ನಿಂದನೀಯ ಆಧ್ಯಾತ್ಮಿಕ ಶಿಕ್ಷಕರೊಂದಿಗೆ ವ್ಯವಹರಿಸಲು ದಲೈ ಲಾಮಾ ಅವರ ಸಲಹೆ

ಟಿಬೆಟ್‌ನಿಂದ ಬಂದಿರುವವರು ಮತ್ತು ಇಲ್ಲಿರುವ ಹೆಚ್ಚಿನ ಸಂಖ್ಯೆಯ ಚೀನೀಯರು ಸ್ಪಷ್ಟವಾಗಿರಲೇಬೇಕಾದ ಒಂದು ವಿಷಯವಿದೆ. ಮೋಸಗೊಳಿಸುವ, ಕಪಟ ಆಧ್ಯಾತ್ಮಿಕ ಶಿಕ್ಷಕರು ಇರುವಾಗ, ನೀವು ಅವರ ಸುಳ್ಳು ಮತ್ತು ವಂಚನೆಯನ್ನು ಬಹಿರಂಗಪಡಿಸಬೇಕು. ನೀವು ಇದರ ಬಗ್ಗೆ ಸ್ಪಷ್ಟವಾಗಿರಬೇಕು. 

ಕೆಲವು ವರ್ಷಗಳ ಹಿಂದೆ, ಧರ್ಮಶಾಲಾದಲ್ಲಿ ಟಿಬೆಟಿನ ಬೌದ್ಧಧರ್ಮ, ಝೆನ್ ಬೌದ್ಧಧರ್ಮ ಮತ್ತು ಅಂತಹ ಇತರ ಬೋಧನೆಗಳನ್ನು ಬೋಧಿಸುತ್ತಿದ್ದ ಪಾಶ್ಚಿಮಾತ್ಯ ಗುರುಗಳ ಸಮ್ಮೇಳನವಿತ್ತು. ಈ ಸಮ್ಮೇಳನದ ಸಂದರ್ಭದಲ್ಲಿ, ಅವರಲ್ಲಿ ಕೆಲವು ಪಾಶ್ಚಿಮಾತ್ಯ ಗುರುಗಳು ಹೀಗೆ ವರದಿ ನೀಡಿದರು, “ಇತ್ತೀಚಿನ ದಿನಗಳಲ್ಲಿ, ಝೆನ್ ಗುರುಗಳಲ್ಲಿ, ಕೆಲವರನ್ನು ಬಹಳಾ ನಿಂದನೀಯ ಎಂದು ಬಹಿರಂಪಡಿಸಬಹುದು, ಅದೇ ರೀತಿ ಟಿಬೆಟಿನ ಲಾಮಾಗಳಲ್ಲಿ, ಕೆಲವರನ್ನು ಬಹಳಾ ನಿಂದನೀಯ ಎಂದು ಬಹಿರಂಗಪಡಿಸಬಹುದು. ಇಂತಹ ಸಂದರ್ಭಗಳಲ್ಲಿ, ಅವರನ್ನು ತಡೆಯಲು ನಮಗೆ ಕೌಶಲ್ಯಪೂರ್ಣ ವಿಧಾನಗಳು ಮತ್ತು ರೀತಿಗಳು ಬೇಕಾಗುತ್ತವೆ.” 

ಆ ಸಮಯದಲ್ಲಿ, ನಾನು ಅವರಿಗೆ ಹೇಳಿದೆ, “ನಾವೇ ಅವರನ್ನು ತಡೆಯಲು ಸಾಧ್ಯವಿಲ್ಲ. ಭಗವಾನ್ ಬುದ್ಧ ಏನನ್ನು ತ್ಯಜಿಸಬೇಕು ಮತ್ತು ಏನನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ಮತ್ತು ನಿರ್ಣಾಯಕವಾಗಿ ಘೋಷಿಸಿರುವರು. ಉದಾಹರಣೆಗೆ, ಅವರು ಸ್ಪಷ್ಟವಾಗಿ ಮತ್ತು ನಿರ್ಣಾಯಕವಾಗಿ ಹೀಗೆ ಹೇಳಿದರು, ‘ಇತರರು ಬೋಧನೆಗಳ ಗುರಿಗಳಿಗೆ ಅನುಗುಣವಾಗಿ ವರ್ತಿಸುವಂತೆ ಪ್ರೇರೇಪಿಸಿ ಮತ್ತು ನೀವಾಗಿಯೇ ಈ ಗುರಿಗಳೊಂದಿಗೆ ಧೃಡವಾಗಿ ವರ್ತಿಸಿ’. ಆದರೆ ಅವರು ಅದನ್ನು ಪಾಲಿಸುವುದಿಲ್ಲ; ಅವರು ಅದನ್ನು ಗೌರವಿಸುವುದಿಲ್ಲ. ಭಗವಾನ್ ಬುದ್ಧ ಹೇಳಿದ್ದನ್ನು ಅವರು ಮೌಲ್ಯೀಕರಿಸದಿದ್ದರೆ, ನಾವು ಏನೇ ಹೇಳಿದರೂ ಅದರ ಉಪಯೋಗವೇನು? ಅದರಿಂದ ಯಾವುದೇ ಸಹಾಯವಾಗುವುದಿಲ್ಲ.”

ನೀವು ಆ ಪರಿಸ್ಥಿತಿಯನ್ನು ಸಾರ್ವಜನಿಕಗೊಳಿಸಬೇಕು. ಧರ್ಮವನ್ನು ಬೋಧಿಸುವ ಆದರೆ ಅಜಾಗರೂಕತೆಯಿಂದ ವರ್ತಿಸುವ ವ್ಯಕ್ತಿಗಳ ಇಂತಹ ಪ್ರಕರಣಗಳಿವೆ ಎಂದು ಅವರ ಹೆಸರುಗಳನ್ನು ಉಲ್ಲೇಖಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿ. ಅದನ್ನು ಪ್ರಚಾರ ಮಾಡಿ. ಇದರಿಂದ ಸ್ವಲ್ಪ ಸಹಾಯವಾಗಬಹುದು ಮತ್ತು ಸ್ವಲ್ಪ ಪ್ರಯೋಜನವಾಗಬಹುದು, ಆದರೆ ಇದರ ಹೊರತಾಗಿ, ನಮ್ಮ ವಿವರಣೆಯು ಅವರನ್ನು ತಡೆಯಲು ಸಹಾಯ ಮಾಡುವುದಿಲ್ಲ.” ನಾನು ಅವರಿಗೆ ಹೀಗೆ ಹೇಳಿದೆ. 

ಇದು ಹೀಗೆ ಎಂದು ನೀವು ತಿಳಿದುಕೊಳ್ಳಬೇಕು. ಮೋಸಗೊಳಿಸುವ, ಕಪಟ ಶಿಕ್ಷಕರು ಇರುವ ಪರಿಸ್ಥಿತಿ ಬಂದಾಗಲೆಲ್ಲಾ, ಅವರ ಹೆಸರನ್ನು ಪ್ರಚಾರ ಮಾಡಿ ಮತ್ತು ಕೊನೆಯಲ್ಲಿ, ಅವರನ್ನು ಬಂಧಿಸುವುದು ಅಗತ್ಯವಿದ್ದರೆ, ಅವರನ್ನು ಬಂಧಿಸಿ. ಅಮೆರಿಕಾದಲ್ಲಿ, ಕೆಲವರನ್ನು ಬಂಧಿಸಲಾಗಿದೆ, ಮತ್ತು ಬಹುಶಃ ತೈವಾನ್‌ನಲ್ಲಿಯೂ ಸಹ ಕೆಲವರನ್ನು ಬಂಧಿಸಲಾಗಿದೆ. ಅವರನ್ನು ಕಾನೂನಿನ ಪ್ರಕಾರ ಬಂಧಿಸಲೇಬೇಕು. 

"ಲಾಮಾ" ಎಂಬ ಬಿರುದನ್ನು ಹೊಂದಿರುವ, ಸಾರ್ವಜನಿಕ ದೃಷ್ಟಿಯಲ್ಲಿ ಪ್ರಮುಖರಾಗಿರುವ ಶಿಕ್ಷಕರನ್ನು ಅವಮಾನಕರ ಎಂದು ಬಹಿರಂಗಪಡಿಸಿದಾಗ, ಇದರಿಂದ ಬುದ್ಧಧರ್ಮಕ್ಕೆ ಹಾನಿಯುಂಟಾಗುತ್ತದೆ ಎಂದು ನೀವು ಚಿಂತಿಸಬೇಕಾಗಿಲ್ಲ. ಒಂದು ಸಂದರ್ಭದಲ್ಲಿ, ಕೆಲವು ವರ್ಷಗಳ ಹಿಂದೆ, ನಾನು ಇಂಗ್ಲೆಂಡ್‌ನಲ್ಲಿದ್ದಾಗ, ಬ್ರಿಟಿಷ್ ಧರ್ಮ ಕೇಂದ್ರವೊಂದರಲ್ಲಿ, ಮಹಿಳೆಯರೊಂದಿಗಿನ ತಮ್ಮ ನಡವಳಿಕೆಯಿಂದ ಒಬ್ಬ ಲಾಮಾ ಹಗರಣ ಉಂಟುಮಾಡಿದ್ದರು ಮತ್ತು ಅವರನ್ನು ಅಮೆರಿಕದಲ್ಲಿ ಕಾನೂನಿನ ಪ್ರಕಾರ ಬಂಧಿಸಲಾಗಿತ್ತು. ಅವರ ವಿದ್ಯಾರ್ಥಿಗಳು ನಾವು ಬಹಳಾ ಚಿಂತಿತರಾಗಿದ್ದೇವೆ ಎಂದು ನನಗೆ ಹೇಳಿದರು. ಹೀಗಿದ್ದಲ್ಲಿ, ಬುದ್ಧನ ಬೋಧನೆಗಳಿಗೆ ಹಾನಿಯುಂಟಾಗುವ ಅಪಾಯವಿದೆ ಎಂದು ಅವರು ಚಿಂತಿತರಾಗಿದ್ದರು. ಅವರು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ನಾನು ಅವರಿಗೆ ಹೇಳಿದೆ. ಭಗವಾನ್ ಬುದ್ಧನ ಆಗಮನವಾಗಿ 2500 ವರ್ಷಗಳು ಕಳೆದಿವೆ. ಇತ್ತೀಚಿನ ದಿನಗಳಲ್ಲಿ, ಕೆಲವೇ ಕೆಲವು ಧರ್ಮಗುರುಗಳನ್ನು ಅವಮಾನಕರ ಎಂದು ಕರೆಯಲಾಗಿದೆ. ಅವರು ಬುದ್ಧನ ಬೋಧನೆಗಳಿಗೆ ಹಾನಿಯುಂಟುಮಾಡಲು ಸಾಧ್ಯವಿಲ್ಲ. ಅವಮಾನಕರ ಎಂದು ಕರೆಯಲ್ಪಟ್ಟ ಈ ಶಿಕ್ಷಕರು ಬುದ್ಧನ ಬೋಧನೆಗಳಿಗೆ ಹಾನಿಯುಂಟುಮಾಡಲು ಸಾಧ್ಯವಿಲ್ಲ. ನಾನು ಅವರಿಗೆ ಹೀಗೆ ಹೇಳಿದೆ. ಇದರ ಬಗ್ಗೆ ನನಗೆ ವಿಶ್ವಾಸವಿದೆ. 

Top