ಬೌದ್ಧರ ಜೀವನದಲ್ಲಿನ ಒಂದು ದಿನ

Day%20in%20the%20life%20of%20a%20buddhist

ನಮ್ಮ ದೈನಂದಿನ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಬೌದ್ಧ ಬೋಧನೆಗಳು ಸಾಕಷ್ಟು ಸಲಹೆಗಳನ್ನು ನೀಡಿದ್ದು, ಅವು ಕೆಳಗಿನಂತಿವೆ. 

ನಾವು ಎಚ್ಚರಗೊಂಡಾಗ 

ನಾವು ಎಚ್ಚೆತ್ತುಕೊಳ್ಳುವಾಗ ಮತ್ತು ಎದ್ದೇಳುವ ಮೊದಲು, ನಾವು ಇನ್ನೂ ಬದುಕಿರುವುದಕ್ಕಾಗಿ, ಹೊಸ ದಿನವನ್ನು ಎದುರಿಸಲು ಸಿದ್ಧರಾಗಿರುವುದಕ್ಕಾಗಿ, ನಂಬಲಾಗದಷ್ಟು ಸಂತೋಷ ಮತ್ತು ಕೃತಜ್ಞರಾಗಿರಬೇಕು. ನಾವು ಈ ಕೆಳಗಿನಂತೆ ಮಾಡಲು ಒಂದು ಧೃಡವಾದ ಉದ್ದೇಶವನ್ನು ಹೊಂದಿರಬೇಕು: 

1. ದಿನವನ್ನು ಅರ್ಥಪೂರ್ಣಗೊಳಿಸಬೇಕು. 

2. ನಮ್ಮ ಸುಧಾರಣೆಗಾಗಿ ಕೆಲಸ ಮಾಡಲು ಮತ್ತು ಇತರರಿಗೆ ಸಹಾಯ ಮಾಡಲು ನಮಗೆ ಇರುವ ಅಮೂಲ್ಯ ಅವಕಾಶವನ್ನು ವ್ಯರ್ಥ ಮಾಡದೇ ಇರುವುದು. 

ನಾವು ಕೆಲಸಕ್ಕೆ ಹೋಗಬೇಕಾದರೆ, ನಾವು ಏಕಾಗ್ರತೆಯಿಂದಿರಲು ಮತ್ತು ಲಾಭದಾಯಕವಾಗಿರಲು ಪ್ರಯತ್ನಿಸಲು ಮನಸ್ಸು ಮಾಡಬೇಕು. ನಮ್ಮ ಸಹೋದ್ಯೋಗಿಗಳೊಂದಿಗೆ ಕೋಪಗೊಳ್ಳುವುದಿಲ್ಲ, ಅಸಹನೆಯಿಂದ ಅಥವಾ ಮುಂಗೋಪದಿಂದ ವರ್ತಿಸುವುದಿಲ್ಲ. ನಾವು ಎಲ್ಲರೊಂದಿಗೆ ಸ್ನೇಹಪರವಾಗಿರುತ್ತೇವೆ, ಆದರೆ ನಿರರ್ಥಕವಾದ ಹರಟೆ ಮತ್ತು ಬೀದಿ ಮಾತುಗಳಿಂದ ಜನರ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನಾವು ನಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರೆ, ತಾಳ್ಮೆಯನ್ನು ಕಳೆದುಕೊಳ್ಳದಿರುವಂತೆ ಸಂಕಲ್ಪ ಮಾಡುತ್ತೇವೆ, ಅಲ್ಲದೆ ಅವರ ದೈಹಿಕ ಮತ್ತು ಭಾವನಾತ್ಮಕ ಅಗತ್ಯತೆಗಳನ್ನು ಸಾಧ್ಯವಾದಷ್ಟು ಪ್ರೀತಿಯಿಂದ ನೆರವೇರಿಸೋಣ. 

ಮುಂಜಾನೆಯ ಧ್ಯಾನ 

ಸಾಮಾನ್ಯವಾಗಿ, ಉಪಾಹಾರದ ಮೊದಲು, ನಾವು ಸ್ವಲ್ಪ ಸಮಯದವರೆಗೆ ಧ್ಯಾನ ಮಾಡಬಹುದು. ಕೇವಲ ಐದು ಅಥವಾ ಹತ್ತು ನಿಮಿಷಗಳು ಶಾಂತವಾಗಿ ಕುಳಿತುಕೊಂಡು, ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ಸಹಾಯವಾಗುತ್ತದೆ. 

ನಮ್ಮ ಜೀವನವು ನಮ್ಮ ಸುತ್ತಲಿರುವ ಪ್ರತಿಯೊಬ್ಬರೊಂದಿಗೆ ಹೇಗೆ ಹೆಣೆದುಕೊಂಡಿದೆ ಎಂಬುದರ ಬಗ್ಗೆ ಆಲೋಚಿಸುತ್ತೇವೆ. ಅವರು ಹೇಗೆ ಭಾವಿಸುತ್ತಾರೆ ಮತ್ತು ವರ್ತಿಸುತ್ತಾರೆ ಎಂಬುದು ನಮ್ಮ ಮೇಲೆ ಮತ್ತು ಇತರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಾವು ಒಂದು ಪ್ರೀತಿಯ, ಆತ್ಮೀಯವಾದ ಭಾವನೆಯನ್ನು ಅನುಭವಿಸುತ್ತೇವೆ: "ಅವರೆಲ್ಲರೂ ಸಂತೋಷವಾಗಿರಲಿ," ಜೊತೆಗೆ ಸಹಾನುಭೂತಿಯನ್ನು ಅನುಭವಿಸುತ್ತೇವೆ: "ಅವರಲ್ಲಿರುವ ಅತೃಪ್ತಿ ಮತ್ತು ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲಿ." ಇಂದು, ನಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸೋಣ ಮತ್ತು ಅದು ಸಾಧ್ಯವಾಗದಿದ್ದರೆ, ನಾವು ಯಾವುದೇ ರೀತಿಯ ಹಾನಿಯುಂಟುಮಾಡದೇ ಇರಲು ನಾವು ನಿರ್ಧರಿಸೋಣ. 

ಹಗಲು ಹೊತ್ತು ಎಚ್ಚರಿಕೆಯಿಂದಿರುವುದು 

ದಿನವಿಡೀ, ನಾವು ಹೇಗೆ ವರ್ತಿಸುತ್ತೇವೆ, ಮಾತನಾಡುತ್ತೇವೆ, ಯೋಚಿಸುತ್ತೇವೆ ಮತ್ತು ಅನುಭವಿಸುತ್ತೇವೆ ಎಂಬುದರ ಕುರಿತು ಎಚ್ಚರಿಕೆಯಿಂದಿರಲು ಪ್ರಯತ್ನಿಸುತ್ತೇವೆ. ಕೋಪ, ದುರಾಸೆ, ಅಸೂಯೆ, ದುರಹಂಕಾರದಂತಹ ಮುಂತಾದ ಗೊಂದಲದ ಭಾವನೆಗಳು ಹರಿದಾಡಲು ಪ್ರಯತ್ನಿಸಿದರೆ, ಅದರ ಬಗ್ಗೆ ವಿಶೇಷವಾಗಿ ಗಮನವಿಡಲು ಪ್ರಯತ್ನಿಸುತ್ತೇವೆ. ನಾವು ಸ್ವಾರ್ಥದಿಂದ ಅಥವಾ ಸೂಕ್ಷ್ಮತೆಯಿಲ್ಲದೆ ಅಥವಾ ನಮ್ಮ ಬಗ್ಗೆ ನಾವೇ ಕರುಣೆಯಿಟ್ಟು ಮತ್ತು ಪೂರ್ವಾಗ್ರಹಗಳೊಂದಿಗೆ ವರ್ತಿಸುತ್ತಿರುವಾಗ ನಾವು ಗಮನಿಸುತ್ತೇವೆ. ಇನ್ನೂ ಸೂಕ್ಷ್ಮವಾದ ಮಟ್ಟದಲ್ಲಿ, ನಾವು ಸಾಮಾನ್ಯವಾಗಿ ನಮ್ಮ ಬಗ್ಗೆ, ಇತರರ ಬಗ್ಗೆ ಮತ್ತು ಸನ್ನಿವೇಶಗಳ ಬಗ್ಗೆ ಅಸಂಬದ್ಧ ಕಥೆಗಳನ್ನು ಪ್ರಕ್ಷೇಪಿಸುವುದರ ಬಗ್ಗೆ ಅರಿವಿರುವ ಗುರಿಯನ್ನು ಹೊಂದಿರುತ್ತೇವೆ. ಆ ದೀರ್ಘ ಸರತಿ ಸಾಲಿನಲ್ಲಿ ನಮ್ಮ ಸರದಿ ಎಂದಿಗೂ ಬರುವುದಿಲ್ಲ ಎಂದು ನಾವು ಊಹಿಸುವ ಆ ಕ್ಷಣಗಳಿಗಾಗಿ, ನಮ್ಮಂತಹವರನ್ನು ಯಾರೂ ಪ್ರೀತಿಸಲು ಸಾಧ್ಯವಿಲ್ಲ ಮತ್ತು ನಾವು "ಎಷ್ಟು ಪಾಪದವರು" ಎಂದು ಭಾವಿಸುವ ಕ್ಷಣಗಳ ಬಗ್ಗೆ ನಾವು ಎಚ್ಚರವಹಿಸುತ್ತೇವೆ.

ಈ ಕ್ಷೋಭೆ ಉಂಟುಮಾಡುವವರಿಂದ ನಾವು ಪ್ರಚೋದಿತವಾಗಿ ವರ್ತಿಸುವುದು, ಮಾತನಾಡುವುದು ಅಥವಾ ಯೋಚಿಸುವುದನ್ನು ನಾವು ಗಮನಿಸಿದಾಗ, ನಾವು ಇನ್ನೊಂದು ಹಂತದ ಸಾವಧಾನತೆಯನ್ನು ಅನ್ವಯಿಸುತ್ತೇವೆ. ಮೊದಲನೆಯದಾಗಿ, ನಾವು ನಂತರ ವಿಷಾದಿಸುವಂತಹ ಕೆಲಸವನ್ನು ಮಾಡುವ ಅಥವಾ ಮಾತನಾಡುವ ಮೊದಲೇ ಅದನ್ನು ನಿಲ್ಲಿಸಲು ಪ್ರಯತ್ನಿಸುತ್ತೇವೆ. ಹಾಗಾಗಲೇ ಆ ರೀತಿ ವರ್ತಿಸಿದ್ದಲ್ಲಿ, ನಾವು ಇನ್ನೂ ಕೆಟ್ಟದಾಗಿ ವರ್ತಿಸುವುದನ್ನು ತತಕ್ಷಣ ನಿಲ್ಲಿಸುತ್ತೇವೆ. ನಕಾರಾತ್ಮಕ ಚಿಂತನೆಯ ಚಕ್ರದಲ್ಲಿ ಸಿಲುಕಿಕೊಂಡಿದ್ದರೂ ಈ ಮೇಲಿನಂತೆ ಮಾಡುತ್ತೇವೆ. ಈ ಮಾನಸಿಕ ಮತ್ತು ಭಾವನಾತ್ಮಕ ಅಡಚಣೆಗಳನ್ನು ಶಾಂತಗೊಳಿಸಲು ಮತ್ತು ಎದುರಿಸಲು ಬೇಕಾದ ಪ್ರತಿವಿಷಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡಿದ್ದು, ನಮ್ಮ ಹಿಡಿತವನ್ನು ಮರಳಿ ಪಡೆಯುವವರೆಗೆ, ಅವುಗಳನ್ನು ಅನ್ವಯಿಸುತ್ತೇವೆ ಮತ್ತು ಉಳಿಸಿಕೊಳ್ಳುತ್ತೇವೆ. 

ನಮ್ಮಲ್ಲಿ ಹೆಚ್ಚಿನವರು ಗುರುತಿಸಬಹುದಾದ ಉದಾಹರಣೆಯೆಂದರೆ, ಕೆಲಸದಲ್ಲಿ ಅಥವಾ ಮನೆಯಲ್ಲಿ ಯಾರಾದರೂ ನಮ್ಮನ್ನು ಟೀಕಿಸಿವುದು ಅಥವಾ ನಮಗೆ ಕಿರಿಕಿರಿ ಉಂಟುಮಾಡುವಂತೆ ನಡೆದುಕೊಳ್ಳುವುದು. ಆಗ ನಾವು ಈ ಕೆಳಗಿನಂತೆ ಮಾಡಬೇಕು: 

  1. ಕಿರುಚುವುದರಿಂದ ನಮಗೆ ಯಾವುದೇ ಸಹಾಯವಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಮತ್ತು ಬೆಳಿಗ್ಗಿನಂತೆ, ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತವಾಗಲು ಪ್ರಯತ್ನಿಸಿ. 
  2. ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ, ಅಸಂತೋಷವಾಗಿರಲು ಅಲ್ಲ, ಆದರೆ ಹೆಚ್ಚಿನ ಜನರು ಗೊಂದಲಕ್ಕೊಳಗಾಗಿದ್ದು, ಸಮಸ್ಯೆಗಳನ್ನು ಕರೆತರುವ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದನ್ನು ನೆನಪಿಸಿಕೊಳ್ಳಿ. 
  3. ಅವರು ಸಂತೋಷವಾಗಿರಲು ಮತ್ತು ಅವರ ಸಂತೋಷಕ್ಕಾಗಿ ಕಾರಣಗಳನ್ನು ಪಡೆಯುವಂತೆ ಆಶಿಸಿ. 
  4. ಅವರು ನಮ್ಮ ಸಲಹೆಯನ್ನು ಪಡೆಯಲು ಒಪ್ಪಿಕೊಂಡಿದ್ದಲ್ಲಿ, ಅವರ ನಡವಳಿಕೆಯ ನಕಾರಾತ್ಮಕ ಪರಿಣಾಮಗಳನ್ನು ಸೂಚಿಸಿ ಮತ್ತು ನಿಲ್ಲಿಸುವಂತೆ ವಿನಂತಿಸಿ.
  5. ಅವರು ಸಂಪೂರ್ಣವಾಗಿ ಪ್ರತಿಕ್ರಿಯಿಸದಿದ್ದಲ್ಲಿ, ಮೌನವಾಗಿರಿ ಮತ್ತು ಆ ಘಟನೆಯನ್ನು ತಾಳ್ಮೆಯ ಪಾಠವಾಗಿ ಪರಿಗಣಿಸಿರಿ. ಆದರೂ, ನಾವು ಯಾವುದಾದರೂ ಅಡಚಣೆಯನ್ನು ಕೊನೆಗೊಳಿಸಬಹುದಾದಲ್ಲಿ, ನಾವು ಎಂದಿಗೂ ನಿಷ್ಕ್ರಿಯವಾಗಿರಬಾರದು.

ನಮ್ಮಲ್ಲಿ ನಿಯಂತ್ರಿಸಬೇಕಾದ ಮುಖ್ಯ ವಿಷಯವೆಂದರೆ, ಇತರರು ನಮ್ಮನ್ನು ಟೀಕಿಸಿದಾಗ ನಾವು ರಕ್ಷಣಾತ್ಮಕವಾಗುವ ಪ್ರವೃತ್ತಿ. ನಾವು ಶಾಂತವಾಗಿದ್ದು, ಅವರು ಹೇಳಿದ್ದು ಸರಿಯೇ ಎಂದು ನೋಡಲು ಪ್ರಾಮಾಣಿಕವಾಗಿ ಪರಿಶೀಲಿಸಬಹುದು - ಹಾಗಾಗಿದ್ದಲ್ಲಿ, ನಾವು ಕ್ಷಮೆಯಾಚಿಸಬಹುದು ಮತ್ತು ನಮ್ಮ ನಡವಳಿಕೆಯನ್ನು ಸರಿಪಡಿಸಬಹುದು. ಅವರು ಹೇಳಿದ್ದು ಅಸಂಬದ್ಧವಾಗಿದ್ದಲ್ಲಿ, ಅದು ಮುಖ್ಯವಾಗಿಲ್ಲವೆಂದರೆ ಹಾಗೆಯೇ ಬಿಟ್ಟು ಬಿಡಿ.  ಇದು ಮುಖ್ಯವಾದ ಸಮಸ್ಯೆಗೆ ಸಂಬಂಧಿಸಿದ್ದರೆ, ನಾವು ಅವರ ತಪ್ಪು ಆಲೋಚನೆಯನ್ನು ಯಾವುದೇ ದೊಡ್ಡಸ್ತಿಕೆಯಿಲ್ಲದೆ, ದಬ್ಬಾಳಿಕೆಯಿಲ್ಲದೆ ಗೋಚರಿಸಬಹುದು. 

ಸಾಯಂಕಾಲದ ಧ್ಯಾನ 

ರಾತ್ರಿ ಮಲಗುವ ಮೊದಲು, ನಾವು ಉಸಿರಾಟದ ಮೇಲೆ ಮತ್ತೊಮ್ಮೆ ಕೇಂದ್ರೀಕರಿಸುವ ಮೂಲಕ, ದಿನದ ಚಟುವಟಿಕೆಗಳಿಂದ ಶಾಂತಗೊಳ್ಳಲು, ಇನ್ನೊಂದು ಸಣ್ಣ ಧ್ಯಾನವನ್ನು ಮಾಡಬಹುದು. ನಾವು ದಿನದ ಘಟನೆಗಳನ್ನು ಪರಿಶೀಲಿಸಿ, ಅವುಗಳೊಂದಿಗೆ ನಾವು ಹೇಗೆ ವ್ಯವಹರಿಸಿದ್ದೇವೆ ಎಂಬುದನ್ನು ನೋಡಬಹುದು. ನಾವು ತಾಳ್ಮೆಯನ್ನು ಕಳೆದುಕೊಂಡೆವೇ ಅಥವಾ ಏನಾದರೂ ಮೂರ್ಖತನದ ಮಾತುಗಳನ್ನಾಡಿದವೆಯೇ? ಹಾಗಿದ್ದಲ್ಲಿ, ನಾವು ನಮ್ಮನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸುತ್ತೇವೆ ಮತ್ತು ನಂತರ ಯಾವುದೇ ತಪ್ಪಿತಸ್ಥ ಭಾವನೆಯಿಲ್ಲದೆ, ನಾಳಿನ ದಿನದಂದು ಹೆಚ್ಚು ಶ್ರಮ ಪಡಲು ನಿರ್ಧರಿಸುತ್ತೇವೆ. ನಾವು ಬುದ್ಧಿವಂತಿಕೆಯಿಂದ ಮತ್ತು ದಯೆಯಿಂದ ನಿಭಾಯಿಸಿದ ಸಂದರ್ಭಗಳನ್ನೂ ಗಮನಿಸುತ್ತೇವೆ. ನಾವು ಅದರ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತೇವೆ ಮತ್ತು ಆ ದಿಕ್ಕಿನಲ್ಲೇ ಮುಂದುವರಿಯಲು ನಿರ್ಧರಿಸುತ್ತೇವೆ. ನಂತರ ನಾವು ನಮ್ಮ ಸುಧಾರಣೆಯತ್ತ ಕೆಲಸ ಮಾಡಬಹುದಾದ ಮತ್ತು ಇತರರಿಗೆ ಸಹಾಯ ಮಾಡುವುದನ್ನು ಮುಂದುವರಿಸಬಹುದಾದ ನಾಳೆಯನ್ನು ಎದುರುನೋಡುತ್ತಾ ನಿದ್ರಿಸುತ್ತೇವೆ. ನಾವು ನಮ್ಮ ಅಮೂಲ್ಯವಾದ ಜೀವನವನ್ನು ತುಂಬಾ ಅರ್ಥಪೂರ್ಣಗೊಳಿಸುತ್ತಿದ್ದೇವೆ ಎಂದು ನಾವು ನಿಜವಾಗಿಯೂ ಸಂತೋಷಪಡಬಹುದು.

Top