್ತದೆ, ನೀರಲ್ಲ. ಇದು, ಬೌದ್ಧಧರ್ಮದಲ್ಲಿನ ಮತ್ತೊಂದು ಮೂಲಭೂತ ಊಹೆಯಾಗಿರುತ್ತದೆ, ಇದು ಒಂದು ಮೂಲತತ್ವವಾಗಿದ್ದು, ನಾವು ಒಪ್ಪಿಕೊಳ್ಳಬಹುದಾದ ವಿಷಯವಾಗಿರುತ್ತದೆ. ಧರ್ಮವನ್ನು ಅಧ್ಯಯನ ಮಾಡುವಲ್ಲಿ ಮತ್ತು ಕಲಿಯುವಲ್ಲಿ, ಇದರ ಅಥವಾ ಅದರ ಕಾರ್ಯನಿರ್ವಹಿಸುವಿಕೆಯನ್ನು ಪರಿಶೀಲಿಸಲು, ನಾವು ಇದನ್ನು ಅನ್ವಯಿಸುತ್ತೇವೆ. ಪ್ರೀತಿ ಮತ್ತು ಏಕಾಗ್ರತೆಯಂತಹ ಕೆಲವು ನಿರ್ದಿಷ್ಟ ಮನಸ್ಥಿತಿ ಅಥವಾ ಭಾವನೆಗಳನ್ನು ನಾವು ಬೆಳೆಸಿಕೊಳ್ಳಬೇಕೆಂದೂ, ಗೊಂದಲ ಅಥವಾ ಕೋಪದಂತಹ ಭಾವನೆಗಳನ್ನು ನಮ್ಮಿಂದ ತೊಡೆದುಹಾಕಬೇಕೆಂದೂ, ಇತರ ವಿಷಯಗಳನ್ನು ಸೇರಿಸಿದಂತೆ, ನಮಗೆ ಸೂಚನೆಗಳನ್ನು ನೀಡಲಾಗುತ್ತದೆ. ಅನುಸರಿಸಬೇಕಾದ ಕೆಲವು ವಿಧಾನಗಳನ್ನು ಸಹ ನಮಗೆ ಕಲಿಸಲಾಗುತ್ತದೆ. ವಿಧಾನಗಳನ್ನು ಅರ್ಥಮಾಡಿಕೊಳ್ಳಲು, ಅವುಗಳು ಏನು ಮಾಡುತ್ತವೆ, ಅವುಗಳ ಕಾರ್ಯಗಳು ಏನು ಎಂಬುದನ್ನು ನಾವು ಪರಿಶೀಲಿಸಬೇಕು. ಕೆಲವು ವಿಷಯಗಳು ಹೊಂದಾಣಿಕೆಯಾಗುವುದರಿಂದ ಮತ್ತು ಇತರವುಗಳು ಹೊಂದಾಣಿಕೆಯಾಗದೇ ಇರುವುದರಿಂದ, ಕೆಲವು ನಿರ್ದಿಷ್ಟ ಮನಸ್ಥಿತಿಗಳು, ಇತರ ಸ್ಥಿತಿಗಳನ್ನು ಹೆಚ್ಚಿಸಲು ಅಥವಾ ಉತ್ತಮಗೊಳಿಸಲು ಕಾರ್ಯನಿರ್ವಹಿಸುತ್ತವೆ.

ಉದಾಹರಣೆಗೆ, ಪ್ರೀತಿಯನ್ನು ಅಭಿವೃದ್ಧಿಪಡಿಸಲು ಇರುವ ನಿರ್ದಿಷ್ಟವಾದ ಧ್ಯಾನದ ವಿಧಾನದ ಪರಿಶೀಲನೆ ಮತ್ತು ಅನುಭವವು, ಅದರಲ್ಲಿನ ನಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ನಾವು, "ಇದು ಸರಿಯೇ ಅಥವಾ ಇಲ್ಲವೇ?" ಎಂಬುದನ್ನು ಪರಿಶೀಲಿಸುತ್ತೇವೆ, ತದನಂತರ ನಾವು ಅದರ ಅನುಭವವನ್ನು ಪಡೆಯಲು ಪ್ರಯತ್ನಿಸುತ್ತೇವೆ. ಈ ಕಾರ್ಯದ ಕಾರಣವು, ಈ ವಿಧಾನದ ಬಗ್ಗೆ ನಮ್ಮಲ್ಲಿ ವಿಶ್ವಾಸವನ್ನು ಮೂಡಿಸುವುದಾಗಿರುತ್ತದೆ. ಅಭ್ಯಾಸದ ವಿಧಾನವು ಸರಿಯಾಗಿದೆ ಮತ್ತು ಅದು ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸದ ಕೆಲಸವೇನು? ಇದು ಆಳವಾಗಿ ಅಭ್ಯಾಸ ಮಾಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ವಿಶ್ವಾಸವಿಲ್ಲದಿದ್ದರೆ, ನಾವು ಅದನ್ನು ಅಭ್ಯಾಸ ಮಾಡುವುದಿಲ್ಲ. ಪ್ರತಿಯೊಂದು ಹಂತದ ಕಾರ್ಯವನ್ನು ನಾವು ಅರ್ಥಮಾಡಿಕೊಂಡರೆ, ನಾವು ಪ್ರತಿಯೊಂದರಲ್ಲಿ ಮನಸ್ಸಿಟ್ಟು ಕಾರ್ಯನಿರ್ವಹಿಸುತ್ತೇವೆ. ನಮಗೆ ಅರ್ಥವಾಗದಿದ್ದರೆ, ನಾವು ಯಾವುದನ್ನೂ ಮಾಡುವುದಿಲ್ಲ. 

ಇದಲ್ಲದೆ, ಒಂದು ವಿಷಯದ ಹಾನಿಯುಂಟುಮಾಡುವ ಅಥವಾ ಇನ್ನೊಂದನ್ನು ಎದುರಿಸುವ ಕಾರ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, ಒಂದು ವಿಧಾನದಲ್ಲಿನ ವಿಶ್ವಾಸವು, ಆ ವಿಧಾನದ ಬಗೆಗಿರುವ ನಿರ್ಣಯಿಸದಿರುವಿಕೆಯನ್ನು ನಾಶಪಡಿಸುತ್ತದೆ. ಒಂದು ವಿಧಾನದಲ್ಲಿನ ಅಥವಾ ಅದನ್ನು ಅನುಸರಿಸುವ ನಮ್ಮ ಸಾಮರ್ಥ್ಯಗಳಲ್ಲಿನ ವಿಶ್ವಾಸದ ಕೊರತೆಯು, ಯಶಸ್ವಿಯಾಗುವುದರಿಂದ ಅಥವಾ ಅದನ್ನು ಯಾವುದೇ ಮಟ್ಟದಲ್ಲಿ ಪ್ರಯತ್ನಿಸುವುದರಿಂದ ನಮ್ಮನ್ನು ತಡೆಯುತ್ತದೆ. 

ನಾವು ಕಲಿಯುವ ಪ್ರತಿಯೊಂದು ವಿಷಯ ಮತ್ತು ತೆಗೆದುಕೊಳ್ಳುವ ಪ್ರತಿಯೊಂದು ಅಭ್ಯಾಸದ ಹೆಜ್ಜೆಯು ಏನನ್ನು ಬಲಪಡಿಸುತ್ತದೆ ಮತ್ತು ಏನನ್ನು ನಾಶಪಡಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗ ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ವಾಸ್ತವಿಕವಾದ ಮನೋಭಾವವಿರುತ್ತದೆ. ಉದಾಹರಣೆಗೆ, ಪ್ರೀತಿಯಂತಹ ಸಕಾರಾತ್ಮಕ ಮನಸ್ಥಿತಿ ಅಥವಾ ಮನೋಭಾವವನ್ನು ನಾವು ಏಕೆ ಅಭಿವೃದ್ಧಿಪಡಿಸಲು ಬಯಸುತ್ತೇವೆ? ಒಂದು ಮಾನ್ಯವಾದ ಕಾರಣವೆಂದರೆ ಅದು ಮನಸ್ಸಿನ ಶಾಂತಿಯನ್ನು ಕರೆತರುತ್ತದೆ ಮತ್ತು ಇತರರಿಗೆ ಸಹಾಯ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಕೋಪದಂತಹ ಒಂದು ನಕಾರಾತ್ಮಕ ಮನಸ್ಥಿತಿಯನ್ನು ನಾವು ಏಕೆ ನಿವಾರಿಸಲು ಬಯಸುತ್ತೇವೆ? ಅದು ಏನು ಮಾಡುತ್ತದೆ ಎಂಬ ಕಾರಣದಿಂದಾಗಿ: ಅದು ಇತರರಿಗೆ ಮತ್ತು ನಮಗೆ ತೊಂದರೆ ನೀಡುತ್ತದೆ. ಧೂಮಪಾನ ವ್ಯಸನಿಯಾಗುವಂತಹ ವಿನಾಶಕಾರಿ ನಡವಳಿಕೆಯನ್ನು ನಿಲ್ಲಿಸಲು ನಾವು ಬಯಸಿದಾಗ, ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಧೂಮಪಾನದ ಕ್ರಿಯೆಯು, ನಮ್ಮ ಶ್ವಾಸಕೋಶಗಳಿಗೆ ಏನು ಮಾಡುತ್ತದೆ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಂಡರೆ, ನಾವು ಅದನ್ನು ಏಕೆ ನಿಲ್ಲಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ. ನಾವು ಕ್ರಿಯಾತ್ಮಕತೆಯ ಮೂಲತತ್ವವನ್ನು ಹೀಗೆ ಅನ್ವಯಿಸುತ್ತೇವೆ. 

ಕಾರಣದಿಂದಾಗುವ ಸ್ಥಾಪನೆಯ ಮೂಲತತ್ವ 

ಮೂರನೆಯದು, ಕಾರಣದಿಂದಾಗುವ ಸ್ಥಾಪನೆಯ ತತ್ವವಾಗಿರುತ್ತದೆ. ಇದರರ್ಥ, ಒಂದು ವಿಷಯವನ್ನು, ತಿಳುವಳಿಕೆಯ ಒಂದು ಮಾನ್ಯವಾದ ಸಾಧನವು ವಿರೋಧಿಸದಿದ್ದರೆ, ಅದನ್ನು ಸ್ಥಾಪಿಸಲಾಗಿದೆ ಅಥವಾ ಸಾಬೀತುಪಡಿಸಲಾಗಿದೆ ಎಂದು ಒಪ್ಪಿಕೊಳ್ಳಲಾಗುತ್ತದೆ. ಮೊದಲು, ನಾವು ಧರ್ಮದ ಹೆಸರಲ್ಲಿ ಕಲಿಯುವುದೆಲ್ಲವನ್ನೂ, ಧರ್ಮಗ್ರಂಥದ ಅಧಿಕಾರವು ವಿರೋಧಿಸುತ್ತದೆಯೇ ಎಂದು ಪರಿಶೀಲಿಸಬೇಕಾಗಿದೆ. ಒಂದು ಬೋಧನೆಯು, ಧರ್ಮ ಬೋಧನೆಯಾಗಿದೆ ಎಂದು ತಿಳಿಯುವುದು ಹೇಗೆ? ಅದು ಬುದ್ಧನ ಬೋಧನೆಗೆ ಅನುಗುಣವಾದಾಗ. ಬುದ್ಧನು ವಿವಿಧ ಶಿಷ್ಯರಿಗೆ ವಿವಿಧ ವಿಷಯಗಳನ್ನು ಕಲಿಸಿದ್ದರಿಂದ, ಇದು ಮೇಲ್ನೋಟಕ್ಕೆ ವಿರೋಧಾಭಾಸವೆಂದು ತೋರಬಹುದು, ಬುದ್ಧನ ಆಳವಾದ ಉದ್ದೇಶವನ್ನು ನಾವು ಹೇಗೆ ತಾನೆ ತಿಳಿಯಲು ಸಾಧ್ಯ? ಬುದ್ಧನ ಬೋಧನೆಯಲ್ಲಿ, ಒಂದು ಬೋಧನೆಯು ಪುನರಾವರ್ತಿತ ವಿಷಯವಾಗಿ ಕಾಣಿಸಿಕೊಂಡರೆ, ಬುದ್ಧನು ಅದನ್ನು ನಿಜವಾಗಿಯೂ ಅರ್ಥೈಸಿದನು ಎಂದು ನಮಗೆ ತಿಳಿಯುತ್ತದೆ ಎಂದು ಭಾರತೀಯ ಗುರುವಾದ ಧರ್ಮಕೀರ್ತಿ ಅವರು ವಿವರಿಸಿದರು. ವಿಶೇಷವಾಗಿ, ನೈತಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಇದು ಬಹಳಾ ಮುಖ್ಯವಾಗಿರುತ್ತದೆ. 

ಒಂದು ವಿಷಯವನ್ನು ಮಾನ್ಯವಾಗಿ ತಿಳಿದುಕೊಳ್ಳುವ ಎರಡನೆಯ ವಿಧಾನವು ತರ್ಕ ಮತ್ತು ತೀರ್ಮಾನವಾಗಿರುತ್ತದೆ. ಇದು ತಾರ್ಕಿಕವಾಗಿ ಧೃಡವಾಗಿದೆಯೇ ಅಥವಾ ತರ್ಕವು ಇದನ್ನು ವಿರೋಧಿಸುತ್ತದೆಯೇ? ಇದು ಸಾಮಾನ್ಯ ಅರ್ಥವನ್ನು ಹೊಂದಿದೆಯೇ ಅಥವಾ ಇದು ಸಂಪೂರ್ಣವಾಗಿ ವಿಚಿತ್ರವಾಗಿದೆಯೇ? ಮೂರನೇ ಮಾನ್ಯವಾದ ಮಾರ್ಗವು ನೇರವಾದ ಅರಿವಾಗಿರುತ್ತದೆ. ನಾವು ನಿಜವಾಗಿಯೂ ಧ್ಯಾನಿಸಿದಾಗ, ನಮ್ಮ ಅನುಭವವು ಅದನ್ನು ವಿರೋಧಿಸುತ್ತದೆಯೇ ಅಥವಾ ದೃಢೀಕರಿಸುತ್ತದೆಯೇ? 

ಈ ಮೂಲತತ್ವವನ್ನು ಹೇಗೆ ಅನ್ವಯಿಸಬೇಕು ಎಂಬುದರ ಉದಾಹರಣೆಯನ್ನು ನೋಡೋಣ. ಒಂದು ನಿರ್ದಿಷ್ಟ ಎದುರಾಳಿಯನ್ನು ಅನ್ವಯಿಸುವುದರಿಂದ, ಅದು ಒಂದು ನಿರ್ದಿಷ್ಟ ನ್ಯೂನತೆ ಅಥವಾ ಸಮಸ್ಯೆಯನ್ನು ನಿವಾರಿಸುತ್ತದೆ ಎಂಬ ಬೋಧನೆಯನ್ನು ನಾವು ಸ್ವೀಕರಿಸಬಹುದು, ಉದಾಹರಣೆಗೆ, "ಪ್ರೀತಿಯು ಕೋಪವನ್ನು ಜಯಿಸುತ್ತದೆ." ಮೊದಲಿಗೆ, ಬುದ್ಧನು ಕಲಿಸಿದ ವಿಷಯದೊಂದಿಗೆ ಇದು ಸಮಂಜಸವಾಗಿದೆ ಎಂದು ನಾವು ಪರಿಗಣಿಸುತ್ತೇವೆಯೇ? ಹೌದು, ಬುದ್ಧ ಬೋಧಿಸಿದ ಯಾವುದಕ್ಕೂ ಇದು ವಿರುದ್ಧವಾಗಿಲ್ಲ. 

ಇದು ತಾರ್ಕಿಕವಾಗಿ ಸರಿಯಾಗಿದೆಯೇ? ಹೌದು, ಪ್ರೀತಿ ಎಂದರೆ ಇತರರು ಸಂತೋಷವಾಗಿರಬೇಕೆಂಬ ಬಯಕೆ. ನನಗೆ ಹಾನಿಯುಂಟುಮಾಡುವ ಮತ್ತು ನಾನು ಕೋಪಗೊಂಡಿರುವ ಈ ಇನ್ನೊಬ್ಬ ವ್ಯಕ್ತಿಯು ಈ ರೀತಿಯಾಗಿ ಏಕೆ ವರ್ತಿಸುತ್ತಿದ್ದಾರೆ? ಈ ವ್ಯಕ್ತಿಯು, ಈ ರೀತಿಯ ಕೆಟ್ಟ ಕೃತ್ಯಗಳನ್ನು ಏಕೆ ಮಾಡುತ್ತಾರೆ ಎಂದರೆ, ಅವರು ಅಸಂತೋಷವಾಗಿದ್ದಾರೆ; ಈ ವ್ಯಕ್ತಿಯು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಅಸಮಾಧಾನಗೊಂಡಿದ್ದಾರೆ. ಈ ವ್ಯಕ್ತಿಯ ಮೇಲೆ ನನಗೆ ಪ್ರೀತಿ ಇದ್ದರೆ, ಅವರು ಸಂತೋಷವಾಗಿರಬೇಕೆಂದು ನಾನು ಬಯಸುತ್ತಿದ್ದೆ; ಈ ವ್ಯಕ್ತಿಯು ಅಸಮಾಧಾನಗೊಳ್ಳಬಾರದು ಮತ್ತು ದುಃಖಿತನಾಗಬಾರದು ಎಂದು ನಾನು ಬಯಸುತ್ತೇನೆ. ಅಂತಹ ಮನೋವೃತ್ತಿಯು, ಆ ವ್ಯಕ್ತಿಯೊಂದಿಗೆ ಕೋಪಗೊಳ್ಳುವುದನ್ನು ತಡೆಯುತ್ತದೆ, ಅಲ್ಲವೇ? ಇದು ಸಂಪೂರ್ಣವಾಗಿ ತಾರ್ಕಿಕವಾಗಿದೆ. ಈ ವ್ಯಕ್ತಿಯು ಬಹಳಷ್ಟು ಹಾನಿಯನ್ನುಂಟುಮಾಡುತ್ತಿದ್ದರೆ, ಅವರು ಅದನ್ನು ಮಾಡುವುದನ್ನು ನಿಲ್ಲಿಸಬೇಕೆಂದು ನಾನು ಬಯಸಿದರೆ, ನಾನು ನನ್ನ ಪ್ರೀತಿಯನ್ನು ವಿಸ್ತರಿಸಬೇಕಾಗಿದೆ. ಆ ವ್ಯಕ್ತಿಯು ಸಂತೋಷವಾಗಿರಬೇಕೆಂದು ನಾನು ಬಯಸಬೇಕು, ಏಕೆಂದರೆ ಅವರು ಸಂತೋಷವಾಗಿದ್ದರೆ, ಅವರು ಈ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ. ಈ ವ್ಯಕ್ತಿಯ ಮೇಲೆ ಕೋಪಗೊಳ್ಳುವುದರಿಂದ ಅವರು ನನಗೆ ಹಾನಿಯನ್ನುಂಟುಮಾಡುವುದನ್ನು ನಿಲ್ಲಿಸುವುದಿಲ್ಲ. ಈ ಬೋಧನೆಯು ತಾರ್ಕಿಕವಾಗಿ ಅರ್ಥವನ್ನು ಹೊಂದಿರುತ್ತದೆ. 

ಕೊನೆಯದಾಗಿ, ನಾವು ನೇರವಾದ ಅರಿವಿನೊಂದಿಗೆ ಅಥವಾ ಧ್ಯಾನದ ಅನುಭವದೊಂದಿಗೆ ಪರಿಶೀಲಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅದು ಕಾರ್ಯನಿರ್ವಹಿಸುತ್ತದೆಯೇ ಎಂದು ನೋಡಲು ನಾವು ಅದನ್ನು ಪ್ರಯತ್ನಿಸುತ್ತೇವೆ. ನಾನು ಪ್ರೀತಿಯ ಬಗ್ಗೆ ಧ್ಯಾನಿಸಿದರೆ ಅದು ನನ್ನ ಕೋಪವನ್ನು ಕಡಿಮೆ ಮಾಡುತ್ತದೆಯೇ? ಹೌದು, ಅದು ಹಾಗೆ ಮಾಡುತ್ತದೆ. ಅದು, ಒಂದು ವಿಷಯವು ಸಮಂಜಸವಾದ ಬೋಧನೆಯೇ ಎಂಬುದಕ್ಕಾಗಿ ಇರುವ ಮೂರನೇ ಪರೀಕ್ಷೆಯಾಗಿರುತ್ತದೆ. ಹೀಗೆ, ಕಾರಣದಿಂದಾಗುವ ಸ್ಥಾಪನೆಯ ಮೂಲತತ್ವವನ್ನು ನಾವು ಅನ್ವಯಿಸುತ್ತೇವೆ. 

ವಸ್ತುಗಳ ಸ್ವರೂಪದ ಮೂಲತತ್ವ 

ಕೊನೆಯದು, ವಸ್ತುಗಳ ಸ್ವಭಾವದ ಮೂಲತತ್ವ. ಬೆಂಕಿಯು ಬಿಸಿಯಾಗಿರುವುದು ಮತ್ತು ನೀರು ತೇವದಿಂದ ಕೂಡಿರುವಂತಹ ಬಹಳಷ್ಟು ಸಂಗತಿಗಳು ವಸ್ತುಗಳ ಸ್ವರೂಪವಾಗಿರುತ್ತವೆ ಎಂಬುದು ಈ ಮೂಲತತ್ವವಾಗಿರುತ್ತದೆ. ಬೆಂಕಿ ಏಕೆ ಬಿಸಿಯಾಗಿರುತ್ತದೆ ಮತ್ತು ನೀರು ಏಕೆ ತೇವವಾಗಿರುತ್ತದೆ? ಏಕೆಂದರೆ, ವಿಷಯಗಳು ಇರುವುದೇ ಹಾಗೆ. ಧರ್ಮದೊಳಗೆ, ‘ಎಲ್ಲಾ ಜೀವಿಗಳು ಸಂತೋಷವಾಗಿರಲು ಬಯಸುತ್ತಾರೆ ಮತ್ತು ಯಾರೂ ಅಸಂತೋಷವಾಗಿರಲು ಬಯಸುವುದಿಲ್ಲ’ ಎಂಬಂತಹ ವಿಷಯಗಳ ಸ್ವಭಾವವು ನಿಜವೇ ಇಲ್ಲವೇ ಎಂದು ನಾವು ಪರಿಶೀಲಿಸಬೇಕಾಗಿದೆ. ಏಕೆ? ವಿಷಯ ಇರುವುದೇ ಹಾಗೆ. ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳಿ. ವಿನಾಶಕಾರಿ ನಡವಳಿಕೆಯಿಂದ ಅಸಂತೋಷ ಮತ್ತು ರಚನಾತ್ಮಕ ನಡವಳಿಕೆಯಿಂದ ಸಂತೋಷ ಉಂಟಾಗುತ್ತದೆ. ಏಕೆ? ಇದು ವಿಶ್ವವೇ ಕಾರ್ಯನಿರ್ವಹಿಸುವ ವಿಧಾನವಾಗಿದೆ. ಇದನ್ನು ಬುದ್ಧ ಈ ರೀತಿಯಾಗಿ ಸೃಷ್ಟಿಸಿಲ್ಲ; ಅದು ಇರುವ ರೀತಿಯೇ ಹೀಗೆ. ನಾವು ಪರಿಶೀಲಿಸಿದ ನಂತರ, ಕೆಲವು ವಿಷಯಗಳು ಒಂದು ನಿರ್ದಿಷ್ಟ ರೀತಿಯಲ್ಲಿಯೇ ಇರುತ್ತವೆ ಎಂದು ನಾವು ಕಂಡುಕೊಂಡರೆ, ನಾವು ಅವುಗಳನ್ನು ಜೀವನದ ಸತ್ಯಗಳೆಂದು ಒಪ್ಪಿಕೊಳ್ಳಬೇಕು. ಅವುಗಳ ಬಗ್ಗೆ ನಾವು ಅತೀವವಾಗಿ ಯೋಚಿಸುವುದರಿಂದ ನಮ್ಮ ಸಮಯ ವ್ಯರ್ಥವಾಗುತ್ತದೆ. 

ಧರ್ಮಾಚರಣೆಯೊಂದಿಗೆ, ವಿಷಯಗಳ ಸ್ವರೂಪಕ್ಕೆ ಸಂಬಂಧಿಸಿದ ಒಂದು ಬಹಳಾ ಸಮಂಜಸವಾದ ಅಂಶವೆಂದರೆ, ಸಂಸಾರವು ಮೇಲಕ್ಕೆ-ಕೆಳಕ್ಕೆ ಹೋಗುತ್ತಿರುತ್ತದೆ. ಇದು ಅದೃಷ್ಟ ಮತ್ತು ದುರದೃಷ್ಟಕರ ಪುನರ್ಜನ್ಮಗಳನ್ನು ಸೂಚಿಸುವುದಲ್ಲದೆ, ನಮ್ಮ ದೈನಂದಿನ ಜೀವನದಲ್ಲಿ, ಕ್ಷಣಕ್ಷಣಕ್ಕೂ ಅನ್ವಯವಾಗುತ್ತದೆ. ನಮ್ಮ ಮನಸ್ಥಿತಿಗಳು ಮತ್ತು ನಾವು ಏನಾದರೂ ಮಾಡಬೇಕೆಂಬ ಅನಿಸಿಕೆ, ಮೇಲಕ್ಕೆ-ಕೆಳಕ್ಕೆ ಹೋಗುತ್ತಿರುತ್ತದೆ. ನಾವು ಅದನ್ನು ಒಪ್ಪಿಕೊಂಡರೆ, ನಾವು ಅದರ ಬಗ್ಗೆ ಅಸಮಾಧಾನಗೊಳ್ಳುವುದಿಲ್ಲ. ಸಂಸಾರದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ? ಸಹಜವಾಗಿ, ಕೆಲವು ದಿನ ನಮ್ಮ ಧ್ಯಾನವು ಚೆನ್ನಾಗಿ ನಡೆಯುತ್ತದೆ ಮತ್ತು ಕೆಲವು ದಿನ ಅದು ಚೆನ್ನಾಗಿ ನಡೆಯುವುದಿಲ್ಲ. ಕೆಲವು ದಿನ, ನಾನು ಅಭ್ಯಾಸ ಮಾಡಬೇಕೆಂದು ಅನಿಸುತ್ತದೆ, ಇತರ ದಿನಗಳಲ್ಲಿ ಹಾಗೆನಿಸುವುದಿಲ್ಲ. ಇದು ದೊಡ್ಡ ವಿಷಯವೇನಲ್ಲ! ವಿಷಯಗಳು ಇರುವುದೇ ಹೀಗೆ. ಅದನ್ನು ಬಿಟ್ಟುಬಿಡಿ ಮತ್ತು ಅದರಿಂದ ಅಸಮಾಧಾನಗೊಳ್ಳಬೇಡಿ. ಇದು ಬಹಳ ಮುಖ್ಯ. 

ನಾವು ಧರ್ಮವನ್ನು ವಾಸ್ತವಿಕ ರೀತಿಯಲ್ಲಿ ಸಮೀಪಿಸಲು ಬಯಸಿದರೆ, ಬುದ್ಧ ಬೋಧಿಸಿದ ಈ ನಾಲ್ಕು ಅಂಶಗಳು ಬಹಳ ಸಹಾಯಕವಾಗಿರುತ್ತವೆ. ಅವುಗಳ ಬಗೆಗಿನ ನಮ್ಮ ತಿಳುವಳಿಕೆಯನ್ನು ಮತ್ತು ನಾವು ಕಲಿಯುವ ಬೋಧನೆಗಳಿಗೆ ಅವುಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ದೃಢೀಕರಿಸಲು, ನಮ್ಮ ದೇಹದಿಂದ ನಿರ್ಲಿಪ್ತರಾಗುವ ಒಂದು ಉದಾಹರಣೆಯನ್ನು ವಿಶ್ಲೇಷಿಸೋಣ. 

  1. ಈ ನಿರ್ಲಿಪ್ತತೆಯ ಬೆಳವಣಿಗೆಯು ಏನನ್ನು ಅವಲಂಬಿಸಿರುತ್ತದೆ? ಇದು ಅಶಾಶ್ವತತೆ, ಪುನರ್ಜನ್ಮ, ಸ್ವಯಂ ಹೇಗೆ ಅಸ್ತಿತ್ವದಲ್ಲಿದೆ, ದೇಹ, ಮನಸ್ಸು ಮತ್ತು ಸ್ವಯಂ ನಡುವಿನ ಸಂಬಂಧ ಇತ್ಯಾದಿಯನ್ನು ಅವಲಂಬಿಸಿರುತ್ತದೆ. 
  2. ನಮ್ಮ ದೇಹದಿಂದ ನಿರ್ಲಿಪ್ತರಾಗುವುದನ್ನು ಅಭಿವೃದ್ಧಿಪಡಿಸುವ ಉದ್ದೇಶವೇನು? ನಾವು ಅನಾರೋಗ್ಯಕ್ಕೆ ಒಳಗಾದಾಗ, ವಯಸ್ಸಾದಾಗ ಅಥವಾ ಮುಪ್ಪಾದಾಗ, ಅಸಮಾಧಾನ ಮತ್ತು ಕೋಪಗೊಳ್ಳದಿರಲು ಇದು ನಮಗೆ ಸಹಾಯ ಮಾಡುತ್ತದೆ. 
  3. ಇದು ಕಾರಣದಿಂದ ಸ್ಥಾಪಿಸಲ್ಪಟ್ಟಿದೆಯೇ? ಹೌದು, ದೇಹದಿಂದ ನಿರ್ಲಿಪ್ತರಾಗುವುದು, ದುಃಖದ ಕಾರಣಗಳಲ್ಲಿ ಒಂದಾದ, ಅಸ್ಥಿರವಾದ ವಿಷಯಗಳೊಂದಿಗೆ ಗುರುತಿಸಿಕೊಳ್ಳುವುದರ ಮೇಲೆ ಬೆಳೆಯುವ ಬಾಂಧವ್ಯವನ್ನು ನಿವಾರಿಸುತ್ತದೆ ಎಂದು ಬುದ್ಧ ಕಲಿಸಿದರು. ಇದು ತಾರ್ಕಿಕವಾಗಿದೆಯೇ? ಹೌದು, ಏಕೆಂದರೆ ದೇಹವು ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತದೆ ಮತ್ತು ಅದಕ್ಕೆ ವಯಸ್ಸಾಗುತ್ತದೆ. ನಾವು ಅದರ ಕಾರ್ಯವನ್ನು ಅನುಭವಿಸುತ್ತೇವೆಯೇ? ಹೌದು, ನಾವು ನಿರ್ಲಿಪ್ತತೆಯನ್ನು ಬೆಳೆಸಿಕೊಂಡಂತೆ, ನಾವು ಕಡಿಮೆ ಅಸಂತೋಷ‍ ಮತ್ತು ಸಮಸ್ಯೆಗಳನ್ನು ಅನುಭವಿಸುತ್ತೇವೆ ಎಂದು ನಾವು ಗಮನಿಸುತ್ತೇವೆ. 
  4. ವಸ್ತುಗಳ ಸ್ವರೂಪದ ವಿಷಯವಾಗಿ ಏನು ಹೇಳಬಹುದು? ನಾನು ನನ್ನ ದೇಹದಿಂದ ನಿರ್ಲಿಪ್ತನಾಗುವುದರ ಮೇಲೆ ಧ್ಯಾನಿಸಿದರೆ, ನನ್ನ ಸಂತೋಷವು ಪ್ರತಿದಿನ ಬಲಗೊಳ್ಳುತ್ತದೆಯೇ? ಇಲ್ಲ, ಹಾಗಾಗುವುದಿಲ್ಲ. ಇದು ಸಂಸಾರ; ಇದು ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತಿರುತ್ತದೆ. ಅಂತಿಮವಾಗಿ, ದೀರ್ಘಾವಧಿಯ ದೃಷ್ಟಿಕೋನದಿಂದ, ನಾನು ಸಂತೋಷವಾಗಿರಬಹುದು ಮತ್ತು ನನ್ನ ಜೀವನವು ಉತ್ತಮಗೊಳ್ಳಬಹುದು, ಆದರೆ ಇದು ರೇಖೀಯ ಶೈಲಿಯಲ್ಲಿ ಸಂಭವಿಸುವುದಿಲ್ಲ. ಅದು ವಸ್ತುಗಳ ಸ್ವಭಾವವಾಗಿರುವುದಿಲ್ಲ. 

ಸಾರಾಂಶ 

ನಮ್ಮ ದೇಹದಿಂದ ನಿರ್ಲಿಪ್ತರಾಗುವ ಬೆಳವಣಿಗೆಯ ಬೋಧನೆಯನ್ನು ಪರಿಶೀಲಿಸಲು ನಾಲ್ಕು ಮೂಲತತ್ವಗಳನ್ನು ಅನ್ವಯಿಸುವ ಮೂಲಕ, ಅದನ್ನು ಹೇಗೆ ಸಮೀಪಿಸಬೇಕೆಂಬುದರ ಬಗ್ಗೆ ನಾವು ವಾಸ್ತವಿಕ ಮನೋಭಾವವನ್ನು ಬೆಳೆಸಿಕೊಳ್ಳುತ್ತೇವೆ ಎಂಬುದನ್ನು ನಾವು ನೋಡಬಹುದು. ಆದ್ದರಿಂದ, "ನಂಬಿಕೆ ಅಥವಾ ಗೌರವದಿಂದ ನಾನು ಕಲಿಸುವುದನ್ನು ನಂಬಬೇಡಿ, ಆದರೆ ಚಿನ್ನವನ್ನು ಖರೀದಿಸುವಂತೆ ಅದನ್ನು ಪರಿಶೀಲಿಸಿ”, ಎಂದು ಬುದ್ದ ಹೇಳಿದಾಗ, ನಾಲ್ಕು ಮೂಲತತ್ವಗಳನ್ನು ಅನ್ವಯಿಸುವ ಮೂಲಕ, ಅವುಗಳನ್ನು ಪರಿಶೀಲಿಸಿ ಎಂಬುದು ಅವರ ಮಾತಿನ ಅರ್ಥವಾಗಿರುತ್ತದೆ.

Top