ಆಧ್ಯಾತ್ಮಿಕ ಗುರು-ಶಿಷ್ಯರ ಸಂಬಂಧದ ಬಗೆಗಿರುವ ಪ್ರಾಯೋಗಿಕ ಸಂಗತಿಗಳು
ಆಧ್ಯಾತ್ಮಿಕ ಗುರು-ಶಿಷ್ಯರ ಸಂಬಂಧದಲ್ಲಾಗುವ ಗೊಂದಲವನ್ನು ತಪ್ಪಿಸಲು, ನಾವು ಕೆಲವು ಪ್ರಾಯೋಗಿಕ ಸಂಗತಿಗಳನ್ನು ಒಪ್ಪಿಕೊಳ್ಳಬೇಕು:
- ಬಹುತೇಕ ಎಲ್ಲಾ ಆಧ್ಯಾತ್ಮಿಕ ಸಾಧಕರು ಆಧ್ಯಾತ್ಮಿಕ ಹಾದಿಯಲ್ಲಿ ಹಂತ-ಹಂತವಾಗಿ ಪ್ರಗತಿ ಸಾಧಿಸುತ್ತಾರೆ.
- ಹೆಚ್ಚಿನ ಅಭ್ಯಾಸಕಾರರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಶಿಕ್ಷಕರೊಂದಿಗೆ ಅಧ್ಯಯನ ಮಾಡುತ್ತಾರೆ ಮತ್ತು ಪ್ರತಿಯೊಬ್ಬರೊಂದಿಗೆ ವಿಭಿನ್ನ ಸಂಬಂಧಗಳನ್ನು ನಿರ್ಮಿಸಿಕೊಳ್ಳುತ್ತಾರೆ.
- ಪ್ರತಿಯೊಬ್ಬ ಆಧ್ಯಾತ್ಮಿಕ ಶಿಕ್ಷಕನೂ ಒಂದೇ ಮಟ್ಟದ ಸಾಧನೆಯನ್ನು ಸಾಧಿಸಿರುವುದಿಲ್ಲ.
- ಒಬ್ಬ ನಿರ್ದಿಷ್ಟವಾದ ಸಾಧಕ ಮತ್ತು ಒಬ್ಬ ಶಿಕ್ಷಕರ ನಡುವಿನ ಸಂಬಂಧದ ಪ್ರಕಾರವು ಅವರವರ ಆಧ್ಯಾತ್ಮಿಕ ಮಟ್ಟವನ್ನು ಅವಲಂಬಿಸಿರುತ್ತದೆ.
- ಸಾಮಾನ್ಯವಾಗಿ, ಜನರು ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯುತ್ತಿರುವಾಗ, ತಮ್ಮ ಶಿಕ್ಷಕರೊಂದಿಗೆ ಹಂತಹಂತವಾಗಿ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ.
- ಪ್ರತಿಯೊಬ್ಬ ಸಾಧಕನ ಆಧ್ಯಾತ್ಮಿಕ ಜೀವನದಲ್ಲಿ ಒಬ್ಬ ಶಿಕ್ಷಕನೇ ವಿಭಿನ್ನ ಪಾತ್ರಗಳನ್ನು ನಿರ್ವಹಿಸಬಹುದು, ಪ್ರತಿಯೊಬ್ಬ ಸಾಧಕನು ಆ ಶಿಕ್ಷಕನೊಂದಿಗೆ ಹೊಂದಿರುವ ಅತ್ಯಂತ ಸೂಕ್ತವಾದ ಸಂಬಂಧವು ವಿಭಿನ್ನವಾಗಿರಬಹುದು.
ಆಧ್ಯಾತ್ಮಿಕ ಶಿಕ್ಷಕರು ಮತ್ತು ಆಧ್ಯಾತ್ಮಿಕ ಸಾಧಕರ ಮಟ್ಟಗಳು
ಹೀಗಾಗಿ, ಆಧ್ಯಾತ್ಮಿಕ ಶಿಕ್ಷಕರು ಮತ್ತು ಆಧ್ಯಾತ್ಮಿಕ ಸಾಧಕರ ಹಲವು ಹಂತಗಳಿವೆ. ಇವುಗಳೆಂದರೆ:
- ವಿಶ್ವವಿದ್ಯಾನಿಲಯದಲ್ಲಿ ಮಾಹಿತಿ ನೀಡುವಂತಹ ಬೌದ್ಧ ಧರ್ಮದ ಪ್ರಾಧ್ಯಾಪಕರು
- ಧರ್ಮವನ್ನು ಜೀವನಕ್ಕೆ ಹೇಗೆ ಅನ್ವಯಿಸಬೇಕು ಎಂಬುದನ್ನು ತೋರಿಸುವ ಧರ್ಮ ಬೋಧಕರು
- ತೈ-ಚಿ ಅಥವಾ ಯೋಗದಂತಹ ವಿಧಾನಗಳನ್ನು ಕಲಿಸಲು ಇರುವ ಧ್ಯಾನ ತರಬೇತುದಾರರು
- ವಿದ್ಯಾರ್ಥಿಗಳಿಗಾಗಿ ನೀಡಬಲ್ಲ ಪ್ರತಿಜ್ಞೆಗಳ ಮಟ್ಟದಿಂದ ಪ್ರತ್ಯೇಕಿಸಲ್ಪಡುವ ಆಧ್ಯಾತ್ಮಿಕ ಮಾರ್ಗದರ್ಶಕರು: ಸಾಮಾನ್ಯ ಅಥವಾ ಸನ್ಯಾಸಿ ಪ್ರತಿಜ್ಞೆಗಳು, ಬೋಧಿಸತ್ವ ಪ್ರತಿಜ್ಞೆಗಳು ಅಥವಾ ತಾಂತ್ರಿಕ ಪ್ರತಿಜ್ಞೆಗಳು.
ಇದಕ್ಕೆ ಅನುಗುಣವಾಗಿ:
- ಮಾಹಿತಿಯನ್ನು ಪಡೆಯಲು ಬಯಸುವ ಬೌದ್ಧಧರ್ಮದ ವಿದ್ಯಾರ್ಥಿಗಳು
- ಧರ್ಮವನ್ನು ಜೀವನಕ್ಕೆ ಹೇಗೆ ಅನ್ವಯಿಸಬೇಕು ಎಂಬುದನ್ನು ಕಲಿಯಲು ಬಯಸುವ ಧರ್ಮದ ಶಿಷ್ಯರು
- ಮನಸ್ಸಿಗೆ ವಿಶ್ರಾಂತಿ ನೀಡುವ ಅಥವಾ ತರಬೇತಿ ನೀಡುವ ವಿಧಾನಗಳನ್ನು ಕಲಿಯಲು ಬಯಸುವ ಧ್ಯಾನ ಪ್ರಶಿಕ್ಷಣಾರ್ಥಿಗಳು
- ಭವಿಷ್ಯದ ಜೀವನವನ್ನು ಸುಧಾರಿಸಲು, ವಿಮೋಚನೆಯನ್ನು ಪಡೆಯಲು ಅಥವಾ ಜ್ಞಾನೋದಯವನ್ನು ಸಾಧಿಸಲು ಬಯಸುವ ಮತ್ತು ಈ ಗುರಿಗಳನ್ನು ತಲುಪಲು ಸಹಾಯ ಮಾಡುವ ಕೆಲವು ಪ್ರತಿಜ್ಞೆಗಳನ್ನು ತೆಗೆದುಕೊಳ್ಳಲು ಸಿದ್ಧರಿರುವ ಶಿಷ್ಯರು. ಕೇವಲ ಈ ಜೀವಿತಾವಧಿಯನ್ನು ಸುಧಾರಿಸಲು ಬಯಸಿದರೂ, ಶಿಷ್ಯರು ಇದನ್ನು ವಿಮೋಚನೆ ಮತ್ತು ಜ್ಞಾನೋದಯದ ಹಾದಿಯಲ್ಲಿನ ಹೆಜ್ಜೆಯಾಗಿ ನೋಡುತ್ತಾರೆ.
ಪ್ರತಿಯೊಂದು ಹಂತವು ತನ್ನದೇ ಆದ ಅರ್ಹತೆಗಳನ್ನು ಹೊಂದಿರುತ್ತದೆ ಮತ್ತು ಆಧ್ಯಾತ್ಮಿಕ ಸಾಧಕರಾಗಿ, ನಾವು ನಮ್ಮ ಮತ್ತು ಶಿಕ್ಷಕರ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳಬೇಕು – ಅವರು ಏಷ್ಯನ್ ಅಥವಾ ಪಾಶ್ಚಿಮಾತ್ಯರೇ, ಸನ್ಯಾಸಿ, ಸನ್ಯಾಸಿನಿ ಅಥವಾ ಸಾಮಾನ್ಯರೇ, ಅವರ ಶಿಕ್ಷಣದ ಮಟ್ಟ, ಭಾವನಾತ್ಮಕ ಮತ್ತು ನೈತಿಕ ಪರಿಪಕ್ವತೆಯ ಮಟ್ಟ, ಬದ್ಧತೆಯ ಮಟ್ಟ, ಇತ್ಯಾದಿ. ಆದ್ದರಿಂದ, ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಮುಂದುವರಿಯುವುದು ಮುಖ್ಯ.
ಸಂಭಾವ್ಯ ಶಿಷ್ಯ ಮತ್ತು ಸಂಭಾವ್ಯ ಆಧ್ಯಾತ್ಮಿಕ ಶಿಕ್ಷಕರ ಅರ್ಹತೆಗಳು
ಸಂಭಾವ್ಯ ಶಿಷ್ಯರಾಗಿ, ನಾವು ಸಿದ್ಧವಾಗಿಲ್ಲದ ಸಂಬಂಧಕ್ಕೆ ನಮ್ಮನ್ನು ನಾವು ಒಪ್ಪಿಸದೇ ಇರಲು, ನಾವು ನಮ್ಮ ಸ್ವಂತ ಅಭಿವೃದ್ಧಿಯ ಮಟ್ಟವನ್ನು ಪರಿಶೀಲಿಸಬೇಕು. ಶಿಷ್ಯನಿಗೆ ಅಗತ್ಯವಿರುವ ಮುಖ್ಯ ಗುಣಗಳೆಂದರೆ:
- ಅವನ ಅಥವಾ ಅವಳ ಸ್ವಂತ ಪೂರ್ವಗ್ರಹಿಕೆಗಳು ಮತ್ತು ಅಭಿಪ್ರಾಯಗಳಿಗೆ ಅಂಟಿಕೊಳ್ಳದೆ ಮುಕ್ತ ಮನಸ್ಸಿನಿಂದಿರುವುದು
- ಯಾವುದು ಸರಿ ಮತ್ತು ಯಾವುದಲ್ಲ ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮಾನ್ಯ ಜ್ಞಾನ
- ಧರ್ಮದಲ್ಲಿ ಮತ್ತು ಸರಿಯಾದ ಅರ್ಹ ಶಿಕ್ಷಕರನ್ನು ಹುಡುಕುವಲ್ಲಿ ಬಲವಾದ ಆಸಕ್ತಿಯನ್ನು ಹೊಂದಿರುವುದು
- ಧರ್ಮ ಮತ್ತು ಉತ್ತಮರಾದ, ಅರ್ಹರಾದ ಶಿಕ್ಷಕರಿಗಾಗಿ ಮೆಚ್ಚುಗೆ ಮತ್ತು ಗೌರವ
- ಗಮನವಿಡುವ ಮನಸ್ಸು
- ಭಾವನಾತ್ಮಕ ಪರಿಪಕ್ವತೆ ಮತ್ತು ಸ್ಥಿರತೆಯ ಮೂಲಭೂತ ಮಟ್ಟ
- ನೈತಿಕ ಜವಾಬ್ದಾರಿಯ ಮೂಲಭೂತ ಮಟ್ಟ.
ಶಿಕ್ಷಕರ ಮಟ್ಟದ ಆಧಾರದ ಮೇಲೆ, ಅವನಿಗೆ ಅಥವಾ ಅವಳಿಗೆ ಹೆಚ್ಚಿನ ಅರ್ಹತೆಗಳು ಬೇಕಾಗುತ್ತವೆ. ಸಾಮಾನ್ಯವಾಗಿ, ಮುಖ್ಯವಾದವುಗಳೆಂದರೆ:
- ಅವನ ಅಥವಾ ಅವಳ ಸ್ವಂತ ಆಧ್ಯಾತ್ಮಿಕ ಶಿಕ್ಷಕರೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದಿರುವುದು
- ವಿದ್ಯಾರ್ಥಿಗಿಂತ ಹೆಚ್ಚು ಧರ್ಮದ ಜ್ಞಾನವಿರುವುದು
- ಧ್ಯಾನದಲ್ಲಿ ಮತ್ತು ದೈನಂದಿನ ಜೀವನದಲ್ಲಿ ಅದರ ವಿಧಾನಗಳನ್ನು ಅನ್ವಯಿಸುವಲ್ಲಿ ಅನುಭವ ಮತ್ತು ಒಂದು ಮಟ್ಟದ ಯಶಸ್ಸನ್ನು ಗಳಿಸಿರುವುದು
- ಧರ್ಮವನ್ನು ಜೀವನಕ್ಕೆ ಅನ್ವಯಿಸುವ ಪ್ರಯೋಜನಕಾರಿ ಫಲಿತಾಂಶಗಳ ಸ್ಪೂರ್ತಿದಾಯಕ ಉದಾಹರಣೆಯನ್ನು ಮುಂದಿಡುವ ಸಾಮರ್ಥ್ಯವಿರುವುದು. ಇದರ ಅರ್ಥ:
- ನೈತಿಕ ಸ್ವಯಂ-ಶಿಸ್ತು
- ಒಟ್ಟಾರೆಯಾಗಿ, ಭಾವನಾತ್ಮಕ ಸಮಸ್ಯೆಗಳಿಂದ ಇರುವ ಸ್ವಾತಂತ್ರ್ಯದ ಆಧಾರದ ಮೇಲೆ ಭಾವನಾತ್ಮಕ ಪರಿಪಕ್ವತೆ ಮತ್ತು ಸ್ಥಿರತೆ
- ಬೋಧನೆಯ ಪ್ರಾಥಮಿಕ ಪ್ರೇರಣೆಯು, ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬೇಕೆಂಬ ಪ್ರಾಮಾಣಿಕ ಕಾಳಜಿ
- ಬೋಧನೆಗಾಗಿ ತಾಳ್ಮೆಯಿರುವುದು
- ತೋರಿಕೆಯಿರದಿರುವುದು (ತನ್ನಲ್ಲಿ ಇಲ್ಲದಿರುವ ಗುಣಗಳು ಇರುವಂತೆ ನಟಿಸದಿರುವುದು) ಮತ್ತು ಕಪಟತನ ಇರದಿರುವುದು (ಅವನ ಅಥವಾ ಅವಳಲ್ಲಿರುವ ದೋಷಗಳನ್ನು ಮರೆಮಾಡದಿರುವುದು, ಉದಾಹರಣೆಗೆ ಜ್ಞಾನ ಮತ್ತು ಅನುಭವದ ಕೊರತೆ).
ಪರಿಸ್ಥಿತಿಯ ವಾಸ್ತವತೆಗೆ ತಕ್ಕಂತೆ ನಾವು ಸರಿಹೊಂದಬೇಕಾಗಿದೆ - ನಮ್ಮ ನಗರದಲ್ಲಿ ಲಭ್ಯವಿರುವ ಶಿಕ್ಷಕರಿಗೆ ಯಾವ ಮಟ್ಟದ ಅರ್ಹತೆ ಇದೆ, ನಮಗೆ ಎಷ್ಟು ಸಮಯ ಮತ್ತು ಬದ್ಧತೆ ಇದೆ, ನಮ್ಮ ಆಧ್ಯಾತ್ಮಿಕ ಗುರಿಗಳು ಯಾವುವು (ವಾಸ್ತವದಲ್ಲಿ, ಕೇವಲ ಆದರ್ಶಪ್ರಾಯವಾದ "ಎಲ್ಲಾ ಜೀವಿಗಳಿಗೆ ಪ್ರಯೋಜನವಾಗಲಿ” ಎಂಬುದಲ್ಲ), ಇತ್ಯಾದಿ. ಆಧ್ಯಾತ್ಮಿಕ ಸಂಬಂಧಕ್ಕೆ ನಮ್ಮನ್ನು ಒಪ್ಪಿಸುವ ಮೊದಲು ನಾವು ಸಂಭಾವ್ಯ ಶಿಕ್ಷಕರ ಅರ್ಹತೆಗಳನ್ನು ಪರಿಶೀಲಿಸಿದರೆ, ಶಿಕ್ಷಕರನ್ನು ದೇವರು ಅಥವಾ ಭೂತವಾಗಿ ನೋಡುವ ವಿಪರೀತತೆಯನ್ನು ನಾವು ತಪ್ಪಿಸಬಹುದು. ನಮ್ಮ ಆಧ್ಯಾತ್ಮಿಕ ಗುರುವನ್ನು ದೇವರಾಗಿಸಿದಾಗ, ನಮ್ಮ ನಿಷ್ಕಪಟತೆಯಿಂದ ಸಂಭವನೀಯ ನಿಂದನೆಗೆ ನಾವು ಒಳಗಾಗಬಹುದು. ನಾವು ಅವರನ್ನು ಭೂತವಾಗಿಸಿದರೆ, ನಮ್ಮ ಮತಿವಿಕಲ್ಪವು ನಮ್ಮನ್ನು ಪ್ರಯೋಜನ ಪಡೆಯುವುದರಿಂದ ತಡೆಯುತ್ತದೆ.
ಆಧ್ಯಾತ್ಮಿಕ ಮಾರ್ಗದರ್ಶಕನ ಶಿಷ್ಯನಾಗುವುದು ಮತ್ತು ಚಿಕಿತ್ಸಕನ ಗ್ರಾಹಕನಾಗುವುದರ ನಡುವಿನ ವ್ಯತ್ಯಾಸಗಳು
ಆಧ್ಯಾತ್ಮಿಕ ವಿದ್ಯಾರ್ಥಿ-ಶಿಕ್ಷಕರ ಸಂಬಂಧದಲ್ಲಿನ ಗೊಂದಲದ ಪ್ರಮುಖ ಮೂಲವು ಆಧ್ಯಾತ್ಮಿಕ ಮಾರ್ಗದರ್ಶಕರು ನಮ್ಮ ಚಿಕಿತ್ಸಕನಂತೆ ಇರಬೇಕೆಂಬ ಬಯಕೆಯಾಗಿರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಭಾವನಾತ್ಮಕ ಸಂತೋಷ ಮತ್ತು ಉತ್ತಮ ಸಂಬಂಧಗಳನ್ನು ಪಡೆಯಲು ಬಯಸುತ್ತಾರೆ ಎಂದು ಪರಿಗಣಿಸಿ. ಒಂದು ರೀತಿಯಲ್ಲಿ, ಈ ಗುರಿಯನ್ನು ಸಾಧಿಸಲು, ಆಧ್ಯಾತ್ಮಿಕ ಮಾರ್ಗದರ್ಶಕರೊಬ್ಬರ ಶಿಷ್ಯನಾಗುವುದು, ಚಿಕಿತ್ಸಕನೊಬ್ಬನ ಗ್ರಾಹಕರಾಗುವುದನ್ನು ಹೋಲುತ್ತದೆ.
ಬೌದ್ಧಧರ್ಮ ಮತ್ತು ಚಿಕಿತ್ಸೆ ಎರಡೂ:
- ನಮ್ಮ ಜೀವನದಲ್ಲಿನ ನೋವನ್ನು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದು ಮತ್ತು ಅದನ್ನು ನಿವಾರಿಸಲು ಬಯಸುವುದರಿಂದ ಉದ್ಭವಿಸುತ್ತವೆ
- ನಮ್ಮ ಸಮಸ್ಯೆಗಳು ಮತ್ತು ಅವುಗಳ ಕಾರಣಗಳನ್ನು ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಯಾರೊಂದಿಗಾದರೂ ಕೆಲಸ ಮಾಡುವುದರಲ್ಲಿ ತೊಡಗಿಸಿಕೊಳ್ಳಿ. ತಿಳುವಳಿಕೆಯು, ಸ್ವಯಂ-ಪರಿವರ್ತನೆಗಾಗಿ ಬಹಳಾ ಮುಖ್ಯ ಎಂಬ ವಿಷಯದ ಬಗ್ಗೆ ಅನೇಕ ಚಿಕಿತ್ಸಾ ವಿಧಾನಗಳು, ಬೌದ್ಧಧರ್ಮದೊಂದಿಗೆ ಒಪ್ಪಿಕೊಳ್ಳುತ್ತವೆ.
- ನಮ್ಮ ಸಮಸ್ಯೆಗಳ ಕಾರಣಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಒತ್ತು ನೀಡುವ ಚಿಂತನೆಯ ವ್ಯವಸ್ಥೆಗಳನ್ನು, ಈ ಅಂಶಗಳನ್ನು ಜಯಿಸಲು ಪ್ರಾಯೋಗಿಕ ವಿಧಾನಗಳ ಮೇಲೆ ಕೆಲಸ ಮಾಡಲು ಒತ್ತು ನೀಡುವ ಸಂಪ್ರದಾಯಗಳು ಮತ್ತು ಎರಡು ವಿಧಾನಗಳ ಸಮತೋಲಿತ ಸಂಯೋಜನೆಯನ್ನು ಶಿಫಾರಸು ಮಾಡುವ ವ್ಯವಸ್ಥೆಗಳನ್ನು ಒಪ್ಪಿಕೊಳ್ಳಿ
- ಸ್ವಯಂ-ಅಭಿವೃದ್ಧಿಯ ಪ್ರಕ್ರಿಯೆಯ ಪ್ರಮುಖ ಭಾಗವಾಗಿ, ಮಾರ್ಗದರ್ಶಕ ಅಥವಾ ಚಿಕಿತ್ಸಕರೊಂದಿಗೆ ಆರೋಗ್ಯಕರ ಭಾವನಾತ್ಮಕ ಸಂಬಂಧವನ್ನು ಸ್ಥಾಪಿಸಲು ಒಲವು ತೋರಿ.
- ಹೆಚ್ಚಿನ ಶಾಸ್ತ್ರೀಯ ಚಿಕಿತ್ಸಾ ವಿಧಾನಗಳು, ಗ್ರಾಹಕರ ನಡವಳಿಕೆ ಮತ್ತು ಆಲೋಚನಾ ವಿಧಾನಗಳನ್ನು ಮಾರ್ಪಡಿಸಲು ನೈತಿಕ ಮಾರ್ಗಸೂಚಿಗಳನ್ನು ಬಳಸುವುದರಿಂದ ದೂರ ಸರಿಯುತ್ತವೆಯಾದರೂ, ಕೆಲವು ಹೊಸ ಶಾಸ್ತ್ರೀಯ ವ್ಯವಸ್ಥೆಗಳು ಬೌದ್ಧಧರ್ಮದಲ್ಲಿರುವ ನೈತಿಕ ತತ್ವಗಳನ್ನು ಪ್ರತಿಪಾದಿಸುತ್ತವೆ. ಅಂತಹ ತತ್ವಗಳು, ನಿಷ್ಕ್ರಿಯ ಕುಟುಂಬದ ಎಲ್ಲಾ ಸದಸ್ಯರಿಗೆ ಸಮಾನವಾಗಿ ನ್ಯಾಯಯುತವಾಗಿರುವುದನ್ನು ಮತ್ತು ಕೋಪದಂತಹ ವಿನಾಶಕಾರಿ ಪ್ರಚೋದನೆಗಳಿಂದ ದೂರವಿರುವುದನ್ನು ಒಳಗೊಂಡಿರುತ್ತವೆ.
ಸಾಮ್ಯತೆಗಳ ಹೊರತಾಗಿ, ಬೌದ್ಧ ಮಾರ್ಗದರ್ಶಕರ ಶಿಷ್ಯನಾಗುವ ಮತ್ತು ಚಿಕಿತ್ಸಕನ ಗ್ರಾಹಕನಾಗುವ ನಡುವೆ ಕನಿಷ್ಠ ಐದು ಗಮನಾರ್ಹ ವ್ಯತ್ಯಾಸಗಳಿರುತ್ತವೆ:
(1) ಒಬ್ಬರು ಸಂಬಂಧವನ್ನು ಸ್ಥಾಪಿಸುವ ಭಾವನಾತ್ಮಕ ಹಂತ. ಸಾಮಾನ್ಯವಾಗಿ, ಸಂಭಾವ್ಯ ಗ್ರಾಹಕರು ಭಾವನಾತ್ಮಕವಾಗಿ ತೊಂದರೆಗೊಳಗಾಗಿರುವಾಗ ಚಿಕಿತ್ಸಕರನ್ನು ಸಂಪರ್ಕಿಸುತ್ತಾರೆ. ಅವರು ಮನೋವಿಕೃತರಾಗಿರಬಹುದು ಮತ್ತು ಚಿಕಿತ್ಸೆಯ ಭಾಗವಾಗಿ ಔಷಧಿಗಳನ್ನು ಸೇವಿಸುವ ಅಗತ್ಯವಿರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಸಂಭಾವ್ಯ ಶಿಷ್ಯರು, ತಮ್ಮ ಆಧ್ಯಾತ್ಮಿಕ ಹಾದಿಯ ಮೊದಲ ಹೆಜ್ಜೆಯಾಗಿ ಮಾರ್ಗದರ್ಶಕರೊಂದಿಗೆ ಸಂಬಂಧವನ್ನು ಸ್ಥಾಪಿಸುವುದಿಲ್ಲ. ಇದಕ್ಕೂ ಮೊದಲು, ಅವರು ಬುದ್ಧನ ಬೋಧನೆಗಳನ್ನು ಅಧ್ಯಯನ ಮಾಡಿ, ತಮ್ಮ ಮೇಲೆ ತಾವು ಕೆಲಸ ಮಾಡಲು ಪ್ರಾರಂಭಿಸಿರುತ್ತಾರೆ. ಇದರ ಪರಿಣಾಮವಾಗಿ, ಅವರು ಸಾಕಷ್ಟು ಭಾವನಾತ್ಮಕ ಪರಿಪಕ್ವತೆ ಮತ್ತು ಸ್ಥಿರತೆಯನ್ನು ತಲುಪಿರುತ್ತಾರೆ, ಆದ್ದರಿಂದ ಅವರು ಸ್ಥಾಪಿಸುವ ಶಿಷ್ಯ-ಮಾರ್ಗದರ್ಶಿ ಸಂಬಂಧವು, ಬೌದ್ಧಧರ್ಮದ ಅರ್ಥದಲ್ಲಿ ರಚನಾತ್ಮಕವಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಹಂತದಲ್ಲಿ, ಬೌದ್ಧ ಶಿಷ್ಯರು ನರರೋಗ ವರ್ತನೆಗಳು ಮತ್ತು ನಡವಳಿಕೆಯಿಂದ ತುಲನಾತ್ಮಕವಾಗಿ ಮುಕ್ತವಾಗಿರುತ್ತಾರೆ.
(2) ಒಂದು ಸಂಬಂಧದಲ್ಲಿ ಒಬ್ಬರು ನಿರೀಕ್ಷಿಸುವ ಪರಸ್ಪರ ಕ್ರಿಯೆ. ಹೆಚ್ಚಾಗಿ, ಸಂಭಾವ್ಯ ಗ್ರಾಹಕರು ಯಾರಾದರೂ ತಮ್ಮ ಮಾತುಗಳನ್ನು ಕೇಳಲಿ ಎಂಬ ಹಂಬಲವನ್ನು ಹೊಂದಿರುತ್ತಾರೆ. ಆದ್ದರಿಂದ, ಗುಂಪು ಚಿಕಿತ್ಸೆಯ ಸಂದರ್ಭದಲ್ಲಿಯೂ ಸಹ ಚಿಕಿತ್ಸಕರು ತಮಗೆ ಮತ್ತು ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಕೇಂದ್ರೀಕೃತವಾಗಿ ಗಮನವನ್ನು ವಿನಿಯೋಗಿಸಬೇಕೆಂದು ಅವರು ನಿರೀಕ್ಷಿಸುತ್ತಾರೆ. ಮತ್ತೊಂದೆಡೆ, ಶಿಷ್ಯರು ಸಾಮಾನ್ಯವಾಗಿ ಮಾರ್ಗದರ್ಶಕರೊಂದಿಗೆ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹಂಚಿಕೊಳ್ಳುವುದಿಲ್ಲ ಮತ್ತು ವೈಯಕ್ತಿಕ ಗಮನವನ್ನು ನಿರೀಕ್ಷಿಸುವುದಿಲ್ಲ ಅಥವಾ ಬೇಡುವುದಿಲ್ಲ. ವೈಯಕ್ತಿಕ ಸಲಹೆಗಾಗಿ ಮಾರ್ಗದರ್ಶಕರನ್ನು ಸಂಪರ್ಕಿಸಿದರೂ, ಅವರು ನಿಯಮಿತವಾಗಿ ಅದಕ್ಕಾಗಿ ಹೋಗುವುದಿಲ್ಲ. ಈ ಸಂಬಂಧದಲ್ಲಿನ ಗಮನವು ಬೋಧನೆಗಳನ್ನು ಕೇಳುವುದರ ಮೇಲಿರುತ್ತದೆ. ಬೌದ್ಧ ಶಿಷ್ಯರು ಪ್ರಾಥಮಿಕವಾಗಿ ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಲು ತಮ್ಮ ಮಾರ್ಗದರ್ಶಕರಿಂದ ವಿಧಾನಗಳನ್ನು ಕಲಿಯುತ್ತಾರೆ. ನಂತರ ಅವರು ತಮ್ಮ ಪ್ರತ್ಯೇಕವಾದ ಸನ್ನಿವೇಶಗಳಿಗೆ ಆ ವಿಧಾನಗಳನ್ನು ಅನ್ವಯಿಸಲು ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.
(3) ಕೆಲಸದ ಸಂಬಂಧದಿಂದ ಸಿಗುವ ನಿರೀಕ್ಷಿತ ಫಲಿತಾಂಶಗಳು. ಥೆರಪಿಯು ನಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಸ್ವೀಕರಿಸಲು ಮತ್ತು ಬದುಕಲು ಕಲಿಯುವ ಅಥವಾ ಅವುಗಳನ್ನು ಸಹಿಸಬಹುದಾದಂತೆ ಕಡಿಮೆ ಮಾಡುವ ಗುರಿಯನ್ನು ಹೊಂದಿರುತ್ತದೆ. ಈ ಜೀವಿತಾವಧಿಯಲ್ಲಿ ಭಾವನಾತ್ಮಕ ಯೋಗಕ್ಷೇಮವನ್ನು ಪಡೆಯುವ ಗುರಿಯೊಂದಿಗೆ ನಾವು ಬೌದ್ಧ ಆಧ್ಯಾತ್ಮಿಕ ಮಾರ್ಗದರ್ಶಕರನ್ನು ಸಂಪರ್ಕಿಸಿದರೆ, ನಮ್ಮ ಸಮಸ್ಯೆಗಳು ಕಡಿಮೆಯಾಗಬಹುದೆಂದು ನಾವು ನಿರೀಕ್ಷಿಸಬಹುದು. ಜೀವನವು ಕಷ್ಟಕರವಾಗಿದ್ದರೂ - ಬುದ್ಧನು ಕಲಿಸಿದ ಜೀವನದ ಮೊದಲ ಸತ್ಯವೆಂದರೆ (ಆರ್ಯ ಸತ್ಯ) - ನಾವು ಅದನ್ನು ಕಡಿಮೆ ಕಷ್ಟಕರವಾಗಿಸಬಹುದು.
ಆದರೂ, ನಮ್ಮ ಜೀವನವನ್ನು ಭಾವನಾತ್ಮಕವಾಗಿ ಕಡಿಮೆ ಕಷ್ಟಕರವಾಗಿಸುವುದು ಶಾಸ್ತ್ರೀಯ ಬೌದ್ಧ ಮಾರ್ಗವನ್ನು ಸಮೀಪಿಸುವ ಪ್ರಾಥಮಿಕ ಹಂತವಾಗಿರುತ್ತದೆ. ಆಧ್ಯಾತ್ಮಿಕ ಮಾರ್ಗದರ್ಶಕರ ಶಿಷ್ಯರು, ಕನಿಷ್ಠ ಪಕ್ಷ ಅನುಕೂಲಕರವಾದ ಪುನರ್ಜನ್ಮ, ವಿಮೋಚನೆ ಮತ್ತು ಜ್ಞಾನೋದಯದಂತಹ ಹೆಚ್ಚಿನ ಗುರಿಗಳ ಕಡೆಗೆ ಒಲವು ತೋರುತ್ತಾರೆ. ಇದಲ್ಲದೆ, ಬೌದ್ಧ ಶಿಷ್ಯರು, ಬೌದ್ಧ ಧರ್ಮದಲ್ಲಿ ವಿವರಿಸಿದ ಪುನರ್ಜನ್ಮದ ಬೌದ್ಧಿಕ ತಿಳುವಳಿಕೆಯನ್ನು ಹೊಂದಿರುತ್ತಾರೆ ಮತ್ತು ಕನಿಷ್ಠಪಕ್ಷ ಅದರ ಅಸ್ತಿತ್ವವನ್ನು ತಾತ್ಕಾಲಿಕವಾಗಿ ಸ್ವೀಕರಿಸಿರುತ್ತಾರೆ. ಥೆರಪಿಯ ಗ್ರಾಹಕರಿಗೆ, ಅವರ ತುರ್ತು ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಗಳ ಹೊರತಾಗಿ ಪುನರ್ಜನ್ಮದ ಬಗ್ಗೆ ಅಥವಾ ಬೇರಯದರ ಬಗ್ಗೆ ಯೋಚಿಸುವ ಅಗತ್ಯವಿರುವುದಿಲ್ಲ.
(4) ಸ್ವಯಂ ಪರಿವರ್ತನೆಗಾಗಿ ಇರುವ ಬದ್ಧತೆಯ ಮಟ್ಟ. ಚಿಕಿತ್ಸಕರ ಗ್ರಾಹಕರು ಗಂಟೆಗೊಮ್ಮೆ ಶುಲ್ಕವನ್ನು ಪಾವತಿಸುತ್ತಾರೆ, ಆದರೆ ವರ್ತನೆ ಮತ್ತು ನಡವಳಿಕೆಯ ಜೀವನಪರ್ಯಂತ ಬದಲಾವಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ. ಮತ್ತೊಂದೆಡೆ, ಬೌದ್ಧ ಶಿಷ್ಯರು, ಬೋಧನೆಗಳಿಗೆ ಶುಲ್ಕವನ್ನು ಪಾವತಿಸಬಹುದು ಅಥವಾ ಪಾವತಿಸದಿರಬಹುದು; ಆದರೆ ಅವರು ಔಪಚಾರಿಕವಾಗಿ ಜೀವನದಲ್ಲಿನ ತಮ್ಮ ದಿಕ್ಕನ್ನು ಬದಲಾಯಿಸುತ್ತಾರೆ. ಸುರಕ್ಷಿತ ದಿಕ್ಕನ್ನು (ಆಶ್ರಯ) ಅಳವಡಿಸಿಕೊಳ್ಳುವುದರಿಂದ, ಬುದ್ಧರು ಸಂಪೂರ್ಣವಾಗಿ ಪ್ರಯಾಣಿಸಿದ ಮತ್ತು ನಂತರ ಕಲಿಸಿದ ಮತ್ತು ಹೆಚ್ಚು ಅರಿತುಕೊಂಡ ಆಧ್ಯಾತ್ಮಿಕ ಸಮುದಾಯವು ಅನುಸರಿಸಲು ಶ್ರಮಿಸುವ ಸ್ವಯಂ-ಅಭಿವೃದ್ಧಿಯ ಹಾದಿಯಲ್ಲಿ ಶಿಷ್ಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಇದಲ್ಲದೆ, ಬೌದ್ಧ ಶಿಷ್ಯರು ಜೀವನದಲ್ಲಿ ನೈತಿಕ, ರಚನಾತ್ಮಕ ಹಾದಿಯ ನಡವಳಿಕೆ, ಮಾತು ಮತ್ತು ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ವಿನಾಶಕಾರಿ ಮಾದರಿಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ, ಬದಲಿಗೆ ರಚನಾತ್ಮಕವಾದವುಗಳಲ್ಲಿ ತೊಡಗಿಸಿಕೊಳ್ಳುವುವಂತೆ ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ. ಶಿಷ್ಯರು, ಅನಿಯಂತ್ರಿತವಾದ ಪುನರ್ಜನ್ಮದ ಪುನರಾವರ್ತಿತ ಸಮಸ್ಯೆಗಳಿಂದ ವಿಮೋಚನೆಯನ್ನು ಪ್ರಾಮಾಣಿಕವಾಗಿ ಬಯಸಿದಾಗ, ಅವರು ಔಪಚಾರಿಕವಾಗಿ ಸಾಮಾನ್ಯವಾದ ಅಥವಾ ಸನ್ಯಾಸಿಗಳ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಮೂಲಕ ಇನ್ನೂ ಬಲವಾದ ಬದ್ಧತೆಯನ್ನು ಒಪ್ಪಿಕೊಳ್ಳುತ್ತಾರೆ. ಸ್ವಯಂ-ಅಭಿವೃದ್ಧಿಯ ಈ ಹಂತದಲ್ಲಿ, ಶಿಷ್ಯರು ಸ್ವಾಭಾವಿಕವಾಗಿ ವಿನಾಶಕಾರಿಯಾದ ಅಥವಾ ನಿರ್ದಿಷ್ಟ ಉದ್ದೇಶಗಳಿಗಾಗಿ ಬುದ್ಧನು ಶಿಫಾರಸು ಮಾಡಿದ ನಿರ್ದಿಷ್ಟ ನಡವಳಿಕೆಗಳನ್ನು ಎಲ್ಲಾ ಸಮಯದಲ್ಲೂ ನಿಗ್ರಹಿಸುವ ಜೀವನಪರ್ಯಂತ ಪ್ರತಿಜ್ಞೆಯನ್ನು ಸ್ವೀಕರಿಸುತ್ತಾರೆ. ಎರಡನೆಯದರ ಉದಾಹರಣೆಯೆಂದರೆ, ಸನ್ಯಾಸಿಗಳು ಬಾಂಧವ್ಯವನ್ನು ಕಡಿಮೆ ಮಾಡಲು, ಸಾಮಾನ್ಯ ಉಡುಗೆಯನ್ನು ತ್ಯಜಿಸುತ್ತಾರೆ ಮತ್ತು ನಿಲುವಂಗಿಯನ್ನು ಧರಿಸುತ್ತಾರೆ. ಪೂರ್ಣ ವಿಮೋಚನೆಯ ಬಯಕೆಯನ್ನು ಅಭಿವೃದ್ಧಿಪಡಿಸುವ ಮೊದಲೇ, ಶಿಷ್ಯರು ಸಾಮಾನ್ಯ ಅಥವಾ ಸನ್ಯಾಸಿಗಳ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುತ್ತಾರೆ.
ಮತ್ತೊಂದೆಡೆ, ಚಿಕಿತ್ಸಕರ ಗ್ರಾಹಕರು, ಐವತ್ತು ನಿಮಿಷಗಳ ನೇಮಕಾತಿಗಳ ವೇಳಾಪಟ್ಟಿಯಿರುವ, ಚಿಕಿತ್ಸಾ ಒಪ್ಪಂದದ ಭಾಗವಾಗಿ, ಒಂದು ರೀತಿಯ ಕಾರ್ಯವಿಧಾನದ ನಿಯಮಗಳನ್ನು ಅನುಸರಿಸಲು ಒಪ್ಪುತ್ತಾರೆ. ಆದರೆ, ಈ ನಿಯಮಗಳು ಚಿಕಿತ್ಸೆಯ ಸಮಯದಲ್ಲಿ ಮಾತ್ರ ಅನ್ವಯವಾಗುತ್ತವೆ. ಚಿಕಿತ್ಸೆಯ ಪರಿಸರದ ಹೊರಗೆ ಇದು ಅನ್ವಯವಾಗುವುದಿಲ್ಲ, ನೈಸರ್ಗಿಕವಾದ ವಿನಾಶಕಾರಿ ನಡವಳಿಕೆಯನ್ನು ದೂರವಿರುಸುವುದನ್ನು ಒಳಗೊಂಡಿರುವುದಿಲ್ಲ ಮತ್ತು ಜೀವನಪರ್ಯಂತ ಇರುವುದಿಲ್ಲ.
(5) ಗುರುಗಳು ಅಥವಾ ಚಿಕಿತ್ಸಕನ ಕಡೆಗೆ ಇರುವ ವರ್ತನೆ. ಶಿಷ್ಯರು, ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕರನ್ನು ತಾವು ಸಾಧಿಸಲು ಶ್ರಮಿಸುವ ಜೀವಂತ ಉದಾಹರಣೆಗಳಾಗಿ ನೋಡುತ್ತಾರೆ. ಮಾರ್ಗದರ್ಶಕರ ಉತ್ತಮ ಗುಣಗಳ ಸರಿಯಾದ ಗುರುತಿಸುವಿಕೆಯ ಆಧಾರದ ಮೇಲೆ ಈ ರೀತಿಯಾಗಿ ಅವರನ್ನು ಪರಿಗಣಿಸುತ್ತಾರೆ ಮತ್ತು ಜ್ಞಾನೋದಯದ ಕ್ರಮವಾದ ಮಾರ್ಗದಲ್ಲಿ ಈ ದೃಷ್ಟಿಕೋನವನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಬಲಪಡಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಗ್ರಾಹಕರು, ತಮ್ಮ ಚಿಕಿತ್ಸಕರನ್ನು ಭಾವನಾತ್ಮಕ ಆರೋಗ್ಯದ ಮಾದರಿಗಳಾಗಿ ಗ್ರಹಿಸಬಹುದು, ಆದರೆ ಚಿಕಿತ್ಸಕರ ಉತ್ತಮ ಗುಣಗಳ ಸರಿಯಾದ ಅರಿವು ಅವರಿಗೆ ಅಗತ್ಯವಿರುವುದಿಲ್ಲ. ಚಿಕಿತ್ಸಕನಂತೆ ಆಗುವುದು ಆ ಸಂಬಂಧದ ಗುರಿಯಾಗಿರುವುದಿಲ್ಲ. ಚಿಕಿತ್ಸೆಯ ಅವಧಿಯಲ್ಲಿ, ಚಿಕಿತ್ಸಕರು ತಮ್ಮ ಗ್ರಾಹಕರ ಆದರ್ಶಗಳ ಪ್ರಕ್ಷೇಪಗಳನ್ನು ಮೀರಿಸಿ ಮುನ್ನಡೆಸುತ್ತಾರೆ.
"ಶಿಷ್ಯ" ಪದದ ಅನುಚಿತ ಬಳಕೆ
ಕೆಲವೊಮ್ಮೆ, ಜನರು ಮತ್ತು ಅವರ ಶಿಕ್ಷಕರಿಬ್ಬರೂ ನಿಯಮಗಳ ಸರಿಯಾದ ಅರ್ಥವನ್ನು ಪೂರೈಸುವಲ್ಲಿ ವಿಫಲರಾಗಿದ್ದರೂ ಸಹ, ತಮ್ಮನ್ನು ತಾವು ಆಧ್ಯಾತ್ಮಿಕ ಮಾರ್ಗದರ್ಶಕರ ಶಿಷ್ಯರು ಎಂದು ಕರೆದುಕೊಳ್ಳುತ್ತಾರೆ. ಅವರ ನಿಷ್ಕಪಟತೆಯು ಅವಾಸ್ತವಿಕ ನಿರೀಕ್ಷೆಗಳು, ತಪ್ಪುಗ್ರಹಿಕೆಗಳು, ನೊಂದ ಭಾವನೆಗಳು ಮತ್ತು ನಿಂದನೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ನಿಂದನೆಗೆ ಗುರಿಯಾಗುವುದು ಎಂದರೆ ಲೈಂಗಿಕವಾಗಿ, ಭಾವನಾತ್ಮಕವಾಗಿ ಅಥವಾ ಆರ್ಥಿಕವಾಗಿ ಶೋಷಣೆಗೆ ಒಳಗಾಗುವುದು ಅಥವಾ ಅಧಿಕಾರವನ್ನು ಪ್ರದರ್ಶಿಸುವವರ ಕಪಟತೆಗೆ ಗುರಿಯಾಗುವುದು ಎಂದರ್ಥ. ಪಶ್ಚಿಮದಲ್ಲಿ ಕಂಡುಬರುವ ಮೂರು ಸಾಮಾನ್ಯ ವಿಧದ ಹುಸಿ-ಶಿಷ್ಯರನ್ನು ನಾವು ಪರಿಶೀಲಿಸೋಣ, ಅವರು ವಿಶೇಷವಾಗಿ ಆಧ್ಯಾತ್ಮಿಕ ಶಿಕ್ಷಕರೊಂದಿಗೆ ಸಮಸ್ಯೆಗಳಿಗೆ ಒಳಗಾಗುತ್ತಾರೆ.
(1) ಕೆಲವರು ತಮ್ಮ ಕಲ್ಪನೆಗಳನ್ನು ಈಡೇರಿಸಿಕೊಳ್ಳಲು ಧರ್ಮ ಕೇಂದ್ರಗಳಿಗೆ ಬರುತ್ತಾರೆ. ಅವರು "ನಿಗೂಢ ಪೂರ್ವ" ಅಥವಾ ಸೂಪರ್‌ಸ್ಟಾರ್ ಗುರುಗಳ ಬಗ್ಗೆ ಏನನ್ನಾದರೂ ಓದಿರುತ್ತಾರೆ ಅಥವಾ ಕೇಳಿರುತ್ತಾರೆ ಮತ್ತು ವಿಲಕ್ಷಣ ಅಥವಾ ಅತೀಂದ್ರಿಯ ಅನುಭವವನ್ನು ಹೊಂದುವ ಮೂಲಕ ತಮ್ಮ ರೋಮಾಂಚನಕಾರಿಯಲ್ಲದ ಜೀವನವನ್ನು ಮೀರಲು ಬಯಸುತ್ತಾರೆ. ಅವರು ಆಧ್ಯಾತ್ಮಿಕ ಶಿಕ್ಷಕರನ್ನು ಭೇಟಿಯಾಗುತ್ತಾರೆ ಮತ್ತು ಆ ಶಿಕ್ಷಕರು ಏಷ್ಯನ್ ಆಗಿದ್ದರೆ ಅಥವಾ ನಿಲುವಂಗಿಯನ್ನು ಧರಿಸಿದ್ದರೆ ಅಥವಾ ಎರಡೂ ಆಗಿದ್ದಲ್ಲಿ, ತಕ್ಷಣವೇ ತಮ್ಮನ್ನು ತಾವು ಶಿಷ್ಯರು ಎಂದು ಘೋಷಿಸಿಕೊಳ್ಳುತ್ತಾರೆ. ಏಷ್ಯನ್ ಶೀರ್ಷಿಕೆಗಳು ಅಥವಾ ಹೆಸರುಗಳನ್ನು ಹೊಂದಿರುವ ಪಾಶ್ಚಾತ್ಯ ಶಿಕ್ಷಕರೊಂದಿಗೆ, ಅವರು ನಿಲುವಂಗಿಯನ್ನು ಧರಿಸಿರಲಿ ಅಥವಾ ಇಲ್ಲದಿರಲಿ, ಇದೇ ರೀತಿಯಾಗಿ ವರ್ತಸುತ್ತಾರೆ.
ಅತೀಂದ್ರಿಯದ ಅನ್ವೇಷಣೆಯು, ಇಂತಹ ಅನ್ವೇಷಕರು ತಮ್ಮ ಆಧ್ಯಾತ್ಮಿಕ ಶಿಕ್ಷಕರೊಂದಿಗೆ ಸ್ಥಾಪಿಸುವ ಸಂಬಂಧಗಳನ್ನು ಆಗಾಗ್ಗೆ ಅಸ್ಥಿರಗೊಳಿಸುತ್ತದೆ. ತಮ್ಮನ್ನು ತಾವು ಸರಿಯಾದ ಅರ್ಹರಾದ ಮಾರ್ಗದರ್ಶಕರ ಶಿಷ್ಯರು ಎಂದು ಘೋಷಿಸಿಕೊಂಡರೂ ಸಹ, ಅವರ ಕಲ್ಪನೆಗಳನ್ನು ಹೊರತುಪಡಿಸಿ, ಅಲೌಕಿಕವಾದದ್ದು ಏನೂ ನಡೆಯುತ್ತಿಲ್ಲ ಎಂದು ಅವರು ಅರಿತುಕೊಂಡಾಗ, ಅವರು ಈ ಶಿಕ್ಷಕರನ್ನು ಬಿಟ್ಟುಬಿಡುತ್ತಾರೆ. ಇದಲ್ಲದೆ, "ಹಠಾತ್ ಶಿಷ್ಯರ" ಅವಾಸ್ತವಿಕ ವರ್ತನೆಗಳು ಮತ್ತು ಹೆಚ್ಚಿನ ನಿರೀಕ್ಷೆಗಳು ಅವರ ವಿಮರ್ಶಾತ್ಮಕ ಸಾಮರ್ಥ್ಯಗಳನ್ನು ಕುರುಡಾಗಿಸುತ್ತವೆ. ಅಂತಹ ವ್ಯಕ್ತಿಗಳು, ಚೆನ್ನಾಗಿ ನಟಿಸುವ ಚಾಲಾಕು ಆಧ್ಯಾತ್ಮಿಕ ಹುಸಿಯರಿಗರ ವಂಚನೆಗೆ ಬೀಳುತ್ತಾರೆ.
(2) ಇತರರು ಭಾವನಾತ್ಮಕ ಅಥವಾ ದೈಹಿಕ ನೋವನ್ನು ಜಯಿಸಲು ಸಹಾಯಕ್ಕಾಗಿ, ಹತಾಶರಾಗಿ ಕೇಂದ್ರಗಳಿಗೆ ಬರಬಹುದು. ಅವರು ವಿವಿಧ ರೀತಿಯ ಚಿಕಿತ್ಸೆಯನ್ನು ಪಡೆದಿರಬಹುದು, ಆದರೆ ಅದರಿಂದ ಯಾವುದೇ ಪ್ರಯೋಜನವಾಗದೇ ಇರಬಹುದು. ಈಗ ಅವರು ಜಾದೂಗಾರ/ವೈದ್ಯರಿಂದ ಪವಾಡ ಚಿಕಿತ್ಸೆಗಾಗಿ ಹುಡುಕುತ್ತಿರಬಹುದು. ಅವರಿಗೆ ಮಾಯಾ ಔಷಧಿಯನ್ನು ನೀಡುವ, ವಿಶೇಷ ಪ್ರಾರ್ಥನೆ ಅಥವಾ ಮಂತ್ರವನ್ನು ಪುನರಾವರ್ತಿಸಲು ಹೇಳುವ ಅಥವಾ ಪ್ರಬಲವಾದ ಅಭ್ಯಾಸವನ್ನು- ನೂರು ಸಾವಿರ ನಮಸ್ಕಾರಗಳನ್ನು ಮಾಡುವಂತಹ – ಮಾಡುವುದರಿಂದ ಅವರ ಸಮಸ್ಯೆಗಳು ಸ್ವಯಂಚಾಲಿತವಾಗಿ ಪರಿಹಾರವಾಗುತ್ತವೆ ಎಂದು ಹೇಳುವ ಒಬ್ಬ ವ್ಯಕ್ತಿಯ ಶಿಷ್ಯರೆಂದು ತಮ್ಮನ್ನು ತಾವು ಘೋಷಿಸಿಕೊಳ್ಳುತ್ತಾರೆ. ವಿಶೇಷವಾಗಿ, ನಿಗೂಢತೆಯ ಅನ್ವೇಷಣೆಯಲ್ಲಿರುವ ಜನರನ್ನು ಆಕರ್ಷಿಸುವ ಶಿಕ್ಷಕರ ಕಡೆಗೇ ಇವರೂ ತಿರುಗುತ್ತಾರೆ. ಪವಾಡ-ಅರಸಿಗರ "ಫಿಕ್ಸ್-ಇಟ್" ಮನಸ್ಥಿತಿಯು ಆಗಾಗ್ಗೆ ನಿರಾಶೆ ಮತ್ತು ಹತಾಶೆಗೆ ಕಾರಣವಾಗುತ್ತದೆ, ಏಕೆಂದರೆ ಅರ್ಹರಾದ ಮಾರ್ಗದರ್ಶಕರ ಸಲಹೆಯನ್ನು ಅನುಸರಿಸುವಾಗ, ಅದರಿಂದ ಯಾವುದೇ ಅದ್ಭುತವಾದ ಗುಣಪಡಿಸುವಿಕೆ ಆಗುವುದಿಲ್ಲ. ಆ "ಫಿಕ್ಸ್-ಇಟ್" ಮನಸ್ಥಿತಿಯು ಆಧ್ಯಾತ್ಮಿಕ ಡೋಂಗಿಗಳ ನಿಂದನೆಯನ್ನು ಸೆಳೆಯುತ್ತದೆ.
(3) ಇನ್ನೂ ಕೆಲವರು, ವಿಶೇಷವಾಗಿ ನಿರಾಶೆಗೊಂಡ ನಿರುದ್ಯೋಗಿಗಳು, ಅಸ್ತಿತ್ವವಾದದ ಸಬಲೀಕರಣವನ್ನು ಪಡೆಯುವ ಭರವಸೆಯಿಂದ ಧರ್ಮಾಚರಣೆಯ ಪಂಥಗಳ ಧರ್ಮ ಕೇಂದ್ರಗಳಿಗೆ ಬರುತ್ತಾರೆ. ವರ್ಚಸ್ವಿ ಮೆಗಾಲೊಮೇನಿಯಾಕ್‌ಗಳು "ಆಧ್ಯಾತ್ಮಿಕ ಫ್ಯಾಸಿಸ್ಟ್" ವಿಧಾನಗಳನ್ನು ಬಳಸಿಕೊಂಡು ಅವರನ್ನು ಸೆಳೆಯುತ್ತಾರೆ. ತಮ್ಮ ಪಂಗಡಗಳಿಗೆ ಸಂಪೂರ್ಣ ನಿಷ್ಠೆಯನ್ನು ಸಲ್ಲಿಸಿದರೆ ತಮ್ಮ ಶಿಷ್ಯರ ಸಂಖ್ಯಾಬಲದ ಭರವಸೆಯನ್ನು ನೀಡುತ್ತಾರೆ. ಅವರು ತಮ್ಮ ಶತ್ರುಗಳನ್ನು, ವಿಶೇಷವಾಗಿ ಕೀಳು, ಅಶುದ್ಧ ಬೌದ್ಧ ಸಂಪ್ರದಾಯಗಳ ಅನುಯಾಯಿಗಳನ್ನು ಹೊಡೆದುರುಳಿಸುವ ಉಗ್ರ ರಕ್ಷಕರ ನಾಟಕೀಯ ವಿವರಣೆಯೊಂದಿಗೆ ಶಿಷ್ಯರನ್ನು ಮತ್ತಷ್ಟು ಆಕರ್ಷಿಸುತ್ತಾರೆ. ತಮ್ಮ ಚಳುವಳಿಗಳ ಸ್ಥಾಪಕ ಪಿತಾಮಹರ ಅತಿಮಾನುಷ ಶಕ್ತಿಗಳ ಭವ್ಯವಾದ ಕಥೆಗಳೊಂದಿಗೆ, ತಮ್ಮ ಆಧ್ಯಾತ್ಮಿಕ ಅರ್ಹತೆಗಳನ್ನು ಹಿಡಿದೆತ್ತುವ ಪ್ರಬಲ ನಾಯಕನೊಬ್ಬನ ಶಿಷ್ಯರಾಗುವ ಕನಸುಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಈ ಭರವಸೆಗಳಿಗೆ ಪ್ರತಿಕ್ರಿಯಿಸುತ್ತಾ, ಅಂತಹ ಜನರು ತಕ್ಷಣವೇ ತಮ್ಮನ್ನು ತಾವು ಶಿಷ್ಯರು ಎಂದು ಘೋಷಿಸಿಕೊಳ್ಳುತ್ತಾರೆ ಮತ್ತು ಸರ್ವಾಧಿಕಾರಿ ಶಿಕ್ಷಕರು ನೀಡುವ ಎಲ್ಲಾ ಸೂಚನೆಗಳನ್ನು ಅಥವಾ ಆದೇಶವನ್ನು ಕುರುಡಾಗಿ ಅನುಸರಿಸುತ್ತಾರೆ. ಇದರ ಫಲಿತಾಂಶಗಳು ಸಾಮಾನ್ಯವಾಗಿ ವಿನಾಶಕಾರಿಯಾಗಿರುತ್ತವೆ.
ಸಾರಾಂಶ
ಸಂಕ್ಷಿಪ್ತವಾಗಿ ಹೇಳುವುದಾದರೆ, ಹೇಗೆ ಬೌದ್ಧ ಕೇಂದ್ರದಲ್ಲಿ ಕಲಿಸುವ ಪ್ರತಿಯೊಬ್ಬರೂ ಅಧಿಕೃತ ಆಧ್ಯಾತ್ಮಿಕ ಮಾರ್ಗದರ್ಶಕರಲ್ಲವೋ, ಹಾಗೆಯೇ ಕೇಂದ್ರದಲ್ಲಿ ಅಧ್ಯಯನ ಮಾಡುವ ಪ್ರತಿಯೊಬ್ಬರೂ ನಿಜವಾದ ಆಧ್ಯಾತ್ಮಿಕ ಶಿಷ್ಯರಾಗಿರುವುದಿಲ್ಲ. ನಮಗೆ ಮಾರ್ಗದರ್ಶಕ ಮತ್ತು ಶಿಷ್ಯ ಎಂಬ ಪದಗಳನ್ನು ನಿಖರವಾಗಿ ಬಳಸುವುದರ ಅಗತ್ಯವಿದೆ. ಇದಕ್ಕಾಗಿ ಆಧ್ಯಾತ್ಮಿಕ ಪ್ರಾಮಾಣಿಕತೆ ಮತ್ತು ತೋರಿಕೆಯಿಲ್ಲದಿರುವುದು ಅಗತ್ಯವಿರುತ್ತದೆ.