ಆಶ್ರಯ: ಜೀವನದಲ್ಲಿ ಸುರಕ್ಷಿತ ಮತ್ತು ಅರ್ಥಪೂರ್ಣ ನಿರ್ದೇಶನ

25:38
ಆಶ್ರಯ ಪಡೆಯುವುದು ಎಲ್ಲಾ ಬೌದ್ಧ ಬೋಧನೆಗಳು ಮತ್ತು ಆಚರಣೆಗಳ ಅಡಿಪಾಯವಾಗಿದೆ. ಇದನ್ನು "ಬೌದ್ಧ ಮಾರ್ಗವನ್ನು ಪ್ರವೇಶಿಸುವ ಹೆಬ್ಬಾಗಿಲು" ಎಂದು ಕರೆಯಲಾಗುತ್ತದೆ. ಆಶ್ರಯ ಪಡೆಯುವುದು ಎಂದರೆ ನಮ್ಮ ಮೇಲೆ ನಾವೇ ಕೆಲಸ ಮಾಡುವುದು ಎಂದು ನಾವು ಅರ್ಥಮಾಡಿಕೊಂಡಾಗ, ಅದು ನಮ್ಮ ಜೀವನದಲ್ಲಿ ಸುರಕ್ಷಿತವಾದ ಮತ್ತು ಅರ್ಥಪೂರ್ಣವಾದ ದಿಕ್ಕನ್ನು ಇರಿಸುವ ಸಕ್ರಿಯ ಪ್ರಕ್ರಿಯೆಯಾಗಿದೆ ಎಂದು ನಾವು ನೋಡುತ್ತೇವೆ. ಗೊಂದಲ, ಗೊಂದಲದ ಭಾವನೆಗಳು ಮತ್ತು ಪ್ರಚೋದಿತ ನಡವಳಿಕೆಗಳನ್ನು ತೊಡೆದುಹಾಕಲು ಮತ್ತು ಎಲ್ಲಾ ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸಲು ಬುದ್ಧನು ಕಲಿಸಿದ ವಿಧಾನಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಮೇಲೆ ಕೆಲಸ ಮಾಡುತ್ತೇವೆ. ಇದನ್ನು ಎಲ್ಲಾ ಬುದ್ಧರು ಮಾಡಿರುವರು ಮತ್ತು ಹೆಚ್ಚಾಗಿ ಅರಿತುಕೊಂಡ ಗುರುಗಳು ಮಾಡುತ್ತಿರುವರು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಲು ನಾವು ಪ್ರಯತ್ನಿಸುತ್ತೇವೆ.

ನಮ್ಮ ಜೀವನದಲ್ಲಿ, ಬೌದ್ಧ ಆಚರಣೆಯ ಉದ್ದೇಶದ ಬಗ್ಗೆಗಿರುವ ಗೊಂದಲವನ್ನು ನಿವಾರಿಸುವುದು

ದೈನಂದಿನ ಜೀವನದಲ್ಲಿನ ಆಶ್ರಯದ ಪ್ರಸ್ತುತತೆಯ ಬಗ್ಗೆ ಮಾತನಾಡಲು ನನ್ನನ್ನು ವಿನಂತಿಸಲಾಗಿದೆ. ಇದು ಹತ್ತನೇ ಶತಮಾನದ ಕೊನೆಯಲ್ಲಿ, ಟಿಬೆಟ್‌ಗೆ ಹೋದ ಮಹಾನ್ ಭಾರತೀಯ ಗುರು ಅತಿಶಾ ಅವರ ಉದಾಹರಣೆಯನ್ನು ನೆನಪಿಗೆ ತಂದಿತು. ಅವರು ಮಹಾನ್ ಗುರುಗಳಲ್ಲಿ ಒಬ್ಬರಾಗಿದ್ದು, ಟಿಬೆಟ್ನಲ್ಲಿ ಭಾರತದಿಂದಾದ ಬೌದ್ಧಧರ್ಮದ ಮೊದಲ ಪರಿಚಯದ ಅವನತಿಯ ನಂತರ, ಅದನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿದವರಾಗಿದ್ದರು. ಆ ಸಮಯದಲ್ಲಿ ಟಿಬೆಟ್‌ನಲ್ಲಿನ ಪರಿಸ್ಥಿತಿ ಹೇಗಿತ್ತು ಎಂದರೆ, ತಂತ್ರ ಮತ್ತು ಕೆಲವು ಸುಧಾರಿತ ಬೋಧನೆಗಳ ಬಗ್ಗೆ ಬಹಳಾ ತಪ್ಪು ತಿಳುವಳಿಕೆ ಇತ್ತು. ಯಾರೊಬ್ಬರೂ ಅರ್ಹರಾದ ಶಿಕ್ಷಕರಿರಲಿಲ್ಲ. ನಿಜ ಹೇಳಬೇಕೆಂದರೆ, ವಿಷಯಗಳನ್ನು ಹೆಚ್ಚು ಸ್ಪಷ್ಟವಾಗಿ ವಿವರಿಸುವ ಶಿಕ್ಷಕರೇ ಸುತ್ತಮುತ್ತವಿರಲಿಲ್ಲ. ಹಲವಾರು ಪಠ್ಯಗಳನ್ನು ಅನುವಾದಿಸಲಾಗಿದ್ದರೂ, ಹೆಚ್ಚಿನ ಜನರಿಗೆ ಅವುಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವುಗಳ ಹೆಚ್ಚಿನ ಪ್ರತಿಗಳು ಇರಲಿಲ್ಲ. ಅವರು ಓದಬಹುದಾಗಿದ್ದರೂ, ಅವರು ಏನು ಓದುತ್ತಿದ್ದಾರೆ ಎಂಬುದರ ಸ್ಪಷ್ಟೀಕರಣ ಸಿಗುವುದು ಬಹಳಾ ಕಷ್ಟವಾಗಿತ್ತು. 

ಈ ಪರಿಸ್ಥಿತಿಯನ್ನು ಸರಿಪಡಿಸಲು, ಪಾಶ್ಚಿಮಾತ್ಯ ಟಿಬೆಟ್‌ನ ರಾಜನೊಬ್ಬನು, ಟಿಬೆಟ್ಗೆ ಒಬ್ಬ ಶ್ರೇಷ್ಠ ಬೌದ್ಧ ಗುರುವನ್ನು ತಮ್ಮೊಂದಿಗೆ ಕರೆತರುವಂತೆ ಕೆಲವು ಧೈರ್ಯಶಾಲಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳುಹಿಸಿದನು. ಅವರು ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕಾಗಿತ್ತು, ಭಾಷೆಗಳನ್ನು ಕಲಿಯಬೇಕಾಗಿತ್ತು ಮತ್ತು ಹವಾಮಾನವನ್ನು ಎದುರಿಸಬೇಕಾಗಿತ್ತು. ಅವರಲ್ಲಿ ಹಲವರು, ಪ್ರಯಾಣದಲ್ಲಿ ಅಥವಾ ಭಾರತವನ್ನು ಒಮ್ಮೆ ತಲುಪಿದ ನಂತರ ಅಸುನೀಗಿದರು. ಏನೇ ಆಗಲಿ, ಅವರು ಭಾರತದಿಂದ ಈ ಮಹಾನ್ ಗುರುವಾದ ಅತಿಶಾ ಅವರನ್ನು ಪುನಃ ಟಿಬೆಟ್‌ಗೆ ಆಹ್ವಾನಿಸುವಲ್ಲಿ ಯಶಸ್ವಿಯಾದರು. ಅವರು ಅಲ್ಲಿದ್ದ ಹಲವು ವರ್ಷಗಳ ಕಾಲ ಮುಖ್ಯವಾಗಿ ಕಲಿಸಿದ್ದು ಆಶ್ರಯ ಮತ್ತು ಕರ್ಮದ ಬಗ್ಗೆ. ಅವರನ್ನು "ಆಶ್ರಯ ಮತ್ತು ಕರ್ಮ ಲಾಮಾ" ಎಂದೇ ಕರೆಯಲಾಗುತ್ತಿತ್ತು. ಅದು ಟಿಬೆಟಿಯನ್ನರು ಅವರಿಗೆ ಇಟ್ಟ ಹೆಸರಾಗಿತ್ತು. 

ಅತಿಶಾ ಅವರ ಉದಾಹರಣೆ ಇಂದಿನ ದಿನಗಳಲ್ಲಿ ಸಾಕಷ್ಟು ಸಮಾಕಾಲೀನವಾಗಿದೆ. ಇಂದಿನ ದಿನಗಳಲ್ಲೂ ಸಹ ಬೌದ್ಧ ಧರ್ಮದ ಬಗ್ಗೆ ಮತ್ತು ದೈನಂದಿನ ಮಟ್ಟದಲ್ಲಿ ಅದರ ಅಭ್ಯಾಸದ ಅರ್ಥವೇನು ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಮತ್ತೊಮ್ಮೆ, ತಂತ್ರ ಮತ್ತು ಇತರ ಸುಧಾರಿತ ಬೋಧನೆಗಳ ಬಗ್ಗೆ ಸಾಕಷ್ಟು ತಪ್ಪು ತಿಳುವಳಿಕೆಯಿದೆ. ಮೂಲಭೂತ ಬೌದ್ಧ ಬೋಧನೆಗಳ ಬಗ್ಗೆ ಯಾವುದೇ ಅಡಿಪಾಯವಿಲ್ಲದೆ, ಜನರು ಈ ಆಚರಣೆಗಳನ್ನು ಅಭ್ಯಸಿಸಲು ಮುನ್ನುಗ್ಗುತ್ತಿದ್ದಾರೆ. ಒಂದು ರೀತಿಯ ಮಾಂತ್ರಿಕ ಆಚರಣೆಯನ್ನು ಮಾಡುವುದೇ ಬೌದ್ಧಧರ್ಮದ ಆಚರಣೆಯೆಂದು ಅವರು ಊಹಿಸುತ್ತಾರೆ. ಆಶ್ರಯದ ಪ್ರಸ್ತುತತೆ ಮತ್ತು ಪ್ರಾಮುಖ್ಯತೆ ಮತ್ತು ನಮ್ಮ ದೈನಂದಿನ ಜೀವನದಲ್ಲಿ ಅದರಿಂದಾಗುವ ವ್ಯತ್ಯಾಸವನ್ನು ಕ್ಷುಲ್ಲಕಗೊಳಿಸುವ ಮೂಲಕ, ಅವರು ಮುಖ್ಯ ಅಂಶವನ್ನು ಕಳೆದುಕೊಳ್ಳುತ್ತಿದ್ದಾರೆ.

ಜೀವನದಲ್ಲಿ ನಮ್ಮ ಪರಿಸ್ಥಿತಿ ಏನೇ ಇರಲಿ, ಬೌದ್ಧ ಆಚರಣೆಯು ನಮ್ಮ ಮೇಲೆ ನಾವೇ ಕೆಲಸ ಮಾಡುವುದನ್ನು ಉದ್ದೇಶಿಸುತ್ತದೆ, ಉತ್ತಮ ವ್ಯಕ್ತಿಯಾಗಲು ನಮ್ಮನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ಏನೋ ಪ್ರತಿದಿನ ಅರ್ಧ ಘಂಟೆಯವರೆಗೆ ಅಥವಾ ನಾವು ತುಂಬಾ ದಣಿದಿರುವಾಗ, ವಾರಕ್ಕೊಮ್ಮೆ ಕೆಲಸದ ನಂತರ, ಸ್ವಲ್ಪ ಸಮಯದವರೆಗೆ ಮಾಡುವಂತಹ ಹವ್ಯಾಸ ಅಥವಾ ಕ್ರೀಡೆಯಾಗಿರುವುದಿಲ್ಲ. ಬದಲಿಗೆ, ಇದು ನಾವು ಸಾರ್ವಕಾಲಿಕವಾಗಿ ಮಾಡಲು ಪ್ರಯತ್ನಿಸುವ ಪ್ರಾಯೋಗಿಕ ಸಂಗತಿಯಾಗಿದೆ – ಇದು ನಮ್ಮ ಮೇಲೆ ನಾವೇ ಯಾವಾಗಲೂ ಕೆಲಸ ಮಾಡುವುದಾಗಿರುತ್ತದೆ. ಇದರರ್ಥ ನಮ್ಮ ನ್ಯೂನತೆಗಳು ಮತ್ತು ನಮ್ಮ ಉತ್ತಮ ಗುಣಗಳನ್ನು ಗುರುತಿಸುವುದಾಗಿರುತ್ತದೆ, ಮೊದಲಿನವುಗಳ ಬಲವನ್ನು ದುರ್ಬಲಗೊಳಿಸುವ ಮತ್ತು ಎರಡನೆಯವುಗಳನ್ನು ಬಲಪಡಿಸುವ ವಿಧಾನಗಳನ್ನು ಕಲಿಯುವುದಾಗಿರುತ್ತದೆ. ಅಂತಿಮವಾಗಿ ಎಲ್ಲಾ ನ್ಯೂನತೆಗಳನ್ನು ನಿವಾರಿಸಲು ಮತ್ತು ಎಲ್ಲಾ ಉತ್ತಮ ಗುಣಗಳನ್ನು ಪೂರ್ಣವಾಗಿ ಅರಿತುಕೊಳ್ಳುವುದೇ ನಮ್ಮ ಗುರಿಯಾಗಿರುತ್ತದೆ. ಇದು ಕೇವಲ ನಮ್ಮ ಸ್ವಂತ ಲಾಭಕ್ಕಾಗಿರುವುದಿಲ್ಲವಾದರೂ, ನಾವು ಜೀವನದಲ್ಲಿ ಸಂತೋಷವಾಗಿರಲು ಇದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿರುತ್ತದೆ. ಇದು ಇತರರಿಗೆ ಸಹಾಯ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವುದಕ್ಕಾಗಿ ಮತ್ತು ಆ ಮೂಲಕ ಇತರರಿಗಾಗಿ ಉಪಯುಕ್ತವಾಗುವುದನ್ನೂ ಒಳಗೊಂಡಿರುತ್ತದೆ. ಬೌದ್ಧರ ಆಚರಣೆ ಎಂದರೆ ಇದೇ. ಇವುಗಳನ್ನು ಬೌದ್ಧ ಧರ್ಮವಾಗಿ ವಿಶಿಷ್ಟವಾಗಿಸುವುದು, ಈ ಗುರಿಗಳನ್ನು ಸಾಧಿಸಲು ಸಾಧ್ಯವಾಗಿಸುವ ವಿಧಾನಗಳಾಗಿರುತ್ತವೆ ಮತ್ತು ಆಶ್ರಯ ಎಂದರೆ ನಾವು ಆ ವಿಧಾನಗಳತ್ತ ತಿರುಗಿ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿರುತ್ತದೆ. 

Top