ಬೌದ್ಧ ಧರ್ಮದ ಮನಸ್ಸನ್ನು ಶಾಂತಗೊಳಿಸುವ ಸಾಂಪ್ರದಾಯಿಕ ವಿಧಾನವೆಂದರೆ ಉಸಿರಾಟದ ಮೇಲೆ ಕೇಂದ್ರೀಕರಿಸುವುದು. ಬೌದ್ಧ ತರಬೇತಿಯಲ್ಲಿ ವಿವಿಧ ಉಸಿರಾಟದ ವಿಧಾನಗಳು ಮತ್ತು ಅಭ್ಯಾಸಗಳಿವೆ. ನನಗೆ ಪರಿಚಿತವಾಗಿರುವ ಬಹುತೇಕ ಎಲ್ಲಾ ವಿಧಾನಗಳಲ್ಲಿ ಕೇವಲ ಬಾಯಿಯ ಮೂಲಕವಲ್ಲದೆ, ಮೂಗಿನ ಮೂಲಕ ಉಸಿರಾಡುವುದಕ್ಕೆ ಮತ್ತು ಬಲವಂತವಾಗಿ ಅಲ್ಲದೆ, ಸಹಜವಾಗಿ, ನಿಧಾನವಾಗಿ ಉಸಿರಾಡುವುದಕ್ಕೆ ಒತ್ತು ನೀಡಲಾಗುತ್ತದೆ.
ಈ ಕೆಲವು ವಿಧಾನಗಳಲ್ಲಿ ನಾವು ಉಸಿರನ್ನು ಒಳಗೆಳೆದ ನಂತರ ಸ್ವಲ್ಪ ಹೊತ್ತು ಹಿಡಿದಿಟ್ಟುಕೊಳ್ಳುತ್ತೇವೆ; ಇನ್ನೂ ಕೆಲವು ವಿಧಾನಗಳಲ್ಲಿ ಹಾಗೆ ಮಾಡುವುದಿಲ್ಲ. ಕೆಲವೊಮ್ಮೆ ನಾವು ಉಸಿರಾಡಿದ ನಂತರ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತೇವೆ, ಮತ್ತು ಕೆಲವೊಮ್ಮೆ ಉಸಿರನ್ನು ಹೊರಹಾಕಿದ ನಂತರ. ಉಸಿರಾಟದ ವ್ಯಾಯಾಮದ ಪ್ರಯೋಜನವು ನಾವು ಉಸಿರಾಡುವ ವಿಧಾನವನ್ನು ಅವಲಂಬಿಸಿರುತ್ತದೆ.
ಮನಸ್ಸನ್ನು ಶಾಂತಗೊಳಿಸುವ ಸಾಂಪ್ರದಾಯಿಕ ವಿಧಾನವು ಉಸಿರನ್ನು ಹೊರಹಾಕುವ ಮತ್ತು ನಂತರ ಒಳಗೆಳೆದುಕೊಳ್ಳುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಉಸಿರನ್ನು ಹೊರಹಾಕಿದ ನಂತರ ನಾವು ವಿರಾಮ ತೆಗೆದುಕೊಳ್ಳಬಹುದು, ಏಕೆಂದರೆ ಇದು ನಮಗೆ ಬಲವಂತ ಪಡಿಸದೆ ಆಳವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ. ಕೆಲವು, ಇತರ ತಂತ್ರಗಳಿಗಿಂತ ಭಿನ್ನವಾಗಿರುತ್ತವೆ, ಈ ಸರಳವಾದ, ಶಾಂತಗೊಳಿಸುವ ವಿಧಾನದಲ್ಲಿ ಉಸಿರಾಡಿದ ನಂತರ ಉಸಿರನ್ನು ಹಿಡಿದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಈ ಚಕ್ರವನ್ನು ಬಳಸಲು ಹಲವು ಕಾರಣಗಳಿದ್ದರೂ, ಇಲ್ಲಿನ ಪ್ರಾಥಮಿಕ ಉದ್ದೇಶವೆಂದರೆ ನಮ್ಮ ಆಲೋಚನೆಗಳನ್ನು ಶಾಂತಗೊಳಿಸುವುದು. ಏಕೆಂದರೆ, ಈ ಎಣಿಕೆಯ ವಿಧಾನವು ನಾವು ಸಾಮಾನ್ಯವಾಗಿ ಉಸಿರಾಟದ ಚಕ್ರವನ್ನು ಕಲ್ಪಿಸಿಕೊಳ್ಳುವ ವಿಧಾನಕ್ಕಿಂತ ಭಿನ್ನವಾಗಿರುತ್ತದೆ ಮತ್ತು ಇದಕ್ಕೆ ಹೆಚ್ಚಿನ ಮಟ್ಟದ ಏಕಾಗ್ರತೆಯ ಅಗತ್ಯವಿರುತ್ತದೆ. ಪರಿಣಾಮವಾಗಿ, ಇದು ಇತರ ಆಲೋಚನೆಗಳಿಗೆ ಕಡಿಮೆ ಜಾಗವನ್ನು ಕೊಡುತ್ತದೆ, ಹೀಗಾಗಿ ಮನಸ್ಸನ್ನು ಶಾಂತಗೊಳಿಸಲು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಇದು ಸಾಂಪ್ರದಾಯಿಕ ವಿಧಾನ. ಆದರೂ, ನನ್ನ ಅನುಭವದ ಆಧಾರದ ಮೇಲೆ, ಪಾಶ್ಚಿಮಾತ್ಯರು - ವಿಶೇಷವಾಗಿ ಬೋಧನೆಗಳಿಗೆ ಬರುವಾಗ - ಹೆಚ್ಚಾಗಿ ಒತ್ತಡವಿರುವ ದಿನದ ನಂತರ ಬರುತ್ತಾರೆ. ಅವರು ಸಾಮಾನ್ಯವಾಗಿ ಹೆಚ್ಚಿನ ಒತ್ತಡವಿರುವ ಕೆಲಸಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ನಂತರ ಸಂಜೆ ಬೋಧನಾ ಅವಧಿಗೆ ಬರುವ ಮೊದಲು ಸಂಚಾರ ಮತ್ತು ಇತರ ತೊಂದರೆಗಳನ್ನು ಎದುರಿಸುತ್ತಾರೆ. ಭಾರತ ಅಥವಾ ಟಿಬೆಟ್‌ನಲ್ಲಿರುವ ಸಾಂಪ್ರದಾಯಿಕ ಬೌದ್ಧರಿಗೆ ಇದು ಅನ್ವಯಿಸುವುದಿಲ್ಲ. ಆದ್ದರಿಂದ, ಒತ್ತಡದಲ್ಲಿರುವ ಪಾಶ್ಚಿಮಾತ್ಯರು ಬೌದ್ಧ ಕೇಂದ್ರಕ್ಕೆ ಬಂದಾಗ, ಅವರನ್ನು ಮೊದಲಿಗೆ ಅವರ ಉಸಿರಾಟದ ಮೇಲೆ ಗಮನಹರಿಸಲು ಕೇಳಬೇಕು. ಆದರೆ, ಅವರು ಬೌದ್ಧ ಕೇಂದ್ರಕ್ಕೆ ಬಂದ ತಕ್ಷಣವೇ, ಸಾಮಾನ್ಯವಾಗಿ ಮಾಡುವುದಕ್ಕಿಂತ ಭಿನ್ನವಾದ ಉಸಿರಾಟದ ವಿಧಾನದ ಮೇಲೆ ಗಮನಹರಿಸಲು ಹೇಳಿದರೆ, ಈಗಾಗಲೇ ಒತ್ತಡದಲ್ಲಿರುವ ಅವರಲ್ಲಿ ಅದು ಒತ್ತಡವನ್ನು ಕಡಿಮೆ ಮಾಡುವ ಬದಲು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಏಕೆಂದರೆ ಅದು ಅವರಿಗೆ ಗೊಂದಲವನ್ನು ಉಂಟುಮಾಡಬಹುದು.
ಉಸಿರಾಟದ ವ್ಯಾಯಾಮಗಳ ಪ್ರಾಥಮಿಕ ಉದ್ದೇಶ ಮನಸ್ಸನ್ನು ಶಾಂತಗೊಳಿಸುವುದಾಗಿರುತ್ತದೆ. ಅದರಲ್ಲೂ, ಒತ್ತಡಕ್ಕೊಳಗಾದ ಪಾಶ್ಚಿಮಾತ್ಯ ಸಾಧಕರು ಉಸಿರಾಟದ ಚಕ್ರವನ್ನು ಎಣಿಸುವುದು ಮತ್ತು ವಿರಾಮಗೊಳಿಸುವುದನ್ನು ಒಳಗೊಂಡಿರುವ ಸಾಂಪ್ರದಾಯಿಕ ವಿಧಾನವನ್ನು ಪ್ರಯತ್ನಿಸಿದಾಗ, ಅವರು ಆಗಾಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಇದರಿಂದ ಅವರ ಒತ್ತಡ ಕಡಿಮೆಯಾಗುವ ಬದಲು ಇನ್ನಷ್ಟು ಹೆಚ್ಚಾಗಬಹುದು; ಹೀಗಾಗಿ ಈ ಅಭ್ಯಾಸದ ಮೂಲ ಉದ್ದೇಶವೇ ನೆರವೇರದೆ ಹೋಗುತ್ತದೆ. ಪರಿಣಾಮವಾಗಿ, ಅಂತಹ ಸಂದರ್ಭಗಳಲ್ಲಿ ಆ ವಿಧಾನವನ್ನು ಒತ್ತಾಯಿಸುವ ಅಗತ್ಯವಿಲ್ಲ. ಈ ಪರಿಸ್ಥಿತಿಯಲ್ಲಿ, ಉಸಿರಾಟದ ಚಕ್ರವನ್ನು ಎಣಿಸುವ ಸಾಂಪ್ರದಾಯಿಕ ವಿಧಾನವು ಒತ್ತಡವನ್ನು ಉಂಟುಮಾಡಿದರೆ, ಅವರು, ಬದಲಾಗಿ ಪಾಶ್ಚಿಮಾತ್ಯ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ನಾನು ಸೂಚಿಸುತ್ತೇನೆ. ಅಂದರೆ, ಉಸಿರನ್ನು ಒಳಗೆಳೆದು ತಕ್ಷಣ ಹೊರಬಿಟ್ಟು, ಯಾವುದೇ ವಿರಾಮವಿಲ್ಲದೆ ಅದನ್ನೇ ಒಂದು ಉಸಿರಾಟದ ಚಕ್ರವೆಂದು ಎಣಿಸುವುದು.
ನಮ್ಮ ಮನಸ್ಸು ತುಂಬಾ ಚಂಚಲವಾಗಿದ್ದರೆ, ಶಾಂತವಾಗಿರಲು ಉಸಿರಾಟದ ಚಕ್ರಗಳ ಮೇಲೆ ಗಮನಹರಿಸಿ ಅವುಗಳನ್ನು ಎಣಿಸಬಹುದು. ಆದರೆ ಮನಸ್ಸು ಈಗಾಗಲೇ ಶಾಂತವಾಗಿದ್ದು ಹೆಚ್ಚು ವಿಚಲಿತವಾಗಿಲ್ಲದಿದ್ದರೆ, ಉಸಿರಾಟವನ್ನು ಎಣಿಸುವ ಅಗತ್ಯವಿಲ್ಲ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಂಪ್ರದಾಯಿಕ ಧರ್ಮ ವಿಧಾನವನ್ನು ಅನುಸರಿಸಿ, ನಾವು ಬಳಸಬಹುದಾದ ಮೂರು ವಿಧಾನಗಳಿವೆ. ಯಾವ ವಿಧಾನವನ್ನು ಬಳಸಬೇಕು ಎಂಬುದು ನಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಮೊದಲು ನಮ್ಮ ಸ್ಥಿತಿಯನ್ನು ನಾವು ಸ್ವತಃ ಗಮನಿಸಿ, ಅದಕ್ಕೆ ಸೂಕ್ತವಾದ ವಿಧಾನವನ್ನು ಆಯ್ಕೆ ಮಾಡಬೇಕು. ಅವುಗಳು,
- ನಾವು ತುಂಬಾ ಒತ್ತಡದಲ್ಲಿದ್ದರೆ, ಪಾಶ್ಚಿಮಾತ್ಯ ವಿಧಾನವನ್ನು ಅನುಸರಿಸಿ, ಉಸಿರನ್ನು ಒಳಗೆಳೆದು ಹೊರಬಿಡುವುದನ್ನು ಒಂದು ಚಕ್ರವೆಂದು ಎಣಿಸಬಹುದು.
- ನಾವು ಅಷ್ಟಾಗಿ ಒತ್ತಡದಲ್ಲಿರದಿದ್ದರೆ, ಆದರೆ ನಮ್ಮ ಮನಸ್ಸು ಕೇಂದ್ರೀಕೃತವಾಗಿರದಿದ್ದರೆ, ನಾವು ಸಾಂಪ್ರದಾಯಿಕ ಎಣಿಕೆಯನ್ನು ಅನುಸರಿಸಬಹುದು, ಅಂದರೆ ಮೊದಲು ಹೊರಹಾಕಿ, ವಿರಾಮಿಸಿ ನಂತರ ಒಳಗೆಳೆದುಕೊಳ್ಳುವುದು.
- ನಮ್ಮ ಮನಸ್ಸು ಈಗಾಗಲೇ ಶಾಂತವಾಗಿದ್ದರೆ, ಎಣಿಸುವ ಅಗತ್ಯವಿಲ್ಲ; ಕೇವಲ ಉಸಿರಾಟದ ಮೇಲೆ ಗಮನಹರಿಸಿದರೆ ಸಾಕು.
ಈ ರೀತಿಯ ವಿಧಾನಗಳನ್ನು ಅನುಸರಿಸುವಾಗ, ನಾವು ನಮ್ಮ ಬಗ್ಗೆ ಸಂವೇದನಾಶೀಲರಾಗಿರಬೇಕು ಮತ್ತು ನಮ್ಮ ಸ್ಥಿತಿಗೆ ಸೂಕ್ತವಾದ ವಿಧಾನವನ್ನು ಬಳಸಬೇಕು. ಬೌದ್ಧ ಬೋಧನೆಗಳ ಅದ್ಭುತ ಅಂಶವೆಂದರೆ ಅವುಗಳಲ್ಲಿ ಇರುವ ವೈವಿಧ್ಯಮಯ ವಿಧಾನಗಳು; ಯಾವುದೇ ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಮಾರ್ಗಗಳಿರುತ್ತವೆ. ಇದು ನಮ್ಮಲ್ಲಿ ಸಂವೇದನಾಶೀಲತೆಯನ್ನು ಬೆಳೆಸಲು ಸಹಾಯಕವಾಗಿದೆ. ಯಾವುದೇ ಕ್ಷಣದಲ್ಲಿ ನಮ್ಮ ನಿಜವಾದ ಭಾವನಾತ್ಮಕ ಸ್ಥಿತಿ ಏನೆಂಬುದನ್ನು ನಾವು ಅರಿತುಕೊಳ್ಳಬೇಕು. ಏನನ್ನಾದರೂ ಸಾಧಿಸಲು ನಾವು ವಿವಿಧ ವಿಧಾನಗಳನ್ನು ಕಲಿತಿದ್ದರೆ, ಅವುಗಳಲ್ಲಿ ನಮ್ಮ ಪರಿಸ್ಥಿತಿಗೆ ಸೂಕ್ತವಾದದ್ದನ್ನು ಬಳಸಬೇಕು. ಅದು ಫಲಿಸದಿದ್ದರೆ, ಮತ್ತೊಂದು ವಿಧಾನವನ್ನು ಪ್ರಯತ್ನಿಸಬೇಕು. ಹೀಗಾಗಿ, ಮನಸ್ಸನ್ನು ಶಾಂತಗೊಳಿಸಲು ಈ ಮೂರು ವಿಧಾನಗಳಲ್ಲಿ ನಮಗೆ ಸೂಕ್ತವಾದ ಯಾವುದಾದರೂ ಒಂದನ್ನು ಬಳಸಿಕೊಂಡು ಉಸಿರಾಟದ ಮೇಲೆ ಗಮನಹರಿಸಬಹುದು.
[ಧ್ಯಾನ]
ಈ ಆರಂಭಿಕ ಶಾಂತಗೊಳ್ಳುವ ಹಂತದಲ್ಲಿ, ನಾವು ನಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಳ್ಳಬಹುದು - ನೆಲದ ಕಡೆಗೆ ದೃಷ್ಟಿ ನೆಟ್ಟಂತೆ - ಅಥವಾ ಅವುಗಳನ್ನು ಮುಚ್ಚಿಡಬಹುದು; ಈ ಎರಡೂ ವಿಧಾನಗಳನ್ನು ಬುದ್ಧನು ಬೋಧಿಸಿದ್ದಾನೆ. ಬೌದ್ಧ ಬೋಧನೆಗಳಲ್ಲಿ ಎರಡು ಪ್ರಮುಖ ಸಂಪ್ರದಾಯಗಳಿವೆ. ಹೀನಾಯಾನ ಸಂಪ್ರದಾಯದ ಭಾಗವಾಗಿ ಉಳಿದಿರುವ ಥೆರವಾದ ಸಂಪ್ರದಾಯದಲ್ಲಿ ನಾವು ಸಾಮಾನ್ಯವಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನ ಮಾಡುತ್ತೇವೆ. ಮಹಾಯಾನ ಸಂಪ್ರದಾಯದಲ್ಲಿ ನಾವು ಸಾಮಾನ್ಯವಾಗಿ ಕಣ್ಣುಗಳನ್ನು ತೆರೆದಿಟ್ಟುಕೊಂಡು, ಮೂಗಿನ ತುದಿಯ ಕಡೆಗೆ ಅಥವಾ ನೆಲದ ಕಡೆಗೆ ದೃಷ್ಟಿ ಹರಿಸಿ ಧ್ಯಾನ ಮಾಡುತ್ತೇವೆ. ಆದರೆ, ಈ ರೀತಿ ನೋಡುವಾಗ ದೃಷ್ಟಿಯನ್ನು ತೀಕ್ಷ್ಣವಾಗಿ ಕೇಂದ್ರೀಕರಿಸುವುದಿಲ್ಲ; ಅದು ಸಹಜವಾಗಿಯೂ, ಸಡಿಲವಾಗಿಯೂ ಇರುತ್ತದೆ.
ಆದ್ದರಿಂದ, ಮತ್ತೊಮ್ಮೆ ಹೇಳುವುದಾದರೆ, ನಾವು ನಮ್ಮ ಬಗ್ಗೆ ಸಂವೇದನಾಶೀಲರಾಗಿರಬೇಕು. ನಾವು ತುಂಬಾ ಒತ್ತಡದಲ್ಲಿದ್ದರೆ ಅಥವಾ ಆತಂಕಕ್ಕೊಳಗಾಗಿದ್ದರೆ, ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನ ಮಾಡುವುದು ಸುಲಭ. ಆದರೆ, ನಾವು ಈಗಾಗಲೇ ಸ್ವಲ್ಪ ಶಾಂತವಾಗಿದ್ದರೆ, ಕಣ್ಣುಗಳನ್ನು ತೆರೆದಿಟ್ಟುಕೊಂಡು ನೆಲದ ಕಡೆಗೆ ದೃಷ್ಟಿ ಹರಿಸಿ ಧ್ಯಾನ ಮಾಡುವುದು ಉತ್ತಮ. ಏಕೆಂದರೆ ಶಾಂತವಾಗಿರುವುದು ಎಂದರೆ ಕಣ್ಣುಗಳನ್ನು ಮುಚ್ಚಿ ಜಗತ್ತಿನಿಂದ ದೂರವಾಗುವುದು ಅಲ್ಲ. ಬದಲಾಗಿ, ಜಗತ್ತಿನೊಂದಿಗೆ ಮತ್ತು ಇತರರೊಂದಿಗೆ ವ್ಯವಹರಿಸುತ್ತಿದ್ದಾಗಲೂ ಶಾಂತವಾಗಿ ಮತ್ತು ನಿರಾಳವಾಗಿರಲು ಸಾಧ್ಯವಾಗಬೇಕು. ಆದ್ದರಿಂದ, ಕಣ್ಣುಗಳನ್ನು ತೆರೆದಿಟ್ಟುಕೊಂಡು ಧ್ಯಾನ ಮಾಡುವುದು ಆ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿಯಾಗಿರುತ್ತದೆ.
ಮುಂದಿನ ಹಂತವೆಂದರೆ ನಮ್ಮ ಪ್ರೇರಣೆಯನ್ನು ಪುನಃ ದೃಢಪಡಿಸಿಕೊಳ್ಳುವುದು. ನಾವು ತರಬೇತಿಗೆ ಹಾಜರಾಗಲು ಅಥವಾ ಧ್ಯಾನವನ್ನು ಅಭ್ಯಾಸ ಮಾಡಲು ಏಕೆ ಬಂದಿದ್ದೇವೆ ಎಂಬುದರ ಹಿಂದಿರುವ ಭಾವನಾತ್ಮಕ ಅಥವಾ ಮಾನಸಿಕ ಕಾರಣಗಳನ್ನು ಪರಿಶೀಲಿಸುವುದು ಇದರಲ್ಲಿ ಸೇರಿರುತ್ತದೆ ಎಂದು ನಾವು ಭಾವಿಸುತ್ತೇವೆ. "ನಾನು ಇದನ್ನು ಏಕೆ ಮಾಡುತ್ತಿದ್ದೇನೆ? ಅಪರಾಧಿ ಭಾವನೆಯಿಂದಲೇ? ಗೆಳೆಯರ ಒತ್ತಡದಿಂದಲೇ? ಯಾವುದಾದರೂ ಗುಂಪಿನ ಭಾಗವಾಗಿರುವ ಭಾವನೆಗಾಗಿಯೇ? ಅಥವಾ, 'ಧರ್ಮ-ಜಂಕಿ'ಯಂತೆ, ಒಬ್ಬ ವರ್ಚಸ್ವಿ ಗುರುಗಳಿಂದ ಸಿಗುವ ಉತ್ಸಾಹದ ಅನುಭವಕ್ಕಾಗಿ ಬರುತ್ತಿದ್ದೇವೆಯೇ? ಇಲ್ಲ, ಶಿಕ್ಷಕರ ಬಗ್ಗೆ ಇರುವ ಬಾಂಧವ್ಯದಿಂದ ನಾನು ಇಲ್ಲಿಗೆ ಬಂದಿದ್ದೇನೆಯೇ?" ಬೌದ್ಧ ಸಂಪ್ರದಾಯದಲ್ಲಿ ಪ್ರೇರಣೆಯನ್ನು ಈ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ. ಇದು ಹೆಚ್ಚಾಗಿ ಪಾಶ್ಚಿಮಾತ್ಯ ದೃಷ್ಟಿಕೋನವಾಗಿರುತ್ತದೆ, ಆದರೆ ನಿಸ್ಸಂದೇಹವಾಗಿ ಉಪಯುಕ್ತವೂ ಆಗಿರುತ್ತದೆ.
ಆದರೆ ಸಾಂಪ್ರದಾಯಿಕ ಬೌದ್ಧ ವಿಧಾನದಲ್ಲಿ, ನಾವು ನಮ್ಮ ಪ್ರೇರಣೆಯನ್ನು ಪುನಃ ದೃಢೀಕರಿಸುವ ಬಗ್ಗೆ ಮಾತನಾಡುವಾಗ, ಅದರ ಅರ್ಥ ನಮ್ಮ ಉದ್ದೇಶವನ್ನು ಪುನಃ ದೃಢೀಕರಿಸುವುದಾಗಿರುತ್ತದೆ. ಬೌದ್ಧ ಸಂಪ್ರದಾಯದಲ್ಲಿ ಪ್ರೇರಣೆ ಎಂದರೆ ಉದ್ದೇಶವೇ ಆಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಇಲ್ಲಿ ಏನು ಮಾಡುತ್ತಿದ್ದೇವೆ? ನಮ್ಮ ಉದ್ದೇಶವೇನು? ನಮ್ಮ ಗುರಿಯೇನು? ಇಲ್ಲಿರುವುದರ ಮೂಲಕ ನಾವು ಸಾಧಿಸಲು ಬಯಸುವ ಮೂರು ಸಂಭಾವ್ಯ ಗುರಿಗಳ ದೃಷ್ಟಿಯಿಂದ ಇದನ್ನು ಪರಿಗಣಿಸಬಹುದು. ಇಲ್ಲಿಯೂ ಸಹ, ನಾವು ಸಂವೇದನಾಶೀಲರಾಗಿರಬೇಕು ಮತ್ತು ನಮ್ಮ ಗುರಿ ನಿಜವಾಗಿ ಏನೆಂಬುದರ ಬಗ್ಗೆ ಪ್ರಾಮಾಣಿಕವಾಗಿರಬೇಕು. ಏಕೆಂದರೆ, ತಮ್ಮನ್ನು ತಾವು ಬೌದ್ಧರೆಂದು ಪರಿಗಣಿಸುವ ಯಾರಿಗಾದರೂ, "ನಾನು ಎಲ್ಲಾ ಜೀವಿಗಳ ಪ್ರಯೋಜನಕ್ಕಾಗಿ ಜ್ಞಾನೋದಯವನ್ನು ಪಡೆಯಲು ಇದನ್ನು ಮಾಡುತ್ತಿದ್ದೇನೆ" ಎಂದು ಹೇಳುವುದು ತುಂಬಾ ಸುಲಭ. ಆದರೆ, ಇವು ಕೇವಲ ಮಾತುಗಳಾಗಿರಬಹುದು.
ಬುದ್ಧನಾಗುವುದು ಎಂದರೆ ಏನು ಎಂಬುದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳದೆ, ಈ ವಿಶ್ವದಲ್ಲಿರುವ ಪ್ರತಿಯೊಂದು ಜೀವಿಯನ್ನೂ ಅನಿಯಂತ್ರಿತ ಪುನರ್ಜನ್ಮದಿಂದ ಮುಕ್ತಗೊಳಿಸಬೇಕೆಂಬ ಪ್ರಾಮಾಣಿಕ ಉದ್ದೇಶವನ್ನು ಹೊಂದಿರದೆ, "ನಾನು ಎಲ್ಲಾ ಜೀವಿಗಳಿಗೆ ಸಹಾಯ ಮಾಡಲು ಜ್ಞಾನೋದಯವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ, ನಮ್ಮ ಗುರಿಯು, ನಿಜವಾಗಿ ಏನೆಂಬುದರ ಬಗ್ಗೆ ವಾಸ್ತವಿಕವಾಗಿಯೂ ಪ್ರಾಮಾಣಿಕವಾಗಿಯೂ ಇರುವುದು ಹೆಚ್ಚು ಅರ್ಥಪೂರ್ಣ. ಈ ಹಿನ್ನೆಲೆಯಲ್ಲಿ, ನಮಗೆ ಮೂರು ಸೂಕ್ತ ಗುರಿಗಳಿವೆ. ಅವುಗಳಲ್ಲಿ ಒಂದು, ಈ ಜೀವಿತಾವಧಿಯಲ್ಲಿ ನಮ್ಮ ಸಂಬಂಧಗಳನ್ನು ಸುಧಾರಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿರಬಹುದು. ಆಗ ನಾವು ಈ ತರಬೇತಿಗೆ, ಬೌದ್ಧ ವಿಧಾನಗಳನ್ನು ಆಧರಿಸಿದ ಒಂದು ರೀತಿಯ ಚಿಕಿತ್ಸೆಗಾಗಿ ಬಂದಿರಬಹುದು.
ಪರ್ಯಾಯವಾಗಿ, ನಾವು ಇದನ್ನು "ಧರ್ಮ-ಲೈಟ್" ದೃಷ್ಟಿಕೋನದಿಂದ ನೋಡಬಹುದು. ಅಂದರೆ, "ನಾನು ಈ ಜೀವನದಲ್ಲಿ ನನ್ನ ಸಂಬಂಧಗಳನ್ನು ಸುಧಾರಿಸಲು ಇದನ್ನು ಮಾಡುತ್ತಿದ್ದೇನೆ. ಆದರೆ, ಇದನ್ನು ಮುಕ್ತಿ ಮತ್ತು ಜ್ಞಾನೋದಯದತ್ತ ಸಾಗುವ ಒಂದು ಮೆಟ್ಟಿಲಾಗಿ ನೋಡುತ್ತಿದ್ದೇನೆ" ಎಂದು ಯೋಚಿಸುವುದು. ಇನ್ನೊಂದು ಸಾಧ್ಯತೆ ಎಂದರೆ, ಇದನ್ನು ನಿಜವಾದ ಧರ್ಮದ ಅಭ್ಯಾಸವಾಗಿ ಪರಿಗಣಿಸುವುದು. ಅಂದರೆ, "ನಾನು ಈ ತರಬೇತಿಯನ್ನು ವಿಮೋಚನೆ ಮತ್ತು ಜ್ಞಾನೋದಯವನ್ನು ನಿಜವಾಗಿ ಸಾಧಿಸುವ ದಾರಿಯಲ್ಲಿನ ಒಂದು ಹೆಜ್ಜೆಯಾಗಿ ಕೈಗೊಳ್ಳುತ್ತಿದ್ದೇನೆ" ಎಂದು ಯೋಚಿಸುವುದು. ಹೀಗಾಗಿ, ನಮ್ಮ ನಿಜವಾದ ಗುರಿ ಏನೇ ಇರಲಿ, ಅದನ್ನು ಪುನಃ ದೃಢಪಡಿಸಿಕೊಳ್ಳಬೇಕು. ನಾವು ನಮ್ಮ ಗುರಿಯ ಬಗ್ಗೆ ಪ್ರಾಮಾಣಿಕರಾಗಿದ್ದರೆ, ಅದರಲ್ಲಿ ಪೂರ್ಣ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಬಹಳಾ ಸುಲಭವಾಗುತ್ತದೆ. ಇಲ್ಲದಿದ್ದರೆ, ನಾವು ಮಾಡುತ್ತಿರುವುದು ಕೇವಲ ಒಂದು ಆಟದಂತಿರುತ್ತದೆ.
ನಂತರ ನಾವು ಪೂರ್ಣ ಏಕಾಗ್ರತೆಯಿಂದ ಆಲಿಸಲು ನಿರ್ಧರಿಸುತ್ತೇವೆ. ನಮ್ಮ ಗಮನ ಬೇರೆಡೆಗೆ ಹೋದರೆ, ಅದನ್ನು ಮರಳಿ ತರಲು ಪ್ರಯತ್ನಿಸುತ್ತೇವೆ; ನಿದ್ರೆ ಬಂದರೆ, ಎಚ್ಚರವಾಗಿರಲು ಪ್ರಯತ್ನಿಸುತ್ತೇವೆ. ಹೆಚ್ಚು ಏಕಾಗ್ರತೆಯಿಂದ ಇರಲು, ನಾವು ನಮ್ಮ ಭಂಗಿಯನ್ನು ಸರಿಪಡಿಸಿಕೊಳ್ಳುತ್ತೇವೆ, ನೇರವಾಗಿ, ಆದರೆ ಬಿಗಿಯಾಗಿರದೆ ಕುಳಿತುಕೊಳ್ಳುತ್ತೇವೆ. ನಾವು ಸ್ವಲ್ಪ ಆಲಸ್ಯ ಅಥವಾ ಮಂದತನವನ್ನು ಅನುಭವಿಸಿದರೆ , ನಮ್ಮ ಶಕ್ತಿಯನ್ನು ಹೆಚ್ಚಿಸಲು ಹುಬ್ಬುಗಳ ನಡುವಿನ ಬಿಂದುವಿನ ಮೇಲೆ ಗಮನಹರಿಸುತ್ತೇವೆ. ಕಣ್ಣುಗಳನ್ನು ಮೇಲಕ್ಕೆ ಆಡಿಸುತ್ತೇವೆ, ಆದರೆ ತಲೆಯನ್ನು ನೇರವಾಗಿಯೇ ಇಟ್ಟುಕೊಳ್ಳುತ್ತೇವೆ. ನಮಗೆ ಆತಂಕ ಅಥವಾ ಉದ್ವಿಗ್ನತೆ ಅನಿಸಿದರೆ, ಶಕ್ತಿಯನ್ನು ಸ್ಥಿರಗೊಳಿಸಲು ನಾವು ಹೊಕ್ಕುಳಿನ ಮೇಲೆ ಗಮನಹರಿಸುತ್ತೇವೆ. ಕಣ್ಣುಗಳನ್ನು ಕೆಳಕ್ಕೆ ಆಡಿಸುತ್ತೇವೆ, ಆದರೆ ತಲೆಯನ್ನು ನೇರವಾಗಿಯೇ ಇಟ್ಟುಕೊಳ್ಳುತ್ತೇವೆ. ಸಾಮಾನ್ಯವಾಗಿ ಉಸಿರನ್ನು ಒಳಗೆಳೆದು, ಹೊರಬಿಡುವ ಅಗತ್ಯವಾಗುವವರೆಗೆ ಅದನ್ನು ಹಿಡಿದಿಟ್ಟುಕೊಳ್ಳುತ್ತೇವೆ.
ಏಕಾಗ್ರತೆಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಕುರಿತಾದ ಮೈತ್ರೇಯರ ಸೂಚನೆಗಳಲ್ಲಿ, ಏಕಾಗ್ರತೆಯಿಂದ ಕೇಳಬೇಕೆಂಬ ಜಾಗೃತ ಸಂಕಲ್ಪವನ್ನು ಮಾಡಿಕೊಳ್ಳುವ ಬಗ್ಗೆ ಹೇಳಲಾಗಿದೆ. ಹುಬ್ಬುಗಳ ನಡುವಿನ ಬಿಂದು ಮತ್ತು ಹೊಕ್ಕುಳಿನ ಮೇಲೆ ಗಮನಹರಿಸುವ ಮೂಲಕ ಶಕ್ತಿಯನ್ನು ಸಮತೋಲನಗೊಳಿಸುವ ವಿಧಾನವು ಕಾಲಚಕ್ರ ಬೋಧನೆಗಳಿಂದ ಬಂದಿದೆ. ಹೀಗಾಗಿ, ಈ ಎಲ್ಲ ಅಂಶಗಳನ್ನು ಒಟ್ಟುಗೂಡಿಸುವ ನಿರ್ದಿಷ್ಟ ಸಾಂಪ್ರದಾಯಿಕ ಬೌದ್ಧ ವಿಧಾನ ಇಲ್ಲದಿದ್ದರೂ, ಇವೆಲ್ಲವೂ ಬೌದ್ಧ ಬೋಧನೆಗಳಿಂದಲೇ ಬಂದಿವೆ. ನನ್ನ ಅನುಭವದಲ್ಲಿ, ಅನೇಕ ಪಾಶ್ಚಿಮಾತ್ಯರು ಬೋಧನೆಗಳಿಗೆ ಬರುವಾಗಲೇ ಸಾಕಷ್ಟು ಒತ್ತಡದಲ್ಲಿರುತ್ತಾರೆ. ಆದ್ದರಿಂದ, ಅವರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಈ ಅಂಶಗಳನ್ನು ಈ ರೂಪದಲ್ಲಿ ಒಟ್ಟುಗೂಡಿಸಿದ್ದೇನೆ. ನಮ್ಮ ಇಂದಿನ ಒತ್ತಡಭರಿತ ಜೀವನಶೈಲಿಗೆ ಇಂತಹ ಆರಂಭಿಕ ತಯಾರಿಯು ಅತ್ಯಂತ ಸೂಕ್ತವಾಗಿರುತ್ತದೆ.