What%20is%20buddhist%20practice

ನಮ್ಮಲ್ಲಿರುವ ನ್ಯೂನತೆಗಳನ್ನು ನಿವಾರಿಸಿ, ನಮ್ಮ ಸಕಾರಾತ್ಮಕ ಸಾಮರ್ಥ್ಯವನ್ನು ಅರಿತುಕೊಳ್ಳುವತ್ತ ಕೆಲಸ ಮಾಡುವುದು ಬೌದ್ಧಧರ್ಮದ ಮುಖ್ಯ ಉದ್ದೇಶವಾಗಿದೆ. ನಮ್ಮ ಜೀವನದಲ್ಲಿ ಗೊಂದಲವನ್ನು ಉಂಟುಮಾಡುವ ಅಸ್ಪಷ್ಟತೆ ಮತ್ತು ಭಾವನಾತ್ಮಕ ಅಸಮತೋಲಗಳನ್ನು ಸಹ ನ್ಯೂನತೆಗಳಾಗಿ ಪರಿಗಣಿಸಲಾಗುತ್ತದೆ. ಇವುಗಳ ಪರಿಣಾಮವಾಗಿ, ಕೋಪ, ದುರಾಶೆ ಮತ್ತು ನಿಷ್ಕಪಟತೆಯಂತಹ ಗೊಂದಲದ ಭಾವನೆಗಳು ಉದ್ಭವಿಸಿ, ನಮ್ಮನ್ನು ಪ್ರಚೋದಿತವಾಗಿ ವರ್ತಿಸುವಂತೆ ಪ್ರೇರೇಪಿಸುತ್ತವೆ. ಸ್ಪಷ್ಟವಾಗಿ ಸಂವಹನ ಮಾಡುವ ನಮ್ಮ ಸಾಮರ್ಥ್ಯದೊಂದಿಗೆ, ವಾಸ್ತವವನ್ನು ಅರ್ಥಮಾಡಿಕೊಳ್ಳುವುದು, ಇತರರೊಂದಿಗೆ ಸಹಾನುಭೂತಿಯಿಂದಿರುವುದು ಮತ್ತು ನಮ್ಮ ಸುಧಾರಣೆಗಾಗಿ ಕೆಲಸ ಮಾಡುವುದು ನಮ್ಮ ಸಕಾರಾತ್ಮಕ ಸಾಮರ್ಥ್ಯಗಳಾಗಿವೆ. 

ಬೌದ್ಧ ಆಚರಣೆಯ ಪ್ರಥಮ ಹಂತವೆಂದರೆ ನಮ್ಮ ಮನಸ್ಸನ್ನು ಶಾಂತಗೊಳಿಸುವುದು ಮತ್ತು ಎಚ್ಚರಿಕೆಯಿಂದಿರುವುದು, ಇದರರ್ಥ ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಮತ್ತು ಮಾತನಾಡುತ್ತೇವೆ ಮತ್ತು ನಾವು ಒಬ್ಬಂಟಿಯಾಗಿರುವಾಗ ಹೇಗೆ ಯೋಚಿಸುತ್ತೇವೆ ಎಂಬುದನ್ನು ನಿರಂತರವಾಗಿ ಗಮನದಲ್ಲಿಟ್ಟುಕೊಳ್ಳುವುದು. ಆದರೆ ಯಾವುದೇ ಕ್ರಮ ಕೈಗೊಳ್ಳದೆ, ಕೇವಲ ಗಮನ ಹರಿಸುವುದರಿಂದ ಏನೇನು ಆಗುವುದಿಲ್ಲ. ನಾವು ಎಚ್ಚರಿಕೆಯಿಂದಿರುವಾಗ, ಯಾವುದು ರಚನಾತ್ಮಕ ಮತ್ತು ಯಾವುದು ವಿನಾಶಕಾರಿ ಎಂಬುದರ ನಡುವಿನ ವ್ಯತ್ಯಾಸವನ್ನು ತಿಳಿಯಬಹುದು. ಇದು ಕೇವಲ ಸ್ವಂತದ ಬಗ್ಗೆಗಿನ ಕಾಳಜಿಯಲ್ಲ: ಇದರಿಂದ ನಾವು ನಿಜವಾಗಿಯೂ ಹೆಚ್ಚು ಕಾಳಜಿ ವಹಿಸುತ್ತೇವೆ ಮತ್ತು ಇತರರನ್ನು ಹೃತ್ಪೂರ್ವಕವಾಗಿ ಸ್ವೀಕರಿಸುತ್ತೇವೆ.  

ನಮ್ಮ ಆತ್ಮಾವಲೋಕನ ಮತ್ತು ಸ್ವಯಂ ಅರಿವಿನ ಉದ್ದೇಶವು ನಮ್ಮ ಸಮಸ್ಯೆಗಳ ಕಾರಣಗಳನ್ನು ಕಂಡುಹಿಡಿಯುವುದಾಗಿದೆ. ಬಾಹ್ಯ ಅಂಶಗಳು ಮತ್ತು ಜನರು, ಖಂಡಿತವಾಗಿಯೂ ನಮಗೆ ತೊಂದರೆಯುಂಟಾಗುವಂತಹ ಸಂದರ್ಭಗಳನ್ನು ಒದಗಿಸುತ್ತಾರೆ - ಆದರೆ ಬೌದ್ಧ ವಿಧಾನದಲ್ಲಿ, ನಾವು ಇನ್ನೂ ಆಳವಾದ ಕಾರಣಗಳನ್ನು ಗುರುತಿಸಲು ಪ್ರಯತ್ನಿಸುತ್ತೇವೆ ಮತ್ತು ಇದಕ್ಕಾಗಿ ಮೊದಲು ನಾವು ನಮ್ಮ ಮನಸ್ಸನ್ನು ಪರಿಶೀಲಿಸಬೇಕಾಗಿದೆ. ನಮ್ಮ ಮಾನಸಿಕ ಅಭ್ಯಾಸಗಳು, ಜೊತೆಗೆ ನಮ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು ನಾವು ಜೀವನವನ್ನು ಅನುಭವಿಸುವ ರೀತಿಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಕೆಲಸ, ಖಿನ್ನತೆ, ಆತಂಕ, ಒಂಟಿತನ ಮತ್ತು ಅಭದ್ರತೆಯಿಂದ ಒತ್ತಡವನ್ನು ಅನುಭವಿಸುತ್ತಿರುವಾಗ, ಅವುಗಳನ್ನು ಎದುರಿಸುವಲ್ಲಿನ ತೊಂದರೆಗಳು, ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳಿಂದ ಬರುತ್ತವೆಯೇ ಹೊರತು ಸಮಸ್ಯೆಗಳಿಂದಲ್ಲ. ಜೀವನದ ತಡೆಯಲಾರದ ಸವಾಲುಗಳನ್ನು ಎದುರಿಸುವ ಉತ್ತಮ ಮಾರ್ಗವೆಂದರೆ ನಮ್ಮ ಮನಸ್ಸನ್ನು ಶಾಂತಗೊಳಿಸುವುದು ಮತ್ತು ಭಾವನಾತ್ಮಕ ಸಮತೋಲನ ಮತ್ತು ಮನಸ್ಸಿನ ಸ್ಪಷ್ಟತೆಯನ್ನು ಪಡೆಯುವುದಾಗಿದೆ. 

ಒಮ್ಮೆ ನಾವು ನಮಗೆ ದುಃಖ ಮತ್ತು ತೊಂದರೆಗಳನ್ನು ಉಂಟುಮಾಡುವ ಭಾವನೆಗಳು, ವರ್ತನೆಗಳು ಮತ್ತು ನಡವಳಿಕೆಗಳ ಬಗ್ಗೆ ಗಮನಹರಿಸಿದರೆ, ನಾವು ಅವುಗಳಿಗೆ ಪರಿಹಾರಗಳನ್ನು ಹುಡುಕಬಹುದು. 

ವಾಸ್ತವಿಕತೆ ಮತ್ತು ಮನಸ್ಸಿನ ಕಾರ್ಯಚಟುವಟಿಕೆಗಳ ಬಗ್ಗೆಗಿನ ಸ್ಪಷ್ಟ ತಿಳುವಳಿಕೆಯನ್ನು ಆಧರಿಸಿ ನಾವು ಒಂದು ರೀತಿಯ ಭಾವನಾತ್ಮಕ ನೈರ್ಮಲ್ಯವನ್ನು ಅನ್ವಯಿಸಬೇಕಾಗಿದೆ. - 14 ನೇ ದಲೈ ಲಾಮಾ 

ನಾವೆಲ್ಲರೂ ನಮ್ಮ ದೈಹಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ, ಹಾಗೆಯೇ ನಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಮುಖ್ಯ. ಭಾವನಾತ್ಮಕ ನೈರ್ಮಲ್ಯವನ್ನು ಅಭಿವೃದ್ಧಿಪಡಿಸಲು, ನಾವು ಮೂರು ವಿಷಯಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು: ನಮ್ಮ ಗೊಂದಲದ ಮನಸ್ಥಿತಿಗಳ ಪ್ರತಿವಿಷಗಳನ್ನು ನಾವು ನೆನಪಿಟ್ಟುಕೊಳ್ಳಬೇಕು, ಅಗತ್ಯವಿರುವಾಗ ಅವುಗಳನ್ನು ಅನ್ವಯಿಸಲು ಮರೆಯಬಾರದು ಮತ್ತು ಅವುಗಳನ್ನು ನಿರ್ವಹಿಸಲು ಮರೆಯಬಾರದು. 

ಎಲ್ಲಾ ಪ್ರತಿವಿಷಗಳನ್ನು ನೆನಪಿಟ್ಟುಕೊಳ್ಳಲು, ನಾವು ಹೀಗೆ ಮಾಡಬೇಕು: 

  • ಅವು ಏನೆಂದು ತಿಳಿಯಬೇಕು  
  • ನಾವು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವವರೆಗೆ ಅವುಗಳ ಬಗ್ಗೆ ಆಲೋಚಿಸಬೇಕು, ಜೊತೆಗೆ ಅವುಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ತಿಳಿಯಬೇಕು ಮತ್ತು ಅವುಗಳ ಕಾರ್ಯಾಚರಣೆಯ ಬಗ್ಗೆ ಮನವರಿಕೆಯಾಗಬೇಕು. 
  • ಅವುಗಳ ಪರಿಚಿತತೆಯನ್ನು ಪಡೆಯಲು, ಧ್ಯಾನದಲ್ಲಿ ಅವುಗಳನ್ನು ಅನ್ವಯಿಸುವುದನ್ನು ಅಭ್ಯಾಸ ಮಾಡಬೇಕು

ನಮಗೆ ನಾವೇ ವೈದ್ಯರಂತೆ ಇರಬೇಕು: ನಮ್ಮ ಅಸ್ವಸ್ಥತೆಗಳನ್ನು ಪತ್ತೆಹಚ್ಚಲು ಕಲಿಯಬೇಕು, ಅವುಗಳ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕು, ಯಾವ ಪರಿಹಾರಗಳಿವೆ ಮತ್ತು ಅವುಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ನೋಡಿ, ತದನಂತರ ಅವುಗಳನ್ನು ಅನ್ವಯಿಸುವುದನ್ನು ಅಭ್ಯಾಸ ಮಾಡಬೇಕು. 

ನಾವು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವಾಗ, ಬದಲಾವಣೆಗಳನ್ನು ಮಾಡುವ ಮೊದಲು ಜೀವನಶೈಲಿಯ ಕೂಲಂಕುಷ ಪರೀಕ್ಷೆಯ ಪ್ರಯೋಜನಗಳ ಬಗ್ಗೆ ನಾವು ದೃಡವಾಗಿ ಮನವರಿಕೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಜನರು ಹಟಾತ್ತಾಗಿ ಪೋಷಣೆ ಮತ್ತು ಫಿಟ್ನೆಸ್ ತರಬೇತಿಯ ಆಳವಾದ ಅಧ್ಯಯನವನ್ನು ಪ್ರಾರಂಭಿಸುವುದಿಲ್ಲ, ಮೊದಲು ಆಹಾರ ಮತ್ತು ವ್ಯಾಯಾಮದ ದಿನಚರಿಯನ್ನು ಅಭ್ಯಸಿಸಲು ಪ್ರಯತ್ನಿಸುತ್ತಾರೆ. ಪ್ರಾರಂಭಿಸುವ ಮೊದಲು ಅವರಿಗೆ ಸೂಚನೆಯ ಅಗತ್ಯವಿರುತ್ತದೆ ಹೌದು, ಆದರೆ ಒಮ್ಮೆ ಅವರು ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸಿದರೆ, ಅವರು ಆ ದಾರಿಯಲ್ಲಿ ಮುನ್ನಡೆಯುವಂತೆ ಪ್ರೇರಿತರಾಗಬಹುದು. 

ಭಾವನಾತ್ಮಕ ಆರೋಗ್ಯವನ್ನು ಸಾಧಿಸುವಲ್ಲಿಯೂ ಸಹ ಇದೇ ಪ್ರಕ್ರಿಯೆ ಸಂಭವಿಸುತ್ತದೆ. ಒಮ್ಮೆ ನಾವು ನಮ್ಮ ಸಾವಧಾನತೆಯ ತರಬೇತಿಯಿಂದಾಗುವ ಯೋಗಕ್ಷೇಮದ ರುಚಿಯನ್ನು ಕಂಡಾಗ, ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಇತರರಿಗೆ ಹೆಚ್ಚು ಸಹಾಯ ಮಾಡಲು, ಬೌದ್ಧ ಆಚರಣೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಪ್ರೇರಣೆ ಮತ್ತು ಆಸಕ್ತಿಯನ್ನು ಸುಲಭವಾಗಿ ಅಭಿವೃದ್ಧಿಪಡಿಸಿಕೊಳ್ಳಬಹುದು. 

ಒಂದು ಕಾಲದಲ್ಲಿ ಬುದ್ಧನು ನಮ್ಮಂತೆಯೇ ಒಬ್ಬ ಸಾಧಾರಣ ವ್ಯಕ್ತಯಾಗಿದ್ದು, ಜೀವನದ ಸಂಕಟಗಳನ್ನು ಎದುರಿಸುತ್ತಿದ್ದರು. ನಮ್ಮೆಲ್ಲರಂತೆಯೇ, ಅವರು ಕೂಡ ತಮ್ಮ ಮತ್ತು ತಮ್ಮ ಸುತ್ತಲಿರುವವರ ಜೀವನವನ್ನು ಸುಧಾರಿಸಲು ಬಯಸಿದರು. ನಮ್ಮ ಸುತ್ತಮುತ್ತದಲ್ಲಿ ನಡೆಯುವ ಸನ್ನಿವೇಶಗಳ ನಡುವೆಯು ನಾವು ಶಾಂತವಾಗಿರಲು, ಎಚ್ಚರಿಕೆಯಿಂದಿರಲು ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ತಮ್ಮ ಆತ್ಮಾವಲೋಕನದ ಮೂಲಕ ಅವರು ಅರಿತುಕೊಂಡರು. 

ಇದನ್ನು ದಲೈ ಲಾಮಾ ಅವರು "ಭಾವನಾತ್ಮಕ ನೈರ್ಮಲ್ಯ" ಎಂದು ಕರೆಯಲು ಇಷ್ಟಪಡುತ್ತಾರೆ - ಇದು ಸಂಸ್ಕೃತಿ ಮತ್ತು ಧರ್ಮದ ಗಡಿಗಳನ್ನು ಮೀರಿದ ಸಂಗತಿಯಾಗಿದ್ದು, ನಮ್ಮೆಲ್ಲರ ಬಯಕೆಯ ಎದೆಬಡಿತದೊಂದಿಗೆ ಒಂದಾಗುತ್ತದೆ: ಸಮಸ್ಯೆಗಳಿಲ್ಲದ ಸಂತೋಷದ ಮತ್ತು ಶಾಂತಿಯುತ ಜೀವನದ ಸಾಧನೆ. 

Top