What is happiness catalin pop noyd

ನಮ್ಮ ಜೀವನದಲ್ಲಿನ ದೀರ್ಘಾವಧಿಯ ಯೋಗಕ್ಷೇಮ, ಮನಸ್ಸಿನ ಶಾಂತಿ ಮತ್ತು ತೃಪ್ತಿಯ ಇನ್ನೊಂದು ಹೆಸರೇ ಸಂತೋಷ – ಪ್ರತಿಕ್ಷಣ, ಪ್ರತಿ ಸ್ಥಳದಲ್ಲಿ ನಾವು ಸಂತೋಷಕ್ಕಾಗಿ ಹುಡುಕುತ್ತಿರುತ್ತೇವೆ. ಅದರ ಸಣ್ಣ ರುಚಿ ಸಿಕ್ಕರೆ ಸಾಕು, ಅದು ಶಾಶ್ವತವಾಗಿರಬೇಕೆಂದು ಬಯಸುತ್ತೇವೆ. 

ಜನರು ಹೆಚ್ಚಾಗಿ ಆನಂದವನ್ನು ಸಂತೋಷವೆಂದು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ರುಚಿ-ರುಚಿಯಾದ ಆಹಾರವನ್ನು ಸೇವಿಸಿದರೆ, ಬೆಲೆಬಾಳುವ ಬಟ್ಟೆಗಳನ್ನು ಧರಿಸಿದರೆ, ಯಾವಾಗಲೂ ಮೋಜು-ಮಸ್ತಿ ಮಾಡಿದರೆ ನಾವು ಸಂತೋಷವಾಗಿರುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಹಾಗೆಂದೂ ಆಗುವುದಿಲ್ಲ. ನಮ್ಮ ಎಲ್ಲಾಆಸೆ-ಆಕಾಂಕ್ಷೆಗಳನ್ನು ಪೂರೈಸಿದರೆ, ನಾವು ಸಂತೋಷವಾಗಿರುತ್ತೇವೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ, ಕೇವಲ ನಮ್ಮ ಬಗ್ಗೆ ಕಾಳಜಿ ವಹಿಸುವುದರಿಂದ, ಒಂಟಿತನ ಮತ್ತು ಖಿನ್ನತೆಗೆ ಒಳಗಾಗುತ್ತೇವೆ. 

ನಮ್ಮ ಆಲೋಚನೆಗಳು ಮತ್ತು ಭಾವನೆಗಳೊಂದಿಗೆ ಒಂಟಿಯಾಗಿರುವುದು ಕೆಲವೊಮ್ಮೆ ಅಹಿತಕರವೆನಿಸುವುದರಿಂದ, ನಾವು ಸಂಗೀತ, ಕಂಪ್ಯೂಟರ್ ಗೇಮ್ಗಳು, ಆಹಾರ, ಲೈಂಗಿಕ ಕ್ರಿಯೆ ಮತ್ತು ವೃತ್ತಿಜೀವನದಲ್ಲಿ ವಿಚಲನಗಳಿಗಾಗಿ ಹುಡುಕುತ್ತೇವೆ. ಆದರೆ ಇದರಿಂದ ನಾವು ಬೇರೆಯವರೊಂದಿಗೆ ನಿಜವಾದ ಸಂಬಂಧವನ್ನು ರಚಿಸುವುದಿಲ್ಲ, ನಿಜವಾದ ಸಂತೋಷದ ಅರ್ಥವೂ ಸಿಗುವುದಿಲ್ಲ. 

ಸಂತೋಷವನ್ನು ಅನುಭವಿಸಲು ಮತ್ತು ಇತರರೊಂದಿಗೆ ಸಂಬಂಧವನ್ನು ಹೊಂದುವ ಬಯಕೆಯಿಂದ, ನಾವು ಸಾಮಾಜಿಕ ಜಾಲತಾಣಗಳತ್ತ ತಿರುಗುತ್ತೇವೆ. ನಮ್ಮ ಸೆಲ್ಫಿಗಳಿಗೆ ಸಿಗುವ ‘ಲೈಕ್’ಗಳಿಂದ ಅಥವಾ ಸ್ನೇಹಿತರ ಸಂದೇಶಗಳಿಂದ ನಮಗೆ ಅಲ್ಪಾವಧಿಯ ಆನಂದ ಸಿಗಬಹುದು ಆದರೆ ಇದು ನಮ್ಮಲ್ಲಿ ಇನ್ನೂ ಹೆಚ್ಚಿನ ಬಯಕೆಯನ್ನು ಉದ್ಭವಿಸುತ್ತದೆ. ನಾವು ನಮ್ಮ ಫೋನ್‌ಗಳನ್ನು ನಿರಂತರವಾಗಿ ನೋಡುತ್ತಿರುತ್ತೇವೆ, ನಮ್ಮ ಮುಂದಿನ “ಫಿಕ್ಸ್” ಗಾಗಿ ಕಾತರದಿಂದ ಕಾಯುತ್ತಿರುತ್ತೇವೆ, ಆದರೆ ನಾವು ಹೆಚ್ಚು ಲೈಕ್ಗಳು ಮತ್ತು ಸಂದೇಶಗಳನ್ನು ಸ್ವೀಕರಿಸಿದರೂ, ಇತರರೊಂದಿಗೆ ಕಡಿಮೆ ಸಂಬಂಧವನ್ನು ಅನುಭವಿಸುತ್ತೇವೆ. 

ಇತರರನ್ನು ಆತ್ಮೀಯತೆಯಿಂದ ಕಾಣುವುದೇ ನಿಜವಾದ ಸಂತೋಷದ ಮೂಲ ಎಂದು ಬುದ್ಧ ಹೇಳಿದರು: ನಾವು ಇತರರ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ಪ್ರಾಮಾಣಿಕವಾಗಿ ಕಾಳಜಿ ವಹಿಸಿದಾಗ, ನಮ್ಮ ಹೃದಯವು ಮಮತೆಯಿಂದ ತುಂಬಿ, ಇತರರಿಗಾಗಿ ತೆರೆಯುತ್ತದೆ ಮತ್ತು ಸಂಬಂಧವನ್ನು ಸೃಷ್ಟಿಸುತ್ತದೆ. ಜೊತೆಗೆ ನಾವು ಕೂಡ ನಿಜವಾದ ಯೋಗಕ್ಷೇಮದ ಭಾವನೆಯನ್ನು ಅನುಭವಿಸುತ್ತೇವೆ. ನಾವು ದೈಹಿಕವಾಗಿಯೂ ಸ್ವಸ್ಥವಾಗಿರುತ್ತೇವೆ. ಇತರರ ಸಂತೋಷದ ಬಗ್ಗೆ ಕಾಳಜಿ ವಹಿಸಿದಾಗ, ನಾವು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಮತ್ತು ಹಾನಿಯನ್ನುಂಟುಮಾಡದಿರಲು ಪ್ರಯತ್ನಿಸುತ್ತೇವೆ. ಇದರಿಂದ, ನಮ್ಮ ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿಸುವಂತಹ, ವಿಶ್ವಾಸಾರ್ಹ ಗೆಳೆತನಗಳನ್ನು ಬೆಳೆಸಿಕೊಳ್ಳುತ್ತೇವೆ. ಕುಟುಂಬದವರ ಮತ್ತು ಸ್ನೇಹಿತರ ಭಾವನಾತ್ಮಕ ಬೆಂಬಲದೊಂದಿಗೆ, ಜೀವನದಲ್ಲಿ ಏನೇ ಸಂಭವಿಸಿದರೂ ಅದನ್ನು ನಿಭಾಯಿಸುವ ಶಕ್ತಿಯನ್ನು ನಾವು ಕಂಡುಕೊಳ್ಳುತ್ತೇವೆ. 

ಇತರರ ಸಂತೋಷದ ಬಗ್ಗೆ ಕಾಳಜಿ ವಹಿಸುವ ಮೊದಲು, ನಾವು ನಮ್ಮೊಂದಿಗೆ ಪ್ರಾರಂಭಿಸಬೇಕು. ನಾವು ನಮಗಾಗಿ ಸಂತೋಷವನ್ನು ಬಯಸಲು ಸಾಧ್ಯವಾಗದಿದ್ದರೆ, ಬೇರೆಯವರ ಸಂತೋಷವನ್ನು ಬಯಸುವುದು ಹೇಗೆ ಸಾಧ್ಯ? ಬೌದ್ಧಧರ್ಮದಲ್ಲಿ, ಸಂತೋಷದ ಆಶಯವು ಸಾರ್ವತ್ರಿಕವಾಗಿ, ಎಲ್ಲರನ್ನೂ ಒಳಗೊಂಡಿರುತ್ತದೆ. 

ಸಂತೋಷವು ಆಂತರಿಕ ಶಾಂತಿಯ ಮೇಲೆ ಅವಲಂಬಿತವಾಗಿದ್ದು, ಅದು ಪ್ರತಿಯಾಗಿ ಸೌಹಾರ್ದತೆಯ ಮೇಲೆ ಅವಲಂಬಿತವಾಗಿರುತ್ತದೆ. - 14 ನೇ ದಲೈ ಲಾಮಾ 

ಇಂದಿನ ಪ್ರಪಂಚದ ಮೇಲೆ ಯಾವುದೇ ಪ್ರಭಾವ ಬೀರಲು ನಾವು ಶಕ್ತಿಹೀನರಾಗಿದ್ದೇವೆ ಎಂದು ಭಾವಿಸುವುದು ಸುಲಭ, ಆದ್ದರಿಂದ ನಾವು ಹೀಗೆ ಯೋಚಿಸಬಹುದು, "ಏನಾದರೂ ಆಗಲಿ, ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು?”. ಆದರೆ ವಾಸ್ತವದಲ್ಲಿ, ನಾವು ಅಪರಿಚಿತರ ಮೇಲೂ ಅವರ ಯೋಗಕ್ಷೇಮದ ಬಗ್ಗೆ ಯೋಚಿಸುವ ಮೂಲಕ ಮತ್ತು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುವ ಮೂಲಕ ಪರಿಣಾಮ ಬೀರಬಹುದು. ಒಂದು ಮುಗುಳ್ನಗೆಯಿಂದ ಅಥವಾ ಚೆಕ್‌ಔಟ್ ಲೈನ್‌ನಲ್ಲಿ ಯಾರನ್ನಾದರೂ ನಮ್ಮ ಮುಂದೆ ಹೋಗಲು ಬಿಡುವುದರಿಂದ ಕೂಡ ನಾವು ಒಂದು ವ್ಯತ್ಯಾಸವನ್ನು ಮಾಡಬಹುದು. ಇದು ನಮಗೆ ಸ್ವಾಭಿಮಾನದ ಪ್ರಜ್ಞೆಯನ್ನು ನೀಡುತ್ತದೆ – ನಮ್ಮ ಕೈಯಿಂದ ಏನನ್ನಾದರೂ ನೀಡಲಾಗುವುದರಿಂದ ನಮಗೆ ಖುಷಿಯಾಗುತ್ತದೆ. ನಾವು ನಮ್ಮೊಂದಿಗೆ, ಜೀವನದಲ್ಲಿ ಸಂತೋಷವಾಗಿರುತ್ತೇವೆ. 

ಇದರರ್ಥ ನಾವು ಇತರರೊಂದಿಗೆ ಸಂಬಂಧ ಹೊಂದಲು, ಅವರ ಸಂತೋಷ ಮತ್ತು ಒಳಿತಿಗಾಗಿ ಹೇಗೆ ಸಹಾಯಮಾಡಬಹುದು ಎಂದು ಯೋಚಿಸಬೇಕೇ ಹೊರತು ಅವರಿಂದ ನಮ್ಮ ಸ್ವಾಭಿಮಾನ ಮತ್ತು ಸಂತೋಷವನ್ನು ದೃಢೀಕರಿಸುವುದರ ಬಗ್ಗೆ ಅಲ್ಲ. ಅಂತಿಮವಾಗಿ ಇದು ನಮ್ಮಲ್ಲಿರುವ ಸ್ವಯಂ ಆಸಕ್ತಿ ಮತ್ತು ಇತರರ ಯೋಗಕ್ಷೇಮದ ಬಗ್ಗೆಗಿರುವ ಪ್ರಾಮಾಣಿಕ ಕಾಳಜಿಯ ನಡುವಿನ ವ್ಯತ್ಯಾಸವಾಗಿರುತ್ತದೆ. 

ಮಾನವರಾದ ನಾವು ಸಾಮಾಜಿಕ ಜೀವಿಗಳು: ನಾವು ಇತರರೊಂದಿಗೆ ಸಂಬಂಧ ಹೊಂದಿದಾಗ ಮಾತ್ರ ಅಭಿವೃದ್ಧಿ ಹೊಂದಬಹುದು. ಹಾಗಾಗಿ ಸಂತೋಷದ ಜೀವನವನ್ನು ನಡೆಸಲು, ಇತರರಿಗಾಗಿ ದಯೆ, ಕಾಳಜಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಬೇಕಾದುದು ಮುಖ್ಯವಾಗಿದೆ.

Top