ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮ ಎಂದರೇನು?

ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಬೌದ್ಧಧರ್ಮವು ಸಮಕಾಲೀನ ಚಳುವಳಿಯಾಗಿದೆ. ಇದು ಬೌದ್ಧ ಬೋಧನೆಗಳು ಮತ್ತು ಆಚರಣೆಗಳನ್ನು ಸಾಮಾಜಿಕ, ರಾಜಕೀಯ, ಪರಿಸರ ಮತ್ತು ಆರ್ಥಿಕ ವಿಷಯಗಳಿಗೆ ಅನ್ವಯಿಸುತ್ತದೆ. ಸಹಾನುಭೂತಿ, ಜ್ಞಾನ ಮತ್ತು ಅಹಿಂಸೆ ಅಥವಾ ಅಹಿಂಸೆಯ ಮೌಲ್ಯಗಳಲ್ಲಿ ಬೇರೂರಿರುವ ಈ ಚಳುವಳಿ, ದುಃಖಗಳ ನಿವಾರಣೆಯನ್ನು ವೈಯಕ್ತಿಕ ಮಟ್ಟದಲ್ಲಿ ಮಾತ್ರವಲ್ಲದೆ ಸಮಾಜಗಳು ಮತ್ತು ಜಾಗತಿಕ ವ್ಯವಸ್ಥೆಗಳ ಮಟ್ಟದಲ್ಲಿಯೂ ಸಾಧಿಸಲು ಪ್ರಯತ್ನಿಸುತ್ತದೆ

ಸಾಂಪ್ರದಾಯಿಕವಾಗಿ ಬೌದ್ಧಧರ್ಮವನ್ನು, ಹೆಚ್ಚಾಗಿ ಸಮಾಜದಿಂದ ದೂರವಿರುವ, ಅತಿಯಾದ ಅತೀಂದ್ರಿಯವಾಗಿದೆ ಎಂದು ತಪ್ಪಾಗಿ ಚಿತ್ರಿಸಲಾಗಿದೆ. ಆದರೆ, ಬುದ್ಧನ ಜೀವನದ ಕಥೆಗಳಿಂದ ನಮಗೆ ತಿಳಿದುಬರುವುದೇನೆಂದರೆ, ಅವನ ಸುತ್ತಲಿನ ಜನರು ಮತ್ತು ಪ್ರಾಣಿಗಳತ್ತ ಅವನಿಗಿದ್ದ ಆಳವಾದ ಸಹಾನುಭೂತಿ, ಎಲ್ಲರ ದುಃಖಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ಹುಡುಕಲು ಅವನನ್ನು ಪ್ರೇರೇಪಿಸಿತು. ಈ ಕಾರಣದಿಂದ, ಬೌದ್ಧ ಆಚರಣೆಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ವಿಧಾನವು ವೈಯಕ್ತಿಕ ರೂಪಾಂತರ ಮತ್ತು ಸಾಮಾಜಿಕ ಬದಲಾವಣೆಯ ನಡುವಿನ ಪರಸ್ಪರ ಸಂಬಂಧವನ್ನು ಎತ್ತಿ ತೋರಿಸುತ್ತದೆ. ನಿಜವಾದ ಯೋಗಕ್ಷೇಮ ಮತ್ತು ಜ್ಞಾನೋದಯವನ್ನು ಪ್ರಪಂಚದ ಸವಾಲುಗಳಿಂದ ಸಂಪೂರ್ಣವಾಗಿ ದೂರವಿದ್ದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಅದು ಸೂಚಿಸುತ್ತದೆ.

ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮದ ಮೂಲಗಳು

"ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮ" ಎಂಬ ಪದವನ್ನು 20ನೇ ಶತಮಾನದಲ್ಲಿ, ವಿಯೆಟ್ನಾಂನ ಝೆನ್ ಮಾಸ್ಟರ್ ಥಿಚ್ ನಾಟ್ ಹನ್ಹ್ ಅವರು ವಿಶೇಷವಾಗಿ ಜನಪ್ರಿಯಗೊಳಿಸಿದರು. ಅವರು ಯುದ್ಧ, ಪರಿಸರ ಹಾನಿ  ಮತ್ತು ಸಾಮಾಜಿಕ ಅನ್ಯಾಯದಂತಹ ತೀವ್ರ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಬೌದ್ಧ ಬೋಧನೆಗಳನ್ನು ಬಳಸಬೇಕೆಂದು ಪ್ರತಿಪಾದಿಸಿದರು. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ, ಥಿಚ್ ನಾಟ್ ಹನ್ಹ್ ಅವರು ಬಲಿಪಶುಗಳಿಗೆ ಸಹಾಯ ಮಾಡಲು ಸನ್ಯಾಸ ಜೀವನದ ಪ್ರತ್ಯೇಕತೆಯನ್ನು ಬಿಟ್ಟು ನೇರವಾಗಿ ಕಾರ್ಯಪ್ರವೃತ್ತರಾದರು. ಆದರೆ ಈ ಚಳುವಳಿಯ ಬೇರುಗಳನ್ನು ಬುದ್ಧನ ಮೂಲ ಬೋಧನೆಗಳಲ್ಲಿಯೇ ಕಾಣಬಹುದು.

ಬುದ್ಧನ ಬೋಧನೆಗಳಾದ ನಾಲ್ಕು ಆರ್ಯ ಸತ್ಯಗಳು ಮತ್ತು ಅಷ್ಟಾಂಗ ಮಾರ್ಗ, ಸಹಾನುಭೂತಿ ಮತ್ತು ಪರಸ್ಪರ ಸಂಬಂಧದ ಮಹತ್ವವನ್ನು ಎತ್ತಿ ತೋರಿಸುತ್ತವೆ. ಈ ಬೋಧನೆಗಳಲ್ಲಿ ಅಡಕವಾಗಿರುವ ತತ್ತ್ವವೆಂದರೆ, ದುಃಖವನ್ನು ನಿವಾರಿಸುವುದು ಕೇವಲ ವೈಯಕ್ತಿಕ ಜೀವಿಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿರದೆ, ಎಲ್ಲಾ ಜೀವಿಗಳು ಹಾಗು ದುಃಖವನ್ನು ಮುಂದುವರಿಸುವ ಎಲ್ಲಾ ಪರಿಸ್ಥಿತಿಗಳಿಗೂ ವಿಸ್ತರಿಸಬೇಕು.

ಇತಿಹಾಸದುದ್ದಕ್ಕೂ, ಬೌದ್ಧ ಸಮುದಾಯಗಳು ದಾನ, ಅಹಿಂಸಾತ್ಮಕ ಪ್ರತಿರೋಧ ಮತ್ತು ಸಾಮಾಜಿಕ ನ್ಯಾಯದ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಆದರೆ ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮವು ಈ ಸಂಪ್ರದಾಯದ ಅಂಶವನ್ನು ಹೆಚ್ಚು ಸ್ಪಷ್ಟವಾಗಿ ಹಾಗೂ ಔಪಚಾರಿಕವಾಗಿ ರೂಪಿಸುತ್ತದೆ. ಸಾಮೂಹಿಕ ದುಃಖಕ್ಕೆ  ಕಾರಣವಾಗುವ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸಂಬಂಧಿತ ವ್ಯವಸ್ಥೆಗಳೊಂದಿಗೆ ಬೌದ್ಧರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಈ ಚಳುವಳಿ ಆಹ್ವಾನಿಸುತ್ತದೆ.

ಸುಲಕ್ ಶಿವರಕ್ಷರ ಪ್ರಭಾವ

ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮ ಚಳವಳಿಯ ಪ್ರಮುಖ ಮತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಥಾಯ್ ವಿದ್ವಾಂಸ, ಕಾರ್ಯಕರ್ತ ಹಾಗೂ ಸಾಮಾಜಿಕ ವಿಮರ್ಶಕರಾದ ಸುಲಕ್ ಶಿವರಕ್ಷ. ಅವರೊಂದಿಗಿನ ನಮ್ಮ ಸಂದರ್ಶನವನ್ನು ನೀವು ಇಲ್ಲಿ ಓದಬಹುದು. ಶಿವರಕ್ಷ ಅವರು ಬೌದ್ಧ ತತ್ವಗಳನ್ನು ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಪರಿಸರ ಸುಸ್ಥಿರತೆ ಮತ್ತು ರಾಜಕೀಯ ಸುಧಾರಣೆಯೊಂದಿಗೆ ಸಂಯೋಜಿಸಬೇಕೆಂದು ಬಲವಾಗಿ ಪ್ರತಿಪಾದಿಸುತ್ತಾರೆ. ಈ ಕಾರಣಕ್ಕಾಗಿ ಅವರಿಗೆ ಹಲವಾರು ಬಾರಿ ಬಂಧನ ಹಾಗೂ ತಾತ್ಕಾಲಿಕ ಗಡಿಪಾರುವಿನ ಅನುಭವವಾಗಿದೆ. ಅವರು ಸರ್ವಾಧಿಕಾರತ್ವವನ್ನು ಪ್ರಶ್ನಿಸುವ, ಮಾನವ ಹಕ್ಕುಗಳನ್ನು ಉತ್ತೇಜಿಸುವ ಮತ್ತು ಥೈಲ್ಯಾಂಡ್ ಮತ್ತು ಜಾಗತಿಕ ಮಟ್ಟದಲ್ಲಿ ರಚನಾತ್ಮಕ ಅಸಮಾನತೆಗಳನ್ನು ಎದುರಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಸುಲಕ್ ಶಿವರಕ್ಷ ಅವರ ಕ್ರಿಯಾಶೀಲತೆಯ ಬೇರು, ಸಮಾಜದಲ್ಲಿನ ದುಃಖದ ಮೂಲ ಕಾರಣಗಳನ್ನು ಬೌದ್ಧ ಬೋಧನೆಗಳ ಮೂಲಕ ಪರಿಹರಿಸಬಹುದು ಮತ್ತು ಪರಿಹರಿಸಲೇಬೇಕು ಎಂಬ ನಂಬಿಕೆಯಲ್ಲಿ ಇದೆ. ಅವರು ನೈತಿಕ ಆಡಳಿತ, ಪರಿಸರ ಸಂರಕ್ಷಣೆ ಮತ್ತು ಹೆಚ್ಚುವರಿ ಆರ್ಥಿಕ ನ್ಯಾಯಕ್ಕಾಗಿ ನಿರಂತರವಾಗಿ ಕರೆ ನೀಡಿದ್ದಾರೆ. 1989ರಲ್ಲಿ, ಅವರು ಅಂತರರಾಷ್ಟ್ರೀಯ ತೊಡಗಿಸಿಕೊಂಡಿರುವ ಬೌದ್ಧರ ಜಾಲವನ್ನು(International Network of Engaged Buddhists ) ಸ್ಥಾಪಿಸಿದರು. ಇದು ಬೌದ್ಧಧರ್ಮವನ್ನು ಕೇವಲ ವೈಯಕ್ತಿಕ ವಿಮೋಚನೆಯ ಮಾರ್ಗವಷ್ಟೇ ಅಲ್ಲದೆ, ಸಾಮಾಜಿಕ ಪರಿವರ್ತನೆಯ ಶಕ್ತಿಯಾಗಿ ಪರಿಗಣಿಸುವಂತೆ, ಪ್ರಪಂಚದಾದ್ಯಂತ ಲಕ್ಷಾಂತರ ಅಭ್ಯಾಸಿಗರನ್ನು ಪ್ರೇರೇಪಿಸಿತು.

ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮದ ಮೂಲ ತತ್ವಗಳು

ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮವು ಬುದ್ಧನ ಕಾಲಾತೀತ ಬೋಧನೆಗಳನ್ನು ಆಧುನಿಕ ಸವಾಲುಗಳಿಗೆ ಅನ್ವಯಿಸಲು ಪ್ರಯತ್ನಿಸುತ್ತದೆ. ಈ ಚಳುವಳಿಯು ಹಲವಾರು ಪ್ರಮುಖ ತತ್ವಗಳ ಮೇಲೆ ಆಧಾರಿತವಾಗಿದೆ:

ಪರಸ್ಪರ ಸಂಪರ್ಕ

ಬುದ್ಧನು ಎಲ್ಲಾ ಜೀವಿಗಳು ಮತ್ತು ವಿದ್ಯಮಾನಗಳು ಪರಸ್ಪರ ಅವಲಂಬಿತವಾಗಿವೆ ಎಂದು ಬೋಧಿಸಿದ್ದಾನೆ. ಪ್ರತಿತ್ಯಸಮುತ್ಪಾದ ಅಥವಾ ಅವಲಂಬಿತ ಮೂಲ ಎಂದು ಕರೆಯಲ್ಪಡುವ ಈ ತತ್ವವು, ಯಾವುದೇ ವ್ಯಕ್ತಿಯು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲವೆಂಬುದನ್ನು ಸೂಚಿಸುತ್ತದೆ. ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮವು,  ದುಃಖವು ಹೆಚ್ಚಾಗಿ ವಿಶಾಲವಾದ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ವ್ಯವಸ್ಥೆಗಳ ಪರಿಣಾಮವೆಂದು ಗುರುತಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಆದ್ದರಿಂದ, ದುಃಖದ ಕಾರಣಗಳನ್ನು ಪರಿಹರಿಸಲು ವೈಯಕ್ತಿಕ ಮಟ್ಟದಲ್ಲಿಯೂ, ವ್ಯವಸ್ಥಿತ ಮಟ್ಟದಲ್ಲಿಯೂ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

ಉದಾಹರಣೆಗೆ, ಪರಿಸರ ಹಾನಿ, ಬಡತನ ಮತ್ತು ಹಿಂಸೆ – ಇವು ಕೇವಲ ಪ್ರತ್ಯೇಕ ಸಮಸ್ಯೆಗಳಲ್ಲ; ಇವು ಜಾಗತಿಕ ನೀತಿಗಳು, ನಮ್ಮ ವೈಯಕ್ತಿಕ ಗ್ರಾಹಕ ನಡವಳಿಕೆಗಳು ಮತ್ತು ಸಾಮಾಜಿಕ ಅಸಮಾನತೆಗಳೊಂದಿಗೆ ಆಳವಾದ ಸಂಬಂಧ ಹೊಂದಿವೆ. ಈ ಪರಸ್ಪರ ಸಂಬಂಧವನ್ನು ಗುರುತಿಸುವ ಮೂಲಕ, ನಾವು ಈ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸುವ ಗುರಿಯನ್ನು ಹೊಂದಬಹುದು.

ಕಾರ್ಯರೂಪದಲ್ಲಿರುವ ಸಹಾನುಭೂತಿ

ಸಹಾನುಭೂತಿ ಬೌದ್ಧ ಆಚರಣೆಯ ಒಂದು ಕೇಂದ್ರ ಅಂಶವಾಗಿದೆ, ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮವು ಸಹಾನುಭೂತಿಯನ್ನು ಕ್ರಿಯಾಶೀಲವಾಗಿ ಅನುಷ್ಠಾನಗೊಳಿಸುವುದನ್ನು ಒತ್ತಿ ಹೇಳುತ್ತದೆ. ಸಹಾನುಭೂತಿ ಕೇವಲ ಕರುಣೆ ಅಥವಾ ದಯೆಯ ಭಾವನೆಗಳಿಗೆ ಸೀಮಿತವಾಗಿಲ್ಲ - ಇದು ಇತರರ ದುಃಖವನ್ನು ನಿವಾರಿಸಲು ಸಕ್ರಿಯವಾಗಿ ಕೆಲಸ ಮಾಡುವುದನ್ನೂ ಒಳಗೊಂಡಿರುತ್ತದೆ. ಪ್ರಾಯೋಗಿಕವಾಗಿ, ಇದು ಸಾಮಾಜಿಕ ನ್ಯಾಯಕ್ಕಾಗಿ ತೊಡಗಿಸಿಕೊಳ್ಳುವುದು, ಹಿಂದುಳಿದ ಸಮುದಾಯಗಳನ್ನು ಬೆಂಬಲಿಸುವುದು, ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಎದುರಿಸುವುದು, ಅಥವಾ ಮಾನವ ಹಕ್ಕುಗಳನ್ನು ಸಮರ್ಥಿಸುವುದಾಗಿ ರೂಪುಗೊಳ್ಳಬಹುದು. ಕಾರ್ಯರೂಪದ ಸಹಾನುಭೂತಿಯ ಮೂಲಕ, ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಾಮಾಜಿಕ ದುಃಖಗಳ ನಿವಾರಣೆ ಪರಸ್ಪರವಾಗಿ ವಿರುದ್ಧವಾಗಿಲ್ಲ ಎಂದು ನಾವು ಕಂಡುಕೊಳ್ಳುತ್ತೇವೆ. ವಾಸ್ತವದಲ್ಲಿ, ಅವು ಒಂದನ್ನೊಂದು ಬಲಪಡಿಸುವ ಮಾರ್ಗಗಳಾಗಿವೆ.

ಅಹಿಂಸೆ

ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಬೌದ್ಧಧರ್ಮದ ಮತ್ತೊಂದು ಮೂಲಭೂತ ತತ್ವ ಅಹಿಂಸೆ. ಇದು ಇತರ ಜೀವಿಗಳಿಗೆ ಹಾನಿ ಮಾಡಬಾರದು ಅಥವಾ ಕೊಲ್ಲಬಾರದು ಎಂಬ ಐದು ಸಾಮಾನ್ಯ ನಿಯಮಗಳಲ್ಲಿ ಮೊದಲನೆಯದನ್ನು ಆಧರಿಸಿದೆ. ಹಿಂಸೆ ದುಃಖವನ್ನು ಮುಂದುವರಿಸುತ್ತದೆ ಮತ್ತು ದ್ವೇಷ ಹಾಗೂ ವಿಭಜನೆಯ ಚಕ್ರಗಳನ್ನು ಬಲಪಡಿಸುತ್ತದೆ. ಆದ್ದರಿಂದ, ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿ ಮತ್ತು ಗೌರವದಿಂದ ವರ್ತಿಸುವುದು, ಹಾಗೂ ದೈಹಿಕ, ಮೌಖಿಕ ಅಥವಾ ವ್ಯವಸ್ಥಿತ, ಎಲ್ಲಾ ರೀತಿಯ ಹಾನಿಯನ್ನು ತಿರಸ್ಕರಿಸುವುದು ಅಗತ್ಯ. ಇದರಲ್ಲಿ ಯುದ್ಧ, ದಬ್ಬಾಳಿಕೆ ಮತ್ತು ಎಲ್ಲಾ ರೀತಿಯ ಅನ್ಯಾಯಕ್ಕೆ ವಿರೋಧ ವ್ಯಕ್ತಪಡಿಸುವುದೂ ಸೇರಿರುತ್ತದೆ. ಅದರ ಪರಿಣಾಮವಾಗಿ, ತೊಡಗಿಸಿಕೊಂಡಿರುವ ಬೌದ್ಧರು ಶಾಂತಿಯುತ ಕ್ರಿಯಾಶೀಲತೆ, ಮಧ್ಯಸ್ಥಿಕೆ ಮತ್ತು ಸಮನ್ವಯ ಪ್ರಯತ್ನಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ.

ಸಾವಧಾನತೆ ಮತ್ತು ಅರಿವು

ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಬೌದ್ಧಧರ್ಮವು, ಜಗತ್ತಿನ ದುಃಖದ ವಾಸ್ತವವನ್ನು ಅರಿಯಲು ಸಾವಧಾನತೆಯನ್ನು (ಜಾಗೃತ ಮನಸ್ಸು) ಒಂದು ಸಾಧನವಾಗಿ ಬಳಸಲು ಪ್ರೋತ್ಸಾಹಿಸುತ್ತದೆ. ಸಾವಧಾನತೆ ನಮಗೆ ಪ್ರಸ್ತುತ ಕ್ಷಣದಲ್ಲಿ ಇರಲು, ನಮ್ಮ ಸ್ವಂತ ಕ್ರಿಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಇತರರ ಅಗತ್ಯಗಳಿಗೆ ಸ್ಪಂದನಾಶೀಲವಾಗಿರಲು ಸಹಾಯ ಮಾಡುತ್ತದೆ. ಇದೇ ಸಂದರ್ಭದಲ್ಲಿ, ನಮ್ಮ ಜೀವನಶೈಲಿಯ ಆಯ್ಕೆಗಳು, ಬಳಕೆಯ ಪದ್ಧತಿಗಳು ಮತ್ತು ಸಾಮಾಜಿಕ ವ್ಯವಸ್ಥೆಗಳಲ್ಲಿ ನಮ್ಮ ಪಾಲ್ಗೊಳ್ಳುವಿಕೆ ದುಃಖ ಅಥವಾ ಯೋಗಕ್ಷೇಮಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಪ್ರತಿಬಿಂಬಿಸಲು ಸಹ ಇದು ಸಹಕಾರಿಯಾಗಿರುತ್ತದೆ. ಸಾವಧಾನತೆಯ ಅಭ್ಯಾಸದ ಮೂಲಕ, ನಾವು ಇತರರೊಂದಿಗೆ ಹಾಗೂ ಪರಿಸರದೊಂದಿಗೆ ಇರುವ ನಮ್ಮ ಸಂಬಂಧಗಳ ಬಗ್ಗೆ ಹೆಚ್ಚು ಜಾಗೃತರಾಗಬಹುದು. ಇದರ ಫಲವಾಗಿ, ಜವಾಬ್ದಾರಿಯುತ ಮತ್ತು ಸಹಾನುಭೂತಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಸಮಾನತೆ

ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಬೌದ್ಧಧರ್ಮವು, ಸಾಮಾಜಿಕ ರಚನೆಗಳಲ್ಲಿ ನ್ಯಾಯ ಮತ್ತು ಸಮಾನತೆಯ ಮಹತ್ವವನ್ನು ಒತ್ತಿ ತೋರಿಸುತ್ತದೆ. ಇದು ಎಲ್ಲರೂ ಸಮಾನವಾಗಿ ಸಂತೋಷವನ್ನು ಬಯಸುತ್ತಾರೆ ಮತ್ತು ದುಃಖವನ್ನು ತಪ್ಪಿಸಲು ಇಚ್ಛಿಸುತ್ತಾರೆ ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಈ ದೃಷ್ಟಿಕೋನದಿಂದ, ನಾವು ಆರ್ಥಿಕ ನ್ಯಾಯ, ಲಿಂಗ ಸಮಾನತೆ, ಜನಾಂಗೀಯ ನ್ಯಾಯ ಮತ್ತು ಎಲ್ಲ ಜೀವಿಗಳ – ಮಾನವರಾಗಲಿ, ಪ್ರಾಣಿಯಾಗಲಿ - ರಕ್ಷಣೆಯತ್ತ ಕೆಲಸ ಮಾಡಬಹುದು. ಅನ್ಯಾಯವೇ ದುಃಖದ ಮೂಲವೆಂದು ಗುರುತಿಸುವ ಮೂಲಕ, ನಾವು ಅಸಮಾನತೆಯನ್ನು ಮುಂದುವರಿಸುವ ವ್ಯವಸ್ಥೆಗಳನ್ನು ಕಿತ್ತೊಗೆಯಲು ಪ್ರಯತ್ನಿಸಬಹುದು ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ನ್ಯಾಯ ಹಾಗೂ ಸಹಾನುಭೂತಿಯನ್ನು ಬೆಳೆಸಬಹುದು.

ಸಾಮಾಜಿಕವಾಗಿ ತೊಡಗಿಸಿಕೊಂಡ ಬೌದ್ಧಧರ್ಮದ ಪ್ರಯೋಜನಗಳು

ಆಂತರಿಕ ಶಾಂತಿ

ಸಹಾನುಭೂತಿಯ ಉದ್ದೇಶಗಳು ಮತ್ತು ಕ್ರಿಯೆಗಳೊಂದಿಗೆ ಜಗತ್ತಿನೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದೆಂದರೆ ಹೇಗಿರಬಹುದು ಎಂದು ಊಹಿಸಿ. ಇದು ಸ್ವಾಭಾವಿಕವಾಗಿ ವೈಯಕ್ತಿಕ ತೃಪ್ತಿ ಮತ್ತು ಆಂತರಿಕ ಶಾಂತಿಯ ಭಾವನೆಗೆ ಕಾರಣವಾಗುತ್ತದೆ. ಇಲ್ಲಿ ನಾವು ಮಾಡುತ್ತಿರುವುದು ನಮಗೂ, ಇತರರಿಗೂ ಪ್ರಯೋಜನಕರವೆಂದು ನಮಗೆ ಗೊತ್ತಿರುತ್ತದೆ. ನಾವು ಸಕಾರಾತ್ಮಕ ಬದಲಾವಣೆ ತರುತ್ತಿದ್ದೇವೆ ಎಂಬ ಅರಿವು, ವಿಶೇಷವಾಗಿ ಸಂಕಟದಲ್ಲಿರುವವರಿಗಾಗಿ ಕೆಲಸ ಮಾಡುವಾಗ, ನಮಗೆ ಬಲವಾದ ಉದ್ದೇಶದ ಭಾವನೆಯನ್ನು ನೀಡುತ್ತದೆ. ವಿಜ್ಞಾನೀಯ ಅಧ್ಯಯನಗಳ ಪ್ರಕಾರ, ಈ ಉದ್ದೇಶದ ಭಾವನೆಯು ನಮ್ಮನ್ನು ಸಂತೋಷಪಡಿಸುತ್ತದೆ ಎಂಬುದು ಸಾಬೀತಾಗಿದೆ.

ಬಲವಾದ ಸಮುದಾಯಗಳು

ನಾವೆಲ್ಲರೂ ಬಹುತೇಕ ಸಂತೋಷದ, ಸಾಮರಸ್ಯದ ಸಮಾಜಗಳಲ್ಲಿ ಬದುಕಲು ಬಯಸುತ್ತೇವೆ. ಎಲ್ಲಾ ಜೀವಿಗಳ ಬಗ್ಗೆ — ಅವರು ಯಾರೇ ಆಗಿರಲಿ, ಸಮಾಜದಲ್ಲಿ ಅವರ ಸ್ಥಾನಮಾನ ಏನೇ ಇರಲಿ — ಸಹಾನುಭೂತಿಯಿಂದ ವರ್ತಿಸುವ ಮೂಲಕ ನಾವು ದೃಢವಾದ, ಸಂತೋಷದಾಯಕ ಮತ್ತು ಹೆಚ್ಚು ಒಳಗೊಳ್ಳುವ ಸಮುದಾಯಗಳನ್ನು ಸೃಷ್ಟಿಸುತ್ತೇವೆ. ಸಮಾಜದಾದ್ಯಂತ ದಯೆ ಮತ್ತು ಪರಸ್ಪರ ಗೌರವವನ್ನು ಬೆಳೆಸಿದಾಗ, ಪ್ರತಿಯೊಬ್ಬರೂ ಅದರ ಪ್ರಯೋಜನವನ್ನು ಪಡೆಯುತ್ತಾರೆ.

ಆಧ್ಯಾತ್ಮಿಕ ಬೆಳವಣಿಗೆ

ಸಾಮಾಜಿಕ ತೊಡಗಿಕೊಳ್ಳುವಿಕೆ ನಮ್ಮ ಆಧ್ಯಾತ್ಮಿಕ ಅಭ್ಯಾಸವನ್ನು ಆಳಗೊಳಿಸುತ್ತದೆ. ಧ್ಯಾನದ ಆಸನದಿಂದ ಬೆಳೆಸಿದ ಸಹಾನುಭೂತಿಯು, ವಿಶಾಲ ಪ್ರಪಂಚದಲ್ಲಿ ಅನ್ವಯಿಸುವಂತಾಗುತ್ತದೆ. ಇದರ ಮೂಲಕ ನಾವು ಬೆಳೆಸಬೇಕೆಂದು ಬಯಸುವ ಅನೇಕ ಗುಣಗಳನ್ನು ನೈಜವಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ. ಉದಾಹರಣೆಗೆ, ನಮ್ಮ ಸಮಯ ಮತ್ತು ಸಂಪನ್ಮೂಲಗಳಲ್ಲಿ ಉದಾರತೆ, ಕಷ್ಟಕರವೆಂದು ಭಾಸವಾಗುವವರೊಂದಿಗೆ ತಾಳ್ಮೆ, ಮತ್ತು ವಿಭಿನ್ನ ಅಭಿಪ್ರಾಯಗಳತ್ತ ಸಹಿಷ್ಣುತೆ. ಈ ರೀತಿಯ ಕಾರ್ಯಗಳು ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸಿ, ಜ್ಞಾನೋದಯದತ್ತ ಸಾಗುವ ದಾರಿಯನ್ನು ತೆರೆದಿಡುವ ಬಲವಾದ ಮಾರ್ಗಗಳಾಗುತ್ತವೆ.

ಮುಕ್ತಾಯ

ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಬೌದ್ಧಧರ್ಮವು ಆಧ್ಯಾತ್ಮಿಕ ಅಭ್ಯಾಸ ಮತ್ತು ಸಾಮಾಜಿಕ ಕ್ರಿಯೆಯನ್ನು ಏಕೀಕರಿಸುವ ಒಂದು ಮಾರ್ಗವಾಗಿದೆ. ನಿಜವಾದ ಸಹಾನುಭೂತಿಯು ಧ್ಯಾನದ ಆಸನವನ್ನು ಮೀರಿಸಿ, ದುಃಖದ ವ್ಯವಸ್ಥಿತ ಕಾರಣಗಳನ್ನು ಪರಿಹರಿಸಲು ಜಗತ್ತಿನತ್ತ ಸಾಗುತ್ತದೆ ಎಂಬುದನ್ನು ಇದು ಬೋಧಿಸುತ್ತದೆ. ವ್ಯಕ್ತಿಗಳಾಗಲಿ, ಸಮುದಾಯಗಳಾಗಲಿ—ನಾವು ಪರಸ್ಪರ ಸಂಬಂಧ ಹೊಂದಿದ್ದೇವೆ. ಪ್ರತಿಯೊಬ್ಬರ ಯೋಗಕ್ಷೇಮವು ಎಲ್ಲರ ಯೋಗಕ್ಷೇಮಕ್ಕೆ ನಿಕಟವಾಗಿ ಜೋಡಿಕೊಂಡಿದೆ. ಜ್ಞಾನಪೂರ್ಣ ಕ್ರಿಯೆ, ಉದಾರತೆ, ಅಹಿಂಸೆ ಮತ್ತು ನ್ಯಾಯದ ಬದ್ಧತೆಯ ಮೂಲಕ, ನಾವು ಎಲ್ಲಾ ಜೀವಿಗಳಿಗಾಗಿ ಹೆಚ್ಚು ಸಹಾನುಭೂತಿಯುಳ್ಳ, ನ್ಯಾಯಸಮ್ಮತ ಮತ್ತು ಶಾಂತಿಯುತ ಜಗತ್ತನ್ನು ರೂಪಿಸುವ ದಿಸೆಯಲ್ಲಿ ಶ್ರಮಿಸಬಹುದು.

Top