ಎಲ್ಲರೂ ಬುದ್ಧರಾಗಬಹುದು

03:42
ನಾವೆಲ್ಲರೂ ದೀರ್ಘಾವಧಿಯ ಸಂತೋಷವನ್ನು ಸಾಧಿಸಲು ಬಯಸುತ್ತೇವೆ, ಆದ್ದರಿಂದ ಆ ಗುರಿಯತ್ತ ವಾಸ್ತವಿಕವಾಗಿ ಕೆಲಸ ಮಾಡುವುದು ಅತ್ಯಂತ ಅರ್ಥಪೂರ್ಣ ಮತ್ತು ತಾರ್ಕಿಕವಾದ ವಿಷಯವಾಗಿದೆ. ಭೌತಿಕ ವಸ್ತುಗಳು ನಮಗೆ ಸ್ವಲ್ಪ ಸಂತೋಷವನ್ನು ತಂದರೂ, ಸಂತೋಷದ ನಿಜವಾದ ಮೂಲವು ನಮ್ಮ ಸ್ವಂತ ಮನಸ್ಸಾಗಿರುತ್ತದೆ. ನಮ್ಮ ಎಲ್ಲಾ ಸಾಮರ್ಥ್ಯಗಳು ಸಂಪೂರ್ಣವಾಗಿ ಅಭಿವೃದ್ಧಿಗೊಂಡಾಗ ಮತ್ತು ನಮ್ಮ ಎಲ್ಲಾ ನ್ಯೂನತೆಗಳನ್ನು ನಿವಾರಿಸಿದಾಗ, ನಾವು ನಮಗೆ ಮಾತ್ರವಲ್ಲದೆ ಎಲ್ಲರಿಗೂ ಸಂತೋಷದ ಮೂಲವಾಗುವ ಬುದ್ಧರಾಗುತ್ತೇವೆ. ನಾವೆಲ್ಲರೂ ಬುದ್ಧರಾಗಬಹುದು, ಏಕೆಂದರೆ ಆ ಗುರಿಯನ್ನು ತಲುಪಲು ಬೇಕಾಗಿರುವ ಸಂಪೂರ್ಣವಾದ ಕಾರ್ಯಕಾರಿ ಅಂಶಗಳು ನಮ್ಮಲ್ಲಿಯೇ ಇವೆ. ನಾವೆಲ್ಲರೂ ಬುದ್ಧ-ಸ್ವಭಾವವನ್ನು ಹೊಂದಿದ್ದೇವೆ.

ನಾವೆಲ್ಲರೂ ಬುದ್ಧರಾಗಬಹುದು ಎಂದು ಬುದ್ಧನು ಒತ್ತಿಹೇಳಿದ್ದರು, ಆದರೆ ಇದರ ಅರ್ಥವೇನು? ಬುದ್ಧ ಎಂದರೆ ತನ್ನ ಎಲ್ಲಾ ಕೊರತೆಗಳನ್ನು ನಿವಾರಿಸಿದ, ತನ್ನ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿದ ಮತ್ತು ತನ್ನ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಂಡ ಒಬ್ಬ ವ್ಯಕ್ತಿಯಾಗಿರುತ್ತಾನೆ. ಪ್ರತಿಯೊಬ್ಬ ಬುದ್ಧನೂ ನಮ್ಮಂತೆಯೇ ಪ್ರಾರಂಭಿಸಿರುವರು, ಒಬ್ಬ ಸಾಮಾನ್ಯ ಜೀವಿ ವಾಸ್ತವಿಕ ಮತ್ತು ಅವಾಸ್ತವಿಕ ಪ್ರಕ್ಷೇಪಗಳ ಗೊಂದಲದಿಂದಾಗಿ ಜೀವನದಲ್ಲಿ ಪದೇ ಪದೇ ತೊಂದರೆಗಳನ್ನು ಅನುಭವಿಸುತ್ತಿರುವವರಾಗಿದ್ದರು. ಅವರ ಮೊಂಡುತನದ ಪ್ರಕ್ಷೇಪಗಳು ವಾಸ್ತವಕ್ಕೆ ಹೊಂದಿಕೆಯಾಗುತ್ತಿಲ್ಲವೆಂದು ಅರಿತುಕೊಂಡರು ಮತ್ತು ತಮ್ಮ ದುಃಖದಿಂದ ಮುಕ್ತರಾಗುವ ಬಲವಾದ ನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ, ಅಂತಿಮವಾಗಿ, ತಮ್ಮ ಮನಸ್ಸು ಪ್ರಕ್ಷೇಪಿಸಿದ ಕಲ್ಪನೆಗಳನ್ನು ಸ್ವಯಂಚಾಲಿತವಾಗಿ ನಂಬುವುದನ್ನು ಅವರು ನಿಲ್ಲಿಸಿದರು. ಅವರು ಗೊಂದಲದ ಭಾವನೆಗಳನ್ನು ಮತ್ತು ಪ್ರಚೋದಿತವಾಗಿ ವರ್ತಿಸುವುದನ್ನು ನಿಲ್ಲಿಸಿದರು ಮತ್ತು ತಮ್ಮನ್ನು ಎಲ್ಲಾ ದುಃಖಗಳಿಂದ ಮುಕ್ತಗೊಳಿಸಿದರು. 

ಇದೇ ಸಮಯದಲ್ಲಿ, ತಮ್ಮಲ್ಲಿರುವ ಸಕಾರಾತ್ಮಕ ಭಾವನೆಗಳಾದ ಪ್ರೀತಿ ಮತ್ತು ಸಹಾನುಭೂತಿಯನ್ನು ಬಲಪಡಿಸಲು ಅವರು ಶ್ರಮಪಟ್ಟರು ಮತ್ತು ಇತರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದರು. ತಮ್ಮ ಏಕೈಕ ಮಗುವಿಗಾಗಿ ತಾಯಂದಿರ ಬಳಿಯಿರುವಂತಹ ಪ್ರೀತಿಯನ್ನು ಅವರು ಎಲ್ಲರಿಗಾಗಿ ಬೆಳೆಸಿಕೊಂಡರು. ಪ್ರತಿಯೊಬ್ಬರಿಗಾಗಿ ಇರುವ ಅಪಾರವಾದ ಪ್ರೀತಿ ಮತ್ತು ಸಹಾನುಭೂತಿಯಿಂದ ಮತ್ತು ಅವರೆಲ್ಲರಿಗೂ ಸಹಾಯ ಮಾಡಬೇಕೆಂಬ ಅಸಾಧಾರಣ ಸಂಕಲ್ಪದಿಂದ ಬಲಗೊಂಡು, ವಾಸ್ತವದ ಬಗ್ಗೆಯಿರುವ ಅವರ ತಿಳುವಳಿಕೆಯು ಕ್ರಮೇಣವಾಗಿ ಬಲಗೊಂಡಿತು. ಅದು ಎಷ್ಟು ಶಕ್ತಿಯುತವಾಯಿತು ಎಂದರೆ ಅಂತಿಮವಾಗಿ ಅವರ ಮನಸ್ಸು, ಎಲ್ಲವೂ ಮತ್ತು ಎಲ್ಲರೂ ಒಬ್ಬರೊಬ್ಬರೊಂದಿಗೆ ಸಂಪರ್ಕವಿಲ್ಲದೆ, ತಮ್ಮದೇ ಆದ ಅಸ್ತಿತ್ವದಲ್ಲಿರುವರು ಎಂಬ ವಂಚನೆಯ ದೃಷ್ಟಿಕೋನವನ್ನು ಪ್ರದರ್ಶಿಸುವುದನ್ನು ನಿಲ್ಲಿಸಿತು. ಯಾವುದೇ ಅಡೆತಡೆಯಿಲ್ಲದೆ, ಅಸ್ತಿತ್ವದಲ್ಲಿರುವ ಎಲ್ಲದರ ಪರಸ್ಪರ ಸಂಬಂಧ ಮತ್ತು ಪರಸ್ಪರ ಅವಲಂಬನೆಯನ್ನು ಅವರು ಸ್ಪಷ್ಟವಾಗಿ ನೋಡಿದರು. 

ಈ ಸಾಧನೆಯಿಂದ ಅವರಿಗೆ ಜ್ಞಾನೋದಯವಾಯಿತು: ಅವರು ಬುದ್ಧರಾದರು. ಅವರ ದೇಹಗಳು, ಅವರ ಸಂವಹನದ ಸಾಮರ್ಥ್ಯಗಳು ಮತ್ತು ಅವರ ಮನಸ್ಸು, ಎಲ್ಲಾ ರೀತಿಯ ಮಿತಿಗಳಿಂದ ಮುಕ್ತವಾದವು. ತಾವು ಕಲಿಸುವ ಪ್ರತಿಯೊಂದೂ, ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಂಡ ನಂತರ, ಅವರು ಎಲ್ಲಾ ಜೀವಿಗಳಿಗೆ ವಾಸ್ತವಿಕವಾಗಿ, ಸಾಧ್ಯವಾದಷ್ಟು ಸಹಾಯ ಮಾಡಲು ಸಮರ್ಥರಾಗಿರುವರು. ಆದರೆ ಬುದ್ಧನೂ ಕೂಡ ಸರ್ವಶಕ್ತನಾಗಿರುವುದಿಲ್ಲ. ಒಬ್ಬ ಬುದ್ಧನು ಮುಕ್ತ ಮನಸ್ಸಿನವರಿಗೆ ಮತ್ತು ಅವರ ಸಲಹೆಯನ್ನು ಸ್ವೀಕರಿಸುವ ಮತ್ತು ಅದನ್ನು ಸರಿಯಾಗಿ ಅನುಸರಿಸುವವರ ಮೇಲೆ ಮಾತ್ರ ಸಕಾರಾತ್ಮಕ ಪ್ರಭಾವಗಳನ್ನು ಬೀರಬಹುದು. 

ಬುದ್ಧ, ಪ್ರತಿಯೊಬ್ಬರೂ ತಾವು ಮಾಡಿದ್ದನ್ನು ಸಾಧಿಸಬಹುದು ಎಂದು ಹೇಳಿದ್ದರು; ಎಲ್ಲರೂ ಬುದ್ಧರಾಗಬಹುದು. ಏಕೆಂದರೆ ನಮ್ಮೆಲ್ಲರಲ್ಲೂ "ಬುದ್ಧ-ಸ್ವಭಾವ" - ಬುದ್ಧತ್ವವನ್ನು ಸಕ್ರಿಯಗೊಳಿಸುವ ಮೂಲಭೂತ ಕಾರ್ಯಕಾರಿ ಸಾಮಗ್ರಿಗಳನ್ನು ಹೊಂದಿದ್ದೇವೆ.

ನರವಿಜ್ಞಾನವು ನ್ಯೂರೋಪ್ಲಾಸ್ಟಿಸಿಟಿಯ ಬಗ್ಗೆ ಮಾತನಾಡುತ್ತದೆ - ನಮ್ಮ ಜೀವನದುದ್ದಕ್ಕೂ ನರ ಮಾರ್ಗಗಳನ್ನು ಬದಲಾಯಿಸುವ ಮತ್ತು ಹೊಸತಾದವುಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ನಮ್ಮ ಮೆದುಳಿಗಿದೆ. ಉದಾಹರಣೆಗೆ, ನಮ್ಮ ಬಲಗೈಯನ್ನು ನಿಯಂತ್ರಿಸುವ ಮಿದುಳಿನ ಭಾಗವು ಪಾರ್ಶ್ವವಾಯುವಿಗೆ ಒಳಗಾದಾಗ, ಭೌತಚಿಕಿತ್ಸೆಯ ತರಬೇತಿಯು, ಮೆದುಳಿನ ಹೊಸ ನರ ಮಾರ್ಗಗಳನ್ನು ಅಭಿವೃದ್ಧಿಪಡಿಸಿ, ನಮ್ಮ ಎಡಭಾಗವನ್ನು ಬಳಸುವಂತೆ ನಮಗೆ ಅನುವು ಮಾಡಿಕೊಡುತ್ತದೆ. ಸಹಾನುಭೂತಿಯಂತಹ ಗುಣಗಳ ಮೇಲೆ ಧ್ಯಾನಿಸುವುದೂ ಸಹ ನಮಗೆ ಹೆಚ್ಚು ಸಂತೋಷ ಮತ್ತು ಮನಸ್ಸಿನ ಶಾಂತಿಗೆ ಕಾರಣವಾಗುವ ಹೊಸ ನರ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಆದ್ದರಿಂದ ನಾವು ಮೆದುಳಿನ ನ್ಯೂರೋಪ್ಲಾಸ್ಟಿಸಿಟಿಯ ಬಗ್ಗೆ ಮಾತನಾಡುವಂತೆಯೇ, ನಮ್ಮ ಮನಸ್ಸಿನ ಪ್ಲಾಸ್ಟಿಟಿಯ ಬಗ್ಗೆಯೂ ಮಾತನಾಡಬಹುದು. ನಮ್ಮ ಮನಸ್ಸುಗಳು ಮತ್ತು ನಮ್ಮ ವ್ಯಕ್ತಿತ್ವದ ಗುಣಲಕ್ಷಣಗಳು ಸ್ಥಿರವಾಗಿ ಮತ್ತು ಅಚಲವಾಗಿರದೇ, ಅವುಗಳನ್ನು ಹೊಸ ಸಕಾರಾತ್ಮಕ ಮಾರ್ಗಗಳನ್ನು ಅಭಿವೃದ್ಧಿಪಡಿಸುವಂತೆ ಉತ್ತೇಜಿಸಬಹುದು ಎಂಬ ವಿಷಯವೇ ನಾವೆಲ್ಲರೂ ಪ್ರಬುದ್ಧ ಬುದ್ಧರಾಗಲು ಅನುವು ಮಾಡಿಕೊಡುವ ಅತ್ಯಂತ ಮೂಲಭೂತ ಅಂಶವಾಗಿದೆ. 

ಶಾರೀರಿಕ ಮಟ್ಟದಲ್ಲಿ, ನಾವು ರಚನಾತ್ಮಕವಾದ ಏನನ್ನಾದರೂ ಮಾಡಿದಾಗ, ಹೇಳಿದಾಗ ಅಥವಾ ಯೋಚಿಸಿದಾಗ, ನಾವು ಸಕಾರಾತ್ಮಕ ನರ ಮಾರ್ಗವನ್ನು ಬಲಪಡಿಸುತ್ತೇವೆ ಮತ್ತು ಆ ಕ್ರಿಯೆಯನ್ನು ಸುಲಭವಾಗಿ ಮಾಡುವ ಸಾಧ್ಯತೆಯನ್ನು ಮತ್ತು ಅದನ್ನು ಪುನರಾವರ್ತಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತೇವೆ. ಮಾನಸಿಕ ಮಟ್ಟದಲ್ಲಿ, ಇದು ಸಕಾರಾತ್ಮಕ ಶಕ್ತಿ ಮತ್ತು ಸಾಮರ್ಥ್ಯವನ್ನು ನಿರ್ಮಿಸುತ್ತದೆ ಎಂದು ಬೌದ್ಧಧರ್ಮವು ಹೇಳುತ್ತದೆ. ಅಂತಹ ಸಕಾರಾತ್ಮಕ ಶಕ್ತಿಯ ಜಾಲವನ್ನು ನಾವು ಹೆಚ್ಚು ಬಲಪಡಿಸಿದಷ್ಟು, ವಿಶೇಷವಾಗಿ ನಾವು ಇತರರಿಗೆ ಪ್ರಯೋಜನವಾದದ್ದನ್ನು ಮಾಡಿದಾಗ, ಅದು ಶಕ್ತಿಯುತವಾಗುತ್ತದೆ. ಬುದ್ಧನಂತೆ ಎಲ್ಲಾ ಜೀವಿಗಳಿಗೆ ಸಂಪೂರ್ಣವಾಗಿ ಸಹಾಯ ಮಾಡುವ ಸಾಮರ್ಥ್ಯದ ಮೇಲೆ ನಿರ್ದೇಶಿಸಲಾದ ಸಕಾರಾತ್ಮಕ ಶಕ್ತಿಯು, ಸಾರ್ವತ್ರಿಕವಾಗಿ ಸಹಾಯ ಮಾಡುವ ಗುರಿಯನ್ನು ತಲುಪಲು ನಮಗೆ ಅನುವು ಮಾಡಿಕೊಡುತ್ತದೆ. 

ಅದೇ ರೀತಿಯಾಗಿ, ವಾಸ್ತವದ ಬಗ್ಗೆಗಿರುವ ನಮ್ಮ ಸುಳ್ಳು ಪ್ರಕ್ಷೇಪಗಳಿಗೆ ಅನುಗುಣವಾಗಿರದ ವಾಸ್ತವಿಕ ವಿಷಯಗಳ ಮೇಲೆ,  ನಾವು ಹೆಚ್ಚು ಗಮನಹರಿಸುತ್ತೇವೆ, ಆಗ ನಾವು ನರಗಳ ಮಾರ್ಗಗಳನ್ನು ಹೆಚ್ಚು ದುರ್ಬಲಗೊಳಿಸುತ್ತೇವೆ, ಮೊದಲು ಈ ಮಾನಸಿಕ ಅಸಂಬದ್ಧತೆಯನ್ನು ನಂಬದಿರುವಂತೆ ಮತ್ತು ನಂತರ ಅವುಗಳ ಪ್ರಕ್ಷೇಪವನ್ನೇ ನಿಲ್ಲಿಸುತ್ತೇವೆ. ಅಂತಿಮವಾಗಿ, ನಮ್ಮ ಮನಸ್ಸುಗಳು ಈ ಭ್ರಮೆಗಳ ನರ ಮತ್ತು ಮಾನಸಿಕ ಮಾರ್ಗಗಳಿಂದ ಮುಕ್ತವಾಗುತ್ತವೆ ಮತ್ತು ಅವುಗಳ ಮೇಲೆ ಅವಲಂಬಿತವಾಗಿರುವ ಗೊಂದಲದ ಭಾವನೆಗಳು ಮತ್ತು ಪ್ರಚೋದಿತ ನಡವಳಿಕೆಯ ಮಾದರಿಗಳ ಮಾರ್ಗಗಳಿಂದ ಮುಕ್ತವಾಗುತ್ತವೆ. ಬದಲಿಗೆ ವಾಸ್ತವದ ಬಗ್ಗೆಗಿರುವ ಆಳವಾದ ಅರಿವಿನ ಬಲವಾದ ಮಾರ್ಗಗಳನ್ನು ನಾವು ಅಭಿವೃದ್ಧಿಪಡಿಸಿಕೊಳ್ಳುತ್ತೇವೆ. ಪ್ರತಿಯೊಂದು ಸೀಮಿತ ಜೀವಿಗೆ ಹೇಗೆ ಅತ್ಯುತ್ತಮವಾಗಿ ಸಹಾಯ ಮಾಡಬೇಕೆಂದು ತಿಳಿದಿರುವ ಬುದ್ಧನ ಸರ್ವಜ್ಞನ ಮನಸ್ಸನ್ನು ಗುರಿಯಾಗಿಸುವ ಶಕ್ತಿಯಿಂದ ಈ ಮಾರ್ಗಗಳು ಸಶಕ್ತಗೊಂಡಾಗ, ಈ ಆಳವಾದ ಅರಿವಿನ ಜಾಲವು ಬುದ್ಧನ ಮನಸ್ಸನ್ನು ಸಾಧಿಸಲು ನಮಗೆ ಅನುವು ಮಾಡಿಕೊಡುತ್ತದೆ. 

ನಮ್ಮೆಲ್ಲರ ಬಳಿ ಇತರರೊಂದಿಗೆ ಸಂವಹನ ನಡೆಸುವ - ಪ್ರಾಥಮಿಕವಾಗಿ ಮಾತು, ಜೊತೆಗೆ ಮನಸ್ಸು - ಸೌಲಭ್ಯವಿರುವ ದೇಹವಿರುವುದರಿಂದ, ನಾವೆಲ್ಲರೂ ಬುದ್ಧನ ದೇಹ, ಮಾತು ಮತ್ತು ಮನಸ್ಸನ್ನು ಸಾಧಿಸಲು ಬೇಕಾದ ಕಾರ್ಯಕಾರಿ ವಸ್ತುಗಳನ್ನು ಹೊಂದಿದ್ದೇವೆ. ಈ ಮೂರು ಬುದ್ಧ-ಸ್ವಭಾವದ ಅಂಶಗಳಾಗಿವೆ. ನಮ್ಮೆಲ್ಲರಲ್ಲೂ ಒಂದು ಮಟ್ಟದ ಉತ್ತಮ ಗುಣಗಳಿವೆ – ನಮ್ಮ ಸ್ವಯಂ ಸಂರಕ್ಷಣೆಯ ಪ್ರಕೃತಿ, ಜೀವಿಗಳ ಸಂರಕ್ಷಣೆ, ನಮ್ಮ ತಾಯಿಯಂತಹ ಮತ್ತು ತಂದೆಯಂತಹ ಪ್ರಕೃತಿ, ಇತ್ಯಾದಿ - ಹಾಗೆಯೇ ಇತರರಿಗಾಗಿ ಕಾರ್ಯನಿರ್ವಹಿಸುವ ಮತ್ತು ಇತರರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವಿದೆ. ಇವು ಕೂಡ ಬುದ್ಧ-ಸ್ವಭಾವದ ಅಂಶಗಳಾಗಿವೆ; ಬುದ್ಧನ ಅನಿಯಮಿತವಾದ ಪ್ರೀತಿ ಮತ್ತು ಕಾಳಜಿ ಮತ್ತು ಜ್ಞಾನೋದಯದ ಚಟುವಟಿಕೆಗಳಂತಹ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಅವು ನಮ್ಮ ಕಾರ್ಯಕಾರಿ ಸಾಮಗ್ರಿಗಳಾಗಿವೆ. 

ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಪರಿಶೀಲಿಸಿದಾಗ, ನಾವು ಮತ್ತಷ್ಟು ಬುದ್ಧ- ಸ್ವಭಾವ ಅಂಶಗಳನ್ನು ಕಂಡುಕೊಳ್ಳುತ್ತೇವೆ. ನಮ್ಮಲ್ಲಿ, ಎಲ್ಲರಿಗೂ ಮಾಹಿತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ, ಕೆಲವು ಗುಣಲಕ್ಷಣಗಳನ್ನು ಹಂಚಿಕೊಳ್ಳುವ ವಿಷಯಗಳನ್ನು ಒಟ್ಟಿಗೆ ಗುಂಪಿಸಲು, ವಸ್ತುಗಳ ಪ್ರತ್ಯೇಕತೆಯನ್ನು ಗುರುತಿಸಲು, ನಾವು ಏನನ್ನು ಗ್ರಹಿಸುತ್ತೇವೆಯೋ ಅದಕ್ಕೆ ಪ್ರತಿಕ್ರಿಯಿಸಲು ಮತ್ತು ವಿಷಯಗಳು ಏನೆಂದು ತಿಳಿಯಲು ನಮಗೆ ಸಾಧ್ಯವಾಗುತ್ತದೆ. ಇವುಗಳ ಕಾರ್ಯನಿರ್ವಹಿಸುವ ನಮ್ಮ ಮಾನಸಿಕ ಚಟುವಟಿಕೆಗಳು ಪ್ರಸ್ತುತವಾಗಿ ಸೀಮಿತವಾಗಿದ್ದರೂ, ಅವು ಕೂಡ ಬುದ್ಧನ ಮನಸ್ಸನ್ನು ಸಾಧಿಸಲು ಬೇಕಾಗಿರುವ ಕಾರ್ಯಕಾರಿ ವಸ್ತುಗಳಾಗಿವೆ, ಹಾಗಾದ ನಂತರ ಅವು ತಮ್ಮ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. 

ಸಾರಾಂಶ 

ನಮ್ಮೆಲ್ಲರಲ್ಲೂ ಬುದ್ಧನಾಗಲು ಬೇಕಾಗಿರುವ ಕಾರ್ಯಕಾರಿ ಸಾಮಗ್ರಿಗಳಿರುವುದರಿಂದ, ನಮಗೆ ಜ್ಞಾನೋದಯವಾಗಲು ಬೇಕಾಗಿರುವುದು ಪ್ರೇರಣೆ ಮತ್ತು ನಿರಂತರ ಪರಿಶ್ರಮವಾಗಿದೆ. ಪ್ರಗತಿಯು ಎಂದಿಗೂ ರೇಖಾತ್ಮಕವಾಗಿರುವುದಿಲ್ಲ: ಕೆಲವು ದಿನಗಳು ಉತ್ತಮವಾಗಿರುತ್ತವೆ ಮತ್ತು ಕೆಲವು ದಿನಗಳು ಕೆಟ್ಟದಾಗಿರುತ್ತವೆ; ಬುದ್ಧತ್ವದ ಹಾದಿಯು ದೀರ್ಘವಾಗಿದೆ ಮತ್ತು ಸುಲಭವಾಗಿಲ್ಲ. ಆದರೆ ನಮ್ಮ ಬುದ್ಧ-ಸ್ವಭಾವದ ಅಂಶಗಳನ್ನು ನಾವು ನೆನಪಿಸಿಕೊಂಡಷ್ಟು, ನಾವು ನಿರುತ್ಸಾಹಗೊಳ್ಳುವುದರಿಂದ ದೂರವಿರುತ್ತೇವೆ. ಸ್ವಾಭಾವಿಕವಾಗಿ ನಮ್ಮಲ್ಲಿ ಯಾವುದೇ ದೋಷವಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಶಕ್ತಿಯುತವಾದ ಉತ್ತಮ ಪ್ರೇರಣೆಯೊಂದಿಗೆ ಮತ್ತು ಸಹಾನುಭೂತಿ ಮತ್ತು ಬುದ್ಧಿವಂತಿಕೆಯನ್ನು ಕೌಶಲ್ಯದಿಂದ ಸಂಯೋಜಿಸುವ ನೈಜ ವಿಧಾನಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು.

Top