ಅಲೆಕ್ಸಾಂಡರ್ ಬರ್ಜಿನ್ ಯಾರು?

ಅಲೆಕ್ಸಾಂಡರ್ ಬರ್ಜಿನ್ (ಜನನ 1944) ಅಮೆರಿಕದ ನ್ಯೂಜೆರ್ಸಿಯಲ್ಲಿ ಬೆಳೆದರು. ಅವರು 1962 ರಲ್ಲಿ ರಟ್ಜರ್ಸ್ ಮತ್ತು ನಂತರ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಗಳಲ್ಲಿ ಬೌದ್ಧಧರ್ಮದ ಅಧ್ಯಯನವನ್ನು ಪ್ರಾರಂಭಿಸಿದರು ಮತ್ತು 1972 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಭಾರತೀಯ ಅಧ್ಯಯನ ಮತ್ತು ದೂರದ ಪೂರ್ವ ಭಾಷೆಗಳು (ಚೈನೀಸ್) ವಿಭಾಗಗಳಿಂದ ಜಂಟಿಯಾಗಿ ಪಿಎಚ್‌ಡಿ ಪಡೆದರು. ಬೌದ್ಧಧರ್ಮವು ಒಂದು ಏಷ್ಯನ್ ನಾಗರಿಕತೆಯಿಂದ ಇನ್ನೊಂದಕ್ಕೆ ಹರಡಿದ ಪ್ರಕ್ರಿಯೆಯಿಂದ ಮತ್ತು ಅದನ್ನು ಹೇಗೆ ಅನುವಾದಿಸಲಾಯಿತು ಮತ್ತು ಅಳವಡಿಸಿಕೊಳ್ಳಲಾಯಿತು ಎಂಬ ಪ್ರಕ್ರಿಯೆಯಿಂದ ಪ್ರೇರಿತರಾಗಿ, ಅಂದಿನಿಂದ ಅವರ ಗಮನವು ಸಾಂಪ್ರದಾಯಿಕ ಬೌದ್ಧ ಮತ್ತು ಆಧುನಿಕ ಪಾಶ್ಚಿಮಾತ್ಯ ಸಂಸ್ಕೃತಿಗಳನ್ನು ಸಂಪರ್ಕಿಸುವತ್ತ ಸಾಗುತ್ತಿದೆ. 

ಡಾ. ಬರ್ಜಿನ್ 29 ವರ್ಷಗಳ ಕಾಲ ಭಾರತದಲ್ಲಿ ವಾಸಿಸುತ್ತಿದ್ದರು, ಮೊದಲು ಫುಲ್‌ಬ್ರೈಟ್ ವಿದ್ವಾಂಸರಾಗಿ ಮತ್ತು ನಂತರ ಧರ್ಮಶಾಲಾದಲ್ಲಿರುವ ಟಿಬೆಟಿಯನ್ ಕೃತಿಗಳು ಮತ್ತು ದಾಖಲೆಗಳ ಗ್ರಂಥಾಲಯದಲ್ಲಿ ಅವರು ಸ್ಥಾಪಿಸಲು ಸಹಾಯ ಮಾಡಿದ ಅನುವಾದ ಬ್ಯೂರಿಯೋದಲ್ಲಿ. ಭಾರತದಲ್ಲಿದ್ದಾಗ, ಅವರು ನಾಲ್ಕು ಟಿಬೆಟಿಯನ್ ಬೌದ್ಧ ಸಂಪ್ರದಾಯಗಳ ಸ್ನಾತಕೋತ್ತರರೊಂದಿಗೆ ತಮ್ಮ ಅಧ್ಯಯನವನ್ನು ಮುಂದುವರೆಸಿದರು; ಆದರೆ, ಅವರ ಪ್ರಮುಖ ಗುರುಗಳು ಪರಮಪೂಜ್ಯ ದಲೈ ಲಾಮಾ, ತ್ಸೆನ್ಜಾಬ್ ಸೆರ್ಕಾಂಗ್ ರಿನ್ಪೋಚೆ ಮತ್ತು ಗೆಶೆ ನ್ಗಾವಾಂಗ್ ಧರ್ಗ್ಯೆ ಆಗಿರುವರು. ಅವರ ಮೇಲ್ವಿಚಾರಣೆಯಲ್ಲಿ ಅಭ್ಯಾಸ ಮಾಡುತ್ತಾ, ಅವರು ಗೆಲುಗ್ ಸಂಪ್ರದಾಯದ ಪ್ರಮುಖವಾದ ಧ್ಯಾನಗಳನ್ನು ಪೂರ್ಣಗೊಳಿಸಿದರು. 

ಒಂಬತ್ತು ವರ್ಷಗಳ ಕಾಲ, ಅವರು ತ್ಸೆನ್ಜಾಬ್ ಸೆರ್ಕಾಂಗ್ ರಿನ್ಪೋಚೆ ಅವರ ಪ್ರಧಾನ ಅನುವಾದಕರಾಗಿದ್ದರು, ಅವರ ವಿದೇಶಿ ಪ್ರವಾಸಗಳಲ್ಲಿ ಅವರೊಂದಿಗೆ ಹೋಗುತ್ತಿದ್ದರು ಮತ್ತು ಅವರ ಅಡಿಯಲ್ಲಿ ತಾವಾಗಿಯೇ ಬೌದ್ಧ ಶಿಕ್ಷಕರಾಗಲು ತರಬೇತಿ ಪಡೆದರು. ಅವರು ಪರಮಪೂಜ್ಯ ದಲೈ ಲಾಮಾ ಅವರಿಗೆ ಸಾಂದರ್ಭಿಕ ಅನುವಾದಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅವರಿಗಾಗಿ ಹಲವಾರು ಅಂತರರಾಷ್ಟ್ರೀಯ ಯೋಜನೆಗಳನ್ನು ಆಯೋಜಿಸಿದ್ದಾರೆ. ಇವುಗಳಲ್ಲಿ ಚೆರ್ನೋಬಿಲ್ ವಿಕಿರಣ ದುರಂತದಲ್ಲಿ ನೊಂದವರಿಗೆ ಟಿಬೆಟಿಯನ್ ವೈದ್ಯಕೀಯ ನೆರವು; ಮಂಗೋಲಿಯಾದಲ್ಲಿ ಬೌದ್ಧಧರ್ಮದ ಪುನರುಜ್ಜೀವನಕ್ಕೆ ಸಹಾಯ ಮಾಡಲು ಆಡುಮಾತಿನ ಮಂಗೋಲಿಯನ್ ಭಾಷೆಯಲ್ಲಿ ಮೂಲ ಬೌದ್ಧ ಗ್ರಂಥಗಳ ತಯಾರಿಕೆ; ಮತ್ತು ಇಸ್ಲಾಮಿಕ್ ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಬೌದ್ಧ-ಮುಸ್ಲಿಂ ಸಂವಾದವನ್ನು ಪ್ರಾರಂಭಿಸುವುದು ಸೇರಿವೆ. 

1980 ರಿಂದ, ಡಾ. ಬರ್ಜಿನ್ ಪ್ರಪಂಚವನ್ನು ಸುತ್ತಾಡಿದ್ದಾರೆ, 70 ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ಬೌದ್ಧ ಕೇಂದ್ರಗಳಲ್ಲಿ ಬೌದ್ಧಧರ್ಮದ ಕುರಿತು ಉಪನ್ಯಾಸ ನೀಡಿದ್ದಾರೆ. ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ ದೊಡ್ಡ ಭಾಗಗಳಲ್ಲಿ ಕಮ್ಯುನಿಸ್ಟ್ ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಬೌದ್ಧಧರ್ಮವನ್ನು ಕಲಿಸಿದವರಲ್ಲಿ ಅವರು ಮೊದಲಿಗರು. ತಮ್ಮ ಪ್ರಯಾಣದ ಉದ್ದಕ್ಕೂ, ಅವರು ಬೌದ್ಧಧರ್ಮದ ರಹಸ್ಯಗಳನ್ನು ಹೊರಹಾಕಲು ಮತ್ತು ದೈನಂದಿನ ಜೀವನದಲ್ಲಿ ಅದರ ಬೋಧನೆಗಳ ಪ್ರಾಯೋಗಿಕ ಅನ್ವಯವನ್ನು ತೋರಿಸಲು ನಿರಂತರವಾಗಿ ಪ್ರಯತ್ನಿಸಿದ್ದಾರೆ. 

ಒಬ್ಬ ಪ್ರತಿಭಾನ್ವಿತ ಲೇಖಕ ಮತ್ತು ಅನುವಾದಕರಾದ ಡಾ. ಬರ್ಜಿನ್, 17 17 ಪುಸ್ತಕಗಳನ್ನು ಪ್ರಕಟಿಸಿದ್ದಾರೆ - Relating to a Spiritual Teacher (ಆಧ್ಯಾತ್ಮಿಕ ಶಿಕ್ಷಕರಿಗೆ ಸಂಬಂಧಿಸುವುದು), Taking the Kalachakra Initiation, Developing Balanced Sensitivity (ಕಾಲಚಕ್ರ ದೀಕ್ಷೆಯನ್ನು ತೆಗೆದುಕೊಳ್ಳುವುದು, ಸಮತೋಲಿತ ಸಂವೇದನೆಯನ್ನು ಅಭಿವೃದ್ಧಿಪಡಿಸುವುದು) ಮತ್ತು ಪರಮಪೂಜ್ಯ ದಲೈ ಲಾಮ ಅವರೊಂದಿಗೆ, The Gelug-Kagyu Tradition of Mahamudra (ಗೆಲುಗ್-ಕಗ್ಯು ಸಂಪ್ರದಾಯದ ಮಹಾಮುದ್ರ) ಇತ್ಯಾದಿ.

1998 ರ ಕೊನೆಯಲ್ಲಿ, ಡಾ. ಬರ್ಜಿನ್ ಅವರು ತಾವು ಸಿದ್ಧಪಡಿಸಿದ ಸುಮಾರು 30,000 ಪುಟಗಳ ಅಪ್ರಕಟಿತ ಪುಸ್ತಕಗಳು, ಲೇಖನಗಳು ಮತ್ತು ಅನುವಾದಗಳೊಂದಿಗೆ, ಅವರು ಅನುವಾದಿಸಿದ ಮಹಾನ್ ಗುರುಗಳ ಬೋಧನೆಗಳ ಪ್ರತಿಲೇಖನಗಳೊಂದಿಗೆ ಮತ್ತು ಈ ಗುರುಗಳಿಂದ ಪಡೆದ ಎಲ್ಲಾ ಬೋಧನೆಗಳ ಟಿಪ್ಪಣಿಗಳೊಂದಿಗೆ ಪಶ್ಚಿಮಕ್ಕೆ ಮರಳಿದರು. ಈ ವಿಷಯಗಳ ಪ್ರಯೋಜನವನ್ನು ಇತರರಿಗೆ ಮನವರಿಕೆ ಮಾಡಿಕೊಡಬೇಕಯ ಮತ್ತು ಇದು ಕಳೆದುಹೋಗಬಾರದು ಎಂದು ನಿರ್ಧರಿಸಿದ ಅವರು, ಅದನ್ನು "ಬರ್ಜಿನ್ ಆರ್ಕೈವ್ಸ್" ಎಂದು ಹೆಸರಿಸಿ ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿದರು. ಅಲ್ಲಿ, ಪರಮಪೂಜ್ಯ ದಲೈ ಲಾಮಾ ಅವರ ಪ್ರೋತ್ಸಾಹದೊಂದಿಗೆ, ಅವರು ಈ ವಿಶಾಲವಾದ ವಿಷಯವನ್ನು ಅಂತರ್ಜಾಲದಲ್ಲಿ, ಸಾಧ್ಯವಾದಷ್ಟು ಭಾಷೆಗಳಲ್ಲಿ ಜಗತ್ತಿಗೆ ಮುಕ್ತವಾಗಿ ಲಭ್ಯವಾಗುವಂತೆ ಮಾಡಲು ಹೊರಟರು. 

ಹೀಗೆ, ಬರ್ಜಿನ್ ಆರ್ಕೈವ್ಸ್ ವೆಬ್‌ಸೈಟ್ ಡಿಸೆಂಬರ್ 2001 ರಲ್ಲಿ ಆನ್‌ಲೈನ್‌ಗೆ ಹೋಯಿತು. ಇದೀಗ ಡಾ. ಬರ್ಜಿನ್ ಅವರ ನಡೆಯುತ್ತಿರುವ ಉಪನ್ಯಾಸಗಳನ್ನು ಸೇರಿಸುವಂತೆ ವಿಸ್ತರಿಸಲಾಗಿದೆ ಮತ್ತು ಈಗ (2015 ರಲ್ಲಿ) 21 ಭಾಷೆಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಹಲವು, ವಿಶೇಷವಾಗಿ ಆರು ಇಸ್ಲಾಮಿಕ್ ವಿಶ್ವ ಭಾಷೆಗಳಿಗೆ, ಇದು ಈ ಕ್ಷೇತ್ರದಲ್ಲಿನ ಪ್ರವರ್ತಕ ಕೆಲಸವಾಗಿದೆ. ವೆಬ್‌ಸೈಟ್‌ನ ಪ್ರಸ್ತುತ ಆವೃತ್ತಿ (2021 ರಲ್ಲಿ 32 ಭಾಷೆಗಳು) ಸಾಂಪ್ರದಾಯಿಕ ಬೌದ್ಧ ಮತ್ತು ಆಧುನಿಕ ಪ್ರಪಂಚಗಳ ನಡುವಿನ ಸೇತುವೆಯನ್ನು ನಿರ್ಮಿಸುವ ಡಾ. ಬರ್ಜಿನ್ ಅವರ ಜೀವಮಾನದ ಬದ್ಧತೆಯ ಮುಂದಿನ ಹೆಜ್ಜೆಯಾಗಿದೆ. ಸೇತುವೆಯಾದ್ಯಂತ ಬೋಧನೆಗಳನ್ನು ಮಾರ್ಗದರ್ಶನ ಮಾಡುವ ಮೂಲಕ ಮತ್ತು ಆಧುನಿಕ ಜೀವನಕ್ಕೆ ಅವುಗಳ ಪ್ರಸ್ತುತತೆಯನ್ನು ತೋರಿಸುವ ಮೂಲಕ, ಅವು ಜಗತ್ತಿಗೆ ಭಾವನಾತ್ಮಕ ಸಮತೋಲನವನ್ನು ತರಲು ಸಹಾಯ ಮಾಡುತ್ತದೆ ಎಂಬುದು ಅವರ ದೃಷ್ಟಿಕೋನವಾಗಿದೆ. 

Top