ಜನರು ಬೌದ್ಧಧರ್ಮಕ್ಕೆ ಏಕೆ ಆಕರ್ಷಿತರಾಗುತ್ತಾರೆ

07:55
ನಮ್ಮ ಆಧುನಿಕ ಕಾಲದಲ್ಲಿ, ಹೆಚ್ಚಿನ ಜನರು ಬೌದ್ಧಧರ್ಮದತ್ತ ಏಕೆ ತಿರುಗುತ್ತಿದ್ದಾರೆ? ಇದಕ್ಕೆ ಹಲವಾರು ಕಾರಣಗಳಿವೆ, ಏಕೆಂದರೆ ಜನರು ವಿವಿಧಮಯವಾಗಿರುತ್ತಾರೆ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಪ್ರತ್ಯೇಕವಾಗಿರುತ್ತಾರೆ, ಆದರೆ ನನ್ನ ಅನಿಸಿಕೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೌದ್ಧಧರ್ಮದ ಕಡೆಗೆ ತಿರುಗುತ್ತಿರುವುದು ಏಕೆಂದರೆ, ಅವರ ಜೀವನದಲ್ಲಿ ಹೆಚ್ಚು ಹೆಚ್ಚು ಸಮಸ್ಯೆಗಳಿವೆ ಎಂದು ಅವರು ಗುರುತಿಸಿರುತ್ತಾರೆ.

ಇಂದಿನ ಜನರು ಅನುಭವಿಸುತ್ತಿರುವ ಸಮಸ್ಯೆಗಳ ವಿಧಗಳು 

ಭೂಮಿಯ ಮೇಲೆ ಜನರು ಅಸ್ತಿತ್ವದಲ್ಲಿ ಇರುವವರೆಗಿಂದ ಅವರಿಗೆ ಹಲವಾರು ಸಮಸ್ಯೆಗಳಿವೆ, ಬಹುಶಃ ಮನುಷ್ಯರಿಗಿಂತಲೂ ಮೊದಲು ಪ್ರಾಣಿಗಳಿಗೆ ಈ ಸಮಸ್ಯಗಳಿರಬಹುದು: ಪರಸ್ಪರ ಸಂಬಂಧದ ಸಮಸ್ಯೆಗಳು, ಕೋಪದಿಂದ ಬರುವ ಸಮಸ್ಯೆಗಳು, ಜಗಳಗಳು, ವಿವಾದಗಳು. ಇವುಗಳು ಬಹುತೇಕ ಎಂದಿನಿಂದಲೂ ಎಲ್ಲರೂ ಎದುರಿಸುತ್ತಿರುವ ಸಮಸ್ಯೆಗಳಾಗಿವೆ, ಆದ್ದರಿಂದ ನೀವು ಅಥವಾ ನಾನು ಇವನ್ನು ಇಂದು ಅನುಭವಿಸುವುದರಲ್ಲಿ ವಿಶೇಷವೇನೂ ಇಲ್ಲ. ಆನಂತರ ಇನ್ನಷ್ಟು ಕಷ್ಟಕರವಾಗಿಸುವ ಆರ್ಥಿಕ ಸಮಸ್ಯೆಗಳು ಮತ್ತು ಯುದ್ಧಗಳ ಸಮಸ್ಯೆಗಳಂತಹ ಇತ್ತೀಚಿನ ಸಮಸ್ಯೆಗಳಿವೆ. ಹೀಗೆ ಜನರು ಈ ಸಮಸ್ಯೆಗಳನ್ನು ಹೆಚ್ಚು ಹೆಚ್ಚು ಅನುಭವಿಸುತ್ತಿದ್ದಾರೆ. ಅವುಗಳಿಗೆ ಮತ್ತು ವೈಯಕ್ತಿಕ ಮಟ್ಟದಲ್ಲಿ ಅವುಗಳೊಂದಿಗೆ, ವಿಶೇಷವಾಗಿ ಅವರ ಭಾವನೆಗಳಿಗೆ, ಅವರ ಮನಸ್ಸಿಗೆ ಸಂಬಂಧಿಸಿದಂತೆ ಹೇಗೆ ವ್ಯವಹರಿಸಬೇಕು ಎಂಬುದಕ್ಕೆ ಪರಿಹಾರಗಳು ಸಿಗುತ್ತಿಲ್ಲ. ಅವರಿಗೆ ಈಗಾಗಲೇ ಲಭ್ಯವಿರುವುದರಲ್ಲಿ ಇವುಗಳಿಗೆ ಪರಿಹಾರಗಳು ಸಿಗುತ್ತಿಲ್ಲ. 

ಆದರೆ ಆಧುನಿಕ ಕಾಲದ ಅದ್ಭುತ ಬೆಳವಣಿಗೆಗಳಲ್ಲಿ ಸಂವಹನವು ಒಂದಾಗಿದೆ, ವಿಶೇಷವಾಗಿ ಇಂದು ನಾವು ಮಾಹಿತಿಯ ಯುಗ ಎಂದು ಕರೆಯಲ್ಪಡುವುದರಲ್ಲಿ ಮತ್ತು ಇನ್ನೂ ಹೆಚ್ಚಾಗಿ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಇದನ್ನು ಕಾಣಬಹುದಾಗಿದೆ. ಇದರರ್ಥ ಅನೇಕ ಪರ್ಯಾಯ ವ್ಯವಸ್ಥೆಗಳ ಬಗ್ಗೆ ನಮಗೆ ಹೆಚ್ಚು ಹೆಚ್ಚು ಮಾಹಿತಿ ಲಭ್ಯವಿದೆ. ಜೊತೆಗೆ ಪರಮಪೂಜ್ಯ ದಲೈ ಲಾಮಾ ಅವರಂತಹ ಅನೇಕ ಶ್ರೇಷ್ಠ ಬೌದ್ಧ ಗುರುಗಳು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದಾರೆ. ತಮ್ಮನ್ನು ತಾವು ಅಸಾಧಾರಣ ಮಟ್ಟಕ್ಕೆ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದವರಿಗೆ ಅನೇಕ ಜನರು ಸಾಕ್ಷಿಯಾಗಿದ್ದಾರೆ, ಕೆಲವು ಅತ್ಯಂತ ಭೀಕರ ಸಂದರ್ಭಗಳ ನಡುವೆಯೂ, ಉದಾಹರಣೆಗೆ ಒಬ್ಬರ ದೇಶವನ್ನು ಕಳೆದುಕೊಂಡಾಗಲೂ, ಶಾಂತಿಯುತವಾದ, ಸಮಾಧಾನದ, ಪ್ರೀತಿಯ ಮನಸ್ಸನ್ನು ಹೊಂದಲು ಸಮರ್ಥರಾಗಿರುವವರನ್ನು ತಮ್ಮ ಸ್ವಂತ ಕಣ್ಣಿನಿಂದ ವೀಕ್ಷಿಸಿದ್ದಾರೆ. ಇದು ಜೀವಂತ ವ್ಯಕ್ತಿಯಾದ್ದರಿಂದ ಸ್ಫೂರ್ತಿಯ ಗುಣಮಟ್ಟವೂ ಹೆಚ್ಚಿರುವುದು, ನಾವು ಇಂಟರ್ನೆಟ್ ಅಥವಾ ಪುಸ್ತಕಗಳಲ್ಲಿ ಪಡೆಯಬಹುದಾದ ಮಾಹಿತಿಯ ಜೊತೆಗೆ ಇದು ಕೂಡ ಬಹಳ ಮುಖ್ಯವಾಗಿರುತ್ತದೆ. 

ಹೀಗಾಗಿ, ಜನರು ಮೊದಲಾಗಿ ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೆಲವು ಪರಿಹಾರಗಳನ್ನು ಹುಡುಕಲು ಬೌದ್ಧಧರ್ಮದ ಕಡೆಗೆ ತಿರುಗುತ್ತಾರೆ ಮತ್ತು ಬೌದ್ಧಧರ್ಮವು ಜೀವನವನ್ನು ಎದುರಿಸಲು ಕೆಲವು ಮಾರ್ಗವನ್ನು ನೀಡುವುದೆಂದು ಅವರು ಭರವಸೆ ಇಟ್ಟಿರುತ್ತಾರೆ.  ಅವರ ಸಮಾಜಕ್ಕೆ ಬೌದ್ಧಧರ್ಮವು ಬಹಳಾ ಪರಕೀಯವಾಗಿರಲಿ ಅಥವಾ ಅವರ ಜನರ ಸಾಂಪ್ರದಾಯಿಕ ವ್ಯವಸ್ಥೆಯಾಗಿರಲಿ, ಇದು ನಿಜವಾಗಿರುತ್ತದೆ.

ಬೌದ್ಧಧರ್ಮದ ತರ್ಕಬದ್ಧವಾದ ಭಾಗ 

ಬೌದ್ಧಧರ್ಮವು ಪರಿಹಾರಗಳನ್ನು ನೀಡುವುದು ಎಂಬ ಚೌಕಟ್ಟಿನೊಳಗೆ, ಬೌದ್ಧಧರ್ಮದ ವಿಭಿನ್ನ ಅಂಶಗಳು ವಿಭಿನ್ನ ಜನರನ್ನು ಆಕರ್ಷಿಸುತ್ತವೆ. ಪರಮಪೂಜ್ಯ ದಲೈ ಲಾಮಾ ಅವರು ಏನ್ನನ್ನು ಒತ್ತಿಹೇಳುತ್ತಾರೆ ಎಂಬುದನ್ನು ನೋಡಿದರೆ, ಅವರು ಒತ್ತಿ ಹೇಳುವುದು ಮತ್ತು ಬಹಳಷ್ಟು ಜನರು ಆಕರ್ಷಿತರಾಗುವುದು, ಬೌದ್ಧಧರ್ಮದ ತರ್ಕಬದ್ಧವಾದ, ವಿಶ್ಲೇಷಣಾತ್ಮಕವಾದ ಮತ್ತು ಪ್ರಾಯೋಗಿಕ ಬದಿಗಳಿಗಾಗಿ. ಬೌದ್ಧಧರ್ಮದ ವಿಧಾನವು ವಿಜ್ಞಾನದ ವಿಧಾನದಂತೆಯೇ ಇರುವುದು ಎಂದು ಅವರು ಸೂಚಿಸುತ್ತಾರೆ, ಅಂದರೆ ನಾವು ಕೇವಲ ಕುರುಡು ನಂಬಿಕೆ ಮತ್ತು ಭಕ್ತಿಯ ಆಧಾರದ ಮೇಲೆ ವಿವಿಧ ತತ್ವಗಳನ್ನು ಸ್ವೀಕರಿಸುವುದಿಲ್ಲ, ಬದಲಿಗೆ ನಾವು ತರ್ಕ ಮತ್ತು ಕಾರಣವನ್ನು, ಆಳವಾದ ವಿಶ್ಲೇಷಣೆ, ಮತ್ತು ನಾವೇ ಅದನ್ನು ಪ್ರಯತ್ನಿಸುವ ಪ್ರಾಯೋಗಿಕ ವಿಧಾನಗಳನ್ನು ಬಳಸುವ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತೇವೆ - ಮನಸ್ಸಿನ ಶಾಂತಿಗಾಗಿ, ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು, ಬೌದ್ಧಧರ್ಮದಲ್ಲಿ ಬೋಧಿಸುವ ವಿಧಾನಗಳು, ನಿಜವಾಗಿಯೂ ಅವು ಪ್ರಚಾರಿಸುವ ಫಲಿತಾಂಶಗಳನ್ನು ನೀಡುತ್ತವೆಯೇ ಎಂದು ಪ್ರಯೋಗಿಸುವುದಾಗಿರುತ್ತದೆ. ಜೊತೆಗೆ ನಮ್ಮ ವಿಧಾನದಲ್ಲಿ ತುಂಬಾ ಪ್ರಾಯೋಗಿಕವಾಗಿರುತ್ತೇವೆ, ಆದರ್ಶವಾದಿಯಲ್ಲ, ಬದಲಿಗೆ ನಮ್ಮ ದೈನಂದಿನ ಜೀವನದಲ್ಲಿ, ಯಾವುದು ನಮಗೆ ನಿಜವಾಗಿಯೂ ಸಹಾಯಕವಾಗಿರುತ್ತದೆ ಎಂಬುದರ ಬಗ್ಗೆ ವಾಸ್ತವಿಕವಾಗಿ ಪ್ರಾಯೋಗಿಕವಾಗಿರುತ್ತೇವೆ. 

ಇದರ ಜೊತೆಗೆ, ವಿಜ್ಞಾನದ ಆವಿಷ್ಕಾರಗಳಿಂದ, ಸಾಂಪ್ರದಾಯಿಕ ಬೌದ್ಧ ಬೋಧನೆಗಳಲ್ಲಿ ತಪ್ಪು ಅಥವಾ ಅಸಮಂಜಸವೆಂದು ಸಾಬೀತಾಗಿರುವ ಅಂಶಗಳಿದ್ದರೆ - ಉದಾಹರಣೆಗೆ, ಬ್ರಹ್ಮಾಂಡದ ರಚನೆಯ ಬಗ್ಗೆ – ಆಗ ಪರಮಪೂಜ್ಯರು ಅವೆಲ್ಲವನ್ನೂ ಬೌದ್ಧ ಬೋಧನೆಗಳಿಂದ ಸಂತೋಷದಿಂದ ಕೈಬಿಡುತ್ತಾರೆ, ಮತ್ತು ವಿಜ್ಞಾನದ ದೃಷ್ಟಿಕೋನವನ್ನು ಒಪ್ಪಿಕೊಳ್ಳುತ್ತಾರೆ, ಏಕೆಂದರೆ ಇಲ್ಲಿ ವಿರೋಧಾತ್ಮಕವಾಗಿರುವುದು ಯಾವುದೂ ಇರುವುದಿಲ್ಲ. ಏಕೆಂದರೆ ಬೌದ್ಧಧರ್ಮವು ವಾಸ್ತವವನ್ನು ಒತ್ತಿಹೇಳುತ್ತದೆ ಕಲ್ಪನೆಯನ್ನಲ್ಲ, ಮತ್ತು ಬುದ್ಧನು ನಮಗೆ ಭೌಗೋಳಿಕತೆಯನ್ನು ಬೋಧಿಸಲು ಬಂದಿಲ್ಲ, ಬದಲಿಗೆ ಜೀವನದಲ್ಲಿನ ನಮ್ಮ ಸಮಸ್ಯೆಗಳನ್ನು ಎದುರಿಸಲು ನಮಗೆ ಒಂದು ಮಾರ್ಗವನ್ನು ಕಲಿಸಲು ಬಂದಿರುವರು. ಈ ಗ್ರಹದ ಗಾತ್ರದ ಬಗ್ಗೆ, ನಮ್ಮ ಭೂಮಿ ಮತ್ತು ಸೂರ್ಯ ಮತ್ತು ಚಂದ್ರನ ನಡುವೆಯಿರುವ ಅಂತರ ಇತ್ಯಾದಿ ಬಗ್ಗೆಗಿರುವ ಸಾಂಪ್ರದಾಯಿಕ ಬೋಧನೆಗಳನ್ನು ಎರಡೂವರೆ ಸಾವಿರ ವರ್ಷಗಳ ಹಿಂದೆ, ಜನರು ಅರ್ಥಮಾಡಿಕೊಳ್ಳುವ ಸಾಂಪ್ರದಾಯಿಕ ವಿಧಾನಗಳಲ್ಲಿ ಮಾತ್ರ ವಿವರಿಸಲಾಗಿತ್ತು. ಆದ್ದರಿಂದ, ಆ ವಿಷಯಗಳ ಬಗ್ಗೆಗಿರುವ ಸಾಂಪ್ರದಾಯಿಕ ಬೋಧನೆಗಳು ಅಷ್ಟೇನು ಮುಖ್ಯವಾಗಿರುವುದಿಲ್ಲ; ಅವು ಬುದ್ಧನ ಬೋಧನೆಯ ಮುಖ್ಯ ಅಂಶವಾಗಿರುವುದಿಲ್ಲ. ಅಲ್ಲದೆ ಪರಮಪೂಜ್ಯರು ಏನನ್ನಾದರೂ, ಉದಾಹರಣೆಗೆ ಪುರ್ನಜನ್ಮವನ್ನು ನಿರಾಕರಿಸುವಂತೆ, ಮತ್ತು "ನನಗೆ ಹಾಗೆ ಅನಿಸುವುದಿಲ್ಲ" ಎಂಬ ಆಧಾರದ ಮೇಲೆ ಅದನ್ನು ಪರಿಗಣನೆಯಿಂದ ತಳ್ಳಿಹಾಕದಿರುವಂತೆ ವಿಜ್ಞಾನಿಗಳಿಗೆ ಸವಾಲು ಹಾಕುತ್ತಾರೆ. ಒಂದು ವಿಷಯದ ಅಸ್ತಿತ್ವವನ್ನು ನಿರಾಕರಿಸಲು, “ನನಗೆ ಹಾಗೆ ಅನಿಸುವುದಿಲ್ಲ” ಎಂಬುದು ಮಾನ್ಯವಾದ ಕಾರಣವಾಗಿರುವುದಿಲ್ಲ. 

ಆದ್ದರಿಂದ ಇದು ಖಂಡಿತವಾಗಿಯೂ ಹೆಚ್ಚು ತರ್ಕಬದ್ಧ ಮನಸ್ಸುಳ್ಳ ಜನರಿಗೆ ಇಷ್ಟವಾಗುವ ವಿಷಯವಾಗಿರುತ್ತದೆ. ಜೊತೆಗೆ ವಿಜ್ಞಾನಿಗಳ ಮತ್ತು ಬೌದ್ಧ ಕಡೆಯಿಂದ ಪರಮಪೂಜ್ಯರಾದ ದಲೈ ಲಾಮಾ ಅವರ ನೇತೃತ್ವದಲ್ಲಿ, ಇವುಗಳ ನಡುವೆ ನಾವು ಅಡ್ಡ-ಫಲೀಕರಣ ಎಂದು ಕರೆಯಬಹುದಾದದ್ದನ್ನು ದೊಡ್ಡ ಪ್ರಮಾಣದಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಕಾಣಬಹುದಾಗಿದೆ, ಏಕೆಂದರೆ ಬೌದ್ಧ ಬೋಧನೆಗಳಲ್ಲಿನ ಪ್ರಮುಖ ವಿಷಯಗಳಲ್ಲಿ, ‘ನಮ್ಮ ಮನಸ್ಥಿತಿಯಿಂದ ನಮ್ಮ ಆರೋಗ್ಯವು ತುಂಬಾ ಪ್ರಭಾವಿತವಾಗಿರುತ್ತದೆ’ ಎಂಬುದು ಒಂದಾಗಿರುತ್ತದೆ. ನಾವು ತೀರಾ ನಿರಾಶಾವಾದಿಗಳಾಗಿದ್ದರೆ – ಅಂದರೆ ತುಂಬಾ ನಕಾರಾತ್ಮಕವಾಗಿ ಮತ್ತು ಯಾವಾಗಲೂ ನಾನು, ನಾನು, ನಾನು ಎಂದು ಚಿಂತಿಸುತ್ತಿದ್ದರೆ - ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನಮ್ಮ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ ಮತ್ತು ನಾವು ಬೇಗನೆ ಚೇತರಿಸಿಕೊಳ್ಳಲಾಗುವುದಿಲ್ಲ. ಆದರೆ ನಾವು ಆಶಾವಾದಿಗಳಾಗಿದ್ದರೆ, ಇತರರಲ್ಲಿ ಯಾರು ಈ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದರ ಬಗ್ಗೆ ಮತ್ತು ನಮ್ಮ ಕುಟುಂಬ ಮತ್ತು ಇತರರ ಬಗ್ಗೆ ನಾವು ಯೋಚಿಸುತ್ತಿದ್ದರೆ, ನಾವು ನಿರಂತರವಾಗಿ ದೂರು ನೀಡುತ್ತಾ ಗೊಣಗುವುದಿಲ್ಲ. ನಮ್ಮ ಮನಸ್ಸು ಮತ್ತು ಹೃದಯವು ಹೆಚ್ಚು ಶಾಂತಿಯಿಂದ ಇರುತ್ತವೆ ಮತ್ತು ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ವಿಜ್ಞಾನಿಗಳು ಈ ಅಂಶಗಳ ಬಗ್ಗೆ ವಿವಿಧ ಪರಿಶೋಧನೆಗಳನ್ನು ನಡೆಸಿದ್ದು, ಅವು ನಿಜವೆಂದು ಕಂಡುಹಿಡಿಯಲಾಗಿದೆ, ಆದ್ದರಿಂದ ಈ ವಿಧಾನಗಳನ್ನು ಇಂದು ಅನೇಕ ಆಸ್ಪತ್ರೆಗಳಲ್ಲಿ ಬಳಸುವಂತೆ ಪ್ರೋತ್ಸಾಹಿಸಲಾಗುತ್ತದೆ. 

ಅಲ್ಲದೆ, ನೋವು ನಿಯಂತ್ರಣಕ್ಕೆ ಸಹಾಯಕವಾಗಲು, ಬೌದ್ಧಧರ್ಮದಲ್ಲಿ ಹಲವು ವಿಧಾನಗಳಿವೆ. ಸ್ವತಃ ನೋವೇ ಕಷ್ಟಕರವಾಗಿರುತ್ತದೆ, ಆದರೆ ಅದಕ್ಕೆ ನೀವು ಭಯವನ್ನು ಸೇರಿಸಿದರೆ ಮತ್ತು ಅದರ ಬಗ್ಗೆ ಭಾವನಾತ್ಮಕವಾಗಿ ತುಂಬಾ ಬಿಗಿಯಾಗಿದ್ದರೆ, ಅವು ನೋವನ್ನು ಇನ್ನಷ್ಟು ಹದಗೆಡಿಸುತ್ತವೆ. ಬೌದ್ಧಧರ್ಮದಲ್ಲಿ ಉಸಿರಾಟದ ಧ್ಯಾನದೊಂದಿಗೆ ಕಲಿಸುವ ವಿವಿಧ ವಿಧಾನಗಳಿದ್ದು, ಅವು ನೋವಿನೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲು ನಮಗೆ ಸಹಾಯ ಮಾಡುತ್ತವೆ. ಇವುಗಳನ್ನು ಪರೀಕ್ಷಿಸಲಾಗಿದೆ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಪ್ರಚಾರ ಮಾಡಲಾಗಿದೆ. ಈ ವಿಧಾನಗಳನ್ನು ಅಭ್ಯಾಸ ಮಾಡಲು, ಸಂಪೂರ್ಣ ಬೌದ್ಧ ಧರ್ಮದ ಜ್ಞಾನವಿರುವ ಲಕೋಟೆಯ ಅಗತ್ಯವಿರುವುದಿಲ್ಲ. ಜನರು ಈ ವಿಧಾನಗಳನ್ನು ಅನುಸರಿಸಲು, ಬೌದ್ಧ ಬೋಧನೆಗಳನ್ನು ವಿವರವಾಗಿ ವಿವರಿಸುವ ಅಗತ್ಯವಿರುವುದಿಲ್ಲ. ಇವು ಸಾರ್ವತ್ರಿಕವಾಗಿ ಲಭ್ಯವಿರುವ ವಿಧಾನಗಳಾಗಿದ್ದು, ಯಾವುದೇ ನಂಬಿಕೆ ವ್ಯವಸ್ಥೆಯೊಳಗೆ ಯಾರೊಬ್ಬರಾದರೂ ಅಳವಡಿಸಿಕೊಳ್ಳಬಹುದು. ಆದರೆ ಅವು ಬೌದ್ಧ ಬೋಧನೆಗಳಿಂದ ಹುಟ್ಟಿಕೊಂಡಿರುವುದರಿಂದ, ಜನರು ಈ ಬೌದ್ಧ ಬೋಧನೆಗಳ ಬಗ್ಗೆ ಹೆಚ್ಚು ವಿವರವಾಗಿ ತಿಳಿಯಲು ಆಸಕ್ತಿ ತೋರಿಸುತ್ತಾರೆ. ಸಮರ ಕಲೆಗಳನ್ನು ಅಭ್ಯಾಸ ಮಾಡುವ ಜನರಲ್ಲೂ ನಾವು ಇದೇ ರೀತಿಯ ವಿದ್ಯಮಾನವನ್ನು ನೋಡಿದೆವು. ಸಮರ ಕಲೆಗಳು ಬೌದ್ಧ ಸಮಾಜಗಳಲ್ಲಿ ಅಭಿವೃದ್ಧಿ ಹೊಂದಿದ್ದವು ಮತ್ತು ಅವುಗಳನ್ನು ಅಭ್ಯಾಸ ಮಾಡಿದ ಅನೇಕ ಜನರು ಈ ಬೋಧನೆಗಳ ಬೌದ್ಧ ಹಿನ್ನೆಲೆಯ ಬಗ್ಗೆ ಆಸಕ್ತಿ ವಹಿಸಿದ್ದರು.  

ಆಧ್ಯಾತ್ಮಿಕ ಗುರುಗಳಿಂದ ಸ್ಫೂರ್ತಿ 

ಸಹಜವಾಗಿ, ತೀಕ್ಷ್ಣವಾಗಿ ತರ್ಕಬದ್ಧವಾಗಿಲ್ಲದ, ಹೆಚ್ಚು ವೈಜ್ಞಾನಿಕವಾಗಿ ಆಧಾರಿತವಾಗಿಲ್ಲದ ಜೀವನವನ್ನು ನಡೆಸುವ ಅನೇಕ ಜನರಿರುವರು, ಅಂತಹವರನ್ನು ಬೌದ್ಧಧರ್ಮದ ಬೇರೆ ಅಂಶಗಳು ಆಕರ್ಷಿಸಿರುತ್ತವೆ. ಶ್ರೇಷ್ಠ ಆಧ್ಯಾತ್ಮಿಕ ಗುರುಗಳ ಸ್ಫೂರ್ತಿಯ ಕುರಿತು ನಾನು ಈಗಾಗಲೇ ಮಾತನಾಡಿದ್ದೇನೆ: ಹೆಚ್ಚು ಹೆಚ್ಚು ಶ್ರೇಷ್ಠ ಆಧ್ಯಾತ್ಮಿಕ ಗುರುಗಳು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದಾರೆ ಮತ್ತು ಅವರ ಬೋಧನೆಗಳು ಇಂಟರ್ನೆಟ್‌ನಲ್ಲಿ ಪುಸ್ತಕಗಳು ಮತ್ತು ಆಡಿಯೊ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳಲ್ಲಿ ಲಭ್ಯವಿದ್ದು, ಹೆಚ್ಚಾಗಿ ಭಕ್ತಿ ಆಧಾರಿತರಾದ ಜನರು, ಮಹತ್ತರವಾಗಿ ಸ್ಫೂರ್ತಿಗೊಂಡಿದ್ದಾರೆ. ಅನೇಕ ಜನರು ತಾವು ಕೇಳಿದ ಅಥವಾ ಎದುರಿಸಿದ ವಿವಿಧ ನಾಯಕರ ಬಗ್ಗೆ ನಿರಾಶೆಗೊಂಡಿರುವರು - ಆರ್ಥಿಕ ಕ್ಷೇತ್ರ, ರಾಜಕೀಯ ಕ್ಷೇತ್ರ ಅಥವಾ ಯಾವುದೇ ಆಗಿರಲಿ - ಇಲ್ಲಿ ಅವರು ಸ್ವಲ್ಪ ನಿರಾಶೆಯನ್ನು ಅನುಭವಿಸಿದಾಗ, ಅವರು ಈ ಬೌದ್ಧ ಗುರುಗಳಲ್ಲಿ ಹೆಚ್ಚು ಪರಿಶುದ್ಧವಾದ ವ್ಯಕ್ತಿಯನ್ನು ಕಾಣಬಹುದೇನೋ ಎಂಬ ಆಶಯದಿಂದ ನೋಡುತ್ತಾರೆ. 

ನಿಸ್ಸಂದೇಹವಾಗಿ, ನಾವು ವಾಸ್ತವಿಕವಾಗಿರಬೇಕು: ಬೌದ್ಧ ಹಿನ್ನೆಲೆಯಿಂದ ಬರುವ ಪ್ರತಿಯೊಬ್ಬ ಆಧ್ಯಾತ್ಮಿಕ ಗುರುವು ಸಂಪೂರ್ಣವಾಗಿ ಶುದ್ಧರಾಗಿರುವುದಿಲ್ಲ. ಅಂತಿಮವಾಗಿ, ಅವರೂ ಕೂಡ ನಮ್ಮಂತೆ ಮನುಷ್ಯರೇ. ಅವರಲ್ಲಿ ಕೆಲವು ಶಕ್ತಿಯುತವಾದ ಅಂಶಗಳಿರುತ್ತವೆ ಮತ್ತು ದುರ್ಬಲ ಅಂಶಗಳಿರುತ್ತವೆ. ಆದರೆ ಅವರಲ್ಲಿ ಬಹಳಷ್ಟು ಗುರುಗಳು ನಿಜವಾಗಿಯೂ ಅಸಾಮಾನ್ಯರಾಗಿರುವರು. ಆದ್ದರಿಂದ ಜನರು ಅವರಿಂದ ಬಹಳಷ್ಟು ಸ್ಫೂರ್ತಿಯನ್ನು ಪಡೆದಿದ್ದಾರೆ – ಬಹುಷಃ ನಾನು ಕೆಲವು ಜನರೆಂದು ಹೇಳಬೇಕು – ಈ ಗುರುಗಳಿಂದ ಮಹತ್ತರವಾಗಿ ಸ್ಫೂರ್ತಿ ಪಡೆದಿದ್ದಾರೆ, ನಾನು ಹೇಳಿದಂತೆ ಇವರಲ್ಲಿ ಅಗ್ರಗಣ್ಯರಾಗಿರುವವರು, ಪರಮಪೂಜ್ಯ ದಲೈ ಲಾಮಾ ಅವರು. ಆಗ ಅವರ ಮನಸ್ಸಿನಲ್ಲಿ ಮತ್ತು ಅವರ ಹೃದಯದಲ್ಲಿ ಉದ್ಭವಿಸುವುದು ಇದು: "ನಾನು ಅವರ ಹಾಗೆ ಆಗಬೇಕೆಂದು ಬಯಸುತ್ತೇನೆ." ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತ್ಯೇಕವಾಗಿ, ವಾಸ್ತವಿಕವಾಗಿ ಸಾಧಿಸಲು ಸಾಧ್ಯವಾಗುವುದಕ್ಕೆ ಅವರು ನಮಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಏಕೆಂದರೆ ಪರಮಪೂಜ್ಯರಾದ ದಲೈ ಲಾಮಾ ಅವರಂತಹವರು ಯಾವಾಗಲೂ ಹೀಗೆ ಹೇಳುತ್ತಾರೆ, "ನನ್ನ ಬಗ್ಗೆ ವಿಶೇಷವಾದದ್ದು ಏನೂ ಇಲ್ಲ." ಬುದ್ಧ ಕೂಡ ಹೀಗೆಯೇ ನುಡಿಯುತ್ತಿದ್ದರು, “ನನ್ನ ಬಗ್ಗೆ ವಿಶೇಷವಾದದ್ದು ಏನೂ ಇಲ್ಲ. ನಾನು ನಿಮ್ಮಂತೆಯೇ ಪ್ರಾರಂಭಿಸಿದೆ. ನಿಮ್ಮ ಬಳಿಯಿರುವ ಕಾರ್ಯ ಸಾಮಾಗ್ರಿಗಳೇ ನನ್ನ ಬಳಿಯೂ ಇರುವವು - ಮನಸ್ಸು, ಹೃದಯ, ಇತರರನ್ನು ನೋಡಿಕೊಳ್ಳುವ ಮೂಲಭೂತ ಮಾನವ ಮೌಲ್ಯಗಳು, ಇತ್ಯಾದಿ. ಅವುಗಳನ್ನು ಅಭಿವೃದ್ಧಿಪಡಿಸಲು ನಾನು ತುಂಬಾ ಶ್ರಮ ಪಟ್ಟೆ, ಮತ್ತು ನೀವು ಕಷ್ಟಪಟ್ಟು ಕೆಲಸ ಮಾಡಿದರೆ ನೀವೂ ಕೂಡ ಅವುಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.” ಆದ್ದರಿಂದ ಪರಮಪೂಜ್ಯರಾದ ದಲೈ ಲಾಮಾ ಅವರಂತಹವರು, ನಾವು ಅವರೊಂದಿಗೆ ಸಂಬಂಧಿಸಲು ಅಸಾಧ್ಯವಾಗುವಂತೆ, ಅವರನ್ನು ಕೈಗೆಟಕದಂತಹ ಪವಿತ್ರವಾದ ಸ್ಥಾನದಲ್ಲಿ ಕೂರಿಸುವಂತೆ ಜನರನ್ನು ಪ್ರೋತ್ಸಾಹಿಸದಿರಲು ಪ್ರಯತ್ನಿಸುತ್ತಾರೆ. ಆದ್ದರಿಂದ ಇದು ಹೆಚ್ಚು ಭಕ್ತಿ-ಆಧಾರಿತವಾದ, ಜೀವನ ವಿಧಾನದಲ್ಲಿ ಅಷ್ಟೊಂದು ವೈಜ್ಞಾನಿಕವಾಗಿಲ್ಲದ ಜನರಿಗೆ ತುಂಬಾ ಇಷ್ಟವಾಗುತ್ತದೆ. 

ಬೌದ್ಧ ಆಚರಣೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವುದು 

ಸಾಂಪ್ರದಾಯಿಕವಾಗಿ ಬೌದ್ಧವಾಗಿರುವ ಸ್ಥಳಗಳಲ್ಲಿ, ವಿವಿಧ ಕಾರಣಗಳಿಂದ ಬೌದ್ಧ ಆಚರಣೆಯ ಲಭ್ಯತೆ ಕ್ಷೀಣಿಸಿರುವುದರಿಂದ, ಆಧುನಿಕ ದಿನಗಳಲ್ಲಿನ ಬೌದ್ಧಧರ್ಮದ ಮತ್ತೊಂದು ಆಕರ್ಷಣೆಯೆಂದರೆ, ಈ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವುದಾಗಿದೆ. ಇದು ಬಹಳ ಮುಖ್ಯವಾದ ಮತ್ತು ಮಾನ್ಯವಾದ ವಿಧಾನವಾಗಿರುವುದು, ಏಕೆಂದರೆ ನಾವು ಆಧುನೀಕರಣದ ಸವಾಲುಗಳನ್ನು ಎದುರಿಸುತ್ತಿರುವಾಗ, ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನದ ಪ್ರಜ್ಞೆಯನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ನಮ್ಮ ಪೂರ್ವಜರು ನಂಬಿದ್ದೆಲ್ಲವೂ ಸಂಪೂರ್ಣವಾಗಿ ಅಸಂಬದ್ಧವಾಗಿರುವುದು ಎಂದು ನಮಗೆ ಹೇಳಲಾದರೆ ಮತ್ತು ನಾವು ನಿಜವಾಗಿಯೂ ಆಧುನಿಕ ಜಗತ್ತಿಗೆ ಪ್ರವೇಶಿಸಲು ಬಯಸಿದ್ದಲ್ಲಿ, ನಾವು ಎಲ್ಲವನ್ನೂ ಮರೆತುಬಿಡಬೇಕೆಂದಿದ್ದರೆ, ನಮಗೆ ನಮ್ಮ ಮತ್ತು ನಮ್ಮ ಪೂರ್ವಜರ ಬಗ್ಗೆ ಬಹಳಾ ಕೀಳಾದ ಅಭಿಪ್ರಾಯವಿರುತ್ತದೆ. ಅದು ನಾವು ಒಳ್ಳೆಯವರಲ್ಲ, ಮೂರ್ಖರು ಎಂಬ ಭಾವನೆಯನ್ನು ಮೂಡಿಸುತ್ತದೆ. ಈ ನಂಬಿಕೆಯೊಂದಿಗೆ, ಭಾವನಾತ್ಮಕ ನಂಬಿಕೆಯೊಂದಿಗೆ, ನಮ್ಮಲ್ಲಿ ಯಾವುದೇ ಸ್ವಾಭಿಮಾನ ಅಥವಾ ಆತ್ಮ ವಿಶ್ವಾಸದ ಭಾವನೆ ಇರುವುದಿಲ್ಲ; ನಮಗೆ ಬೆಳೆಯಲು ಯಾವುದೇ ಸ್ವಾಭಿಮಾನವಿರುವ ವಿಷಯದ ಆಧಾರವಿರುವುದಿಲ್ಲ. ಆದ್ದರಿಂದ ನಮ್ಮ ಸಾಂಪ್ರದಾಯಿಕ ಪದ್ಧತಿಗಳು ಮತ್ತು ನಂಬಿಕೆಗಳತ್ತ ತಿರುಗುವುದು ಮತ್ತು ಅವುಗಳನ್ನು ಪುನರುಜ್ಜೀವನಗೊಳಿಸುವುದು ಬಹಳ ಮುಖ್ಯವಾದ ಭಾಗವಾಗಿದ್ದು, ಇದು ನಮಗೆ ಮತ್ತಷ್ಟು ಬೆಳವಣಿಗೆ ಮತ್ತು ಆಧುನೀಕರಣಕ್ಕೆ ಭಾವನಾತ್ಮಕ ಆಧಾರವನ್ನು ನೀಡುತ್ತದೆ ಎಂಬುದು ನನ್ನ ನಂಬಿಕೆಯಾಗಿದೆ.  

ಸಹಜವಾಗಿ, ಎಲ್ಲಾ ಸಂಪ್ರದಾಯಗಳಲ್ಲೂ ಶ್ರೇಷ್ಠವಾದ ಅಂಶಗಳಿರುತ್ತವೆ ಮತ್ತು ಬಹುಶಃ ದುರುಪಯೋಗಪಡಿಸಿಕೊಂಡಿರುವ ದೌರ್ಬಲ್ಯಗಳೂ ಇರುತ್ತವೆ ಮತ್ತು ಆ ಶ್ರೇಷ್ಠವಾದ ಅಂಶಗಳಿಗೆ ಪ್ರಾಧಾನ್ಯ ನೀಡುವುದು ಮುಖ್ಯವಾಗಿರುತ್ತದೆ. ಆಧುನಿಕ ಮನೋವಿಜ್ಞಾನದ ಒಂದು ಪದ್ಧತಿಯಲ್ಲಿ, ನಿಷ್ಠೆಯ ತತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಕುಟುಂಬಕ್ಕೆ, ತಮ್ಮ ಕುಲಕ್ಕೆ, ತಮ್ಮ ಧರ್ಮಕ್ಕೆ - ಅದು ಯಾವುದೇ ಆಗಿರಲಿ – ನಿಷ್ಠಾವಂತರಾಗಿರಬೇಕೆಂಬ ಬಯಕೆಯಿರುತ್ತದೆ. ನಿಷ್ಠೆಯು ಎರಡು ದಿಕ್ಕುಗಳಲ್ಲಿ ಹೋಗಬಹುದು, ಸಕಾರಾತ್ಮಕ ಗುಣಗಳಿಗೆ ನಿಷ್ಠರಾಗಿರಬಹುದು ಅಥವಾ ನಕಾರಾತ್ಮಕ ಗುಣಗಳಿಗೆ ನಿಷ್ಠರಾಗಿರಬಹುದು. ಉದಾಹರಣೆಗೆ, ಒಂದು ಸಂಪ್ರದಾಯವು ಇತರ ಸಂಪ್ರದಾಯಗಳ ಕಡೆಗೆ ಅಸಹಿಷ್ಣುತೆಯ ನಕಾರಾತ್ಮಕ ಗುಣವನ್ನು ಹೊಂದಿದ್ದರೆ ಮತ್ತು ಆ ಸಂಪ್ರದಾಯದ ಬಗ್ಗೆ ಇದನ್ನೇ ಒತ್ತಿಹೇಳಿದ್ದರೆ, ಆ ಸಂಪ್ರದಾಯವನ್ನು ತಿರಸ್ಕರಿಸುವ ಜನರು, ಈ ಅಸಹಿಷ್ಣುತೆಯ ಮನೋಭಾವಕ್ಕೆ ನಿಷ್ಠರಾಗಿರುತ್ತಾರೆ. ಆದ್ದರಿಂದ ಅವರು ಆ ಸಂಪ್ರದಾಯವನ್ನು ತಿರಸ್ಕರಿಸಿದ ನಂತರ, ಆ ಸಂಪ್ರದಾಯವನ್ನು ನಂಬಬಹುದಾದ ಎಲ್ಲರೊಂದಿಗೂ ತುಂಬಾ ಅಸಹಿಷ್ಣುರಾಗಿ ವರ್ತಿಸುತ್ತಾರೆ. ಇದು ನಕಾರಾತ್ಮಕವಾದ ನಿಷ್ಠೆ ಅಥವಾ ತಪ್ಪಾದ ನಿಷ್ಠೆಯಾಗಿರುತ್ತದೆ. ಮತ್ತೊಂದೆಡೆ, ಒಬ್ಬರು ಸಂಪ್ರದಾಯದ ದೌರ್ಬಲ್ಯಗಳನ್ನು ನಿರಾಕರಿಸದೆ, ಸಕಾರಾತ್ಮಕ ಅಂಶಗಳನ್ನು ಮತ್ತೊಮ್ಮೆ ಒತ್ತಿಹೇಳಿದರೆ, ಜನರು ದುರ್ಬಲ ಅಂಶಗಳನ್ನು ಪುನರಾವರ್ತಿಸದಂತೆ ಅವುಗಳ ಬಗ್ಗೆ ಕುರುಡಾಗಿರದೆ, ಸಕಾರಾತ್ಮಕ ಅಂಶಗಳಿಗೆ ನಿಷ್ಠರಾಗಿರಬಹುದು. ಆದ್ದರಿಂದ ಇದು ಬೌದ್ಧಧರ್ಮದ ಮತ್ತೊಂದು ಆಕರ್ಷಣೆಯಾಗಿದ್ದು, ವಿಶೇಷವಾಗಿ ಇದನ್ನು ಸಾಂಪ್ರದಾಯಿಕ ವ್ಯವಸ್ಥೆಗಳಿರುವ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇದು ನಮ್ಮ ಸಂಸ್ಕೃತಿಯ ಬಗ್ಗೆ, ನಮ್ಮ ಪೂರ್ವಜರ ಬಗ್ಗೆ, ನಮ್ಮ ಬಗ್ಗೆ, ಸ್ವಾಭಿಮಾನದ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಕ್ಷೇತ್ರವಾಗಿದೆ. 

ಬೌದ್ಧಧರ್ಮದ ವಿಲಕ್ಷಣವಾದ ಭಾಗ 

ತಮ್ಮ ಸ್ವಂತ ಕಲ್ಪನೆಗಳ ಆಧಾರದ ಮೇಲೆ ಬೌದ್ಧಧರ್ಮಕ್ಕೆ ಆಕರ್ಷಿತರಾಗಿರುವ ಜನರ ಮತ್ತೊಂದು ಗುಂಪು ಇದೆ. ಅವರ ಜೀವನದಲ್ಲಿ ಸಮಸ್ಯೆಗಳಿದ್ದು, ಅವುಗಳಿಗಾಗಿ ಒಂದು ರೀತಿಯ ಮಾಂತ್ರಿಕ, ವಿಲಕ್ಷಣವಾದ ಪರಿಹಾರವನ್ನು ಅವರು ಹುಡುಕುತ್ತಿರುತ್ತಾರೆ ಮತ್ತು ಅವರಿಗೆ ಬೌದ್ಧಧರ್ಮ - ವಿಶೇಷವಾಗಿ ಟಿಬೆಟಿಯನ್ / ಮಂಗೋಲಿಯನ್ / ಕಲ್ಮಿಕ್ ಪದ್ಧತಿಯ - ಎಲ್ಲಾ ರೀತಿಯ ವಿಲಕ್ಷಣವಾದ ವಸ್ತುಗಳಿಂದ ತುಂಬಿರುತ್ತದೆ: ಎಲ್ಲಾ ರೀತಿಯ ವಿವಿಧ ಮುಖಗಳಿರುವ, ಕೈಗಳಿರುವ, ಕಾಲುಗಳಿರುವ ದೇವತೆಗಳು, ಎಲ್ಲಾ ರೀತಿಯ ಮಂತ್ರಗಳು, ಇತ್ಯಾದಿ. ಅವೆಲ್ಲವೂ ಒಂದು ರೀತಿಯ ಮಾಯಾಮಂತ್ರದ ಪದಗಳಂತೆ ತೋರುತ್ತವೆ - ನಾವು ಮಾಡಬೇಕಾಗಿರುವುದು, ಕೇವಲ ಅವುಗಳನ್ನು ಒಂದು ಸಾವಿರ ಬಾರಿ ಪಠಿಸುವುದು ಅಷ್ಟೆ ಮತ್ತು ನಮ್ಮ ಎಲ್ಲಾ ಸಮಸ್ಯೆಗಳು ಮಾಯವೆಂಬಂತೆ ದೂರವಾಗುತ್ತವೆ. ಈ ಎಲ್ಲಾ ಕೈಗಳು ಮತ್ತು ಕಾಲುಗಳಿರುವ ಅಕೃತಿಗಳ ಬಗ್ಗೆ ಏನೋ ಮಾಂತ್ರಿಕವಾದದ್ದು ಇರಬೇಕು! ಆದ್ದರಿಂದ ಅವರು ಬೌದ್ಧಧರ್ಮವನ್ನು ಸಂತೋಷವನ್ನು ಪಡೆಯುವ ವಿಧಾನವಾಗಿ ನೋಡುತ್ತಾರೆ ಮತ್ತು ನಾನು ಹೇಳಿದಂತೆ ಮಾಂತ್ರಿಕ ವಿಧಾನಗಳ ಮೂಲಕ ಪಡೆಯಲು ನೋಡುತ್ತಾರೆ. 

ಈ ವಿಧಾನಗಳನ್ನು ಅಭ್ಯಾಸ ಮಾಡುವುದರಿಂದ ಅವರಿಗೆ ಸ್ವಲ್ಪ ಪ್ರಯೋಜನವಾಗಬಹುದಾದರೂ (ಅವರು ಬೌದ್ಧಧರ್ಮವನ್ನು ಈ ರೀತಿಯ ಆದರ್ಶವಾದಿ, ಅವಾಸ್ತವಿಕ ರೀತಿಯಲ್ಲಿ ಕಂಡರೂ ಸಹ ಅದರಿಂದ ಕೆಲವು ಪ್ರಯೋಜನವಾಗಬಹುದು ಎಂಬುದರಲ್ಲಿ ಸಂಶಯವಿಲ್ಲ), ಇದು ನಿಜವಾಗಿಯೂ ವಾಸ್ತವಿಕವಾಗಿರುವುದಿಲ್ಲ ಎಂದು ಪರಮಪೂಜ್ಯ ದಲೈ ಲಾಮಾ ಅವರು ಯಾವಾಗಲೂ ಒತ್ತಿಹೇಳುತ್ತಾರೆ. ಇದು ಕೆಲವು ಪ್ರಯೋಜನಗಳನ್ನು ಹೊಂದಿರಬಹುದು, ಆದರೆ ದೀರ್ಘಾವಧಿಯಲ್ಲಿ ನೀವು ನಿರಾಶೆಗೊಳ್ಳುವಿರಿ ಏಕೆಂದರೆ, ದುರದೃಷ್ಟವಶಾತ್, ಇಲ್ಲಿ ಯಾವುದೇ ಮಾಂತ್ರಿಕ ಪರಿಹಾರಗಳಿಲ್ಲ. ನಾವು ನಿಜವಾಗಿಯೂ ಮನಸ್ಸಿನ ಶಾಂತಿಯನ್ನು ಪಡೆಯಲು ಮತ್ತು ಜೀವನದಲ್ಲಿ ನಮ್ಮ ಸಮಸ್ಯೆಗಳನ್ನು ನಿವಾರಿಸಲು ಬಯಸಿದರೆ, ನಾವು ನಮ್ಮಲ್ಲಿರುವ ಒಳ್ಳೆಯದಲ್ಲದ ಅಥವಾ ಆರಾಮದಾಯಕವಲ್ಲದ ಅಂಶಗಳನ್ನು ಎದುರಿಸಬೇಕಾಗುತ್ತದೆ. ನಾವು ನಮ್ಮ ಕೋಪ, ನಮ್ಮ ಸ್ವಾರ್ಥ, ನಮ್ಮ ದುರಾಸೆ, ನಮ್ಮ ಬಾಂಧವ್ಯ ಇತ್ಯಾದಿಗಳನ್ನು ಎದುರಿಸಬೇಕು ಮತ್ತು ಅವುಗಳನ್ನು ನಿಭಾಯಿಸಬೇಕು. ಕೆಲವು ಮಾಯಾ ಪರಿಹಾರವನ್ನು ಹುಡುಕುತ್ತಾ, ಈ ವೈಯಕ್ತಿಕ ಸಮಸ್ಯೆಗಳನ್ನು ನಿರ್ಲಕ್ಷಿಸುವುದರಿಂದ ಯಾವುದೇ ಸಹಾಯವಾಗುವುದಿಲ್ಲ. ಆದರೆ, ಸಹಜವಾಗಿ, ಈ ಹೆಚ್ಚಿನ ವಿಲಕ್ಷಣ ವೈಶಿಷ್ಟ್ಯಗಳಲ್ಲಿ, ಬೌದ್ಧಧರ್ಮದ ಆಕರ್ಷಣೆಯನ್ನು ಕಂಡುಕೊಳ್ಳುವ ಜನರು ಇನ್ನೂ ಇದ್ದಾರೆ. 

ಸಾರಾಂಶ 

ಸಂಕ್ಷಿಪ್ತವಾಗಿ ಹೇಳುವುದಾದರೆ, ಬೌದ್ಧಧರ್ಮದ ಹಲವು ವಿಭಿನ್ನ ಅಂಶಗಳಿಗೆ ಜನರು ಆಕರ್ಷಿತರಾಗಿರುವರು ಎಂದು ನಾವು ನೋಡುತ್ತೇವೆ, ಆದರೆ ಈ ಆಕರ್ಷಣೆಯು ಬೌದ್ಧಧರ್ಮದ ವಿಧಾನಗಳು ನಮಗೆ ಜೀವನ ಮತ್ತು ದುಃಖದಲ್ಲಿನ ಸಮಸ್ಯೆಗಳನ್ನು ಜಯಿಸಲು ಸಹಾಯ ಮಾಡುತ್ತವೆ ಎಂಬ ಮೂಲಭೂತ ಆಶಯದಿಂದ ಹುಟ್ಟಿಕೊಂಡಿರುತ್ತವೆ. ಬೌದ್ಧಧರ್ಮವು, ಜೀವನವನ್ನು ನಿಭಾಯಿಸಲು ಕೆಲವು ಮಾರ್ಗಗಳನ್ನು ನೀಡುವ ಮೂಲಕ ನಮ್ಮ ಮನಸೆಳೆಯುವ ಹೊರತಾಗಿಯೂ, ಬುದ್ಧನ ಬೋಧನೆಗಳ ಅದ್ಭುತಗಳ ಬಗ್ಗೆ ಪ್ರತಿಯೊಬ್ಬರೂ ಇಷ್ಟಪಡುವ ವಿಷಯವೆಂದರೆ, ಅವು ಸಮಸ್ಯೆಗಳನ್ನು ನಿವಾರಿಸಲು ನಮಗೆ ಸಹಾಯ ಮಾಡಲು ಅನುಸರಿಸುವ ವಿಧಾನಗಳನ್ನು ನೀಡುತ್ತವೆ. ಇದು ಎರಡೂವರೆ ಸಾವಿರ ವರ್ಷಗಳ ಅನುಭವದೊಂದಿಗಿರುವ ಜೀವಂತ ಸಂಪ್ರದಾಯವಾಗಿದೆ, ಮತ್ತು ಇದನ್ನು ಇಂದಿಗೂ ಅಭ್ಯಾಸ ಮಾಡುವ ಮತ್ತು ಇದರಿಂದ ಫಲಿತಾಂಶಗಳನ್ನು ಪಡೆಯುವ ಜನರಿದ್ದಾರೆ. ಆದ್ದರಿಂದ ಇವೆಲ್ಲವನ್ನೂ ಮೊದಲೇ ಸ್ಥಾಪಿಸಲಾಗಿದ್ದು, ಈ ವಿಧಾನಗಳನ್ನು ಕೇವಲ ಅನುಸರಿಸಬೇಕಾಗಿದೆಯಷ್ಟೆ. ಇದು ಕೇವಲ ಒಂದು ವಿಧಾನವಾಗಿರುವುದಿಲ್ಲ, ಬದಲಿಗೆ ಪ್ರತಿಯೊಬ್ಬರೂ ಪ್ರತ್ಯೇಕರಾಗಿರುವರು ಮತ್ತು ವಿಭಿನ್ನರಾಗಿರುವರು, ಆದ್ದರಿಂದ ವಿಭಿನ್ನ ವಿಧಾನಗಳು ಹೆಚ್ಚು ಉಪಯುಕ್ತವೆಂದು ಅರಿತುಕೊಂಡ ನಂತರ, ಬುದ್ಧ ಕಲಿಸಿದ ಹಲವು ವಿಭಿನ್ನ ವಿಧಾನಗಳಾಗಿವೆ. ಇದು ಜನರಿಗೆ ಬಹಳಾ ಅದ್ಭುತವಾಗಿ ಕಾಣುವ ಸಂಗತಿಯಾಗಿದೆ, ಏಕೆಂದರೆ ಸಂಪೂರ್ಣವಾದ ವೈವಿಧ್ಯಮಯ ಬೌದ್ಧ ವಿಧಾನಗಳು, ರೆಸ್ಟೋರೆಂಟ್‌ನಲ್ಲಿನ ಒಂದು ದೊಡ್ಡ ಮೆನುವಿನ ಹಾಗೆ ಇದ್ದು, ನಮಗೆ ಸೂಕ್ತವಾದದ್ದನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು; ನಾವು ಒಂದು ವಿಧಾನವನ್ನು ಪ್ರಯತ್ನಿಸಿ, ಅದು ನಮಗೆ ಸರಿಹೊಂದುವುದಿಲ್ಲವಾದರೆ, ಇನ್ನೂ ಅನೇಕ ವಿಧಾನವಗಳು ನಮಗೆ ಲಭ್ಯವಿರುವವು. ಮತ್ತು ನಾವು ಮಾಹಿತಿಯ ಯುಗದಲ್ಲಿ ವಾಸಿಸುತ್ತಿರುವ ಕಾರಣ, ನಾವು ಎಲ್ಲಿ ವಾಸಿಸುತ್ತಿದ್ದರೂ ಈ ವಿಧಾನಗಳು ದೊಡ್ಡ ದೊಡ್ಡ ಸಂಖ್ಯೆಗಳಲ್ಲಿ ನಮಗೆ ಲಭ್ಯವಿರುತ್ತವೆ. 

Top