What are four noble truths

ಚತುರಾರ್ಯ ಸತ್ಯಗಳು, ನಮ್ಮ ಸಮಸ್ಯೆಗಳನ್ನು ಜಯಿಸಲು ಒಂದು ಮಾರ್ಗವನ್ನು ರೂಪಿಸುವ ಮೂಲಭೂತ ಸತ್ಯಗಳಾಗಿವೆ. ಇದು ಬುದ್ಧನ ಪ್ರಥಮ ಬೋಧನೆಯಾಗಿದ್ದು, ಇತರ ಎಲ್ಲಾ ಬೌದ್ಧ ಬೋಧನೆಗಳಿಗೆ ಒಂದು ಚೌಕಟ್ಟನ್ನು ಒದಗಿಸಿ ಕೊಡುತ್ತದೆ. 

ಮೊದಲ ಆರ್ಯ ಸತ್ಯ: ನಿಜವಾದ ದುಃಖ 

ಮೊದಲ ಸತ್ಯವೆಂದರೆ, ಸಾಮಾನ್ಯವಾಗಿ, ಜೀವನವು ಅತೃಪ್ತಿಕರವಾಗಿರುತ್ತದೆ. ಹುಟ್ಟಿನಿಂದ ಸಾವಿನವರೆಗೆ, ಸಾಕಷ್ಟು ಸಂತೋಷದಾಯಕ ಕ್ಷಣಗಳಿದ್ದರೂ, ಅವು ಎಂದಿಗೂ ದೀರ್ಘಕಾಲ ಉಳಿಯುವುದಿಲ್ಲ, ಜೊತೆಗೆ ಸಾಕಷ್ಟು ಅಹಿತಕರ ಕ್ಷಣಗಳೂ ಇರುತ್ತವೆ: 

  • ಅತೃಪ್ತಿ - ಅನಾರೋಗ್ಯ, ನಿರಾಶೆ, ಒಂಟಿತನ, ಆತಂಕ ಮತ್ತು ಅತೃಪ್ತಿಯನ್ನು ಗುರುತಿಸಿ, ಅರ್ಥಮಾಡಿಕೊಳ್ಳುವುದು ಸುಲಭ. ಈ ಭಾವನೆಗಳು ಹೆಚ್ಚಾಗಿ ನಮ್ಮ ಸುತ್ತಮುತ್ತಲಿನಿಂದ ಉದ್ಭವವಾಗುವುದಿಲ್ಲ - ನಾವು ನಮ್ಮ ನೆಚ್ಚಿನ ಗೆಳೆಯರ ಜೊತೆಗೆ ರುಚಿಕರ ತಿನಿಸನ್ನು ಸೇವಿಸುತ್ತಿದ್ದರೂ ನಾವು ಅತೃಪ್ತರಾಗಿರಬಹುದು.  
  • ಅಲ್ಪಾವಧಿಯ ಸಂತೋಷ - ನಾವು ಏನನ್ನೇ ಆನಂದಿಸುತ್ತಿದ್ದರೂ, ಅದು ಶಾಶ್ವತವಾಗಿರುವುದಿಲ್ಲ ಅಥವಾ ನಮ್ಮನ್ನು ಸದಾ ತೃಪ್ತಿಪಡಿಸುವುದಿಲ್ಲ, ಜೊತೆಗೆ ಅದು ಶೀಘ್ರದಲ್ಲೇ ಅತೃಪ್ತಿಯಾಗಿ ಬದಲಾಗುತ್ತದೆ. ನಾವು ಶೀತಲ ವಾತಾವರಣದಲ್ಲಿರುವಾಗ, ಬೆಚ್ಚಗಿನ ಕೋಣೆಗೆ ಹೋಗುತ್ತೇವೆ, ಆದರೆ ಅಲ್ಲಿ ಶಾಖವು ಅಂತಿಮವಾಗಿ ಅಸಹನೀಯವಾಗತ್ತದೆ, ಆಗ ಪುನಃ ತಣ್ಣನೆಯ ಗಾಳಿಯನ್ನು ಬಯಸುತ್ತೇವೆ. ಈ ಆನಂದವು ಶಾಶ್ವತವಾಗಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ದುರದೃಷ್ಟವಶಾತ್ ಹಾಗೆ ಎಂದಿಗೂ ಆಗುವುದಿಲ್ಲ.
  • ಪುನರಾವರ್ತಿತ ಸಮಸ್ಯೆಗಳು – ಇದಕ್ಕಿಂತ ಹೆಚ್ಚು ದುರದೃಷ್ಟಕರವಾದ ವಿಷಯವೆಂದರೆ, ನಾವು ಜೀವನದ ಏರಿಳಿತಗಳನ್ನು ಎದುರಿಸಲು ಬಳಸುವ ವಿಧಾನಗಳು, ಬದಲಾಗಿ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಉದಾಹರಣೆಗೆ, ನಾವು ಒಂದು ಕೆಟ್ಟ ಸಂಬಂಧದಲ್ಲಿದ್ದೇವೆ, ನಾವು ವರ್ತಿಸುವ ರೀತಿಯು ಅದನ್ನು ಇನ್ನಷ್ಟು ಹದಗೆಡಿಸಿರುವುದು. ನಾವು ಅವರಿಂದ ಬೇರೆಯಾಗುತ್ತೇವೆ, ಆದರೆ ನಮ್ಮ ಕೆಟ್ಟ ಅಭ್ಯಾಸಗಳನ್ನು ಬಲಪಡಿಸಿದ್ದರಿಂದ, ನಮ್ಮ ಮುಂದಿನ ಸಂಬಂಧದಲ್ಲಿಯೂ ಸಹ ನಾವು ಅದೇ ವರ್ತನೆಯನ್ನು ಪುನರಾವರ್ತಿಸುತ್ತೇವೆ. ಆ ಸಂಬಂಧವು ಕೂಡ ಹದಗೆಡುತ್ತದೆ.

ಎರಡನೇ ಆರ್ಯ ಸತ್ಯ: ದುಃಖದ ನಿಜವಾದ ಕಾರಣ 

ನಮ್ಮ ಅತೃಪ್ತಿ ಮತ್ತು ಅಲ್ಪಾವಧಿಯ ಸಂತೋಷವು ಹಟಾತ್ತಾಗಿ ಉದ್ಭವಿಸುವುದಿಲ್ಲ, ಅವುಗಳಿಗೆ ವ್ಯಾಪಕವಾದ ಕಾರಣಗಳು ಮತ್ತು ಪರಿಸ್ಥಿತಿಗಳಿವೆ. ನಾವು ವಾಸಿಸುವ ಸಮಾಜದಂತಹ ಬಾಹ್ಯ ಅಂಶಗಳು ನಮ್ಮ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಬಹುದು; ಆದರೆ ನಿಜವಾದ ಕಾರಣವನ್ನು ಹುಡುಕಲು, ನಮ್ಮ ಮನಸ್ಸನ್ನು ಪರಿಶೀಲಿಸುವಂತೆ ಬುದ್ಧ ಸೂಚಿಸಿದರು. ನಮ್ಮಲ್ಲಿಯೇ ಇರುವ ಗೊಂದಲದ ಭಾವನೆಗಳು - ದ್ವೇಷ, ಅಸೂಯೆ, ದುರಾಶೆ ಇತ್ಯಾದಿ - ನಮ್ಮನ್ನು ಪ್ರಚೋದಿತವಾಗಿ ಯೋಚಿಸಲು, ಮಾತನಾಡಲು ಮತ್ತು ಅಂತಿಮವಾಗಿ ಸ್ವಯಂ-ವಿನಾಶಕಾರಿ ರೀತಿಯಲ್ಲಿ ವರ್ತಿಸಲು ಪ್ರೇರೇಪಿಸುತ್ತವೆ. 

ಬುದ್ಧ ಇನ್ನೂ ಆಳವಾಗಿ ಪರಿಶೀಲಿಸಿ, ಈ ಭಾವನಾತ್ಮಕ ಸ್ಥಿತಿಗಳಿಗೆ ಆಧಾರವಾಗಿರುವ ನಿಜವಾದ ಕಾರಣವನ್ನು ಬಹಿರಂಗಪಡಿಸಿದರು: ನಾವು ವಾಸ್ತವವನ್ನು ಅರ್ಥಮಾಡಿಕೊಳ್ಳುವ ವಿಧಾನ. ಇದು ನಮ್ಮ ನಡವಳಿಕೆಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆಗಿನ ಗೊಂದಲ ಮತ್ತು ಅಜ್ಞಾನ, ಜೊತೆಗೆ ನಮ್ಮ, ಇತರರ ಮತ್ತು ಪ್ರಪಂಚದ ಅಸ್ತಿತ್ವದ ಬಗ್ಗೆಗಿರುವ ಬಲವಾದ ತಪ್ಪುಗ್ರಹಿಕೆಗಳನ್ನು ಒಳಗೊಂಡಿರುತ್ತದೆ. ಎಲ್ಲದರ ಅಂತರ್ಸಂಪರ್ಕವನ್ನು ನೋಡುವ ಬದಲು, ಪ್ರತಿಯೊಂದೂ ಬಾಹ್ಯ ಅಂಶಗಳಿಂದ ಸ್ವತಂತ್ರವಾಗಿ ಸ್ವತಃ ಅಸ್ತಿತ್ವದಲ್ಲಿವೆ ಎಂದು ನಾವು ಭಾವಿಸುತ್ತೇವೆ. 

ಮೂರನೇ ಆರ್ಯ ಸತ್ಯ: ದುಃಖದ ನಿಜವಾದ ನಿಲುಗಡೆ 

ನಾವು ಇದನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬುದ್ಧ ಸೂಚಿಸಿದರು, ಏಕೆಂದರೆ ನಾವು ಸಮಸ್ಯೆಯ ಕಾರಣವನ್ನು ಕಿತ್ತುಹಾಕಿದರೆ ಅದರ ಫಲಿತಾಂಶವು ಉದ್ಭವಿಸುವುದಿಲ್ಲ. ನಾವು ವಾಸ್ತವದ ಬಗ್ಗೆಗಿನ ಗೊಂದಲವನ್ನು ತೊಡೆದುಹಾಕಿದರೆ, ಸಮಸ್ಯೆಗಳು ಮತ್ತೆ ಹಿಂತಿರುಗಲು ಸಾಧ್ಯವಾಗುವುದಿಲ್ಲ. ಅವರು ನಮ್ಮ ಒಂದೋ ಎರಡೋ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರಲಿಲ್ಲ - ನಾವು ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಅವರು ಹೇಳಿದರು. 

ನಾಲ್ಕನೇ ಆರ್ಯ ಸತ್ಯ: ಮನಸ್ಸಿನ ನಿಜವಾದ ಮಾರ್ಗ 

ನಮ್ಮ ನಿಷ್ಕಪಟತೆ ಮತ್ತು ಅಜ್ಞಾನವನ್ನು ತೊಡೆದುಹಾಕಲು, ಅವುಗಳ ನೇರವಾದ ಎದುರಾಳಿಯನ್ನು ನಾವು ಕಂಡುಹಿಡಿಯಬೇಕು: 

  • ತ್ವರಿತ ತೃಪ್ತಿಗಾಗಿ ದೂರದೃಷ್ಟಿಯಿಲ್ಲದೆ ಒದ್ದಾಡುವ ಬದಲು ದೀರ್ಘಾವಧಿಯ ಬಗ್ಗೆ ಯೋಚಿಸಿ ಕ್ರಮ ಕೈತೆಗೆದುಕೊಳ್ಳಿ
  • ಜೀವನದ ಒಂದು ಚಿಕ್ಕ ಭಾಗದ ಮೇಲೆ ಕೇಂದ್ರೀಕರಿಸುವ ಬದಲು ಪೂರ್ತಿ ಚಿತ್ರವನ್ನು ನೋಡಿ 
  • ಪ್ರಸ್ತುತವಾಗಿ ನಮಗೆ ಸುಲಭವಾದುದನ್ನು ಮಾಡುವ ಬದಲು, ನಮ್ಮ ಉಳಿದ ಜೀವನದ ಮೇಲೆ ಮತ್ತು ಮುಂದಿನ ಪೀಳಿಗೆಯ ಮೇಲೆ, ನಮ್ಮ ಕಾರ್ಯಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಗಣಿಸಿ

ಕೆಲವೊಮ್ಮೆ, ಜೀವನದಲ್ಲಿ ನಿರಾಶೆಗಳನ್ನು ಎದುರಿಸುವಾಗ, ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಯೋಚಿಸದೆ, ಮತ್ತೇರುವಂತೆ ಕುಡಿದು, ಹೊಟ್ಟೆಬಿರಿಯುವಂತೆ ಜಿಡ್ಡು ಪದಾರ್ಥಗಳನ್ನು ಸೇವಿಸಿ ವಿಚಲಿತಗೊಳ್ಳುವುದೇ ಏಕೈಕ ಮಾರ್ಗವೆಂದು ನಾವು ಭಾವಿಸುತ್ತೇವೆ. ನಾವು ಹಾಗೆ ಚಟ ಹಚ್ಚಿಕೊಂಡಿದ್ದಲ್ಲಿ, ಅನಾರೋಗ್ಯದಿಂದ ಕೇವಲ ನಮ್ಮ ಜೀವನಕ್ಕೆ ಅಲ್ಲ, ಬದಲಿಗೆ ನಮ್ಮ ಕುಟುಂದವರಿಗೂ ಸಹ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ನಮ್ಮ ಸ್ವಂತ ಕ್ರಿಯೆಗಳ ಪರಿಣಾಮಗಳಿಂದ ನಾವು ಸಂಪೂರ್ಣವಾಗಿ ಪ್ರತ್ಯೇಕರಾಗಿದ್ದೇವೆ ಎಂಬ ಕಲ್ಪನೆಯು ಇದಕ್ಕೆ ಅಡಿಪಾಯವಾಗಿದೆ. ಹೀಗಾಗಿ ನಮ್ಮ ಗೊಂದಲದ ಪ್ರಬಲವಾದ ಎದುರಾಳಿ ಹೀಗಿರುವುದು: 

  • ನಾವು ಮಾನವಕುಲದೊಂದಿಗೆ ಮತ್ತು ಗ್ರಹದೊಂದಿಗೆ, ನಿಕಟವಾಗಿ ಪರಸ್ಪರ ಸಂಬಂಧ ಹೊಂದಿದ್ದೇವೆ ಎಂಬುದನ್ನು ಅರಿತುಕೊಳ್ಳಿ ಮತ್ತು ಅಸ್ತಿತ್ವದ ಬಗ್ಗೆಗಿನ ನಮ್ಮ ಕಲ್ಪನೆಗಳು, ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳಿ. 

ಪುನರಾವರ್ತಿತ ಧ್ಯಾನದ ಮೂಲಕ ಈ ಒಳನೋಟಕ್ಕೆ ನಾವು ಒಗ್ಗಿಕೊಳ್ಳಬಹುದಾದರೆ, ಅಂತಿಮವಾಗಿ ನಮ್ಮ ಶೂನ್ಯ ಪ್ರಕ್ಷೇಪಗಳನ್ನು ಬೆಂಬಲಿಸುವ ಎಲ್ಲಾ ಗೊಂದಲಗಳನ್ನು ನಾವು ಹೊರಹಾಕುತ್ತೇವೆ. 

ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತಿದ್ದರೂ, ಅದು ಹೇಗೋ ನಮ್ಮಿಂದ ತಪ್ಪಿಸಿಕೊಳ್ಳುತ್ತಲೇ ಇರುತ್ತದೆ. ಸಂತೋಷವನ್ನು ಕಂಡುಕೊಳ್ಳುವ ಬುದ್ಧನ ವಿಧಾನವನ್ನು ಈ ಚತುರಾರ್ಯ ಸತ್ಯಗಳಲ್ಲಿ ವಿವರಿಸಲಾಗಿದ್ದು, ಇವು ಸಾರ್ವತ್ರಿಕವಾಗಿವೆ ಮತ್ತು ಬುದ್ಧ ಅವುಗಳನ್ನು ಮೊದಲು ಕಲಿಸಿದ 2,500 ವರ್ಷಗಳ ನಂತರವೂ ಪರಿಣಾಮಕಾರಿಯಾಗಿವೆ. 

ನಮ್ಮ ದೈನಂದಿನ ಸಮಸ್ಯೆಗಳನ್ನು ಎದುರಿಸಲು, ಚತುರಾರ್ಯ ಸತ್ಯಗಳ ಪ್ರಯೋಜನವನ್ನು ಪಡೆಯಲು, ಬೌದ್ಧರಾಗುವ ಅಗತ್ಯವಿಲ್ಲ. ನಮಗೆ ಬೇಕಾದ ರೀತಿಯಲ್ಲೇ ಜೀವನ ನಡೆಯುವುದು ಅಸಾಧ್ಯ, ಆದರೆ ಇದು ಖಿನ್ನತೆಗೆ ಒಳಗಾಗುವ ಮತ್ತು ಭರವಸೆಯನ್ನು ಕಳೆದುಕೊಳ್ಳಲು ಕಾರಣವಲ್ಲ. ಚತುರಾರ್ಯ ಸತ್ಯಗಳಲ್ಲಿ, ನಿಜವಾದ ಸಂತೋಷವನ್ನು ಕಂಡುಕೊಳ್ಳಲು ಮತ್ತು ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸಲು ಅಗತ್ಯವಿರುವ ಎಲ್ಲವನ್ನೂ ಕಾಣಬಹುದು. 

ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಜವಾದ ದುಃಖವನ್ನು ತಿಳಿಯಬೇಕು; ದುಃಖದ ನಿಜವಾದ ಕಾರಣವನ್ನು ತೊಡೆದುಹಾಕಬೇಕು; ದುಃಖದ ನಿಜವಾದ ನಿಲುಗಡೆ ಸಾಧಿಸಬೇಕು; ಮತ್ತು ಮನಸ್ಸಿನ ನಿಜವಾದ ಮಾರ್ಗವನ್ನು ಅರಿತುಕೊಳ್ಳಬೇಕು.

Top