ಇಂದಿನ ಜಗತ್ತಿನಲ್ಲಿರುವ ಬೌದ್ಧಧರ್ಮ

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಥೆರವಾದ ಬೌದ್ಧಧರ್ಮ 

ಭಾರತ 

ಭಾರತದಲ್ಲಿ, ಬೌದ್ಧಧರ್ಮವು 7ನೇ ಶತಮಾನದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು ಮತ್ತು 12 ನೇ ಶತಮಾನದಲ್ಲಿ ಪಾಲಾ ಸಾಮ್ರಾಜ್ಯದ ಪತನದ ನಂತರ ಉತ್ತರದ ಹಿಮಾಲಯದ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸ್ಥಳಗಳಲ್ಲಿ ಕಣ್ಮರೆಯಾಯಿತು. 19 ನೇ ಶತಮಾನದ ಅಂತ್ಯದಲ್ಲಿ, ಶ್ರೀಲಂಕಾದ ಬೌದ್ಧ ಗುರುವಾದ ಅನಗಾರಿಕ ಧರ್ಮಪಾಲ ಅವರು ಬ್ರಿಟಿಷ್ ವಿದ್ವಾಂಸರ ಸಹಾಯದಿಂದ ಮಹಾ ಬೋಧಿ ಸೊಸೈಟಿಯನ್ನು ಸ್ಥಾಪಿಸಿದಾಗ, ಭಾರತದಲ್ಲಿ ಬೌದ್ಧಧರ್ಮದ ಪುನರುಜ್ಜೀವನವಾಯಿತು. ಭಾರತದಲ್ಲಿನ ಬೌದ್ಧ ಯಾತ್ರಾ ಸ್ಥಳಗಳನ್ನು ಪುನಃಸ್ಥಾಪಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು ಮತ್ತು ಎಲ್ಲಾ ಬೌದ್ಧ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಇಂದು ಈ ಜಾಗಗಳಲ್ಲಿ ಸನ್ಯಾಸಿಗಳನ್ನು ಕಾಣಬಹುದಾಗಿದೆ.  

1950ರ ದಶಕದಲ್ಲಿ, ಅಂಬೇಡ್ಕರ್ ಅವರು ಅಸ್ಪೃಶ್ಯರೊಂದಿಗೆ ನಡುವೆ ನವ-ಬೌದ್ಧ ಚಳುವಳಿಯನ್ನು ಪ್ರಾರಂಭಿಸಿದರು, ಆ ಮೂಲಕ ಸಾವಿರಾರು ಜನರು ಜಾತಿಯ ಬೇಧ-ಭಾವವನ್ನು ತಪ್ಪಿಸಲು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಕಳೆದ ದಶಕದಲ್ಲಿ, ನಗರದಲ್ಲಿನ ಮಧ್ಯಮ ವರ್ಗದವರಲ್ಲಿ ಬೌದ್ಧಧರ್ಮದ ಬಗ್ಗೆಗಿರುವ ಆಸಕ್ತಿ ಹೆಚ್ಚುತ್ತಿದೆ. ಪ್ರಸ್ತುತವಾಗಿ ಬೌದ್ಧರು, ಭಾರತೀಯ ಜನಸಂಖ್ಯೆಯಲ್ಲಿ ಸರಿಸುಮಾರು 2% ರಷ್ಟಿದ್ದಾರೆ.

ಶ್ರೀಲಂಕಾ 

3 ನೇ ಶತಮಾನ BCE ಯಲ್ಲಿ, ಭಾರತೀಯ ಚಕ್ರವರ್ತಿ ಅಶೋಕನ ಮಗ ಮಹೇಂದ್ರನು ಶ್ರೀಲಂಕಾದಲ್ಲಿ ಬೌದ್ಧಧರ್ಮವನ್ನು ಪರಿಚಯಿಸಿದಾಗಿನಿಂದ, ಅದು ಬೌದ್ಧ ಕಲಿಕೆಯ ಕೇಂದ್ರವಾಗಿದೆ. ಶ್ರೀಲಂಕಾದಲ್ಲಿ, ಬೌದ್ಧಧರ್ಮದ ಸುದೀರ್ಘವಾದ, ನಿರಂತರವಾದ ಇತಿಹಾಸವಿದೆ. ಇದು ಯುದ್ಧದ ಸಮಯದಲ್ಲಿ ಮತ್ತು 16 ನೇ ಶತಮಾನದಿಂದ, ದ್ವೀಪವು ವಸಾಹತುಶಾಹಿಯಾದಾಗ ಮತ್ತು ಯುರೋಪಿಯನ್ ಮಿಷನರಿಗಳು ಅಲ್ಲಿಯವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದಾಗ, ಬೌದ್ಧಧರ್ಮವು ದೀರ್ಘಾವಧಿಯ ಕುಸಿತವನ್ನು ಅನುಭವಿಸಿತು. 

19 ನೇ ಶತಮಾನದಲ್ಲಿ, ಬ್ರಿಟಿಷ್ ವಿದ್ವಾಂಸರು ಮತ್ತು ದೇವತಾಶಾಸ್ತ್ರಜ್ಞರ ಸಹಾಯದಿಂದ ಬೌದ್ಧಧರ್ಮವು ಬಲವಾದ ಪುನರುಜ್ಜೀವನವನ್ನು ಪಡೆಯಿತು, ಆದ್ದರಿಂದ ಕೆಲವೊಮ್ಮೆ ಶ್ರೀಲಂಕಾದ ಬೌದ್ಧಧರ್ಮವನ್ನು "ಪ್ರೊಟೆಸ್ಟಂಟ್ ಬೌದ್ಧಧರ್ಮ" ಎಂದು ನಿರೂಪಿಸಲಾಗಿದ್ದು ಇಲ್ಲಿ ವಿದ್ವತ್ಪೂರ್ಣ ಅಧ್ಯಯನ, ಸಾಮಾನ್ಯ ಜನಸಮುದಾಯಕ್ಕಾಗಿ ಸನ್ಯಾಸಿಗಳ ಗ್ರಾಮೀಣ ಚಟುವಟಿಕೆಗಳು ಮತ್ತು ಸಾಮಾನ್ಯ ಜನರಿಗೆ ಧ್ಯಾನ ಅಭ್ಯಾಸಗಳನ್ನು ನೀಡುವಂತೆ ಒತ್ತು ನೀಡುತ್ತಾರೆ. ಶ್ರೀಲಂಕಾ 1948 ರಲ್ಲಿ ಸ್ವತಂತ್ರಗೊಂಡಿತು ಮತ್ತು ಅಂದಿನಿಂದ ಬೌದ್ಧ ಧರ್ಮ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿಯು ಬಲವಾದ ಪುನರುಜ್ಜೀವನ ಪಡೆದಿದೆ. 

ಇಂದು, 70% ಶ್ರೀಲಂಕಾದವರು ಬೌದ್ಧರಾಗಿರುವರು, ಹೆಚ್ಚಿನವರು ಥೆರವಾದ ಸಂಪ್ರದಾಯವನ್ನು ಅನುಸರಿಸುತ್ತಾರೆ. 30 ವರ್ಷಗಳ ಅಂತರ್ಯುದ್ಧದ ನಂತರ, ಇಂದು ಶ್ರೀಲಂಕಾದಲ್ಲಿ ರಾಷ್ಟ್ರೀಯವಾದಿ ಬೌದ್ಧಧರ್ಮದ ಏರಿಕೆಯನ್ನು ಕಾಣುತ್ತಿದ್ದೇವೆ, ಬೋಡು ಬಾಲ ಸೇನೆ (ಬೌದ್ಧ ಶಕ್ತಿ ಪಡೆ) ನಂತಹ ಕೆಲವು ಸಂಘಟನೆಗಳು ಮುಸ್ಲಿಂರ ವಿರುದ್ಧ ಗಲಭೆಗಳನ್ನು ಮತ್ತು ಮಧ್ಯಮ ಬೌದ್ಧ ನಾಯಕರ ಮೇಲೆ ದಾಳಿಗಳನ್ನು ಆಯೋಜಿಸುತ್ತಿವೆ.

ಮ್ಯಾನ್ಮಾರ್ (ಬರ್ಮಾ

ಬೌದ್ಧಧರ್ಮವು, ಬರ್ಮಾದಲ್ಲಿ 2,000 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ ಎಂದು ಐತಿಹಾಸಿಕ ಸಂಶೋಧನೆಯಲ್ಲಿ ಗೋಚರವಾಗಿದೆ, ಪ್ರಸ್ತುತವಾಗಿ, ಜನಸಂಖ್ಯೆಯಲ್ಲಿನ ಸುಮಾರು 85% ಬೌದ್ಧರೆಂದು ಗುರುತಿಸಿಕೊಂಡಿರುವರು. ಇಲ್ಲಿ ದೀಕ್ಷೆ ಪಡೆದ ಸಮುದಾಯದ ಧ್ಯಾನ ಮತ್ತು ಅಧ್ಯಯನಕ್ಕಾಗಿ ಸಮತೋಲಿತವಾಗಿ ಪ್ರಾಧಾನ್ಯ ನೀಡುವ ಸುದೀರ್ಘವಾದ ಸಂಪ್ರದಾಯವಿದೆ ಮತ್ತು ಸಾಮಾನ್ಯ ಜನಸಂಖ್ಯೆಯ ನಡುವೆ ದೀರ್ಘವಾದ ನಂಬಿಕೆಯಿದೆ. ಅತ್ಯಂತ ಪ್ರಸಿದ್ಧರಾಗಿರುವ ಬರ್ಮಾ ಬೌದ್ಧರಲ್ಲಿ ವಿಪಸ್ಸನಾ ಧ್ಯಾನ ತಂತ್ರಗಳ ಸಾಮಾನ್ಯ ಗುರುಗಳಾದ ಎಸ್.ಎನ್. ಗೋಯೆಂಕಾ ಅವರೂ ಒಬ್ಬರಾಗಿರುವರು. 

1948 ರಲ್ಲಿ ಗ್ರೇಟ್ ಬ್ರಿಟನ್‌ನಿಂದ ಬರ್ಮಾ ತನ್ನ ಸ್ವಾತಂತ್ರ್ಯವನ್ನು ಗಳಿಸಿದಾಗಿನಿಂದ, ನಾಗರಿಕ ಮತ್ತು ಮಿಲಿಟರಿ ಸರ್ಕಾರಗಳು ಥೆರವಾದ ಬೌದ್ಧಧರ್ಮವನ್ನು ಪ್ರಚಾರ ಮಾಡಿದ್ದಾರೆ. ಮಿಲಿಟರಿ ಆಡಳಿತದಲ್ಲಿ, ಬೌದ್ಧಧರ್ಮವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿತ್ತು ಮತ್ತು ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಮಠಗಳನ್ನು ನಿಯತಕ್ರಮವಾಗಿ ನಾಶಪಡಿಸಲಾಗುತ್ತಿತ್ತು. ಮಿಲಿಟರಿ ಆಡಳಿತದ ವಿರುದ್ಧದ ರಾಜಕೀಯ ಪ್ರದರ್ಶನಗಳಾದ 8888ರ ದಂಗೆ ಮತ್ತು 2007 ರ ಕೇಸರಿ ಕ್ರಾಂತಿಗಳ ಮುಂಚೂಣಿಯಲ್ಲಿ ಬೌದ್ಧ ಸನ್ಯಾಸಿಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 

ಕಳೆದ ದಶಕದಲ್ಲಿ, ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸಲು ಮತ್ತು ಇಸ್ಲಾಂ ಅನ್ನು ವಿರೋಧಿಸಲು ವಿವಿಧ ರಾಷ್ಟ್ರೀಯತಾವಾದಿ ಗುಂಪುಗಳು ಸಿಡಿದೆಬ್ಬಿವೆ. 969 ಗುಂಪಿನ ಸನ್ಯಾಸಿ-ನಾಯಕ ಅಶಿನ್ ವಿರಾತು ತನ್ನನ್ನು "ಬರ್ಮಾದ ಬಿನ್ ಲಾಡೆನ್" ಎಂದು ಕರೆದುಕೊಂಡಿದ್ದಾನೆ ಮತ್ತು ಮುಸ್ಲಿಂ ಒಡೆತನದಲ್ಲಿರುವ ಅಂಗಡಿಗಳ ಬಹಿಷ್ಕಾರವನ್ನು ಪ್ರಸ್ತಾಪಿಸಿದ್ದಾರೆ. "ಬೌದ್ಧ ಧರ್ಮವನ್ನು ರಕ್ಷಿಸುವ" ನೆಪದಲ್ಲಿ ಮಸೀದಿಗಳು ಮತ್ತು ಮುಸ್ಲಿಂ ಮನೆಗಳ ಮೇಲೆ ಹಿಂಸಾಚಾರವೆಸಗುವುದು ಸಾಮಾನ್ಯವಾಗಿದೆ, ಮತ್ತು ಮುಸ್ಲಿಮರ ಪ್ರತಿದಾಳಿಗಳು ಈ ಸಂಘರ್ಷಗಳನ್ನು ಮತ್ತಷ್ಟು ಹೆಚ್ಚಿಸಿವೆ.  

ಬಾಂಗ್ಲಾದೇಶ 

11 ನೇ ಶತಮಾನದವರೆಗೂ ಬೌದ್ಧ ಧರ್ಮವು ಈ ಪ್ರದೇಶದ ಪ್ರಮುಖ ಧರ್ಮವಾಗಿತ್ತು. ಇತ್ತೀಚಿನ ದಿನಗಳಲ್ಲಿ, ಜನಸಂಖ್ಯೆಯ 1% ಕ್ಕಿಂತ ಕಡಿಮೆ ಬೌದ್ಧರಿದ್ದಾರೆ, ಮತ್ತು ಅವರು ಬರ್ಮಾದ ಸಮೀಪವಿರುವ ಚಿತ್ತಗಾಂಗ್ ಬೆಟ್ಟದ ಪ್ರದೇಶಗಳಲ್ಲಿ ಕೇಂದ್ರೀಕೃತರಾಗಿದ್ದಾರೆ.

ರಾಜಧಾನಿಯಾದ ಢಾಕಾದಲ್ಲಿ ನಾಲ್ಕು ಬೌದ್ಧ ದೇವಾಲಯಗಳಿವೆ ಮತ್ತು ಪೂರ್ವ ಗ್ರಾಮಗಳಾದ್ಯಂತ ಹಲವಾರು ದೇವಾಲಯಗಳಿವೆ. ಬರ್ಮಾದಿಂದ ದೂರವಿರುವ ಕಾರಣ, ಬೌದ್ಧಧರ್ಮದ ಅಭ್ಯಾಸ ಮತ್ತು ತಿಳುವಳಿಕೆಯ ಮಟ್ಟವು ಬಹಳಾ ಕಡಿಮೆಯಾಗಿದೆ.

ಥೈಲ್ಯಾಂಡ್ 

ಆಗ್ನೇಯ ಏಷ್ಯಾದ ಸಾಮ್ರಾಜ್ಯಗಳಿಗೆ ಬೌದ್ಧಧರ್ಮವನ್ನು 5 ನೇ ಶತಮಾನದ CE ಯಿಂದ ಪರಿಚಯಿಸಲಾಯಿತು. ಇಲ್ಲಿ ಥೆರವಾದವನ್ನು ಅನುಸರಿಸಲಾಗಿದ್ದು, ಇದು ಜನಪದ ಧರ್ಮ ಮತ್ತು ಹಿಂದೂ ಧರ್ಮ, ಹಾಗೆಯೇ ಮಹಾಯಾನ ಬೌದ್ಧಧರ್ಮದಿಂದ ಬಲವಾಗಿ ಪ್ರಭಾವಿತಗೊಂಡಿದೆ. ಶ್ರೀಲಂಕಾ ಮತ್ತು ಬರ್ಮಾದಲ್ಲಿರುವಂತೆ, ಇಲ್ಲಿ ಮಹಿಳೆಯರಿಗೆ ದೀಕ್ಷೆಯನ್ನು ನೀಡುವ ವಂಶಾವಳಿ ಇಲ್ಲ. ದೇಶದಲ್ಲಿ, ಸುಮಾರು 95% ಜನರು ಬೌದ್ಧರಾಗಿರುವರು. 

ಥಾಯ್ ಸನ್ಯಾಸಿಗಳ ಸಮುದಾಯವು ಥಾಯ್ ರಾಜಪ್ರಭುತ್ವದ ಮಾದರಿಯಲ್ಲಿದ್ದು, ಸಂಪ್ರದಾಯದ ಪರಿಶುದ್ಧತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುವ ಒಬ್ಬ ಸರ್ವೋಚ್ಚ ಪಿತೃಪ್ರಧಾನ ಮತ್ತು ಹಿರಿಯರ ಸಭೆಯಿದೆ. ಕಾಡುಗಳಲ್ಲಿ ವಾಸಿಸುವ ಮತ್ತು ಹಳ್ಳಿಗಳಲ್ಲಿ ವಾಸಿಸುವ ಸನ್ಯಾಸಿಗಳ ಸಮುದಾಯಗಳಿವೆ. ಇವೆರಡಕ್ಕೂ ಸಾಮಾನ್ಯ ಸಮುದಾಯದಿಂದ ಹೆಚ್ಚಿನ ಗೌರವ ಮತ್ತು ಬೆಂಬಲವಿದೆ. 

ಅರಣ್ಯ ಸಂಪ್ರದಾಯಗಳ ಭಿಕ್ಷು ಸನ್ಯಾಸಿಗಳು ಪ್ರತ್ಯೇಕ ಕಾಡುಗಳಲ್ಲಿ ವಾಸಿಸುತ್ತಾರೆ ಮತ್ತು ಸನ್ಯಾಸಿಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ ಮತ್ತು ತೀವ್ರವಾದ ಧ್ಯಾನದ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಗ್ರಾಮೀಣ ಸನ್ಯಾಸಿಗಳು ಪ್ರಾಥಮಿಕವಾಗಿ, ಪಠ್ಯಗಳನ್ನು ಕಂಠಪಾಠ ಮಾಡುತ್ತಾರೆ ಮತ್ತು ಸ್ಥಳೀಯ ಜನರಿಗೆ ಸಮಾರಂಭಗಳನ್ನು ನಡೆಸಿಕೊಡುತ್ತಾರೆ. ಥಾಯ್ ಸಂಸ್ಕೃತಿಯಲ್ಲಿ ಇರುವ ಆತ್ಮಗಳಲ್ಲಿನ ನಂಬಿಕೆಗೆ ಅನುಗುಣವಾಗಿ, ಈ ಸನ್ಯಾಸಿಗಳು ಸಾಮಾನ್ಯ ಜನರ ರಕ್ಷಣೆಗಾಗಿ ತಾಯತಗಳನ್ನು ಸಹ ನೀಡುತ್ತಾರೆ. ಸನ್ಯಾಸಿಗಳಿಗಾಗಿ ಬೌದ್ಧ ವಿಶ್ವವಿದ್ಯಾಲಯವಿದ್ದು, ಅಲ್ಲಿ ಮುಖ್ಯವಾಗಿ ಬೌದ್ಧ ಧರ್ಮಗ್ರಂಥಗಳನ್ನು ಶಾಸ್ತ್ರೀಯ ಪಾಲಿಯಿಂದ ಆಧುನಿಕ ಥಾಯ್‌ಗೆ ಭಾಷಾಂತರಿಸಲು ಸನ್ಯಾಸಿಗಳಿಗೆ ತರಬೇತಿ ನೀಡಲಾಗುತ್ತದೆ. 

ಲಾವೋಸ್ 

ಬೌದ್ಧಧರ್ಮವು 7 ನೇ ಶತಮಾನದ CEಯಲ್ಲಿ ಲಾವೋಸ್ ಅನ್ನು ಮೊದಲು ತಲುಪಿತು, ಮತ್ತು ಇಂದಿನ ದಿನಗಳಲ್ಲಿ 90% ಜನಸಂಖ್ಯೆಯು, ಆನಿಮಿಸಂನೊಂದಿಗೆ ಬೆರೆತಿರುವ ಬೌದ್ಧಧರ್ಮದಲ್ಲಿನ ನಂಬಿಕೆಯನ್ನು ಪ್ರತಿಪಾದಿಸುತ್ತದೆ. ಕಮ್ಯುನಿಸ್ಟ್ ಆಳ್ವಿಕೆಯಲ್ಲಿ, ಅಧಿಕಾರಿಗಳು ಮೊದಲಿಗೆ ಧರ್ಮವನ್ನು ಸಂಪೂರ್ಣವಾಗಿ ನಿಗ್ರಹಿಸಲಿಲ್ಲವಾದರೂ, ತಮ್ಮ ರಾಜಕೀಯ ಗುರಿಗಳಿಗಾಗಿ ಬೌದ್ಧ ಸಂಘವನ್ನು ಬಳಸಿಕೊಂಡರು. ಕಾಲಾನಂತರದಲ್ಲಿ, ಬೌದ್ಧಧರ್ಮವು ತೀವ್ರ ದಮನಕ್ಕೆ ಒಳಗಾಯಿತು. 1990 ರ ದಶಕದಿಂದ, ಬೌದ್ಧಧರ್ಮವು ಪುನರುತ್ಥಾನವನ್ನು ಕಂಡಿದೆ, ಲಾವೋದಲ್ಲಿ ಹೆಚ್ಚಿನವರು ಬಹಳ ಧರ್ಮನಿಷ್ಠರಾಗಿದ್ದು, ಹೆಚ್ಚಿನ ಪುರುಷರು ಕನಿಷ್ಠಪಕ್ಷ ಸ್ವಲ್ಪ ಸಮಯದವರೆಗಾದರೂ ಮಠ ಅಥವಾ ದೇವಾಲಯವನ್ನು ಸೇರುತ್ತಾರೆ. ಹೆಚ್ಚಿನ ಕುಟುಂಬಗಳಲ್ಲಿ ಸನ್ಯಾಸಿಗಳಿಗೆ ಆಹಾರವನ್ನು ನೀಡುತ್ತಾರೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. 

ಕಾಂಬೋಡಿಯಾ 

13 ನೇ ಶತಮಾನದಿಂದಲೂ ಥೆರವಾದ ಬೌದ್ಧಧರ್ಮವು ರಾಜ್ಯ ಧರ್ಮವಾಗಿದ್ದು, ಇಂದಿನ ಜನಸಂಖ್ಯೆಯಲ್ಲೂ 95% ರಷ್ಟು ಬೌದ್ಧರಿದ್ದಾರೆ. 1970 ರ ದಶಕದಲ್ಲಿ, ಖಮೇರ್ ರೂಜ್ ಬೌದ್ಧಧರ್ಮವನ್ನು ನಾಶಮಾಡಲು ಪ್ರಯತ್ನಿಸಿತು ಮತ್ತು ಬಹುತೇಕ ಯಶಸ್ವಿಯಾಗಿತ್ತು; 1979ರ ಹೊತ್ತಿಗೆ, ಸರಿಸುಮಾರು ಪ್ರತಿಯೊಬ್ಬ ಸನ್ಯಾಸಿಯನ್ನು ಕೊಲ್ಲಲಾಗಿತ್ತು ಅಥವಾ ಗಡಿಪಾರು ಮಾಡಲಾಗಿತ್ತು, ಮತ್ತು ಪ್ರತಿ ದೇವಾಲಯ ಮತ್ತು ಗ್ರಂಥಾಲಯವನ್ನು ನಾಶಪಡಿಸಲಾಗಿತ್ತು. 

ರಾಜಕುಮಾರ ಸಿಹಾನೌಕ್ ಅನ್ನು ರಾಜನಾಗಿ ಮರುಸ್ಥಾಪಿಸಿದ ನಂತರ, ನಿರ್ಬಂಧಗಳನ್ನು ನಿಧಾನವಾಗಿ ತೆಗೆದುಹಾಕಲಾಯಿತು ಮತ್ತು ಬೌದ್ಧಧರ್ಮದಲ್ಲಿ ಆಸಕ್ತಿಯು ಪುನರುಜ್ಜೀವನಗೊಂಡಿತು. ಕಾಂಬೋಡಿಯನ್ನರು ಜಾತಕ, ಜ್ಯೋತಿಷ್ಯ ಮತ್ತು ಆತ್ಮದ ಜಗತ್ತಿನಲ್ಲಿ ಬಲವಾದ ನಂಬಿಕೆಯುಳ್ಳವರಾಗಿದ್ದಾರೆ ಮತ್ತು ಸನ್ಯಾಸಿಗಳು ಹೆಚ್ಚಾಗಿ ವೈದ್ಯರಾಗಿರುವರು. ಬೌದ್ಧ ಸನ್ಯಾಸಿಗಳು ಮಕ್ಕಳ ನಾಮಕರಣದ ಸಮಾರಂಭಗಳಿಂದ ಹಿಡಿದು ಮದುವೆಗಳು ಮತ್ತು ಅಂತ್ಯಕ್ರಿಯೆಗಳವರೆಗೆ ಎಲ್ಲಾ ರೀತಿಯ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. 

ವಿಯೆಟ್ನಾಂ 

ಬೌದ್ಧಧರ್ಮವು, ಮೊದಲು ಭಾರತದಿಂದ, ನಂತರ, ಪ್ರಾಥಮಿಕವಾಗಿ ಚೀನಾದಿಂದ, 2,000 ವರ್ಷಗಳ ಹಿಂದೆ ವಿಯೆಟ್ನಾಂಗೆ ಆಗಮಿಸಿತು. ಆದರೆ 15 ನೇ ಶತಮಾನದಲ್ಲಿ, ಇದು ಆಳುವ ವರ್ಗಗಳ ಒಲವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. 20ನೇ ಶತಮಾನದ ಆರಂಭದಲ್ಲಿ ಇದರ ಪುನರುಜ್ಜೀವನವು ಸಂಭವಿಸಿತಾದರೆ, ರಿಪಬ್ಲಿಕನ್ ಅವಧಿಯಲ್ಲಿ, ಕ್ಯಾಥೋಲಿಕ್ ಪರ ನೀತಿಗಳು ಬೌದ್ಧರನ್ನು ವಿರೋಧಿಸಿದವು. ಇಂದು, ಕೇವಲ 16%ರಷ್ಟು ಜನಸಂಖ್ಯೆ ಬೌದ್ಧಧರ್ಮವನ್ನು ಪ್ರತಿಪಾದಿಸುತ್ತದೆ, ಆದರೂ ಇದು ಇಲ್ಲಿನ ಅತಿದೊಡ್ಡ ಧರ್ಮವಾಗಿದೆ. 

ಇಂದು ಸರ್ಕಾರವು ಬೌದ್ಧ ಧರ್ಮದ ಬಗ್ಗೆ ಹೆಚ್ಚು ನಿರಾಳವಾಗಿದ್ದರೂ, ಯಾವುದೇ ದೇವಾಲಯಕ್ಕೆ ರಾಜ್ಯದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಮತಿಯಿಲ್ಲ.

ಇಂಡೋನೇಷ್ಯಾ ಮತ್ತು ಮಲೇಷ್ಯಾ 

ಬೌದ್ಧಧರ್ಮವು, 2 ನೇ ಶತಮಾನದ CE ಯಲ್ಲಿ ಭಾರತದೊಂದಿಗಿನ ವಾಣಿಜ್ಯ ಮಾರ್ಗಗಳ ಮೂಲಕ ಪ್ರಯಾಣಿಸಿ ಈ ಪ್ರದೇಶಕ್ಕೆ ಆಗಮಿಸಿತು. ಇದರ ಇತಿಹಾಸದುದ್ದಕ್ಕೂ, ಕೊನೆಯ ಹಿಂದೂ-ಬೌದ್ಧ ಸಾಮ್ರಾಜ್ಯವಾದ ಮಜಾಪಾಹಿತ್ ಪತನಗೊಳ್ಳುವ 15 ನೇ ಶತಮಾನದವರೆಗೆ, ಬೌದ್ಧಧರ್ಮವನ್ನು ಹಿಂದೂ ಧರ್ಮದ ಜೊತೆಗೆ ಅಭ್ಯಾಸ ಮಾಡಲಾಗಿತ್ತು. 17 ನೇ ಶತಮಾನದ ಆರಂಭದ ವೇಳೆಗೆ, ಇಸ್ಲಾಂ ಧರ್ಮವು ಈ ಧರ್ಮಗಳ ಜಾಗದಲ್ಲಿ ಸಂಪೂರ್ಣವಾಗಿ ಪ್ರತಿಸ್ಥಾಪನೆಯಾಗಿತ್ತು.

ಇಂಡೋನೇಷಿಯಾದ ಸರ್ಕಾರದ ಪಂಚಶೀಲ ನೀತಿಯ ಪ್ರಕಾರ, ಅಧಿಕೃತ ಧರ್ಮಗಳು ದೇವರಲ್ಲಿನ ನಂಬಿಕೆಯನ್ನು ಪ್ರತಿಪಾದಿಸಬೇಕು. ಬೌದ್ಧಧರ್ಮವು ದೇವರನ್ನು ಒಬ್ಬ ವ್ಯಕ್ತಿಯಂತೆ ಪ್ರತಿಪಾದಿಸುವುದಿಲ್ಲವಾದರೂ, ಸಾವಿರ ವರ್ಷಗಳ ಹಿಂದೆ, ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದ ಕಾಲಚಕ್ರ ತಂತ್ರದಲ್ಲಿ ಚರ್ಚಿಸಿದಂತೆ, ಆದಿಬುದ್ಧ ಅಥವಾ "ಮೊದಲ ಬುದ್ಧ"ನ ಪ್ರತಿಪಾದನೆಯಿಂದಾಗಿ ಇಲ್ಲಿ ಗುರುತಿಸಲ್ಪಟ್ಟಿದೆ. ಆದಿಬುದ್ಧನು ಸಮಯ ಮತ್ತು ಇತರ ಮಿತಿಗಳನ್ನು ಮೀರಿದ ಎಲ್ಲಾ ತೋರಿಕೆಗಳ ಸೃಷ್ಟಿಕರ್ತನೆಂದು, ಸಾಂಕೇತಿಕವಾಗಿ ಒಬ್ಬ ವ್ಯಕ್ತಿಯಿಂದ ಪ್ರತಿನಿಧಿಸಲ್ಪಟ್ಟಿದ್ದರೂ, ಅವರು ವಾಸ್ತವದಲ್ಲಿರುವ ಜೀವಿಯಲ್ಲ. ಆದಿಬುದ್ಧನು, ಎಲ್ಲಾ ಜೀವಿಗಳ ಮನಸ್ಸಿನಲ್ಲಿನ ಸ್ಪಷ್ಟ ಬೆಳಕಾಗಿ ಕಂಡುಬರುತ್ತಾನೆ. ಈ ಆಧಾರದ ಮೇಲೆ, ಬೌದ್ಧಧರ್ಮವನ್ನು ಇಸ್ಲಾಂ ಧರ್ಮ, ಹಿಂದೂ ಧರ್ಮ, ಕನ್ಫ್ಯೂಷಿಯನಿಸಂ, ಕ್ಯಾಥೊಲಿಸಿಸಂ ಮತ್ತು ಪ್ರೊಟೆಸ್ಟಾಂಟಿಸಂ ಜೊತೆಗೆ ಸ್ವೀಕರಿಸಲಾಯಿತು. 

ಶ್ರೀಲಂಕಾದ ಸನ್ಯಾಸಿಗಳು ಬಾಲಿ ಮತ್ತು ಇಂಡೋನೇಷ್ಯಾದ ಇತರ ಭಾಗಗಳಲ್ಲಿ ಥೆರವಾದ ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸಲು ಬಹಳ ಸೀಮಿತ ಪ್ರಮಾಣದಲ್ಲಿ ಪ್ರಯತ್ನಿಸುತ್ತಿದ್ದಾರೆ. ಬಾಲಿಯಲ್ಲಿ ಆಸಕ್ತಿ ತೋರಿಸುವವರು ಬಾಲಿಯಲ್ಲಿರುವ ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಸ್ಥಳೀಯ ಆತ್ಮ ಧರ್ಮಗಳ ಸಾಂಪ್ರದಾಯಿಕ ಮಿಶ್ರಣದ ಅನುಯಾಯಿಗಳಾಗಿರುವರು. ಇಂಡೋನೇಷ್ಯಾದ ಇತರ ಭಾಗಗಳಲ್ಲಿ, ಜನಸಂಖ್ಯೆಯ ಸುಮಾರು 5%ರಷ್ಟು ಬೌದ್ಧರಿರುವರು, ಮತ್ತು ಇವರು ಚೀನೀ ಮೂಲದ ಇಂಡೋನೇಷಿಯನ್ ಸಮುದಾಯದಿಂದ ಬಂದಿರುವರು. ಥೆರವಾದ, ಚೀನೀ ಮತ್ತು ಟಿಬೆಟಿಯನ್ ಅಂಶಗಳ ಮಿಶ್ರತಳಿಗಳಾಗಿರುವ ಕೆಲವು ಚಿಕ್ಕ ಇಂಡೋನೇಷಿಯನ್ ಬೌದ್ಧ ಪಂಥಗಳೂ ಇವೆ. 

ಮಲೇಷಿಯಾದ 20% ಜನಸಂಖ್ಯೆಯು ಬೌದ್ಧಧರ್ಮಕ್ಕೆ ಬದ್ಧವಾಗಿದೆ ಮತ್ತು ಅವರು ಮುಖ್ಯವಾಗಿ ಸಾಗರೋತ್ತರ ಚೀನೀ ಸಮುದಾಯಗಳಿಂದ ಕೂಡಿದ್ದಾರೆ. ಅರ್ಧ ಶತಮಾನದ ಹಿಂದೆ, ಬೌದ್ಧ ಧರ್ಮದಲ್ಲಿನ ಆಸಕ್ತಿಯು ಕ್ಷೀಣಿಸುತ್ತಿತ್ತು ಮತ್ತು ಬೌದ್ಧ ಧರ್ಮವನ್ನು ಪ್ರಚಾರಿಸುವ ಉದ್ದೇಶದಿಂದ 1961 ರಲ್ಲಿ ಬೌದ್ಧ ಮಿಷನರಿ ಸೊಸೈಟಿಯನ್ನು ಸ್ಥಾಪಿಸಲಾಗಿತ್ತು. ಕಳೆದ ದಶಕದಲ್ಲಿ, ಯುವಕರಲ್ಲೂ ಸಹ, ಬೌದ್ಧ ಆಚರಣೆಗಳು ಉಲ್ಬಣಗೊಂಡಿವೆ. ಇಂದು ಹಲವಾರು ಥೆರವಾದ, ಮಹಾಯಾನ ಮತ್ತು ವಜ್ರಯಾನ ಕೇಂದ್ರಗಳು ಅಸ್ತಿತ್ವದಲ್ಲಿದ್ದು, ಅವುಗಳು ಉತ್ತಮ ಧನಸಹಾಯ ಮತ್ತು ಬೆಂಬಲವನ್ನು ಹೊಂದಿವೆ. 

ಪೂರ್ವ ಏಷ್ಯಾದ ಮಹಾಯಾನ ಬೌದ್ಧಧರ್ಮ 

ಚೀನಾ ಪ್ರಜೆಗಳ ಗಣರಾಜ್ಯ 

ಕಳೆದ 2,000 ವರ್ಷಗಳ ಚೀನೀ ಇತಿಹಾಸದಲ್ಲಿ, ಬೌದ್ಧಧರ್ಮವು ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ಪೂರ್ವ ಏಷ್ಯಾದಲ್ಲಿ ಬೌದ್ಧಧರ್ಮದ ಹರಡುವಿಕೆಯಲ್ಲಿ ಚೀನೀ ಬೌದ್ಧಧರ್ಮವು ಕ್ರಿಯಾತ್ಮಕ ಪಾತ್ರವನ್ನು ವಹಿಸಿದೆ. ಆರಂಭಿಕ ತಾಂಗ್ ರಾಜವಂಶವು (618-907 CE) ಕಲೆ ಮತ್ತು ಸಾಹಿತ್ಯದ ಪ್ರವರ್ಧಮಾನದೊಂದಿಗೆ ಬೌದ್ಧಧರ್ಮದ ಸುವರ್ಣಯುಗವನ್ನು ಕಂಡಿತು. 

1960 ಮತ್ತು 70 ರ ದಶಕದ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ, ಹೆಚ್ಚಿನ ಚೀನೀ ಬೌದ್ಧ ಮಠಗಳನ್ನು ನಾಶಮಾಡಲಾಯಿತು ಮತ್ತು ಉನ್ನತ ತರಬೇತಿಯನ್ನು ಪಡೆದ ಸನ್ಯಾಸಿಗಳು, ಸನ್ಯಾಸಿನಿಗಳು ಮತ್ತು ಗುರುಗಳನ್ನು ಗಲ್ಲಿಗೇರಿಸಲಾಯಿತು ಅಥವಾ ಜೈಲಿನಲ್ಲಿರಿಸಲಾಯಿತು. ಟಿಬೆಟ್ ಮತ್ತು ಒಳ ಮಂಗೋಲಿಯಾದಲ್ಲಿ, ಬೌದ್ಧಧರ್ಮದ ನಿಗ್ರಹವು ಇನ್ನಷ್ಟು ತೀವ್ರವಾಗಿತ್ತು. ಚೀನಾದಲ್ಲಿ ಸುಧಾರಣೆಯಾದಂತೆ ಮತ್ತು ಹೊರಜಗತ್ತಿಗೆ ಮತ್ತಷ್ಟು ತೆರೆದಂತೆ, ಸಾಂಪ್ರದಾಯಿಕ ಧರ್ಮಗಳಲ್ಲಿನ ಆಸಕ್ತಿಯು ಪುನಃ ಬೆಳೆಯಲಾರಂಭಿಸಿತು. ಹೊಸ ದೇವಾಲಯಗಳನ್ನು ನಿರ್ಮಿಸಲಾಯಿತು ಮತ್ತು ಹಳೆಯ ದೇವಾಲಯಗಳನ್ನು ಪುನಃಸ್ಥಾಪಿಸಲಾಯಿತು. ಮಠಗಳಿಗೆ ಸೇರಿದ ಹೆಚ್ಚಿನ ಜನರು ಗ್ರಾಮೀಣ ಪ್ರದೇಶದ ಬಡ ಮತ್ತು ಅವಿದ್ಯಾವಂತ ಕುಟುಂಬಗಳಿಗೆ ಸೇರಿದ್ದು, ಶಿಕ್ಷಣದ ಮಟ್ಟವು ಕಡಿಮೆಯಾಗಿರುವುದು. ಅನೇಕ ದೇವಾಲಯಗಳು ಕೇವಲ ಪ್ರವಾಸಿ ತಾಣಗಳಾಗಿ ಅಸ್ತಿತ್ವದಲ್ಲಿದ್ದು, ಸನ್ಯಾಸಿಗಳು ಕೇವಲ ಟಿಕೆಟ್ ಸಂಗ್ರಹಕಾರರು ಮತ್ತು ದೇವಾಲಯದ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಇಂದು ಚೀನೀಯರು, ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧಧರ್ಮದಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ, ಟಿಬೆಟಿಯನ್ ಬೌದ್ಧಧರ್ಮದ ಮೇಲಿನ ಭಕ್ತಿಯೂ ಗಮನಾರ್ಹವಾಗಿ ಹೆಚ್ಚುತ್ತಿದೆ. ಪ್ರಸ್ತುತವಾಗಿ ಬೌದ್ಧರ ಜನಸಂಖ್ಯೆಯು 20%ರಷ್ಟು ಇದೆ ಎಂದು ಅಂದಾಜಿಸಲಾಗಿದೆ, ಮತ್ತು ಚೀನಾದಾದ್ಯಂತ, ದೇವಾಲಯಗಳು ತೆರೆದಿರುವ ಸಮಯಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರತವಾಗಿರುತ್ತವೆ. ಜನರು ಶ್ರೀಮಂತರಾದಂತೆ ಮತ್ತು ಕಾರ್ಯನಿರತರಾದಂತೆ, ತಮ್ಮ ಒತ್ತಡದಿಂದ ತಪ್ಪಿಸಿಕೊಳ್ಳಲು, ಚೀನೀ ಮತ್ತು ಟಿಬೆಟಿಯನ್ ಬೌದ್ಧಧರ್ಮದತ್ತ ತಿರುಗುತ್ತಿದ್ದಾರೆ. ವಿಶೇಷವಾಗಿ, ಚೀನೀ ಭಾಷೆಯಲ್ಲಿ ಕಲಿಸುವ ಟಿಬೆಟಿಯನ್ ಲಾಮಾಗಳ ಸಂಖ್ಯೆಯು ಹೆಚ್ಚಾಗಿರುವ ಕಾರಣದಿಂದಾಗಿ, ಟಿಬೆಟಿಯನ್ ಬೌದ್ಧಧರ್ಮದ ಬಗ್ಗೆ, ಅನೇಕ ಹಾನ್ ಚೀನೀಯರಲ್ಲಿ ಪ್ರತ್ಯೇಕವಾದ ಆಸಕ್ತಿಯಿದೆ.  

ತೈವಾನ್, ಹಾಂಗ್ ಕಾಂಗ್ ಮತ್ತು ಸಾಗರೋತ್ತರ ಚೀನೀ ಪ್ರದೇಶಗಳು 

ಚೀನಾದಿಂದ ಪಡೆದ ಪೂರ್ವ ಏಷ್ಯಾದ ಮಹಾಯಾನ ಬೌದ್ಧ ಸಂಪ್ರದಾಯಗಳು ತೈವಾನ್ ಮತ್ತು ಹಾಂಗ್ ಕಾಂಗ್‌ನಲ್ಲಿ ಅತ್ಯಂತ ಪ್ರಬಲವಾಗಿವೆ. ತೈವಾನ್ನಲ್ಲಿ ಸನ್ಯಾಸಿಗಳು ಮತ್ತು ಸನ್ಯಾಸಿನಿಗಳಿಂದ ಕೂಡಿದ ಬಲವಾದ ಸನ್ಯಾಸತ್ವದ ಸಮುದಾಯವಿದ್ದು, ಇದನ್ನು ಸಾಮಾನ್ಯ ಸಮುದಾಯವು ಉದಾರವಾಗಿ ಬೆಂಬಲಿಸುತ್ತಿದೆ. ಸಮಾಜದ ಕಲ್ಯಾಣಕ್ಕಾಗಿ, ಬೌದ್ಧ ವಿಶ್ವವಿದ್ಯಾನಿಲಯಗಳು ಮತ್ತು ಬೌದ್ಧ ಕಾರ್ಯಕ್ರಮಗಳಿವೆ. ಹಾಂಗ್ ಕಾಂಗ್ನಲ್ಲಿ ಕೂಡ ಪ್ರವರ್ಧಮಾನಕ್ಕೆ ಬರುತ್ತಿರುವ ಸನ್ಯಾಸತ್ವದ ಸಮುದಾಯವಿದೆ. ಮಲೇಷ್ಯಾ, ಸಿಂಗಾಪುರ್, ಇಂಡೋನೇಷಿಯಾ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ನಲ್ಲಿರುವ ಸಾಗರೋತ್ತರ ಚೀನೀ ಬೌದ್ಧ ಸಮುದಾಯಗಳಲ್ಲಿ, ಪೂರ್ವಜರ ಕಲ್ಯಾಣಕ್ಕಾಗಿ ಮತ್ತು ಜೀವಂತವಾಗಿರುವವರ ಸಮೃದ್ಧಿ ಮತ್ತು ಸಂಪತ್ತಿಗಾಗಿ ಪ್ರಾರ್ಥಿಸುವ ಸಮಾರಂಭಗಳಿಗೆ ಪ್ರಾಧಾನ್ಯ ನೀಡಲಾಗುತ್ತದೆ. ಬೌದ್ಧ ಧರ್ಮಗುರುಗಳು ಭಾವಪರವಶತೆಯಲ್ಲಿ ಮಾತನಾಡಲು ಅನೇಕ ಮಾಧ್ಯಮಗಳಿವೆ ಮತ್ತು ಸಾಮಾನ್ಯ ಸಮುದಾಯವು ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳಿಗಾಗಿ ಇವರ ಬಳಿ ಸಲಹೆಗಾಗಿ ಹೋಗುತ್ತಾರೆ. "ಏಷ್ಯನ್ ಹುಲಿ" ಆರ್ಥಿಕತೆಯ ಹಿಂದೆ ಪ್ರಮುಖ ಪ್ರೇರಕ ಶಕ್ತಿಯಾಗಿರುವ ಚೀನೀ ಉದ್ಯಮಿಗಳು, ತಮ್ಮ ಆರ್ಥಿಕ ಯಶಸ್ಸಿಗಾಗಿ, ಸನ್ಯಾಸಿಗಳಿಗೆ ತಮ್ಮ ಆಚರಣೆಗಳನ್ನು ಮಾಡಲು ಉದಾರವಾದ ದೇಣಿಗೆಗಳನ್ನು ನೀಡುತ್ತಾರೆ. ಜೊತೆಗೆ ತೈವಾನ್, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಮಲೇಷ್ಯಾದಲ್ಲಿ ಟಿಬೆಟಿಯನ್ ಬೌದ್ಧರ ಸಂಖ್ಯೆ ಬೆಳೆಯುತ್ತಿದೆ.  

ದಕ್ಷಿಣ ಕೊರಿಯಾ 

ಬೌದ್ಧಧರ್ಮವು 3 ನೇ ಶತಮಾನದ CE ಯಲ್ಲಿ ಚೀನಾದಿಂದ ಕೊರಿಯಾದ ಪರ್ಯಾಯ ದ್ವೀಪವನ್ನು ತಲುಪಿತು. ಮೂಲಭೂತವಾದಿ ಕ್ರಿಶ್ಚಿಯನ್ ಸಂಘಟನೆಗಳಿಂದ ದಾಳಿಗಳು ಹೆಚ್ಚಿದ್ದರೂ, ದಕ್ಷಿಣ ಕೊರಿಯಾದಲ್ಲಿ ಬೌದ್ಧಧರ್ಮವು ಇನ್ನೂ ಪ್ರಬಲವಾಗಿದೆ. ಕಳೆದ ದಶಕದಲ್ಲಿ, ಇಂತಹ ಗುಂಪುಗಳು ಆರಂಭಿಸಿದ ಸಂಘರ್ಷದಿಂದ ಹೆಚ್ಚಿನ ಸಂಖ್ಯೆಯ ಬೌದ್ಧ ದೇವಾಲಯಗಳು ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ. ಜನಸಂಖ್ಯೆಯಲ್ಲಿ 23% ಬೌದ್ಧರಿದ್ದಾರೆ. 

ಜಪಾನ್ 

ಬೌದ್ಧಧರ್ಮವು, 5 ನೇ ಶತಮಾನದಲ್ಲಿ ಕೊರಿಯಾದಿಂದ ಜಪಾನ್‌ಗೆ ಆಗಮಿಸಿದ್ದು, ಜಪಾನಿನ ಸಮಾಜ ಮತ್ತು ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 13 ನೇ ಶತಮಾನದಿಂದ, ವಿವಾಹಿತ ದೇವಾಲಯದ ಅರ್ಚಕರ ಸಂಪ್ರದಾಯವಿದ್ದು, ಅವರಿಗೆ ಮದ್ಯಪಾನವನ್ನು ಸೇವಿಸಲು ಯಾವುದೇ ನಿಷೇಧವಿಲ್ಲ. ಕಾಲಕ್ರಮೇಣ, ಅಂತಹ ಅರ್ಚಕರು ಬ್ರಹ್ಮಚಾರಿ ಸನ್ಯಾಸಿಗಳ ಸಂಪ್ರದಾಯವನ್ನು ಬದಲಾಯಿಸಿದರು. ಐತಿಹಾಸಿಕವಾಗಿ, ಜಪಾನ್ ಅನ್ನು ಬೌದ್ಧರ ಸ್ವರ್ಗವೆಂದು ನಂಬಿದ್ದು, ಕೆಲವು ಬೌದ್ಧ ಸಂಪ್ರದಾಯಗಳು ಅತಿಯಾಗಿ ರಾಷ್ಟ್ರೀಯತಾವಾದಿಯಾಗಿವೆ. ಆಧುನಿಕ ಕಾಲದಲ್ಲಿ, ಪ್ರಳಯದ ದಿನದಲ್ಲಿ ನಂಬುವ ಕೆಲವು ಮತಾಂಧ ಪಂಥಗಳು ತಮ್ಮನ್ನು ಬೌದ್ಧರೆಂದು ಕರೆದುಕೊಳ್ಳುತ್ತಿವೆ, ಆದರೆ ಅವುಗಳಿಗೆ ಮತ್ತು ಬುದ್ಧ ಶಾಕ್ಯಮುನಿಯ ಬೋಧನೆಗಳಿಗೆ ಯಾವುದೇ ಸಂಬಂಧವಿಲ್ಲ. 

ಸುಮಾರು 40% ರಷ್ಟು ಜನಸಂಖ್ಯೆಯು ಬೌದ್ಧರು ಎಂದು ಗುರುತಿಸಲಾಗಿದೆ ಮತ್ತು ಹೆಚ್ಚಿನ ಜಪಾನೀಯರು, ಜಪಾನಿನ ಮೂಲ ಧರ್ಮವಾದ ಶಿಂಟೋವಿನ ಜೊತೆಗೆ ಮಿಶ್ರಣವಾದ ಬೌದ್ಧಧರ್ಮದಲ್ಲಿ ನಂಬಿಕೆಯಿಡುತ್ತಾರೆ. ಜನನ ಮತ್ತು ಮದುವೆಗಳನ್ನು ಶಿಂಟೋ ಪದ್ಧತಿಗಳನ್ನು ಅನುಸರಿಸಿ ಆಚರಿಸಲಾಗುತ್ತದೆ, ಆದರೆ ಬೌದ್ಧ ಪುರೋಹಿತರು ಅಂತ್ಯಕ್ರಿಯೆಯ ಆಚರಣೆಗಳನ್ನು ನಡೆಸುತ್ತಾರೆ. 

ಜಪಾನ್‌ನಲ್ಲಿರುವ ದೇವಾಲಯಗಳನ್ನು ಪ್ರವಾಸಿಗರು ಮತ್ತು ಸಂದರ್ಶಕರಿಗಾಗಿ ಸುಂದರವಾಗಿ ಇರಿಸಲ್ಪಟ್ಟಿವೆ, ಆದರೂ ಬಹಳಷ್ಟು ದೇವಾಲಯಗಳು ವಾಣಿಜ್ಯೀಕರಣಗೊಂಡಿವೆ. ಬಹುಪಾಲಾಗಿ, ಪ್ರಾಮಾಣಿಕವಾದ ಅಧ್ಯಯನ ಮತ್ತು ಅಭ್ಯಾಸವು ತೀವ್ರವಾಗಿ ದುರ್ಬಲಗೊಂಡಿದೆ. ವಿಶ್ವದ ಅತಿದೊಡ್ಡ ಬೌದ್ಧ ಸಂಘಟನೆಗಳಲ್ಲಿ ಒಂದಾದ ಸೋಕಾ ಗಕ್ಕೈ. ಜಪಾನ್‌ನಲ್ಲಿ ಹುಟ್ಟಿಕೊಂಡಿತು. 

ಮಧ್ಯ ಏಷ್ಯಾದ ಮಹಾಯಾನ ಬೌದ್ಧಧರ್ಮ 

ಟಿಬೆಟ್ 

ಬೌದ್ಧಧರ್ಮವು 7 ನೇ ಶತಮಾನದ CE ಯಲ್ಲಿಯೇ ಟಿಬೆಟ್‌ಗೆ ಆಗಮಿಸಿತು. ಶತಮಾನಗಳವರೆಗೆ, ರಾಜಮನೆತನದ ಪ್ರೋತ್ಸಾಹ ಮತ್ತು ಶ್ರೀಮಂತರ ಬೆಂಬಲದೊಂದಿಗೆ, ಬೌದ್ಧಧರ್ಮವು ಟಿಬೆಟ್ ಜೀವನದ ವಿವಿಧ ಭಾಗಗಳಲ್ಲಿ ಬೇರೂರಿತು. 

ಚೀನಾ ಪ್ರಜೆಗಳ ಗಣರಾಜ್ಯ ಟಿಬೆಟ್ ಅನ್ನು ವಶಪಡಿಸಿಕೊಂಡ ನಂತರ, ಟಿಬೆಟ್ನಲ್ಲಿ ಬೌದ್ಧಧರ್ಮವನ್ನು ತೀವ್ರವಾಗಿ ನಿಗ್ರಹಿಸಲಾಯಿತು. 6,500 ಮಠಗಳು ಮತ್ತು ಸನ್ಯಾಸಿಗಳ ನಿವಾಸಗಳ ಪೈಕಿ, ಕೇವಲ 150 ಅನ್ನು ಹೊರತುಪಡಿಸಿ, ಉಳಿದವುಗಳನ್ನು ನಾಶಮಾಡಲಾಯಿತು, ಮತ್ತು ಬಹುಪಾಲು ಪಾಂಡಿತ್ಯ ಪಡೆದ ಸನ್ಯಾಸಿಗಳು ಮರಣದಂಡನೆಗೆ ಒಳಗಾದರು ಅಥವಾ ಯಾತನೆ ಶಿಬಿರಗಳಲ್ಲಿ ನಿಧನರಾದರು. ಸಾಂಸ್ಕೃತಿಕ ಕ್ರಾಂತಿಯ ನಂತರ, ಮಠಗಳ ಬಹುಪಾಲು ಪುನರ್ನಿರ್ಮಾಣವು ಮಾಜಿ ಸನ್ಯಾಸಿಗಳು, ಸ್ಥಳೀಯ ಜನರು ಮತ್ತು ದೇಶಭ್ರಷ್ಟ ಟಿಬೆಟಿಯನ್ನರ ಪ್ರಯತ್ನಗಳ ಮೂಲಕ ಆಗಿದೆ, ಸರ್ಕಾರವು ಕೇವಲ ಎರಡು ಅಥವಾ ಮೂರರ ಪುನರ್ನಿರ್ಮಾಣಕ್ಕೆ ಸಹಾಯ ಮಾಡಿದೆ.  

ಚೀನೀ ಕಮ್ಯುನಿಸ್ಟ್ ಸರ್ಕಾರವು ನಾಸ್ತಿಕವಾಗಿದೆ, ಆದರೆ ಐದು "ಮಾನ್ಯತೆ ಪಡೆದ ಧರ್ಮಗಳನ್ನು" ಅನುಮತಿಸುತ್ತದೆ, ಅವುಗಳಲ್ಲಿ ಬೌದ್ಧಧರ್ಮವು ಒಂದಾಗಿದೆ.  ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಹೇಳಿಕೊಂಡರೂ, ದಲೈ ಲಾಮಾ ಅವರು ಒಬ್ಬ ಟಿಬೆಟಿಯನ್ ಯುವಕನನ್ನು ಪಂಚನ್ ಲಾಮಾ ಅವರ ಪುನರ್ಜನ್ಮ ಎಂದು ಗುರುತಿಸಿದ ನಂತರ, ಅವನು ಮತ್ತು ಅವನ ಕುಟುಂಬದವರು ತಕ್ಷಣವೇ ಕಣ್ಮರೆಯಾದರು. ನಂತರ, ಚೀನಾ ಸರ್ಕಾರವು ತಮ್ಮದೇ ಆದ ಹುಡುಕಾಟವನ್ನು ಪ್ರಾರಂಭಿಸಿ, ಅರ್ಧ ಚೀನೀ, ಅರ್ಧ ಟಿಬೆಟಿನ ಹುಡುಗನೊಬ್ಬನನ್ನು ಹುಡುಕಿತು. ಅಂದಿನಿಂದ ದಲೈ ಲಾಮಾ ಅವರಿಂದ ಆಯ್ಕೆ ಆದವನು ಎಲ್ಲಿಯೂ ಕಂಡುಬಂದಿಲ್ಲ. 

ಇತ್ತೀಚಿನ ದಿನಗಳಲ್ಲಿ, ಪ್ರತಿಯೊಂದು ಮಠ, ಸನ್ಯಾಸಿ ನಿವಾಸ ಮತ್ತು ದೇವಾಲಯವು ತನ್ನದೇ ಆದ ಸರ್ಕಾರಿ ಕಾರ್ಯ-ತಂಡವನ್ನು ಹೊಂದಿದೆ. ಇವರು ಸಾಧಾರಣ ವಸ್ತ್ರಗಳಲ್ಲಿರುವ ಪೊಲೀಸರಾಗಿದ್ದು, ವಿವಿಧ ಕಾರ್ಯಗಳಲ್ಲಿ "ಸಹಾಯ" ಮಾಡಲು ಇಲ್ಲಿ ಇರುತ್ತಾರೆ. ಇದರರ್ಥ ಅವರು ಸನ್ಯಾಸಿಗಳ ಸಮುದಾಯವನ್ನು ವೀಕ್ಷಿಸುತ್ತಾರೆ ಮತ್ತು ಅವರ ಬಗ್ಗೆ ವರದಿ ನೀಡುತ್ತಾರೆ. ಕೆಲವೊಮ್ಮೆ, ಈ ಕಾರ್ಯ-ತಂಡಗಳು ಸನ್ಯಾಸಿಗಳ ಜನಸಂಖ್ಯೆಯಷ್ಟೇ ದೊಡ್ಡದಾಗಿರಬಹುದು. ಸರ್ಕಾರದ ಹಸ್ತಕ್ಷೇಪದ ಹೊರತಾಗಿ, ಟಿಬೆಟ್‌ನಲ್ಲಿ ಬೌದ್ಧರು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಅರ್ಹ ಶಿಕ್ಷಕರ ಕೊರತೆ. ಸನ್ಯಾಸಿಗಳು, ಸನ್ಯಾಸಿನಿಯರು ಮತ್ತು ಸಾಮಾನ್ಯ ಜನರು ಹೆಚ್ಚಿನದನ್ನು ಕಲಿಯಲು ಉತ್ಸುಕರಾಗಿದ್ದಾರೆ, ಆದರೆ ಬಹಳಷ್ಟು ಶಿಕ್ಷಕರು ಕೇವಲ ಸೀಮಿತ ತರಬೇತಿಯನ್ನು ಹೊಂದಿದ್ದಾರೆ. ಕಳೆದ ದಶಕದಲ್ಲಿ, ಸರ್ಕಾರವು ಲಾಸಾ ಬಳಿ ಬೌದ್ಧ "ವಿಶ್ವವಿದ್ಯಾಲಯ"ವೊಂದನ್ನು ಪ್ರಾರಂಭಿಸಿತು. ಇದು ಯುವ ತುಲ್ಕುಗಳಿಗೆ ತರಬೇತಿಯನ್ನು ನೀಡುವ ಶಾಲೆಯಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಅವರು ಟಿಬೆಟಿಯನ್ ಭಾಷೆ, ಕ್ಯಾಲಿಗ್ರಫಿ, ವೈದ್ಯಶಾಸ್ತ್ರ ಅಕ್ಯುಪಂಕ್ಚರ್ ಮತ್ತು ಕೆಲವು ಬೌದ್ಧ ತತ್ತ್ವಶಾಸ್ತ್ರವನ್ನು ಕಲಿಯುತ್ತಾರೆ. ಡಿಜಿಟಲ್ ಯುಗವು ಯುವ ಟಿಬೆಟಿಯನ್ನರನ್ನು ಬೌದ್ಧಧರ್ಮಕ್ಕೆ ಹತ್ತಿರ ತಂದಿದೆ. ಅವರಲ್ಲಿ ಹಲವರು ಬೌದ್ಧ ಬೋಧನೆಗಳು ಮತ್ತು ಕಥೆಗಳನ್ನು ಹಂಚಿಕೊಳ್ಳುವ ‘ವೀ-ಚಾಟ್’ ಮತ್ತು ‘ವೇಯ್ಬೋ’ ಗುಂಪುಗಳ ಸದಸ್ಯರಾಗುತ್ತಾರೆ. ಇಂದು ಬೌದ್ಧ ಧರ್ಮದ ಬಗ್ಗೆ ಹೆಚ್ಚಾಗಿ ಕಲಿಯುವುದನ್ನು, ಒಬ್ಬರ ಗುರುತನ್ನು "ನಿಜವಾದ ಟಿಬೆಟಿಯನ್" ಎಂದು ಬಲಪಡಿಸುವ ಮಾರ್ಗವಾಗಿ ನೋಡಲಾಗುತ್ತದೆ. 

ಪೂರ್ವ ತುರ್ಕಿಸ್ತಾನ್ 

ಪೂರ್ವ ತುರ್ಕಿಸ್ತಾನದಲ್ಲಿ (ಕ್ಸಿನ್‌ಜಿಯಾಂಗ್)ನಲ್ಲಿದ್ದ ಕಲ್ಮಿಕ್ ಮಂಗೋಲರ ಹೆಚ್ಚಿನ ಮಠಗಳನ್ನು ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ನಾಶ ಮಾಡಲಾಯಿತು. ಈಗ ಹಲವಾರು ಮಠಗಳನ್ನು ಪುನರ್ನಿರ್ಮಾಣ ಮಾಡಲಾಗಿದೆ, ಆದರೆ ಟಿಬೆಟ್‌ಗಿಂತಲೂ ಹೆಚ್ಚಾದ ಶಿಕ್ಷಕರ ಕೊರತೆ ಇಲ್ಲಿದೆ. ಅಧ್ಯಯನ ಸೌಲಭ್ಯಗಳ ಕೊರತೆಯಿಂದ ಯುವ ಸನ್ಯಾಸಿಗಳು ತುಂಬಾ ನಿರುತ್ಸಾಹಗೊಂಡಿದ್ದಾರೆ ಮತ್ತು ಅನೇಕರು ಹೊರಟುಹೋಗಿದ್ದಾರೆ. 

ಒಳ ಮಂಗೋಲಿಯಾ 

ಚೀನಾ ಪ್ರಜೆಗಳ ಗಣರಾಜ್ಯದ ನಿಯಂತ್ರಣದಲ್ಲಿ, ಒಳ ಮಂಗೋಲಿಯಾದಲ್ಲಿದ್ದ ಟಿಬೆಟಿಯನ್ ಬೌದ್ಧರು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದರು. ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ, ಪಶ್ಚಿಮ ಭಾಗದಲ್ಲಿದ್ದ ಹೆಚ್ಚಿನ ಮಠಗಳು ನಾಶವಾದವು. ಮಂಚೂರಿಯಾದ ಭಾಗವಾಗಿದ್ದ ಪೂರ್ವಾರ್ಧದಲ್ಲಿ, ಎರಡನೆಯ ಮಹಾಯುದ್ಧದ ಕೊನೆಯಲ್ಲಿ, ರಷ್ಯನ್ನರು ಉತ್ತರ ಚೀನಾವನ್ನು ಜಪಾನಿಯರಿಂದ ಸ್ವತಂತ್ರಗೊಳಿಸಲು ಸಹಾಯ ಮಾಡುವಾಗ, ಅನೇಕ ಮಠಗಳು ಸ್ಟಾಲಿನ್ನ ಸೈನ್ಯದಿಂದ ನಾಶವಾಗಿದ್ದವು. 700 ಮಠಗಳಲ್ಲಿ ಕೇವಲ 27 ಉಳಿದಿವೆ. 

1980 ರ ದಶಕದಿಂದ, ದೇವಾಲಯಗಳನ್ನು ಮರುಸ್ಥಾಪಿಸಲು ಮತ್ತು ಮಠಗಳನ್ನು ಪುನರ್ನಿರ್ಮಿಸಲು ಪ್ರಯತ್ನಗಳನ್ನು ಮಾಡಲಾಗಿದೆ, ಇದರಲ್ಲಿ ಕೇವಲ ಮಂಗೋಲಿಯನ್ನರು ಮಾತ್ರವಲ್ಲದೆ ಹಾನ್ ಚೀನಿಯರು ಕೂಡ ಭಾಗವಹಿಸಿದ್ದಾರೆ. 

ಮಂಗೋಲಿಯಾ 

ಮಂಗೋಲಿಯಾದಲ್ಲಿ, ಸಾವಿರಾರು ಮಠಗಳು ಇದ್ದವು, ಇವೆಲ್ಲವನ್ನೂ1937 ರಲ್ಲಿ ಸ್ಟಾಲಿನ್ನ ಆದೇಶದ ಮೇಲೆ ಭಾಗಶಃ ಅಥವಾ ಸಂಪೂರ್ಣವಾಗಿ ನಾಶವಾದವು. 1946 ರಲ್ಲಿ, ಒಂದು ಮಠವನ್ನು ಉಲಾನ್ ಬಾತರ್‌ನಲ್ಲಿ ಸಾಂಕೇತಿಕವಾಗಿ ಪುನಃ ತೆರೆಯಲಾಯಿತು ಮತ್ತು 1970 ರ ದಶಕದಲ್ಲಿ ಸನ್ಯಾಸಿಗಳಿಗಾಗಿ ಐದು ವರ್ಷಗಳ ತರಬೇತಿಯ ಒಂದು ಕಾಲೇಜನ್ನು ತೆರೆಯಲಾಯಿತು. ಪಠ್ಯಕ್ರಮವನ್ನು ಹೆಚ್ಚು ಸಂಕ್ಷಿಪ್ತಗೊಳಿಸಲಾಗಿತ್ತು ಮತ್ತು ಮಾರ್ಕ್ಸ್ವಾದಿ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು, ಸನ್ಯಾಸಿಗಳು ಸಾರ್ವಜನಿಕರಿಗಾಗಿ ಸೀಮಿತ ಸಂಖ್ಯೆಯ ಆಚರಣೆಗಳನ್ನು ನಡೆಸಲು ಅನುಮತಿ ನೀಡಲಾಗಿತ್ತು. 1990 ರಲ್ಲಿ ಕಮ್ಯುನಿಸಂನ ಪತನದ ನಂತರ, ದೇಶಭ್ರಷ್ಟ ಟಿಬೆಟಿಯನ್ನರ ಸಹಾಯದಿಂದ ಬೌದ್ಧಧರ್ಮದ ಪ್ರಬಲವಾದ ಪುನರುಜ್ಜೀವನವಾಗಿದೆ. ಅನೇಕ ಹೊಸ ಸನ್ಯಾಸಿಗಳನ್ನು ತರಬೇತಿಗಾಗಿ ಭಾರತಕ್ಕೆ ಕಳುಹಿಸಲಾಗಿದೆ ಮತ್ತು 200 ಕ್ಕೂ ಹೆಚ್ಚು ಮಠಗಳನ್ನು ಸಾಧಾರಣ ಪ್ರಮಾಣದಲ್ಲಿ ಪುನರ್ನಿರ್ಮಿಸಲಾಗಿದೆ. 

1990 ರ ನಂತರ ಮಂಗೋಲಿಯಾದಲ್ಲಿ, ಬೌದ್ಧಧರ್ಮವು ಎದುರಿಸಿದ ಅತ್ಯಂತ ಗಂಭೀರ ಸಮಸ್ಯೆಯೆಂದರೆ ಆಕ್ರಮಣಕಾರಿ ಮಾರ್ಮನ್, ಅಡ್ವೆಂಟಿಸ್ಟ್ ಮತ್ತು ಬ್ಯಾಪ್ಟಿಸ್ಟ್ ಕ್ರಿಶ್ಚಿಯನ್ ಮಿಷನರಿಗಳ ಆಗಮನ, ಅವರು ಇಂಗ್ಲಿಷ್ ಕಲಿಸುವ ಸೋಗಿನಲ್ಲಿ ಇಲ್ಲಿಗೆ ಬಂದರು. ಜನರು ಮತಾಂತರಗೊಂಡರೆ, ಅಮೆರಿಕದಲ್ಲಿ ಅಧ್ಯಯನ ಮಾಡಲು ಅವರಿಗೆ ಹಣ ಮತ್ತು ಸಹಾಯವನ್ನು ನೀಡುತ್ತಾರೆ ಮತ್ತು ಮಂಗೋಲಿನ ಆಡುಮಾತಿನ ಭಾಷೆಯಲ್ಲಿ ಯೇಸುವಿನ ಬಗ್ಗೆ ಸುಂದರವಾದ ಮುದ್ರಿತ, ಉಚಿತ ಕಿರುಪುಸ್ತಕಗಳನ್ನು ನೀಡುತ್ತಾರೆ. ಹೆಚ್ಚು ಹೆಚ್ಚು ಯುವಕರು ಕ್ರಿಶ್ಚಿಯನ್ ಧರ್ಮಕ್ಕೆ ಆಕರ್ಷಿತರಾಗುವುದರೊಂದಿಗೆ, ಬೌದ್ಧ ಸಂಘಟನೆಗಳು ಆಡುಮಾತಿನಲ್ಲಿ ಬೌದ್ಧಧರ್ಮದ ಬಗ್ಗೆ ಮಾಹಿತಿಯನ್ನು ಮುದ್ರಿತ ಸಾಮಗ್ರಿಗಳು, ದೂರದರ್ಶನ ಕಾರ್ಯಕ್ರಮಗಳು ಮತ್ತು ರೇಡಿಯೋ ಕಾರ್ಯಕ್ರಮಗಳ ಮೂಲಕ ವಿತರಿಸಲು ಪ್ರಾರಂಭಿಸಿವೆ.

ಈಗ ಮಂಗೋಲಿಯಾದಲ್ಲಿ ಆಕ್ರಮಣಕಾರಿ ಧಾರ್ಮಿಕ ಮತಾಂತರವನ್ನು ನಿಷೇಧಿಸಲಾಗಿದೆ. 2010 ರಲ್ಲಿ, ಜನಸಂಖ್ಯೆಯ 53% ಬೌದ್ಧರಿದ್ದರು ಮತ್ತು 2.1% ಕ್ರಿಶ್ಚಿಯನ್ನರಿದ್ದರು.  

ಗಡಿಪಾರಾದ ಟಿಬೆಟಿಯನ್ನರು 

ಮಧ್ಯ ಏಷ್ಯಾದ ಟಿಬೆಟಿನ ಸಂಪ್ರದಾಯಗಳಲ್ಲಿ, ಅತ್ಯಂತ ಪ್ರಬಲವಾದದ್ದು ಪರಮಪೂಜ್ಯರಾದ ದಲೈ ಲಾಮಾ ಅವರ ಸುತ್ತವಿರುವ ನಿರಾಶ್ರಿತರ ಸಮುದಾಯದೊಂದಿಗೆ ಇದ್ದು, ಇವರು 1959 ರಲ್ಲಿನ ಚೀನೀ ಮಿಲಿಟರಿಯಿಂದ ಟಿಬೆಟ್ನ ಆಕ್ರಮಣದ ವಿರುದ್ಧ ಎಬ್ಬಿದ ಜನಪ್ರಿಯ ದಂಗೆಯ ಸಮಯದಿಂದ ಭಾರತದಲ್ಲಿ ಆಶ್ರಯ ಪಡುತ್ತಿದ್ದಾರೆ. ಅವರು ಟಿಬೆಟ್‌ನಲ್ಲಿರುವ ಬಹಳಷ್ಟು ಪ್ರಮುಖ ಮಠಗಳನ್ನು ಮತ್ತು ಹಲವಾರು ಸನ್ಯಾಸಿಗಳ ನಿವಾಸಗಳನ್ನು ಪುನರಾರಂಭಿಸಿದ್ದಾರೆ ಮತ್ತು ಸನ್ಯಾಸಿ ವಿದ್ವಾಂಸರು, ಮಾಸ್ಟರ್ ಧ್ಯಾನಿಗಳು ಮತ್ತು ಶಿಕ್ಷಕರಿಗೆ ಸಾಂಪ್ರದಾಯಿಕವಾದ ಪೂರ್ಣ ತರಬೇತಿಯ ಕಾರ್ಯಕ್ರಮವನ್ನು ನೀಡಿದ್ದಾರೆ. ಟಿಬೆಟಿನ ಬೌದ್ಧ ಸಂಪ್ರದಾಯದ ಪ್ರತಿಯೊಂದು ಪದ್ಧತಿಯ ಎಲ್ಲಾ ಅಂಶಗಳನ್ನು ಸಂರಕ್ಷಿಸಲು ಶೈಕ್ಷಣಿಕ, ಸಂಶೋಧನಾ ಮತ್ತು ಪ್ರಕಟಣಾ ಸೌಲಭ್ಯಗಳಿವೆ. 

ಗಡಿಪಾರಾದ ಟಿಬೆಟಿಯನ್ನರು ಲಡಾಖ್ ಮತ್ತು ಸಿಕ್ಕಿಂ ಸೇರಿದಂತೆ ಭಾರತ, ನೇಪಾಳ ಮತ್ತು ಭೂತಾನ್‌ನ ಹಿಮಾಲಯ ಪ್ರದೇಶಗಳಿಗೆ ಶಿಕ್ಷಕರನ್ನು ಕಳುಹಿಸುವ ಮೂಲಕ ಮತ್ತು ವಂಶಾವಳಿಗಳನ್ನು ಮರುಪ್ರಸಾರ ಮಾಡುವ ಮೂಲಕ ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿದ್ದಾರೆ. ಈ ಪ್ರದೇಶಗಳಲ್ಲಿನ ಅನೇಕ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಟಿಬೆಟಿನ ನಿರಾಶ್ರಿತರ ಮಠಗಳು ಮತ್ತು ಸನ್ಯಾಸಿಗಳ ನಿವಾಸದಲ್ಲಿ ತಮ್ಮ ಶಿಕ್ಷಣ ಮತ್ತು ತರಬೇತಿಯನ್ನು ಪಡೆಯುತ್ತಿದ್ದಾರೆ. 

ನೇಪಾಳ 

ನೇಪಾಳಿನ ಬಹುಪಾಲು ಜನಸಂಖ್ಯೆಯು ಹಿಂದೂಗಳಾಗಿದ್ದರೂ, ಬುದ್ಧನ ಜನ್ಮಭೂಮಿಯಲ್ಲಿ ಪ್ರಬಲವಾದ ಬೌದ್ಧ ಸಾಂಸ್ಕೃತಿಕ ಪ್ರಭಾವಗಳನ್ನು ಇಂದಿಗೂ ಕಾಣಬಹುದು. ನೆವಾರ್ಸ್, ಗುರುಂಗ್ಸ್ ಮತ್ತು ತಮಾಂಗ್‌ಗಳಂತಹ ಜನಾಂಗೀಯ ಗುಂಪುಗಳು ನೇಪಾಳದ ಬೌದ್ಧಧರ್ಮದ ಸಾಂಪ್ರದಾಯಿಕ ರೂಪವನ್ನು ಅಭ್ಯಾಸ ಮಾಡುತ್ತಾರೆ. ಜನಸಂಖ್ಯೆಯಲ್ಲಿ 9% ರಷ್ಟು ಬೌದ್ಧರಿದ್ದಾರೆ. 

ಬೌದ್ಧಧರ್ಮ ಮತ್ತು ಹಿಂದೂ ಧರ್ಮದ ಮಿಶ್ರಣವನ್ನು ಅನುಸರಿಸಿ, ನೇಪಾಳವು ಮಠಗಳೊಳಗೆ ಜಾತಿ ಭೇದಗಳನ್ನು ಇಟ್ಟುಕೊಂಡಿರುವ ಏಕೈಕ ಬೌದ್ಧ ಸಮಾಜವಾಗಿದೆ. ಕಳೆದ 500 ವರ್ಷಗಳಲ್ಲಿ ವಿವಾಹಿತ ಸನ್ಯಾಸಿಗಳ ಅಸ್ಥಿತ್ವವನ್ನು ಕಂಡಿದೆ, ಆನುವಂಶಿಕ ಜಾತಿಯೊಂದಿಗೆ ಅವರು ದೇವಾಲಯದ ಪಾಲಕರು ಮತ್ತು ಧಾರ್ಮಿಕ ನಾಯಕರಾಗುತ್ತಾರೆ.  

ರಷ್ಯಾ 

ಬುರಿಯಾಟಿಯಾ, ತುವಾ ಮತ್ತು ಕಲ್ಮಿಕಿಯಾ ರಷ್ಯಾದಲ್ಲಿರುವ ಮೂರು ಸಾಂಪ್ರದಾಯಿಕವಾದ ಟಿಬೆಟಿಯನ್ ಬೌದ್ಧ ಪ್ರದೇಶಗಳಾಗಿವೆ. ಬುರಿಯಾಟಿಯಾದಲ್ಲಿ ಹಾನಿಗೊಳಗಾದ ಮೂರು ಮಠಗಳನ್ನು ಹೊರತುಪಡಿಸಿ, ಈ ಪ್ರದೇಶಗಳಲ್ಲಿನ ಎಲ್ಲಾ ಮಠಗಳನ್ನು 1930 ರ ದಶಕದ ಉತ್ತರಾರ್ಧದಲ್ಲಿ ಸ್ಟಾಲಿನ್ ಸಂಪೂರ್ಣವಾಗಿ ನಾಶಪಡಿಸಿದನು. 1940 ರ ದಶಕದಲ್ಲಿ, ಸ್ಟಾಲಿನ್ ಕಟ್ಟುನಿಟ್ಟಾದ ಕೆಜಿಬಿಯ ಕಣ್ಗಾವಲಿನಲ್ಲಿ, ಬುರಿಯಾಟಿಯಾದಲ್ಲಿ ಎರಡು ಸಾಂಕೇತಿಕ ಮಠಗಳನ್ನು ಮರು-ತೆರೆದನು; ವಿವಸ್ತ್ರಗೊಂಡ ಸನ್ಯಾಸಿಗಳು ಆಚರಣೆಗಳಿಗಾಗಿ, ಹಗಲಿನಲ್ಲಿ ತಮ್ಮ ನಿಲುವಂಗಿಯನ್ನು ಸಮವಸ್ತ್ರವಾಗಿ ತೊಡುತ್ತಿದ್ದರು. ಕಮ್ಯುನಿಸಂನ ಪತನದ ನಂತರ, ಈ ಎಲ್ಲಾ ಮೂರು ಪ್ರದೇಶಗಳಲ್ಲಿ ಬೌದ್ಧಧರ್ಮದ ದೊಡ್ಡ ಪುನರುಜ್ಜೀವನವಾಗಿದೆ. ಗಡಿಪಾರಾದ ಟಿಬೆಟಿಯನ್ನರು ಶಿಕ್ಷಕರನ್ನು ಕಳುಹಿಸಿಕೊಟ್ಟಿದ್ದಾರೆ ಮತ್ತು ಹೊಸತಾಗಿರುವ ಯುವ ಸನ್ಯಾಸಿಗಳನ್ನು ತರಬೇತಿಗಾಗಿ ಭಾರತದಲ್ಲಿನ ಟಿಬೆಟಿಯನ್ ಮಠಗಳಿಗೆ ಕಳುಹಿಸಲಾಗುತ್ತದೆ. ಬುರಿಯಾಟಿಯಾ, ತುವಾ ಮತ್ತು ಕಲ್ಮಿಕಿಯಾದಲ್ಲಿ 20 ಕ್ಕೂ ಹೆಚ್ಚು ಮಠಗಳನ್ನು ಮರುಸ್ಥಾಪಿಸಲಾಗಿದೆ. 

ಬೌದ್ಧರಲ್ಲದ ದೇಶಗಳು 

ಯುರೋಪಿಯನ್ನರು ಬೌದ್ಧ ದೇಶಗಳನ್ನು ವಶಪಡಿಸಿಕೊಂಡ ಕಾರಣದಿಂದ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಮತ್ತು ವಿದ್ವಾಂಸರ ಕೃತಿಗಳ ಮೂಲಕ ಬೌದ್ಧಧರ್ಮದ ವಿವರವಾದ ಜ್ಞಾನವು 19 ನೇ ಶತಮಾನದ ಯುರೋಪಿಗೆ ಬಂದಿತು. ಅದೇ ಸಮಯದಲ್ಲಿ, ಚೀನೀ ಮತ್ತು ಜಪಾನಿನ ವಲಸೆ ಕಾರ್ಮಿಕರು ಉತ್ತರ ಅಮೆರಿಕಾದಲ್ಲಿ ದೇವಾಲಯಗಳನ್ನು ನಿರ್ಮಿಸಿದರು.

ಬೌದ್ಧಧರ್ಮದ ಎಲ್ಲಾ ಪ್ರಕಾರಗಳು, ಪ್ರಪಂಚದಾದ್ಯಂತ, ಸಾಂಪ್ರದಾಯಿಕವಾಗಿ ಬೌದ್ಧವಾಗಿಲ್ಲದ ದೇಶಗಳಲ್ಲೂ ಸಹ ಕಂಡುಬರುತ್ತವೆ. ಇದು ಎರಡು ಪ್ರಮುಖ ಗುಂಪುಗಳನ್ನು ಒಳಗೊಂಡಿದೆ: ಏಷ್ಯಾದ ವಲಸಿಗರು ಮತ್ತು ಏಷ್ಯನ್ ಅಲ್ಲದ ಅನುಯಾಯಿಗಳು. ಏಷ್ಯನ್ ವಲಸಿಗರು, ವಿಶೇಷವಾಗಿ ಯುಎಸ್ (US) ಮತ್ತು ಆಸ್ಟ್ರೇಲಿಯಾದಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಯುರೋಪ್‌ನಲ್ಲಿ, ತಮ್ಮದೇ ಆದ ಸಂಪ್ರದಾಯಗಳ ಅನೇಕ ದೇವಾಲಯಗಳನ್ನು ಹೊಂದಿದ್ದಾರೆ. ಈ ದೇವಾಲಯಗಳು ಭಕ್ತಿಯ ಆಚರಣೆಯನ್ನು ಉತ್ತೇಜಿಸುವುದು ಮತ್ತು ವಲಸಿಗ ಸಮುದಾಯಗಳು ತಮ್ಮ ವೈಯಕ್ತಿಕ ಸಾಂಸ್ಕೃತಿಕ ಗುರುತನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಸಮುದಾಯ ಕೇಂದ್ರವನ್ನು ಒದಗಿಸುವುದಕ್ಕೆ ಪ್ರಾಧಾನ್ಯ ನೀಡುತ್ತವೆ. ಇಂದು, ಅಮೆರಿಕದಲ್ಲಿ ನಾಲ್ಕು ದಶಲಕ್ಷಕ್ಕೂ ಹೆಚ್ಚು ಬೌದ್ಧರಿದ್ದಾರೆ ಮತ್ತು ಯುರೋಪ್‌ನಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಬೌದ್ಧರಿದ್ದಾರೆ. 

ಇಂದು ಪ್ರಪಂಚದಾದ್ಯಂತ, 100 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಪ್ರತಿ ಖಂಡದಲ್ಲಿ ಎಲ್ಲಾ ಸಂಪ್ರದಾಯಗಳ ಸಾವಿರಾರು ಬೌದ್ಧ “ಧರ್ಮ ಕೇಂದ್ರಗಳ”ನ್ನು ಕಾಣಬಹುದಾಗಿದೆ. ಈ ಟಿಬೆಟಿಯನ್, ಝೆನ್ ಮತ್ತು ಥೆರವಾದ ಕೇಂದ್ರಗಳಲ್ಲಿ ಹೆಚ್ಚಿನವುಗಳನ್ನು ಏಷ್ಯನ್ ಆಗಿಲ್ಲದವರು ಆಗಾಗ್ಗೆ ಭೇಟಿ ನೀಡಿದ್ದು, ಇಲ್ಲಿ ಧ್ಯಾನ, ಅಧ್ಯಯನ ಮತ್ತು ಧಾರ್ಮಿಕ ಆಚರಣೆಗೆ ಪ್ರಾಧಾನ್ಯ ನೀಡಲಾಗುತ್ತದೆ. ಇಲ್ಲಿನ ಶಿಕ್ಷಕರಲ್ಲಿ ಪಾಶ್ಚಾತ್ಯರು ಮತ್ತು ಏಷ್ಯಾದ ಜನಾಂಗೀಯ ಬೌದ್ಧರಿಬ್ಬರೂ ಸೇರಿದ್ದಾರೆ. US, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಹೆಚ್ಚಿನ ಸಂಖ್ಯೆಯ ಕೇಂದ್ರಗಳನ್ನು ಕಾಣಬಹುದಾಗಿದೆ. ಆಳವಾದ ತರಬೇತಿಗಾಗಿ ಅನೇಕ ಗಂಭೀರ ವಿದ್ಯಾರ್ಥಿಗಳು ಏಷ್ಯಾಕ್ಕೆ ಭೇಟಿ ನೀಡುತ್ತಾರೆ. ಇದಲ್ಲದೆ, ಪ್ರಪಂಚದಾದ್ಯಂತ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಬೌದ್ಧ ಅಧ್ಯಯನ ಕಾರ್ಯಕ್ರಮಗಳಿವೆ ಮತ್ತು ಬೌದ್ಧಧರ್ಮ ಮತ್ತು ಇತರ ಧರ್ಮಗಳು, ವಿಜ್ಞಾನ, ಮನೋವಿಜ್ಞಾನ ಮತ್ತು ವೈದ್ಯಕೀಯ ವಿಷಯಗಳ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಸಂವಾದ ಮತ್ತು ವಿಚಾರಗಳ ವಿನಿಮಯವಿದೆ. ಈ ವಿಷಯದಲ್ಲಿ ಪರಮಪೂಜ್ಯ ದಲೈ ಲಾಮಾ ಅವರು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

Top