What is karma raimond klavins unsplash

ನಮ್ಮ ಹಿಂದಿನ ನಡವಳಿಕೆಗಳ ಮಾದರಿಗಳ ಆಧಾರದ ಮೇಲಿನ ಮಾನಸಿಕ ಪ್ರಚೋದನೆಗಳನ್ನು ಕರ್ಮ ಎನ್ನುತ್ತೇವೆ - ಅದು ನಮ್ಮ ವರ್ತನೆ, ಮಾತು ಮತ್ತು ಕ್ರಿಯೆಗಳನ್ನು ಪ್ರೇರೇಪಿಸುತ್ತದೆ. ನಮ್ಮ ಅಭ್ಯಾಸಗಳಿಂದ ನಮ್ಮ ಮೆದುಳಿನಲ್ಲಿರುವ ನರ ಮಾರ್ಗಗಳು ಹೇಗೆ ಸುಗಮಗೊಂಡಿವೆಯೆಂದರೆ, ಅವುಗಳು ಸರಿಯಾದ ಸಂದರ್ಭಗಳಿಂದ ಪ್ರಚೋದಿಸಲ್ಪಟ್ಟಾಗ, ನಮ್ಮ ಸಾಮಾನ್ಯ ನಡವಳಿಕೆಯ ಮಾದರಿಗಳನ್ನು ಪುನರಾವರ್ತಿಸುತ್ತವೆ. ಸರಳವಾಗಿ ಹೇಳುವುದಾದರೆ, ನಾವು ಏನನ್ನಾದರೂ ಮಾಡಲು ಬಯಸುತ್ತೇವೆ, ನಂತರ ನಾವು ಅವನ್ನು ಆವೇಗಗೊಂಡು ಮಾಡುತ್ತೇವೆ. 

ಕರ್ಮವನ್ನು ಸಾಮಾನ್ಯವಾಗಿ ವಿಧಿ ಅಥವಾ ಪೂರ್ವನಿರ್ಧಾರ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಯಾರಾದರೂ ಗಾಯಗೊಂಡಾಗ ಅಥವಾ ಬಹಳಷ್ಟು ಹಣವನ್ನು ಕಳೆದುಕೊಂಡಾಗ, ಜನರು ಹೀಗೆ ಹೇಳಬಹುದು, "ಅದು ಅವರ ದುರದೃಷ್ಟ, ಅದು ಅವರ ಕರ್ಮ." ಇದು ದೇವರ ಚಿತ್ತದ ಕಲ್ಪನೆಯನ್ನು ಹೋಲುತ್ತದೆ – ಅಂದರೆ ನಮ್ಮಿಂದ ಅರ್ಥಮಾಡಿಕೊಳ್ಳಲಾಗದ ಅಥವಾ ನಮ್ಮ ನಿಯಂತ್ರಣದಲ್ಲಿಲದ ವಿಷಯ. ಆದರೆ ಬೌದ್ಧ ಧರ್ಮದಲ್ಲಿರುವ ಕರ್ಮದ ಕಲ್ಪನೆ ಹೀಗಿರುವುದಿಲ್ಲ. ಕರ್ಮವು ನಮ್ಮಲಿನ ಮಾನಸಿಕ ಪ್ರಚೋದನೆಗಳನ್ನು ಸೂಚಿಸುತ್ತದೆ, ಅದು ಯಾರಾದರೂ ನಮ್ಮನ್ನು ಕಿರಿಕಿರಿಗೊಳಿಸಿದಾಗ ಅವರತ್ತ ಕಿರುಚುವಂತೆ ಮಾಡುತ್ತದೆ ಅಥವಾ ಸಮಸ್ಯೆಯನ್ನು ಪರಿಹರಿಸಲು ನಾವು ಶಾಂತವಾಗುವವರೆಗೆ ತಾಳ್ಮೆಯಿಂದ ಕಾಯುವಂತೆ ಮಾಡುತ್ತದೆ. ಇದು ನಾವು ಮೆಟ್ಟಿಲುಗಳನ್ನು ಇಳಿಯುವಾಗ ನಮ್ಮ ಕಾಲು ಉಳುಕುವಂತೆ ತಿರುಗಿಸುವ ಅಭ್ಯಾಸ ಅಥವಾ ಎಚ್ಚರಿಕೆಯಿಂದ ಕೆಳಗಿಳಿಯುವ ಅಭ್ಯಾಸಕ್ಕೆ ಕಾರಣವಾಗುವ ಯೋಚನೆಗಳನ್ನು ಸಹ ಸೂಚಿಸುತ್ತದೆ. 

ಕರ್ಮ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಧೂಮಪಾನವು ಒಂದು ಉತ್ತಮ ಉದಾಹರಣೆಯಾಗಿದೆ - ನಾವು ಒಂದು ಸಿಗರೇಟ್ ಸೇದಿದಾಗ ಅದು ಮತ್ತೊಂದನ್ನು ಸೇದುವಂತೆ ನಮ್ಮನ್ನು ಪ್ರಚೋದಿಸುತ್ತದೆ. ನಾವು ಹೆಚ್ಚು ಧೂಮಪಾನ ಸೇವಿಸದಂತೆ, ಧೂಮಪಾನವನ್ನು ಮುಂದುವರಿಸುವ ಪ್ರವೃತ್ತಿಯು ಬಲಗೊಳ್ಳುತ್ತದೆ, ನಂತರ ನಾವು ಯೋಚಿಸದೆ ಮತ್ತೊಂದನ್ನು ಹಚ್ಚುವಂತೆ, ಆವೇಗಯುಕ್ತ ಕರ್ಮವು ನಮ್ಮನ್ನು ಪ್ರಚೋದಿಸುತ್ತದೆ. ಧೂಮಪಾನವನ್ನು ಸೇವಿಸುವ ಭಾವನೆ ಮತ್ತು ಪ್ರಚೋದನೆಯು ನಾವು ಮೊದಲೇ ನಿರ್ಮಿಸಿದ ಅಭ್ಯಾಸಗಳಿಂದ ಬರುತ್ತದೆ ಎಂಬುದನ್ನು ಕರ್ಮ ವಿವರಿಸುತ್ತದೆ. ಧೂಮಪಾನದಿಂದ ಕೇವಲ ಅದನ್ನು ಪುನರಾವರ್ತಿಸುವ ಪ್ರಚೋದನೆಯನ್ನು ಸೃಷ್ಟಿಯಾಗುವುದಿಲ್ಲ, ಜೊತೆಗೆ ದೇಹದ ದೈಹಿಕ ಸಾಮರ್ಥ್ಯಗಳ ಮೇಲೆ ಪ್ರಭಾವ ಬೀರುತ್ತದೆ, ಉದಾಹರಣೆಗೆ, ಧೂಮಪಾನದಿಂದ ಕ್ಯಾನ್ಸರ್ ಆಗಬಹುದು. ಇಲ್ಲಿ, ಪ್ರಚೋದನೆ ಮತ್ತು ಕ್ಯಾನ್ಸರ್, ಎರಡೂ ನಮ್ಮ ಹಿಂದಿನ ಆವೇಗಯುಕ್ತ ಕ್ರಿಯೆಗಳ ಫಲಿತಾಂಶಗಳಾಗಿದ್ದು ಇವನ್ನು "ಕರ್ಮದ ಫಲ" ಎಂದು ಕರೆಯಲಾಗುತ್ತದೆ. 

ನಮ್ಮ ಅಭ್ಯಾಸಗಳನ್ನು ಬದಲಾಯಿಸುವುದು 

ಕರ್ಮವು ಅರ್ಥಪೂರ್ಣವಾಗಿದ್ದು, ಅದು ನಮ್ಮ ಭಾವನೆಗಳು ಮತ್ತು ಪ್ರಚೋದನೆಗಳು ಎಲ್ಲಿಂದ ಬರುತ್ತವೆ ಮತ್ತು ನಾವು ಕೆಲವೊಮ್ಮೆ ಸಂತೋಷ ಮತ್ತು ಕೆಲವೊಮ್ಮೆ ಅಸಂತೋಷವನ್ನು ಏಕೆ ಅನುಭವಿಸುತ್ತೇವೆ ಎಂಬುದನ್ನು ವಿವರಿಸುತ್ತದೆ. ಇವೆಲ್ಲವೂ ನಮ್ಮ ನಡವಳಿಕೆಯ ಮಾದರಿಗಳ ಪರಿಣಾಮವಾಗಿ ಉದ್ಭವಿಸುತ್ತವೆ. ಆದ್ದರಿಂದ, ನಾವು ಏನು ಮಾಡುತ್ತೇವೆ ಮತ್ತು ನಮಗೆ ಏನಾಗುತ್ತದೆ ಎಂಬುದು ಪೂರ್ವನಿರ್ಧರಿತವಾಗಿಲ್ಲ. ವಿಧಿ ಅಥವಾ ಹಣೆಬರಹ ಎಂಬುದು ಅಸ್ಥಿತ್ವದಲ್ಲಿಲ್ಲ. 

"ಕರ್ಮ" ಎಂಬುದು ಸಕ್ರಿಯ ಶಕ್ತಿಯ ಪದವಾಗಿದೆ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಇದು ಸೂಚಿಸುತ್ತದೆ. - 14 ನೇ ದಲೈ ಲಾಮಾ 

ನಮ್ಮ ರೂಢಿಗಳಿಗೆ ನಾವು ಗುಲಾಮರಾಗಿದ್ದೇವೆ ಎಂದು ನಮಗೆ ಆಗಾಗ್ಗೆ ಭಾಸವಾಗುತ್ತದೆ - ಏಕೆಂದರೆ ನಮ್ಮ ಅಭ್ಯಾಸದ ನಡವಳಿಕೆಗಳು ಸುಸ್ಥಾಪಿತವಾದ ನರ ಮಾರ್ಗಗಳನ್ನು ಆಧರಿಸಿವೆ – ಆದರೆ, ಬೌದ್ಧಧರ್ಮವು ಅವುಗಳನ್ನು ನಾವು ಮೀರಬಲ್ಲೆವು ಎಂದು ಹೇಳುತ್ತದೆ. ನಮ್ಮ ಜೀವನದುದ್ದಕ್ಕೂ ಹೊಚ್ಚ ಹೊಸ ನರ ಮಾರ್ಗಗಳನ್ನು ರೂಪಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. 

ನಮ್ಮ ಮನಸ್ಸಿನಲ್ಲಿ ಏನಾದರೂ ಮಾಡಬೇಕೆಂಬ ಭಾವನೆ ಉಂಟಾದಾಗ, ಮತ್ತು ಆ ಕಾರ್ಯವನ್ನು ನಿರ್ವಹಿಸುವಂತೆ ಕರ್ಮದ ಪ್ರಚೋದನೆಯು ನಮ್ಮನ್ನು ಪ್ರೇರೇಪಿಸುವುದರ ನಡುವೆ ಒಂದು ಅಂತವಿರುತ್ತದೆ. ಯಾವುದೇ ಭಾವನೆ ಉದ್ಭವಿಸಿದರೂ ನಾವು ತಕ್ಷಣವೇ ಅದರಂತೆ ಕಾರ್ಯನಿರ್ವಹಿಸುವುದಿಲ್ಲ - ನಾವೆಲ್ಲರೂ ಶೌಚಾಲಯವನ್ನು ಉಪಯೋಗಿಸುವ ತರಬೇತಿಯನ್ನು ಪಡೆದಿದ್ದೇವೆ ಅಲ್ಲವೇ? ಅದೇ ರೀತಿಯಲ್ಲಿ, ಇತರರಿಗೆ ನೋವುಂಟುಮಾಡುವ ಹಾಗೆ ಮಾತನಾಡಬೇಕೆಂಬ ಭಾವನೆಯು ಉದ್ಭವಿಸಿದಾಗ, "ನಾನು ಅದನ್ನು ಹೇಳಬೇಕೇ ಬೇಡವೇ?" ಎಂದು ನಿರ್ಧರಿಸಬಹುದು. ಒಬ್ಬರಿಗೆ ಬೈಯುವುದರ ಮೂಲಕ ನಮ್ಮ ಕಿರಿಕಿರಿಯನ್ನು ವ್ಯಕ್ತಪಡಿಸಿದಾಗ, ನಾವು ಕ್ಷಣಿಕವಾದ ನೆಮ್ಮದಿಯನ್ನು ಅನುಭವಿಸಬಹುದು, ಆದರೆ ಇತರರಿಗೆ ಬೈಗುಳ ನೀಡುವ ಅಭ್ಯಾಸವು ಅತೃಪ್ತ ಮನಸ್ಸಿನ ಸ್ಥಿತಿಯಾಗಿರುತ್ತದೆ. ನಮ್ಮೆಲ್ಲರಿಗೂ ತಿಳಿದಿರುವಂತೆ, ಸಂವಾದದ ಮೂಲಕ ಸಂಘರ್ಷವನ್ನು ಪರಿಹರಿಸುವುದು ಹೆಚ್ಚು ಸಂತೋಷದಾಯಕ, ಹೆಚ್ಚು ಶಾಂತಿಯುತವಾಗಿರುವುದು. ರಚನಾತ್ಮಕ ಮತ್ತು ವಿನಾಶಕಾರಿ ಕ್ರಿಯೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಈ ಸಾಮರ್ಥ್ಯವೇ ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತದೆ - ಅದೇ ನಮ್ಮ ದೊಡ್ಡ ಅನುಕೂಲವಾಗಿದೆ. 

ಇದನ್ನು ತಿಳಿದಿದ್ದರೂ, ವಿನಾಶಕಾರಿ ಕ್ರಿಯೆಗಳಿಂದ ದೂರವಿರುವ ಆಯ್ಕೆ ಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ನಮ್ಮ ಮನಸ್ಸಿನಲ್ಲಿ ಉದ್ಭವಿಸುವ ಭಾವನೆಗಳಿಗಾಗಿ ನಮ್ಮ ತಲೆಯಲ್ಲಿ ಸಾಕಷ್ಟು ಜಾಗವಿದ್ದರೆ ಅವುಗಳನ್ನು ನೆನಪಿಟ್ಟುಕೊಳ್ಳಲು ಸುಲಭವಾಗಿರುತ್ತದೆ, ಅದಕ್ಕಾಗಿಯೇ ಬೌದ್ಧ ತರಬೇತಿಯು ಸಾವಧಾನತೆಯನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುತ್ತದೆ. ನಾವು ತಾಳ್ಮೆಯಿಂದಿರುವಾಗ, ನಾವು ಏನು ಯೋಚಿಸುತ್ತಿದ್ದೇವೆ ಮತ್ತು ನಾವು ಏನು ಮಾತನಾಡಲಿದ್ದೇವೆ ಅಥವಾ ಮಾಡಲಿದ್ದೇವೆ ಎಂಬುದರ ಕುರಿತು ನಮಗೆ ಹೆಚ್ಚು ಅರಿವಿರುತ್ತದೆ. “ಒಬ್ಬರಿಗೆ ನೋವುಂಟುಮಾಡುವ ಹಾಗೆ ಮಾತನಾಡಬೇಕೆಂದಿದ್ದೇನೆ. ಆದರೆ ಹಾಗೆ ಮಾಡಿದ್ದಲ್ಲಿ ತೊಂದರೆಯುಂಟಾಗುತ್ತದೆ. ಆದ್ದರಿಂದ ನಾನು ಹಾಗೆ ಮಾತನಾಡುವುದಿಲ್ಲ.” ಎಂದು ನಾವು ಗಮನಿಸಲು ಪ್ರಾರಂಭಿಸುತ್ತೇವೆ. ಈ ರೀತಿಯಾಗಿ ನಾವು ಆಯ್ಕೆ ಮಾಡಬಹುದು. ನಾವು ಪ್ರಜ್ಞಾಪರವಾಗಿಲ್ಲದಿದ್ದರೆ, ನಮ್ಮ ಆಲೋಚನೆಗಳು ಮತ್ತು ಭಾವನೆಗಳು ತಡೆಯಿಲ್ಲದೆ ಹರಿಯುತ್ತವೆ, ಅವುಗಳಿಂದ ನಾವು ಭಾವೋದ್ರೇಕದಿಂದ ಕಾರ್ಯನಿರ್ವಹಿಸುತ್ತೇವೆ, ಮತ್ತು ಎಡಬಿಡದ ತೊಂದರೆಗಳಲ್ಲಿ ಸಿಲುಕಿಕೊಳ್ಳುತ್ತೇವೆ. 

ನಿಮ್ಮ ಭವಿಷ್ಯವನ್ನು ನಿರೀಕ್ಷಿಸಿ

ನಮ್ಮ ಹಿಂದಿನ ಮತ್ತು ಪ್ರಸ್ತುತ ಕರ್ಮದ ನಡವಳಿಕೆಯ ಆಧಾರದ ಮೇಲೆ ನಾವು ಭವಿಷ್ಯದಲ್ಲಿ ಏನು ಅನುಭವಿಸಬಹುದು ಎಂಬುದನ್ನು ನಿರೀಕ್ಷಿಸಬಹುದು. ದೀರ್ಘಾವಧಿಯಲ್ಲಿ, ರಚನಾತ್ಮಕ ಕ್ರಮಗಳಿಂದ ಸಂತೋಷದಾಯಕ ಫಲಿತಾಂಶಗಳನ್ನು ಗಳಿಸಬಹುದು, ಆದರೆ ವಿನಾಶಕಾರಿ ಕ್ರಮಗಳು ಅನಪೇಕ್ಷಿತ ಪರಿಣಾಮಗಳನ್ನು ತರುತ್ತವೆ. 

ಒಂದು ನಿರ್ದಿಷ್ಟ ಕರ್ಮದ ಕ್ರಿಯೆಯು ಹೇಗೆ ಫಲಪ್ರದವಾಗುತ್ತದೆ ಎಂಬುದು ಅನೇಕ ಅಂಶಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಾವು ಒಂದು ಚೆಂಡನ್ನು ಗಾಳಿಯಲ್ಲಿ ಎಸೆದಾಗ, ಅದು ನೆಲಕ್ಕೆ ಬೀಳುತ್ತದೆ ಎಂದು ನಾವು ಊಹಿಸಬಹುದು. ಆದರೆ ನಾವು ಆ ಚೆಂಡನ್ನು ಹಿಡಿದರೆ, ಹಾಗಾಗುವುದಿಲ್ಲ. ಅಂತೆಯೇ, ನಮ್ಮ ಹಿಂದಿನ ಕ್ರಿಯೆಗಳಿಂದ ಭವಿಷ್ಯದಲ್ಲಿ ಏನಾಗಬಹುದು ಎಂದು ಊಹಿಸಬಹುದಾದರೂ, ಅವುಗಳು ಕಡಾಖಂಡಿತವಾಗಿರುವುದಿಲ್ಲ, ಪೂರ್ವನಿರ್ಧರಿತವಾಗಿರುವುದಿಲ್ಲ ಅಥವಾ ಕಲ್ಲಿನಲ್ಲಿ ಬರೆದಿರಲಾಗಿರುವುದಿಲ್ಲ. ಇತರ ಪ್ರವೃತ್ತಿಗಳು, ಕ್ರಿಯೆಗಳು ಮತ್ತು ಸಂದರ್ಭಗಳು, ಕರ್ಮದ ಪಕ್ವತೆಯ ಮೇಲೆ ಪ್ರಭಾವ ಬೀರುತ್ತವೆ. ನಾವು ಸ್ಥೂಲಕಾಯದವರಾಗಿದ್ದರೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಜಿಡ್ಡು ಪದಾರ್ಥವನ್ನು ಸೇವಿಸುವುದನ್ನು ಮುಂದುವರಿಸಿದರೆ, ಭವಿಷ್ಯದಲ್ಲಿ ನಾವು ಮಧುಮೇಹದ ಹೆಚ್ಚಿನ ಸಂಭವನೀಯತೆಯನ್ನು ನಿರೀಕ್ಷಿಸಬಹುದು, ಆದರೆ ನಾವು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಿದರೆ ಮತ್ತು ಸಾಕಷ್ಟು ತೂಕವನ್ನು ಕಳೆದುಕೊಂಡರೆ, ನಾವು ಅನಾರೋಗ್ಯದಿಂದ ಬಳಲುವುದಿಲ್ಲ. 

ನಮ್ಮ ಪಾದವನ್ನು ಜೋರಾಗಿ ನೆಲಕ್ಕೆ ಬಡಿದಾಗ, ನಾವು ನೋವನ್ನು ಅನುಭವಿಸಲು ಕರ್ಮ ಅಥವಾ ಕಾರಣ ಮತ್ತು ಪರಿಣಾಮದ ಸಿದ್ಧಾಂತವನ್ನು ನಂಬುವ ಅಗತ್ಯವಿಲ್ಲ - ಅದು ಸ್ವಾಭಾವಿಕವಾಗಿ ಸಂಭವಿಸುತ್ತದೆ. ನಾವು ನಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಂಡು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಂಡರೆ, ನಮ್ಮ ನಂಬಿಕೆಗಳು ಏನೇ ಆಗಿದ್ದರೂ, ಫಲಿತಾಂಶವು ಸಕಾರಾತ್ಮಕವಾಗಿರುತ್ತದೆ.

Top