ಆಧುನಿಕ ಜಗತ್ತಿನಲ್ಲಿ ದಲೈ ಲಾಮಾ ಅವರ ಪ್ರಸ್ತುತತೆ

ಆಧುನಿಕ ಜಗತ್ತಿನಲ್ಲಿ ದಲೈ ಲಾಮಾ ಅವರ ಪ್ರಸ್ತುತತೆಯನ್ನು ನೋಡೋಣ. ಅವರಿಗೆ ಯಾವುದೇ ಪಾತ್ರವನ್ನು ವಹಿಸಲು ಇದ್ದರೆ, ಅದು ಅರ್ಥಪೂರ್ಣವಾಗಿರಬೇಕು ಮತ್ತು ಸಾಧ್ಯವಾದಷ್ಟು ಜನರಿಗೆ ಪ್ರಯೋಜನಕಾರಿಯಾಗಿರಬೇಕು ಮತ್ತು ಅವರು ಸೂಪರ್‌ಸ್ಟಾರ್‌ನಂತಡ ಕೇವಲ ಮನರಂಜನೆ ಅಥವಾ ಕುತೂಹಲಕಾರಿ ವಿಷಯವಾಗಿ ಪ್ರಸ್ತುತವಾಗಿರಬಾರದು. ದಲೈ ಲಾಮಾ ಅವರ ಉದ್ದೇಶ ಇದಲ್ಲ. ಜೀವನದಲ್ಲಿ ಅವರ ಏಕೈಕ ಉದ್ದೇಶವು ಇತರರಿಗೆ ಪ್ರಯೋಜನಕಾರಿಯಾಗಿರುವುದಾಗಿದೆ.

ಇತರರಿಗಾಗಿ ಸೇವೆ 

ಜಗತ್ತಿನಲ್ಲಿ ಇತರರ ಕಲ್ಯಾಣಕ್ಕಾಗಿ ಸಂಪೂರ್ಣವಾಗಿ ಮೀಸಲಾಗಿರುವ ಇತರ ಜನರಿದ್ದರೂ, ಪರಮಪೂಜ್ಯರ - ನಾವು ಸಾಮಾನ್ಯವಾಗಿ ಅವರನ್ನು ಹೀಗೆ ಕರೆಯುತ್ತೇವೆ - ಬಗ್ಗೆ ಇರುವ ಅದ್ಭುತವಾದ ವಿಷಯವೆಂದರೆ ಅವರು ಸಂಪೂರ್ಣವಾಗಿ, ನಿಜವಾಗಿಯೂ ಪ್ರಾಮಾಣಿಕರಾಗಿರುತ್ತಾರೆ. ಇತರರು ಅವರ ಉಪಸ್ಥಿತಿಯಲ್ಲಿದ್ದಾಗ, ಅವರ ಮಾತನ್ನು ಕೇಳಿದಾಗ ಮತ್ತು ಅವರು ನಿಜವಾಗಿಯೂ ಏನು ಮಾಡುತ್ತಾರೆಂದು ಅರಿತುಕೊಂಡಾಗ ಅವರಿಗೆ ಖಂಡಿತವಾಗಿಯೂ ತಿಳಿಸಲ್ಪಡುವ ವಿಷಯವಿದು. ಅವರು ಯಾವಾಗಲೂ ತಮ್ಮ ಜೀವನವನ್ನು ಮುಂದುವರಿಸಲು ಪ್ರಯತ್ನಿಸುವ ಮೂರು ಪ್ರಮುಖ ಉದ್ದೇಶಗಳ ಬಗ್ಗೆ ಮಾತನಾಡುತ್ತಾರೆ. ಮೊದಲನೆಯದು ಜಾತ್ಯತೀತ ನೀತಿಶಾಸ್ತ್ರ, ಎರಡನೆಯದು ಧಾರ್ಮಿಕ ಸಾಮರಸ್ಯ, ಮತ್ತು ಮೂರನೆಯದು ಟಿಬೆಟ್ ಮತ್ತು ಟಿಬೆಟಿಯನ್ ಜನರ ಕಲ್ಯಾಣವನ್ನು ನೋಡಿಕೊಳ್ಳುವುದು, ಏಕೆಂದರೆ ಅದು ಅವರ ಮೇಲೆ ಇರಿಸಲಾದ ಪಾತ್ರವಾಗಿದೆ. 

ನೀತಿಶಾಸ್ತ್ರ 

ಪರಮಪೂಜ್ಯರು ಆಗಾಗ್ಗೆ ಜಾತ್ಯತೀತ ನೀತಿಶಾಸ್ತ್ರ ಮತ್ತು ಧಾರ್ಮಿಕ ಸಾಮರಸ್ಯದ ವಿಷಯಗಳ ಬಗ್ಗೆ ಮಾತನಾಡುತ್ತಾರೆ, ಇದಕ್ಕೆ ಕಾರಣವೆಂದರೆ ಜಗತ್ತಿಗೆ ನೀತಿಶಾಸ್ತ್ರದ ಅಗತ್ಯತೆ ಹೆಚ್ಚಾಗಿದೆ. ಎಷ್ಟೊಂದು ಭ್ರಷ್ಟಾಚಾರ, ವಿಪರೀತ ಅಪ್ರಾಮಾಣಿಕತೆ ಮತ್ತು ಜನರಲ್ಲಿ ಸಾಮರಸ್ಯದ ಕೊರತೆ ಇದೆ, ಮತ್ತು ಇವೆಲ್ಲವೂ ನೈತಿಕತೆಯ ಕೊರತೆಯಿಂದಾಗಿದೆ. 

ದಲೈ ಲಾಮಾ ಬಹಳ ಸಾರ್ವತ್ರಿಕವಾದ, ಮುಕ್ತ ಮನಸ್ಸನ್ನು ಹೊಂದಿದ್ದಾರೆ ಮತ್ತು ಈ ಗ್ರಹದಲ್ಲಿರುವ 7 ಶತಕೋಟಿಗೂ ಹೆಚ್ಚು ಜನರಿಗೆ ಏನು ಪ್ರಯೋಜನವಾಗುತ್ತದೆ ಎಂಬುದರ ಕುರಿತು ಯಾವಾಗಲೂ ಮಾತನಾಡುತ್ತಾರೆ ಮತ್ತು ಯೋಚಿಸುತ್ತಾರೆ. ಈ ಜನಸಂಖ್ಯೆಯಲ್ಲಿ, ಕೆಲವು ರೀತಿಯ ಧರ್ಮದಲ್ಲಿ ನಂಬಿಕೆಯುಳ್ಳವರು ಇದ್ದಾರೆ ಮತ್ತು ನಂಬಿಕೆಯಿಲ್ಲದವರೂ ಕೆಲವರಿದ್ದಾರೆ. ಇಲ್ಲಿ ಬೇಕಾಗಿರುವುದು ಒಂದು ರೀತಿಯ ನೈತಿಕ ವ್ಯವಸ್ಥೆ - ಒಂದು ನೈತಿಕ ಆಧಾರ - ಅದು ಎಲ್ಲರಿಗೂ ಸ್ವೀಕಾರಾರ್ಹವಾಗಿರುತ್ತದೆ. ಇದನ್ನು ಪರಮಪೂಜ್ಯರು "ಜಾತ್ಯತೀತ ನೀತಿಶಾಸ್ತ್ರ" ಎಂದು ಕರೆಯುತ್ತಾರೆ, ಇದರರ್ಥ ಅದು ಯಾವುದೇ ಧರ್ಮ ಅಥವಾ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದಲ್ಲ, ಬದಲಿಗೆ ಅದು ಎಲ್ಲಾ ನಂಬಿಕೆ ವ್ಯವಸ್ಥೆಗಳನ್ನು ಹಾಗೂ ನಂಬಿಕೆಯಿಲ್ಲದವರ ಅಗತ್ಯಗಳನ್ನು ಗೌರವಿಸುತ್ತದೆ. ಅವರು "ಮೂಲ ಮಾನವ ಮೌಲ್ಯಗಳು" ಎಂಬುದರ ಮೇಲೆ ಆಧರಿಸಿದ್ದಾರೆ, ಆದ್ದರಿಂದ ಕೆಲವೊಮ್ಮೆ ಅವರ ವಿಷಯವನ್ನು ಜಾತ್ಯತೀತ ನೀತಿಶಾಸ್ತ್ರ ಎಂದು ಕರೆಯುವ ಬದಲು, ಜೀವಶಾಸ್ತ್ರವನ್ನು ಆಧರಿಸಿದ ಮೂಲಭೂತ ಮಾನವ ಮೌಲ್ಯಗಳನ್ನು ಉತ್ತೇಜಿಸುವ ಸಮಯ ಬಂದಿದೆ ಎಂದು ಅವರು ಹೇಳುತ್ತಾರೆ. ನವಜಾತ ಶಿಶುವಿನ ಬಗ್ಗೆ ತಾಯಿಯ ಪ್ರೀತಿ ಮತ್ತು ಕಾಳಜಿಯು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಸಹ ಬಹಳ ಮೂಲಭೂತ ಮತ್ತು ಪ್ರಾಥಮಿಕವಾಗಿರುತ್ತದೆ: ಇತರರನ್ನು ನೋಡಿಕೊಳ್ಳುವುದು. ದಲೈ ಲಾಮಾ ಅವರ ಜೀವನದಲ್ಲಿಯೇ ನಾವು ಇದನ್ನು ನೋಡುತ್ತೇವೆ, ಅದಕ್ಕಾಗಿಯೇ ಅವರ ಸಂದೇಶವು ಬಹಳಾ ಹೃದಯಸ್ಪರ್ಶಿಯಾಗಿದೆ. 

ವೇಳಾಪಟ್ಟಿ 

ಪರಮಪೂಜ್ಯರು ನಂಬಲಾಗದಂತಹ ವೇಳಾಪಟ್ಟಿಯೊಂದಿಗೆ ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ, ವಿಶೇಷವಾಗಿ ನೀವು 2013 ರಲ್ಲಿ, ಅವರಿಗೆ 78 ವರ್ಷ ವಯಸ್ಸಾಗಿದೆ ಎಂಬುದನ್ನು ಪರಿಗಣಿಸಿದಾಗ. ಅವರು ದೀರ್ಘವಾದ ವಿಶ್ವ ಪ್ರಯಾಣದಲ್ಲಿ ತೊಡಗುತ್ತಾರೆ, ಆಗಾಗ್ಗೆ ಒಂದು ಸ್ಥಳದಲ್ಲಿ ಒಂದು ದಿನ ಮಾತ್ರ ಇರುತ್ತಾರೆ. ಅವರ ವೇಳಾಪಟ್ಟಿಗಳು ಕ್ರೂರವಾಗಿವೆ. ನಾನು ಪರಮಪೂಜ್ಯರೊಂದಿಗೆ ಸಂಪರ್ಕಕಾರರಾಗಿ, ಅನುವಾದಕರಾಗಿ ಪ್ರಯಾಣಿಸಿದ್ದೇನೆ, ಆದ್ದರಿಂದ ಆ ವೇಳಾಪಟ್ಟಿ ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ಪ್ರತಿದಿನ ಹಲವಾರು ಉಪನ್ಯಾಸಗಳು ಇರುತ್ತವೆ, ನಂತರ ಪತ್ರಿಕಾಗೋಷ್ಠಿಗಳು ಮತ್ತು ವೈಯಕ್ತಿಕ ಖಾಸಗಿ ಸಭೆಗಳು ಇರುತ್ತವೆ. ಅವರಿಗೆ ತಿನ್ನಲು ಸಮಯವೇ ಇರುವುದಿಲ್ಲ. ಸಮಯ ವಲಯ ಬದಲಾವಣೆಗಳು ಇತ್ಯಾದಿಗಳನ್ನು ಲೆಕ್ಕಿಸದೆ ಅವರು ಪ್ರತಿದಿನ ಬೆಳಿಗ್ಗೆ 3:30 ಕ್ಕೆ ಎದ್ದು ಸುಮಾರು ನಾಲ್ಕು ಗಂಟೆಗಳ ಕಾಲ ಆಳವಾದ ಧ್ಯಾನಾಭ್ಯಾಸ ಮಾಡುತ್ತಾರೆ. ಅವರ ಶಕ್ತಿ ಬಹಳಾ ಪ್ರಬಲವಾಗಿದೆ ಮತ್ತು ಅವರು ಯಾವಾಗಲೂ ಹಾಸ್ಯದಿಂದ ಮತ್ತು ಅವರು ಭೇಟಿಯಾಗುವ ಪ್ರತಿಯೊಬ್ಬರ ಬಗ್ಗೆ ಕಾಳಜಿಯಿಂದ ತುಂಬಿರುತ್ತಾರೆ. ಅವರು ಯಾರನ್ನು ಭೇಟಿಯಾದರೂ, ಈ ವ್ಯಕ್ತಿಯನ್ನು ಭೇಟಿಯಾಗಲು ಅವರು ಸಂಪೂರ್ಣವಾಗಿ ಸಂತೋಷಪಡುತ್ತಾರೆ ಎಂಬುದನ್ನು ನೋಡುವುದು ಮತ್ತು ಗಮನಿಸುವುದು ನಿಜವಾಗಿಯೂ ಅದ್ಭುತವಾಗಿದೆ: "ಇಲ್ಲಿದ್ದಾನೆ ಇನ್ನೊಬ್ಬ ಮನುಷ್ಯ, ಎಷ್ಟು ಅದ್ಭುತದ ವಿಷಯ!" 

ಪ್ರೀತಿ 

ಬೌದ್ಧಧರ್ಮದಲ್ಲಿ, ನಾವು ಈ ಹೃದಯಸ್ಪರ್ಶಿ ಪ್ರೀತಿಯ ಬಗ್ಗೆ ಮಾತನಾಡುತ್ತೇವೆ, ನೀವು ಯಾರನ್ನಾದರೂ ಭೇಟಿಯಾದಾಗ, ಅದು ನಿಮ್ಮ ಹೃದಯವನ್ನು ಸಹೃದಯತೆಯಿಂದ ತುಂಬುತ್ತದೆ, ನೀವು ಅವರನ್ನು ಭೇಟಿಯಾಗಲು ಬಹಳಾ ಸಂತೋಷಪಡುತ್ತೀರಿ ಮತ್ತು ನೀವು ನಿಜವಾಗಿಯೂ ಅವರ ಕಲ್ಯಾಣದ ಬಗ್ಗೆ ಕಾಳಜಿ ವಹಿಸುತ್ತೀರಿ. ದಲೈ ಲಾಮಾ ಅವರ ಸಂವಹನದಲ್ಲಿ, ಜನಸಂದಣಿಯ ಮೂಲಕ ಅಥವಾ ಯಾವುದೇ ರೀತಿಯಲ್ಲಿ ನಡೆದುಕೊಂಡು ಹೋಗುವುದರಲ್ಲಿ, ಅವರು ಜನರನ್ನು ನೋಡುವ ರೀತಿಯಲ್ಲಿ ಮತ್ತು ಅವರು ನೋಡುವ ಪ್ರತಿಯೊಬ್ಬ ವ್ಯಕ್ತಿಗೆ ಅವರು ತಮ್ಮ ಸಂಪೂರ್ಣ ಗಮನವನ್ನು ನೀಡುವ ರೀತಿಯಲ್ಲಿ ನೀವು ಇದನ್ನು ನೋಡಬಹುದು. ಅವರು ನಿಜವಾಗಿಯೂ ಇತರರ ಕಲ್ಯಾಣದಲ್ಲಿ ಮತ್ತು ಎಲ್ಲರ ಕಲ್ಯಾಣದಲ್ಲಿ ಸಮಾನವಾಗಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಇದು ನಿಜವಾಗಿಯೂ ಸಂವಹಿಸುತ್ತದೆ. ಆದ್ದರಿಂದ ಮಾನವ ಮೌಲ್ಯಗಳನ್ನು, ಜಾತ್ಯತೀತ ನೀತಿಶಾಸ್ತ್ರವನ್ನು ಉತ್ತೇಜಿಸುವ ಈ ಸಂಪೂರ್ಣ ಕಲ್ಪನೆಯು ಎಲ್ಲರಿಗೂ ಉತ್ತಮ ಪ್ರಯೋಜನಕಾರಿಯಾಗಿರುತ್ತದೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ಕೇವಲ ಕಿರಿದಾದ "ಬೌದ್ಧ" ರೀತಿಯಲ್ಲಿ ಯೋಚಿಸುತ್ತಿಲ್ಲ. ಪ್ರಪಂಚದಾದ್ಯಂತದ ಶಿಕ್ಷಣ ವ್ಯವಸ್ಥೆಗಳಲ್ಲಿ ಮಕ್ಕಳಿಗೆ ಪ್ರಾಮಾಣಿಕತೆ ಮತ್ತು ದಯೆಯಿಂದ ಇರುವುದರ ಪ್ರಯೋಜನಗಳನ್ನು ಮತ್ತು ಜಗತ್ತಿಗೆ ಬಹಳ ಪ್ರಯೋಜನಕಾರಿಯಾದ ಎಲ್ಲಾ ಇತರ ಮೂಲಭೂತ ಮಾನವ ಮೌಲ್ಯಗಳನ್ನು ಕಲಿಸುವ ಕೆಲವು ಬೋಧನೆಗಳನ್ನು ಹೇಗೆ ಪರಿಚಯಿಸುವುದು ಎಂಬುದರ ಬಗ್ಗೆ ಅವರು ಬಹಳಾ ಕಾಳಜಿ ವಹಿಸುತ್ತಾರೆ. 

ಧಾರ್ಮಿಕ ಸಾಮರಸ್ಯ 

ಧಾರ್ಮಿಕ ಗುಂಪುಗಳ ನಡುವಿನ ವಿವಾದಗಳಿಂದಾಗಿ ಜಗತ್ತಿನಲ್ಲಿ ತುಂಬಾ ತೊಂದರೆಗಳು ಉಂಟಾಗುತ್ತವೆ. ಅಪನಂಬಿಕೆ ಇದೆ, ಭಯವಿದೆ ಮತ್ತು ಇದೆಲ್ಲವೂ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಧಾರ್ಮಿಕ ಸಾಮರಸ್ಯದ ವಿಷಯದಲ್ಲಿ, ನಮಗೆ ನಿಜವಾಗಿಯೂ ಬೇಕಾಗಿರುವುದು ಶಿಕ್ಷಣ, ಜಾತ್ಯತೀತ ನೀತಿಶಾಸ್ತ್ರದಲ್ಲಿ ಮಾತ್ರವಲ್ಲ, ಪರಸ್ಪರರ ಬಗೆಗಿರುವ ಶಿಕ್ಷಣ ಎಂದು ಪರಮಪೂಜ್ಯರು ಹೇಳುತ್ತಾರೆ. ನಾವು ನಿಜವಾಗಿಯೂ ಭಯಪಡುವುದು ಅಜ್ಞಾತದ ಬಗ್ಗೆ, ಮತ್ತು ಈ ಅಜ್ಞಾತ ಗುಂಪುಗಳು ಮತ್ತು ಧರ್ಮಗಳ ಮೇಲೆ, ನಾವು ಒಂದು ರೀತಿಯ ಕಲ್ಪನೆಯನ್ನು ಪ್ರಕ್ಷೇಪಿಸುತ್ತೇವೆ. ಅವರು ಹೇಳುತ್ತಾರೆ, ಅವರು ಭಾಗವಹಿಸುವ ಅನೇಕ ಅಂತಃಪ್ರಜ್ಞೆಗಳಲ್ಲಿ ಸಂವಾದಗಳು ನಡೆಯುತ್ತವೆ, ಜನರು ಒಟ್ಟುಗೂಡುತ್ತಾರೆ ಮತ್ತು ಪರಸ್ಪರ ನಗುತ್ತಾರೆ ಮತ್ತು ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಾರೆ, ನಂತರ ಕೆಲವು ಪ್ರಾರ್ಥನೆಗಳು ಅಥವಾ ಮೌನ ಧ್ಯಾನ ಇರುತ್ತದೆ. ಇದೆಲ್ಲವೂ ಚೆನ್ನಾಗಿದೆ, ಆದರೆ ಹೆಚ್ಚು ಉಪಯೋಗವಿಲ್ಲ. "ಸರಿ, ನಾವೆಲ್ಲರೂ ಒಂದೇ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ, ನಾವೆಲ್ಲರೂ ಒಂದೇ" ಎಂದು ಹೇಳುವುದು ಮತ್ತು ಯಾವಾಗಲೂ ಹೋಲಿಕೆಗಳನ್ನು ಎತ್ತಿ ತೋರಿಸುವುದು ನಿಜವಾಗಿಯೂ ಪರಸ್ಪರರ ಬಗ್ಗೆ ಕಲಿಯಲು ಸಹಾಯ ಮಾಡುವುದಿಲ್ಲ. 

ಈ ವರ್ಷದ ಜೂನ್‌ನಲ್ಲಿ, ಪರಮಪೂಜ್ಯರು ಕೆಲವು ಸೂಫಿ ಗುರುಗಳೊಂದಿಗೆ ಸಭೆ ನಡೆಸಿದರು, ಮತ್ತು ಅವರು ಹೋಲಿಕೆಗಳನ್ನು ಮಾತ್ರವಲ್ಲದೆ ವ್ಯತ್ಯಾಸಗಳ ಬಗ್ಗೆಯೂ ಕಲಿಯಲು ಬಯಸುವುದಾಗಿ ಅವರಿಗೆ ಹೇಳಿದರು. ನಮ್ಮ ವ್ಯತ್ಯಾಸಗಳ ಬಗ್ಗೆ ನಾವು ನಾಚಿಕೆಪಡಬಾರದು, ಬದಲಿಗೆ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ನಮ್ಮ ಸ್ವಂತ ಪ್ರಯತ್ನಗಳಲ್ಲಿ ಪ್ರಯೋಜನಕಾರಿಯಾಗಬಹುದಾದ ರೀತಿಯಲ್ಲಿ ನಾವು ಅವರಿಂದ ಕಲಿಯಬಹುದು ಎಂದು ಅವರು ಹೇಳಿದರು. ಎಲ್ಲಾ ಧರ್ಮಗಳು ಒಂದೇ ಗುರಿಯನ್ನು ಹೊಂದಿರುತ್ತವೆ, ಅದುವೇ ಅನುಸರಿಸುವವರಿಗೆ ಸಂತೋಷದ ಜೀವನವನ್ನು ತರುವುದು ಎಂದು ಪರಮಪೂಜ್ಯರು ಹೇಳುತ್ತಾರೆ. ಆದಾಗ್ಯೂ, ಇದನ್ನು ಸಾಧಿಸಲು, ಬಹಳಷ್ಟು ವಿಭಿನ್ನ ವಿಧಾನಗಳಿವೆ, ಏಕೆಂದರೆ ಜನರು ತುಂಬಾ ಭಿನ್ನವಾಗಿರುತ್ತಾರೆ. 

ಅವರು ಹೇಳುತ್ತಾರೆ, “ನಾವೆಲ್ಲರೂ ನಮ್ಮ ಅನುಯಾಯಿಗಳಿಗೆ ಪ್ರೀತಿ, ದಯೆ ಇತ್ಯಾದಿಗಳನ್ನು ಬೆಳೆಸಿಕೊಳ್ಳಲು ಕಲಿಸಲು ಪ್ರಯತ್ನಿಸುತ್ತಿದ್ದರೆ, ನೀವು ಯಾವ ವಿಧಾನವನ್ನು ಬಳಸುತ್ತೀರಿ? ನಾವು ಯಾವ ವಿಧಾನವನ್ನು ಬಳಸುತ್ತೇವೆ? ಇದು ನಾವು ನಿಮ್ಮಿಂದ ಕಲಿಯಬಹುದಾದ ವಿಷಯ, ವ್ಯತ್ಯಾಸಗಳನ್ನು ನೋಡುವುದು ಮತ್ತು ಅವುಗಳನ್ನು ಹೊಸದನ್ನು ಕಲಿಯುವ ಅವಕಾಶಗಳಾಗಿ ಗೌರವಿಸುವುದು. ಪ್ರತಿಯೊಂದು ಧರ್ಮದ ಅತ್ಯಂತ ಗಂಭೀರ ಸಾಧಕರು ಒಟ್ಟಾಗಿ ಸೇರಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಭೆಗಳನ್ನು ನಡೆಸುವುದು ಒಳ್ಳೆಯದು, ದೊಡ್ಡ ಸಾರ್ವಜನಿಕ ಪ್ರೇಕ್ಷಕರಿಗಾಗಿ ಅಲ್ಲ, ಬದಲಿಗೆ ನಾವು ನಿಜವಾಗಿಯೂ ಗಂಭೀರವಾದ ಸಾಧಕರ ಮಟ್ಟದಲ್ಲಿ ಮಾತನಾಡುತ್ತಿದ್ದೇವೆ. ಇದು ಬಹಳಾ ಪ್ರಯೋಜನಕಾರಿಯಾಗಿರುತ್ತದೆ.” 

ವಿಜ್ಞಾನ 

ಅವರ ಪ್ರಾಥಮಿಕ ಬದ್ಧತೆಯು ಎಲ್ಲರಿಗೂ ಪ್ರಯೋಜನವನ್ನು ನೀಡುವುದಾಗಿದ್ದರೂ, ಟಿಬೆಟಿಯನ್ ಜನರಿಗಾಗಿ ನಿರ್ದಿಷ್ಟ ಜವಾಬ್ದಾರಿ ಇದ್ದರೂ ಮತ್ತು ಬೌದ್ಧಧರ್ಮದ ಟಿಬೆಟಿಯನ್ ಸಂಪ್ರದಾಯಗಳ ಬಗ್ಗೆ ನಿರ್ದಿಷ್ಟ ಜವಾಬ್ದಾರಿಯಿದ್ದರೂ, ಕೇವಲ ಇವು ಮಾತ್ರ ಅವರ ಕಾಳಜಿಯಲ್ಲ. ಚಿಕ್ಕ ವಯಸ್ಸಿನಿಂದಲೂ, ಪರಮಪೂಜ್ಯರು ವಿಜ್ಞಾನ, ಯಂತ್ರಶಾಸ್ತ್ರ ಇತ್ಯಾದಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿದ್ದಾರೆ. ಅವರು 1980 ರ ದಶಕದ ಆರಂಭದಿಂದಲೂ ವಿಜ್ಞಾನಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಅವರಿಂದ ನಿಜವಾಗಿಯೂ ಕಲಿಯಲು ಬಯಸುತ್ತಾರೆ. 

ಬೌದ್ಧ ಬೋಧನೆಗಳಲ್ಲಿ ನಾವು ಕಂಡುಕೊಳ್ಳುವ ವಿಷಯಗಳಿಗೆ, ಉದಾಹರಣೆಗೆ ಬ್ರಹ್ಮಾಂಡದ ವಿವರಣೆ, ಬ್ರಹ್ಮಾಂಡ ಹೇಗೆ ಪ್ರಾರಂಭವಾಯಿತು ಇತ್ಯಾದಿಗಳಿಗೆ ವಿರುದ್ಧವಾದ ಏನನ್ನಾದರೂ ವಿಜ್ಞಾನಿಗಳು ಮಾನ್ಯವಾಗಿ ಪ್ರದರ್ಶಿಸಲು ಸಾಧ್ಯವಾದರೆ, ಅದನ್ನು ಬೌದ್ಧ ಬೋಧನೆಗಳಿಂದ ಕೈಬಿಡುವುದು ಸಂಪೂರ್ಣವಾಗಿ ಸರಿ ಎಂದು ಅವರು ಹೇಳಿದ್ದರು. ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ, ವಿವಿಧ ರಾಸಾಯನಿಕ ವಸ್ತುಗಳು ಮತ್ತು ಮುಂತಾದವುಗಳ ಬಗ್ಗೆ ಪಾಶ್ಚಿಮಾತ್ಯ ವೈಜ್ಞಾನಿಕ ತಿಳುವಳಿಕೆಯು ಬೌದ್ಧ ತಿಳುವಳಿಕೆಗೆ ಉತ್ತಮ ಪೂರಕವಾಗಿರುತ್ತದೆ. 

ಅಂತೆಯೇ, ಬೌದ್ಧಧರ್ಮವು ಬೌದ್ಧ ವಿಜ್ಞಾನ, ಬೌದ್ಧ ಜ್ಞಾನ ಮತ್ತು ಬೌದ್ಧ ತತ್ತ್ವಶಾಸ್ತ್ರದ ವರ್ಗಗಳಿಂದ ಬರುವ ವಿಜ್ಞಾನಿಗಳೊಂದಿಗೆ ಹಂಚಿಕೊಳ್ಳಬಹುದಾದ ಅಪಾರ ಜ್ಞಾನವನ್ನು ಹೊಂದಿದೆ. ಉದಾಹರಣೆಗೆ, ಬೌದ್ಧಧರ್ಮವು ಭಾವನೆಗಳ ವಿವರವಾದ ನಕ್ಷೆಯನ್ನು ಒದಗಿಸುತ್ತದೆ - ಭಾವನೆಗಳ ಸಂಪೂರ್ಣ ಆಂತರಿಕ ಪ್ರಪಂಚವು ಹೇಗೆ ಕಾರ್ಯನಿರ್ವಹಿಸುತ್ತದೆ, ಈ ಭಾವನೆಗಳನ್ನು ಹೇಗೆ ಎದುರಿಸುವುದು ಇತ್ಯಾದಿ. ಬೌದ್ಧ ವಿಶ್ಲೇಷಣೆಯು ಬಹಳ ವೈಜ್ಞಾನಿಕವಾಗಿ ಸಂಘಟಿತವಾದ ಅವಲೋಕನವನ್ನು ಒದಗಿಸುತ್ತದೆ. ಇದು ಪಾಶ್ಚಿಮಾತ್ಯ ವಿಜ್ಞಾನಿಗಳಿಗೂ ಹೆಚ್ಚಿನ ಉಪಯೋಗವಾಗಬಹುದು. ಮಠಗಳಲ್ಲಿ, ಪರಮಪೂಜ್ಯರು ವಿಜ್ಞಾನದ ಅಧ್ಯಯನವನ್ನು ಸ್ಥಾಪಿಸಿದ್ದಾರೆ, ಅದನ್ನು ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ಪಠ್ಯಕ್ರಮಕ್ಕೆ ಸೇರಿಸಿದ್ದಾರೆ. ವಿಜ್ಞಾನದ ವಿವಿಧ ಪಠ್ಯಪುಸ್ತಕಗಳನ್ನು ಇಂಗ್ಲಿಷ್‌ನಿಂದ ಟಿಬೆಟಿಯನ್‌ಗೆ ಅನುವಾದಿಸಲಾಗಿದೆ. ಈ ರೀತಿಯಲ್ಲಿ, ಪ್ರಮುಖ ವಿಶ್ವ ಧರ್ಮದ ನಾಯಕರಾಗಿರುವ ಅವರು ನಂಬಲಾಗದಷ್ಟು ಮುಕ್ತ ಮನಸ್ಸಿನವರಾಗಿದ್ದಾರೆ. 

ಇತರ ಸಂಪ್ರದಾಯಗಳತ್ತ ಕೈಬಳಸುವುದು 

ಪರಮಪೂಜ್ಯರು ಇಸ್ಲಾಮಿಕ್ ಜಗತ್ತನ್ನು ತಲುಪಲು ಬಯಸುತ್ತಾರೆ, ಆದ್ದರಿಂದ ಅವರು ನನ್ನ ಸ್ವಂತ ಬೌದ್ಧ ದಾಖಲೆಗಳಲ್ಲಿ ಮೂಲಭೂತ ಬೌದ್ಧ ಬೋಧನೆಗಳು ಮತ್ತು ಮೂಲಭೂತ ಮಾನವ ಮೌಲ್ಯಗಳು, ನೀತಿಶಾಸ್ತ್ರ ಇತ್ಯಾದಿಗಳ ಸಾಮಾನ್ಯ ಸಂದೇಶವನ್ನು ಅರೇಬಿಕ್ ಮತ್ತು ಇತರ ಪ್ರಮುಖ ಇಸ್ಲಾಮಿಕ್ ಭಾಷೆಗಳಿಗೆ ಅನುವಾದಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಇದು ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ, ಇಸ್ಲಾಂ ಧರ್ಮದ ರಾಕ್ಷಸೀಕರಣ ವಿಪರೀತವಾಗಿ ನಡೆಯುತ್ತಿದೆ, ಇದು ಬಹಳಾ ದುರದೃಷ್ಟಕರವಾದ ವಿಷಯ. ಅವರನ್ನು ಜಗತ್ತಿನಲ್ಲಿ ಸೇರಿಸುವುದು ಬಹಳ ಮುಖ್ಯ, ಮತ್ತು ಅವರನ್ನು ಬೆದರಿಕೆ ಎಂದು ಪರಿಗಣಿಸಿ ಹೊರಗಿಡಬಾರದು. ಬೌದ್ಧ ನಂಬಿಕೆಗಳ ಸ್ಪಷ್ಟ ವಿವರಣೆಗಳನ್ನು ನಾವು ಅವರಿಗೆ ಒದಗಿಸಬೇಕಾಗಿದೆ, ಅವರನ್ನು ಪರಿವರ್ತಿಸಲು ಅಲ್ಲ, ಬದಲಿಗೆ ಅವರೂ ನಮ್ಮೊಂದಿಗೆ ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮಾಡಲು. ಮತ್ತೊಮ್ಮೆ, ಶಿಕ್ಷಣವು ತಿಳುವಳಿಕೆ ಮತ್ತು ಸ್ನೇಹವನ್ನು ಬೆಳೆಸುವ ಮಾರ್ಗವಾಗಿದೆ. 

ಬೌದ್ಧಧರ್ಮದೊಳಗೆ, ಟಿಬೆಟ್, ಚೀನಾ, ಜಪಾನ್ ಮತ್ತು ಇತರ ದೇಶಗಳಲ್ಲಿ ಆಚರಿಸಲಾಗುವ ಮಹಾಯಾನ ಸಂಪ್ರದಾಯ ಮತ್ತು ಆಗ್ನೇಯ ಏಷ್ಯಾದಲ್ಲಿ ಆಚರಿಸಲಾಗುವ ಥೆರವಾದ ಸಂಪ್ರದಾಯಗಳಿವೆ. ದುರದೃಷ್ಟವಶಾತ್, ಮತ್ತು ಬಹುಶಃ ಅನೇಕರಿಗೆ ಆಶ್ಚರ್ಯಕರವಾಗಿ, ಎರಡೂ ಕಡೆಯವರು ಪರಸ್ಪರರ ಬಗ್ಗೆ ಬಹಳ ಕಡಿಮೆ ಜ್ಞಾನವನ್ನು ಹೊಂದಿದ್ದಾರೆ. ಬಹಳ ವಿವರವಾದ ಹೋಲಿಕೆಯನ್ನು ಕೈಗೊಳ್ಳಲು ಅಮೇರಿಕನ್ ಬೌದ್ಧ ಸನ್ಯಾಸಿನಿಯೊಬ್ಬರನ್ನು ಅವರು ನಿಯೋಜಿಸಿದ್ದಾರೆ ಮತ್ತು ಪ್ರಾಯೋಜಿಸಿದ್ದಾರೆ. ಪ್ರತಿಯೊಂದು ಆಚರಣೆಯ ಮಹಾಯಾನ ಆವೃತ್ತಿ ಎಂದರೇನು ಮತ್ತು ಥೆರವಾದ ಆವೃತ್ತಿ ಎಂದರೇನು? ಈ ಪ್ರಮುಖ ಜ್ಞಾನವನ್ನು ಹಂಚಿಕೊಳ್ಳಲು ಇದನ್ನು ಆಗ್ನೇಯ ಏಷ್ಯಾದ ಭಾಷೆಗಳಿಗೆ ಅನುವಾದಿಸಲಾಗುತ್ತದೆ. 

ಮಹಿಳೆಯರಿಗೆ ಸನ್ಯಾಸತ್ವ

ಟಿಬೆಟ್‌ನಲ್ಲಿ ಸಂಪೂರ್ಣವಾದ ಸನ್ಯಾಸಿಗಳು ಇದ್ದರೂ, ಸನ್ಯಾಸಿನಿಯರ ದೀಕ್ಷೆಯ ವಂಶಾವಳಿಯು ಭಾರತದಿಂದ ಹಿಮಾಲಯವನ್ನು ದಾಟಲು ಸಾಧ್ಯವಾಗಲಿಲ್ಲ. ಇದು ವಿವಿಧ ಕಾರಣಗಳಿಂದಾಗಿದೆ, ಮುಖ್ಯವಾಗಿ ಭೌಗೋಳಿಕ ಕಾರಣಗಳಿಂದಾಗಿ; ಪ್ರಾಚೀನ ಕಾಲದಲ್ಲಿ ಭಾರತೀಯ ಸನ್ಯಾಸಿನಿಯರ ಇಡೀ ಗುಂಪಿಗೆ ಟಿಬೆಟ್‌ಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುವುದು ಬಹಳಾ ಕಷ್ಟಕರವಾಗಿತ್ತು. ಹೀಗಾಗಿ, ವಂಶಾವಳಿಯು ಮುರಿದುಹೋಯಿತು, ಏಕೆಂದರೆ ಹತ್ತು ಸನ್ಯಾಸಿನಿಯರ ಸಂಪೂರ್ಣ ಗುಂಪೊಂದು ಅದನ್ನು ರವಾನಿಸಬೇಕಾಗಿತ್ತು. 

ಮತ್ತೊಮ್ಮೆ, ಸಂಪೂರ್ಣವಾಗಿ ಸನ್ಯಾಸಿನಿಯಾಗಲು ಬಯಸುವ ಮಹಿಳೆಯರು ಟಿಬೆಟಿಯನ್ ಸಂಪ್ರದಾಯದಲ್ಲಿ ಹಾಗೆ ಮಾಡಲಾಗುವಂತೆ, ದಲೈ ಲಾಮಾ ಅವರು ಈ ವಂಶಾವಳಿಯನ್ನು ಪುನರಾರಂಭಿಸುವುದು ಹೇಗೆ ಸಾಧ್ಯ ಎಂದು ನೋಡಲು ಅಧ್ಯಯನಗಳು ಮತ್ತು ಯೋಜನೆಗಳನ್ನು ಪ್ರಾಯೋಜಿಸುತ್ತಿದ್ದಾರೆ. 

ನಾನೊಬ್ಬ ಸರಳ ಸನ್ಯಾಸಿಯಷ್ಟೆ” 

ಅವರ ಅತ್ಯಂತ ಪ್ರೀತಿಯ ಗುಣವೆಂದರೆ ಅವರು ಯಾವುದೇ ಆಡಂಬರ ಅಥವಾ ದುರಹಂಕಾರವಿಲ್ಲದ ಸಂಪೂರ್ಣವಾಗಿ ನಿಷ್ಠುರ ಮತ್ತು ಸರಳ ವ್ಯಕ್ತಿ. ಅವರು ಯಾವಾಗಲೂ ತಾವು ಸರಳ ಸನ್ಯಾಸಿ, ಎಲ್ಲರಂತೆ ಸಾಮಾನ್ಯ ಮನುಷ್ಯ ಎಂದು ಹೇಳಿಕೊಳ್ಳುತ್ತಾರೆ. ಅವರು ಹೀಗೆ ಉಲ್ಲೇಖಿಸುತ್ತಾರೆ, “ನಾನು ಯಾರನ್ನಾದರೂ ಭೇಟಿಯಾದಾಗಲೆಲ್ಲಾ, ನಾನು ಅವರನ್ನು ಇನ್ನೊಬ್ಬ ಮನುಷ್ಯ ಎಂದು ಪರಿಗಣಿಸುತ್ತೇನೆ. ನಮ್ಮ ಸಂವಹನವು ಮಾನವನಿಂದ ಮಾನವನಿಗೆ ಆಗಿರುತ್ತದೆ, ಕೆಲವು ಸಾಮಾನ್ಯ ವ್ಯಕ್ತಿಯಿಂದ ದಲೈ ಲಾಮಾಗೆ ಅಲ್ಲ. ವಿದೇಶಿಯರಿಂದ ಟಿಬೆಟಿಯನ್ ಅಲ್ಲ. ಈ ದ್ವಿತೀಯಕ ವ್ಯತ್ಯಾಸಗಳಿಲ್ಲದೆ, ಪ್ರಾಥಮಿಕ ಮಟ್ಟದಲ್ಲಿ: ನಾವೆಲ್ಲರೂ ಮನುಷ್ಯರೇ.” 

ಜನರು ತಾವು ಒಂದು ರೀತಿಯ ದೇವರು, ರಾಜ ಅಥವಾ ವಿಶೇಷ ಶಕ್ತಿಗಳನ್ನು ಹೊಂದಿದ್ದಾರೆ ಎಂಬ ಕಲ್ಪನೆಯನ್ನು ಅವರು ತಕ್ಷಣವೇ ಕಡಿಮೆ ಮಾಡಲು ಬಯಸುತ್ತಾರೆ. ಅವರು ಆ ಬೃಹತಾಕಾರದ ಪ್ರೇಕ್ಷಕರ ಮುಂದೆ, ಹತ್ತಾರು ಸಾವಿರ ಜನರ ಮುಂದೆ ಬಂದಾಗ, ಅವರು ಸಂಪೂರ್ಣವಾಗಿ ನಿರಾಳವಾಗಿರುತ್ತಾರೆ, ಸಂಪೂರ್ಣವಾಗಿ ಆರಾಮವಾಗಿರುತ್ತಾರೆ. ಅವರಿಗೆ ತುರಿಕೆಯಾದರೆ, ಸಾಮಾನ್ಯ ಮನುಷ್ಯರಂತೆ ತುರಿಸಿಕೊಳ್ಳುತ್ತಾರೆ. ಅವರು ಸ್ವಯಂನ ಬಗ್ಗೆ ಯಾವುದೇ ರೀತಿಯ ಅಭದ್ರತೆಯಿಲ್ಲ ಮತ್ತು ಯಾರಿಗೂ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿಲ್ಲ. ಅವರು ಯಾವುದಾದರೂ ದೇಶದ ಅಧ್ಯಕ್ಷರನ್ನು ಭೇಟಿಯಾಗಲು ಹೋದರೆ ಮತ್ತು ಅವರು ರಬ್ಬರ್ ಸ್ಯಾಂಡಲ್ ಧರಿಸಿದ್ದರೆ, ಅವರು ಅದನ್ನೇ ಧರಿಸುತ್ತಾರೆ. ಅವರು ಯಾರನ್ನೂ ಮೆಚ್ಚಿಸಲು ಪ್ರಯತ್ನಿಸುತ್ತಿಲ್ಲ ಮತ್ತು ಅದನ್ನು ಬಯಸುವುದಿಲ್ಲ. 

ಹಾಸ್ಯ 

ಪರಮಪೂಜ್ಯರು ಹಾಸ್ಯಮಯವಾಗಿ ವಿಷಯಗಳನ್ನು ಹೇಳುವ ರೀತಿ ನಿಜಕ್ಕೂ ಅದ್ಭುತವಾಗಿದೆ, ಇತರರು ಹಾಗೆ ಮಾತನಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ಅವರು ಉಪನ್ಯಾಸ ನೀಡುತ್ತಿರುವಾಗ ಅವರು ಕುಳಿತಿದ್ದ ಆಸನವು ಬಹಳಾ ಅನಾನುಕೂಲಕರವಾದ ಕುರ್ಚಿಯಾಗಿತ್ತು. ಕೊನೆಯಲ್ಲಿ, ಅವರು ಸಂಘಟನಾ ಸಮಿತಿಗೆ ಮತ್ತು ಪ್ರೇಕ್ಷಕರಿಗೆ, ಎಲ್ಲಾ ವ್ಯವಸ್ಥೆಗಳು ಅದ್ಭುತವಾಗಿವೆ ಎಂದು ಹೇಳಿದರು, ಆದರೆ ಮುಂದಿನ ಬಾರಿ ಈ ಆಸನವು ನಿಜವಾಗಿಯೂ ಅನಾನುಕೂಲವಾಗಿರುವುದರಿಂದ ದಯವಿಟ್ಟು ಉತ್ತಮ ಆಸನವನ್ನು ಖರೀದಿಸಿ! ಎಂದು ಅವರು ಅದನ್ನು ತುಂಬಾ ಹಗುರವಾಗಿ, ಪ್ರೀತಿಯ ರೀತಿಯಲ್ಲಿ ಹೇಳಿದರು, ಯಾರೂ ಅದರಿಂದ ಮನನೊಂದಲಿಲ್ಲ, ಬದಲಾಗಿ ಎಲ್ಲರೂ ನಕ್ಕರು. ಅದೇ ರೀತಿಯಲ್ಲಿ ಅವರು ಜನರನ್ನು ಗದರಿಸಲೂ ಸಮರ್ಥರಾಗಿದ್ದಾರೆ. 

ವಾಕ್ಲಾವ್ ಹ್ಯಾವೆಲ್ ಅವರೊಂದಿಗೆ ಭೇಟಿ 

ಪರಮಪೂಜ್ಯರನ್ನು, ಜೆಕ್ ಗಣರಾಜ್ಯದ (ಆಗ ಅದು ಇನ್ನೂ ಜೆಕೊಸ್ಲೊವಾಕಿಯಾದಲ್ಲಿತ್ತು) ಮೊದಲ ಅಧ್ಯಕ್ಷರಾದ ವಾಕ್ಲಾವ್ ಹ್ಯಾವೆಲ್ ಅವರು ಆಹ್ವಾನಿಸಿದಾಗ ನಾನು ಅವರೊಂದಿಗೆ ಇದ್ದೆ. ಅವರು ಆಹ್ವಾನಿಸಿದ ಮೊದಲ ವ್ಯಕ್ತಿ ರಾಕ್ ಸ್ಟಾರ್ ಫ್ರಾಂಕ್ ಜಾಪ್ಪಾ, ಆದರೆ ಎರಡನೆಯವರು ಪರಮಪೂಜ್ಯರೇ. ಹ್ಯಾವೆಲ್ ಅವರು ತಮಗೆ ಮತ್ತು ಕ್ಯಾಬಿನೆಟ್‌ಗೆ ಧ್ಯಾನ ಮಾಡುವುದು ಹೇಗೆಂದು ಕಲಿಸಬೇಕೆಂದು ಬಯಸಿದ್ದರು, ಏಕೆಂದರೆ, "ನಮಗೆ ಅನುಭವವಿಲ್ಲ, ಸರ್ಕಾರವನ್ನು ಹೇಗೆ ನಡೆಸಬೇಕೆಂದು ನಮಗೆ ತಿಳಿದಿಲ್ಲ. ನಾವೆಲ್ಲರೂ ಒತ್ತಡದಲ್ಲಿದ್ದೇವೆ ಮತ್ತು ನಮಗೆ ನಿದ್ರೆ ಬರುತ್ತಿಲ್ಲ. ದಯವಿಟ್ಟು ನಮಗೆ ಹೇಗೆ ಶಾಂತವಾಗಬೇಕೆಂದು ಕಲಿಸಬಹುದೇ? ಇಲ್ಲದಿದ್ದರೆ ನಾವು ಎಂದಿಗೂ ಹೊಸ ದೇಶದ ಸರ್ಕಾರವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ." ಎಂದು ಹೇಳಿದರು. 

ವಾಕ್ಲಾವ್ ಹ್ಯಾವೆಲ್ ಬಹಳಾ ವಿನಮ್ರರಾಗಿದ್ದರು, ಮತ್ತು ಅವರು ಪರಮಪೂಜ್ಯರು ಮತ್ತು ಎಲ್ಲಾ ಮಂತ್ರಿಗಳನ್ನು ಪ್ರಾಗ್‌ನ ಹೊರಗಿನ ದೊಡ್ಡ ಕೋಟೆಯಾದ ಬೇಸಿಗೆ ಅರಮನೆಗೆ ಹೋಗಲು ಆಹ್ವಾನಿಸಿದರು. ಅವರು ನಿಜವಾಗಿಯೂ ಅಲ್ಲಿಗೆ ಎಂದಿಗೂ ಹೋಗಿರಲಿಲ್ಲ; ಅದು ದೊಡ್ಡದಾಗಿತ್ತು ಮತ್ತು ಎಲ್ಲರೂ ಸಭಾಂಗಣಗಳ ಮೂಲಕ ನಡೆಯುತ್ತಾ ದಾರಿ ತಪ್ಪುತ್ತಿದ್ದರು. ಅವರು ದಲೈ ಲಾಮಾಗೆ ಅನುದ್ದೇಶಿತವಾಗಿ ಹೇಳಿದರು, "ಇದು ಕಮ್ಯುನಿಸ್ಟ್ ನಾಯಕರ ವೇಶ್ಯಾಗೃಹವಾಗಿತ್ತು." ದಲೈ ಲಾಮಾ ಅವರೊಂದಿಗೆ ಮಾತನಾಡಲು ನೀವು ಬಳಸುವ ಸಾಮಾನ್ಯ ರೀತಿಯ ಭಾಷೆ ಅದು ಅಲ್ಲ, ಆದರೆ ಅವರು ಹಾಗೆ ಬಹಳಾ ಸರಳರಾಗಿದ್ದರು. ನಂತರ, ದಲೈ ಲಾಮಾ ಸೇರಿದಂತೆ ಎಲ್ಲರೂ ದೊಡ್ಡ ಕೋಣೆಗಳಲ್ಲಿ ಒಂದರ ನೆಲದ ಮೇಲೆ ಕುಳಿತರು. ಹ್ಯಾವೆಲ್ ಮತ್ತು ಅವರ ಮಂತ್ರಿಗಳು ಎಲ್ಲರೂ ಸ್ವೆಟ್ಸೂಟ್ಗಳನ್ನು ಧರಿಸಿದ್ದರು, ಮತ್ತು ಪರಮಪೂಜ್ಯರು ಅವರಿಗೆ ಶಾಂತಗೊಳಿಸಲು ಮೂಲಭೂತ ಉಸಿರಾಟ ಮತ್ತು ಶಕ್ತಿಯ ಧ್ಯಾನಗಳನ್ನು ಕಲಿಸಿದರು. 

ಸಾಮಾನ್ಯವಾಗಿ ಪರಮಪೂಜ್ಯರು ರಾತ್ರಿ ಊಟ ಮಾಡುವುದಿಲ್ಲ, ಏಕೆಂದರೆ ಅವರು ತಮ್ಮ ಸನ್ಯಾಸಿ ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಅವರು ಹೊಂದಿಕೊಳ್ಳುವ ಸ್ವಭಾವದವರು, ಮತ್ತು ಅಧ್ಯಕ್ಷ ಹ್ಯಾವೆಲ್ ಅರಮನೆಯಲ್ಲಿ ಭೋಜನವನ್ನು ಸಿದ್ಧಪಡಿಸಿದ್ದರು. ಚರ್ಚೆ ಇಂಗ್ಲಿಷ್‌ನಲ್ಲಿ ನಡೆಯಿತು ಮತ್ತು ಗಮನಾರ್ಹವಾದ ವಿಷಯವೆಂದರೆ ದಲೈ ಲಾಮಾ ಅವರು ಚೈನ್ ಸ್ಮೋಕರ್ ಆಗಿದ್ದ ಹ್ಯಾವೆಲ್ ಅವರನ್ನು ಹೇಗೆ ಗದರಿಸಿದರು ಎಂಬುದು. ಪರಮಪೂಜ್ಯರ ಪಕ್ಕದಲ್ಲಿಯೇ ಅವರು ಧೂಮಪಾನ ಮಾಡುತ್ತಿದ್ದರು; ಅದು ಸ್ವಲ್ಪ ಸರಿಯಲ್ಲ. ಅವರು ಒಂದು ದೇಶದ ಅಧ್ಯಕ್ಷರಾಗಿದ್ದರೂ ಸಹ, ಪರಮಪೂಜ್ಯರು "ನೀವು ತುಂಬಾ ಧೂಮಪಾನ ಮಾಡುತ್ತೀರಿ. ಅದು ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ ಮತ್ತು ನಿಮಗೆ ಕ್ಯಾನ್ಸರ್ ನೀಡುತ್ತದೆ, ಆದ್ದರಿಂದ ನೀವು ಅದನ್ನು ಖಂಡಿತವಾಗಿ ಕಡಿಮೆ ಮಾಡಬೇಕು!" ಎಂದು ಅವರ ಬಳಿ ದೂರಲು ಸಂಪೂರ್ಣವಾಗಿ ನಿರಾಳರಾಗಿದ್ದರು. ಇದು ನಿಜಕ್ಕೂ ಪರಮಪೂಜ್ಯರು ಅವರಿಗಾಗಿ ದಯೆ ತೋರಿಸುವುದಾಗಿತ್ತು. ಹ್ಯಾವೆಲ್ ನಂತರ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲಿದರು. ಪರಮಪೂಜ್ಯರ ಪ್ರಮುಖ ಕಾಳಜಿ ಇತರ ವ್ಯಕ್ತಿಗೆ ಯಾವುದು ಪ್ರಯೋಜನಕಾರಿಯಾಗಿದೆ ಎಂಬುದು, ಅವರ ಬಗ್ಗೆ ಇತರರು ಏನು ಯೋಚಿಸುತ್ತಾರೆ ಎನ್ನುವುದಲ್ಲ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. 

ಬುದ್ಧಿವಂತಿಕೆ ಮತ್ತು ಸ್ಮರಣೆ 

ಪರಮಪೂಜ್ಯರು ನಾನು ಭೇಟಿಯಾಗಿರುವ ಅತ್ಯಂತ ಬುದ್ಧಿವಂತ ವ್ಯಕ್ತಿ. ಅವರಿಗೆ ಸಂಪೂರ್ಣವಾದ ಛಾಯಾಗ್ರಹಣದ ಸ್ಮರಣೆ ಇದೆ. ಅವರು ಬೋಧಿಸುವಾಗ, ಎಲ್ಲಾ ವಿಭಿನ್ನ ಸಂಪ್ರದಾಯಗಳಿಂದ ಬಂದ ಬೌದ್ಧ ಬೋಧನೆಗಳ ದೊಡ್ಡ ಸಂಗ್ರಹದ ಬಗ್ಗೆ ಅವರಿಗೆ ಪಾಂಡಿತ್ಯವಿದೆ. ಅವರು ಯಾವುದೇ ಪಠ್ಯದಿಂದ ಉಲ್ಲೇಖಿಸಬಹುದು. ತಮ್ಮ ತರಬೇತಿಯಲ್ಲಿ ಟಿಬೆಟಿಯನ್ನರು, ತಾವು ಅಧ್ಯಯನ ಮಾಡುವ ವಿವಿಧ ಪ್ರಮುಖ ಪಠ್ಯಗಳನ್ನು, ಬಹುಶಃ 1000 ಪುಟಗಳು ಅಥವಾ ಏನನ್ನಾದರೂ ಕಂಠಪಾಠ ಮಾಡುತ್ತಾರೆ, ಆದರೆ ದಲೈ ಲಾಮಾ ಅವರು ಕಂಠಪಾಠ ಮಾಡಿರುವ ಎಲ್ಲಾ ವ್ಯಾಖ್ಯಾನಗಳು ನಂಬಲಾಗದವು. ಅವರು ಬೋಧಿಸುವಾಗ, ಈ ಪಠ್ಯದಿಂದ ಒಂದು ಸಣ್ಣ ಭಾಗವನ್ನು, ನಂತರ ಆ ಪಠ್ಯದಿಂದ ಒಂದು ಭಾಗವನ್ನು ಸೆಳೆಯುತ್ತಾರೆ; ಹಾಗೆ ಮಾಡುವುದು ಬಹಳಾ ಕಷ್ಟ. ಅವರ ಸ್ಮರಣೆಯು ಹೀಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಉತ್ತಮ ಬುದ್ಧಿವಂತಿಕೆಯ ಸಂಕೇತವಾಗಿದೆ: ನೀವು ವಿಷಯಗಳನ್ನು ಒಟ್ಟುಗೂಡಿಸಲು ಮತ್ತು ಎಲ್ಲವೂ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ನೋಡಲು, ಮಾದರಿಗಳನ್ನು ನೋಡಲು ಸಾಧ್ಯವಾಗುತ್ತದೆ. ಐನ್‌ಸ್ಟೈನ್‌ನಂತಹ ಜನರು e=mc2 ಎಂಬುದನ್ನು ಹೇಗೆ ಲೆಕ್ಕಾಚಾರ ಮಾಡುತ್ತಾರೆ? ಇದು ಎಲ್ಲಾ ರೀತಿಯ ವಿಷಯಗಳನ್ನು ಒಟ್ಟುಗೂಡಿಸಲು ಮತ್ತು ಮಾದರಿಯನ್ನು ಕಂಡುಹಿಡಿಯಲು ಸಾಧ್ಯವಾಗುವುದರಿಂದ. ಪರಮಪೂಜ್ಯರು ಟಿಬೆಟಿಯನ್ ಪಾಂಡಿತ್ಯದ ತಮ್ಮ ಅಪಾರ ಜ್ಞಾನದಿಂದ ಹೀಗೆ ಮಾಡಲು ಸಾಧ್ಯವಾಗುತ್ತದೆ. 

ಅವರ ಛಾಯಾಗ್ರಹಣದ ಸ್ಮರಣೆಯು ಕೇವಲ ಪಠ್ಯಗಳಿಗೆ ಮಾತ್ರವಲ್ಲ, ಜನರಿಗಾಗಿಯೂ ಇರುತ್ತದೆ ಎಂಬುದು ನನ್ನ ಮುಂದೆ ಹಲವು ಬಾರಿ ಪ್ರದರ್ಶಿಸಲ್ಪಟ್ಟಿದೆ. ಟಿಬೆಟ್‌ನಿಂದ ಬಂದ ಒಬ್ಬ ವೃದ್ಧ ಸನ್ಯಾಸಿ ಧರ್ಮಶಾಲಾಕ್ಕೆ ಭೇಟಿ ನೀಡಿದಾಗ ನಾನು ಅಲ್ಲಿದ್ದೆ, ಮತ್ತು ಪರಮಪೂಜ್ಯರು ಅವರನ್ನು ನೋಡಿದಾಗ ಹೀಗೆ ಹೇಳಿದರು, "ಓಹ್! ನನಗೆ ನಿನ್ನ ನೆನಪಿದೆ. ಮೂವತ್ತು ವರ್ಷಗಳ ಹಿಂದೆ ಭಾರತಕ್ಕೆ ಹೋಗುವ ದಾರಿಯಲ್ಲಿ ನಾವು ನಿಮ್ಮ ಮಠದಲ್ಲಿ ನಿಂತಿದ್ದೆವು ಮತ್ತು ಅಲ್ಲಿ ಒಂದು ಸಮಾರಂಭವಿತ್ತು. ನೀವು ಕಾಣಿಕೆಗಳಿರುವ ಒಂದು ತಟ್ಟೆಯನ್ನು ಎತ್ತಿಟ್ಟುಕೊಳ್ಳಬೇಕಾಗಿತ್ತು ಮತ್ತು ಅದು ತುಂಬಾ ಭಾರವಾಗಿತ್ತು ಮತ್ತು ಇಡೀ ಸಮಯದಲ್ಲಿ ಅದನ್ನು ಎತ್ತಿ ಹಿಡಿಯುವುದು ನಿಮಗೆ ನಿಜವಾಗಿಯೂ ಕಷ್ಟಕರವಾಗಿತ್ತು ಎಂದು ನನಗೆ ನೆನಪಿದೆ. ನಿಮಗೆ ನೆನಪಿದೆಯೇ?" ಇದು ನಂಬಲಾಗದಂತಿತ್ತು. ನನ್ನ ಮುಖ್ಯ ಶಿಕ್ಷಕರಾದ ಸೆರ್ಕಾಂಗ್ ರಿನ್‌ಪೋಚೆ ಪರಮಪೂಜ್ಯರ ಪ್ರಧಾನ ಶಿಕ್ಷಕರಲ್ಲಿ ಒಬ್ಬರಾಗಿದ್ದರು. ಅವರ ಬಾಲ್ಯದಲ್ಲಿ ಅವರಿಗೆ ಒಮ್ಮೆ ಮಾತ್ರ ಏನನ್ನಾದರೂ ಕಲಿಸಬೇಕಾಗಿತ್ತು ಎಂದು ಹೇಳಿದರು. ಅದನ್ನು ತಕ್ಷಣವೇ ಅರ್ಥಮಾಡಿಕೊಳ್ಳುತ್ತಿದ್ದರು ಮತ್ತು ನೆನಪಿಟ್ಟುಕೊಳ್ಳುತ್ತಿದ್ದರು. 

ಸಾಧನೆಗಳು 

ಇವರು ನಮ್ಮ ಕಾಲದ ಅತ್ಯಂತ ಮಹೋನ್ನತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಹಾಗಾದರೆ ಅವರ ಪ್ರಸ್ತುತತೆ ಏನು? ಅದು ಇದು: ಮನುಷ್ಯನಾಗಿ ಏನನ್ನೆಲ್ಲಾ ಸಾಧಿಸಬಹುದು ಎಂಬುದನ್ನು ನೋಡಿ. ಸಹಜವಾಗಿ, ಅವರು ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಲು ಬಹಳಷ್ಟು ಶ್ರಮವಹಿಸಬೇಕಾಯಿತು ಎಂದು ಅವರು ಹೇಳುತ್ತಾರೆ, ಆದರೆ ನಾವೆಲ್ಲರೂ ಇದನ್ನು ಮಾಡಬಹುದು. ಅವರು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಿ. ಭೂಮಿಯ ಮೇಲಿನ ಒಂದು ಶತಕೋಟಿಗೂ ಹೆಚ್ಚು ಜನರು ನಿಮ್ಮನ್ನು ಸಾರ್ವಜನಿಕರ ನಂಬರ್ ಒನ್ ಶತ್ರು ಎಂದು ಪರಿಗಣಿಸುವುದನ್ನು ಕಲ್ಪಿಸಿಕೊಳ್ಳಿ. ಆದರೆ ಪರಮಪೂಜ್ಯರು ಅದನ್ನು ಬದಿಗೆ ತಳ್ಳುತ್ತಾರೆ ಏಕೆಂದರೆ ಅದು ನಿಜವಲ್ಲ, ಅವರ ತಲೆಯ ಮೇಲೆ ಕೊಂಬುಗಳಿಲ್ಲ ಎಂದು ಅವರಿಗೆ ತಿಳಿದಿದೆ. ಆದರೆ ಸನ್ಯಾಸಿಗಳ ನಿಲುವಂಗಿಯಲ್ಲಿರುವ ರಾಕ್ಷಸ ಎಂಬ ಹಣೆಪಟ್ಟಿಯನ್ನು ನೀವು ಹೇಗೆ ನಿಭಾಯಿಸುತ್ತೀರಿ? 

ಅವರು ಎಂದಿಗೂ ಖಿನ್ನತೆಗೆ ಒಳಗಾಗುವುದಿಲ್ಲ. ಅವರು ಅದನ್ನು ಎಂದಿಗೂ ಅನುಭವಿಸಿಲ್ಲ, ಮತ್ತು ಅದನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ತುಂಬಾ ಕಷ್ಟ ಎಂದು ಅವರು ಹೇಳಿದ್ದಾರೆ. ಕಡಿಮೆ ಸ್ವಾಭಿಮಾನ ಅಥವಾ ಸ್ವಯಂ-ದ್ವೇಷ ಹೊಂದಿರುವ ಜನರ ಕಲ್ಪನೆಯ ಬಗ್ಗೆ ತಾನು ಎಂದಿಗೂ ಕೇಳಿಲ್ಲ ಅಥವಾ ಯೋಚಿಸಿಲ್ಲ ಎಂದು ಅವರು ಒಪ್ಪಿಕೊಂಡ ನೆನಪು ನನಗಿದೆ. ಅವರು ಅದನ್ನು ಎಂದಿಗೂ ಎದುರಿಸಿಲ್ಲ ಅಥವಾ ಸ್ವತಃ ಅನುಭವಿಸಿಲ್ಲ. 

ಅವರು ಬಹಳಾ ಆಶಾವಾದಿಯಾಗಿದ್ದರೂ, ಅದೇ ಸಮಯದಲ್ಲಿ ಸನ್ನಿವೇಶಗಳ ವಾಸ್ತವದೊಂದಿಗೆ ವ್ಯವಹರಿಸುತ್ತಾರೆ. ನಮ್ಮ ಪ್ರಸ್ತುತದ ಸನ್ನಿವೇಶಗಳಲ್ಲಿ, ಅವರು ಹೀಗೆ ಹೇಳುತ್ತಾರೆ, "ಪ್ರಪಂಚದ ಸಮಸ್ಯೆಗಳನ್ನು ಮಾನವಕುಲವೇ ಸೃಷ್ಟಿಸಿದೆ ಮತ್ತು ಮಾನವಕುಲವೇ ಅವುಗಳನ್ನು ತೊಡೆದುಹಾಕಬಹುದು." ಅವರು ಮೂಲಭೂತ ಮಾನವ ಮೌಲ್ಯಗಳನ್ನು ಉತ್ತೇಜಿಸುವ ಮೂಲಕ, ಮಕ್ಕಳ ಶಿಕ್ಷಣದಲ್ಲಿ ನೈತಿಕತೆಯನ್ನು ತರುವ ಮೂಲಕ ಮತ್ತು ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳ ನಡುವೆ ಧಾರ್ಮಿಕ ಸಾಮರಸ್ಯವನ್ನು ತರಲು ಪ್ರಯತ್ನಿಸುವ ಮೂಲಕ ಅವುಗಳ ನಿರ್ಮೂಲನೆಗೆ ಕೊಡುಗೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಸಂಪೂರ್ಣ ನಮ್ರತೆ ಮತ್ತು ಸಂಪೂರ್ಣವಾಗಿ ಭೂಮಿಗೆ ಸಂಬಂಧಿಸಿದ ಮನೋಭಾವವನ್ನು ಕಾಪಾಡಿಕೊಳ್ಳುವಾಗ, ಅವರು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಬಹಳಾ ಪ್ರಿಯವಾದದ್ದು. ಅದರ ಜೊತೆಗೆ ಅವರ ಹಾಸ್ಯ ಮತ್ತು ನಂಬಲಾಗದ ಶಕ್ತಿಯನ್ನು ಸೇರಿಸಿ, ಇದು ಬಹಳಾ ಅದ್ಭುತವಾದ ವಿಷಯ. 

ಅವರ ಕಾರ್ಯದರ್ಶಿಗಳು ಮತ್ತು ಸಲಹೆಗಾರರು ಯಾವಾಗಲೂ ಅವರಿಗೆ ವಿಶ್ರಾಂತಿ ಪಡೆಯಬೇಕು ಮತ್ತು ಹೆಚ್ಚು ಪ್ರಯಾಣಿಸಬಾರದು ಎಂದು ಹೇಳುತ್ತಿರುತ್ತಾರೆ. ಅವರು ಪ್ರಯಾಣಿಸುವಾಗ, ದಿನದ ಪ್ರತಿ ನಿಮಿಷವೂ ಡಜನ್ಗಟ್ಟಲೆ ಸಭೆಗಳು, ಆಗಾಗ್ಗೆ ಪ್ರತಿದಿನ ವಿಮಾನ ಪ್ರಯಾಣಗಳಿಂದ ತುಂಬಿರುತ್ತವೆ. ಆದರೆ ಅವರು ಯಾವಾಗಲೂ ಹೇಳುತ್ತಾರೆ, "ಇಲ್ಲ. ನನಗೆ ಇದನ್ನು ಮಾಡಲು ಶಕ್ತಿ ಇದ್ದರೂ, ನಾನು ಹೀಗೆಯೇ ಪ್ರಯಾಣಿಸುತ್ತೇನೆ, ಏಕೆಂದರೆ ಇದು ಇತರರಿಗೆ ಪ್ರಯೋಜನಕಾರಿಯಾಗಿದೆ." 

ಅವರ ಪ್ರಸ್ತುತತೆಯೆಂದರೆ ಅವರು ನಮಗೆ ಭರವಸೆ ನೀಡುತ್ತಾರೆ. ಅವರು ತುಂಬಾ ಪ್ರಾಮಾಣಿಕರು ಮತ್ತು ಬಹಳಾ ಶ್ರಮಿಸುತ್ತಾರೆ. ಅವರು ಮಾನವಕುಲದ ಸುಧಾರಣೆಯ ಬಗ್ಗೆ ಮಾತನಾಡುವಾಗ, ಅವರು ಸಂಪೂರ್ಣವಾಗಿ ವಾಸ್ತವಿಕ ಮತ್ತು ಸಾಧಿಸಬಹುದಾದ ಪದಗಳಲ್ಲಿ ಮಾತನಾಡುತ್ತಾರೆ: ಶಿಕ್ಷಣ, ಪರಸ್ಪರ ತಿಳುವಳಿಕೆ, ನೀತಿಶಾಸ್ತ್ರ. ಇವು ಪವಾಡದ ವಿಧಾನಗಳಲ್ಲ; ಇವು ನಾವು ನಿಜವಾಗಿಯೂ ಸಾಧಿಸಬಹುದಾದ ವಿಷಯಗಳು. ಪರಮಪೂಜ್ಯ ದಲೈ ಲಾಮಾ ನಮ್ಮ ದೇಶಕ್ಕೆ ಅಥವಾ ನಮ್ಮ ನಗರಕ್ಕೆ ಬಂದಾಗ, ಅವರ ವೈಯಕ್ತಿಕ ದರ್ಶನವನ್ನು ಅನುಭವಿಸುವುದು ನಿಜವಾಗಿಯೂ ಬಹಳ ಅದ್ಭುತವಾದ ಮತ್ತು ಯೋಗ್ಯವಾದ ಅವಕಾಶವಾಗಿರುತ್ತದೆ. 

ಪ್ರಶ್ನೆಗಳು ಮತ್ತು ಉತ್ತರಗಳು 

ಪರಮಪೂಜ್ಯರು ತಮ್ಮ ಎಲ್ಲಾ ಆಧ್ಯಾತ್ಮಿಕ ಕರ್ತವ್ಯಗಳನ್ನು ಹಾಗೂ ನಿರಾಶ್ರಿತರ ಜೀವನವನ್ನು ಸಂಘಟಿಸುವಂತಹ ಪ್ರಾಯೋಗಿಕ ವಿಷಯಗಳನ್ನು ಸಂಯೋಜಿಸುವುದನ್ನು ಹೇಗೆ ನಿರ್ವಹಿಸುತ್ತಾರೆ? 

ಅವರು ಸಾಕಷ್ಟು ಅಧ್ಯಯನ ಮತ್ತು ಧ್ಯಾನದ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ, ಗಡಿಪಾರು ಮಾಡಲಾದ ಟಿಬೆಟಿಯನ್ ಸಮುದಾಯಕ್ಕಾಗಿ ಕೇಂದ್ರ ಟಿಬೆಟಿಯನ್ ಆಡಳಿತದ ಮುಖ್ಯಸ್ಥರಾಗಿದ್ದಾರೆ. ಧೈರ್ಯದಿಂದ ಮತ್ತು ಬುದ್ಧಿವಂತಿಕೆಯಿಂದ, ಹೆಚ್ಚಿನ ದೂರದೃಷ್ಟಿಯೊಂದಿಗೆ, ಅವರು ಆ ಸ್ಥಾನವನ್ನು ತ್ಯಜಿಸಿದರು ಮತ್ತು ಸಿಕ್ಯೊಂಗ್ ಎಂದು ಕರೆಯಲ್ಪಡುವ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಮುಖ್ಯಸ್ಥರನ್ನು ಸ್ಥಾಪಿಸಿದರು. ಆದರೆ ಅದಕ್ಕೂ ಮೊದಲು ಹಲವು ವರ್ಷಗಳ ಕಾಲ, ಅವರು ಉಸ್ತುವಾರಿ ವಹಿಸಿದ್ದರು ಮತ್ತು ಸಂಘಟಿಸಿದರು ಮತ್ತು ನಿರಾಶ್ರಿತರನ್ನು ನೆಲೆಗೊಳಿಸುವ, ದೇಶಭ್ರಷ್ಟರಾಗಿರುವ ವಿವಿಧ ಸಂಸ್ಥೆಗಳನ್ನು ಪುನರಾರಂಭಿಸುವ ಎಲ್ಲಾ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಿದರು. ಅವರ ಮುಖ್ಯ ತಂತ್ರವೆಂದರೆ "ಓಹ್, ಇದು ಅತಿಯಾಯಿತು, ನಾನು ಇದನ್ನು ಮಾಡಲು ಸಾಧ್ಯವಿಲ್ಲ, ಇದು ಅಸಾಧ್ಯ" ಎಂದು ಯೋಚಿಸದೆ, ಬಹಳ ಸಂಘಟಿತ ರೀತಿಯಲ್ಲಿ ಮುಂದುವರಿಯುವುದು. ಅವರ ಅದ್ಭುತ ಬುದ್ಧಿವಂತಿಕೆ ಮತ್ತು ಸ್ಮರಣೆಯೊಂದಿಗೆ, ಅವರು ತಮ್ಮ ಅಡಿಯಲ್ಲಿರುವ ಎಲ್ಲಾ ವಿವಿಧ ಯೋಜನೆಗಳನ್ನು ಟ್ರ್ಯಾಕ್ ಮಾಡಬಲ್ಲರು ಮತ್ತು ವಿಷಯಗಳನ್ನು ಹೇಗೆ ನಿಯೋಜಿಸಬೇಕೆಂದು ತಿಳಿದಿರುವರು. ಅವರು ಅಗತ್ಯವಿರುವ ಎಲ್ಲವನ್ನೂ ಮಾಡುತ್ತಾರೆ; ಅದು ಅವರಿಗೆ ದೊಡ್ಡ ವಿಷಯವಲ್ಲ. 

ಅಗಾಧವಾದ ವೈವಿಧ್ಯಮಯ ಕೆಲಸಗಳನ್ನು ಮಾಡಲು ತರಬೇತಿ ನೀಡಲು ಕಾಲಚಕ್ರ ವ್ಯವಸ್ಥೆಯು ಹೇಗೆ ಬಹಳಾ ಸಹಾಯಕವಾಗಿದೆ ಎಂದು ನಾನು ಆಗಾಗ್ಗೆ ಸ್ವಲ್ಪ ತಮಾಷೆ ಮಾಡುತ್ತೇನೆ. ಕಾಲಚಕ್ರ ಮಂಡಲದಲ್ಲಿ ನೀವು 722 ವ್ಯಕ್ತಿಗಳನ್ನು ದೃಶ್ಯೀಕರಿಸಬೇಕು ಮತ್ತು ಬಹುಶಃ ಅವರು ಅದನ್ನು ಮಾಡಲು ಸಾಧ್ಯವಾಗುವ ಕೆಲವೇ ಕೆಲವು ಜನರಲ್ಲಿ ಒಬ್ಬರು. ಈ ಅಭ್ಯಾಸ ವ್ಯವಸ್ಥೆಯ ಮೂಲಕ, ಇಷ್ಟು ದೊಡ್ಡದಾದ, ಸಂಕೀರ್ಣವಾದ ರೀತಿಯಲ್ಲಿ ತಮ್ಮ ಬಗ್ಗೆ ಯೋಚಿಸುವಾಗ, ಹೊಸ ಕಾರ್ಯ ಅಥವಾ ಸಮಸ್ಯೆ ಬಂದಾಗ, ಅದು ಮತ್ತೊಂದು ಸಣ್ಣ ವಿಷಯದಂತೆ ತೋರುತ್ತದೆ. ನೀವು ಯಾವುದಕ್ಕೂ ಹೆದರುವುದಿಲ್ಲ, ಯಾವುದನ್ನೂ ದೊಡ್ಡ ವಿಷಯವಾಗಿ ಮಾಡುವುದಿಲ್ಲ. 

ಜೀವನವು ಸಂಕೀರ್ಣವಾಗಿದೆ ಮತ್ತು ಕೆಲವರ ಜೀವನವು ಇತರರಿಗಿಂತ ಹೆಚ್ಚು ಸಂಕೀರ್ಣವಾಗಿದೆ. ಆದರೆ ಅದರ ಬಗ್ಗೆ ಭಯಪಡುವ ಬದಲು, ಅದನ್ನು ಏಕೆ ಸ್ವೀಕರಿಸಬಾರದು? ಅದು ಇನ್ನೂ ಒಳ್ಳೆಯದು! ನನ್ನ ವೆಬ್‌ಸೈಟ್‌ನಂತೆ, 21 ಭಾಷೆಗಳೊಂದಿಗೆ ಕೆಲಸ ಮಾಡುವುದು - ದೊಡ್ಡ ವಿಷಯವಲ್ಲ, ನಾವು ಅದನ್ನು ಮಾಡಬಹುದು. ನಮಗೆ ಅಗತ್ಯವಿದ್ದರೆ ನಾವು ಹೆಚ್ಚಿನದನ್ನು ಸೇರಿಸಬಹುದು, ಏಕೆ ಮಾಡಬಾರದು? ದಲೈ ಲಾಮಾ ವ್ಯವಹರಿಸುವ ವಿಷಯಗಳಿಗೆ ಹೋಲಿಸಿದರೆ ಇದು ಒಂದು ಸಣ್ಣ ಯೋಜನೆಯಾಗಿದೆ. ಆದರೆ ಇದು ಸಾಧ್ಯತೆಗಳನ್ನು ತೋರಿಸುತ್ತದೆ. “ನಾನೊಬ್ಬ ಬಡಪಾಯಿ" ಎಂಬ ಯಾವುದೇ ದೂರಿಲ್ಲದೆ. ನನ್ನ ತಾಯಿ ಹೇಳುವಂತೆ, "ನೇರವಾಗಿ ಮೇಲಿಂದ ಕೆಳಗೆ”. ಅದನ್ನು ಮಾಡಿ! 

ಅವರು ಸರಳ ಮನುಷ್ಯ ಎಂದು ಸ್ವತಃ ಒತ್ತಿ ಹೇಳುತ್ತಿದ್ದರೂ ಸಹ, ದಲೈ ಲಾಮಾ ಅವರನ್ನು ಪರಮಪೂಜ್ಯರು ಎಂದು ಏಕೆ ಕರೆಯಲಾಗುತ್ತದೆ ಎಂಬುದನ್ನು ನೀವು ವಿವರಿಸಬಹುದೇ? 

ದಲೈ ಲಾಮಾ ತಮ್ಮನ್ನು ತಾವು ಪರಮಪೂಜ್ಯರು ಎಂದು ಕರೆದುಕೊಳ್ಳುವುದಿಲ್ಲ. ಅದು ಹೇಗೆ ಪ್ರಾರಂಭವಾಯಿತು ಎಂದು ನನಗೆ ತಿಳಿದಿಲ್ಲ; ಬಹುಶಃ ಇದನ್ನು ಯಾವುದೋ ಕ್ರಿಶ್ಚಿಯನ್ ಶೀರ್ಷಿಕೆಯಿಂದ ತೆಗೆದುಕೊಳ್ಳಲಾಗಿದೆ, ಮತ್ತು ಅದು ಇಂಗ್ಲಿಷ್‌ನಲ್ಲಿ ಸಿಲುಕಿಕೊಂಡಿದೆ. ಜನರು ಇದನ್ನು ಗೌರವದ ಅಭಿವ್ಯಕ್ತಿಯಾಗಿ ಬಳಸುತ್ತಾರೆ, ಉದಾಹರಣೆಗೆ ರಾಜನಿಗೆ "ಯುವರ್ ಹೈನೆಸ್" ಎಂದು ಕರೆಯುವುದು. ಟಿಬೆಟಿಯನ್ ಭಾಷೆಯಲ್ಲಿ ನಿಮ್ಮ ಆಧ್ಯಾತ್ಮಿಕ ಗುರುವನ್ನು ಉಲ್ಲೇಖಿಸಲು ಅನೇಕ ಗೌರವಾರ್ಥ ಪದಗಳನ್ನು ಬಳಸಲಾಗುತ್ತದೆ, ಮತ್ತು ದಲೈ ಲಾಮಾಗೆ ಮೀಸಲಾಗಿರುವ ವಿಶೇಷವಾದವುಗಳಿವೆ, ಆದರೆ ನಿಜವಾಗಿಯೂ "ಹಿಸ್ ಹೋಲಿನೆಸ್" ಎಂಬುದನ್ನು ಅನುವಾದಿಸಲಾದ ಯಾವುದೂ ಇಲ್ಲ. ಇದು ಜನರು ಅಳವಡಿಸಿಕೊಂಡ ಸರಳ ಸಂಪ್ರದಾಯವಾಗಿದೆ, ಮತ್ತು ಜನರು ಅವರನ್ನು ಹಾಗೆ ಕರೆಯುವುದನ್ನು ನಿಲ್ಲಿಸುವಂತೆ ಅವರು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ಜನರು ಅವರನ್ನು ಯಾವುದೋ ದೇವರಂತೆ ಪೂಜಿಸಬೇಕೆಂದು ಅವನು ಖಂಡಿತವಾಗಿಯೂ ಬಯಸುವುದಿಲ್ಲ. 

ನಿಮಗೆ ಟಿಬೆಟಿಯನ್ ತಿಳಿದಿರುವುದರಿಂದ, ಇಂಗ್ಲಿಷ್‌ನಲ್ಲಿ ಹೆಚ್ಚು ಸೂಕ್ತವಾದದ್ದನ್ನು ನೀವು ಸೂಚಿಸಬಹುದೇ? 

ಅವರಿಗೆ ಬಳಸುವ ಮುಖ್ಯ ಶೀರ್ಷಿಕೆ "ಕುಂದುನ್", ಅಂದರೆ "ಸರ್ವೋಚ್ಚ ಉಪಸ್ಥಿತಿ". ಇತರ ಭಾಷೆಗಳಿಗೆ ಇದನ್ನು ಭಾಷಾಂತರಿಸುವುದು ಕಷ್ಟವಾದ ಕೆಲಸ, ಅವರು ಅತ್ಯಂತ ಅಭಿವೃದ್ಧಿ ಹೊಂದಿದ ಜೀವಿಗಳ ಎಲ್ಲಾ ಉತ್ತಮ ಗುಣಗಳನ್ನು ಅವತರಿಸುತ್ತಾರೆ ಮತ್ತು ಪ್ರತಿನಿಧಿಸುತ್ತಾರೆ ಎಂಬುದು ಇದರರ್ಥ. ನೀವು ನಿಜವಾಗಿಯೂ ಹೆಚ್ಚು ಅರಿತುಕೊಂಡ ವ್ಯಕ್ತಿಯ ಉಪಸ್ಥಿತಿಯಲ್ಲಿದ್ದೀರಿ ಎಂದರ್ಥ. ನಾನು ಇದನ್ನು ಪರಿಚಯಿಸಲು ನಿಜವಾಗಿಯೂ ಪ್ರಯತ್ನಿಸಿದೆ, ಆದರೆ ಯಾರೂ ಆಸಕ್ತಿ ತೋರಿಸಲಿಲ್ಲ! 

ಸಾರಾಂಶ 

ಕೆಲವರು ಅವರನ್ನು ತಮ್ಮ ಆಧ್ಯಾತ್ಮಿಕ ನಾಯಕ ಎಂದು ಪರಿಗಣಿಸುತ್ತಾರೆ, ಇತರರು ಅವರನ್ನು ಸೂಪರ್‌ಸ್ಟಾರ್ ಎಂದು ನೋಡುತ್ತಾರೆ. ಅವರನ್ನು “ಕುರಿಯ ಉಡುಪಿನಲ್ಲಿರುವ ತೋಳ ಎಂದು ಭಾವಿಸುವವರೂ ಇದ್ದಾರೆ. ವಾಸ್ತವವೆಂದರೆ ದಲೈ ಲಾಮಾ ಜಾತ್ಯತೀತ ನೀತಿಶಾಸ್ತ್ರ ಮತ್ತು ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ಇತರರ ಪ್ರಯೋಜನಕ್ಕಾಗಿ ಮತ್ತು ವಿಶ್ವ ಶಾಂತಿಗಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಾರೆ. ಪ್ರೀತಿ, ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಸಾಕಾರವಾಗಿ, ಅವರು ನಮಗೆ ಸ್ಫೂರ್ತಿ ನೀಡಲು ಕಾರ್ಯನಿರ್ವಹಿಸುತ್ತಾರೆ, ನಾವು ಮಾನವರು ಇದನ್ನು ಸಾಧಿಸಲು ಸಾಧ್ಯ ಎಂಬುದನ್ನು ನಮಗೆ ತೋರಿಸುತ್ತಾರೆ. 

Top