ನೈತಿಕತೆಯು ನೈತಿಕ ಮೌಲ್ಯಗಳ ಒಂದು ವ್ಯವಸ್ಥೆಯಾಗಿದ್ದು, ಅವು ಸಂತೋಷದ ಜೀವನವನ್ನು ಪಡೆಯಲು ನಮ್ಮ ನಡವಳಿಕೆಯನ್ನು ರೂಪಿಸುತ್ತವೆ. ನೈತಿಕತೆಯೊಂದಿಗೆ, ನಾವು ಪ್ರಾಮಾಣಿಕವಾಗಿ ಬದುಕುತ್ತೇವೆ, ಮತ್ತು ನಮ್ಮ ಸುತ್ತಮುತ್ತಲಿನವರೊಂದಿಗೆ ನಂಬಿಕೆ ಮತ್ತು ಸ್ನೇಹವನ್ನು ಬೆಳೆಸುತ್ತೇವೆ. ನೈತಿಕತೆಯು ಸಂತೋಷದ ಕೀಲಿಕೈಯಾಗಿದೆ.
ಬೌದ್ಧಧರ್ಮದಲ್ಲಿ ನೈತಿಕತೆ
ಬೌದ್ಧಧರ್ಮದಲ್ಲಿ, ನೈತಿಕತೆಯು, ವ್ಯತ್ಯಾಸಿಸುವ ಅರಿವಿನ ಮೇಲೆ ಆಧಾರಿತವಾಗಿದೆ: ನಿರಂತರ ಸಂತೋಷವನ್ನು ಉಂಟುಮಾಡುವಂತಹ ಮತ್ತು ಪುನರಾವರ್ತಿತ ಸಮಸ್ಯೆಗಳನ್ನು ಉಂಟುಮಾಡುವಂತಹ ವಿಷಯಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ನಾವು ನಮ್ಮ ಬುದ್ಧಿವಂತಿಕೆಯನ್ನು ಬಳಸುತ್ತೇವೆ. ಇದರರ್ಥ ನಿಯಮಗಳ ಪಟ್ಟಿಯನ್ನು ಕುರುಡಾಗಿ ಪಾಲಿಸುವುದೆಂದಲ್ಲ, ಬದಲಿಗೆ ನೈತಿಕ ಮಾರ್ಗಸೂಚಿಗಳನ್ನು ಅನುಸರಿಸುವುದು ತಾರ್ಕಿಕವಾಗಿರುತ್ತದೆ ಎಂಬ ಮನವರಿಕೆಯಾಗಿದೆ.
ನಮಗೆ ನಿಜವಾಗಿಯೂ ನಮ್ಮ ಬಗ್ಗೆ ಕಾಳಜಿಯಿದ್ದಲ್ಲಿ, ನಮ್ಮ ವರ್ತನೆಯನ್ನು ಕುರಿತು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅರ್ಥಪೂರ್ಣವಾಗಿರುತ್ತದೆ. ನಮ್ಮನ್ನು ಸೇರಿಸಿದಂತೆ, ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ ಮತ್ತು ಅರ್ಹರಾಗಿರುತ್ತಾರೆ. ಸ್ವಂತದ ಮೌಲ್ಯವು ಕಡಿಮೆಯಾದಲ್ಲಿ ನೈತಿಕ ಉದಾಸೀನತೆಯ ಮನೋಭಾವಕ್ಕೆ ಕಾರಣವಾಗುತ್ತದೆ, ಆದರೆ ಸ್ವಾಭಿಮಾನದ ಪ್ರಜ್ಞೆಯಿದ್ದಲ್ಲಿ ಆತ್ಮಗೌರವಕ್ಕೆ ಕಾರಣವಾಗುತ್ತದೆ. ಆತ್ಮಗೌರವಿದ್ದಲ್ಲಿ, ನಮ್ಮ ಬಗ್ಗೆಯೇ ಆಳವಾದ ಗೌರವವನ್ನು ಹೊಂದಿದ್ದಲ್ಲಿ, ನಾವು ಎಂದಿಗೂ ಅನೈತಿಕ ರೀತಿಯಲ್ಲಿ ವರ್ತಿಸಲಾಗುವುದಿಲ್ಲ: ಅದು ಎಂದಿಗೂ ಸರಿಯೆನಿಸುವುದಿಲ್ಲ.
ಜೇನುನೊಣ ಮಕರಂದವನ್ನು ಸಂಗ್ರಹಿಸುವಾಗ ಹೂವಿನ ಬಣ್ಣ ಮತ್ತು ಪರಿಮಳಕ್ಕೆ ಹಾನಿಯುಂಟುಮಾಡುವುದಿಲ್ಲ; ಅದೇ ರೀತಿಯಾಗಿ ಜ್ಞಾನಿಗಳು ಪ್ರಪಂಚದಾದ್ಯಂತ ಚಲಿಸುತ್ತಾರೆ. – ಧಮ್ಮಪದ: ಹೂಗಳು, ಪದ್ಯ 49
"ಏನಾದರೂ ಆಗಲಿ" ಎಂಬ ಮನೋಭಾವವು ಕೇವಲ ಪ್ರತ್ಯೇಕತೆ, ಒಂಟಿತನ ಮತ್ತು ಖಿನ್ನತೆಯ ಭಾವನೆಗಳಿಗೆ ಕಾರಣವಾಗುತ್ತದೆ. ನೈತಿಕತೆಯ ಪ್ರಜ್ಞೆಯಿಂದ, ನಾವು ಅಂತಹ ಮನೋಭಾವವನ್ನು ಮೀರಬಹುದು. ನಾವು ಸಂತೋಷದ ಮತ್ತು ಯಶಸ್ವಿಯಾದ ಜೀವನವನ್ನು ಹೊಂದಲು ಆಧಾರವಾಗಿರುವ ವಿಶ್ವಾಸಾರ್ಹ, ಭದ್ರವಾದ ಗೆಳೆತನವನ್ನು ನಿರ್ಮಿಸಬಹುದು.
ತಾರ್ಕಿಕತೆಯನ್ನು ಆಧರಿಸಿದ ನೀತಿಶಾಸ್ತ್ರ ಮತ್ತು ಪ್ರತಿಜ್ಞೆಗಳು
ಬೌದ್ಧ ಆಚರಣೆಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ನಾವು ಸ್ವಾರ್ಥಿಗಳಾಗಿ, ಇತರರೊಂದಿಗೆ ಕೋಪ ಮತ್ತು ಅಹಂಕಾರದಿಂದ ವರ್ತಿಸಿ, ನಮಗಾಗಿ ಶಾಂತಿಯುತ ಮತ್ತು ಸಂತೋಷದ ಜೀವನವನ್ನು ನಿರೀಕ್ಷಿಸುವುದು ಸರಿಯೇ?
ಬೌದ್ಧಧರ್ಮದಲ್ಲಿ, ಒಬ್ಬರು ತೆಗೆದುಕೊಳ್ಳಬಹುದಾದ ಪ್ರತಿಜ್ಞೆಗಳ ವಿವಿಧ ಹಂತಗಳಿವೆ. ಉದಾಹರಣೆಗೆ, ಟಿಬೆಟಿಯನ್ ಸಂಪ್ರದಾಯದಲ್ಲಿ ಸಂಪೂರ್ಣವಾಗಿ ದೀಕ್ಷೆ ಪಡೆದ ಸನ್ಯಾಸಿಗಳು 253 ಪ್ರತಿಜ್ಞೆಗಳನ್ನು ಅನುಸರಿಸಬೇಕಾಗಿದೆ. ಅನೇಕ ಸಾಮಾನ್ಯ ಬೌದ್ಧರು "ಐದು ನಿಯಮಾವಳಿಗಳನ್ನು" ತೆಗೆದುಕೊಳ್ಳುತ್ತಾರೆ:
- ಜೀವಿಗಳನ್ನು ಕೊಲ್ಲುವುದರಿಂದ ದೂರವಿರಿ
- ಕೊಡದಿರುವದನ್ನು ತೆಗೆದುಕೊಳ್ಳುವುದರಿಂದ ದೂರವಿರಿ
- ಅನುಚಿತ ಲೈಂಗಿಕ ನಡವಳಿಕೆಯಿಂದ ದೂರವಿರಿ
- ಸುಳ್ಳು ಹೇಳುವುದರಿಂದ ದೂರವಿರಿ
- ಅಮಲು ಪದಾರ್ಥಗಳಿಂದ ದೂರವಿರಿ.
ಬೌದ್ಧಧರ್ಮದ ಅನುಸರಣೆಗೆ ಅನುಕೂಲಕರವಾದ ಜೀವನವನ್ನು ಸೃಷ್ಟಿಸಲು ಬೌದ್ಧ ಸಾಧಕರು ಸ್ವಯಂಪ್ರೇರಣೆಯಿಂದ ಇವುಗಳನ್ನು ಅನುಸರಿಸುತ್ತಾರೆ. ಈ ನಿಯಮಗಳು ನಮಗೆ ಸರಿಯಾದ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡುತ್ತವೆ ಮತ್ತು ಸಂತೋಷದ ಮತ್ತು ಯಶಸ್ವಿಯಾದ ಜೀವನವನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಸೃಷ್ಟಿಸುತ್ತವೆ.
ಯಶಸ್ವಿ ಜೀವನಕ್ಕಾಗಿ ನೀತಿಶಾಸ್ತ್ರ
ನಮ್ಮಲ್ಲಿ ಅಗಾಧವಾದ ಭೌತಿಕ ಸಂಪತ್ತು ಮತ್ತು ಶಕ್ತಿ ಇದ್ದರೆ ಅದು ಯಶಸ್ವಿಯಾದ ಜೀವನ ಎಂದು ಕೆಲವರು ಭಾವಿಸುತ್ತಾರೆ. ನಾವು ಅವುಗಳನ್ನು ಗಳಿಸಿದರೂ ಸಹ, ನಾವು ಎಂದಿಗೂ ತೃಪ್ತರಾಗಿರುವುದಿಲ್ಲ ಮತ್ತು ಅವುಗಳನ್ನು ಕಳೆದುಕೊಳ್ಳುವ ಬಗ್ಗೆ ಯಾವಾಗಲೂ ಮತಿಭ್ರಮಿತರಾಗಿರುತ್ತೇವೆ. ವಿಶೇಷವಾಗಿ ಇತರರ ನಷ್ಟದ ಮೇಲೆ ಬೆಳೆಸಿದ ಸಂಪತ್ತು ಹೆಚ್ಚಾದಂತೆ, ನಾವು ಹೆಚ್ಚು ಹೆಚ್ಚು ಶತ್ರುಗಳನ್ನು ಮಾಡಿಕೊಳ್ಳುತ್ತೇವೆ. ಜನರು ನಮ್ಮನ್ನು ಇಷ್ಟಪಡದಿರುವುದನ್ನು ಯಶಸ್ವಿಯಾದ ಜೀವನ ಎಂದು ಯಾರೂ ಪರಿಗಣಿಸುವುದಿಲ್ಲ. ನಾವು ಅನೇಕ ಸ್ನೇಹಿತರನ್ನು ಗಳಿಸಿ, ಜನರು ನಮ್ಮ ಒಡನಾಟದಲ್ಲಿರಲು ಸಂತೋಷಪಡುವುದೇ ಯಶಸ್ವಿಯಾದ ಜೀವನ. ಆಗ ನಮ್ಮಲ್ಲಿ ಎಷ್ಟು ಹಣ ಅಥವಾ ಅಧಿಕಾರ ಇದೆ ಎಂಬುದು ಮುಖ್ಯವಾಗುವುದಿಲ್ಲ; ನಾವು ಭಾವನಾತ್ಮಕ ಬೆಂಬಲವನ್ನು ಹೊಂದಿದ್ದು, ಏನೇ ಆದರೂ ಅದನ್ನು ಎದುರಿಸುವ ಶಕ್ತಿ ನಮಗಿರುತ್ತದೆ.
ನೈತಿಕ ಮಾರ್ಗಸೂಚಿಗಳು, ಸಂತೋಷಕ್ಕೆ ಕಾರಣವಾಗುವ ನಡವಳಿಕೆಯ ಪ್ರಕಾರಗಳು ಮತ್ತು ಸಮಸ್ಯೆಗಳನ್ನು ಸೃಷ್ಟಿಸುವ ಪ್ರಕಾರಗಳನ್ನು ಸೂಚಿಸುತ್ತವೆ. ನಾವು ಪ್ರಾಮಾಣಿಕರಾಗಿದ್ದರೆ ಮತ್ತು ಇತರರಿಗೆ ಸಂತೋಷವನ್ನುಂಟುಮಾಡಲು ಬಯಸಿದರೆ, ಜನರು ನಮ್ಮಿಂದ ಮೋಸ, ಬೆದರಿಕೆ ಅಥವಾ ಶೋಷಣೆಯನ್ನು ನಿರೀಕ್ಷಿಸುವುದಿಲ್ಲ. ನಾವು ಭೇಟಿಯಾಗುವ ಪ್ರತಿಯೊಬ್ಬರೊಂದಿಗಿನ ಗೆಳೆತನಕ್ಕಾಗಿ, ಈ ನಂಬಿಕೆಯು ತಳಹದಿಯಾಗಿ ಕಾರ್ಯನಿರ್ವಹಿಸುತ್ತದೆ. ಅವರಿಗೆ ಭಯಪಡಲು ಯಾವುದೇ ಕಾರಣವಿಲ್ಲ ಎಂದು ಅರಿವಾಗಿ, ನಮ್ಮೊಂದಿಗೆ ನಿರಾಳವಾಗಿ ಮತ್ತು ಸಂತೋಷವಾಗಿರುತ್ತಾರೆ. ಪ್ರತಿಯಾಗಿ, ನಾವೂ ಕೂಡ ಸಂತೋಷವಾಗಿರುತ್ತೇವೆ. ನಾವು ಹತ್ತಿರ ಸುಳಿದಾಗಲೆಲ್ಲಾ ಜನರು ಸಾವಧಾನದಿಂದ, ಭಯಭೀತರಾಗಿ ನಡುಗಬೇಕು ಎಂದು ಯಾರು ತಾನೇ ಬಯಸುತ್ತಾರೆ? ನಗು ಮುಖವನ್ನು ಎಲ್ಲರೂ ಸ್ವಾಗತಿಸುತ್ತಾರೆ.
ಮಾನವರು ಸಾಮಾಜಿಕ ಜೀವಿಗಳು: ಬದುಕಲು ನಮಗೆ ಇತರರ ಬೆಂಬಲ ಬೇಕು. ನಾವು ಅಸಹಾಯಕ ನವಜಾತ ಶಿಶುಗಳಾಗಿದ್ದಾಗ ಅಥವಾ ವೃದ್ಧಾಶ್ರಮಗಳಲ್ಲಿ ದುರ್ಬಲರಾದ ವೃದ್ಧರಾದಾಗ ಮಾತ್ರವಲ್ಲ, ಜೀವನದುದ್ದಕ್ಕೂ ನಮಗೆ ಇತರರ ಸಹಾಯ ಮತ್ತು ಆರೈಕೆಯ ಅಗತ್ಯವಿರುತ್ತದೆ. ಆತ್ಮೀಯ ಗೆಳೆತನದಿಂದ ನಾವು ಪಡೆಯುವ ಭಾವನಾತ್ಮಕ ಬೆಂಬಲವು ಜೀವನವನ್ನು ಸಾರ್ಥಕವಾಗಿಸುತ್ತದೆ. ನೈತಿಕತೆಯ ಬಲವಾದ ಪ್ರಜ್ಞೆಯು ನಾವು ಭೇಟಿಯಾಗುವ ಪ್ರತಿಯೊಬ್ಬರೊಂದಿಗೆ ಸೌಹಾರ್ದ ಸಂಬಂಧವನ್ನು ರಚಿಸಲು ನಮಗೆ ಅನುವು ಮಾಡಿಕೊಡುತ್ತದೆ.