ಆಶ್ರಯ ಎಂದರೇನು?

What ias refuge%20article

ನಾವೆಲ್ಲರೂ ನಮ್ಮ ಜೀವನದಲ್ಲಿ ಅರ್ಥವನ್ನು ಹುಡುಕುತ್ತೇವೆ. ಕೆಲವರು ತಮ್ಮ ವೃತ್ತಿಜೀವನದಲ್ಲಿ, ಇನ್ನೂ ಕೆಲವರು ಇತ್ತೀಚಿನ ಫ್ಯಾಷನ್‌ಗಳೊಂದಿಗೆ ಮುಂದುವರಿಯುವ ಮೂಲಕ ಮತ್ತು ಇತರರು ದೂರದ ಸ್ಥಳಗಳಿಗೆ ಪ್ರಯಾಣಿಸುವ ಮೂಲಕ ಹುಡುಕುತ್ತಾರೆ. ಆದರೆ ಅಂತಿಮವಾಗಿ, ವೃತ್ತಿಜೀವನವು ನಿವೃತ್ತಿಯಲ್ಲಿ ಕೊನೆಗೊಳ್ಳುತ್ತದೆ, ಫ್ಯಾಷನ್‌ಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಮತ್ತು ರಜಾದಿನಗಳು ಕಣ್ಣು ಮಿಟುಕಿಸುವುದರೊಳಗೆ ಮುಗಿದುಹೋಗುತ್ತವೆ. ಇವುಗಳಲ್ಲಿ ಯಾವುದೂ ನಮಗೆ ಶಾಶ್ವತವಾದ ತೃಪ್ತಿ ಅಥವಾ ಸಂತೋಷವನ್ನು ನೀಡುವುದಿಲ್ಲ. ನಮ್ಮ ಆಧುನಿಕ ಜಗತ್ತಿನಲ್ಲಿ ಲಭ್ಯವಿರುವ ಲಕ್ಷಾಂತರ ಭೌತಿಕ ಮತ್ತು ಆಧ್ಯಾತ್ಮಿಕ ಆಯ್ಕೆಗಳೊಂದಿಗೆ, ನಮ್ಮ ಜೀವನದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ತುಂಬಾ ಗೊಂದಲವಿದೆ. 

ಬೌದ್ಧಧರ್ಮದಲ್ಲಿ, ಆಶ್ರಯವೆಂದರೆ ನಮ್ಮ ಜೀವನದಲ್ಲಿ ಒಂದು ಅರ್ಥಪೂರ್ಣವಾದ ನಿರ್ದೇಶನವನ್ನು ಗೋಚರಿಸುವುದು. ನಮಗೆ ಮತ್ತು ಎಲ್ಲರಿಗೆ ಸಹಾಯವಾಗುವಂತೆ, ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಮತ್ತು ನಮ್ಮ ಎಲ್ಲಾ ನ್ಯೂನತೆಗಳನ್ನು ನಿವಾರಿಸಲು ಕೆಲಸ ಮಾಡುವುದೇ ಆ ನಿರ್ದೇಶನವಾಗಿದೆ. ಬೌದ್ಧ ಆಶ್ರಯವು ಕೇವಲ ತಾತ್ಕಾಲಿಕ ಬೇಸರ, ಹಸಿವು ಅಥವಾ ಒತ್ತಡಕ್ಕೆ ಮಾತ್ರವಲ್ಲದೆ ಇನ್ನೂ ಹೆಚ್ಚಿನವುಗಳಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತದೆ. ನಾವು ಬಾಹ್ಯವಾಗಿ ಬದಲಾಗಬೇಕಾಗಿಲ್ಲ: ನಾವು ಯಾವುದೇ ವಿಶೇಷ ಬಟ್ಟೆಗಳನ್ನು ಧರಿಸಬೇಕಾಗಿಲ್ಲ ಅಥವಾ ನಮ್ಮ ಕೇಶವಿನ್ಯಾಸವನ್ನು ಬದಲಾಯಿಸಬೇಕಾಗಿಲ್ಲ. ಬೌದ್ಧ ಧರ್ಮದ ಆಶ್ರಯವೆಂದರೆ ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದು. ಇದರರ್ಥ ಜೀವನಕ್ಕಾಗಿ ಯಾವುದು ಉದ್ದೇಶವನ್ನು ನೀಡುತ್ತದೆ ಮತ್ತು ಇಂದು ಮತ್ತು ಭವಿಷ್ಯದಲ್ಲಿ ನಮಗೆ ಯಾವುದು ಸಂತೋಷವನ್ನು ತರುತ್ತದೆ ಎಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ಆಳಗೊಳಿಸುವುದಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬೌದ್ಧ ಆಶ್ರಯವು ನಮ್ಮನ್ನು ದುಃಖದಿಂದ ರಕ್ಷಿಸುತ್ತದೆ. 

ಬೌದ್ಧರು ಸಾಮಾನ್ಯವಾಗಿ "ಆಶ್ರಯಕ್ಕಾಗಿ ಹೋಗಿ" ಅಥವಾ "ಆಶ್ರಯವನ್ನು ತೆಗೆದುಕೊಳ್ಳಿ" ಎಂಬ ಪದಗುಚ್ಛವನ್ನು ಬಳಸುತ್ತಾರೆ, ಏಕೆಂದರೆ ಆಶ್ರಯವು ಸಕ್ರಿಯವಾದ ಪ್ರಕ್ರಿಯೆಯಾಗಿದೆ. ಇದು ನಮ್ಮನ್ನು ನಾವು ಬೌದ್ಧ ಮಾರ್ಗಕ್ಕೆ ಒಪ್ಪಿಸುವ ಮೂಲಭೂತ ಹೆಜ್ಜೆಯಾಗಿದೆ. ಆದರೆ ನಾವು ಏಕೆ ಹೀಗೆ ಮಾಡಬೇಕು? ನಾವು ಮಾನವ ಸ್ವಭಾವವನ್ನು ಅರ್ಥಮಾಡಿಕೊಂಡಾಗ - ಅಂದರೆ ನಾವೆಲ್ಲರೂ ಸಂತೋಷ ಮತ್ತು ತೃಪ್ತಿಯನ್ನು ಹುಡುಕುತ್ತಿದ್ದೇವೆ ಮತ್ತು ನಮ್ಮಲ್ಲಿ ಯಾರೂ ದುಃಖವನ್ನು ಬಯಸುವುದಿಲ್ಲ - ನಾವು ನಮಗೆ ಸಹಾಯ ಮಾಡುವಂತಹದನ್ನು ಹುಡುಕಬೇಕಾಗುತ್ತದೆ. ಹಾಗಾಗಿ ಬೌದ್ಧಧರ್ಮದಲ್ಲಿ, ನಾವು ಆಶ್ರಯಕ್ಕಾಗಿ ತ್ರಿರತ್ನಗಳತ್ತ ತಿರುಗುತ್ತೇವೆ. 

ಈ ತ್ರಿರತ್ನಗಳೆಂದರೆ ಬುದ್ಧ, ಧರ್ಮ ಮತ್ತು ಸಂಘ.

ನಾವು ಬುದ್ಧನ ಬಳಿ ಆಶ್ರಯಕ್ಕಾಗಿ ಹೋಗುತ್ತೇವೆ, ಏಕೆಂದರೆ ಪ್ರಬುದ್ಧ ಗುರುಗಳಾಗಿ ಅವರು ನಮಗೆ ಅರ್ಥಹೀನ ಅಸ್ತಿತ್ವದಿಂದ ಹೊರಬರುವ ಮಾರ್ಗವನ್ನು ತೋರಿಸುವುದಲ್ಲದೆ, ಸಂಪೂರ್ಣವಾಗಿ ದುಃಖದಿಂದ ಹೊರಬರುವ ಮಾರ್ಗವನ್ನು ತೋರಿಸುತ್ತಾರೆ. ಮೂಲಭೂತವಾಗಿ ಮನಸ್ಸು ಶುದ್ಧವಾಗಿರುವುದು; ಸಹಾನುಭೂತಿ ಮತ್ತು ಬುದ್ಧಿವಂತಿಕೆಯಿಂದ, ನಾವು ನಮ್ಮಲ್ಲಿರುವ ಯಾವುದೇ ಗೊಂದಲ ಮತ್ತು ನಕಾರಾತ್ಮಕ ಭಾವನೆಗಳನ್ನು ಹಿಂದಿರುಗದಂತೆ ಶಾಶ್ವತವಾಗಿ ತೆಗೆದುಹಾಕಬಹುದು ಎಂದು ಅವರು ಕಲಿಸಿದರು. ಇದನ್ನು ಸಾಧಿಸುವುದು ಹೇಗೆ ಎಂಬುದರ ಕುರಿತಾದ ಬುದ್ಧನ ಬೋಧನೆಯೇ ಧರ್ಮ, ಆದ್ದರಿಂದ ನಾವು ಆಶ್ರಯಕ್ಕಾಗಿ ಹೋದಾಗ, ನಮ್ಮ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ನಾವು ವಿವಿಧ ಬೌದ್ಧ ವಿಧಾನಗಳಿಗೆ ತಿರುಗುತ್ತೇವೆ ಮತ್ತು ಅವುಗಳನ್ನು ಅಳವಡಿಸಿಕೊಳ್ಳುತ್ತೇವೆ. ಸಂಘವು ಸನ್ಯಾಸಿಗಳು, ಸನ್ಯಾಸಿನಿಗಳು ಮತ್ತು ನಮ್ಮ ಬೌದ್ಧ ಸಹಚರರಿಂದ ಕೂಡಿದೆ. ಅವರಲ್ಲಿ ಬುದ್ಧನ ಬೋಧನೆಗಳನ್ನು ನಿಜವಾಗಿಯೂ ಅಭ್ಯಾಸ ಮಾಡುವವರು ಮಾದರಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಬೌದ್ಧ ಮಾರ್ಗವನ್ನು ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತಾರೆ. 

ಬದ್ಧತೆಗಾಗಿ ನಾವು ಸ್ನೇಹಿತರಿಂದ ಅಥವಾ ಸಮಾಜದಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು ಎಂದೇನು ಇಲ್ಲ. ವಾಸ್ತವದಲ್ಲಿ, ನಾವು ತ್ರಿರತ್ನಗಳಲ್ಲಿ ಆಶ್ರಯ ಪಡೆದಾಗ, ನಾವು ನಮಗಾಗಿ ಅರ್ಥಪೂರ್ಣ ಜೀವನವನ್ನು ಸೃಷ್ಟಿಸಿಕೊಳ್ಳುತ್ತೇವೆ, ಜೊತೆಗೆ ನಾವು ಇತರರಿಗೆ ನಮ್ಮ ಮನಸ್ಸನ್ನು ತೆರೆಯುತ್ತೇವೆ ಮತ್ತು ನಮ್ಮ ಸುತ್ತಲಿನವರಿಗೆ ಮತ್ತು ಇಡೀ ಪ್ರಪಂಚಕ್ಕೆ, ನಾವು ಹೇಗೆ ನೆರವಾಗಬಹುದು ಎಂಬುದನ್ನು ಹುಡುಕಲು ಪ್ರಾರಂಭಿಸುತ್ತೇವೆ. 

ನಾವು ಬುದ್ಧ, ಧರ್ಮ ಮತ್ತು ಸಂಘದಲ್ಲಿ ಆಶ್ರಯ ಪಡೆದ ನಂತರ, ನಾವು ಗೊಂದಲಕ್ಕೊಳಗಾಗಬೇಕಾಗಿಲ್ಲ. ನಮಗೆ ಇನ್ನು ಮುಂದೆ ಆಧ್ಯಾತ್ಮಿಕವಾಗಿ ಶಾಪಿಂಗ್ ಮಾಡುವ ಅಗತ್ಯವಿರುವುದಿಲ್ಲ, ನಮಗೆ ಒಂದು ಮಟ್ಟದ ಭೌತಿಕ ಸೌಕರ್ಯ ಮತ್ತು ಆಸ್ತಿಯ ಅಗತ್ಯವಿದ್ದರೂ, ಅವುಗಳು ನಮಗೆ ಶಾಶ್ವತವಾದ ಸಂತೋಷವನ್ನು ನೀಡುತ್ತವೆ ಎಂದು ಊಹಿಸಿ ಅವುಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಬೌದ್ಧ ತತ್ವಗಳಿಗೆ ನಾವು ಬದ್ಧರಾದಾಗ, ಅವು ನಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತವೆ ಮತ್ತು ನಮ್ಮನ್ನು ಭಾವನಾತ್ಮಕವಾಗಿ ಸಂತೋಷವಾಗಿ ಮತ್ತು ಆರೋಗ್ಯಕರವಾಗಿರಿಸುವತ್ತ ಕಾರ್ಯನಿರ್ವಹಿಸಲು ಹೆಚ್ಚಿನ ಸಮಯವನ್ನು ನೀಡುವಂತೆ ಮಾಡುತ್ತದೆ. 

ಅದಕ್ಕಾಗಿಯೇ ಆಶ್ರಯವು ಸದಾ ನಡೆಯುತ್ತಿರುವ, ಸಕ್ರಿಯ ಪ್ರಕ್ರಿಯೆಯಾಗಿರುತ್ತದೆ. ಇದರ ಮೇಲೆ ನಾವು ನಿರಂತರವಾಗಿ ಕೆಲಸ ಮಾಡಬೇಕಾಗಿರುತ್ತದೆ. ಇದರರ್ಥ ನಾವು ಬುದ್ಧನನ್ನು ಒಂದು ರೀತಿಯ ದೇವರಂತೆ ನಂಬಿ, ಪ್ರಾರ್ಥಿಸುವುದಲ್ಲ. ನಮ್ಮ ಬೌದ್ಧ ಸ್ನೇಹಿತರು ನಮಗಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದಲ್ಲ. ಇದಕ್ಕಾಗಿಯೇ ಬುದ್ಧನ ಉಪದೇಶವಾದ ಧರ್ಮವೇ ಅತ್ಯುನ್ನತ ಆಶ್ರಯ ಎಂದು ಹೇಳಲಾಗುತ್ತದೆ. ನಾವು ಬುದ್ಧನಲ್ಲಿ ಬಲವಾದ ನಂಬಿಕೆಯಿಟ್ಟರೂ ಮತ್ತು ಸಾಕಷ್ಟು ಬುದ್ಧಿವಂತ ಮತ್ತು ಸಹಾನುಭೂತಿಯುಳ್ಳ ಬೌದ್ಧ ಸ್ನೇಹಿತರನ್ನು ಹೊಂದಿದ್ದರೂ ಸಹ, ನಾವು ಧರ್ಮದ ಬೋಧನೆಗಳನ್ನು ಅನುಸರಿಸದಿದ್ದರೆ ಮತ್ತು ಬಳಸದೇ ಇದ್ದರೆ, ನಾವು ಆಶ್ರಯದ ಪ್ರಯೋಜನಗಳನ್ನು ಪಡೆಯಲಾಗುವುದಿಲ್ಲ. ಇತರರಿಗೆ ಹಾನಿ ಮಾಡದಿರುವುದು, ಪ್ರಯೋಜನಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ನಮ್ಮ ಮನಸ್ಸನ್ನು ಪಳಗಿಸುವಂತಹ ಮುಖ್ಯ ಸಲಹೆಗಳನ್ನು ನಾವು ಅನುಸರಿಸಿದಾಗ, ನಮ್ಮ ಜೀವನವು ಖಂಡಿತವಾಗಿಯೂ ಹೆಚ್ಚು ಅರ್ಥಪೂರ್ಣವಾಗುತ್ತದೆ. 

ಬೌದ್ಧ ಮಾರ್ಗದಲ್ಲಿ ಔಪಚಾರಿಕವಾಗಿ ನಮ್ಮ ಪ್ರಯಾಣವನ್ನು ಪ್ರಾರಂಭಿಸಲು ವಿಶೇಷ ಸಮಾರಂಭಗಳಿದ್ದರೂ, ನಿಜವಾದ ಬದ್ಧತೆ ಹೃದಯದಿಂದ ಬರಬೇಕು. ನಾವು ನಿಜವಾಗಿಯೂ ನಮ್ಮ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದಾಗ, ನಾವು ನಿಜವಾದ ಆಶ್ರಯವನ್ನು ಪಡೆಯುತ್ತೇವೆ. 

Top