ಸರಳವಾಗಿ ಹೇಳುವುದಾದರೆ, ಬೋಧಿಸತ್ವನು ಒಬ್ಬ ಬುದ್ಧಿವಂತ ಮತ್ತು ಕರುಣಾಮಯಿ ವ್ಯಕ್ತಿಯಾಗಿದ್ದು, ಅವನು ಎಲ್ಲರನ್ನೂ ಪ್ರೀತಿಸುತ್ತಾನೆ. ನಮ್ಮಲ್ಲಿ ಸಾಕಷ್ಟು ಬುದ್ಧಿವಂತ, ಕರುಣಾಮಯಿ ವ್ಯಕ್ತಿಗಳಿದ್ದಾರೆ ಹೌದು, ಹಾಗಾದರೆ ಬೋಧಿಸತ್ವರ ವಿಶಿಷ್ಟತೆಯೇನು? ಮೊದಲಿಗೆ, ಬೋಧಿಸತ್ವನು ಕೇವಲ ಇತರರಿಗೆ ಒಳ್ಳೆಯದನ್ನು ಬಯಸುವುದಿಲ್ಲ, ಜೊತೆಗೆ ಇತರರ ದುಃಖವನ್ನು ಕೊನೆಗೊಳಿಸಲು ಸಹಾಯ ಮಾಡುವ ಅನೇಕ ಕೌಶಲ್ಯಪೂರ್ಣ ವಿಧಾನಗಳನ್ನೂ ಅವರು ತಿಳಿದಿರುತ್ತಾರೆ ಮತ್ತು ವಾಸ್ತವದಲ್ಲಿ, ಎಲ್ಲಾ ಜೀವಿಗಳಿಗೆ ಸಹಾಯ ಮಾಡಲು ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. ಬೋಧಿಸತ್ವರು ಎಲ್ಲಾ ಸಮಸ್ಯೆಗಳ ಆಳವಾದ ಮೂಲವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತುಇವುಗಳಿಂದ ಜೀವಿಗಳಿಗೆ ಮತ್ತೊಮ್ಮೆ ಸಮಸ್ಯೆಗಳಾದಂತೆ, ಇವನ್ನು ಬುಡದಲ್ಲೇ ಕತ್ತರಿಸಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಹೊಂದಿರುತ್ತಾರೆ. ಈ ಜ್ಞಾನ ಮತ್ತು ಗುರಿಯೇ ಬೋಧಿಸತ್ವನ ಕರುಣೆಯನ್ನು ಶಕ್ತಿಯುತವಾಗಿಸುತ್ತದೆ.
ಬೋಧಿಸತ್ವ ಎಂಬ ಪದವು ಎರಡು ಸಂಸ್ಕೃತ ಪದಗಳಿಂದ ಬಂದಿದೆ: "ಬೋಧಿ," ಅಂದರೆ "ಜ್ಞಾನೋದಯ" ಮತ್ತು "ಸತ್ವ," ಅಂದರೆ "ಇರುವುದು." ಆರಂಭಿಕ ಬೌದ್ಧ ಬೋಧನೆಗಳಲ್ಲಿ, "ಬೋಧಿಸತ್ವ" ಎಂಬ ಪದವನ್ನು ಬುದ್ಧ ಶಾಕ್ಯಮುನಿಯನ್ನು, ಅವರ ಜ್ಞಾನೋದಯವಾಗುವ ಮೊದಲು ಉಲ್ಲೇಖಿಸಲು ಬಳಸಲಾಗುತ್ತಿತ್ತು. ಉದಾಹರಣೆಗೆ, ಬುದ್ಧನ ಹಿಂದಿನ ಜೀವನದ ಕಥೆಗಳಲ್ಲಿ, ಅವರನ್ನು ಬೋಧಿಸತ್ವ ಎಂದು ಉಲ್ಲೇಖಿಸಲಾಗಿದೆ. ಹೀಗೆ, ಲೆಕ್ಕವಿಲ್ಲದಷ್ಟು ಜೀವಿಗಳ ಜಾಗೃತಿಗಾಗಿ ನಂಬಲಾಗದ ಶ್ರಮ ಮತ್ತು ಪ್ರಯತ್ನಪಟ್ಟ ಬುದ್ಧನಂತೆ, ಬೋಧಿಸತ್ವ ಎಂದರೆ ಎಲ್ಲಾ ಜೀವಿಗಳಿಗೆ ಪ್ರಯೋಜನವಾಗುವಂತೆ, ಜ್ಞಾನೋದಯದ ಪ್ರಯಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ವ್ಯಕ್ತಿಯಾಗಿದ್ದಾರೆ. ತಮ್ಮಲ್ಲಿ ಇನ್ನೂ ಅನೇಕ ಮಿತಿಗಳಿವೆ ಎಂದು ಅರಿತುಕೊಂಡು, ಈ ಹಾದಿಯಲ್ಲಿ ನಡೆಯುತ್ತಾರೆ. ಇತರರಿಗೆ ಸಹಾಯ ಮಾಡುವ ಹಲವು ಮಾರ್ಗಗಳನ್ನು ಅವರು ತಿಳಿದಿದ್ದರೂ, ಪ್ರತಿ ವ್ಯಕ್ತಿಗೆ ಯಾವ ವಿಧಾನವು ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಅವರಿಗೆ ಸಂಪೂರ್ಣವಾಗಿ ನೋಡಲಾಗುವುದಿಲ್ಲ. ಇದು ಬುದ್ಧನಿಗೆ ಮಾತ್ರ ತಿಳಿದಿದೆ. ಆದ್ದರಿಂದ, ಇತರರಿಗೆ ಸಾಧ್ಯವಾದಷ್ಟು ಒಳ್ಳೆಯದಾಗುವಂತೆ ಸಹಾಯ ಮಾಡುವಾಗ, ಅವರು ಬುದ್ಧರಾಗಲು ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಿರುತ್ತಾರೆ.
ಬೋಧಿಸತ್ವರು ಎಲ್ಲಾ ಜೀವಿಗಳ ವಿಮೋಚನೆಗಾಗಿ ಕೆಲಸ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಅವರ ಅಂತಿಮ ಗುರಿಯು ಕೇವಲ ಜ್ಞಾನೋದಯವನ್ನು ಪಡೆಯುವುದು ಮಾತ್ರವಲ್ಲ, ಆದರೆ ಎಲ್ಲಾ ಜೀವಿಗಳು ಜ್ಞಾನೋದಯವನ್ನು ಪಡೆಯುವಂತೆ ಸಹಾಯ ಮಾಡುವುದಾಗಿದೆ. ಅವರ ಮಹಾನ್ ಸಹಾನುಭೂತಿಯಿಂದಾಗಿ, ಅವರು ಇತರರಿಗೆ ಸಹಾಯ ಮಾಡಲು ತಮ್ಮ ಜ್ಞಾನೋದಯವನ್ನೇ ಮುಂದೂಡುತ್ತಾರೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕರು ಮತ್ತು ರಕ್ಷಕರಾಗಿ ಗೌರವಿಸಲ್ಪಡುತ್ತಾರೆ.
ಬೋಧಿಸತ್ವರ ಅಭ್ಯಾಸಗಳು ಮತ್ತು ಗುಣಗಳು
ಒಂದು ನಿರ್ದಿಷ್ಟ ಮಟ್ಟಿಗೆ, ಬುದ್ಧನಲ್ಲಿ ಪೂರ್ಣವಾಗಿ ಕಾಣಬಹುದಾದ ಅನೇಕ ಗುಣಗಳನ್ನು ಬೋಧಿಸತ್ವರು ಹೊಂದಿರುತ್ತಾರೆ. ಅವರ ಜ್ಞಾನೋದಯಕ್ಕೆ ಹತ್ತಿರವಾಗುವಂತೆ ಮತ್ತು ಇತರರಿಗೆ ಸಹಾಯವಾಗುವಂತೆ ಈ ಗುಣಗಳನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತಾರೆ. ಬೋಧಿಸತ್ವರು ಹೊಂದಿರುವ ಕೆಲವು ಗುಣಗಳನ್ನು ಇಲ್ಲಿ ನೋಡೋಣ:
- ಸಹಾನುಭೂತಿ - ಬೋಧಿಸತ್ವರು ಎಲ್ಲಾ ಜೀವಿಗಳನ್ನು ಪ್ರೀತಿಸುತ್ತಾರೆ. ನಮ್ಮಲ್ಲಿ ಹೆಚ್ಚಿನವರು ನಮ್ಮ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತೇವೆ, ಆದರೆ ಬೋಧಿಸತ್ವರು ಇತರರ ಬಗ್ಗೆ ಮೊದಲು ಕಾಳಜಿ ವಹಿಸುತ್ತಾರೆ. ಅವರು ಒಬ್ಬ ತಾಯಿಯಂತೆ, ಎಲ್ಲಾ ಜೀವಿಗಳನ್ನು ತಮ್ಮ ಪ್ರೀತಿಯ ಏಕೈಕ ಮಗುವಿನಂತೆ ನೋಡುತ್ತಾರೆ. ಆ ಮಗು ಅನಾರೋಗ್ಯಕ್ಕೀಡಾದಾಗ, ತಾಯಿಗೆ ತಮ್ಮ ಮಗು ಬಳಲುತ್ತಿರುವುದನ್ನು ನೋಡಲು ಸಹಿಸಲಾಗದೆ, ಅದರ ಸಹಾಯಕ್ಕಾಗಿ ಏನನ್ನಾದರೂ ಮಾಡಲು ತಯಾರಾಗಿರುತ್ತಾರೆ. ಅದೇ ರೀತಿ, ಬೋಧಿಸತ್ವರಿಗೆ ನಮ್ಮಲ್ಲಿ ಒಬ್ಬರ ಬಳಲಿಕೆಯನ್ನೂ ಸಹಿಸಲಾಗುವುದಿಲ್ಲ. ಅವರು ಕೇವಲ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಲು ಬಯಸುವುದಲ್ಲದೆ, ಅವರಿಗೆ ಸಾಧ್ಯವಾದಷ್ಟು ಎಂದಾದರೂ, ಎಲ್ಲಾದರೂ ಸಹಾಯ ಮಾಡಲು ಬಯಸುತ್ತಾರೆ.
- ಬುದ್ಧಿವಂತಿಕೆ - ಬೋಧಿಸತ್ವರು ಯಾವುದು ಸಹಾಯಕ ಮತ್ತು ಹಾನಿಕಾರಕ ಎಂಬುದರ ನಡುವಿನ ವ್ಯತ್ಯಾಸವನ್ನು ಗೋಚರಿಸಲು ಸಮರ್ಥರಾಗಿದ್ದಾರೆ. ಅವರು ವಾಸ್ತವವನ್ನು ಕಲ್ಪನೆಯಿಂದ ಪ್ರತ್ಯೇಕಿಸಬಹುದು. ಈ ಆಳವಾದ ತಿಳುವಳಿಕೆಗಳು ಇತರರನ್ನು ವಿಮೋಚನೆಯತ್ತ ಮಾರ್ಗದರ್ಶಿಸಲು ಸಹಾಯ ಮಾಡುತ್ತವೆ.
- ಕೌಶಲ್ಯಪೂರ್ಣ ವಿಧಾನಗಳು - ಬೋಧಿಸತ್ವರು ಇತರರಿಗೆ ಹೇಗೆ ಸಹಾಯ ಮಾಡುವುದು ಮತ್ತು ಅದಕ್ಕಾಗಿ ವಿವಿಧ ವಿಧಾನಗಳನ್ನು ಬಳಸುವುದನ್ನು ತಿಳಿದುಕೊಳ್ಳುವಲ್ಲಿ ಪರಿಣತರಾಗಿದ್ದಾರೆ.
- ಉದಾರತೆ - ಬೋಧಿಸತ್ವರು ಉದಾರಿಗಳಾಗಿರುತ್ತಾರೆ - ಅದು ವಸ್ತು ಆಸ್ತಿಯ ವಿಷಯದಲ್ಲಾಗಲಿ ಅಥವಾ ಅವರ ಸಮಯ ಮತ್ತು ಶಕ್ತಿಯ ವಿಷಯದಲ್ಲಾಗಲಿ. ಅವರು ಇತರರಿಗೆ ಸಹಾಯ ಮಾಡಲು ತಮ್ಮಲ್ಲಿರುವ ಎಲ್ಲವನ್ನೂ ನೀಡಲು ಸಿದ್ಧರಾಗಿರುತ್ತಾರೆ ಮತ್ತು ಅವರು ತಮ್ಮ ಆಸ್ತಿ ಮತ್ತು ಸಾಧನೆಗಳಿಗೆ ಬಂಧಿಯಾಗಿರುವುದಿಲ್ಲ.
- ತಾಳ್ಮೆ - ಬೋಧಿಸತ್ವರು ತಮ್ಮೊಂದಿಗೆ ಮತ್ತು ಇತರರೊಂದಿಗೆ ತಾಳ್ಮೆಯಿಂದಿರುತ್ತಾರೆ. ಜ್ಞಾನೋದಯದ ಹಾದಿಯು ದೀರ್ಘವಾಗಿದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಸಾಧ್ಯವಾಗಿರುವ ವೇಗದಲ್ಲಿ ಪ್ರಯಾಣಿಸುವಾಗ, ಇತರರಿಗೆ ಸಹಾಯ ಮಾಡಲು ಸಮಯವನ್ನು ತೆಗೆದುಕೊಳ್ಳಲು ಅವರು ಸಿದ್ಧರಾಗಿರುತ್ತಾರೆ.
- ನೈತಿಕ ನಡವಳಿಕೆ - ಬೋಧಿಸತ್ವರು ನೈತಿಕ ನಡವಳಿಕೆಗೆ ಬದ್ಧರಾಗಿದ್ದಾರೆ, ಅಂದರೆ ಅವರು ಇತರರಿಗೆ ಹಾನಿಯನ್ನುಂಟುಮಾಡುವ ಕ್ರಿಯೆಗಳನ್ನು ಅನುಸರಿಸದೆ, ಎಲ್ಲಾ ಜೀವಿಗಳಿಗೆ ಪ್ರಯೋಜನಕಾರಿಯಾಗುವ ಕ್ರಮಗಳನ್ನು ಬೆಳೆಸಿಕೊಳ್ಳುತ್ತಾರೆ.
- ಧೈರ್ಯ – ಬೋಧಿಸತ್ವರು ನಿರ್ಭೀತರು ಮತ್ತು ಧೈರ್ಯಶಾಲಿಗಳಾಗಿದ್ದು, ಇತರರಿಗೆ ಸಹಾಯ ಮಾಡಲು ಅಡೆತಡೆಗಳು ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಅವರಿಗೆ ಕಷ್ಟಕರ ಸಂದರ್ಭಗಳಿಂದ ಹೆದರಿಕೆಯಾಗುವುದಿಲ್ಲ ಮತ್ತು ಇತರರ ಉಳಿತಿಗಾಗಿ ಅಪಾಯಗಳನ್ನು ಎದುರಿಸಲು ಹಿಂಜರಿಯುವುದಿಲ್ಲ.
ವರ್ತಮಾನ ಕಾಲದಲ್ಲಿ ಕಾರ್ಯಗತರಾಗಿರುವ ಬೋಧಿಸತ್ವ
ಬೋಧಿಸತ್ವರ ಉತ್ತಮ ಉದಾಹರಣೆಯೆಂದರೆ ಪರಮಪೂಜ್ಯರಾದ ಹದಿನಾಲ್ಕನೆಯ ದಲೈ ಲಾಮಾ. ಪರಮಪೂಜ್ಯರು ಮುಂಜಾನೆಯಿಂದ ತಡರಾತ್ರಿಯವರೆಗೆ ದಣಿವರಿಯಿಲ್ಲದೆ, ನಿಲ್ಲಿಸದೆ ಮಾಡುತ್ತಾರೆ. ಅವರು ಪ್ರತಿದಿನ ಬೆಳಿಗ್ಗೆ 3 ಗಂಟೆಗೆ ದಿನ ಪ್ರಾರಂಭಿಸುತ್ತಾರೆ ಮತ್ತು ಅನೇಕ ಗಂಟೆಗಳ ಧ್ಯಾನದ ನಂತರ, ಉಳಿದ ದಿನವನ್ನು ಇತರರನ್ನು ಭೇಟಿ ಮಾಡಲು ಮತ್ತು ಸಹಾಯ ಮಾಡಲು ಮೀಸಲಿಡುತ್ತಾರೆ.
ಒಮ್ಮೆ, ಸುದೀರ್ಘ ಪ್ರಯಾಣದ ನಂತರ ಪರಮಪೂಜ್ಯರು ಸ್ಪಿತಿಗೆ ಬಂದರು. ಅವರು ಈಗಾಗಲೇ ಅನೇಕ ದಿನಗಳಿಂದ ಪಾಠ ಮಾಡುತ್ತಿದ್ದು, ಹೆಚ್ಚಾಗಿ ಧ್ವನಿಯನ್ನು ಉಪಯೋಗಿಸಿದ ಕಾರಣ ಅದು ಹೊರಟುಹೋಗಿತ್ತು. ಅವರನ್ನು ಇನ್ನಷ್ಟು ಆಯಾಸಗೊಳಿಸಲು ಬಯಸದೆ, ನಾನು ಆಸನದಲ್ಲಿ ಕುಳಿತುಕೊಳ್ಳುವಂತೆ ಮತ್ತು ಪ್ರೇಕ್ಷಕರಿಗೆ ಸಹಾನುಭೂತಿಯ ಓಂ ಮಣಿ ಪದ್ಮೆ ಹಃ ಮಂತ್ರದ ಪ್ರಸಾರವನ್ನು ನೀಡುವಂತೆ ವಿನಂತಿಸಿದೆ, ಅದನ್ನು ಅವರು ಒಪ್ಪಿದರು. ಆದರೆ ಒಮ್ಮೆ ಬೋಧನೆ ಪ್ರಾರಂಭವಾದಾಗ, ನಾನು ಅವರಿಗೆ ನಿರಾಳವಾಗಿರಲು ವಿನಂತಿಸಿದ್ದರೂ, ಅವರು ಚೆನ್ನಾಗಿ ನಿದ್ರೆ ಮಾಡಿದ್ದಾರೆಂದೂ, ಮತ್ತು ಯಾರ ಸಮಯವನ್ನು ವ್ಯರ್ಥಮಾಡಲು ಬಯಸದೆ, ಅವರು ಪಾಠ ಮಾಡಲು ನಿರ್ಧರಿಸಿದರೆಂದೂ ನನಗೆ ಹೇಳಿದರು. ನಂತರ ಅವರು ಫೌಂಡೇಶನ್ ಆಫ್ ಆಲ್ ಗುಡ್ ಕ್ವಾಲಿಟೀಸ್‌ನ ಬಗ್ಗೆ ನಿರಂತರವಾಗಿ ಸುಮಾರು 3 ಗಂಟೆಗಳ ಕಾಲ ಪಾಠ ಮಾಡಿದರು ಮತ್ತು ಈ ಸಮಯದಲ್ಲಿ ಅವರ ಧ್ವನಿಯೂ ಚೇತರಿಸಿಕೊಂಡಿತು.
ಬೋಧನೆಯ ನಂತರ, ನಾನು ಅವರನ್ನು ಅವರ ಕೋಣೆಗೆ ಕರೆದುಕೊಂಡು ಹೋದೆ, ಅಲ್ಲಿ ಅವರು ತಮ್ಮ ಹೊರ ನಿಲುವಂಗಿಯನ್ನು ತೆಗೆದು, ಸೋಫಾದ ಮೇಲೆ ಇರಿಸಿದರು ಮತ್ತು ಅವರು ತುಂಬಾ ದಣಿದಿದ್ದರಿಂದ ನಾನು ಹೊರಡಬಹುದು ಎಂದು ಹೇಳಿದರು. ಆದರೆ ಅವರ ಮುಖದಲ್ಲಿ ನನಗೆ ಯಾವ ದಣಿವೂ ಕಾಣಲಿಲ್ಲ; ಬದಲಿಗೆ, ನಾನು ಒಂದು ಮಹಾನ್ ಶಕ್ತಿಯಿಂದ ತುಂಬಿದ ಮುಖವನ್ನು ಮಾತ್ರ ಕಂಡೆ. 80 ವರ್ಷ ವಯಸ್ಸಿನ ಯಾವ ಸಾಮಾನ್ಯ ವ್ಯಕ್ತಿಯೂ ಈ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದೆ. ಪರಮಪೂಜ್ಯ ದಲೈ ಲಾಮಾ ಅವರು ನಿಜವಾಗಿಯೂ ಅದ್ಭುತವಾಗಿರುವರು!
ಇದರ ಹಿಂದಿನ ರಹಸ್ಯವೇನು ಎಂದು ನಾನು ಆಶ್ಚರ್ಯಪಟ್ಟೆ. ಇದು ಸಹಾನುಭೂತಿಯೇ ಹೊರತು ಬೇರೇನೂ ಅಲ್ಲ. ಇತರರು ಶಾಶ್ವತವಾಗಿ ದುಃಖದಿಂದ ಹೊರಬರುವಂತೆ ಸಹಾಯ ಮಾಡಲು ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. ನಾವು 4 ಅಥವಾ 5 ಗಂಟೆಗಳ ಕಾಲ ವೀಡಿಯೋ ಗೇಮ್‌ಗಳನ್ನು ಆಡಬಹುದು ಮತ್ತು ನಂತರ ದಣಿಯುವುದಿಲ್ಲ, ಆದರೆ ಇತರರಿಗೆ ಸಹಾಯ ಮಾಡುವುದು ಮಾತ್ರ ಪ್ರಯೋಜನಕಾರಿಯಾಗಿದೆ ಎಂದು ಅವರು ಪರಿಗಣಿಸುವುದರಿಂದ ಅವರಿಗೆ ದಣಿವಾಗುವುದಿಲ್ಲ. ಬೋಧಿಸತ್ವನ ಗುಣಗಳನ್ನು ನೋಡಿದಾಗ - ಸಹಾನುಭೂತಿ, ಬುದ್ಧಿವಂತಿಕೆ, ಧೈರ್ಯ ಮತ್ತು ಮುಂತಾದವು – ಪರಮಪೂಜ್ಯರೂ ಒಬ್ಬ ಬೋಧಿಸತ್ವರಾಗಿರುವರು ಎಂದು ನಾವು ನಿಸ್ಸಂದೇಹವಾಗಿ ಒಪ್ಪಿಕೊಳ್ಳಬಹುದು.
ಕಡೆನುಡಿ
ಬೋಧಿಸತ್ವರು ಶಕ್ತಿಯುತ ಮತ್ತು ಸಹಾನುಭೂತಿಯ ಮಾರ್ಗದರ್ಶಕರಾಗಿದ್ದು, ಅವರು ಜ್ಞಾನೋದಯದ ಹಾದಿಯಲ್ಲಿರುವ ತಮ್ಮ ಅನುಯಾಯಿಗಳಿಗೆ ಸಹಾಯ ಮಾಡುತ್ತಾರೆ. ಅವರ ನಿಸ್ವಾರ್ಥ ಕಾರ್ಯಗಳು ಮತ್ತು ಬೋಧನೆಗಳ ಮೂಲಕ, ಅವರು ಬೌದ್ಧರಿಗೆ ಮಾದರಿಗಳಾಗಿದ್ದಾರೆ ಮತ್ತು ನಮ್ಮಲ್ಲಿ ಇದೇ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತಾರೆ. ಅಂತೆಯೇ, ಬೋಧಿಸತ್ವರು ಪ್ರಪಂಚದಾದ್ಯಂತದ ಲಕ್ಷಾಂತರ ಬೌದ್ಧರ ಆಧ್ಯಾತ್ಮಿಕ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಮತ್ತು ಅವರ ಸ್ವಂತ ಜೀವನದಲ್ಲಿ ಹೆಚ್ಚಿನ ಬುದ್ಧಿವಂತಿಕೆ ಮತ್ತು ಸಹಾನುಭೂತಿಯನ್ನು ಪಡೆಯಲು ಬಯಸುವವರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನದ ಮೂಲವಾಗಿದ್ದಾರೆ.
ಬಾಹ್ಯವಾಗಿ, ಒಬ್ಬರು ಬೋಧಿಸತ್ವರೇ ಇಲ್ಲವೇ ಎಂದು ಹೇಳಲು ಯಾವುದೇ ಮಾರ್ಗವಿಲ್ಲ ಮತ್ತು ವಾಸ್ತವದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಬೋಧಿಸತ್ವರಾಗಬಹುದು. ಎಲ್ಲಾ ಜೀವಿಗಳಿಗೆ ಸಹಾಯ ಮಾಡುವ ಗುರಿಯೊಂದಿಗೆ ನಾವು ಬುದ್ಧನಾಗಲು ಶ್ರಮ ಪಡುತ್ತಿದ್ದರೆ, ನಾವು ಬೋಧಿಸತ್ವರಾಗಿರುತ್ತೇವೆ. ನಮ್ಮಲ್ಲಿ ಇತರರಿಗೆ ಸಹಾಯ ಮಾಡುವ ಬಯಕೆಯೊಂದಿಗೆ ಸಾಮರ್ಥ್ಯವೂ ಇದ್ದರೆ ಮತ್ತು ನಮ್ಮ ಸಮಯ ಮತ್ತು ಶಕ್ತಿಯನ್ನು ಎಲ್ಲಾ ಜೀವಿಗಳಿಗಾಗಿ ಮುಡುಪಾಗಿಸಿದರೆ ಅದು ಎಷ್ಟು ಅದ್ಭುತವಾಗಿರುವುದು. ನಾವು ನಿಜವಾಗಿಯೂ ಇತರರ ಉಳಿತನ್ನು ಬಯಸಿದರೆ, ನಾವು ಮೊದಲು ಬೋಧಿಸತ್ವರಾಗಬೇಕು, ನಂತರ ನಾವು ಬುದ್ಧನಾಗಲು ಶ್ರಮಪಡಬಹುದು. ಇದಕ್ಕಿಂತ ಹೆಚ್ಚಾಗಿ ಜೀವನವನ್ನು ಅರ್ಥಪೂರ್ಣವಾಗಿಸಲು ಸಾಧ್ಯವಿಲ್ಲ.